‘ಇದು Love crush’ ಕತೆ – ಡಾ.ವಡ್ಡಗೆರೆ ನಾಗರಾಜಯ್ಯಆಕೆ ಹತ್ತಿರ ಬಂದು ಗಟ್ಟಿಯಾಗಿ ನನ್ನನ್ನು ತಬ್ಬಿಕೊಂಡಳು, ಮುಂದೇನಾಯಿತು ಎಂದರೆ… ನನಗೆ ಜ್ವರ ಬಂತು. ಇದೆ ಲವ್ ಕ್ರಶ್. ಡಾ.ವಡ್ಡಗೆರೆ ನಾಗರಾಜಯ್ಯ ಅವರ ಲೇಖನಿಯಲ್ಲಿ ಕತೆಸಣ್ಣದಾದರೂ ಅದರ ಪರಿಣಾಮ ಬೆವರಿಳಿಸುತ್ತದೆ, ಮುಂದೆ ಓದಿ…

ಆಗ ನಾನು ತುಮಕೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ಐಚ್ಛಿಕ ಆಂಗ್ಲ ಸಾಹಿತ್ಯದ ವಿದ್ಯಾರ್ಥಿಯಾಗಿ ದ್ವಿತೀಯ ಬಿಎ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದೆ. ತುಮಕೂರು ನಗರದ ಎಂ.ಜಿ ರಸ್ತೆಯ ಮುಸಾಫರ್ ಖಾನೆ ಬಿಲ್ಡಿಂಗ್ ನಲ್ಲಿದ್ದ #ಹಾಸ್ಟೆಲ್ ಗೆ (ಅಲ್ಲೀಗ ಅಂಬೇಡ್ಕರ್ ಭವನ ನಿರ್ಮಿಸಲಾಗಿದೆ) ಒಂದು ಮಧ್ಯಾಹ್ನ ಊಟಕ್ಕೆಂದು ನಡೆದು ಹೋಗುತ್ತಿದ್ದಾಗ ಪ್ರಶಾಂತ್ ಚಿತ್ರಮಂದಿರದ ಬಳಿಯ Woodlands Deluxe ಹೊಟೆಲ್ ಎದುರಿನ ಮುಖ್ಯ ರಸ್ತೆಯಲ್ಲಿ ತಿಳಿನೀಲಿ ಬಣ್ಣದ ಒಂದು ಪರ್ಸ್ ಸಿಕ್ಕಿತು. ಅದರಲ್ಲಿ ನಮ್ಮ ದೇಶದ್ದಲ್ಲದ ಅಮೇರಿಕಾದ ಏಳೆಂಟು ಡಾಲರ್ ನೋಟುಗಳು ಕಾಗದ ಕೀಚೈನುಗಳಿದ್ದವು.

ಫೋಟೋ ಕೃಪೆ : artofmanliness

ಆಗ ತುಮಕೂರು ರಸ್ತೆಗಳಲ್ಲಿ ಈಗಿನಷ್ಟು ಜನದಟ್ಟಣೆ ಇರಲಿಲ್ಲ. ಆ ಪರ್ಸು ಯಾರದ್ದಿರಬಹುದೆಂದು ಹುಡುಕಿ ಕೊಡಲು ಸುತ್ತಮುತ್ತಲಿದ್ದ ಅಂಗಡಿಯವರಿಗೆ ಮತ್ತು ಅಲ್ಲಿ ತಿರುಗಾಡುತ್ತಿದ್ದ ಜನರಿಗೆ ಪರ್ಸನ್ನು ಮತ್ತು ಆ ಪರ್ಸಿನೊಳಗಿದ್ದ ಕರೆನ್ಸಿಯನ್ನೂ ತೋರಿಸುತ್ತಾ ಅದರ ಮಾಲೀಕತ್ವ ಕ್ಲೇಮು ಮಾಡಬಲ್ಲವರಿಗಾಗಿ ಹುಡುಕಲು ಕೇಳುತ್ತಿದ್ದೆನು. ಯಾರೊಬ್ಬರೂ ಆ ಪರ್ಸು ತಮ್ಮದೆಂದು ಹೇಳಿಕೊಳ್ಳುವವರು ಸಿಕ್ಕಲಿಲ್ಲ….

ಹಾಸ್ಟೆಲ್ ನ ಊಟದ ಸಮಯ ಮೀರುತ್ತಾ ಬಂದಿತ್ತು. ರಸ್ತೆಯಲ್ಲಿ #ಪರ್ಸ್ ಎಲ್ಲಿ ಬಿದ್ದಿತ್ತೋ ಅಲ್ಲಿಯೇ ಎಸೆದುಬಿಡೋಣವೆಂದೂ, ಪೊಲೀಸ್ ಠಾಣೆಗೆ ಹೋಗಿ ಒಪ್ಪಿಸೋಣವೆಂದೂ ಯೋಚಿಸುತ್ತಾ ಎಂ.ಜಿ ರಸ್ತೆಯ ಕಡೆಗೆ ಹೆಜ್ಜೆ ಹಾಕತೊಡಗಿದೆ. ತುಮಕೂರಿನಲ್ಲಿ ಈಗಿರುವ ಕೇಂದ್ರ KSRTC ಬಸ್ ನಿಲ್ದಾಣ ಆಗಿನ್ನೂ ಸುಸಜ್ಜಿತವಾಗಿ ನಿರ್ಮಾಣವಾಗಿರಲಿಲ್ಲ. ಅದರ ಕಾಮಗಾರಿ ನಡೆಯುತ್ತಿತ್ತು. ಅತ್ತ ಕಡೆಯಿಂದ ನನ್ನಿಂದ ಸುಮಾರು ಇಪ್ಪತ್ತು ಗಜಗಳಷ್ಟು ದೂರದಲ್ಲಿ ಮಧ್ಯವಯಸ್ಕ ಕೆಂಪುಮೂತಿಯ ವಿದೇಶಿ ಹೆಂಗಸೊಬ್ಬಳು ರಸ್ತೆ ದಾಟುತ್ತಿದ್ದಳು. ನನ್ನ ಕೈಯೊಳಗಿರುವ ಪರ್ಸ್ ಆಕೆಯದ್ದೇ ಇರಬೇಕೆಂದು ನನ್ನ ಮನಸ್ಸಿಗೆ ಹೇಗೋ ಹೊಳೆದುಹೋಯಿತು.

ಕೂಡಲೇ ರಸ್ತೆಯ ಒಂದು ಅಂಚಿನಿಂದ ಇನ್ನೊಂದು ಅಂಚಿಗೆ ನಾನು ದಾಟಿಕೊಂಡು ಆ ಹೆಂಗಸಿನ ಬಳಿಗೆ ಹೋಗುವಷ್ಟರಲ್ಲಿ ಆಕೆ ಹೋಟೆಲ್ ರೂಮಿನ ಬಾಗಿಲೆದುರು ನಿಂತು ತನ್ನ ಕೈಚೀಲ ತಡಕುತ್ತಾ ಚಡಪಡಿಸುತ್ತಿದ್ದಳು. ನೇರವಾಗಿ ಬಳಿಗೆ ಹೋಗಿ ಪರ್ಸ್ ನ್ನು ಆಕೆಯ ಎದುರಿಗೆ ಚಾಚಿ ಹಿಡಿದು..”Is this your purse, madam?” ಎಂದು ಕೇಳಿದೆ. ಮಧ್ಯಾಹ್ನದ ಉರಿ ಬಿಸಿಲಿಗೆ ಕೆಂಪೇರಿ ಕೆಂಡದಂತಿದ್ದ ಆ ಮುಖದ ಮೇಲೆ ಚಡಪಡಿಕೆಯ ಗೆರೆಗಳು ಮಾಯವಾಗಿ ನಗುವಿನ ಗೆರೆಗಳು ಮೂಡಿದವು. “Yes!, it’s mine…! Thank you very much” ಎಂದವಳೇ ನನ್ನ ಕೈನಲ್ಲಿದ್ದ ಪರ್ಸ್ ತೆಗೆದುಕೊಂಡು ರೂಮಿನ ಬಾಗಿಲು ತೆರೆಯತೊಡಗಿದಳು. ನಾನು ಅವಳಿಗೆ, “Mention not madam…. I am going to my hostel. It is getting late for my afternoon meals” ಎಂದು ವಿದಾಯ ಹೇಳಿ ಹೊರಟೆ.

ಫೋಟೋ ಕೃಪೆ : Freepik

ಅಷ್ಟು ಹೊತ್ತಿಗೆ ಬಾಗಿಲು ತೆರೆದ ಅವಳು, “Please wait… come inside” ಎಂದು ಭುಜದ ಮೇಲೆ ಕೈಹಾಕಿ ರೂಮಿನೊಳಕ್ಕೆ ಕರೆದುಕೊಂಡಳು. ಫ್ಯಾನ್ ಸ್ವಿಚ್ ಆನ್ ಮಾಡಿದವಳೇ ಬಾಗಿಲು ಚಿಲಕ ಹಾಕಲು ಹೋದಳು. ನನಗಾಗ ಮೈ ಬೆವೆತುಹೋಗಿ ನಡುಗಲಾರಂಭಿಸಿದೆ…. Why are you looking scared…? Be cool and happy” ಎಂದವಳೇ ಬಾಗಿಲ ಬೋಲ್ಟ್ ಹಾಕುತ್ತಲಿದ್ದಳು. ಬಾಗಿಲ ಬೋಲ್ಟ್ ಹಾಕಲು ಬಿಡದೆ ತಕ್ಷಣವೇ ನಾನು ಅಲ್ಲಿಂದ ಓಡಿಹೋಗೋಣವೆನ್ನುವಷ್ಟರಲ್ಲಿ ಭದ್ರವಾಗಿ ನನ್ನ ಮುಖವನ್ನು ತನ್ನ ಎರಡೂ ಕೈಗಳಲ್ಲಿ ಒತ್ತಿ ಹಿಡಿದು ನನ್ನ ತುಟಿಗಳ ಮೇಲೆ ಸುಭದ್ರವಾಗಿ ಅವಳ ತುಟಿಗಳಿಂದ ಮುದ್ರೆಯೊತ್ತಿದ್ದಳು.

ಫೋಟೋ ಕೃಪೆ : stackward

ಸಿಗರೇಟು ಘಾಟು ವಾಸನೆ ಮತ್ತು ಮದ್ಯದ ವಾಸನೆ ಹೊಡೆಯುತ್ತಿದ್ದ ಅವಳಿಂದ ನಾನು ಬಿಡಿಸಿಕೊಂಡು ಅರೆಮುಚ್ಚಿದ್ದ ಬಾಗಿಲು ತೆರೆದು ಹೋಗಲು ಆಚೆಗೆ ಹೆಜ್ಜೆ ಇರಿಸಿದ್ದೆ. ಆಕೆಯು ತಕ್ಷಣವೇ ತನ್ನ ಕೈಚೀಲದಿಂದ ಭಾರತೀಯ ನೂರು #ರೂಪಾಯಿಗಳ ಎರಡು ನೋಟುಗಳನ್ನು ನನ್ನ ಕೈಗಿರಿಸಿ “This is for your afternoon meals…, keep this with you” ಎಂದು ನನ್ನ ಜೇಬಿಗಿರಿಸಿದ್ದಳು.

ಅದಾದ ಎರಡು ದಿನಗಳ ನಂತರ ಕುತೂಹಲದಿಂದ ಆ ಹೋಟೆಲ್ ಗೆ ಹೋಗಿ ವಿಚಾರಿಸಲಾಗಿ ಅಮೆರಿಕಾದ ದಂಪತಿಗಳಿಬ್ಬರು ತುಮಕೂರು ಜಿಲ್ಲೆಯ ಪ್ರವಾಸಿ ತಾಣಗಳನ್ನು ನೋಡಲೆಂದು ಬಂದಿದ್ದವರು ಒಂದು ತಿಂಗಳ ಕಾಲ ಅದೇ ರೂಮಿನಲ್ಲಿ ವಾಸ್ತವ್ಯ ಹೂಡಿದ್ದರು. ಹಿಂದಿನ ದಿನವಷ್ಟೇ ಅವರು ತುಮಕೂರು ಜಿಲ್ಲಾ ಪ್ರವಾಸ ಮುಗಿಸಿ ಹೋಟೆಲ್ ತೊರೆದು ಹೋಗಿದ್ದರು… ಅವರ ಹೆಚ್ಚಿನ ವಿವರಗಳನ್ನು ನಾನು ಪಡೆದುಕೊಳ್ಳಲಿಲ್ಲ.

ಅವಳು ಮುತ್ತು ಕೊಟ್ಟ ಆ ದಿನದ ರಾತ್ರಿ ನನಗೆ #ಜ್ವರ ಬಂದು ಬಳಲಿದ ನೆನಪು….

ಇದು Love crush, ಜ್ವರವಲ್ಲ!


  • ಡಾ.ವಡ್ಡಗೆರೆ ನಾಗರಾಜಯ್ಯ (ಸರ್ಕಾರಿ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕರು,ಚಿಂತಕರು) ಬೆಂಗಳೂರು

0 0 votes
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW