ಆ ವೃದ್ಧ ದಂಪತಿಗಳು ಸಾಕಷ್ಟು ಹಣ ಇಟ್ಟುಕೊಂಡು ವಿದೇಶಯಾತ್ರೆಗೆ ಹೊರಟಿದ್ದರು.ಉಳಿದಷ್ಟು ಕಾಲ ಹಾಯಾಗಿ ವಿಶ್ವಪರ್ಯಟನೆ ಮಾಡುವ ಇರಾದೆಯಿಂದ. ಆದರೆ…ಏನಾಯಿತು ತಪ್ಪದೆ ಮುಂದೆ ಓದಿ ಕತೆಗಾರ್ತಿ ವೈ.ಕೆ.ಸಂಧ್ಯಾ ಶರ್ಮ ಅವರ ಈ ಸಣ್ಣಕತೆಯನ್ನು ತಪ್ಪದೆ ಮುಂದೆ ಓದಿ…
ವಿಮಾನದಲ್ಲಿ ಕುಳಿತ ರಾಧಾಬಾಯಿಗೆ ಕರುಳು ಕುದಿವ ಸಂಕಟ. ಒಬ್ಬನೇ ಮಗನೆಂದು ಅದೆಷ್ಟು ಮುಚ್ಚಟೆಯಿಂದ ಬೆಳೆಸಿದ್ದು. ಸಾವಿರ ಹರಕೆಯಿಂದ ಹುಟ್ಟಿದವನು. ಏಕಮಾತ್ರ ಪುತ್ರ. ಕನಸುಗಳ ಮೂಟೆ ಹೊತ್ತು ಕುಣಿದಿದ್ದೆಷ್ಟು. ಯಾವುದೇ ಅರಕೆಯಿಲ್ಲದೆ ಅವನಾಸೆಯನ್ನೆಲ್ಲ ಅಂಗೈಗೆ ಇಳಿಸಿ ಖುಷಿಪಡಿಸಿದ್ದು ಕಡಮೆಯೇನಲ್ಲ. ಇಂಜಿನಿಯರಾಗಿ ಕೈಗೆ ಸಂಬಳ ಬಂದ ತತಕ್ಷಣ, ಹೆತ್ತವರು ಅನುಕೂಲವಾಗಿದ್ದರೂ ಅವನ ದಾಕ್ಷಿಣ್ಯದಲ್ಲಿದ್ದಂತೆ ಕಾಲಕಸವಾದೆವೇ? ಇನ್ನು ಹೆಂಡತಿ ಮಗ್ಗುಲಿಗೆ ಬಂದೊಡನೆ ಅವನ ಧಿಮಾಕಿನೊಡನೆ ಅಹಂಕಾರವೂ ಬೆಳೆಯಿತೇ? ವಯಸ್ಸಾದ ತಂದೆ-ತಾಯಿ ಪರಾವಲಂಬಿಗಳೆಂಬ ಅಸಡ್ಡೆಯೇ? ಕೆಲವೊಮ್ಮೆ ಹೀಗೆ ವಿನಾಕಾರಣ ಅನಿಷ್ಟದ ಧೋರಣೆ ಬೆಳೆಯಬಹುದೇ ಎಂಬುದವರಿಗೆ ವಿಸ್ಮಯ. ತೀರಾ ಭ್ರಮನಿರಸನವಾಗಿತ್ತವರಿಗೆ. ಅಷ್ಟೇ ಪುತ್ರವ್ಯಾಮೋಹವೆಂಬುದು ಸೋರಿಹೋಗಿತ್ತು ಕೂಡ.
ಹೊಟ್ಟೆ-ಬಟ್ಟೆ ಕಟ್ಟಿ ಗೇಣುದ್ದ ಇದ್ದವನನ್ನು ಆರಡಿ ಆಕಾರದವರೆಗೂ ಬೆಳೆಸಿ, ಸಮಾಜದಲ್ಲೊಬ್ಬ ಘನಸ್ಥನಾಗಿ ನಿರೂಪಿಸಿದವರಿಗೆ ಸಿಕ್ಕ ಋಣಸಂದಾಯ. ಕಟುನುಡಿಗಳಿಂದಿರಿವ ಈ ಕ್ರೌರ್ಯ ಮನೋಭಾವ ಅವನಿಗೆ ಎಲ್ಲಿಂದ ಹರಿದು ಬಂದಿತ್ತೆಂಬುದು ಯಕ್ಷಪ್ರಶ್ನೆ. ರೋಸಿಹೋದ ಮನದಿಂದ ಹೆತ್ತವರು ತಮ್ಮ ಸಮಸ್ತ ಆಸ್ತಿಯನ್ನು ಅನಾಥಾಶ್ರಮಕ್ಕೆ ಉಯಿಲು ಬರೆದು ಪತ್ರವನ್ನು ಭದ್ರವಾಗಿ ತಮ್ಮ ಕೈಚೀಲದಲ್ಲೇ ಇರಿಸಿಕೊಂಡಿದ್ದವರು ಅವನಿಗೆ ಇದರ ಸುಳಿವೂ ಸಿಗದಂತೆ ಜಾಗ್ರತೆ ವಹಿಸಿದ್ದರು. ತಮ್ಮನ್ನು ಅದರವಾಗಿ ಕಾಣದ ಅವನಿಗೆ ಕಿಂಚಿತ್ತೂ ತಮ್ಮಿಂದ ಲಾಭ ದಕ್ಕಬಾರದೆಂಬ ಕೋಪ-ದುಃಖ ಒಳಗೊಳಗೇ ಕೊರೆದಿತ್ತು.
ಈಗ ಆಪ್ತಗೆಳೆಯರೊಬ್ಬರ ಸಲಹೆಯ ಮೇರೆಗೆ ಆ ವೃದ್ಧ ದಂಪತಿಗಳು ಸಾಕಷ್ಟು ಹಣ ಇಟ್ಟುಕೊಂಡು ವಿದೇಶಯಾತ್ರೆಗೆ ಹೊರಟಿದ್ದರು. ಉಳಿದಷ್ಟು ಕಾಲ ಹಾಯಾಗಿ ವಿಶ್ವಪರ್ಯಟನೆ ಮಾಡುವ ಇರಾದೆಯಿಂದ. ಏಜೆಂಟ್, ಅಗತ್ಯವಿದ್ದ ವೈದ್ಯಕೀಯ ವಿಮೆ ಇತ್ಯಾದಿ ಎಲ್ಲ ಏರ್ಪಾಡುಗಳನ್ನೂ ಮಾಡಿಕೊಟ್ಟಿದ್ದ.
ಅವರಿಬ್ಬರು ಮೋಡಗಳ ಹಡಗಿನಲ್ಲಿ ತೇಲುತ್ತ ಖುಷಿ ಖುಷಿಯ ಭಾವದಲ್ಲಿದ್ದಾಗಲೇ ವಿಮಾನ ಗಡಗಡನೆ ನಡುಗಲಾರಂಭಿಸಿತ್ತು. ಗಗನಸಖಿಯ ಸಲಹೆಯಂತೆ ಪ್ರಯಾಣಿಕರೆಲ್ಲ ಬಿಗಿಯಾಗಿ ಬೆಲ್ಟ್ ಕಟ್ಟಿಕೊಂಡರು. ರಾಧಾಬಾಯಿ, ಭಯದಿಂದ ಗಂಡನ ತೋಳೊತ್ತಿಕೊಂಡರು. ಮುಂದೆ ನಡೆದಿದ್ದೆಲ್ಲ ಅನೂಹ್ಯ. ವಿಮಾನಾಪಘಾತವಾಗಿ ಅದರೊಳಗಿದ್ದ ಎಲ್ಲರೂ ಮಡಿದಿದ್ದರು. ರಾಧಾಬಾಯಿ ದಂಪತಿಗಳು ಮಾಡಿದ್ದ ಉಯಿಲು ನಾಶದೊಂದಿಗೆ, ಅವರ ಮರಣಾರ್ಥದ ಪರಿಹಾರಧನವಾಗಿ ಅವರ ಮಗನಿಗೆ ಕಾನೂನು ರೀತ್ಯ ಕೋಟ್ಯಾಂತರ ರೂಪಾಯಿಗಳು ದಕ್ಕಿತ್ತು.
- ವೈ.ಕೆ.ಸಂಧ್ಯಾ ಶರ್ಮ
