ಕಥೆ : ಕಾವ್ಯ ದೇವರಾಜ್
(ಲೇಖಕಿ ಪರಿಚಯ : ಕಾವ್ಯ ದೇವರಾಜ್ ಅಪ್ಪಟ ಗೃಹಿಣಿ. ನೃತ್ಯ, ಹಾಡು,ಚಿತ್ರಕಲೆ ಹಾಗೂ ಬರವಣಿಗೆಯಲ್ಲಿ ಆಸಕ್ತಿವುಳ್ಳವರು ಮತ್ತು ತಮ್ಮನ್ನು ತಾವು ಅದರಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮದೆಯಾದ ಬರವಣಿಗೆಯ ಶೈಲಿಯಿಂದ ಓದುಗರ ಗಮನ ಸೆಳೆದಿರುವ ಅವರು, ಈಗಾಗಲೇ ಆಕೃತಿ ಕನ್ನಡದಲ್ಲಿ ಅವರ ಕತೆ- ಲೇಖನಗಳು ಪ್ರಕಟವಾಗಿವೆ. ಅವರು ಬರೆದ ‘ತೇಲಿ ಹೋದ ನೌಕೆ’ ಸತ್ಯ ಘಟನೆಯನ್ನಾಧರಿತ ಕತೆಯಾಗಿದ್ದು, ಅದು ಓದುಗರಿಂದ ಸಾಕಷ್ಟು ಮೆಚ್ಚುಗೆಯನ್ನು ಪಡೆದುಕೊಂಡಿತ್ತು.ಈಗ ಅವರಿಂದ ಮತ್ತೊಂದು ಸಣ್ಣಕತೆ ನಿಮ್ಮ ಮುಂದೆ ಇದೆ.)
ಅತ್ತೆ ಕಮಲಾಮ್ಮ, ಮಗ ಅಮಿತ್ ಹಾಗೂ ಸೊಸೆ ಸುಪ್ರೀತಾ ಅದೊಂದು ಪುಟ್ಟ ಸಂಸಾರ. ಅಂದು ಸುಪ್ರೀತಾಳ ಮುಖದಲ್ಲಿ ನಗು ಅರಳಿತ್ತು. ಬಹಳ ಸಂತೋಷದಿಂದಿದದ್ದಳು. ಅವಳು ಅವಳಷ್ಟೇ ಅಲ್ಲ. ಗoಡ ಅಮಿತ್, ಅತ್ತೆ ಕಮಲಾಮ್ಮ ಎಲ್ಲರಿಗೂ ಖುಷಿಯಾಗಿತ್ತು. ಅಮಿತ್ ಮತ್ತು ಸುಪ್ರೀತಾ ಆಸ್ಪತ್ರೆಯಿಂದ ಮನೆಗೆ ಬರುವಾಗಲೇ ದಾರಿಯಲ್ಲಿ ಸಿಹಿ ತಂದಿದ್ದರು. ಅದಕ್ಕೆ ಕಮಲಾಮ್ಮ ‘ಹೊರಗಡೆಯಿಂದ ಯಾಕೋ ತಂದೆ, ನಾನೇ ಮನೆಯಲ್ಲಿಯೇ ಮಾಡ್ತೀನಿ. ಅವರು ಯಾವ ಎಣ್ಣೆಯಲ್ಲಿ ಬೇಯಿಸಿದ್ದಾರೋ ಏನೋ?’ ಎಂದು ಸುಪ್ರೀತಳ ನೋಡಿ ‘ನೀನು, ಅದನ್ನು ತಿನ್ನಬೇಡ. ನಿನಗೇನು ಬೇಕು ನಾನೇ ಮಾಡ್ಕೊಡ್ತೀನಿ’ ಅಂತ ನಗುತ್ತಾ ಹೇಳಿದಳು. ಅವಳು ನಾಚಿ ತಲೆ ಬಗ್ಗಿಸಿದಳು. ಕಮಲಾಮ್ಮ ಸುಪ್ರೀತಳ ಕೈ ಹಿಡಿದು ‘ನಮ್ಮ ಮನೆಯಲ್ಲಿ ಪುಟ್ಟ ಮಗುವಿನ ನಗು-ಅಳು ಕೇಳಿ ದಶಕ ದಶಕಗಳೇ ಕಳೆದು ಹೋಗಿತ್ತು. ನಿನ್ನಿಂದ ಪುನಃ ಆ ದಿನಗಳು ಮರಳಿ ಬoದಿದೆ. ನಮ್ಮ ಮನೆಯಲ್ಲಿ ತೊಟ್ಟಿಲು ಕಟ್ಟಿ ತೂಗುವ ಸಮಯ ಬಂದಿತು. ತುಂಬಾ ಖುಷಿಯಾಯಿತು ಕಣಮ್ಮ. ಇನ್ನು ಮೂರು ತಿಂಗಳು ನೀನು ಬಹಳ ನಾಜೂಕಾಗಿರಬೇಕು. ಜಾಸ್ತಿ ಭಾರ ಎತ್ತಬೇಡ.ಅವಸರದಿಂದ ಓಡಾಡುವುದು;ಹೆಚ್ಚು ಮೆಟ್ಟಿಲು ಹತ್ತಿ ಇಳಿಯುವುದು, ಹಾಗೆ ಜಾಸ್ತಿ ಹೊರಗೆ ಓಡಾಡಲು ಹೋಗುವುದು ಮಾಡಬೇಡ ಮತ್ತು ಹೊರಗಿನ ತಿಂಡಿ- ತಿನಿಸು , ಪಾನೀಯಗಳನ್ನು ಕುಡಿಯುವುದು ಆದಷ್ಟು ಕಡಿಮೆ ಮಾಡು. ನಿನಗೇನು ಬೇಕೋ ನನ್ನನ್ನು ಕೇಳು ನಾನೇ ಮಾಡಿಕೊಡುತ್ತೇನೆ’ ಎಂದಳು. ಅವಳ ಮಾತಿಗೆ ಸುಪ್ರೀತ ತಲೆಯಾಡಿಸುತ್ತಾ ಗಂಡನ ಮುಖ ನೋಡಿದಳು.
ಅಮಿತ್ ‘ಸರಿ… ನಾನು ಆಫೀಸಿಗೆ ಅರ್ಧ ದಿನ ರಜೆ ಹಾಕಿದ್ದು, ನನಗೆ ತಡವಾಗುತ್ತಿದೆ ಹೊರಡುತ್ತೇನೆ. ನನಗೆ ಮೀಟಿಂಗ್ ಇದೆ ಸ್ವಲ್ಪ ರೆಡಿಯಾಗಬೇಕು’ ಎಂದು ಹೇಳುತ್ತಾ ಹೊರಡುವಾಗ ಹೆಂಡತಿಗೆ- ಹುಷಾರು ಏನಾದರೂ ಬೇಕಿದ್ದರೆ ನನಗೆ ಫೋನ್ ಮಾಡು’ ಎಂದು ಅವಳ ತಲೆ ಮೇಲೆ ಕೈಯಾಡಿಸಿ ಹೊರಟ.
ಅತ್ತೆ ಕಮಲಾಮ್ಮ ‘ನಾನೇ ನಿನ್ನ ತಂದೆ- ತಾಯಿಗೆ ಕರೆ ಮಾಡಿ ಈ ಸಿಹಿ ಸುದ್ದಿಯನ್ನು ತಿಳಿಸುತ್ತೇನೆ’ ಎಂದು ಸಂತೋಷದಿಂದ ಹೊರಟಳು.
ಹೀಗೆ ಅಮಿತ್ ಗಂಡನ ಪ್ರೀತಿ, ಅತ್ತೆಯ ಆರೈಕೆಯಲ್ಲಿ ಮಹಾಭಾರತ, ರಾಮಾಯಣದಂತಹ ಪುಸ್ತಕಗಳನ್ನು ಓದುತ್ತಾ ಸಂತೋಷದಿಂದ ದಿನ ಕಳೆಯುತ್ತಿದ್ದಳು. ಹೀಗೆ ಮೂರು ತಿಂಗಳು ಕಳೆಯಿತು. ಸ್ಕ್ಯಾನಿಂಗ್ ಪರೀಕ್ಷೆಗೆಂದು ಆಸ್ಪತ್ರೆಗೆ ಅಮಿತ್ ಮತ್ತು ಸುಪ್ರೀತಾ ಹೋದರು. ಡಾಕ್ಟರ್ ಪರೀಕ್ಷಿಸಿ ಮಗು ಆರೋಗ್ಯವಾಗಿದೆ. ಮತ್ತೆರಡು ತಿಂಗಳು ಬಿಟ್ಟು ಬನ್ನಿ ಎಂದು ಮಾತ್ರೆ, ಸಿರಪ್ ಕೊಟ್ಟು ಕಳುಹಿಸಿದರು.
ಮಗ -ಸೊಸೆ ಮನೆಗೆ ಬಂದೊಡನೆ ಅತ್ತೆ ‘ಮಗು ಹೋಗಿದೆಯಂತೆ? ಆರೋಗ್ಯವಾಗಿದೆಯಲ್ಲ?’ ಎಂದಳು. ಅಮಿತ್- ‘ಮಗು ಆರೋಗ್ಯವಾಗಿದೆ. ಮತ್ತೆರಡು ತಿಂಗಳು ಬಿಟ್ಟು ಬನ್ನಿ’ ಎಂದಿದ್ದಾರೆ ಎಂದನು. ಕಮಲಾಮ್ಮ ನಿಟ್ಟುಸಿರು ಬಿಡುತ್ತಾ ‘ಇನ್ನು ಆರು ತಿಂಗಳಲ್ಲಿ ಈ ಮನೆಗೆ ವಾರಸುದಾರ ಬರುತ್ತಾನೆ. ನಿನಗೆ ಗಂಡು ಮಗುನೇ ಆಗೋದು’ ಎಂದು ಹೇಳುತ್ತಾ ಹಿರಿ ಹಿರಿ ಹಿಗ್ಗಿದಳು. ಅಲ್ಲಿಯವರೆಗೂ ಎಲ್ಲಾ ಸರಿ ಇದೆ ಎಂದು ನನಗೆ ಯಾವ ಮಗುವಾದರೂ ಪರವಾಗಿಲ್ಲ ಎಂದುಕೊಳ್ಳುತ್ತಿದ್ದ ಸುಪ್ರಿತಾಳಿಗೆ ಕಸಿವಿಸಿ ಶುರುವಾಯಿತು. ಅತ್ತೆಯ ಮುಖವನ್ನು ಗಂಭೀರವಾಗಿ ನೋಡಿದಳು. ಅತ್ತೆ ಸುಪ್ರೀತಳನ್ನು ಗಮನಿಸಲಿಲ್ಲ. ಆದರೆ ಸುಪ್ರೀತಾಳಿಗೆ ಅದು ಕೊರೆಯಲು ಶುರುವಾಯಿತು. ಏನಿದು, ಅತ್ತೆ ಏಕೆ ಹೀಗೆ ಹೇಳುತ್ತಿದ್ದಾರೆ? ಎಂದು ಮುಖದಲ್ಲಿ ನಗುವಿದ್ದರೂ, ಅತ್ತೆ ಗಂಡು ಮಗುವಿನ ನಿರೀಕ್ಷೆಯಲ್ಲಿದ್ದಾರಾ? ಎಂದು ಗಂಭೀರವಾಗಿ ಮನಸ್ಸಿನಲ್ಲಿ ಯೋಚಿಸುತಿದ್ದಳು.
ಹೀಗೆ ಒಮ್ಮೆ ಕೊನೆಗೆ ಮನಸ್ಸು ತಡೆಯಲಾರದೆ ಗಂಡನನ್ನು ನಿಮಗೆ ಯಾವ ಮಗುವಾದರೆ ಖುಷಿ ಎಂದು ಕೇಳಿದಳು. ಅದಕ್ಕೆ ನಗುತ್ತಾ ಅಮಿತ್ ‘ಯಾವ ಮಗುವಾದರೇನು. ಗಂಡಾದರೂ-ಹೆಣ್ಣಾದರೂ ಮಗು ಮಗುವೇ ಅಲ್ಲವೆ. ಮಗು ಆರೋಗ್ಯವಾಗಿ ನಿನಗೆ ತೊಂದರೆಯಾಗದಂತೆ ನನ್ನ ಕೈಗೆ ಬಂದರೆ ಸಾಕು. ನನಗೆ ಇನ್ಯಾವುದರ ಚಿಂತೆ ಇಲ್ಲ’ ಎಂದು ಸುಪ್ರೀತಾಳಿಗೆ ಹೇಳಿದನು. ಸುಪ್ರೀತಾಳಿಗೆ ಗಂಡನ ಮಾತು ಕೇಳಿ ಸ್ವಲ್ಪ ಮನಸ್ಸಿಗೆ ನೆಮ್ಮದಿಯೂ ಆಯಿತು. ಹಾಗೂ ಎಲ್ಲಿಲ್ಲದ ಖುಷಿಯು ಆಯಿತು. ನಂತರ ಅತ್ತೆ ಮಾತಿನ ಬಗ್ಗೆ ಹೆಚ್ಚು ಯೋಚನೆ ಮಾಡದೇ ಬೇರೆ ಬೇರೆ ವಿಷಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಖುಷಿಯಿಂದ ದಿನಗಳನ್ನು ಕಳೆಯುತ್ತಿದ್ದಳು.
ಹೀಗೆ ಐದು ತಿಂಗಳು ಕಳೆಯಿತು. ಒಂದು ದಿನ ಆಫೀಸಿನಿಂದ ಬಂದ ಅಮಿತ್ ಕಾಫಿ ಕುಡಿಯುತ್ತಾ ಕುಳಿತಿದ್ದ ಸುಪ್ರೀತಾ ‘ತನಗೆ ಹೆಣ್ಣು ಮಗುವಾದರೆ ‘ಅನನ್ಯ’ ಅಂಥ ಗಂಡು ಮಗುವಾದರೆ ‘ಆಯುಷ್’ ಎಂದು ಹೆಸರಿಡೋಣ ಎಂದು ಅಂದುಕೊಂಡಿದ್ದೇನೆ’ ಎಂದು ಹೇಳುತ್ತಿದ್ದಳು. ಅತ್ತೆ ಅವಳ ಮಾತು ಕೇಳಿಸಿಕೊಂಡು ಮಧ್ಯದಲ್ಲೇ ಬಂದು ‘ಇಲ್ಲ, ನಿನಗೆ ಗಂಡು ಮಗುನೇ ಆಗೋದು ನೋಡು’ ಎಂದು ನಗುತ್ತಲೇ ಹೇಳಿದಳು.
ಆದರೆ ಸುಪ್ರೀತಾಳಿಗೆ ಬಹಳ ಹಿಂಸೆಯಾಯಿತು. ಅತ್ತೆ ‘ನನಗೆ ಗಂಡು ಮಗುವೇ ಆಗುತ್ತೆ ಅಂತ ಹೇಗೆ ಹೇಳುತ್ತೀರಿ? ಹೆಣ್ಣು ಮಗುವೂ ಆಗಬಹುದಲ್ಲಾ’ ಎಂದಳು. ಅದಕ್ಕೆ ಅತ್ತೆ ‘ಇಲ್ಲ, ನಾನು ಪ್ರತಿ ದಿನ ಆ ದೇವರಿಗೆ ನಿನಗೆ ಗಂಡು ಮಗು ಆಗಲಿ, ನಮ್ಮ ಮನೆಗೆ ವಂಶೋದ್ಧಾರಕ ಹುಟ್ಟಿ ಬರಲಿ ಅಂತ ದೀಪ ಹಚ್ಚಿದ್ದೇನೆ. ನೀನೂ ಅದನ್ನೇ ಕೇಳ್ಕೊ ಆ ದೇವರಿಗೆ. ಹೆಣ್ಣು ಮಗು ಎಷ್ಟೇ ಆದರೂ ಇನ್ನೊಬ್ಬರ ಮನೆಗೆ ಹೋಗುವವಳು ಗಂಡು ಮಗು ಆದರೇನೇ ನಮ್ಮ ವಂಶ ನಮ್ಮ ಮನೆತನ ಮುಂದುವರಿಯುವುದು. ಅಷ್ಟೇ ಅಲ್ಲ ನಮಗೆ, ನಿನಗೆ ವಯಸ್ಸಾದಾಗ ಊರುಗೋಲಾಗಿ ಇರುವುದು ಗಂಡು ಹೊರತು ಹೆಣ್ಣಲ್ಲ’ ಎಂದು ಗಂಭೀರವಾಗಿ ಹೇಳಿ ‘ನಾನು, ದೇವರಿಗೆ ದೀಪ ಹಚ್ಚಬೇಕು’ ಎಂದು ದೇವರ ಕೋಣೆ ಕಡೆ ಹೋದಳು.
ಸುಪ್ರೀತಾಳಿಗೆ ಅತ್ತೆಯ ನಿರೀಕ್ಷೆ ಏನೆಂಬುದು ಸ್ಪಷ್ಟವಾಗಿ ತಿಳಿದು ತಬ್ಬಿಬ್ಬಾಗಿ ಗಂಡನ ಮುಖ ನೋಡಿದಳು.
ಅವನು ಅವಳ ಕೈ ಹಿಡಿದು ‘ಅಮ್ಮನ ಮಾತಿನ ಬಗ್ಗೆ ಯೋಚನೆ ಮಾಡಬೇಡ.ಎಲ್ಲ ಒಳ್ಳೆಯದೇ ಆಗುತ್ತದೆ’ ಎಂದು ಸಮಾಧಾನಿಸಿದ. ಆದರೆ ನನಗೆ ಹೆಣ್ಣು ಮಗು ಆದರೆ ಅತ್ತೆ ಯಾವ ರೀತಿ ಪ್ರತಿಕ್ರಿಯಿಸುತ್ತಾರೋ ಎಂದು ಅಂದಿನಿಂದ ಸುಪ್ರಿತಳಿಗೆ ಭಯ ಶುರುವಾಯಿತು. ಒಂಬತ್ತನೇ ತಿಂಗಳ ಹೊಸ್ತಿಲಲ್ಲಿ ಸೀಮಂತ ಕಾರ್ಯನೆರವೇರಿಸಿ ಸುಪ್ರೀತಾಳನ್ನು ತವರು ಮನೆಗೆ ಕಳುಹಿಸಿಕೊಡಲಾಯಿತು. ಅಲ್ಲಿ ಅಪ್ಪ-ಅಮ್ಮನ ಆರೈಕೆಯಲ್ಲಿ ಅವರ ಮುದ್ದು ಮಗಳು ಲವ ಲವಿಕೆಯಿಂದ ಸಂತೋಷದಿಂದ ಇದ್ದಳು. ಆದರೆ ಅವಳ ಮನಸ್ಸಿನಲ್ಲಿದ್ದ ತಳಮಳ ಎಲ್ಲರಿಗೂ ಯಾಕೆ ತಂದೆ-ತಾಯಿಗೂ ಅರ್ಥವಾಗಿರಲಿಲ್ಲ. ಹೀಗೆ ಕೆಲ ದಿನಗಳು ಕಳೆದವು. (ಹೆಣ್ಣು ಮಕ್ಕಳು ಅಂದರೇನೇ ಹಾಗೆ ತನ್ನ ಮನಸ್ಸಿನಲ್ಲಿ ಏನೇ ತಳಮಳ ನೋವು ದುಃಖ ದುಮ್ಮಾನವಿದ್ದರು ಸಾಧ್ಯವಾದಷ್ಟು ತನ್ನ ತಂದೆ ತಾಯಿಗೆ ಮನಸ್ಸಿಗೆ ನೋವಾಗಬಾರದೆಂಬ ಕಾರಣಕ್ಕೆ ಅವರಿಗೆ ತಿಳಿಸದ ಹಾಗೆ ನಗು ನಗುತ್ತಿರುತ್ತಾರೆ).
ಪ್ರಸವದ ದಿನಗಳ ಎಣಿಕೆ ಶುರುವಾಯಿತು. ಮನೆಯಲ್ಲಿ ಎಲ್ಲರಿಗೂ ಭಯ, ಸಂತೋಷ, ಕುತೂಹಲ, ಎಲ್ಲಾ. ಬೆಳಗಿನ ಜಾವ ಅಮಿತ್ ಫೋನ್ ರಿಂಗ್ ಆಗಲು ಶುರುವಾಯಿತು, ಒಡನೆಯೇ ಅಮಿತ್ ಕರೆ ಯಾರದೆoದು ನೋಡಿದ ಅದು ತನ್ನ ಮಾವನದು. ಅವನು ವಿಷಯ ಏನಿರಬಹುದೆಂದು ಕರೆ ಸ್ವೀಕರಿಸುವ ಮೊದಲೇ ಗ್ರಹಿಸಿದ. ನಂತರ ಕರೆ ಸ್ವೀಕರಿಸಿ ‘ಹಲೋ ಮಾವ’ ಎಂದ. ‘ಸುಪ್ರಿತಾಳಿಗೆ ಹೆರಿಗೆ ನೋವು ಶುರುವಾದ ಹಾಗಿದೆ. ನಾವು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೇವೆ. ನೀವು ಬೇಗ ಬನ್ನಿ’ ಎಂದು ಹೇಳಿದರು. ಇವನು ‘ಆಯ್ತು, ಹುಷಾರು. ನಾನು ಈಗಲೇ ಹೊರಡುತ್ತೇನೆ’ ಎಂದು ಹೇಳಿ ಕರೆ ಕಟ್ ಮಾಡಿ ಅಮ್ಮ ಎಂದು ಚೀರುತ್ತಾ ಅವಳ ರೂಮಿಗೆ ಹೋಗಿ ಎಬ್ಬಿಸಿ, ಸುಪ್ರಿತಾಳಿಗೆ ಹೆರಿಗೆ ನೋವು ಶುರುವಾಗಿರುವುದನ್ನು ತಿಳಿಸಿದ. ‘ಸರಿ… ನಾವು ಹೊರಡೋಣ. ಬೇಗ ರೆಡಿಯಾಗಿ ಬಾ ಎಂದಳು. ಅತ್ತೆ ಕಮಲಾಮ್ಮ ಅವಳ ಮುಖ ತೊಳೆದು ದೇವರಿಗೆ ನಮಸ್ಕಾರ ಮಾಡುತ್ತಿದ್ದಳು. ಅಷ್ಟರಲ್ಲಿ ಅಮಿತ್ ಬಂದು ‘ಅಮ್ಮಾ ಲೇಟ್ ಆಯಿತು. ನಡಿ… ಮುಂಜಾನೆ ಆದ್ದರಿಂದ ಯಾವ ಟ್ರಾಫಿಕ್ ಗೋಜಿಲ್ಲ. ಅರ್ಧ ಗಂಟೆಗೆ ಆಸ್ಪತ್ರೆ ತಲುಪುತ್ತೇವೆ’ ಎಂದು ಹೇಳುತ್ತಾ ಕಾರಿನಲ್ಲಿ ಆಸ್ಪತ್ರೆ ಕಡೆ ಹೊರಟ.
ಅತ್ತಾ ಸುಪ್ರಿತಾಳನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ವೈದ್ಯೆ ಸುಪ್ರಿತಳನ್ನು ಪರೀಕ್ಷಿಸಲು ಅವಳ ಕೊಠಡಿಗೆ ಹೋದಳು. ಅವಳ ತಂದೆ-ತಾಯಿ ಕೊಠಡಿಯ ಹೊರಗಡೆ ದೇವರ ನೆನೆಯುತ್ತಾ ನಿಂತಿದ್ದರು. ಅಷ್ಟರಲ್ಲಿ ಅಮಿತ್ ಮತ್ತು ಅವನ ತಾಯಿ ಆಸ್ಪತ್ರೆಗೆ ಬಂದರು. ಕಮಲಾಮ್ಮ ಸುಪ್ರಿತಾಳ ತಾಯಿ ಉಮಾಗೆ ‘ಈಗ ಸುಪ್ರೀತಾ ಹೇಗಿದ್ದಾಳೆ.ಏನಾಯಿತು?’ಎಂದಳು. ವೈದ್ಯೆ ಒಳಗೆ ಹೋಗಿ ಪರೀಕ್ಷಿಸುತ್ತಿದ್ದಾರೆ ಎನ್ನುವಷ್ಟರಲ್ಲಿ ವೈದ್ಯೆ ಹೊರಬಂದಳು. ‘ಸುಪ್ರೀತಾ ಪತಿ ಯಾರು?’ ಎಂದರು. ಅಮಿತ್ ‘ನಾನೇ ಹೇಳಿ’ ಎಂದ. ‘ನೋಡಿ… ಮಗು ಅಡ್ಡ ತಿರುಗಿದೆ. ನಾರ್ಮಲ್ ಡೆಲಿವರಿ ಆಗಲ್ಲ. ಆದಷ್ಟು ಬೇಗ ನಾವು ಸಿ -ಸೆಕ್ಷನ್ (ಸಿಸೇರಿಯನ್ಗೆ) ರೆಡಿ ಮಾಡ್ಕೋಬೇಕು.ಇಲ್ಲಾಂದ್ರೆ ಮಗುಗೆ ತೊಂದ್ರೆ ಆಗುತ್ತೆ. ಹಾಗು ತಾಯಿಗೂ ಕಷ್ಟ ಆಗುತ್ತೆ.ನೀವು ಆದಷ್ಟು ಬೇಗ ನಾನು ರೆಸಿಪ್ಟ್ ಕೊಡ್ತೀನಿ. ನೀವು ನರ್ಸ್ ಜೊತೆ ಹೋಗಿ ಬೇಕಾದ ಪ್ರಕ್ರಿಯೆಗಳನ್ನು ಮುಗಿಸಿ ಬನ್ನಿ. ನಾನು ಆಪರೇಷನ್ಗೆ ರೆಡಿ ಮಾಡ್ಕೋತೀನಿ’ ಎಂದಳು. ಎಲ್ಲರಿಗೂ ಸ್ವಲ್ಪ ಗಾಬರಿಯಾಯಿತು. ಉಮಾ ಮತ್ತು ಕಮಲಾಮ್ಮ ಸುಪ್ರೀತಾಳನ್ನು ನೋಡಲು ಕೊಠಡಿಗೆ ಹೋದರು. ಇತ್ತ ಅಮಿತ್ ನರ್ಸ್ ಜೊತೆ ಹೋಗಿ ಎಲ್ಲಾ ಆಪರೇಷನ್ ಪ್ರಕ್ರಿಯೆಗಳನ್ನು ಮುಗಿಸಿ ತಕ್ಷಣ ಸುಪ್ರೀತಾಳನ್ನು ನೋಡಲು ಹೊರಟು ಬಂದ. ಪಾಪ ಅವಳು ಹೆರಿಗೆ ನೋವು ತಡೆಯಲಾರದೆ ಒಂದೇ ಸಮ ಅಳುತ್ತಿದ್ದಳು. ಅವಳನ್ನು ಹಾಗೆ ನೋಡಿದೊಡನೆ ಅಮಿತ್ ಗೆ ಬಾಯಿ ಬಿಡಲಾಗಲಿಲ್ಲ. ಮನಸ್ಸು ಹಿಂಡಿದಂತಾಯಿತು. ಅವನ ಕಣ್ಣಲ್ಲಿ ನೀರು ತುಂಬಿತು. ಗಟ್ಟಿಯಾಗಿ ಒಮ್ಮೆ ಸುಪ್ರೀತಾಳ ಕೈಹಿಡಿದು ‘ಹೆದರಬೇಡ. ನಿನ್ನ ಜೊತೆ ನಾನಿದ್ದೇನೆ. ಧೈರ್ಯವಾಗಿರು’ ಎಂದು ಸಮಾಧಾನಿಸಿದ .ಅವಳು ಹೂಂ ಎಂದು ತಲೆಯಾಡಿಸಿದಳು. ಅಷ್ಟರಲ್ಲಿ ನರ್ಸ್, ಆಯಾ ಬಂದು ಪೇಶೆಂಟ್ನ ಆಪರೇಷನ್ ವಾರ್ಡ್ ಗೆ ಕರೆದುಕೊಂಡು ಹೋಗಬೇಕು ಎಲ್ಲರೂ ಹೊರಗೆ ಹೋಗಿ ಎಂದು ಹೇಳಿ, ಒಳಗೆ ಇದ್ದ ಎಲ್ಲರನ್ನೂ ಹೊರಗೆ ಕಳುಹಿಸಿದರು. ನಂತರ ನಿಧಾನಕ್ಕೆ ಅವಳನ್ನು ವೀಲ್ ಚೇರ್ ಮೇಲೆ ಕೂರಿಸಿಕೊಂಡು ಆಪರೇಷನ್ ಕೊಠಡಿಗೆ ಕರೆದುಕೊಂಡು ಹೋದರು. ಅಮಿತ್ ಹಾಗೂ ಎಲ್ಲರೂ ಅವಳನ್ನು ಹಿಂಬಾಲಿಸಿದರು.
ಒಳಗೆ ಆಪರೇಷನ್ ಶುರುವಾಯಿತು. ಇಲ್ಲಿ ಎಲ್ಲರೂ ಆಪರೇಷನ್ ಕೊಠಡಿಯ ಹೊರಗಡೆ ಎಲ್ಲರೂ ಮೌನವಾಗಿ ನಿಂತು ಮನಸ್ಸಿನಲ್ಲಿ ದೇವರ ನೆನೆಯುತ್ತಾ ತಾಯಿ ಮಗು ಇಬ್ಬರು ಆರೋಗ್ಯವಾಗಿರಲಿ ಎಂದು ಪ್ರಾರ್ಥಿಸುತ್ತಿದ್ದರು. ಸುಮಾರು ಇಪ್ಪತ್ತು ನಿಮಿಷಗಳ ನಂತರ ಆಪರೇಷನ್ ಕೊಠಡಿಯೊಳಗಿನಿoದ ಮಗು ಅಳುವ ಶಬ್ದ ಕೇಳಿತು. ಎಲ್ಲರೂ ಒಂದೇ ಸಲ ಒಬ್ಬೊಬ್ಬರ ಮುಖ ನೋಡಿಕೊಂಡು ಆಪರೇಷನ್ ಕೊಠಡಿ ಬಾಗಿಲ ಬಳಿ ಹೋಗಿ ಕಾತುರದಿಂದ ತಾಯಿ ಮಗು ಹೆಗಿದ್ದಾರೆ? ಯಾವ ಮಗು? ಎಂದು ಕೇಳಲು ಯಾರಾದರೂ ಹೊರಕ್ಕೆ ಬರುತ್ತಾರ ಎಂದು ಕಾಯುತ್ತಾ ನಿಂತರು. ಸುಮಾರು ಹದಿನೈದು ನಿಮಿಷಗಳ ನಂತರ ವೈದ್ಯೆ ಹೊರಬಂದಳು. ‘congratulation’ ಸುಮಿತ್. ಹೆಣ್ಣು ಮಗು ಬಹಳ ಮುದ್ದಾಗಿದೆ. ತಾಯಿ ಮಗು ಆರೋಗ್ಯವಾಗಿದ್ದಾರೆ’ ಎನ್ನುತ್ತಲೇ ನರ್ಸ್ ಮಗುವನ್ನು ಹೊರ ತಂದಳು. ಮಗು ಕಣ್ಣನ್ನು ಪಿಳಿಪಿಳಿ ಎಂದು ಬಿಟ್ಟು ನೋಡುತ್ತಿತ್ತು. ಅಮಿತ್ ಖುಷಿಗೆ ಪಾರವೇ ಇಲ್ಲ. ಎಲ್ಲರಿಗೂ ಮಗುವನ್ನು ತೋರಿಸಿ ನರ್ಸ್ ಮಗುವನ್ನು ಮತ್ತೆ ಕೊಠಡಿಯೊಳಗೆ ತೆಗೆದುಕೊಂಡು ಹೋದಳು. ವೈದ್ಯೆ ಮಗು ತಾಯಿ ಶಾಖದಲ್ಲಿ ಇರಬೇಕು.ತಾಯಿಗೆ ಅನಸ್ತೇಶಿಯಾ ಕೊಟ್ಟಿರುವುದರಿಂದ ಪೂರ್ತಿ ಪ್ರಜ್ಞೆ ಬರಲು ಸಮಯ ಬೇಕು. ನಂತರ ಮಗು ಮತ್ತು ತಾಯಿಯನ್ನು ಒಟ್ಟಿಗೆ ವಾರ್ಡ್ ಗೆ ಶಿಫ್ಟ್ ಮಾಡುತ್ತೇವೆ’ ಎಂದಳು. ಹಾಗೆ ಅಮಿತ್ ಸ್ವೀಟ್ ಯಾವಾಗ ತಂದು ಕೊಡ್ತೀರಾ ಅಂತ ತಮಾಷೆ ಮಾಡಿ ಹೋದಳು. ಎಲ್ಲರ ಮುಖದಲ್ಲಿ ನಗು ಅರಳಿತ್ತು. ಆದರೆ ಕಮಲಾಮ್ಮ ಮುಖದಲ್ಲಿ ಮಾತ್ರ ಕಾಟಾಚಾರದ ನಗುವಿತ್ತು.
ಅಮಿತ್ ಸ್ವೀಟ್ ತಂದು ಡಾಕ್ಟರ್, ನರ್ಸ್ ಹಾಗೂ ಅಕ್ಕಪಕ್ಕದ ಕೊಠಡಿಯಲ್ಲಿದ್ದವರಿಗು ಕೊಟ್ಟನು.ಇತ್ತ ಮನೆಯವರೆಲ್ಲಾ ಹರಟುತ್ತಾ ವಾರ್ಡ್ ನಲ್ಲಿ ಕೂತಿದ್ದರು. ಒಂದೆರಡು ಗಂಟೆಗಳ ನಂತರ ತಾಯಿ- ಮಗುವನ್ನು ವಾರ್ಡ್ ಗೆ ಶಿಫ್ಟ್ ಮಾಡಲಾಯಿತು. ನಸ್೯ ‘ನೋಡಿ… ಜಾಸ್ತಿ ಜನ ವಾರ್ಡ್ನಲ್ಲಿ ಇರಬಾರದು. ಮಗುವನ್ನು ಎಲ್ಲರೂ ಪದೇ ಪದೇ ಎತ್ತಿಕೊಳ್ಳಬಾರದು. ಎತ್ತಿಕೊಳ್ಳುವ ಮೊದಲು ಕೈ ತೊಳೀರಿ. ಇಲ್ಲಾ, ಅಂದ್ರೆ ಮಗುವಿಗೆ ಇನ್ಫೆಕ್ಷನ್ ಆಗುತ್ತೆ. ಹಾಗೇ ಎರಡೆರಡು ಗಂಟೆಗೂ ಮಗುವಿಗೆ ಹಾಲುಣಿಸಿ. ಜಾಸ್ತಿ ಗಲಾಟೆ ಮಾಡಬೇಡಿ’ ಹೀಗೆ ಒಂದಿಷ್ಟು ಸಲಹೆ ನೀಡಿ ತಾಯಿಗೆ ಸ್ವಲ್ಪ ಸಮಯದ ನಂತರ ತಿನ್ನಲು ಗಂಜಿ ಅಥವಾ ಇಡ್ಲಿಯನ್ನು ತಂದುಕೊಡಿ ಎಂದು ಹೇಳಿ ಮಗುವನ್ನು ತೊಟ್ಟಿಲಲ್ಲಿ ಮಲಗಿಸಿ ಹೋದಳು. ಅವಳು ಅತ್ತ ಕಡೆ ಹೋಗುತ್ತಿದ್ದಂತೆ ಉಮಾ ಮಗುವನ್ನು ನೋಡಿ ‘ಸುಪ್ರೀತಾ ಮಗು ಬಹಳ ಮುದ್ದಾಗಿದೆ ಕಣೇ’ ಎಂದು ಹೇಳಿದಳು. ಪುನಃ ಎಲ್ಲರೂ ಮಗುವಿನ ಹತ್ತಿರ ಬಂದು ನೋಡಿ ಸಂತೋಷ ಪಟ್ಟರು. ಅಮಿತ್ ‘ನಾನು ಎತ್ತಿಕೊಳ್ಳುತ್ತೇನೆ ಕೊಡಿ ಅತ್ತೆ’ ಎಂದು ಮಗುವನ್ನು ಎತ್ತಿಕೊಂಡ ಅವನ ಕಣ್ಣಲ್ಲಿ ನೀರು ಹರಿಯಿತು. ಮುಖದಲ್ಲಿ ಆನಂದವಿತ್ತು. ಹಾಗೆ ಸುಪ್ರೀತಾಳನ್ನು ನೋಡಿದ. ಅವಳು ಕಣ್ಣಲ್ಲಿಯೂ ನೀರು ಚಿಮ್ಮಿತು ಕಣ್ಣೀರು ಒರೆಸಿಕೊಂಡಳು. ಆದರೆ ಕಮಲಾಮ್ಮಗೆ ಹೆಣ್ಣು ಮಗು ಆಯಿತಲ್ಲ ಎನ್ನುವ ಬೇಸರ. ಆ ಕಾರಣಕ್ಕೆ ಆಕೆ ಮಾತ್ರ ಸುಮ್ಮನೆ ಒಂದು ಕಡೆ ನಿಂತಿದ್ದಳು.
(ಬಹುಶಃ ಮೊದಲ ಬಾರಿಗೆ ತನ್ನ ಮಗುವನ್ನು ನೋಡಿದಾಗ, ಎತ್ತಿಕೊಂಡಾಗ ಆಗುವ ಅನುಭವವನ್ನು ಯಾವ ಪದಗಳಿಂದಲೂ ಹೆಣೆಯಲಾಗುವುದಿಲ್ಲ. ಅಲ್ಲವೇ? ) ಸುಪ್ರೀತಾ ಅತ್ತೆಯ ಪ್ರೀತಿಗಾಗಿ ಮನಸ್ಸಿನಲ್ಲಿ ಹವಣಿಸುತ್ತಿದ್ದಳು.ಇತ್ತ ಉಮಾ ‘ಕಮಲಾಮ್ಮ ಅವರೇ ನೀವು ಇಲ್ಲಿರಿ. ನಾನು ಮನೆಗೆ ಹೋಗಿ ಸುಪ್ರೀತಾಗೆ ಸ್ವಲ್ಪ ಗಂಜಿ, ಹಾಲು ತೆಗೆದುಕೊಂಡು ಬರುತ್ತೇನೆ’ ಎಂದಳು. ಕಮಲಾಮ್ಮ ‘ಸರಿ…ಹೋಗಿ ಬನ್ನಿ’ ಎಂದಳು. ಉಮಾ ಅವಳ ಗಂಡ ಇಬ್ಬರು ಮನೆ ಕಡೆ ಸಂತೋಷದಿಂದ ಹೋದರು.
ಅಮಿತ್ ‘ಸುಪ್ರೀತಾ ಬಳಿ ಹೋಗಿ ಕುಳಿತುಕೊಂಡು ನೋಡು ನೀನು ಅಂದುಕೊಂಡಂತೆ ಹೆಣ್ಣು ಮಗುವೆ ಆಯಿತು.ನಿನ್ನ ಥರನೆ ಇದ್ದಾಳೆ. ನನ್ನ ಮಗಳು’ ಎಂದು ತಮಾಷೆ ಮಾಡಿದ. ಆದರೆ ಸುಪ್ರಿತಾಳಿಗೆ ‘ನಗು ಬರಲಿಲ್ಲ. ಅತ್ತೆ ಕಮಲಾಮ್ಮನ ಮುಖ ನೋಡಿದಳು. ಅವಳು ‘ಸುಮ್ಮನೆ ಹೌದು… ಮಗು ನಿನ್ನ ಥರನೆ ಇದ್ದಾಳೆ’ಎಂದಳು. ಸುಪ್ರೀತ ಮಾತ್ರ ಮೌನವಾಗೇ ಇದ್ದಳು. ಅಮಿತ್ ಗೆ ಸುಪ್ರೀತಾ ಏನು ಯೋಚನೆ ಮಾಡುತ್ತಿದ್ದಾಳೆ.ಏಕೆ ಹೀಗೆ ಮೌನವಾಗಿದ್ದಾಳೆ ಎಂದು ಅರ್ಥ ಆಗಿತ್ತು. ಕಡೆಗೆ ಅವನೇ ಒಂದು ಹೆಜ್ಜೆ ಮುಂದೆ ಹೋಗಿ ‘ಯಾಕಮ್ಮ…ಹೆಣ್ಣು ಮಗುವಾಗಿದ್ದು ನಿನಗೆ ಖುಷಿಯಾಗಿಲ್ಲ’ ಎನ್ನಿಸುತ್ತಿದೆ ಎಂದ. ಅವಳು ‘ಈಗ ನನಗೆ ಏನು ಅನ್ನಿಸಿದ್ರೆ ಏನು ಪ್ರಯೋಜನ? ಈಗೇನು ಬದಲಾಯಿಸಲಿಕ್ಕೆ ಆಗುತ್ತಾ? ನಮ್ಮ ಹಣೆಯಲ್ಲಿ ಬರೆದ ಹಾಗೆ ಆಗುತ್ತೆ.ನಮಗೆ ಗಂಡು ಮಗು ಆಗೂ ಪುಣ್ಯ ಇಲ್ಲ ಅಷ್ಟೇ’ ಎನ್ನುತ್ತಿದ್ದಂತೆ ಅವಳು ಅಮಿತ್ ‘ಯಾಕಮ್ಮ? ಹಾಗಿದ್ರೆ ಹೆಣ್ಣು ಮಗು ಆಗೋದು ಪಾಪ ಮಾಡಿದವರಿಗೆ ಏನು?. ಏನು ಮಾತಾಡ್ತೀಯಾ ಅಮ್ಮ… ನೀನು? ಹೆಣ್ಣಾಗಿ ಹೆಣ್ಣು ಮಗುವಿನ ಬಗ್ಗೆ ಇಷ್ಟೊಂದು ತಾತ್ಸಾರವೇ?’. ಅಮಿತ್ ಆತ್ಮವಿಶ್ವಾಸದಿಂದ ‘ಈ ನನ್ನ ಮುದ್ದು ಮಗಳು ನಮ್ಮ ಮನೆಯಲ್ಲಿ ಹುಟ್ಟಿದ ದೀಪ. ಮುಂದೆ ಇನ್ನೊಂದು ಮನೆಯ ಬೆಳಗುವ ನಂದಾದೀಪವಾಗುತ್ತಾಳೆ. ಇಂದು ಗಂಡು-ಹೆಣ್ಣಿನ ನಡುವಿನ ಸಾಮರ್ಥ್ಯದಲ್ಲಿ ಯಾವುದೇ ಭೇದವಿಲ್ಲ.ಎಲ್ಲ ರೀತಿಯಲ್ಲೂ, ಎಲ್ಲ ಕ್ಷೇತ್ರದಲ್ಲೂ ಅವಳು ಸಮರ್ಥಳಾಗಿದ್ದಾಳೆ. ಗಂಡಸಿಗೆ ಸಮನಾಗಿ ನಿಂತಿದ್ದಾಳೆ. ಒಂದು ಕಡೆ ಅವಳು ತೊಟ್ಟಿಲು ತೂಗಿ ಸಂಸಾರ ನಿಭಾಯಿಸಿದರೆ, ಇನ್ನೊಂದು ಕಡೆ ದೇಶವನ್ನಾಳುವ ಬಲವೂ, ಛಲವೂ ಅವಳಿಗಿದೆ. ಎಲ್ಲ ಸಂದರ್ಭವನ್ನು ಧೈರ್ಯವಾಗಿ, ತಾಳ್ಮೆಯಿಂದ, ಎದೆಗುಂದದೆ ನಿಭಾಯಿಸುವವಳು ಅಂತಹ ದಿಟ್ಟತನ ಇರುವವಳು ಹೆಣ್ಣು. ಅದನ್ನು ಅರಿಯದೆ ಗಂಡು ಮಕ್ಕಳಿಂದಲೇ ವಂಶ ಉದ್ಧಾರ ಆಗೋದು,ಮೋಕ್ಷ ಸಿಗೋದು ಅಂತ ಯೋಚಿಸುವುದು ಸರಿಯಲ್ಲ. ಇoದಿನ ದಿನಗಳಲ್ಲಿ ತನ್ನ ತಂದೆ-ತಾಯಿಯನ್ನು ನೋಡಿಕೊಳ್ಳಲಾಗದೆ ವೃದ್ಧಾಶ್ರಮದಲ್ಲಿ ಬಿಟ್ಟು ಅವರ ಬಗ್ಗೆ ಯೋಚಿಸದೆ ಫಾರಿನ್ನಲ್ಲಿ ಇರುವ ಎಷ್ಟು ಗಂಡು ಮಕ್ಕಳನ್ನು ನಾವು ನೋಡಿಲ್ಲ. ನೀನೇ ಹೇಳು?. ಹೆಣ್ಣಾದರೆ ಏನು, ಗಂಡಾದರೆ ಏನು, ನಮ್ಮ ಇಳಿ ವಯಸ್ಸಿನಲ್ಲಿ ಹೆಗಲು ಕೊಡಲು ನಮ್ಮ ಅದೃಷ್ಟ ಸರಿ ಇರಬೇಕು ಅಷ್ಟೆ’ ಎಂದನು. ಸುಪ್ರೀತಾ ಗಂಡನ ಮಾತು ಕೇಳಿ ಆನಂದ ಭಾಷ್ಪ ಹಾಕಿದಳು. ಕಮಲಾಮ್ಮ ಮಗನ ಮುಖ ನೋಡಿದಳು ವಿನಃಹ ಏನೂ ಮಾತನಾಡಲಿಲ್ಲ.
ಮುಂದೆ ಕಮಲಾಮ್ಮ ಮಗ ಹೇಳಿದ ಮಾತನ್ನು ಅರ್ಥ ಮಾಡಿಕೊಂಡು ಪರಿವರ್ತನೆಯಾಗುತ್ತಾಳಾ? ಅಥವಾ ಇವನು ಏನನ್ನಾದರೂ ಹೇಳಲಿ ಹೆಣ್ಣಿಗಿಂತ ಗಂಡು ಶ್ರೇಷ್ಠ ಎಂದು ಅದನ್ನೇ ನಂಬುತ್ತಾಳಾ??
(ನಿಮ್ಮ ಅಭಿಪ್ರಾಯ ಅಥವಾ ಅನಿಸಿಕೆಗಳನ್ನು ಲೇಖನ-ಕತೆಯ ಮೂಲಕ ಉತ್ತರಿಸಬಹುದು ಅಥವಾ ನೇರವಾಗಿ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಬಹುದು ನಮ್ಮಇ- ಮೇಲೆ ಐಡಿ ak.shalini@outlook.com)