‘ಸ್ವಾತಂತ್ರ್ಯದ ಕಿಡಿಗಳು’ ಕೃತಿ ಪರಿಚಯ

ಮೂಡಲಮನೆ ಖ್ಯಾತಿಯ ಸಂಭಾಷಣಾಕಾರ ಹೂಲಿ ಶೇಖರ್ ಅವರ ‘ಸ್ವಾತಂತ್ರ್ಯದ ಕಿಡಿಗಳು’ ಕೃತಿಯ ಕುರಿತು ಲೇಖಕರಾದ ರಘುನಾಥ್ ಕೃಷ್ಣಮಾಚಾರ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : ಸ್ವಾತಂತ್ರ್ಯದ ಕಿಡಿಗಳು
ಲೇಖಕರು : ಹೂಲಿ ಶೇಖರ್
ಪ್ರಕಾಶನ : ಆಕೃತಿಕನ್ನಡ ಪ್ರಕಾಶನ

ಬೆಲೆ : 150.00
ಖರೀದಿಗಾಗಿ : 99459 39436 – ಸಾಹಿತ್ಯಲೋಕ 

ಕಳೆದ ವಾರ ತಾನೇ ವೀರರಾಣಿ ಕಿತ್ತೂರು ಚೆನ್ನಮ್ಮಳ ಇನ್ನೂರನೇ ವರ್ಷದ ನೆನಪಿಗೆ ಪ್ರಕಟವಾದ ಈ ಕೃತಿಯಲ್ಲಿ ಎರಡು ನಾಟಕಗಳಿವೆ.

ಒಂದು: ರಾಣಿ ಚೆನ್ನಮ್ಮನ ನಿಷ್ಠಾವಂತ ಬಂಟ ಅಮ್ಟೂರು ಬಾಳಪ್ಪನನ್ನು ನಾಯಕನ ಜೀವನ ಮತ್ತು ಬಲಿದಾನದ ವಸ್ತುವನ್ನಾಗಿ ಮಾಡಿಕೊಂಡ ನಾಟಕ. ಇದರಲ್ಲಿ ದತ್ತು ಪುತ್ರರಿಗೆ ಹಕ್ಕಿಲ್ಲ ಎನ್ನುವ ಬ್ರಿಟಿಷರ ನೀತಿಯ ವಿರುದ್ಧ ಸಿಡಿದೆದ್ದ ರಾಣಿ ಚೆನ್ನಮ್ಮ ಮತ್ತು ಅವಳ ಬಂಟ ಬಾಳಪ್ಪರ ಹೋರಾಟದ ಕಥನವನ್ನು ಜಾನಪದೀಯ ಉತ್ತರ ಕರ್ನಾಟಕದ ದೇಸಿ ಭಾಷೆಯಲ್ಲಿ ಪ್ರಸ್ತುತ ಪಡಿಸುವ ನಾಟಕ. ಯಾವುದೇ ಅಧಿಕಾರ ಶಾಹೀ ಪ್ರಭುತ್ವ ಎರಡು ಮುಖಗಳನ್ನು ಒಳಗೊಂಡಿರುತ್ತದೆ. ಒಂದು ಪ್ರಭುತ್ವದ ಪರವಾದ ಮುಖ. ಇನ್ನೊಂದು ಅದರ ವಿರುದ್ಧವಾದ ವಿದ್ರೋಹಿ ಮುಖ. ಪ್ರಭುತ್ವದ ಪರವಾದ ನಿಷ್ಠಾವಂತ ನಿಲುವಿನ ಜೋಳದ ಪಾಳಿಯ ಪ್ರತೀಕವಾಗಿ ಇಲ್ಲಿ ಬಂಟ ಅಮ್ಟೂರು ಬಾಳಪ್ಪನನ್ನು ಇಲ್ಲಿ ಗ್ರಹಿಸಬಹುದು. ಅವನ ಕಿತ್ತೂರು ರಾಣಿ ಚೆನ್ನಮ್ಮನನ್ನು ಕುರಿತ ನಿಷ್ಠೆ ಶೌರ್ಯ ಮತ್ತು ಬಲಿದಾನದ ಮೂಲಕ ಪ್ರಕಟವಾಗುತ್ತದೆ. ಅದರ ಇನ್ನೊಂದು ಮುಖವಾಗಿ ವಿದ್ರೋಹದ ಪ್ರತೀಕವಾಗಿ ಬ್ರಿಟಿಷರ ಪ್ರತಿನಿಧಿಯಾದ ಥ್ಯಾಕರೆಯ ಒಳಸಂಚಿನಲ್ಲಿ ತಮ್ಮ ಅಧಿಕಾರ ದಾಹದಿಂದ ಭಾಗಿಯಾಗಿ ರಾಣಿ ಚೆನ್ನಮ್ಮಳಿಗೆ ದ್ರೋಹ ಬಗೆಯುವ ಪ್ರತೀಕವಾಗಿ ವೆಂಕಟರಾಯ ಮತ್ತು ಅವನ ಸಂಗಡಿಗ ಬರುತ್ತಾರೆ. ಹೊರಗಿನ ಶತ್ರುಗಳಿಗಿಂತ ಒಳಗಿನ ಶತ್ರುಗಳಿಂದ ಈ ದೇಶ ಗುಲಾಮಗಿರಿಯಿಂದ ನರಳಬೇಕಾಗಿ ಬಂದದ್ದು, ಎಂಬ ಕಹಿ ಸತ್ಯವನ್ನು ಈ ನಾಟಕ ಸಾಬೀತು ಪಡಿಸುವಲ್ಲಿ ಯಶಸ್ವಿಯಾಗಿ, ನಮಗೆ ಒಂದು ಎಚ್ಚರಿಕೆಯ ಗಂಟೆಯನ್ನು ಬಾರಿಸುತ್ತದೆ.

ನಾವು ಕಲಿತ ಇತಿಹಾಸದ ಪ್ರಕಾರ ೧೮೮೫ ರಲ್ಲಿ ಸ್ಥಾಪಿಸಿದ ಭಾರತೀಯ ಕಾಂಗ್ರೆಸ್ ಪಕ್ಷ, ಗಾಂಧಿಯವರೆಗೆ ನಡೆಸಿದ ಬ್ರಿಟಿಷರ ವಿರುದ್ಧ ನಡೆಸಿದ ಸ್ವಾತಂತ್ರ್ಯ ಹೋರಾಟವನ್ನು ಮಾತ್ರ ಇತಿಹಾಸವೆಂದು ಪರಿಗಣಿಸಲಾಗುತ್ತದೆ. ಅದಕ್ಕೆ ಮೊದಲೇ ಪ್ರಾರಂಭವಾದ ಕಿತ್ತೂರು ರಾಣಿ ಚೆನ್ನಮ್ಮನ ನೇತೃತ್ವದಲ್ಲಿ ನಡೆದ ಈ ಹೋರಾಟ, ದೇಶಿ ಸಂಸ್ಥಾನದ ರಕ್ಷಣೆಯ ಅಂಗವಾಗಿ ನಡೆದದ್ದು. ಆದ್ದರಿಂದ ಇದನ್ನು ಸ್ವಾತಂತ್ರ್ಯ ಹೋರಾಟ ಎಂದು ಪರಿಗಣಿಸುವ ಪರಿಪಾಠವಿಲ್ಲ. ಇದನ್ನು ಕೂಡ ಸ್ವಾತಂತ್ರ್ಯ ಹೋರಾಟವೆಂದೇ ಪರಿಗಣಿಸಬೇಕು ಎಂದು ಈ ಲೇಖಕರು ಈ ನಾಟಕದ ಪ್ರಸ್ತುತಿ ಮತ್ತು ಪ್ರಕಟಣೆಯ ಮೂಲಕ ಹಕ್ಕೊತ್ತಾಯ ಮಂಡಿಸಿದ್ದಾರೆ.

ಎರಡು:ಈ ಕೃತಿಯಲ್ಲಿ ಇರುವ ಇನ್ನೊಂದು ನಾಟಕ ಹಲಗಲಿಯ ಬೇಡರು. ಮೊದಲನೆಯದು ಒಂದು ದೇಶೀ ಸಂಸ್ಥಾನದ ಹೋರಾಟದ ಕಥನವಾದರೆ, ಇದು ಯಾವುದೇ ಪ್ರಭುತ್ವದ ಹಂಗಿಲ್ಲದ ಆದಿವಾಸಿಗಳಾದ ಹಲಗಲಿಯ ಬೇಡರು ನಡೆಸಿದ ಹೋರಾಟ. ಅದಕ್ಕೆ ಕಾರಣ ಬ್ರಿಟಿಷರು ತಮ್ಮನ್ನು ಹೊರತು ಪಡಿಸಿ, ಇತರರು ಯಾರೂ ಯಾವುದೇ ಬಗೆಯ ಹತ್ಯಾರಗಳನ್ನು ಹೊಂದುವಂತೆ ಇಲ್ಲ, ಇದ್ದವರು ಅದನ್ನು ತಮಗೆ ಒಪ್ಪಿಸಬೇಕು ಎಂದು ಹೊರಡಿಸಿದ‌ ಜೀವನ ವಿರೋಧಿ ಕಾನೂನು. ಏಕೆಂದರೆ ಬೇಡರ ಜೀವನೋಪಾಯ ನಡೆಯುವುದೇ ಹತ್ಯಾರಗಳಿಂದ. ಅವುಗಳನ್ನು ತಂದೊಪ್ಪಿಸಿ ಎನ್ನುವುದು ,ಅವರ ಜೀವನೋಪಾಯದ ಸಾಧನಗಳನ್ನು ಕಿತ್ತುಕೊಳ್ಳುವ ಹುನ್ನಾರ. ಆದ್ದರಿಂದಲೇ ಅದರ ವಿರುದ್ಧ ಹೋರಾಟ ನಡೆಸಲು ಅವರು ಸಿದ್ಧರಾಗುತ್ತಾರೆ. ಇದು ಆದಿವಾಸಿಗಳ ಹೋರಾಟವಾದುದರಿಂದ ಮತ್ತು ಯಾವುದೇ ಪ್ರಭುತ್ವದ ಹಂಗಿಲ್ಲದೆ ಇರುವುದರಿಂದ, ಇಲ್ಲಿ ಅಧಿಕಾರಶಾಹಿ ಕೂಡಾ ಇಲ್ಲದಿರುವುದರಿಂದ, ಇದರಲ್ಲಿ ಯಾರ ಪರವಾಗಿಯು ಹೋರಾಡಬೇಕಾಗಿಲ್ಲ. ಆದ್ದರಿಂದಲೇ ಇಲ್ಲಿ ವಿದ್ರೋಹ ಕೂಡಾ ಇಲ್ಲ. ಇಲ್ಲಿ ಇರುವುದು ಅಸ್ತಿತ್ವಕ್ಕಾಗಿ ನಡೆಸುವ ಹೋರಾಟ. ನೇರವಾಗಿ ಹೋರಾಟ ಮಾಡಿ ಅವರನ್ನು ಬಗ್ಗು ಬಡಿಯುವುದು ಅಥವಾ ಕುತಂತ್ರದಿಂದ ಅವರನ್ನು ಹಣಿಯಲು ಸಾಧ್ಯವಿಲ್ಲದೆ ಇರುವುದರಿಂದ ,ಇಲ್ಲಿ ಬ್ರಿಟಿಷರು ಅವರು ಮಲಗಿರುವಾಗ,ಅವರ ಮೇಲೆ ಹಲ್ಲೆ ನಡೆಸಿ ಮೋಸದಿಂದ ಕೊಲ್ಲುತ್ತಾರೆ. ಇದು ಅವರ ಹೇಡಿತನದ ಪರಮಾವಧಿ.

ನಮ್ಮ ಪ್ರಭುತ್ವದ ಒಳಗೆ ಇರುವ ವಿದ್ರೋಹವನ್ನು ಮೊದಲ ನಾಟಕ ಬಯಲುಗೊಳಿಸಿದರೆ, ಎರಡನೆಯ ನಾಟಕ ಬ್ರಿಟಿಷರ ಹುನ್ನಾರಗಳನ್ನು ಬಟಾ ಬಯಲು ಗೊಳಿಸುತ್ತದೆ.

ಈ ಎರಡೂ ನಾಟಕಗಳ ಮೂಲಕ ಸ್ವಾತಂತ್ರ್ಯದ ಹೋರಾಟಗಳ ಅನ್ಯಾನ್ಯ ಮುಖಗಳನ್ನು ಲೇಖಕರು ಸಮರ್ಥವಾಗಿ ಅನಾವರಣಗೊಳಿಸಿ, ಇತಿಹಾಸದ ಕುರಿತ ನಮ್ಮ ಸೀಮಿತ ಗ್ರಹಿಕೆಯನ್ನು ಮರುಪರಿಶೀಲನೆಗೆ ಒಡ್ಡುವಂತೆ ಒತ್ತಾಯಿಸುವುದು ಈ ನಾಟಕಗಳ ಯಶಸ್ಸಿಗೆ ಕಾರಣವಾಗಿದೆ. ಅದಕ್ಕೆ ಅವರು ಬಳಸುವ ಉತ್ತರ ಕರ್ನಾಟಕದ ಭಾಷೆಯೂ ಕೂಡಾ ಸಮರ್ಥ ವಾಹಕವಾಗಿದೆ. ಇದನ್ನು ರಚಿಸಿದ ಲೇಖಕರಿಗೆ ಮತ್ತು ಪ್ರಕಾಶಕರಿಗೆ ಅಭಿನಂದನೆಗಳು. ಇವುಗಳ ರಂಗಪ್ರದರ್ಶನಗಳನ್ನು ನಾನು ನೋಡದೆ ಇರುವುದರಿಂದ ಈ ಬರಹ ನಾಟಕಗಳ ಪಠ್ಯಕ್ಕೆ ಮಾತ್ರ ಸೀಮಿತವಾಗಿದೆ.

೧೯೮೨ ರಲ್ಲೇ ಈಗ ಸಂಯುಕ್ತ ಕರ್ನಾಟಕದ ಇಂದಿನ ಸಲಹೆಗಾರರಾದ ಹುಣಸೂರು ರಾಜನ್ ಮತ್ತು ಸಿದ್ದಲಿಂಗಯ್ಯ ಮುಂತಾದವರ ಅವರ ಜೊತೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಮಾತನಾಡುತ್ತಾ, ರೂಪುಗೊಂಡ ಈ ನಾಟಕಗಳ ಹಿನ್ನೆಲೆಯನ್ನು ಲೇಖಕರು ,ತಮ್ಮ ಮಾತಿನಲ್ಲಿ ದಾಖಲಿಸಿದ್ದಾರೆ.ಅವರ ಈ ನಾಟಕಗಳ ಬಿಡುಗಡೆ ಸಮಾರಂಭದಲ್ಲಿ ರಾಜನ್ ಅವರು ಉಪಸ್ಥಿತರಿದ್ದುದು ಇದಕ್ಕೆ ಸಾಕ್ಷಿ. ಕೆಲವು ಲಿಪಿ ಸ್ಖಾಲಿತ್ಯಗಳನ್ನು ಹೊರತು ಪಡಿಸಿದರೆ, ಈ ಕೃತಿಯ ಪ್ರಕಟಣೆ ಸರ್ವಾಂಗ ಸುಂದರವಾಗಿ ಮೂಡಿಬಂದಿದೆ


  • ರಘುನಾಥ್ ಕೃಷ್ಣಮಾಚಾರ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW