ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಎಂಬ ಹೆಸರಿನ ಈ ಸಂಸ್ಥೆ ಪ್ರಾರಂಭವಾಗುವುದಕ್ಕೆ ಒಂದು ರೋಚಕ ಕತೆಯಿದೆ, ವಿಂಗ್ ಕಮಾಂಡರ್ ಸುದರ್ಶನ ಅವರ ಲೇಖನಿಯಲ್ಲಿ, ತಪ್ಪದೆ ಓದಿ …
ಇತ್ತೀಚೆಗೆ ಅಮೆರಿಕಾದ ಸ್ಟಾನ್ಸ್ಫೋರ್ಡ್ ವಿಶ್ವವಿದ್ಯಾಲಯದಿಂದ ಬಿಡುಗಡೆಯಾದ ಒಂದು ವರದಿಯ ಪ್ರಕಾರ ಪ್ರಪಂಚದ ಪ್ರತಿಭಾವಂತ ವಿಜ್ಞಾನಿಗಳ ಪಟ್ಟಿಯಲ್ಲಿ 124 ಮಂದಿ ಕರ್ನಾಟಕದವರಂತೆ. ಬಹುತೇಕರು ಬೆಂಗಳೂರಿನ ಟಾಟಾ ಇನ್ಸ್ಟಿಟ್ಯೂಟಿನವರು. #ಇಂಡಿಯನ್_ಇನ್ಸ್ಟಿಟ್ಯೂಟ್_ಆಫ್_ಸೈನ್ಸ್ ಎಂಬ ಹೆಸರಿನ ಈ ಸಂಸ್ಥೆ ಪ್ರಾರಂಭವಾದದ್ದೇ ಒಂದು ರೋಚಕ ಹಿನ್ನಲೆಯಲ್ಲಿ.
1893 ರಲ್ಲಿ ಸ್ವಾಮಿ ವಿವೇಕಾನಂದರು ಜಪಾನಿನಿಂದ ಚಿಕಾಗೋಕ್ಕೆ ವಿಶ್ವ ಧರ್ಮ ಸಮ್ಮೇಳನದಲ್ಲಿ ಭಾಗವಹಿಸಲು ಹೋಗುತ್ತಿದ್ದರು. ಅದೇ ಹಡಗಿನಲ್ಲಿ ಜೆಮ್ಸೆಟ್ಜಿ ಟಾಟಾ ಸಹಾ ಪ್ರಯಾಣಿಸುತ್ತಿದ್ದರು.
ಅಮೆರಿಕದಲ್ಲಿ ನಡೆಯುತ್ತಿದ್ದ ಉಕ್ಕು ಮತ್ತು ಕಬ್ಬಿಣದ ಕಾರ್ಖಾನೆಗಳ ಬಗ್ಗೆ ಅಧ್ಯಯನ ನಡೆಸಿ ಭಾರತದಲ್ಲಿ ಉಕ್ಕಿನ ಕಾರ್ಖಾನೆಗಳನ್ನು ಸ್ಥಾಪಿಸುವ ಉದ್ದೇಶದಿಂದ ಟಾಟಾರವರು ಅಮೆರಿಕಕ್ಕೆ ಹೋಗುತ್ತಿದ್ದರು. ಒಬ್ಬ ಸನಾತನ ಧರ್ಮದ ಹರಿಕಾರ ಮತ್ತೊಬ್ಬ ವಾಣಿಜ್ಯ ಕ್ಷೇತ್ರದ ದಾರ್ಶನಿಕ. ಹಲವಾರು ದಿನಗಳವರೆಗೆ ಇಬ್ಬರಲ್ಲೂ ಭಾರತದ ಅಭಿವೃದ್ಧಿ ಯ ಬಗ್ಗೆ ನಿರಂತರವಾಗಿ ಮಾತುಕತೆ ನಡೆಸಿದರು.

ಫೋಟೋ ಕೃಪೆ : tata group
ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಸನಾತನ ಮೌಲ್ಯಗಳ ಜೊತೆಗೆ ಆಧುನಿಕ ಸಂಶೋಧನೆಗಳನ್ನೂ ಮೈಗೂಡಿಸಿಕೊಂಡು ನಡೆಯುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸ್ಥಾಪಿಸುವ ಬಗ್ಗೆ ತಮ್ಮ ತಮ್ಮ ಕನಸುಗಳನ್ನು ಹಂಚಿಕೊಂಡರು.
ಟಾಟಾರವರಿಗೆ ಆಶ್ಚರ್ಯವಾದ ವಿಷಯವೇನೆಂದರೆ ಈ ಪ್ರಯಾಣ ಮುಗಿದ ಕೆಲವೇ ತಿಂಗಳುಗಳಲ್ಲಿ ಅಮೆರಿಕವೂ ಸೇರಿದಂತೆ ವಿಶ್ವದೆಲ್ಲೆಡೆ ಮನೆಮಾತಾದ ಸ್ವಾಮಿ ವಿವೇಕಾನಂದರ ಪ್ರಖರ ಭಾಷಣಗಳ ಪ್ರಭಾವ. ಜನಸಾಮಾನ್ಯರೇ ಅಲ್ಲದೆ ಹಾವರ್ಡ್ ವಿಶ್ವವಿದ್ಯಾಲಯದ ಪ್ರೊಫೆಸರುಗಳು ಇವರ ಬಗ್ಗೆ ಹಲವಾರು ಲೇಖನಗಳನ್ನು ಬರೆಯಲು ಪ್ರಾರಂಭಿಸಿದರು. ಇದರಿಂದ ಪ್ರಭಾವಿತರಾದ ಟಾಟಾರವರು ಸ್ವಾಮಿ ವಿವೇಕಾನಂದರಿಗೆ ಒಂದು ಪತ್ರ ಬರೆಯುತ್ತಾರೆ. ಆ ಪತ್ರದ ವಿಷಯವೇನೆಂದರೆ…
‘ನಾನು ಒಂದು ಉನ್ನತ ಸಂಶೋಧನಾ ಸಂಸ್ಥೆಯೊಂದನ್ನು ಸ್ಥಾಪಿಸುವ ಯೋಜನೆಯೊಂದನ್ನು ಹಾಕಿಕೊಂಡಿದ್ದೇನೆ, ಅದಕ್ಕೆ ನಿಮ್ಮ ಸಹಾಯ ಕೋರುತ್ತಿದ್ದೇನೆ’.
ಪತ್ರವೇನೋ ಸರಳವಾಗಿ ಕಂಡರೂ ಅದರ ಹಿನ್ನಲೆ ಸ್ವಲ್ಪ ಗಂಭೀರವಾಗಿತ್ತು. ಟಾಟಾರವರ ಈ ಪ್ರಸ್ತಾವನೆಯನ್ನು ಬ್ರಿಟಿಷ್ ಸರ್ಕಾರ ಆಗಲೇ ತಳ್ಳಿಹಾಕಿತ್ತು. ಅಂದಿನ ಬ್ರಿಟಿಷ್ ವೈಸರಾಯ್ ಲಾರ್ಡ್ ಕರ್ಜ಼ನ್ ಭಾರತೀಯರು ಸಂಶೋಧನಾ ಮನೋಭಾವದವರಲ್ಲಾ ಎಂದು ಹೀಯಾಳಿಸಿದ್ದರು. ಹಾಗಾಗಿ ಟಾಟಾರವರಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ವಿಶ್ವವಿದ್ಯಾಲಯಗಳ ಬೆಂಬಲ ಬೇಕಿತ್ತು. ಆಗ ಸ್ವಾಮಿ ವಿವೇಕಾನಂದರು ಲಂಡನ್ನಲ್ಲಿದ್ದ ಸಿಸ್ಟರ್ ನಿವೇದಿತಾರವರಿಗೆ ಈ ಕಾರ್ಯವನ್ನು ನಿರ್ವಹಿಸಲು ಕೇಳಿಕೊಂಡರು. ಕೂಡಲೇ ಕಾರ್ಯೋನ್ಮುಖರಾದ ನಿವೇದಿತಾ ವಿವೇಕಾನಂದರ ಭಕ್ತರಾದ ಹಾವರ್ಡ್ ವಿಶ್ವವಿದ್ಯಾಲಯದ ವಿಲಿಯಂ ಜೇಮ್ಸ್ ಮತ್ತು ಸ್ಕಾಟ್ಲೆಂಡಿನ ಪ್ಯಾಟ್ರಿಕ್ ಗೆಡ್ಸ್ ಎನ್ನುವ ಪ್ರಭಾವೀ ವ್ಯಕ್ತಿಗಳ ಸಹಾಯದಿಂದ ಒಂದು ಆಂದೋಲನವನ್ನೇ ಪ್ರಾರಂಭಿಸಿದರು. ಅನಿರೀಕ್ಷಿತವಾಗಿ ಬಂದ ಈ ಅಂತರಾಷ್ಟ್ರೀಯ ಮಟ್ಟದ ಒತ್ತಡಕ್ಕೆ ಬ್ರಿಟಿಷ್ ಸರ್ಕಾರ ಮಣಿಯಲೇ ಬೇಕಾಯಿತು. ಅಂತೂ ಕೊನೆಗೆ ಸರ್ ವಿಲಿಯಂ ರಾಮ್ಸೆಯವರ ನೇತೃತ್ವದ ಸಮಿತಿಯನ್ನು ರಚಿಸಿ ಟಾಟಾರವರಿಗೆ ಒಪ್ಪಿಗೆ ಕೊಟ್ಟರು.
#ಟಾಟಾರವರಿಗೆ ಮುಂಬೈನಲ್ಲಿ ಈ ಸಂಸ್ಥೆಯನ್ನು ನಿರ್ಮಾಣ ಮಾಡುವ ಉದ್ದೇಶವಿತ್ತು, ಆದರೆ ಮೂಲನಿವೇಶಧನದ ಕೊರತೆ ಇತ್ತು. ಅಂದಿನ ಶ್ರೀಮಂತ ರಾಜ್ಯವೆನಿಸಿಕೊಂಡಿದ್ದ ಮೈಸೂರು ಸಂಸ್ಥಾನದ ಸಹಾಯಕೋರಿ ದಿವಾನ್ ಶೇಷಾದ್ರಿ ಅಯ್ಯರ್ ಅವರ ಜೊತೆ ಮಾತುಕತೆ ನಡೆಸಿದರು. ಆಗ ನಾಲ್ಮಡಿ ಕೃಷ್ಣರಾಜ ಒಡೆಯರ್ ಅವರು ಇನ್ನೂ ಚಿಕ್ಕವರು, ಅವರ ತಾಯಿ ಮಹಾರಾಣಿ ಕೆಂಪುನಂಜಮ್ಮಣ್ಣಿಯವರು ರಾಜ್ಯಭಾರ ನಡೆಸುತ್ತಿದ್ದರು. ಟಾಟಾರವರ ಉದ್ದೇಶವನ್ನು ದಿವಾನರು ಮಹಾರಾಣಿಯವರಿಗೆ ತಿಳಿಸಿದಾಗ ಒಂದು ಷರತ್ತಿನ ಮೇಲೆ ಸಹಾಯ ಮಾಡಲು ಒಪ್ಪಿಕೊಂಡರು. ಅದೇನಪ್ಪಾ ಅಂದರೆ ಈ ಸಂಸ್ಥೆಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಬೇಕು, ಅದಕ್ಕೆ ಬೇಕಾದ ಭೂಮಿ ಮತ್ತು ಹಣದ ಸಹಾಯವನ್ನು ಮಾಡುತ್ತೇವೆ ಎಂದು. ಸರಿ ಎಂದು ಒಪ್ಪಿಕೊಂಡು ಟಾಟಾರವರು ಈ ಸಂತೋಷದ ವಿಷಯವನ್ನು ಸ್ವಾಮಿ ವಿವೇಕಾನಂದ ಮತ್ತು ಸಿಸ್ಟರ್ ನಿವೇದಿತಾರಿಗೆ ವಿಷಯ ತಿಳಿಸಿದರು. ಬೆಂಗಳೂರಿನ ಹೊರವಲಯದಲ್ಲಿ 371 ಎಕರೆ ಭೂಮಿ ಮತ್ತು ಐದು ಲಕ್ಷ ರೂಪಾಯಿಗಳ ಮೂಲನಿವೇಶಧನದ ಸಹಾಯ ಮತ್ತು ವಾರ್ಷಿಕ ಐವತ್ತು ಸಾವಿರ ರೂಪಾಯಿಗಳ ಧನಸಹಾಯದಿಂದ ಪ್ರಾರಂಭವಾಯಿತು ಬೆಂಗಳೂರಿನ ಟಾಟಾ ಇನ್ಸ್ಟಿಟ್ಯೂಟ್.
ಈಗ ಅಲ್ಲಿ ಟಾಟಾರವರ ಪ್ರತಿಮೆ ಏನೋ ಇದೆ, ಆದರೆ ಸ್ವಾಮಿ ವಿವೇವಕಾನಂದರ ಮತ್ತು ಮಹಾರಾಣಿ #ಕೆಂಪುನಂಜಮ್ಮಣ್ಣಿಯವರ ಪ್ರತಿಮೆಗಳು ಇರಬೇಕು ತಾನೇ…ಜನಗಳು ಇತಿಹಾಸ ಮರೆತು ಬಿಟ್ಟರೆ ಇದು ಇನ್ನೊಂದು JNU ಆಗಿಬಿಟ್ಟರೆ ಕಷ್ಟ. ಇಲ್ಲಾಗಲೇ ರಾಮಚಂದ್ರ ಗುಹಾ ಅವರ ಎಂಟ್ರಿಯಾಗಿದೆಯಂತೆ!
- ವಿಂಗ್ ಕಮಾಂಡರ್ ಸುದರ್ಶನ (ಇಪ್ಪತ್ತೈದು ವರ್ಷಗಳ ವಾಯುಸೇನೆಯ ಸೇವೆಯಿಂದ ನಿವೃತ್ತಿ ಪಡೆದ ನಂತರ ಇಂಡಿಗೋ ಏರ್ಲೈನ್ ನಿನಲ್ಲಿ ಏರ್ ಬಸ್ ವಿಮಾನಗಳ ವೈಮಾನಿಕ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಿಡುವಿನ ಸಮಯದಲ್ಲಿ ಪುಸ್ತಕಗಳನ್ನು ಓದುವ ಹಾಗು ಬರೆಯುವ ಹವ್ಯಾಸವನ್ನು ಇಟ್ಟುಕೊಂಡಿರುವ ಲೇಖಕರು, ‘ಹಸಿರು ಹಂಪೆ’ ಮತ್ತು ‘ಯೋಧ ನಮನ’ ಎನ್ನುವ ಎರಡು ಪುಸ್ತಕವನ್ನು ಬರೆದಿದ್ದಾರೆ).
