ಆರು ಕತೆಯುಳ್ಳ ‘ತಮಾಷಾ’ : ಕಿರಣ ಭಟ್

ತಮಾಷಾ ಎಂದರೆ ಇದು ‘ತಮಾಷಾ’ ಅಲ್ಲ. ಮುಗ್ಧ ಹುಡುಗನೊಬ್ಬ ಮನೆಯ ಮೇಲೆ ವಿಮಾನಗಳು ಚೆಲ್ಲಿದ ಕರಪತ್ರಗಳನ್ನು ‘ತಮಾಷಾ’ ದ ಕರಪತ್ರಗಳೆಂದುಕೊಂಡು ಸಂಭ್ರಮಿಸುವ ಕತೆ. ರಂಗ ಸಂಘಟಕ, ನಿರ್ದೇಶಕರಾದ ಕಿರಣ ಭಟ್ ಅವರು ನಾಟಕದ ಕುರಿತು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಸಾದತ್ ಹಸನ್ ಮಾಂಟೋ. ದೇಶ ವಿಭಜನೆಯ ಕರಾಳ ಮುಖಗಳನ್ನು ತನ್ನ ಕತೆಗಳಲ್ಲಿ ಅಷ್ಟೇ ತೀವ್ರವಾಗಿ ಹಿಡಿದಿಟ್ಟವ. ಆ ದಿನಗಳ ಯಾತನಾಮಯ ಬದುಕು, ಇರುವುದೆಲ್ಲವ ಬಿಟ್ಟು ಇನ್ನೊಂದೆಡೆಗೆ ಹೋಗಬೇಕಾದ ಅಸಹಾಯಕತೆ, ನೋವು. ಯಾತನೆಗಳ ಪಾಕ ಅವರ ಕತೆಗಳು.

ಅವರ ಇಂಥ ಆರು ಕತೆಗಳ ಕೊಲಾಜ್ ಈ ‘ತಮಾಷಾ’ ಮಾಂಟೋ ನ ಕತೆಗಳನ್ನ ರಂಗಕ್ಕೆ ತರುವ ಪ್ರಯತ್ನಗಳು ಹಿಂದೆಯೂ ಆಗಿವೆ. ನಾನು ನೋಡಿದ ಒಂದೆರಡು ಪ್ರಯತ್ನಗಳಿಗಿಂತ ವಿಭಿನ್ನವಾಗಿ ನಿಲ್ಲುತ್ತದೆ ಈ ‘ತಮಾಷಾ’. ಕತೆಗಳ ಆಯ್ಕೆಯ ಕಾರಣದಿಂದ ಮತ್ತು ಅವುಗಳ ಭಾಗಗಳನ್ನಷ್ಟನ್ನೇ ಎತ್ತಿಕೊಂಡು ಒಂದರೊಂದನ್ನು ಕಲಾತ್ಮಕವಾಗಿ ನೇಯುತ್ತ ಒಟ್ಟಂದದಲ್ಲಿ ಕತೆಗಳ ತೀವ್ರ ಭಾವವನ್ನು ದಾಟಿಸುವ ಕಾರಣಕ್ಕೆ.

ಕತೆ ಶುರುವಾಗುವದು ದೊಡ್ಡ ತಗಡಿನ ಪೆಟ್ಟಿಗೆಯನ್ನು ನಾಲ್ವರು ಎತ್ತಿಕೊಂಡು ವಿಷಾದದ ಆಲಾಪದಂಥ ಧ್ವನಿಯೊಂದಿಗೆ ಡಬ್ಬದ ಕಿವಿಗಡಚುಕ್ಕುವ ಬಡಿತವನ್ನೂ ಸೇರಿಸುತ್ತ ಪ್ರವೇಶಿಸುವದರೊಂದಿಗೆ. ಇದೇ ಸೂಚ್ಯವಾಗಿ ಹಿಂಸೆ ಮತ್ತು ಯಾತನೆಯ ದಿನಗಳ ಕತೆಗಳಿಗೆ ಉತ್ತಮ ಪ್ರವೇಶಿಕೆಯನ್ನು ಕಲ್ಪಿಸಿಬಿಡುತ್ತದೆ.

ಇದು ಶುರುವಾಗುವದು ‘ತಮಾಷಾ’ ಕತೆಯೊಂದಿಗೆ. ತಮಾಷಾ ಎಂದರೆ ಇದು ‘ತಮಾಷಾ’ ಅಲ್ಲ. ಮುಗ್ಧ ಹುಡುಗನೊಬ್ಬ ಮನೆಯ ಮೇಲೆ ವಿಮಾನಗಳು ಚೆಲ್ಲಿದ ಕರಪತ್ರಗಳನ್ನು ‘ತಮಾಷಾ’ ದ ಕರಪತ್ರಗಳೆಂದುಕೊಂಡು ಸಂಭ್ರಮಿಸುವ ಕತೆ. ಆದರೆ ಇವು ತಮಾಷಾ ದ ಕರಪತ್ರಗಳಾಗಿರದೇ ಸರ್ವಾಧಿಕಾರಿಯೊಬ್ಬ “ಚಳುವಳಿಗಳನ್ನು ನಿರ್ದಾಕ್ಷಿಣ್ಯವಾಗಿ ಬಗ್ಗು ಬಡಿಯಲಾಗುವದು “ಎಂದು ಹೊರಡಿಸಿದ ಫರ್ಮಾನು ಎನ್ನುವದರೊಂದಿಗೆ ಕ್ರೂರ ವ್ಯಂಗ್ಯವೊಂದರ ಅನಾವರಣವಾಗುತ್ತ ಹೋಗುತ್ತದೆ. ಇದೇ ಕತೆಯೊಳಗೇ’ಟೆನ್ ರುಪೀಸ್’ ನ, ಬಲೂನು ಹಿಡಿದು ಓಡುತ್ತ ಬರುವ ಮುಗ್ಧ ಹುಡುಗಿಯ ಪ್ರವೇಶದೊಂದಿಗೆ ಜಾಣತನದಿಂದ ಆ ಕತೆಯ ಹೆಣಿಗೆಯನ್ನೂ ಮಾಡಿಬಿಡುತ್ತಾರೆ ನಿರ್ದೇಶಕಿ ನೀಲಂ ಮಾನಸಿಂಗ್. ಜೊತೆಗೆ ‘ತಮಾಷಾ’ ದ ಪುಟ್ಟ ಹುಡುಗ ಗುಂಡಿನ ಸದ್ದಿಗೆ ಹೆದರಿ ಮುಖಕ್ಕೆಲ್ಲ ಮೆತ್ತಿಕೊಂಡುಬಿಡುವ ‘ಫೇಸ್ ಪೌಡರ್ ‘ ನ ಮೂಲಕ ಸೂಚ್ಯವಾಗಿ ತಾವು ಹೇಳಲಿರುವ ವೇಶ್ಯಾವಾಟಿಕೆಯ ಕತೆಗೂ ನೆಲಗಟ್ಟು ಕಟ್ಟಿಕೊಳ್ಳುತ್ತಾರೆ. ಹತ್ತು ವರ್ಷದ ಮುಗ್ಧ ಹುಡುಗಿಯೊಬ್ಬಳನ್ನು ಮೋಹಿಸಲು ಕರೆದುಕೊಂಡು ಹೋಗುವವನೊಬ್ಬ ಆಕೆಯ ಮುಗ್ಧತೆಗೆ ಮರುಳಾಗುತ್ತ ಕೊನೆಗೆ ಆಕೆಗೆ ನಿದ್ದೆ ಬಂದಾಗ ಜೋಗುಳ ಹಾಡುತ್ತ ಮಲಗಿಸುತ್ತ ಹೋಗುವದರೊಂದಿಗೆ ಕತೆಗೊಂದು ಮಾನವೀಯ ಸ್ಪರ್ಶ ಸಿಗುತ್ತದೆ.

ಇದೇ ‘ನಿದ್ದೆ’ ಮತ್ತೆ ಮುಂದುವರಿಯುವದು ‘ಹಂಡ್ರೆಡ್ ವಾಟ್ ಬಲ್ಬ್’ ನಲ್ಲಿ. ಇದೂ ವೇಶ್ಯಾವಾಟಿಕೆಯ ಕತೆಯೇ. ಇಲ್ಲಿ ಮಾರ್ಕೆಟ್ ನಡುವೆ ಸಿಂಗರಿಸಿಕೊಂಡು ನಿಲ್ಲಿಸಲ್ಪಟ್ಟ ಆಕೆಗೆ ತಾನೆಷ್ಟು ಗಳಿಸುತ್ತೇನೆ ಎನ್ನುವದರ ಅರಿವೂ ಇಲ್ಲ. ಅದು ಆಕೆಯ ದಲ್ಲಾಳಿಗೆ ಮಾತ್ರ ಗೊತ್ತು. ದಿನವಿಡೀ ಆಕೆಯನ್ನು ದುಡಿಸಿ ಹಣ ಮಾಡುವವ ಆತ. ಆಕೆಯ ಬೇಡಿಕೆಯೆಂದರೆ ಪ್ರತಿ ಗಿರಾಕಿಯ ನಂತರವೂ ಆಕೆ ನಿದ್ದೆ ಮಾಡಬೇಕು ಅಷ್ಟೆ. ಇಲ್ಲೂ ಒಬ್ಬ ವಿಟನಿದ್ದಾನೆ ಹಣ ತೆತ್ತು ಆಕೆಯನ್ನ ಕೊಂಡುಕೊಂಡ ಮೇಲೂ ಸುಸ್ತು ಹೊಡೆದು ನಿಲ್ಲಲೂ ಆಗದ ಸ್ಥಿಯಲ್ಲಿ ಆಕೆಯ ರೋಷ ಕಂಡು ಮರುಗುತ್ತಾನೆ ಆತ. ಆತನ ಸಂತೈಸುವಿಕೆಯ ನಂತರವೂ ಆಕೆ ಕುಸಿದಾಗ ಕೈಚೆಲ್ಲುತ್ತಾನೆ. ಕೊನೆಗೊಂದು ದಿನ ಇದೆಲ್ಲ ಸಹಿಸಲಾರದೇ ದಲ್ಲಾಳಿಯನ್ನೇ ಆಕೆ ಕೊಲೆ ಮಾಡಿಬಿಡುತ್ತಾಳೆ.

‘ಸ್ಮೆಲ್’ ಚೂರು ವಿಭಿನ್ನವಾದ ಕತೆ. ಯುದ್ಧದ ಉನ್ಮಾದ ಏರುತ್ತಿದ್ದ ಹಾಗೆ ಜನ ತತ್ತರಿಸಿದ್ದಾರೆ. ಊರು ತೊರೆದಿದ್ದಾರೆ. ವೇಶ್ಯಾವಾಟಿಕೆಯ ವಾತಾವರಣದಲ್ಲಿ ಆತ ಆಕೆಯನ್ನು ನೋಡುತ್ತಾನೆ. ಮಳೆ ಹನಿಸುತ್ತಿದೆ. ಎಲೆಗಳು ನೀರ ತೊಟ್ಟಿಕ್ಕುತ್ತವೆ. ಇಂಥದೊಂದು ದಿನ ಆತ,ಆಕೆ ಭೆಟ್ಟಿಯಾಗುತ್ತಾರೆ. ಒದ್ದೆ ಒದ್ದೆ ಸ್ಥಿತಿಯಲ್ಲಿ. ಆಕೆಗೆ ತೊಟ್ಟುಕೊಳ್ಳಲು ತನ್ನ ಮುಂಡು ಬಿಚ್ಚಿಕೊಡುತ್ತಾನೆ ಆತ. ಆದರೆ ಆಕೆಗೆ ತನ್ನ ಬಟ್ಟೆ ಬಿಚ್ಚಲಾಗುತ್ತಿಲ್ಲ. ಆತ ಸಹಾಯ ಮಾಡುತ್ತಲೇ ಪರವಶನಾಗುತ್ತಾನೆ.ಇಬ್ಬರೂ ಕೂಡುತ್ತಾರೆ. ಹಲವಾರು ಜನರ ಜೊತೆ ಕೂಡಿದ ಆತನಿಗೀಗ ಅನಿಸುತ್ತಿದೆ. ನಿಜಕ್ಕೂ ನಾನಾಕೆಯಲ್ಲಿ ಕಂಡಿದ್ದೇನು? ಪರಿಮಳ. ಹಾಗಾದರೆ ಅದೆಂಥ ಪರಿಮಳ! ದೇಹ ಭಾಷೆಯನ್ನೂ ಬೆಳಕನ್ನೂ, ಚಲನೆಯನ್ನೂ ಅದ್ಭುತವಾಗಿ ಬಳಸಿಕೊಂಡ ನಿರೂಪಣೆಯಿದು.

ಕೊನೆಯ ಕತೆ ‘ಡಾಗ್ ಆಫ್ ಟೆಟ್ವಾಲ್’ ನಿಜಕ್ಕೂ ಅಮಾನವೀಯತೆಯ ಅನಾವರಣವೇ. ಇದೊಂದು ಬೀದಿ ನಾಯಿಯ ಯಾತನಾಮಯ ಕತೆ. ಗಡಿ ಭಾಗದಲ್ಲಿ ಪಾಕಿಸ್ತಾನ ಕ್ಯಾಂಪ್, ಭಾರತೀಯ ಕ್ಯಾಂಪ್ ನಡುವೆ ಓಡಾಡಿಕೊಂಡಿದ್ದ ನಾಯಿಯನ್ನು ಕಾಪಾಡಿ ಅನ್ನ ಕೊಟ್ಟ ಯೋಧನೇ ಅದು ಇನ್ನೊಂದು ಕ್ಯಾಂಪ್ ನದು ಎಂದು ತಿಳಿದಾಗ ಗುಂಡಿಟ್ಟು ಸಾಯಿಸಿಬಿಡುವ ನೋವಿನ ಕತೆ. ಯುದ್ಧ ಎನ್ನುವದು ಮನುಷ್ಯತ್ವವನ್ನೇ ಹೇಗೆ ಕೊಂದುಬಿಡಬಲ್ಲದು ಎನ್ನುವದನ್ನ ತೀಕ್ಷ್ಣವಾಗಿ ವಿಮರ್ಶಿಸುತ್ತದೆ. ನಿರೂಪಣೆಯ ಶೈಲಿಯ ಈ ಕತೆಯಲ್ಲಿ ನಾಟಕದ ಮೊದಲು ಹೊತ್ತು ತಂದ ದೊಡ್ಡ ಟಿನ್ ಪೆಟ್ಟಿಗೆಯಲ್ಲೇ ಕುಳಿತು ಒಬ್ಬ ಕತೆ ಹೇಳುತ್ತ ಹೋದಂತೆ ಇನ್ನಿಬ್ಬರು ಸುತ್ತುವರಿಯುತ್ತ ಪೆಟ್ಟಿಗೆಯ ಮುಖದುದ್ದಕ್ಕೂ ಕಟ್ಟುವ ಕೆಂಪು ದಾರ ನಾವುಗಳು ನಮ್ಮ ಸುತ್ತಲೂ ಕಟ್ಟಿಕೊಂಡ ಬೇಲಿಗಳ ಸಂಕೇತವಾಗುತ್ತಲೇ ಅದು ಮನುಷ್ಯತ್ವದ ಶವದ ಪೆಟ್ಟಿಗೆಯಾಗುವದನ್ನೂ ಸೂಚಿಸುತ್ತದೆ.

ನಾಲ್ಕೇ ನಟರನ್ನಿಟ್ಟುಕೊಂಡು ನಾಟಕ ಹೆಣೆಯುತ್ತಾರೆ ನೀಲಂ ಮಾನಸಿಂಗ್. ಅಪಾರ ಕಸುವನ್ನ ಬೇಡುವ ಪ್ರಸ್ತುತಿಗಳಿವು. ಬೆರಗುಗೊಳ್ಳುವ ರೀತಿಯಲ್ಲಿ ನಟರು ನಾಟಕವನ್ನು ದಾಟಿಸುತ್ತಾರೆ. ನಾಟಕದುದ್ದಕ್ಕೂ ಲೌಡ್ ಆಗಿ ಬಳಸಿಕೊಂಡ ತಾಳ ವಾದ್ಯಗಳು ಒಂದು ಪಾತ್ರವೇ ಆಗಿ ಪ್ರಸ್ತುತಿಯಲ್ಲಿ ಸೇರಹೋಗಿವೆ. ಬೆಳಕು ಬರೇ ‘ಲೈಟಿಂಗ್’ ಆಗದೇ ‘ಭಾವ’ ವಾಗಿದೆ.

ಬಹುಕಾಲ ನೆನಪಿನಲ್ಲುಳಿಯುವ ಪ್ರಯೋಗವಿದು.


  •  ಕಿರಣ ಭಟ್, ಹೊನ್ನಾವರ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW