ಅವರ ಮೊದಲ ನಿರ್ದೇಶನದ “ತಾಜ್ ಮಹಾಲ್” ಸಿನಿಮಾ ತೆರೆಕಂಡು ಇಂದಿಗೆ (ಜುಲೈ 25) ಸರಿಯಾಗಿ 17 ವರ್ಷಗಳಾಗಿದೆ. ಅವರು ಸಿನಿಮಾ ಮತ್ತು ಕೃಷಿ ಎರಡನ್ನೂ ಸಮಾನವಾಗಿ ಪ್ರೀತಿಸುವ ಆರ್ ಚಂದ್ರು ಅವರು ಸಿನಿಮಾ ದುಡ್ಡನ್ನು ಸಿನಿಮಾ ಕ್ಷೇತ್ರಕ್ಕೇ ಹಾಕುತ್ತಿದ್ದಾರೆ. ಅವರ ಕುರಿತು ಪತ್ರಕರ್ತರಾದ ಆರ್ ಕೇಶವಮೂರ್ತಿ ಅವರು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ…
ನನಗೆ ನೆನಪಿರುವಂತೆ ಆ ಸಿನಿಮಾ ಬಿಡುಗಡೆಗೂ ಹದಿನೈದೋ ಅಥವಾ ಒಂದು ತಿಂಗಳ ಮೊದಲು ಅನಿಸುತ್ತದೆ. ಅದು ಬೆಂಗಳೂರಿನ ಗಾಂಧಿನಗರ ಗ್ರೀನ್ ಹೌಸ್. ಚಿತ್ರದ ಪತ್ರಿಕಾಗೋಷ್ಟಿ ಶುರುವಾಯತು. “ಸಾರ್ ಈ ಚಿತ್ರ ಕನ್ನಡಕ್ಕೆ ಹೊಸದಾಗಿರುತ್ತದೆ, ಸೂಪರ್ ಹಿಟ್ ಆಗೋದು ಪಕ್ಕಾ…” ಹೀಗೆ ಮಾತು ಶುರು ಮಾಡಿ, ಕೊನೆಯಲ್ಲಿ “ನಿಮ್ಮ ಬೆಂಬಲ ಬೇಕು” ಎಂದು ಮೈಕು ಕೆಳಗಿಡುವ ಮುನ್ನವೇ ಎದುರುಗಿದ್ದವರಿಂದ ಪ್ರಶ್ನೆಗಳು ಬಾಣಗಳಂತೆ ಮೈಕೇ ಹಿಡಿದ ವ್ಯಕ್ತಿಯನ್ನು ಗುರಿ ಮಾಡಿದವು. ಎಲ್ಲ ಪ್ರಶ್ನೆಗಳಿಗೂ ಉತ್ತರಿಸುತ್ತಲೇ ಹೋದ ಆ ವ್ಯಕ್ತಿ. ಆದರೂ ಕೊನೆಯಲ್ಲಿ “ಸಿನಿಮಾ ಇಂಡಸ್ಟ್ರಿ ಇಂಥವರನ್ನ ಎಷ್ಟು ಮಂದಿನಾ ನೋಡಿಲ್ಲ. ಬರ್ತಾರೆ ಹೋಗ್ತಾರೆ” ಎಂದರು ಒಬ್ಬರು.
ಇದೆಲ್ಲ ಮುಗಿಯುವ ಹೊತ್ತಿಗೆ ರಾತ್ರಿ 8 ಗಂಟೆ ದಾಟಿತ್ತು. ನಾನು ವಿಜಯ್ ಭರಮಸಾಗರ ಸೇರಿ ಒಂದಿಬ್ಬರು ಪತ್ರಕರ್ತ ಮಿತ್ರರು ಕೂತಿದ್ದ ಅದೇ ಗ್ರೀನ್ ಹೌಸ್ ನ ಟೇಬಲಿನ ಅಣತಿ ದೂರದಲ್ಲೇ ಪ್ರಶ್ನೆಗಳಿಗೆ ಉತ್ತರ ಕೊಟ್ಟ ವ್ಯಕ್ತಿ ಮೂಲೆಯಲ್ಲಿ ಕೈ ಕಟ್ಟಿಕೊಂಡು ನಿಂತಿದ್ದರು. ಗುಂಗುರು ಕೂದುಲು. ಕತ್ತಲ್ಲ ಕಪ್ಪು ದಾರ. ಅದಕ್ಕೆ ಜಾತ್ರೆಯಲ್ಲಿ ಸಿಗೋ ಹುಲಿ ಉಂಗುರ. ಹಣೆಯಲ್ಲಿ ಇಷ್ಟಗಲದ ಕುಂಕುಮ. ಆ ವ್ಯಕ್ತಿಯನ್ನು ನಾನು “ಬನ್ನಿ ಸಾರ್ ಕೂತ್ಕೊಳ್ಳಿ” ಅಂದೆ. ಮಾತು ಶುರುವಾಯ್ತು. “ಯಾವ ಕಡೆಯವರು” ಅಂತ ಕೇಳಿದೆ. “ನನ್ನದು ಹಳ್ಳಿ ಸಾರ್…” ಅಂತ ಊರಿನ ಹೆಸರಿಗೂ ಮೊದಲು ಹಳ್ಳಿ ಅಂತ ಹೇಳಿಕೊಂಡು ನಂತರ “ಕೋಲಾರ-ಚಿಕ್ಕಬಳ್ಳಾಪುರ… ಕೃಷಿ ಮಾಡೋ ಕುಟುಂಬ… ಅಪ್ಪ- ಅಮ್ಮ… ಕನಸುಗಳು, ಬೆಂಗಳೂರಿನ ಅಲೆದಾಟ…” ಹೀಗೆ ಎಲ್ಲವನ್ನೂ ಹೇಳಿಕೊಂಡರು.

ಆ ವ್ಯಕ್ತಿಯ ಮಾತುಗಳ ನಡುವೆ ಪದೇ ಪದೇ ಕೇಳಿ ಬಂದಿದ್ದು “ಸಾರ್ ನನಗೆ ಸಿನಿಮಾ ಮತ್ತು ಕೃಷಿ ಎರಡೂ ಪಂಚಪ್ರಾಣ” ಅಂತ. ಆರ್ ಚಂದ್ರು ಅಲಿಯಾಸ್ ಡೈರೆಕ್ಟರ್ ಆರ್ ಚಂದ್ರು ಅವರು ಮೊದಲು ನನಗೆ ಕಂಡಿದ್ದು ಮತ್ತು ಪರಿಚಯವಾಗಿದ್ದು ಹೀಗೆಯೇ. ಅಂದು ಅವರ ನಿರ್ದೇಶನದ “ತಾಜ್ ಮಹಾಲ್” ಚಿತ್ರದ ಪತ್ರಿಕಾಗೋಷ್ಟಿ. “ಮುಂಗಾರು ಮಳೆ”ಯಂತೆ ಹಾಡುಗಳು ಎಲ್ಲಾ ಕಡೆ ಸದ್ದು ಮಾಡುವುದಕ್ಕೆ ಶುರುವಾಯಿತು. ಅಂದು ಆರ್ ಚಂದ್ರು ಅವರು ವೇದಿಕೆ ಮೇಲೆ ಹೇಳಿದಂತೆ ತಾಜ್ ಮಹಾಲ್ ಚಿತ್ರ ಮ್ಯೂಸಿಕಲ್ ಸೂಪರ್ ಹಿಟ್ ಸಿನಿಮಾ ಅಂದಿದ್ದು ನಿಜ ಆಯ್ತು. ಹಾಗೆ “ಸಿನಿಮಾ ಇಂಡಸ್ಟ್ರಿ ಇಂಥವರನ್ನ ಎಷ್ಟು ಮಂದಿನಾ ನೋಡಿಲ್ಲ. ಬರ್ತಾರೆ ಹೋಗ್ತಾರೆ” ಅನ್ನೋ ಮಾತು ಸುಳ್ಳು ಮಾಡಿದರು.
ಅಜಯ್ ರಾವ್ ಹಾಗೂ ಪೂಜಾ ಗಾಂಧಿ ಜೋಡಿಯಲ್ಲಿ ತಾಜ್ ಮಹಾಲ್ ನಂತರ ಪ್ರೇಮ್ ಕಹಾನಿ, ಮೈಲಾರಿ, ಕೋ ಕೋ, ಚಾರ್ಮಿನಾರ್, ಬ್ರಹ್ಮ, ಲಕ್ಷ್ಮಣ, ಕನಕ, ಐ ಲವ್ ಯೂ ಹಾಗೂ ಕಬ್ಜ ಚಿತ್ರಗಳ ಮೂಲಕ ಕಳೆದ 17 ವರ್ಷಗಳಿಂದ ಚಿತ್ರರಂಗದಲ್ಲಿ ನಿರ್ದೇಶಕರಾಗಿ, ನಿರ್ಮಾಪಕರಾಗಿ, ಬರಹಗಾರನಾಗಿ ತಮ್ಮದೇ ದಾರಿ ಕಟ್ಟಿಕೊಂಡಿದ್ದಾರೆ. ಮತ್ತು ಅದನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ ಕೂಡ. ಒಂದು ಚಿತ್ರವನ್ನು ತೆಲುಗಿನಲ್ಲಿ ನಿರ್ದೇಶಿಸಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ಮಾಡಿದ್ದಾರೆ. ಕನ್ನಡದ ಸಿನಿಮಾ ಬ್ಯುಸಿನೆಸ್ ಎಷ್ಟು ಎಂಬುದನ್ನು ಈ ದಿನಗಳಲ್ಲೂ ತೋರಿಸಿದ್ದಾರೆ.
ಸಿನಿಮಾ ಮತ್ತು ಕೃಷಿ ಎರಡನ್ನೂ ಸಮಾನವಾಗಿ ಪ್ರೀತಿಸುವ ಆರ್ ಚಂದ್ರು ಅವರು ಸಿನಿಮಾ ದುಡ್ಡನ್ನು ಸಿನಿಮಾ ಕ್ಷೇತ್ರಕ್ಕೇ ಹಾಕುತ್ತಿದ್ದಾರೆ. ಬೇರೆ ಬೇರೆ ನಿರ್ದೇಶಕರಿಗಾಗಿ ತಮ್ಮ ಬ್ಯಾನರ್ ನಲ್ಲಿ 5 ಸಿನಿಮಾಗಳನ್ನು ಘೋಷಣೆ ಮಾಡಿಸಿದ್ದಾರೆ. ಈ ಚಿತ್ರಗಳಿಗೆ ರಾಜ್ಯದ ಸಿಎಂ ಸಿದ್ದರಾಮಯ್ಯ ಅವರಿಂದ ಚಾಲನೆ ಕೊಡಿಸಿದ್ದಾರೆ. 5 ಚಿತ್ರಗಳ ಪೈಕಿ ಡಾರ್ಲಿಂಗ್ ಕೃಷ್ಣ ಮತ್ತು ಪ್ರಕಾಶ್ ರೈ ಜೋಡಿಯ “ಫಾದರ್” ಸಿನಿಮಾ ಶೂಟಿಂಗ್ ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿದೆ. ಉಳಿದ 4 ಚಿತ್ರಗಳ ಕತೆ, ತಾರಾಗಣ, ತಂತ್ರಜ್ಞರ ಸುತ್ತಾ ಕೆಲಸಗಳು ನಡೆಯುತ್ತಿವೆ.
ನಿಜ, ಸೋಲು-ಗೆಲುವಿನ ಆಚೆಗೂ “ಕಬ್ಜ” ಅವರಿಗೆ ತುಂಬಾ ಪಾಠ ಕಲಿಸಿರಬಹುದು. ಹಾಗಂತ ಆರ್ ಚಂದ್ರು ಅವರು ಯಾರದ್ದೋ ದುಡ್ಡಿನಲ್ಲಿ ಜಾಲಿ ರೈಡ್ ಮಾಡಿಲ್ಲ. ತಮ್ಮ ಸಿನಿಮಾಗಳಿಂದ ದುಡಿದ ಹಣವನ್ನೇ ತಮ್ಮ ಸಿನಿಮಾಗೆ ಹಾಕಿದ್ದಾರೆ. ಆ ಬಗ್ಗೆ ಯಾರಿಗೂ ಬೆರಳು ಮಾಡಿ ತೋರಿಸಿ ಮಾತನಾಡುವ ರೈಟ್ಸ್ ಇಲ್ಲ. ಇಟ್ಸ್ ಫ್ಯೂರ್ಲಿ ಬ್ಯುಸಿನೆಸ್.
ಆದರೆ, ಈ ಹದಿನೇಳು ವರ್ಷಗಳಲ್ಲಿ ಸದ್ದಿಲ್ಲದೆ ತಮ್ಮದೇ ಆದ ಸಿನಿಮಾ ಸಾಮ್ರಜ್ಯವನ್ನು ಕಟ್ಟಿ, ಅದರಲ್ಲಿ ಹತ್ತಾರು ಜನರ ಕನಸುಗಳಿಗೆ ವೇದಿಕೆಯಾಗಿ, ಒಂದಿಷ್ಟು ಜನಕ್ಕೆ ಉದ್ಯೋಗವೂ ಸೃಷ್ಟಿಯಾಗುವಂತೆ ಮಾಡಿರುವುದೇ ಆರ್ ಚಂದ್ರು ಅವರು ಚಿತ್ರರಂಗದ ಅಸೆಸ್ಟ್ ಎಂಬುದಕ್ಕೆ ಸಾಕ್ಷಿ. ಸಹಕಾರ ನಗರದಲ್ಲಿರುವ ಅವರ ಸಿನಿಮಾ ಕಛೇರಿಗೆ ಹೋದರೆ ಅಲ್ಲಿ ಸಿನಿಮಾ ಮಾತುಗಳು ಬಿಟ್ಟರೆ ನಿಮಗೆ ಬೇರೆ ಕೇಳಿಸಲ್ಲ.

ಈ ನಡುವೆ ತಮ್ಮ ನಿರ್ದೇಶನದ ಬಹುಕೋಟಿ ವೆಚ್ಚದ, ಬಹುಭಾಷೆಯ ಪ್ಯಾನ್ ವರ್ಲ್ಡ್ ಸಿನಿಮಾದ ಕೆಲಸಗಳನ್ನು ಬಹುತೇಕ ಮುಗಿಸಿರುವ ಚಂದ್ರು, ಈ ಚಿತ್ರದ ಘೋಷಣೆಗೆ ಕಾಯುತ್ತಿದ್ದಾರೆ. ಅದು ಸದ್ಯದಲ್ಲೇ ಆಗಲಿದೆ. ಇನ್ನೂ ಮನೆಗೆ ಬರುವ ಪ್ರತಿಯೊಬ್ಬರನ್ನು ಮನೆ ಸದಸ್ಯರಂತೆ ಮಾತನಾಡಿಸಿ ಊಟ, ತಿಂಡಿ, ಕಾಫಿ.. ಧಾರಾಳವಾಗಿ ನೀಡುವ ಆರ್ ಚಂದ್ರು ಅವರ ಮನೆಯವರು, ಸ್ಕೂಲ್ ಮಗುವಿನಂತೆ ಬೆಳಗ್ಗೆ 7 ಗಂಟೆಗೆ ಎದ್ದು ಸಿನಿಮಾ ಕಛೇರಿಯಲ್ಲಿರುವ ಆರ್ ಚಂದ್ರು ಅವರ ಸಿನಿಮಾ ಪ್ರೀತಿ ಮತ್ತು ಶಿಸ್ತು… ಆ ಬಗ್ಗೆ ಹೇಳಿದರೆ ತುಂಬಾ ಇದೆ.
ಆದರೂ ಇಷ್ಟೆಲ್ಲದರ ನಡುವೆ ಆರ್ ಚಂದ್ರು ಅವರನ್ನು ಕಾಲೆಳೆಯೋರು, ಟ್ರೋಲ್ ಮಾಡೋರು, ವ್ಯಂಗ್ಯ ಮಾಡೋರು ಇಲ್ಲಾಂತಲ್ಲ, ಇದ್ದಾರೆ. ಮೊನ್ನೆ ನಿರ್ದೇಶಕ ಜೋಗಿ ಪ್ರೇಮ್ ಹೇಳುತ್ತಿದ್ದರು, “ಕಾಲೆಳಯೋರು ಇದ್ದರೆನೇ ನಾವು ಕಾಲು ಗಟ್ಟಿಯಾಗಿ ಊರಕ್ಕೆ ಸಾಧ್ಯ” ಬ್ರದರ್ ಅಂತ. ಈ ಮಾತು ಸತ್ಯ. “ಆನೆ ಗಂಜಲ ಇರುವೆ ಜಲಪ್ರಳ”ಯವಂತೆ. ಆರ್ ಚಂದ್ರು ಸರ್… ನಿಮ್ಮ ಸಿನಿಮಾ ಪ್ರೀತಿ-ಉತ್ಸಾಹ, ಮಾತುಗಳು ಇತರರಿಗೆ “ಜಲಪ್ರಳಯ” ಆಗಿರಬಹುದು. ಡೋಂಟ್ ವರಿ. ಯಾಕೆಂದರೆ ಹಣ್ಣು ಕೊಡೋ ಗಿಡ ಅಥವಾ ಮರಕ್ಕೆ ಹೆಚ್ಚು ಕಲ್ಲು ಬೀಳೋದು. ಕಲ್ಲೇಟು ತಿನ್ನೋ ಮರ ಮೌನವಾಗಿ ಹಣ್ಣು ಕೊಡುತ್ತೆ. ನೀವು ಆ ಕೆಲ್ಸ ಮುಂದುವರಿಸುತ್ತಿದ್ದೀರಿ. ನಿಮಗೆ ಒಳ್ಳೆಯದಾಗಬೇಕು. ನೀವು ಬದಲಾಗಿಲ್ಲ. ಅವತ್ತು ನಾನು ನೋಡಿದ “ತಾಜ್ ಮಹಾಲ್” ಚಂದ್ರುನೇ. ಅದೇ ಪ್ರೀತಿ, ಅದೇ ಸ್ನೇಹ, ಅದೇ ನಗು, ಅದೇ ಸಿನಿಮಾ ಉತ್ಸಾಹ. ಆದರೆ, ಕತ್ತಲ್ಲಿರೋ ಕಪ್ಪು ದಾರ ಮತ್ತು ಪ್ಲಾಸ್ಟಿಕ್ ಹುಲಿ ಉಂಗುರ ಕಾಣುತ್ತಿಲ್ಲ ಅಷ್ಟೇ ಹ್ಹಹ್ಹಹ್ಹ.
ಓ… ಸಾರಿ ವಿಷಯ ಮರೆತಿಲ್ಲ, ಆರ್ ಚಂದ್ರು ಅವರ ಬಗ್ಗೆ ಇಷ್ಟೆಲ್ಲ ಹೇಳಕ್ಕೆ ಕಾರಣ ಏನು ಗೊತ್ತಾ, ಅವರ ಮೊದಲ ನಿರ್ದೇಶನದ “ತಾಜ್ ಮಹಾಲ್” ಸಿನಿಮಾ ತೆರೆಕಂಡು ಇಂದಿಗೆ (ಜುಲೈ 25) ಸರಿಯಾಗಿ 17 ವರ್ಷಗಳು. ಆರ್ ಚಂದ್ರು ಸರ್… ನಿಮಗೆ ಮತ್ತು ನಿಮ್ಮ ಮೊದಲ ಕನಸು, ಶ್ರಮ ಮತ್ತು ಸ್ಫೂರ್ತಿಯಾಗಿ ಮೂಡಿಬಂದು ನಂತರ ಚಿತ್ರರಂಗದ ಗೆಲುವಿನ ಶಕ್ತಿಯಾದ “ತಾಜ್ ಮಹಾಲ್” ಚಿತ್ರಕ್ಕೆ 17ನೇ ವಾರ್ಷಿಕೋತ್ಸವದ ಶುಭಾಶಯಗಳು. ಮುಂದಿನ ಹೆಜ್ಜೆ ಎಷ್ಟು ದೊಡ್ಡ ಮಟ್ಟದಲ್ಲಿ ಮೂಡಿ ಬರುತ್ತಿದೆ ಎಂಬುದು ನನಗೆ ಗೊತ್ತು. ಈ ಬಾರಿ ಮರಕ್ಕೆ ಕಲ್ಲು ಹೊಡೆಯುವವರಿಗೆ ಹಣ್ಣಿನ ಜೊತೆಗೆ ಆ ಕಲ್ಲನ್ನೂ ವಾಪಸ್ಸು ಕೊಡುತ್ತೀರಿ ಎನ್ನುವ ನಂಬಿಕೆ ಇದೆ. ಅದನ್ನು ಸುಳ್ಳಾಗಿಸುವುದಿಲ್ಲ ಎನ್ನುವ ಭರಸೆಯಲ್ಲಿ…
- ಆರ್ ಕೇಶವಮೂರ್ತಿ
