ನಮ್ಮ ಜನ ಕೆಲವು ವ್ಯಕ್ತಿಗಳನ್ನು ಸುಲಭವಾಗಿ ನಂಬೋದ್ಯಾಕೆ? ಹೀಗೊಂದು ಪ್ರಶ್ನೆ ನನಗೆ ಆಗಾಗ ಕಾಡುತ್ತಲೇ ಇರುತ್ತದೆ. ಎದುರಿಗೆ ಕಾಣುವ ವ್ಯಕ್ತಿ ಸಭ್ಯರಂತೆ ಕಂಡರೆ ಜನರಿಗೆ ಅದೇನೋ ಆಕರ್ಷಣೆ, ನಂಬಿಕೆಯ ಕುರಿತು ಲೇಖಕ ಸುದರ್ಶನ ಪ್ರಸಾದ್ ಅವರು ಬರೆದಿರುವ ಲೇಖನವನ್ನು ತಪ್ಪದೆ ಓದಿ…
ಅದರಲ್ಲೂ ಯಾರಾದರೂ ತಾವು ಇನ್ನೊಬ್ಬರಿಂದ ಮೋಸ ಹೋದ ಅನುಭವ ಹಂಚಿಕೊಂಡರೆ ಆಗ ಈ ಪ್ರಶ್ನೆ ನನ್ನ ಮನಸ್ಸಿನಲ್ಲಿ ಬರದೇ ಹೋಗುವುದಿಲ್ಲ. ಆದರೆ ಇಂದಿಗೂ ಇದಕ್ಕೊಂದು ಸರಿಯಾದ ಉತ್ತರ ಸಿಗಲೇ ಇಲ್ಲ. ಕೆಲ ದಿನಗಳ ಹಿಂದೆ ಇದೇ ಪ್ರಶ್ನೆಯನ್ನು ಒಬ್ಬರಿಗೆ ಕೇಳಿದ್ದೆ. “ಹಾಗಾದ್ರೆ ಎಲ್ಲರನ್ನೂ ಅನುಮಾನದಿಂದ ನೋಡ್ಬೇಕಾ?” ಅವರು ಮರುಪ್ರಶ್ನೆ ಮಾಡಿದಾಗ ನನ್ನಲ್ಲಿ ಉತ್ತರವಿರಲಿಲ್ಲ. ಆಗ ಇರುವ ಪ್ರಶ್ನೆಗಳ ಜೊತೆಗೆ ಇನ್ನಷ್ಟು ಪ್ರಶ್ನೆಗಳು ಸೇರಿಕೊಂಡಿವೆ. ಆದ್ದರಿಂದ ಇದರ ಬಗ್ಗೆ ಒಂದಿಷ್ಟು ಗೀಚಿ ನಿರಾಳವಾಗುವ ಪ್ರಯತ್ನವಿದು.
ಮೊದಲನೆಯದಾಗಿ ಜನ ಯಾರನ್ನು ಸುಲಭವಾಗಿ ನಂಬುತ್ತಾರೆ ಎಂದು ನೋಡುವುದಾದರೆ ಉತ್ತರ ಬಹಳ ಸರಳ. ಯಾರು ತೋರಿಕೆಯಿಂದ ಅತ್ಯಂತ ಸಭ್ಯರಾಗಿರುತ್ತಾರೋ ಅವರನ್ನು ಸುಲಭವಾಗಿ ನಂಬಿ ಬಿಡುತ್ತಾರೆ. ಇದಕ್ಕೆ ಅವರ ಗುಣ ಸ್ವಭಾವಗಳನ್ನು ತಿಳಿದಿರಬೇಕು ಅಂತೇನಿಲ್ಲ. ಎದುರಿಗೆ ಅವರು ಸಭ್ಯರಂತೆ ಕಂಡರೆ ಜನರಿಗೆ ಅದೇನೋ ಆಕರ್ಷಣೆ, ಆತ್ಮೀಯ ಭಾವನೆ. ಜನ ಅತಿಯಾಗಿ ನಂಬುವ ಇನ್ನೊಂದು ವರ್ಗದ ಜನರೆಂದರೆ ಅದು ಬುದ್ಧಿವಂತರು ಎನ್ನಿಸಿಕೊಂಡವರನ್ನು. ಯಾರಾದರೂ ಒಂದಿಷ್ಟು ವಿಚಾರಗಳನ್ನು ತಿಳಿದವರಾಗಿದ್ದರೆ ಜನ ಅವರತ್ತ ಆಕರ್ಷಿತರಾಗಿ ತಾವೂ ತಿಳಿಯುವ ಅಥವಾ ಅವರಿಂದ ಏನಾದರೂ ಕಾರ್ಯ ಸಾಧಿಸಿಕೊಳ್ಳುವ ಯೋಚನೆ ಮಾಡುತ್ತಾರೆ. ಬುದ್ದಿವಂತರಿಗೆ ಇದಕ್ಕಿಂತ ಸುಲಭದ ತುತ್ತು ಇನ್ನೇನು?
ಇವೆರಡಲ್ಲದೇ ಜನರನ್ನು ಆಕರ್ಷಿಸುವ ಇನ್ನೊಂದು ಗುಂಪು ಜನಪ್ರಿಯ ವ್ಯಕ್ತಿಗಳದ್ದು. ಆತ ಯಾವುದಾದರೂ ಒಂದು ದಾರಿಯಿಂದ ಜನಪ್ರಿಯ ಎನ್ನಿಸಿದರೆ ಸಾಕು ಆತನನ್ನು ನಂಬಿ, ಆತ ಹೇಳಿದ್ದೆಲ್ಲವನ್ನೂ ಮಾಡುತ್ತದೆ ಈ ಸಮಾಜ. ಅದು ಧನಾತ್ಮಕ ಜನಪ್ರಿಯತೆ ಆಗಿರಬಹುದು ಅಥವಾ ಋಣಾತ್ಮಕ ಅದರ ಕುರಿತಾಗಿ ಯಾರೂ ಯೋಚಿಸುವುದಿಲ್ಲ. ಕಣ್ಣಿಗೆ ಕಾಣುವುದು ಕೇವಲ ಆ ವ್ಯಕ್ತಿ ಹೆಚ್ಚಿನವರಿಗೆ ಪ್ರಿಯ ಎಂಬುದಷ್ಟೆ.

ಫೋಟೋ ಕೃಪೆ :google
ಇಲ್ಲಿ ಒಂದು ವಿಶೇಷ ಮನಸ್ಥಿತಿ ಇದೆ. ಯಾರಿಂದ ಮೋಸ ಹೋಗುವ ಸಾಧ್ಯತೆ ಕಡಿಮೆ ಇರುತ್ತದೋ ಅಂತಹವರಿಗೆ ಜನರು ಆಕರ್ಷಿತರಾಗುವುದೇ ಇಲ್ಲ. ಹೀಗಾಗಿ ಜನ ಯಾರನ್ನು ದೂರ ಇಡಲು ಬಯಸುತ್ತಾರೆ? ಎಂಬ ಪ್ರಶ್ನೆಗೆ ಉತ್ತರ ನೋಡುವುದಾದರೆ.
1. ನೇರ ನುಡಿಯ ವ್ಯಕ್ತಿತ್ವ: ವಿಪರ್ಯಾಸವಾದರೂ ಇದು ಸತ್ಯ. ಇದ್ದಿದ್ದು ಇದ್ದಂತೆ ಹೇಳುವ, ತಮ್ಮ ತಪ್ಪುಗಳನ್ನು ತೋರಿಸಿ, ತಿದ್ದಲು ಪ್ರಯತ್ನಿಸುವವರನ್ನು ಯಾವುದೇ ಅಪಾಯ ಇಲ್ಲದಿದ್ದರೂ ಜನ ದೂರವಿಡಲು ಬಯಸುತ್ತಾರೆ.
2. ಲಿಂಗಾಧಾರಿತ: ಅನೇಕ ಮಹಿಳೆಯರಲ್ಲಿ ಪುರುಷರ ಮೇಲೆ ಒಂದು ರೀತಿಯ ಅಸಮಾಧಾನ, ಭಯದ ಮನಸ್ಥಿತಿ ಇದೆ. ಇದಕ್ಕೆ ಅವರು ಬೆಳೆದು ಬಂದ ವಾತಾವರಣವೂ ಕಾರಣವಾಗಿರಬಹುದು. ಇಂತಹವರು ಮಹಿಳೆಯರೊಂದಿಗೆ ತಮ್ಮ ನೋವು ನಲಿವುಗಳನ್ನು ಹಂಚಿಕೊಂಡು, ಅದರಿಂದಲೇ ಮೋಸ ಹೋಗುವ ಸಾಧ್ಯತೆ ಹೆಚ್ಚು. ಕೆಲ ಸಂದರ್ಭಗಳಲ್ಲಿ ಪುರುಷರೂ ಈ ರೀತಿಯ ನಂಬಿಕೆ ದ್ರೋಹವನ್ನು ಎದುರಿಸಬೇಕಾಗುತ್ತದೆ. ಒಳ್ಳೆಯ ಮನಸ್ಸುಗಳ ಬದಲಾಗಿ ಲಿಂಗಾಧಾರಿತ ಆತ್ಮೀಯತೆ ಮಹತ್ವ ಪಡೆದು ಮೋಸಕ್ಕೆ ಹಾದಿಯಾಗುತ್ತದೆ ಎಂದು ಜನರು ಯೋಚಿಸುವುದೇ ಇಲ್ಲ.
3. ಪ್ರಾಮಾಣಿಕಥೆ: ಒಂದು ರೀತಿಯಲ್ಲಿ ಇದು ಆಶ್ಚರ್ಯವೂ ಹೌದು. ಅನೇಕರು ಪ್ರಾಮಾಣಿಕ ವ್ಯಕ್ತಿಗಳನ್ನು ಅನುಮಾನದಿಂದ ನೋಡುವ ಮತ್ತು ಅವರೊಂದಿಗೆ ಬೆರೆಯಲು ಹಿಂಜರಿಯುವ ಮನಸ್ಥಿತಿ ಹೊಂದಿರುತ್ತಾರೆ.
ಈ ಮೇಲಿನ ಸಂದರ್ಭಗಳಿಗೂ ಇಂದಿನ ಸೈಬರ್ ಕ್ರೈಂ ದೂರುಗಳಿಗೂ ಬಹಳ ಸಾಮ್ಯತೆ ಇದೆ. ಅತೀ ಹೆಚ್ಚು ಸೈಬರ್ ಕ್ರೈಂ ದೂರುಗಳು ನಂಬಿಕೆ ದ್ರೋಹದ ಕಾರಣದಿಂದಲೇ ಹುಟ್ಟಿಕೊಳ್ಳುತ್ತಿವೆ. ಅದರಲ್ಲೂ ಲಿಂಗಾಧಾರಿತ ಆತ್ಮೀಯತೆ ವಿಚಾರ ಅತ್ಯಂತ ಹೆಚ್ಚು ಸದ್ದು ಮಾಡುವುದು. ಹೆಣ್ಣಿನ ಹೆಸರಿನಲ್ಲಿ ಹೆಣ್ಣು, ಗಂಡು ಇಬ್ಬರನ್ನೂ ಬಲೆಗೆ ಬೀಳಿಸಿಕೊಂಡು ಮೋಸ ಮಾಡುವುದು ಇತ್ತೀಚೆಗೆ ಅತೀ ಸಾಮಾನ್ಯ. ಇದಲ್ಲದೇ ಜ್ಞಾನ, ಜನಪ್ರಿಯತೆ ಮುಂತಾದವುಗಳ ದುರುಪಯೋಗ ವಂಚನೆಯ ಮತ್ತೊಂದು ಹಾದಿ.
ಇಷ್ಟೆಲ್ಲಾ ಹೇಳಿದ ಮೇಲೆ ಯಾರನ್ನು ನಂಬಬೇಕು ಎಂಬ ಪ್ರಶ್ನೆ ಕಾಡಬಹುದು. ಇದಕ್ಕೆ ಉತ್ತರ ಜನರೇ ಕಂಡುಕೊಳ್ಳಬೇಕು. ತೋರಿಕೆಯಿಂದ ಎಲ್ಲರೂ ಸಭ್ಯರಾಗಿರಬಹುದು ಆದರೆ ಅವರ ನಿಜವಾದ ವ್ಯಕ್ತಿತ್ವ ತಿಳಿಯುವುದು ಒಡನಾಟದಿಂದ. ಯಾವುದೇ ವ್ಯಕ್ತಿ ತನ್ನ ಪರಿಚಯವನ್ನೇ ಸರಿಯಾಗಿ ಹೇಳದಿದ್ದ ಮೇಲೆ ಅವರನ್ನು ನಂಬಿ ತಮ್ಮೆಲ್ಲಾ ನೋವು ನಲಿವುಗಳನ್ನು ಹಂಚಿಕೊಳ್ಳುವ ಜನರು ಮೂಢರೇ ಸರಿ. ತೆರೆದ ಪುಸ್ತಕದಂತೆ ಇರುವ ವ್ಯಕ್ತಿಗಳನ್ನು ಸುಖಾಸುಮ್ಮನೆ ವಿಚಾರಿಸುವಷ್ಟು ಸಮಯ ಮತ್ತು ಬುದ್ದಿವಂತಿಕೆಯನ್ನು ಜನರು ಮುಚ್ಚಿದ ಮನಸ್ಸುಗಳನ್ನು ತೆರೆಯುವ ಪ್ರಯತ್ನಕ್ಕೆ ಬಳಸಿದರೆ ಯಾರೂ ವಂಚಿಸಲಾಗುವುದಿಲ್ಲ…
ಅಲ್ವಾ?
- ಸುದರ್ಶನ್ ಪ್ರಸಾದ್
