ಅಂತರಂಗದ ದನಿಯ ಬನಿಯಾಗಿ

ಡಾ. ಅಜಿತ್ ಹರೀಶಿ ಅವರ ಹನ್ನೆರಡನೆಯ ಕೃತಿ ಮತ್ತು ‘ತೇಲಿ ಬಿಟ್ಟ ಆತ್ಮಬುಟ್ಟಿ’ ಅವರ ನಾಲ್ಕನೆಯ ಕವನ ಸಂಕಲನವಾಗಿದ್ದು ಲೇಖಕರು ಅವರ ಮನದಾಳದ ಮಾತುಗಳನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : ‘ತೇಲಿ ಬಿಟ್ಟ ಆತ್ಮಬುಟ್ಟಿ’
ಕವಿಗಳು : ಡಾ. ಅಜಿತ್ ಹರೀಶಿ
ಪ್ರಕಾಶನ : ವಿಜಯಲಕ್ಷ್ಮಿ ಪ್ರಕಾಶನ
ಬೆಲೆ : ೧೨೦.೦೦

‘ತೇಲಿ ಬಿಟ್ಟ ಆತ್ಮಬುಟ್ಟಿ’ ನನ್ನ ನಾಲ್ಕನೆಯ ಕವನ ಸಂಕಲನವಾಗಿದೆ ಹಾಗೂ ಒಟ್ಟಾರೆ ಹನ್ನೆರಡನೇ ಕೃತಿಯಾಗಿದೆ. ಒಂದು ಕೃತಿಯಿಂದ ಮತ್ತೊಂದು ಕೃತಿಯವರೆಗೆ ನನ್ನ ಕವಿತೆಗಳು ಒಂದಿಷ್ಟಾದರೂ ಬೆಳವಣಿಗೆ ಕಂಡಿದ್ದರೆ ಬರವಣಿಗೆ ಸಾರ್ಥಕ. ಇದನ್ನು ಸಹೃದಯರಾದ, ನೀವು ಓದುಗರು ಹೇಳಬೇಕು. ನನ್ನ ಮೊದಲ ಕವನ ಸಂಕಲನ ಪ್ರಕಟಿಸುವ ವೇಳೆಗೆ ಒಂದಿಷ್ಟು ಪ್ರಕಾಶಕರು ಉತ್ಸಾಹದಿಂದ ಕವಿತಾ ಸಂಕಲನಗಳನ್ನು ಪ್ರಕಟಿಸುತ್ತಿದ್ದರು. ಈಗ ಅಂತಹ ಉತ್ಸಾಹಕರ ವಾತಾವರಣವಿಲ್ಲ ಎಂಬುದು ನನ್ನ ಮತ್ತು ಬಹುತೇಕ ಕವಿಗಳ ಅನುಭವವಾಗಿದೆ. ಮತ್ತೆ ಕವಿತೆಗಳಿಗೆ ಒಳ್ಳೆಯ ದಿನಗಳು ಬರಲಿ ಎಂಬುದು ಆಶಯ, ಸಮಯಕ್ಕೆ ಅಂತಹ ಒಂದು ಶಕ್ತಿಯಿದೆ ಎಂಬುದು ನನ್ನ ನಂಬಿಕೆಯಾಗಿದೆ.

ಬರಹವಿರಲಿ, ಬದುಕಿರಲಿ ಒಂದಲ್ಲ ಒಂದು ದಿನ ಒಂದು ತಿರುವಿಗೆ ಬಂದು ನಿಲ್ಲುತ್ತವೆ. ಅಂತಹ ಕ್ಷಣದಲ್ಲಿ ಹೃದಯ ಮತ್ತು ಮನಸ್ಸಿನಿಂದ ಒಂದೇ ಧ್ವನಿ ಹೊರಟರೆ ಎಷ್ಟು ಚೆಂದ! ಅಂತಹ ಅಪರೂಪದ ಅನುಭವ ಎಲ್ಲರಿಗೂ ಆಗಬೇಕು. ಆ ಸಮಯದಲ್ಲಿ ಅವುಗಳಿಗೆ ಕಿವಿಯಾಗಬೇಕು. ಜೀವನ ಮತ್ತು ಕವಿತೆಗೆ ಹಲವು ಸಾಮ್ಯತೆಗಳಿವೆ. ಎರಡೂ, ಎಲ್ಲವೂ ಮುಗಿದೇಹೋಯಿತು ಎಂದಾಗ ಮತ್ತೆ ಮೈಕೊಡವಿ ಎದ್ದು ನಿಲ್ಲುತ್ತವೆ. ಇವು ಏಕಕಾಲಕ್ಕೆ ಸರಳವೂ, ಜಟಿಲವೂ ಹೌದು. ಕವಿತೆಯು ಬದುಕಿಗೆ ದರ್ಶನವಾದರೆ, ಬದುಕು ಕವಿತೆಗೆ ಕಲ್ಲಿದ್ದಲು. ಹೀಗೆ ಮುಖಾಮುಖಿಯಾಗುವ, ಜೊತೆಯಾಗಿ ಸಾಗುವ ಅಪರೂಪದ ಜೋಡಿಯಿದು.

ಈ ಹೊತ್ತಿಗೆಯಲ್ಲಿ ಕಲ್ಪನೆ, ವಾಸ್ತವ, ಅನುಭವ, ಪ್ರೇಮ, ಪ್ರಣಯದ ಸರಣಿ ಕವಿತೆಗಳಿವೆ. ಬದುಕಿನ ಕಠಿಣ ದಾರಿಯ ಪ್ರಸ್ತಾಪವಿದೆ. ಬಾಲ್ಯ ಮತ್ತು ಬದಲಾವಣೆಯ ನೋಟಗಳಿವೆ. ಅಲ್ಲಲ್ಲಿ ವೇದಾಂತವಿದೆ, ವೇದನೆಯಿದೆ. ನೋವಿನಿಂದ, ಹತಾಶೆಯಿಂದ ಬಿಡುಗಡೆಯ ದಾರಿಯ ಹುಡುಕಾಟವಿದೆ. ಬದುಕು ತನ್ನ ಅತ್ಯಂತ ಕಠಿಣ ಸಂದರ್ಭಗಳಲ್ಲಿ ಅಕ್ಷರರೂಪಿಯಾಗುತ್ತದೆ ಎಂಬ ಮಾತಿದೆ. ಅಂತಹ ಕಾಲಘಟ್ಟದಲ್ಲಿ ಹುಟ್ಟಿದ ಸಂಕಲನವಿದು. ಅದರ ಛಾಯೆ ಅಲ್ಲಲ್ಲಿ ಕಾಣಸಿಗುತ್ತದೆ. ಅಲ್ಲಿಂದ ಬೇರೆಯದೇ ಜಿಗಿತ ಕಂಡ ತುಣುಕುಗಳು ಸಹ ಇಲ್ಲಿ ಕವಿತೆಯಾಗಿವೆ. ಕವಿತೆಯಲ್ಲಿ ಅಭಿವ್ಯಕ್ತಿಯಾಗಿಸುವ ಎಲ್ಲ ಸಾಧ್ಯತೆಗಳನ್ನು, ಒಟ್ಟಾರೆ ನನ್ನ ನಾಲ್ಕು ಕವನ ಸಂಕಲನಗಳಲ್ಲಿ ನನ್ನ ಮಿತಿಯಲ್ಲಿ ತಂದಿದ್ದೇನೆ ಎಂಬ ಭಾವನೆ ನನ್ನಲ್ಲಿ ತುಂಬಿದೆ. ಹಾಗಾಗಿ ಬಹುಶಃ ಇದು ನನ್ನ ಕೊನೆಯ ಕವನ ಸಂಕಲನ ಎಂದುಕೊಂಡಿದ್ದೇನೆ. ಎಲ್ಲವನ್ನೂ ಕವಿತೆಯಲ್ಲಿ ಹೇಳಬೇಕು ಎಂಬ ಹುಕಿ ಇಲ್ಲಿಗೆ ಮುಕ್ತಾಯವಾಗುತ್ತದೆ. ಇದಕ್ಕಿಂತ ಹೆಚ್ಚಿನ ಮಾತುಗಳು ಈ ಮನದ ನುಡಿಗೆ ಭಾರವಾಗಬಹುದು. ಹಾಗಾಗಿ ಇಲ್ಲಿಗೆ ವಿರಮಿಸುತ್ತೇನೆ‌.

ನನ್ನ ಈ ಕವನಗಳ ಗುಚ್ಛಕ್ಕೆ ಮುನ್ನುಡಿ ಬರೆದುಕೊಟ್ಟು ಹರಸಿದ ಎನ್. ಎಸ್ ಶ್ರೀಧರಮೂರ್ತಿ, ಬೆನ್ನುಡಿ ಕರುಣಿಸಿದ ಗೀತಾ ವಸಂತ ಮತ್ತು ಆಶಯ ನುಡಿಯನ್ನು ತಡವಿಲ್ಲದೇ ನೀಡಿದ ಡಿ. ಎಸ್ ರಾಮಸ್ವಾಮಿ ಅವರುಗಳಿಗೆ ಹೃದಯಪೂರ್ವಕ ಪ್ರಣಾಮಗಳು. ಮುಖಪುಟ ವಿನ್ಯಾಸ ಮಾಡಿಕೊಟ್ಟ ಸುಧಾಕರ ದರ್ಬೆ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ಈ ಕೃತಿಯನ್ನು ಪ್ರಕಟಿಸುತ್ತಿರುವ ಮೈಸೂರಿನ ಸುನಿಲ್ ಮತ್ತು ವಿಜಯಲಕ್ಷ್ಮಿ ಪ್ರಕಾಶನಕ್ಕೆ ಚಿರಋಣಿಯಾಗಿದ್ದೇನೆ. ಪ್ರೂಫ್ ರೀಡಿಂಗ್ ಮಾಡಿದ ಪ್ರಶಾಂತ ಸಾಗರ ಮತ್ತು ಆತ್ಮಾ ಜಿ. ಎಸ್ ಅವರಿಗೆ ಧನ್ಯವಾದಗಳು. ಡಿಟಿಪಿ ಮಾಡಿದ ಸುಬ್ರಮಣ್ಯ ಅವರಿಗೆ ನಮನಗಳು. ನನ್ನ ಕವಿತೆಗಳನ್ನು ಪ್ರಕಟಿಸಿದ ವಿಜಯ ಕರ್ನಾಟಕ ಪತ್ರಿಕೆ, ಹೊಸ ದಿಗಂತ, ಅವಧಿ, ಬುಕ್ ಬ್ರಹ್ಮ, ಕೆಂಡಸಂಪಿಗೆ, ಪಂಜು, ಆಕೃತಿ ವೆಬ್ ಮ್ಯಾಗಜೀನ್ ಗಳಿಗೆ, ವಿದ್ಯಾರಶ್ಮಿ ಪೆಲತ್ತಡ್ಕ, ಜಿ. ಎನ್ ಮೋಹನ್, ದೇವು ಪತ್ತಾರ, ಅಬ್ದುಲ್ ರಶೀದ್, ರೂಪಾ ಕಲ್ಲಿಗನೂರು, ಶಾಲಿನಿ ಪ್ರದೀಪ್, ವಿನಾಯಕ ಭಟ್ ಮೂರೂರು, ಪರಮೇಶ್ವರ ಭಟ್ ಅವರುಗಳನ್ನು ಮನಸಾ ಸ್ಮರಿಸುತ್ತೇನೆ.

ತಂದೆ, ತಾಯಿಗೆ ವಂದೇ. ಪತ್ನಿ ಸ್ನೇಹಾ, ಮಗ ಅಂಕಿತನಿಗೆ ನಲ್ಮೆ. ಸದಾ ಬರೆಯಲು ಬೆಂಬಲಿಸುವ ಕಾವ್ಯ ಕೇಳಿ ಬಳಗಕ್ಕೆ, ಕಥೆಕೂಟಕ್ಕೆ, ಸಮಾನ ಮನಸ್ಕ ಲೇಖಕರಿಗೆ, ಹರೀಶಿ ಮತ್ತು ಸುತ್ತಮುತ್ತಲಿನ ಹತ್ತೂರಿನ ಜನತೆಗೆ, ನನ್ನೆಲ್ಲಾ ಆಪ್ತ ವರ್ಗಕ್ಕೆ ನಾನು ಆಭಾರಿ. ಕೊನೆಯದಾಗಿ, ಅಮೂಲ್ಯ ಓದುಗರಾದ ನಿಮಗೆ ನಾನು ಸದಾ ಕೃತಜ್ಞನಾಗಿದ್ದೇನೆ. ನಿಮ್ಮಗಳ ಹಾರೈಕೆ ಸದಾ ಇರಲಿ. ಅಭಿಪ್ರಾಯಕ್ಕಾಗಿ ಕಾಯುತ್ತಾ ಇರುತ್ತೇನೆ.

ಇಂತಿ,
ವಿನಮ್ರತೆ ಮತ್ತು ಪ್ರೀತಿಯಿಂದ
ನಿಮ್ಮವನೇ ಆದ…


  • ಡಾ. ಅಜಿತ್ ಹರೀಶಿ, ಸೊರಬ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW