‘ತಿಕ್ಕಲು ಬುಡ್ಡಿ’ ಸಣ್ಣಕತೆ – ಸುಮಾ ರಮೇಶ್

ವಿಭಾ, ಹಿಂದಿನ ದಿನ ಸಂಜೆ ಫಿಸಿಕ್ಸ್‌ ಟ್ಯೂಷನ್‌ ಮುಗಿಸಿ ಬರುವಾಗ ಗಾಡಿ ಸ್ಕಿಡ್‌ ಆಗಿ ನೆಲಕ್ಕೆ ಬಿದ್ದು ಎಡ ಮುಂಗೈಗೆ ಹೇರ್‌ಲೈನ್‌ ಫ್ರ್ಯಾಕ್ಚರ್ ಆಗಿ ಅಲ್ಲಲ್ಲಿ ತರಚು ಗಾಯಗಳಾಗಿದ್ದವು. ಎರಡನೇ ಪಿಯುಸಿ ಪರೀಕ್ಷೆಗೆ ತಿಂಗಳಷ್ಟೇ ಬಾಕಿಯಿತ್ತು. ಹಗಲು ರಾತ್ರಿ ನಿದ್ದೆಗೆಟ್ಟು ಓದುವ ಮಗಳನ್ನು ಕಂಡಾಗ ಆ ಮಾತೃ ಹೃದಯ ಆರ್ದ್ರಗೊಳ್ಳುವುದು. ಮುಂದೇನಾಯಿತು ಸುಮಾ ರಮೇಶ್ ಅವರ ಸಣ್ಣಕತೆಯನ್ನು ತಪ್ಪದೆ ಓದಿ…

ಢಡಣ್‌….. ಢಡಣ್….ಢಣ್….‌.! ಢಡಣ್….ಢಡಣ್…..ಢಣ್…..! ” ದಿಗಿಲು ಹುಟ್ಟಿಸುವ ಬ್ರೇಕಿಂಗ್‌ ನ್ಯೂಸ್‌…..! ವಿಶಿಷ್ಟ ಶಬ್ಧ ಸಂಯೋಜನೆಯೊಂದಿಗೆ ವಾರ್ತಾ ವಾಚಕಿಯ ಲಯಬದ್ಧ ಸ್ವರ ಕೊಠಡಿಯ ಗೋಡೆಗಳಿಗೆ ಅಪ್ಪಳಿಸಿ ಮಾರ್ದನಿಗೊಳ್ಳುತ್ತಿತ್ತು. ನ್ಯೂಸ್‌ ಚಾನಲ್ಲಿನ ಸುದ್ದಿ ಹಸಿವಿಗೆ ಅಂದಿನ ಆ ಘಟನೆ ಪುಷ್ಕಳ ಭೋಜನ ಒದಗಿಸಿತ್ತು. ಕೊಠಡಿಯಲ್ಲಿ ಕುಳಿತು ಡವಗುಟ್ಟುತ್ತಿದ್ದ ಎದೆಯನ್ನು ಕೈಯಲ್ಲಿ ಒತ್ತಿ ಹಿಡಿದ ವಿಭಾ ಆತಂಕದಿಂದ ಟಿವಿ ಪರದೆಯ ಮೇಲೆ ಕಣ್ಣು ಕೀಲಿಸಿದಳು.

“ ನಿನ್ನೆ ಸಂಜೆ ಸುಮಾರು ಏಳು ಗಂಟೆಯ ಸಮಯದಲ್ಲಿ ನಗರದ ಹೊರವಲಯದ ಹೊಸಳ್ಳಿ ರಸ್ತೆಯಲ್ಲಿ ಮಾಜಿ ಸಚಿವರಾದ ಶ್ರೀ ಗುರುಸಿದ್ದಪ್ಪನವರ ಮಗ ಸಚ್ಚಿನ್‌ ನ ತಲೆಯ ಮೇಲೆ ಸೈಜ್‌ಗಲ್ಲನ್ನು ಎಸೆದು ಆಕ್ರಮಣ ಮಾಡಿದ ಇಳಿವಯಸ್ಸಿನ ಮಾನಸಿಕ ಅಸ್ವಸ್ಥೆಯನ್ನು ಪೋಲೀಸರು ಬಂಧಿಸಿ ಕರೆದೊಯ್ಯುವಾಗ ಮಾರ್ಗ ಮಧ್ಯೆ ಕುಸಿದು ಬಿದ್ದ ಆಕೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಅಸು ನೀಗಿದ್ದಾಳೆ. ಸಚಿನ್‌ ದೇಹಸ್ಥಿತಿ ಗಂಭೀರವಾಗಿದ್ದು ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದೆ”‌

“ ಓಹ್…..! ತಿಕ್ಕಲು ಬುಡ್ಡಿ…. ಸತ್ತೇ ಹೋದ್ಲಾ……!?” ತಟ್ಟನೆ ಮೇಲೆದ್ದ ವಿಭಾ ಆಘಾತ, ನೋವು, ಹತಾಶೆಯಿಂದ ಚೀರಿದಳು. ಎದೆಯಾಳದಲ್ಲಿ ಹುದುಗಿ ಕುಳಿತಿದ್ದ ನಡುಕವೊಂದು ಜಾಗೃತವಾಯಿತು. ಹೊಟ್ಟೆಯಲ್ಲಿ ಏನೋ ಸಂಕಟ….. ತಲೆ ಧಿಮ್ಮೆಂದಂತಾಗಿ ಬಲಗೈಲಿ ಹಣೆಯನ್ನು ಒತ್ತಿ ಹಿಡಿದು ಕಿಟಕಿಯ ಸರಳುಗಳ ಆಸರೆಯೊಂದಿಗೆ ದೇಹವನ್ನು ಗೋಡೆಗಾನಿಸಿದಳು. ಕೊರಳು ಬಿಗಿದಂತಾಗಿ ಪಕ್ಕದಲ್ಲಿದ್ದ ಫ್ಯಾನ್‌ ಸ್ವಿಚ್‌ ಅದುಮಿದಳು. ನಿಧಾನವಾಗಿ ಬೀಸಿದ ತಣ್ಣನೆಯ ಗಾಳಿಗೆ ಉಸಿರಾಟ ಕೊಂಚ ಸರಾಗವೆನಿಸಿತು. ಕಿಟಕಿಯ ತೆಳು ಪರದೆಗಳು ಮಂದ ಮಾರುತದ ತಾಳಕ್ಕೆ ಓಲಾಡತೊಡಗಿದವು. ಅಶಾಂತಿಯನ್ನು ಹೊಂದಿದ ಮನದಿ ಆತಂಕದ ತರಂಗಗಳೇಳುತ್ತಿದ್ದವು. ಬೇಡದ ಸಂಗತಿಗಳು ನೆನಪಿನ ಕಿಟಕಿಗಳನ್ನು ತೆರೆದು ಹಣಕುತ್ತಿದ್ದವು.

“ ವಿಭಾ, ಏನಾಯ್ತು ಪುಟ್ಟ…..ಯಾಕೆ ಎದ್ದೆ….? ಡಾಕ್ಟರ್‌ ಹೇಳಿಲ್ವಾ ಒಂದು ವಾರ ರೆಸ್ಟ್‌ ತಗೋಬೇಕು ಅಂತ…..” ಆಗಷ್ಟೇ ಒಳಬಂದ ಸುನಂದ ಗೋಡೆಗೊರಗಿದ್ದ ಮಗಳನ್ನು ಅಪ್ಪಿ ಹಿಡಿದಳು. ನಿಧಾನವಾಗಿ ಹಾಸಿಗೆಯಲ್ಲಿ ಕೂರಿಸಿ ಮುಂದಲೆಯನ್ನು ಪ್ರೀತಿಯಿಂದ ನೇವರಿಸುತ್ತಾ ಮೂಸಂಬಿ ರಸವನ್ನು ನೀಡಿದಳು. ಹಾಲು ಬಿಳುಪಿನ ಮಗಳ ಸುಂದರ ಮುಖ ಜ್ವರದ ತಾಪಕ್ಕೆ ಕೆಂಪಾಗಿತ್ತು. ಹಿಂದಿನ ದಿನ ಸಂಜೆ ಫಿಸಿಕ್ಸ್‌ ಟ್ಯೂಷನ್‌ ಮುಗಿಸಿ ಬರುವಾಗ ಗಾಡಿ ಸ್ಕಿಡ್‌ ಆಗಿ ನೆಲಕ್ಕೆ ಬಿದ್ದು ಎಡ ಮುಂಗೈಗೆ ಹೇರ್‌ಲೈನ್‌ ಫ್ರ್ಯಾಕ್ಚರ್ ಆಗಿ ಅಲ್ಲಲ್ಲಿ ತರಚು ಗಾಯಗಳಾಗಿದ್ದವು. ಎರಡನೇ ಪಿಯುಸಿ ಪರೀಕ್ಷೆಗೆ ತಿಂಗಳಷ್ಟೇ ಬಾಕಿಯಿತ್ತು. ಹಗಲು ರಾತ್ರಿ ನಿದ್ದೆಗೆಟ್ಟು ಓದುವ ಮಗಳನ್ನು ಕಂಡಾಗ ಆ ಮಾತೃ ಹೃದಯ ಆರ್ದ್ರಗೊಳ್ಳುವುದು. ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿನಿಯರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಗುರುತಿಸಿಕೊಂಡಿದ್ದ ಅವಳ ಈ ಬಾರಿಯ ಪಿಯು ಫಲಿತಾಂಶದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿದ್ದವು.

ಮೂಸಂಬಿ ರಸವನ್ನು ನಿಧಾನವಾಗಿ ಗುಟುಕರಿಸಿದಾಗ ಮನಕ್ಕೆ ಚೈತನ್ಯ ಮೂಡಿತು. ಮಲಗಿದ ಮಗಳ ಹೊದಿಕೆ ಸರಿಪಡಿಸಿ ಹಣೆಯ ಮೇಲೆ ಕೈಯಿರಿಸಿದಾಗ ಜ್ವರದ ತಾಪ ಕೊಂಚ ಕಡಿಮೆಯಾದಂತೆನಿಸಿತು. ಕಿಟಕಿಯ ಪರದೆಯನ್ನು ಸರಿಸಿ ಟೇಬಲ್‌ ಮೇಲಿರಿಸಿದ್ದ ಖಾಲಿ ಬಟ್ಟಲಿನೊಂದಿಗೆ ಹೊರಬಂದ ಸುನಂದ ರೂಮಿನ ಬಾಗಿಲನ್ನು ಮುಂದಕ್ಕೆ ಎಳೆದುಕೊಂಡಳು. ಪರೀಕ್ಷೆ ಸಮಯದಲ್ಲಿ ಮಗಳು ಅಸ್ವಸ್ಥಳಾದದ್ದು ಆ ಮಾತೃ ಹೃದಯದ ಆತಂಕವನ್ನು ಹೆಚ್ಚಿಸಿತ್ತು. ಸ್ಟಡಿ ಹಾಲಿಡೇಸ್‌ ಇದ್ದುದರಿಂದ ಕಾಲೇಜಿಗೆ ಹೋಗುವ ರಗಳೆ ಇರಲಿಲ್ಲ. ಫ್ರ್ಯಾಕ್ಚರ್‌ ಆದದ್ದು ಎಡಗೈಗೆ ಎಂಬ ಅಂಶ ಕೊಂಚ ಸಮಾಧಾನ ತಂದಿತ್ತು.

ಬ್ಲಾಂಕೆಟ್‌ ಹೊದ್ದು ಮಲಗಿದ ವಿಭಾ ನಿಟ್ಟುಸಿರಿಡುತ್ತಾ ಮಗ್ಗಲು ಹೊರಳಿದಳು. ವಾರ್ತೆಯ ಮುಖ್ಯಾಂಶಗಳು ಮನದಲ್ಲಿ ಕೋಲಾಹಲವೆಬ್ಬಿಸಿದ್ದವು. ಸೊರಗಿದ ದೇಹದ, ವಿಚಿತ್ರ ನಡೆಯ ತಿಕ್ಕಲು ಬುಡ್ಡಿಯನ್ನು ಬುದ್ದಿ ತಿಳಿದ ದಿನದಿಂದಲೂ ನೋಡಿದ್ದ ನೆನಪು. ಉಣ್ಣಲು ರಗಳೆ ಮಾಡುವ, ರಚ್ಚೆ ಹಿಡಿಯುವ ಮಕ್ಕಳಿಗೆ ಅವಳ ಹೆಸರು ಹೇಳಿ ಹೆದರಿಸುವುದಿತ್ತು. ಅಸಲಿಗೆ ಆಕೆ ಭಿಕ್ಷುಕಿಯಲ್ಲ. ಹಾಗೆಂದು ಅವಳಿಗೆ ಮನೆ, ಮಠ, ಕುಟುಂಬಗಳೂ ಇರಲಿಲ್ಲ. ಹಲವು ವರ್ಷಗಳಿಂದ ಅವಳನ್ನು ಕಂಡವರಿದ್ದರು. ಹೆಗಲಿಗೊಂದು ಪ್ಲಾಸ್ಟಿಕ್‌ ಚೀಲ ಸಿಕ್ಕಿಸಿಕೊಂಡು ಊರು ತುಂಬಾ ಸುತ್ತುತ್ತಿದ್ದಳು. ತೈಲ ಸಂಸ್ಕಾರವಿಲ್ಲದೆ ಕೆದರಿ ಸಿಕ್ಕಾದ ಒಣ ಕೂದಲು ಅವಳ ಬದುಕಿನಂತೆಯೇ ಯಾವಾಗಲೂ ಅಸ್ತವ್ಯಸ್ತಗೊಂಡಿರುತ್ತಿತ್ತು. ಸ್ನಾನ ಕಾಣದ ದೇಹ, ಅದಕ್ಕೆ ಸುತ್ತಿದ ಹರಕು ಸೀರೆಯನ್ನು ತೊಡೆ ಕಾಣುವಂತೆ ಮೇಲೆತ್ತಿಕೊಂಡು ನಡೆಯುತ್ತಿದ್ದರೆ ಹೆಂಗಸರು ಮುಜುಗರ ಪಡುತ್ತಿದ್ದರು. ತಿಂಗಳ ಕಡು ಸ್ರಾವ ಆಗೊಮ್ಮೆ ಈಗೊಮ್ಮೆ ಅವಳ ಬಡಕಲು ತೊಡೆಯಂಚಿನಿಂದ ಇಳಿದು ಪಾದಗಳಡಿ ಹರಿದು ಹೆಜ್ಜೆಯೊಂದಿಗೆ ಅಸ್ಪಷ್ಟವಾಗಿ ಗುರುತು ಮೂಡಿಸಿ ಮಣ್ಣಿನಲ್ಲಿ ಬೆರೆತು ಹೋಗುತ್ತಿತ್ತು. ಅಲ್ಲಲ್ಲಿ ಹರಿದ ರವಿಕೆ, ಒಮ್ಮೊಮ್ಮೆ ಅದೂ ಇರುತ್ತಿರಲಿಲ್ಲ. ಅರೆನಗ್ನ ದೇಹ ಬಿಸಿಲಿಗೆ ಒಣಗಿ ಕಟ್ಟಿಗೆಯಂತಾಗಿತ್ತು. ಒಡೆದು ಬಿರುಕಾಗಿದ್ದ ಪಾದಕ್ಕೆ ಅಪ್ಪಚ್ಚಿಯಾದ ವಾಟರ್‌ ಬಾಟಲುಗಳನ್ನು ಕಟ್ಟಿಕೊಂಡು ನಡೆಯುತ್ತಿದ್ದಳು. ಹಳೆಯ ಬಟ್ಟೆಯಿಂದ ಹರಿದ ಉದ್ದನೆಯ ಎಳೆಯನ್ನು ದಾರವಾಗಿಸಿ ಬಾಟಲಿಗೆ ಸುತ್ತಿ ಉಂಗುಷ್ಟಕ್ಕೆ ಬಿಗಿದುಕೊಂಡಿರುತ್ತಿದ್ದಳು. ಬಾಟಲಿಯ ಕವಚ ಅವಳ ನಡಿಗೆಯ ಲಯಕ್ಕೆ ಕೊಸರಿಕೊಂಡು ಅತ್ತಿತ್ತ ಸರಿಯುತ್ತಿತ್ತು. ಸರಿದ ಪಾದುಕೆಗಳನ್ನು ತನ್ನ ನಡಿಗೆಗೆ ಹೊಂದಿಸಿಕೊಳ್ಳಲಾಗದೆ ಕಾಲೆಳೆಯುತ್ತಾ ಸಾಗುತ್ತಿದ್ದಳು. ನಿರ್ಭಾವುಕ ಮುಖ, ಲೋಕದ ವಿವಿಧ ಬಣ್ಣಗಳು, ಚಟುವಟಿಕೆಗಳು, ಸಂಭ್ರಮಗಳು ಅವಳನ್ನು ಲವಶೇಷವೂ ಆಕರ್ಷಿಸಿದಂತೆ ಕಾಣುತ್ತಿರಲಿಲ್ಲ.

ಸಂವೇದನೆಗಳು ಜಡಗೊಂಡ ಸ್ಥಿತಿಯಲ್ಲಿ ಹಾದಿ ತಪ್ಪಿ ಅಲೆಯುತ್ತಿದ್ದಳು. ಆ ಕರಾಳ ಬದುಕಿನಲ್ಲಿ ಮೂಡಬಹುದಾದ ಬೆಳಕಿಗಾಗಿ ಅವಳೆಂದೂ ತವಕಿಸಿದ್ದೂ ಇಲ್ಲ. ಯಾರಾದರೂ ತಿನ್ನಲು ಕೊಟ್ಟರೆ ಸ್ವಲ್ಪ ತಿಂದು ಉಳಿದದ್ದನ್ನು ಕೊಳಕು ಚೀಲದೊಳಗೆ ಇರಿಸಿಕೊಳ್ಳುತ್ತಿದ್ದಳು. ತಾನಾಗಿಯೇ ಯಾರನ್ನೂ ಬೇಡಿದ್ದಿಲ್ಲ. ಒಮ್ಮೆ ಯಾರದೋ ಮನೆಯ ನೀರು ತುಂಬಿದ ಸಂಪಿಗೆ ಕೈ ಎಜ್ಜಿ ತನ್ನ ವಿಸರ್ಜನಾಂಗವನ್ನು ತೊಳೆದಳೆಂಬ ಸುದ್ದಿ ಹರಿದಾಡಿ ಸುತ್ತಮುತ್ತಲಿನ ಮನೆಗಳವರು ಬೆಳಗಿನ ಸಮಯವೂ ಗೇಟಿಗೆ ಬೀಗ ಹಾಕುತ್ತಿದ್ದರು. ಅವಳ ಚೇಷ್ಟೆಗಳಿಗೆ ಹೆದರಿ ಹಲವರು ನಾಯಿಯನ್ನು ಗೇಟಿನ ಬಳಿಯೇ ಕಟ್ಟುತ್ತಿದ್ದರು. ಗಂಡಸರನ್ನು ಕಂಡರೆ ಬಾಯಲ್ಲಿ ಕೆಟ್ಟ ಅಸ್ಪಷ್ಟ ಶಬ್ಧಗಳನ್ನು ಗೊಣಗುತ್ತಾ , ಉಗುಳುತ್ತಾ ಅವರೆಡೆಗೆ ಕಲ್ಲು ತೂರುತ್ತಿದಳು. ದ್ವೇಷದ ಒಲೆಯೊಂದು ಅವಳ ಎದೆಯಲ್ಲಿ ನಿರಂತರವಾಗಿ ಹೊತ್ತಿ ಉರಿಯುತ್ತಿತ್ತು. ಸರಿರಾತ್ರಿ ಬಸ್‌ ಸ್ಟಾಪಿನಲ್ಲೋ ರಸ್ತೆ ಬದಿಯೋ, ಮಲಗಿದ್ದಾಗ ಎಳೆದಾಡಲು ಬರುವ ಕಾಮುಕರಿಗೆ ಒದ್ದು ಕಲ್ಲು ತೂರುವಳೆಂದು ಆಗಾಗ ಹೆಂಗಸರ ವಲಯದಲ್ಲಿ ಹರಿದಾಡುತ್ತಿದ್ದ ಸುದ್ದಿಯಲ್ಲಿ ಸತ್ಯಾಂಶಕ್ಕಿಂತಲೂ ಕಲ್ಪನೆಯ ಕಸೂತಿಯೇ ಹೆಚ್ಚಿದ್ದಂತೆ ತೋರುತ್ತಿತ್ತು.
ಮೆಲ್ಲನೆದ್ದ ವಿಭಾ ಪಕ್ಕದಲ್ಲಿದ್ದ ಜಗ್‌ನಿಂದ ನೀರು ಬಗ್ಗಿಸಿಕೊಂಡು ಕುಡಿದಳು. ಜ್ವರದ ತಾಪಕ್ಕೆ ಗಂಟಲು ಒಣಗುತ್ತಿತ್ತು. ಪ್ಯಾರಸಿಟಮಾಲ್‌ ನುಂಗಿದ ನಂತರ ಮೈ ಬೆವರಿ ಕೆಲ ಗಂಟೆಗಳವರೆಗೆ ಸ್ವಲ್ಪ ಆರಾಮವೆನಿಸುತ್ತಿತ್ತು. ಬಿಡದೆ ಕಾಡುತ್ತಿದ್ದ ನೆನಪಿನ ಅಲೆಗಳು ಅವಳ ಏಕಾಂತದ ಮೇಲೆ ದಾಳಿ ನಡೆಸಿ ಜಯ ಸಾಧಿಸುತ್ತಿದ್ದವು. ಸುಡುವ ಆಲೋಚನೆಗಳಿಂದ ಬಿಡುಗಡೆ ಬೇಕೆನಿಸುತ್ತಿತ್ತು. ಹಿಂದಿನ ರಾತ್ರಿ ಎಕ್ಸ್‌ ರೇ, ಬ್ಯಾಂಡೇಜ್‌ ಎನ್ನುತ್ತಾ ಚಿಕಿತ್ಸೆ ಮುಗಿಸಿ ಆಸ್ಪತ್ರೆಯಿಂದ ಮನೆಗೆ ಬರುವಷ್ಟರಲ್ಲಿ ತಡವಾಗಿತ್ತು. ಬಿದ್ದ ಆಯಾಸ, ಆತಂಕ, ಔಷಧಿಯ ಪ್ರಭಾವದಿಂದ ರಾತ್ರಿ ಚೆನ್ನಾಗಿ ನಿದ್ರಿಸಿದ್ದಳು. ನಾಲ್ಕೈದು ವಾರಗಳಲ್ಲಿ ಕೈ ಸರಿಹೋಗುವುದೆಂದು ವೈದ್ಯರು ಭರವಸೆ ನೀಡಿದ್ದರು.

“ ಹೇ…… ತಿಕ್ಲು ಬುಡ್ಡಿ ಬಂದ್ಲು…..ಓಡಿ….” ಶಾಲೆಗೆ ಹೋಗುವ ಮಕ್ಕಳು ರಸ್ತೆ ಮಧ್ಯೆ ದೈನೇಸಿಯಾಗಿ ಅಲೆಯುತ್ತಿದ್ದ ಅವಳನ್ನು ಕಂಡು ಹೆದರಿ ಓಡುತ್ತಿದ್ದರು. ತಿಕ್ಕಲು ಬುಡ್ಡಿ ಎಂಬ ಕೂಗು ಆ ಹೆಂಗಸನ್ನು ಹೆಚ್ಚು ಕೆರಳಿಸುತ್ತಿತ್ತು.

“ ನಂಗಲ್ಲ ತಿಕ್ಲು……ನಿಮ್ಗೆ….” ಬಗ್ಗಿ ಕಲ್ಲೆತ್ತಿಕೊಂಡು ಎಲ್ಲೆಡೆ ಬೀಸುತ್ತಿದ್ದಳು. ಒಮ್ಮೆ ಹೆದರಿ ಓಡುವಾಗ ವಿಭಾ ಮುಗ್ಗರಿಸಿದ್ದಳು.

“ ಮೆಲ್ಗೆ ಹೋಗ್ಬೇಕು ಕಣೇ ಹುಡ್ಗೀ….. ಹೆದ್ರುಕೊಂಡ್ರೆ ಜನ ತುಳೀತಾರೆ…..ಅಷ್ಟೇ…. ತಿಳ್ಕೋ…..ಚೆನ್ನಾಗಿ ತುಳೀತಾರೆ….” ವಿಚಿತ್ರ ಏರಿಳಿತದ ಸ್ವರದಲ್ಲರಚುತ್ತಾ ಕಲ್ಲನ್ನು ಕೆಳಗೆಸೆದಿದ್ದಳು. ಅವಳ ಆ ವಿಕ್ಷಿಪ್ತ ನಡೆಯನ್ನು ಕಂಡು ವಿಭಾ ಮತ್ತೂ ಗಾಬರಿಗೊಂಡು ಓಡಿದ್ದಳು.

ಕಸದ ರಾಶಿಯ ನಡುವೆ ಕುಳಿತು ಗಂಟೆಗಳವರೆಗೆ ಅದನ್ನು ಕೆದಕುತ್ತಾ ಮಧ್ಯೆ ಮಧ್ಯೆ ಅಸ್ಪಷ್ಟವಾಗಿ ಗೊಣಗುತ್ತಾ ಕೆಲವು ವಸ್ತುಗಳನ್ನು ಆರಿಸಿ ಚೀಲಕ್ಕೆ ತುಂಬಿಕೊಳ್ಳುತ್ತಿದ್ದಳು. ಹರೆಯದ ದಿನಗಳಲ್ಲಿ ಜೀವಂತವಾಗಿ ಹೊತ್ತಿ ಉರಿದ ತನ್ನ ಅದೆಷ್ಟೋ ಕನಸುಗಳ ನೆನೆದವಳಂತೆ ನಿಟ್ಟುಸಿರ ಬಸಿಯುತ್ತಿದ್ದಳು. ನಿರ್ದಯವಾಗಿ ಹೊಸಕಿ ಹೋದ ಮನದ ಕೋಮಲ ಭಾವನೆಗಳನ್ನೂ, ಉರುಳಿ ಹೋದ ಕಣ್ಣೀರಿನ ಬಿಂದುಗಳನ್ನೂ ಆ ತ್ಯಾಜ್ಯದ ಕಡಲಲ್ಲಿ ತಡಕುತ್ತಿದ್ದಂತೆ ಭಾಸವಾಗುತ್ತಿತ್ತು.

“ ನಿದ್ರೆ ಬಂತಾ ಪುಟ್ಟಾ…..” ಅಮ್ಮನ ದನಿಗೆ ವಿಭಾ ಬೆಚ್ಚಿದಳು. ಆತಂಕದ ಬಸಿರಲ್ಲಡಗಿದ್ದ ದುರ್ಬಲ ಮನ ವರ್ತಮಾನದ ಪರಿಸ್ಥಿತಿಗೆ ಅತೀ ಸೂಕ್ಷ್ಮವಾಗಿ ಸ್ಪಂದಿಸುತ್ತಿತ್ತು. ಮಗಳ ಈ ಅಂತರ್ಮುಖತೆ ಸುನಂದಳಿಗೂ ಹೊಸದು.

“ ಬಿದ್ದ ಜಾಗ ಸರಿ ಇಲ್ಲ ಅನ್ಸುತ್ತೆ, ತುಂಬಾ ಹೆದ್ರುಬಿಟ್ಟಿದೀಯಾ ಪುಟ್ಟ….. ರಮ್ಯಾಂಟಿ ಮನೆಗೆ ಕಾಳಮ್ಮಜ್ಜಿ ಬಂದ್ರೆ ದೃಷ್ಟಿ ತೆಗುಸ್ಬೇಕು….. ಎಕ್ಸಾಂ ಬೇರೆ ಹತ್ರ ಬಂತು. ನಾನೂ ಇಲ್ಲೇ ಮಲುಗ್ಲಾ ಇವತ್ತು ರಾತ್ರಿ…..? ”

“ ಬೇಡ ಮಮ್ಮಿ ….. ನನ್ಗೇನೂ ಆಗಿಲ್ಲ , ಸರಿ ಹೋಗ್ತೀನಿ, ಸ್ವಲ್ಪ ಸುಸ್ತು ಅಷ್ಟೇ…… ನೀವು ಆರಾಮವಾಗಿರಿ…..” ಸುನಂದ ಸಮಾಧಾನದಿಂದ ಮಗಳ ಕೈಗೆ ಬಿಸಿ ಹಾರ್ಲಿಕ್ಸ್‌ ನೀಡಿದಳು. ಹಾರ್ಲಿಕ್ಸ್‌ ಗಂಟಲಿಗಿಳಿದಂತೆ ಮನಕ್ಕೆ ಹಿತವೆನಿಸಿತು. ಟೇಬಲ್‌ ಮೇಲಿರಿಸಿದ್ದ ಮೊಬೈಲ್‌ ವೈಬ್ರೇಟ್‌ ಆದಾಗ ಬಗ್ಗಿ ಕೈಗೆತ್ತಿಕೊಂಡ ಸುನಂದ ಸ್ಕ್ರೀನ್‌ ಮೇಲೆ ಮೂಡಿದ ಚಿತ್ರವನ್ನು ಕಂಡು

“ ಲಿಪಿ ಕಾಲ್‌ ಮಾಡ್ತಿದಾಳೆ ನೋಡು….. ನಿನ್ನೆ ಅವ್ಳೂ ಟ್ಯೂಷನ್ ಗೆ ಬಂದಿದ್ರೆ ಈ ರಗಳೇನೇ ಇರ್ತಾ ಇರ್ಲಿಲ್ಲ. ಇಬ್ರೂ ನಿಧಾನವಾಗಿ ಹೋಗಿ ಬರ್ತಾ ಇದ್ರಿ……” ಮೊಬೈಲನ್ನು ಮಗಳ ಕೈಗಿರಿಸಿ ಒಳ ನಡೆದಳು.

“ ಹಾಯ್‌ ಲಿಪಿ…. ಯಾವಾಗ್‌ ಬಂದೆ ಊರಿಂದ…..? ”

“ ಹಾಯ್‌ ವಿಬ್….ಹೌ ಆರ್‌ ಯು…..? ನಿನ್ನೆ ರಾತ್ರಿ ಬಂದೆ ಕಣೇ…. ಯಾಕೆ ವಾಯ್ಸ್‌ ತುಂಬಾ ಡಲ್‌ ಇದೆ…? ”

“ ಓಹ್‌ ಅದಾ….! ಸಂಜೆ ಮನೆಗೆ ಬರ್ತಾ ಗಾಡಿ ಸ್ಕಿಡ್‌ ಆಯ್ತು….. ಸ್ವಲ್ಪ ಕೈ ಉಳುಕಿದೆ…… ಬ್ಯಾಂಡೇಜ್‌ ಮಾಡಿದಾರೆ. ಆ ಪೆಯ್ನಿಗೆ ಮೈಲ್ಡ್‌ ಫೀವರ್‌ ಅಷ್ಟೇ…..”

“ ಓಹ್‌….. ಹೌದಾ….! ಸೋ ಸ್ಯಾಡ್….ಟೇಕ್‌ ಕೇರ್‌ ವಿಬ್….”‌

“ ನಥಿಂಗ್‌ ಟು ವರಿ ಲಿಪಿ…..ಐ ಆಮ್ ಓಕೆ…..”

“ ಟಿವಿ ನೋಡುದ್ಯಾ ವಿಬ್…..‌ ಆ ಸಚ್ಚಿನ್‌ ಮೇಲೆ ತಿಕ್ಲು ಬುಡ್ಡಿ ಕಲ್ಲೆತಾಕಿದ್ಲಂತೆ…… ಅವ್ಳಿಗೂ ಏನೋ ಮಾಡೋಕೋಗಿದಾನೆ, ಡರ್ಟಿ ಫೆಲೋ….. ತುಂಬಾ ಸೀರಿಯಸ್‌ ಅಂತೆ, ಡಾಕ್ಟ್ರು ನೋ ಹೋಪ್ಸ್‌ ಅಂದಿದಾರಂತೆ ,ರೋಡಲ್ಲಿ ಹೋಗೋ ಹುಡ್ಗೀರ್ನೆಲ್ಲಾ ಸತಾಯಿಸುತ್ತಿದ್ದ …… ಸಾಯ್ಲಿ ಬಿಡು…. ಸ್ಕೌಂಡ್ರಲ್…..”‌

“ ಈಸ್‌ ಇಟ್…..!‌ ಹೌದಾ….?”

“ ಯಾಕೆ ನ್ಯೂಸ್‌ ನೋಡ್ತಾ ಇಲ್ವಾ….. ನೋಡು ಎಲ್ಲಾ ಛಾನೆಲ್‌ನಲ್ಲೂ ಅದೇ ಸುದ್ದಿ……. ನಾಳೆ ಸಿಗೋಣ, ಯುವರ್‌ ವಾಯ್ಸ್‌ ಈಸ್‌ ಟೂ ಡಲ್‌ ಡಿಯರ್, ರೆಸ್ಟ್‌ ಮಾಡು…..”‌

“ ಓಕೆ….ಶೂರ್‌, ಬಾಯ್‌ ಲಿಪಿ…..” ವಿಭಾ ನಡುಗುವ ಕೈಗಳಿಂದ ಫೋನ್‌ ಕೆಳಗಿರಿಸಿದಳು. ಛೇ ! ನಿನ್ನೆ ಇವ್ಳು ಇದ್ದಿದ್ರೆ ಹೀಗೆಲ್ಲಾ ಆಗ್ತಾ ಇರ್ಲಿಲ್ಲ. ಹಿಂದಿನ ದಿನವಷ್ಟೇ ನಡೆದ ಆ ದುರ್ಘಟನೆ ಬೆಂಬಿಡದೆ ಅಲೆಯಾಡುತ್ತಾ ಮನದ ಕೋಮಲ ಭಾವನೆಗಳನ್ನು ಹಿಂಸಿಸುತ್ತಿತ್ತು. ಕಾಲೇಜು, ಮನೆಗಷ್ಟೇ ಸೀಮಿತವಾಗಿದ್ದ ಸುಂದರ ಬದುಕಿನಲ್ಲಿ ಅಪಸ್ವರ ಇಣುಕಿತ್ತು.

ಸಂಜೆ ಫಿಸಿಕ್ಸ್‌ ಟ್ಯೂಶನ್‌ ಮುಗಿಸಿ ಮನೆಗೆ ಬರುವಾಗ ಅದಾಗಲೇ ಮುಸ್ಸಂಜೆಯ ಸಮಯ. ಸುಡುವ ನೇಸರ ಪಡುದಿಗಂತದ ಅಂಚಿನಲ್ಲಿ ತಣ್ಣಗಾಗಿದ್ದ. ಬಾನಲ್ಲಿ ಕರಿ ಮೋಡದ ತುಣುಕುಗಳು ಅತ್ತಿತ್ತ ಸರಿದಾಡುತ್ತಾ ರಾತ್ರಿಗೆ ಏನೋ ಸಂಚು ರೂಪಿಸುತ್ತಿದ್ದವು. ವರುಣ ನವಿರಾಗಿ ತನ್ನ ಹನಿಗಳ ನರ್ತನ ಆರಂಭಿಸಿದ್ದ. ಮಳೆ ಹೆಚ್ಚಾಗುವ ಮೊದಲೇ ಮನೆ ತಲುಪುವ ತವಕದಲ್ಲಿದ್ದಳು ವಿಭಾ. ನಿರ್ಜನ ರಸ್ತೆಯಲ್ಲಿ ಹೆದರುತ್ತಲೇ ಗಾಡಿಯ ವೇಗ ಹೆಚ್ಚಿಸಿದಾಗ ತಟ್ಟನೆ ಸಚ್ಚಿನ್‌ ಎದುರಾಗಿದ್ದ. ಇಂಜಿನಿಯರಿಂಗ್‌ ಎರಡನೇ ವರ್ಷದಲ್ಲಿ ಡೀಟೈನ್‌ ಆಗಿ ಡ್ರಾಪ್‌ ಔಟ್‌ ಆದದ್ದು….. ನಂತರ ಅಲ್ಲಿ ಇಲ್ಲಿ ಗೂಳಿಯಂತೆ ಅಲೆಯುತ್ತಿದ್ದ. ಹಣದ ಅಮಲು ತಂದೆಯ ಪ್ರಭಾವೀ ವರ್ಚಸ್ಸು ತಲೆಗೇರಿ ಕುಡಿತ, ಡ್ರಗ್ಸ್‌ನೊಂದಿಗೆ ಎಲ್ಲಾ ಚಟಗಳೂ ಮೈಗಂಟಿಕೊಂಡಿದ್ದವು. ರಸ್ತೆಯಲ್ಲಿ ಸಾಗುವ ಹುಡುಗಿಯರನ್ನು ಕಾಡುವುದು ಅವನ ನಿತ್ಯದ ಕಾಯಕ. ಹಲವು ಪ್ರಕರಣಗಳಲ್ಲಿ ಅವನ ಹೆಸರು ಆಗಾಗ ಕೇಳಿ ಬಂದರೂ ಸುಲಭದಲ್ಲಿ ಬಚಾವಾಗಿ ಬಿಡುತ್ತಿದ್ದ. ಮಹಿಳಾ ಪೋಲಿಸ್‌ ಅಧಿಕಾರಿಯೊಂದಿಗೆ ಅಸಭ್ಯವಾಗಿ ವರ್ತಿಸಿ ಸಾಕಷ್ಟು ಗಲಭೆಯಾಗಿ ಪರಿಸ್ಥಿತಿ ವಿಕೋಪಕ್ಕೆ ಹೋಗಿ ಆಕೆಯ ವರ್ಗಾವಣೆಯೊಂದಿಗೆ ವಿಷಯ ತಣ್ಣಗಾಗಿತ್ತು. ಪಟಾಲಂ ಜೊತೆ ಇರುತ್ತಿದ್ದವ ಅಂದು ಒಂಟಿಯಾಗಿದ್ದ.

“ ಹಾಯ್‌ ಬುಲ್‌ ಬುಲ್…..‌ ಇವತ್ತೇನು ಒಂಟಿಯಾಗಿ ಸಿಕ್ಬಿಟಿದೀಯಾ….. ಗುಡ್‌…… ನಾನೂ ಒಂಟಿಯಾಗಿರುವೆ….. ಬಾ, ಲಾಂಗ್‌ ರೈಡ್‌ ಹೋಗೋಣ….” ತನ್ನ ದುಬಾರಿ ಬೈಕನ್ನು ಅವಳ ಸ್ಕೂಟಿಯೆದುರು ನಿಲ್ಲಿಸಿದ.

“ ಥೂ….! ಡರ್ಟಿ ಫೆಲೋ….. ಗೆಟ್‌ ಲಾಸ್ಟ್……”‌ ವಿಭಾ ಗಾಡಿಯನ್ನು ಪಕ್ಕಕ್ಕೆ ತಿರುಗಿಸಿ ಫುಲ್‌ ಆಕ್ಸಿಲೇಟರ್‌ ಕೊಟ್ಟಳು. ವೇಗವಾಗಿ ಮುಂದೆ ಹೊರಟ ಸ್ಕೂಟಿ ಸಮತೋಲನ ಕಳೆದುಕೊಂಡು ಮುಂದಿದ್ದ ಕಲ್ಲಿಗೆ ಗುದ್ದಿ ಮಗ್ಗುಲಾಯಿತು. ವಿಭಾ ಸ್ಕೂಟಿಯಿಂದ ಹಾರಿ ಕೆಳಕ್ಕುರುಳಿದಳು. ತರಚಿದ ಮುಂಗೈಯನ್ನು ತಡವಿಕೊಳ್ಳುತ್ತಾ ಮೇಲೇಳಲು ಪ್ರಯತ್ನಿಸಿದಳು. ಅಟ್ಟಹಾಸಗೈಯ್ಯುತ್ತಾ ಸಚಿನ್‌ ಮುಂದಡಿ ಇರಿಸಿದ.

“ ನನ್ಗೇ ಉಗೀತೀಯೇನೇ ಬೇಬೀ…..ಬಾ ಒಂದು ಕೈ ನೋಡ್ತೀನಿ……” ಮೊಳಕೈ ತಿರುಗಿಸುತ್ತಾ ಬಗ್ಗಿ ಅವಳ ಕೆನ್ನೆ ಸವರಿದ. ಹೆದರಿದ ಹರಿಣಿಯಂತಾದ ವಿಭಾ ಮೇಲೆದ್ದು ಓಡಲು ಹೋಗಿ ಮತ್ತೆ ಮುಗ್ಗರಿಸಿದಳು.

“ ಹ್ಹ ಹ್ಹ ಹ್ಹ…. ಹೆದರಿ ಓಡ್ಬೇಡ ಡಿಯರ್…..‌ ಇಲ್ಲಿ ಯಾರೂ ಇಲ್ಲ ನಿನ್ನ ಕಾಪಾಡೋಕೆ ಬರಲ್ಲ, ಬಾ….. ಒಂದು ಚಾಕೊಲೇಟ್‌ ಕೊಡ್ತೀನಿ, ತಿಂದು ನೋಡು…. ಸ್ವರ್ಗ…..! ಆಮೇಲೆ ನಮ್ಮ ಫಾರ್ಮ್‌ ಹೌಸ್‌ ಗೆ ಹೋಗಿ ಜಾಲಿ ಮಾಡೋಣ…..” ಅವಳೆಡೆಗೆ ವಕ್ರ ನೋಟ ಬೀರುತ್ತಾ ಹುಬ್ಬು ಕುಣಿಸಿದ.

ಬಿದ್ದ ರಭಸಕ್ಕೆ ತಟ್ಟನೆ ಮೇಲೇಳಲಾಗದೆ ವಿಭಾ ಕೈ ಊರುತ್ತಾ ತಡವರಿಸಿದಳು. ಆ ಕ್ಷಣ ಮನದಾಳದಲ್ಲಿ ಮೂಡಿದ ಅಪಾಯದ ಅಂಕುರ ವೃಕ್ಷವಾಗಿ ಬೆಳೆದು ನಿಂತಿತು. ಗಟ್ಟಿಯಾಗಿ ಕಣ್ಣು ಮುಚ್ಚಿ ಸಹಾಯಕ್ಕಾಗಿ ಕೂಗಲು ಬಾಯ್ತೆರೆದಳು. ಗಂಟಲಿನಲ್ಲಿ ಉಡುಗಿ ಕುಳಿತಿದ್ದ ಸ್ವರ ಹೊರ ಬರಲಿಲ್ಲ. ತಟ್ಟನೆ ದೂರವಾಣಿ ಸಂಖ್ಯೆಯೊಂದು ನೆನಪಿನ ಭಿತ್ತಿಯಲ್ಲಿ ಬೀಪ್…..‌ ಬೀಪ್…..‌ ಸದ್ದಿನೊಂದಿಗೆ ಎಚ್ಚರಿಸತೊಡಗಿತು. ಹೌದು…. ಕಳೆದ ತಿಂಗಳು ಕಾಲೇಜಿನಲ್ಲಿ ಏರ್ಪಡಿಸಿದ್ದ ಸ್ಟೂಡೆಂಟ್ಸ್‌ ಅವೇರ್‌ನೆಸ್‌ ಟಾಕ್ ನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧ್ಯಕ್ಷೆ ಸುಶೀಲಾ ಶ್ರೀಧರ್‌ ಅಪಾಯದ ಸಮಯದಿ ಧೃತಿಗೆಡದೆ ಪರಿಸ್ಥಿತಿಯನ್ನು ಎದುರಿಸುವ ಬಗ್ಗೆ ತಿಳಿಸಿದ್ದರು. ಸಹಾಯಕ್ಕಾಗಿ ಕರೆ ಮಾಡಲು ಹಲವು ಹೆಲ್ಪ್‌ ಲೈನ್‌ ಸಂಖ್ಯೆಗಳ ಬಗ್ಗೆಯೂ ಅರಿವು ಮೂಡಿಸಿದ್ದರು. ಒಂದೆರಡು ಅಡಿ ದೂರದಲ್ಲಿ ಕವರ್‌ ಕಳಚಿ ಬಿದ್ದಿದ್ದ ಮೊಬೈಲಿನೆಡೆಗೆ ನೋಡಿದಳು. ತನ್ನ ಅಸಹಾಯಕ ಪರಿಸ್ಥಿತಿಯ ಕೊನೆಯ ಪ್ರಯತ್ನ ಎಂಬಂತೆ ನಿಧಾನವಾಗಿ ತೆವಳುತ್ತಾ ಕೈಚಾಚಿದಳು.

“ ಆಆ… ಆಹ್.. ಅಯ್ಯೋ….. ಅಮ್ಮಾ….! ” ಬೆನ್ನ ಬದಿ ಹೃದಯ ಬಿರಿವ ಆಕ್ರಂದನ. ತಟ್ಟನೆ ಬೆಚ್ಚಿ ಕಣ್ತೆರೆದವಳು ಭೀತಿಯಿಂದ ಕಂಪಿಸುತ್ತಲೇ ಹಿಂದಕ್ಕೆ ತಿರುಗಿದಳು. ಸಚಿನ್‌ ರಕ್ತದ ಮಡುವಿನಲ್ಲಿ ವಿಕಾರವಾಗಿ ಕಿರುಚುತ್ತಾ ಹೊರಳಾಡುತ್ತಿದ್ದ. ಸುತ್ತಲೂ ಕೆಂಬಣ್ಣದ ಓಕುಳಿಯಾಡಿದ್ದ ಸೈಜ್‌ಕಲ್ಲು ಪಕ್ಕಕ್ಕೆ ಉರುಳಿ ಬಿದ್ದಿತ್ತು. ತಲೆಯ ಒಂದು ಪಾರ್ಶ್ವ ಸಂಪೂರ್ಣ ಜಜ್ಜಿ ಹೋಗಿತ್ತು. ಹಿಂಭಾಗದಲ್ಲಿ ರಣಚಂಡಿಯಂತೆ ಕೆರಳಿ ನಿಂತಿದ್ದ ತಿಕ್ಕಲು ಬುಡ್ಡಿ ! ವರ್ಷಾನುಗಟ್ಟಲೆ ಘನೀಕರಿಸಿದ್ದ ತಣ್ಣನೆಯ ಕ್ರೋಧ ಅವಳ ಮುಖದಲ್ಲಿ ತಾಂಡವವಾಡುತ್ತಿತ್ತು. ವಿಭಾ ಚಿಟ್ಟನೆ ಚೀರಿದಳು.

“ ಹುಶ್…….! ”‌ ಬಾಯಿಯ ಮೇಲೆ ಬೆರಳಿರಿಸಿದ ವೃದ್ಧೆ ಸುಮ್ಮನಿರಲು ಸೂಚನೆ ನೀಡಿದಳು. ಕಣ್ಣುಗಳನ್ನು ಗರಗರನೆ ಅತ್ತಿತ್ತ ತಿರುಗಿಸುತ್ತಾ ಒಮ್ಮೆಲೇ “ ಓಡು….. ಓಡು….. ಇಲ್ಲಿ ನಿಲ್ಬೇಡಾ ನೀನು…. ಓಡು…..! ” ಒಂದೇ ಸಮನೆ ಅಬ್ಬರಿಸಿದಳು. ಬೆಚ್ಚಿದ ವಿಭಾ ತಟ್ಟನೆ ಮೇಲೆದ್ದು ನೆಲಕ್ಕುರುಳಿದ್ದ ಗಾಡಿಯನ್ನು ಮೇಲೆತ್ತಿದಳು. ಬಿದ್ದ ರಭಸಕ್ಕೆ ಕೈ ಕಾಲುಗಳು ಪುಡಿಗಟ್ಟಿದಂತಾಗಿದ್ದವು. ಯೋಚಿಸಲು ಸಮಯವಿರಲಿಲ್ಲ. ದೈತ್ಯ ಶಕ್ತಿಯನ್ನು ಒಗ್ಗೂಡಿಸಿಕೊಂಡು ಗರಬಡಿದವಳಂತೆ ಗಾಡಿ ಹತ್ತಿ ಕುಳಿತು ಕೀ ತಿರುಗಿಸಿದಳು.

“ ನೋ…….! ” ವಿಭಾಳ ಆರ್ತನಾದ ಕೇಳಿ ಸುನಂದ ಮಗಳ ಕೊಠಡಿಯೆಡೆಗೆ ಧಾವಿಸಿದಳು. ಆ ದನಿ ಅವಳ ಹೃದಯದಲ್ಲೊಂದು ಕಂಪನವನ್ನು ಮೂಡಿಸಿತು. ದಿಗ್ಭ್ರಮೆಗೊಂಡವಳಂತೆ ಕೊಠಡಿಯ ಮೂಲೆಯಲ್ಲಿ ಮುದುರಿ ಕುಳಿತಿದ್ದ ಮಗಳನ್ನು ಕಂಡು ದುಃಖ ಉಕ್ಕಿ ಬಂತು.

“ ವಿಭಾ….. ಏನಾಯ್ತು ಮಗ್ಳೇ…… ಯಾಕಿಷ್ಟು ಸಂಕಟ ಪಡ್ತಾ ಇದೀಯಾ….. ? ಮಗಳನ್ನು ಬಾಚಿ ತಬ್ಬಿ ಬಿಕ್ಕಳಿಸಿದಳು. ತಾಯಿಯ ಮಡಿಲಲ್ಲಿ ಮುಖವಿರಿಸಿ ವಿಭಾ ಗಟ್ಟಿಯಾಗಿ ಕಣ್ಮುಚ್ಚಿದಳು. ಸಚ್ಚಿನ್‌ನ ಆರ್ತನಾದ…., ಅವನ ಮೇಲಿನ ಆಕ್ರಮಣದ ನಂತರವೂ ಅದೇ ಭಂಗಿಯಲ್ಲಿ ನಿಂತಿದ್ದ ಆ ಹೆಣ್ಣಿನ ರೌದ್ರ ರಸ ಒಸರುತ್ತಿದ್ದ ಕಣ್ಣುಗಳು ಎದೆಯಂಗಳದಲ್ಲಿ ಪ್ರತಿಷ್ಠಾಪನೆಗೊಂಡು ಅದರ ಬಿಂಬ ರೂಮಿನ ಮೂಲೆ ಮೂಲೆಯಲ್ಲೂ ಗಿರಕಿ ಹೊಡೆಯುತ್ತಿರುವ ಭಾವ…..!

ಸದ್ದಿಲ್ಲದೆ ಮುಗಿದು ಹೋದ ಅವಳ ಬದುಕು ಪ್ಲಾಸ್ಟಿಕ್‌ ಪಾದುಕೆಗಳ ಚರ ಪರ ಸದ್ದಿನೊಂದಿಗೆ ಸುತ್ತಲೂ ಸುತ್ತುತ್ತಿತ್ತು. ಬೇಡದ ಚಿಂತನೆಗಳ ಕಿಡಿ ಭುಗಿಲೆದ್ದ ಜ್ವಾಲಾಮುಖಿಯಾಗಿ ತಿವಿ ತಿವಿದು ಹಿಂಸಿಸುತ್ತಿತ್ತು. ಆಂತರ್ಯದಲ್ಲಿ ಹುದುಗಿಕೊಂಡ ಸಂಗತಿಗಳು ನಿಶ್ಚಿಂತೆಯಿಂದಿರಲು ಬಿಡದೆ ಕಾಡುತ್ತಿದ್ದವು. ಒಳಗಿನ ಕ್ಷೋಭೆಯನ್ನು ಅಡಗಿಸಿಡುವುದು ಕಷ್ಟವಾಯಿತು. ತಾಯಿಯ ಬಳಿ ಎಲ್ಲವನ್ನೂ ಹೇಳಿ ಒಮ್ಮೆ ಹಗುರಾಗಿ ಬಿಡಲೇ ಎನಿಸಿತು. ಮನದಿ ಹೆಪ್ಪುಗಟ್ಟಿ ಹಿಂಸಿಸುತ್ತಿದ್ದ ಆ ಭೀಕರ ದೃಶ್ಯ, ಮಾತುಗಳಾಗಿ ಹೊರಬಾರದೆ ಗಂಟಲಲ್ಲಿಯೇ ಹುದುಗಿ ಕುಳಿತಿತ್ತು. ತನ್ನನ್ನಾವರಿಸುತ್ತಿದ್ದ ವಿಕ್ಷಿಪ್ತ ಭಾವಗಳನ್ನು ಕೊಡವಿಕೊಂಡು ತಾಯ ಮಡಿಲಿನಿಂದ ಮೆಲ್ಲನೆ ತಲೆ ಎತ್ತಿದಳು. ಆತಂಕದಿಂದ ಕಳಾಹೀನವಾದ ತಾಯಿಯ ಮುಖವನ್ನು ದಿಟ್ಟಿಸಿದಾಗ ಕೆಡುಕೆನಿಸಿತು.

“ ಕೈ ಮೇಲೆತ್ತಿದಾಗ ಸ್ವಲ್ಪ ನೋವಾಯ್ತು ಮಮ್ಮೀ…. ಅದಕ್ಕೇ ಕಿರುಚಿದೆ. ಗಾಬರಿಯಾಗ್ಬೇಡಿ… ಮಲಗೀ ಮಲಗೀ ಬೋರ್‌ ಆಗ್ತಾ ಇದೆ. ಹಾಗೇ ಸ್ವಲ್ಪ ಗಾರ್ಡನ್‌ನಲ್ಲಿ ವಾಕ್‌ ಮಾಡ್ಲಾ….? ” ತಾಯಿಯ ಕೆನ್ನೆಯನ್ನು ಪ್ರೀತಿಯಿಂದ ಸವರಿದಳು. ಮಗಳ ಚಿಗುರಿನಂತಹ ಬೆರಳುಗಳನ್ನು ನೇವರಿಸುತ್ತಾ
“ ಬೇಡ ಪುಟ್ಟ….. ಜ್ವರ ಇದೆ, ರೆಸ್ಟ್‌ ಮಾಡು….. ನೋಡು ಕೈ ಇನ್ನೂ ಸುಡ್ತಾ ಇದೆ. ಯಾಕೋ ತುಂಬಾ ಹೆದ್ರುಬಿಟ್ಟಿದೀಯಾ ಅನ್ಸುತ್ತೆ…..ಡಾಕ್ಟರ್‌ಗೆ ಫೋನ್‌ ಮಾಡಿ ಕೇಳ್ಲಾ…..?”

“ ಬೇಡಾ ಮಾಮ್…..‌ ಈಗ ಸ್ವಲ್ಪ ಆರಾಮನ್ನಿಸ್ತಿದೆ. ಸ್ವಲ್ಪ ಹೊತ್ತು ಹಾಗೇ ಹೊರಗೆ ಅಡ್ಡಾಡ್ತೀನಿ….. ಮೈಂಡ್‌ ಫ್ರೆಶ್‌ ಆಗುತ್ತೆ…..” ವಿಭಾ ಮೆಲ್ಲನೆದ್ದು ತಾಯಿಯೊಂದಿಗೆ ಗಾರ್ಡನ್‌ ಏರಿಯಾಗೆ ಬಂದಳು.

ಕುಂಡದಲ್ಲಿ ಅರಳಿ ನಿಂತಿದ್ದ ಬಿಳಿ ಗುಲಾಬಿ ಹೂಗಳು ಕಂಪು ಸೂಸುತ್ತಿದ್ದವು. ಆ ಪರಿಮಳವನ್ನರಸುತ್ತಾ ಬಂದು ಝೇಂಕರಿಸುತ್ತಿದ್ದ ಒಂದೆರಡು ಜೇನ್ನೊಣಗಳು ಗಿಡದ ಸುತ್ತಲೂ ಸುತ್ತುತ್ತಿದ್ದವು. ಒಣ ಕೊಂಬೆಯೊಂದನ್ನು ಮುರಿದ ವಿಭಾ ಅತ್ತಿತ್ತ ಕೈಯಾಡಿಸಿದಳು. ಚದುರಿದ ಕೀಟಗಳು ಮತ್ತೊಂದು ಹೂವನ್ನು ಅರಸುತ್ತಾ ಹೊರಟವು. ಮುಳ್ಳುಗಳು ಕೈಗೆ ತಾಗದಂತೆ ಎಲೆಗಳನ್ನು ಪ್ರೀತಿಯಿಂದ ಸವರಿದಳು. ಗುಲಾಬಿಯ ಆಸೆಯಿಂದ ಅದರ ಮುಳ್ಳಿಗೂ ನೀರೆರೆಯುವ ಆನಿವಾರ್ಯತೆ ! ಅವುಗಳ ನಡುವೆಯೇ ಹೂವಿನ ವಿಕಸನ, ಅಸ್ತಿತ್ವ. ಮನದಾಳದಿಂದ ಹೊರಬಂದ ನಿಟ್ಟುಸಿರಿನ ಬಿಸುಪು ಜ್ವರದ ತಾಪಕ್ಕೆ ಒಣಗಿ ಸಿಬಿರಾಗಿದ್ದ ತುಟಿಗಳನ್ನು ಬೆಚ್ಚಗಾಗಿಸಿತು. ಒಣಗಿದ ತುಟಿಯನ್ನು ನಾಲಗೆಯಿಂದ ಸವರಿಕೊಂಡಳು. ನಿಧಾನವಾಗಿ ಚಲಿಸುತ್ತಿದ್ದ ಮೋಡಗಳು ಒಂದೆಡೆ ಸೇರಿ ಸೂರ್ಯನ ಪ್ರಖರ ಬಿಸಿಲನ್ನು ಮರೆಮಾಚುತ್ತಿದ್ದವು. ಮೋಡಗಳ ಚಲನೆಯನ್ನೇ ದಿಟ್ಟಿಸುತ್ತಾ ನಿಂತ ಅವಳ ಮನದಿ ದುಃಖ ಸೋನೆಯಾಗಿತ್ತು. ಧಗೆ ಕೊಂಚ ಕಡಿಮೆಯಾದಂತೆ ತಂಪಾದ ಗಾಳಿ ಮೆಲ್ಲನೆ ಬೀಸಿ ಅರಳಿ ನಿಂತ ಹೂಗಳ ಸುಗಂಧ ನವಿರಾಗಿ ಎಲ್ಲೆಡೆ ಪಸರಿಸುತ್ತಿತ್ತು. ಕಿಟಕಿಯ ಸಿಲ್‌ ಮೇಲಿರಿಸಿದ್ದ ಕ್ಯಾಕ್ಟಸ್‌ ಪಾಟ್‌ ಕೆಳಗುರುಳಿ ಮಕಾಡೆಯಾಗಿತ್ತು. ಬೆಕ್ಕಿನ ಮರಿಗಳು ಚಿನ್ನಾಟವಾಡುತ್ತಾ ಸಣ್ಣ ಪುಟ್ಟ ಕುಂಡಗಳನ್ನು ಆಗಾಗ ಕೆಳಗುರುಳಿಸುತ್ತಿದ್ದವು. ಮೆಲ್ಲನೆ ಪಾಟನ್ನು ಮೇಲೆತ್ತಿದಾಗ ಮಣ್ಣಿನ ಬಂಧ ಕಳಚಿದ ಖಾಲಿ ಪ್ಲಾಸ್ಟಿಕ್‌ ಪಾಟ್‌ ಕೈಗೆ ಬಂತು. ನೀರಿನ ಸರಾಗ ಹರಿವಿಗೆಂದು ರಂಧ್ರಗಳ ಬಳಿ ಇರಿಸಿದ್ದ ಟೈಲ್ಸಿನ ತುಂಡುಗಳೂ ಮಣ್ಣಿನ ಮೇಲೆ ಬೋರಲಾಗಿದ್ದವು. ಬಿದ್ದ ರಭಸಕ್ಕೆ ಕ್ಯಾಕ್ಟಸ್‌ ಕೊಂಬೆಗಳು ಮುರಿದು ಬೆಳ್ಳಗಿನ ದ್ರವ ಹೊರಗೆ ಜಿನುಗಿತ್ತು. ಹೊರಚೆಲ್ಲಿದ್ದ ಮಣ್ಣನ್ನು ವಿಭಾ
ಕಾಲಿನಿಂದ ಸರಿಸಿ ಮುರಿದ ಕೊಂಬೆಗಳ ಮೇಲೆ ತಳ್ಳಿದಳು.

“ ಸಂಜೆ ಕಾಳಮ್ಮ ಬಂದು ಪುನಃ ಮಣ್ಣು ತುಂಬಿ ಅದನ್ನು ನೆಡ್ತಾಳೆ ಪುಟ್ಟಾ…. ನೀನು ಮುಟ್ಬೇಡ…. ಗಿಡದ ತುಂಬಾ ಮುಳ್ಳಿದೆ….” ಸುನಂದ ಖಾಲಿ ಪಾಟನ್ನು ಕೊಡವಿ ಅದರ ಪಕ್ಕ ಇರಿಸಿದಳು.

“ ಅದರ ಸ್ಟೆಮ್‌ ಫುಲ್‌ ಜಜ್ಜಿದೆ ಮಾಮ್…..‌ ಅದು ಮತ್ತೆ ಚಿಗುರಲ್ಲ ಅನ್ಸುತ್ತೆ…… ಇನ್ಮೇಲೆ ಕ್ಯಾಕ್ಟಸ್ ಪ್ಲಾಂಟ್‌ ಬೆಳೆಸೋದು ಬೇಡ. ಅದ್ರು ಮುಳ್ಳುಗಳು ಯಾವತ್ತಿದ್ರೂ ಡೇಂಜರ್…. ಬಿದ್ರೆ ಕಾಲಿಗೆ ಚುಚ್ಚುತ್ತೆ…..”

ವಿಭಾ ಮಲ್ಲಿಗೆ ಬಳ್ಳಿಯ‌ ಮೈದಡವುತ್ತಾ ಬಣ್ಣ ಬಣ್ಣದ ಜಿರೇನಿಯಂ ಗೊಂಚಲುಗಳನ್ನು ಸವರಿ ಕೆನಾಪಿಯಲ್ಲಿ ಇರಿಸಿದ್ದ ತೂಗುಯ್ಯಾಲೆಯಲ್ಲಿ ಕುಳಿತಳು. ಮಗಳು ಕೊಂಚ ಗೆಲುವಾದದ್ದು ಕಂಡು ಸುನಂದಳ ಮನ ಸಮಾಧಾನಗೊಂಡಿತು.

* * *

“ ಏಯ್‌….. ಯಾರಮ್ಮಾ ಅದು….. ಮಾರ್ಚ್ಯುಅರಿ ಬಳಿ…..? ನಿನಗೇನು ಕೆಲ್ಸ ಇಲ್ಲಿ …..? ನೋಡು….. ಹೀಗೆಲ್ಲಾ ಇಲ್ಲಿ ಪರ್ಮಿಷನ್‌ ಇಲ್ದೆ ಯಾರೂ ಬರೋ ಹಾಗಿಲ್ಲ. ಹೋಗು……” ಸಮವಸ್ತ್ರ ಧರಿಸಿದ್ದ ಭದ್ರತಾ ಸಿಬ್ಬಂದಿ ಗದರಿದ. ವಿಭಾ ಏನೋ ಹೇಳಲು ಹೋದವಳು ಅವನ ಗಂಭೀರ ಮುಖಭಾವವನ್ನು ಕಂಡು ನಿಟ್ಟುಸಿರಿಡುತ್ತಾ ಪಕ್ಕಕ್ಕೆ ಸರಿದಳು. ಆಯಾಸದಿಂದ ತಲೆ ಸುತ್ತುತ್ತಿತ್ತು. ಎದುರಿನಲ್ಲಿದ್ದ ಕಲ್ಲು ಬೆಂಚಿನ ಮೇಲೆ ಕುಳಿತಳು. ಕೊನೆಯದಾಗಿ ತಿಕ್ಕಲು ಬುಡ್ಡಿಯ ದೇಹವನ್ನು ನೋಡಿ ಪುಷ್ಪ ಗುಚ್ಛ ಇರಿಸಿ ಗೌರವ ಸೂಚಿಸುವ ಭಾವದಿಂದ ತಾಯಿಗೂ ತಿಳಿಸದೆ ಆಟೋ ಏರಿ ಸರ್ಕಾರಿ ಆಸ್ಪತ್ರೆಯ ಬಳಿ ಬಂದಿದ್ದಳು. ಜನರ ಗಡಿಬಿಡಿಯ ಓಡಾಟ, ರೋಗಿಗಳ ನರಳಿಕೆ, ತಮ್ಮವರನ್ನು ಚಿಕಿತ್ಸೆಗಾಗಿ ಒಳಗೆ ಕಳಿಸಿ ಹೊರಗೆ ಕುಳಿತವರ ಆತಂಕದ ನೋಟ, ಚಿಕಿತ್ಸೆ ಫಲಕಾರಿಯಾಗದೆ ಮರಣಿಸಿದವರ ಕುಟುಂಬದ ಆರ್ತನಾದ, ಅನಾತ ಶವಗಳನ್ನು ಶವಾಗಾರದೆಡೆಗೆ ಸಾಗಿಸುತ್ತಿದ್ದವರ ನಿರ್ಭಾವುಕ ನೋಟ….. ತನಗೆ ಸಂಪೂರ್ಣ ಅಪರಿಚಿತವಾದ ಜಗತ್ತಿನ, ದಿಗಿಲು ಹುಟ್ಟಿಸುವ ವಿಭಿನ್ನ ಮಗ್ಗುಲನ್ನು ಬೆರಗು ಕಂಗಳಿಂದ ನೋಡುತ್ತಾ ಕುಳಿತಳು. ಅಕ್ಕಪಕ್ಕದ ಒಂದೆರಡು ಬೋಳು ಮರಗಳು ಜೋಲು ಮುಖ ಮಾಡಿಕೊಂಡು ನಿಂತಿದ್ದವು. ಬಿಸಿಲಿಗೆ ಎದೆಯೊಡ್ಡಿ ಮಲಗಿದ್ದ ಹುಲ್ಲುಹಾಸು ನೊಂದವರ ಕಾಲ್ತುಳಿತಕ್ಕೆ ನಲುಗಿ ಮಂಕಾಗಿತ್ತು. ಚಿಕಿತ್ಸೆಗೆಂದು ತಾಯಿ ಒಳಹೋದ ನಂತರ ಕೂಲಿಕಾರರ ಪುಟ್ಟ ಬಾಲಕಿಯೊಬ್ಬಳು ಅನಾಥ ಭಂಗಿಯಲ್ಲಿ ಬಾಯಿ ಕಳೆದುಕೊಂಡು ಮುದುರಿ ಕುಳಿತಿದ್ದಳು. ತಾನು ಕಂಡ ಬೆಚ್ಚಗಿನ ಜಗತ್ತಿನಾಚೆಗಿರುವ ಬದುಕಿನ ಸಂಕಟದ ಮತ್ತೊಂದು ಮಗ್ಗಲು ಹೊರಳಿಕೊಳ್ಳುತ್ತಾ ಹೋದಂತೆ ಅಚ್ಚರಿ, ಆತಂಕದಿಂದ ಕಣ್ಣರಳಿಸುತ್ತಾ ಕುಳಿತಳು. ಬದುಕಿನ ಪ್ರತಿಯೊಂದು ಕ್ಷಣವೂ ಸಾವು ಬದುಕುಗಳ ನಡುವಿನ ಸೀಮಾರೇಖೆಯ ಮೇಲೆ ಅಲೆಯಾಡುತ್ತಿರುವಂತೆ ಭಾಸವಾಗುತ್ತಿತ್ತು.

“ ಅರೆ ವಿಭಾ ಭೇಟಿ…. ನೀನಿಲ್ಲಿ….! ” ವಿಭಾ ತಟ್ಟನೆ ಧ್ವನಿ ಬಂದತ್ತ ತಿರುಗಿದಳು. ಓ…..! ಮುಸ್ತಫಾ ಅಂಕಲ್‌…..! ತನ್ನ ಶಾಲಾ ದಿನಗಳ ವ್ಯಾನ್‌ ಡ್ರೈವರ್.‌ ಎಲ್ಲರನ್ನೂ ಬಹಳ ಪ್ರೀತಿಯಿಂದ ಸಮಯಕ್ಕೆ ಸರಿಯಾಗಿ ಕರೆತಂದು ಮನೆಗೆ ತಲುಪಿಸುತ್ತಿದ್ದ ಅದೇ ಮುಸ್ತಫಾ ಅಂಕಲ್. ಹಬ್ಬದ ದಿನಗಳಲ್ಲಿ ಪ್ರೀತಿಯಿಂದ ಎಳ್ಳು, ಬೆಲ್ಲ, ಹೋಳಿಗೆ, ಚಕ್ಕುಲಿಯನ್ನು ಅವನಿಗಾಗಿ ಕೊಂಡೊಯ್ಯುತ್ತಿದ್ದಳು. ಹುಟ್ಟು ಹಬ್ಬಗಳಂದು ಕತ್ತರಿಸಿದ ಕೇಕಿನ ಒಂದು ಭಾಗವನ್ನು ಪ್ಯಾಕ್‌ ಮಾಡಿಸಿಕೊಂಡು ಹೋಗಿ ಕೊಡುವಾಗ ಅವನ ಕಣ್ಣಂಚು ಒದ್ದೆಯಾಗುತ್ತಿತ್ತು.

“ ಭೇಟಿ…., ಅಲ್ಲಾ ನಿನ್ನ ಚೆನ್ನಾಗಿ ಇಟ್ಟಿರ್ಲಿ…. ನೀನು ಚೆನ್ನಾಗಿ ಓದಿ ಡಾಕ್ಟರ್‌ ಆಗ್ಬೇಕು…..” ಎನ್ನುತ್ತಿದ್ದ. ಇತ್ತೀಚೆಗೆ ಡ್ರೈವರ್‌ ಕೆಲಸ ಬಿಟ್ಟು ಆಸ್ಪತ್ರೆಯಲ್ಲಿ ಕೆಲಸಕ್ಕಿರುವುದಾಗಿ ಒಮ್ಮೆ ತಂದೆಯೊಂದಿಗೆ ಹೇಳಿದ್ದ ನೆನಪು. ಬಾಲ್ಯದ ಆ ಸಂತಸದ ದಿನಗಳು ಮನದಾಳದಿಂದ ಪುಟಿದೆದ್ದು ತುಟಿಯಂಚಿನಲ್ಲಿ ಮಂದಹಾಸ ಮೂಡಿತು.

“ ಕೈ ಪೆಟ್ಟು ಮಾಡ್ಕೊಂಡಿದೀಯ ಪುಟ್ಟಿ…. ಚೆಕಪ್‌ಗೆ ಬಂದಿದ್ಯಾ…..? ಯಾರು ಬಂದಿದಾರೆ ಜೊತೇಲಿ….?”

“ ಮುಸ್ತಾಫಾ ಅಂಕಲ್…..‌ ಗಾಡಿಯಲ್ಲಿ ಬಿದ್ದು ಸ್ವಲ್ಪ ಏಟಾಗಿದೆ. ಈಗ ಆರಾಮವಾಗಿರುವೆ…..”

“ ಹೌದಾ…. ಅಮ್ಮ ಎಲ್ಲಿ ಪುಟ್ಟ…..?”

“ ಅಮ್ಮ ಬಂದಿಲ್ಲ….. ಅದೂ…. ನಾನು ತಿಕ್ಲು ಬುಡ್ಡಿ ಬಾಡೀನ ನೋಡ್ಬೇಕು….. ಕರ್ಕೊಂಡ್‌ ಹೋಗ್ತೀರಾ ಅಲ್ಲಿಗೆ……? ” ಶವಾಗಾರದೆಡೆಗೆ ಕೈ ತೋರಿದಳು. ಬೆರಗಿನಿಂದ ಆಕೆಯೆಡೆಗೆ ನೋಡುತ್ತಾ

“ ಓಹ್‌ ಪುಟ್ಟೀ…..! ಹಾಗೆಲ್ಲಾ ಅಲ್ಲಿಗೆ ಯಾರನ್ನೂ ಬಿಡೋ ಹಾಗಿಲ್ಲ, ನೀನ್ಯಾಕೆ ಹೋಗ್ತೀಯಾ…..? ಅದುನ್ನೆಲ್ಲಾ ಮಕ್ಕಳು ನೋಡ್ಬಾರ್ದು, ಹೆದ್ರುಕೋತೀಯಾ….. ಬೇಡ….” ಆತಂಕದಿಂದಲೇ ಕೈ ಅಲುಗಿಸಿದ.

“ಅಂಕಲ್…..‌ ಅಂಕಲ್…..‌ ಪ್ಲೀಸ್….‌ ಒಂದೇ ಒಂದ್ಸಲ ಈ ಬೊಕೆ ಅಲ್ಲಿ ಇಟ್ಬರ್ತೀನಿ. ನಾನು ಸ್ಕೂಲಿಗೆ ಹೋಗುವಾಗ ಯಾವಾಗ್ಲೂ ಅವ್ಳು ನನ್ಗೆ ಚಾಕೊಲೇಟ್‌ ಕೊಡ್ತಿದ್ಲು….” ವಿಭಾಳ ಬಿಕ್ಕಳಿಕೆಗೆ ಬೆರಗಾದ ಮುಸ್ತಫಾ ಅಸಹಾಯಕನಾಗಿ ಸುತ್ತಲೂ ಒಮ್ಮೆ ದೃಷ್ಟಿ ಹರಿಸಿದ. ಪುಟ್ಟ ಬಾಲೆಯ ಪ್ರೀತಿ, ಮಾನವೀಯತೆ ಅವನ ಮನವನ್ನು ಕಲಕಿತು. ಶಾಲಾ ದಿನಗಳಿಂದಲೂ ಅವಳೆಂದರೆ ಅವನಿಗೆ ಅಚ್ಚು ಮೆಚ್ಚು.

“ ಬೇಗ ಹೋಗಿ ಬಂದ್ಬಿಡು ಪುಟ್ಟಿ….. ಯಾರಾದ್ರೂ ನೋಡಿದ್ರೆ ತೊಂದ್ರೆ ಆಗುತ್ತೆ. ನಾನು ಇಲ್ಲೇ ಬಾಗ್ಲಲ್ಲಿ ಕಾಯ್ತಾ ಇರ್ತೀನಿ…. ಅಲ್ಲಿ ಬಲಗಡೆಯಿಂದ ಮೂರನೇದು…. ಬೇಗ ಇಟ್ಬಿಟ್ಟು ಬಾ ”

ವೇಗವಾಗಿ ಶವಾಗಾರದೆಡೆಗೆ ನುಗ್ಗಿದ ವಿಭಾ ಒಂದರೆಕ್ಷಣ ಸುತ್ತಲೂ ದೃಷ್ಟಿ ಹಾಯಿಸಿದಳು. ಹಲವಾರು ನಿರ್ಗತಿಕ ಶವಗಳು ಬಿಳಿಯ ಬಟ್ಟೆ ಹೊದ್ದು ತಣ್ಣಗೆ ಮಲಗಿದ್ದವು. ಕಮರಿಹೋದ ಕನಸುಗಳ ನಡುವೆ ನಿಟ್ಟುಸಿರ ಬಸಿಯುತ್ತಾ ಬದುಕಿದ್ದ ಜೀವಗಳ ಅಳಲು ಆ ನೆಲದ ಕವಾಟಗಳಲ್ಲಿ ಅನುರಣಿಸುತ್ತಿತ್ತು.

ಮಾನವೀಯತೆ ಸಹಜವಾಗಿ ಉಸಿರಾಡದ ಲೋಕದಿ ಅವರೆಲ್ಲರ ಬದುಕಿನ ಬೀಭತ್ಸ ಅಧ್ಯಾಯ ಅಂತ್ಯ ಕಂಡಿತ್ತು. ಲೋಕಾಂತದಲ್ಲೂ ಏಕಾಂತದಿಂದಿದ್ದ ಜೀವಗಳು ಅದೇ ಒಂಟಿಯಾದ ಶಾಪಗ್ರಸ್ಥ ಅವಸ್ಥೆಯಲ್ಲೇ ಉಸಿರು ಚೆಲ್ಲಿದ್ದವು. ಸುತ್ತಲೂ ಆವರಿಸಿದ್ದ ಆ ದುಷ್ಟ ಮೌನಕ್ಕೆ ಒಂದರೆಕ್ಷಣ ಅವಳ ಎದೆ ಝಲ್ಲೆಂದಿತು. ಮೆಲ್ಲನೆ ಸಾಗುತ್ತಾ ಬಲಭಾಗದ ಮೂರನೇ ಶವದ ಬಳಿ ಬಂದು ನಿಂತಳು. ಅನಿರೀಕ್ಷಿತವಾಗಿ ಬಂದು ಆಪತ್ಕಾಲದಲ್ಲಿ ತನ್ನ ಮಾನ, ಪ್ರಾಣ ಕಾಪಾಡಿದ ಜೀವ.

ದುರುಳರ ನಡುವೆ ಮರುಳೆಯಂತೆ ಬದುಕು ಸವೆಸಿದ ಆ ನತದೃಷ್ಟೆಯ ಕಳೇಬರ ಬಿಳಿಯ ಬಟ್ಟೆಯನ್ನು ಹೊದ್ದು ತಣ್ಣಗೆ ಮಲಗಿತ್ತು. ಅವಳ ಅಂತಃಕರಣ ದ್ರವಿಸಿ ಕಣ್ಣೀರಾಗಿ ಹರಿದು ಧರಿಸಿದ್ದ ವಸ್ತ್ರವನ್ನು ಒದ್ದೆಯಾಗಿಸಿತು. ಮೆಲ್ಲನೆ ನಡುಗುವ ಕೈಗಳಿಂದ ಶವದ ಮೇಲಿನ ಬಿಳಿಯ ಹೊದಿಕೆಯನ್ನು ಸರಿಸಿದಳು. ತಟ್ಟನೆ ಬೆಚ್ಚಿ ಹಿಂದೆ ಸರಿದಳು. ಮುಖದ ತುಂಬಾ ಗಾಯದ ಗುರುತುಗಳು, ತುಟಿ ಒಡೆದು ಬಾತಿತ್ತು. ಕಣ್ಣು ಗುಡ್ಡೆಗಳು ಕಿತ್ತು ಹೊರ ಬಂದಿದ್ದವು. ಚಿಟ್ಟನೆ ಚೀರಿದ ವಿಭಾ ನೆಲಕ್ಕುರುಳಿದಳು. ಶವದ ಎದೆಯ ಮೇಲಿರಿಸಿದ್ದ ಪುಷ್ಪ ಗುಚ್ಛ ವಿಷಾದವನ್ನು ಧರಿಸಿಕೊಂಡು ಛಿದ್ರಗೊಂಡಿದ್ದ ಆ ನತದೃಷ್ಟೆಯ ದೇಹವನ್ನೇ ದಿಟ್ಟಿಸುತ್ತಿತ್ತು.


  • ಸುಮಾ ರಮೇಶ್ – ಹಾಸನ.

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW