ಬಾಳೆಂದರೆ ಬೇವು ಬೆಲ್ಲಗಳ ಸಮನ್ವಯ ಎಂದು ಸಾರುವ ಹಬ್ಬ ಯುಗಾದಿಯನ್ನು ಬಿಟ್ಟರೆ ಇನ್ನೊಂದು ಇಲ್ಲ. ಎಲ್ಲರಿಗೂ ಯುಗಾದಿಯ ಶುಭಾಶಯಗಳು – ರಘುನಾಥ್. ಕೆ, ತಪ್ಪದೆ ಮುಂದೆ ಓದಿ…
ಯುಗಾದಿ ಎಂದರೆ ಐದು ದಶಕದ ಹಿಂದೆ ನನ್ನ ಮನಸು ಓಡುತ್ತದೆ. ಆಗ ನಾವಿನ್ನೂ ಚಿಕ್ಕವರು. ನಮಗೆ ಯುಗಾದಿ ಎಂದರೆ ವರ್ಷಕ್ಕೊಮ್ಮೆ ಸಿಗುವ ಹೊಸ ಬಟ್ಟೆ ಹಾಕಿಕೊಂಡು ಮೆರೆಯುವ ಸಂಭ್ರಮ. ಜೊತೆ ಜೊತೆಗೆ ಅಮ್ಮ ಒಲೆಯ ಮುಂದೆ ಕುಳಿತು ಬಿಸಿ ಬಿಸಿ ಹೋಳಿಗೆ ಮಾಡಿ ತಟ್ಟೆ ಹಿಡಿದು ಕಾಯುತ್ತಿದ್ದ ನಮಗೆ ಹಾಕಿ, ಅದರ ಮೇಲೆ ಮಿಳ್ಳೆ ತುಪ್ಪ ಹಾಕಿ ,ಅದನ್ನು ತಿನ್ನುವ ನಮ್ಮನ್ನು ನೋಡಿ ಸಂತೋಷ ಪಡುತ್ತಿದ್ದರು. ಆದರೆ ಹೋಳಿಗೆ ಸಿಗುವ ಮೊದಲು ನಾವೆಲ್ಲರೂ ಸ್ನಾನ ಮಾಡಿ ಅಪ್ಪ ಮಾಡುತ್ತಾ ಇದ್ದ ಪೂಜೆ ಮುಗಿಯಲು ಕಾದು, ಅವರು ಪ್ರಸಾದ ಎಂದು ಕೊಡುತ್ತಿದ್ದ ಬೇವು ಬೆಲ್ಲವನ್ನು ತಿನ್ನಬೇಕಿತ್ತು. ನಾವು ಆ ಕಡೆ ಈ ಕಡೆ ನೋಡುತ್ತಾ ಮೆಲ್ಲನೆ ಬೇವನ್ನು ಅತ್ತ ಸರಿಸಿ ಬೆಲ್ಲವನ್ನು ಮಾತ್ರ ಹೊಟ್ಟೆಗೆ ಸೇರಿಸುತ್ತಿದ್ದೆವು.
ನಮ್ಮ ಶಾಲೆ ಮುಗಿಸಿ ಪ್ರೌಢ ಶಿಕ್ಷಣಕ್ಕೆ ಕಾಲಿರಿಸಿದ ನಂತರ, ಕನ್ನಡ ಪಠ್ಯದಲ್ಲಿ ಬೇಂದ್ರೆಯವರ ಯುಗಾದಿ ಪದ್ಯವನ್ನು ನೋಡಿ ಆಶ್ಚರ್ಯವಾಯಿತು. ನಾವು ಮಾಡುವ ಯುಗಾದಿ ಕವಿಗೆ ಹೇಗೆ ಗೊತ್ತಾಯಿತು ಎಂದು.ಅದರಲ್ಲಿ ” ಯುಗಾದಿ ಮತ್ತೆ ಮತ್ತೆ ಬರುತಿದೆ ನಮ್ಮನಷ್ಟೆ ಮರೆತಿದೆ,” ಎಂದು ಬರೆದದ್ದು ಓದಿದ ನನಗೆ ದಿಗ್ಭ್ರಮೆ ಮೂಡಿಸಿತು. ಅದು ಮರೆಯಲು ಬಿಡಬೇಕಲ್ಲ. ಪ್ರತಿ ವರ್ಷ ಬೇವು ಬೆಲ್ಲ ಹೋಳಿಗೆ ತಿಂದು ಅದನ್ನು ಆಚರಿಸುತ್ತಲೇ ಇರುವಾಗ ಹೀಗೆ ಏಕೆ ಬರೆದಿದ್ದಾರೆ. ಅದರಲ್ಲೂ ಅವರ’ ಬೇವಿನ ಕಹಿ ಬಾಳಿನಲ್ಲಿ ‘ ಎಂದು ಓದಿದ ಮೇಲೆ ಇವರಿಗೆ ನಮ್ಮಂತೆ ಬೇವನ್ನು ಅತ್ತ ಸರಿಸಿ ಬೆಲ್ಲ ಮಾತ್ರ ಮೆಲ್ಲುವ ನಮ್ಮ ತಂತ್ರ ಗೊತ್ತಿಲ್ಲ ಎಂದು ಖಾತ್ರಿಯಾಯಿತು… ಇಲ್ಲವೇ ವಚನಕಾರರ ” ಅಧರಕ್ಕೆ ಕಹಿ ಉದರಕ್ಕೆ ಸಿಹಿ” ಎಂಬುದನ್ನು ಇವರು ಆಗಲೇ ಸಾಕ್ಷಾತ್ಕಾರ ಮಾಡಿಕೊಂಡು ಬಿಟ್ಟಿದ್ದಾರೆ ಎಂದು ಹೊಟ್ಟೆ ಕಿಚ್ಚು ಕೂಡ ಆಯಿತು. ಯಾಕೆಂದರೆ ಯಾವುದು ಅಧರಕ್ಕೆ ಕಹಿಯಾಗಿ ಇರುತ್ತದೋ ಅದು ಮಾತ್ರ ಉದರಕ್ಕೆ ಸಿಹಿ ಎಂಬ ಅರಿವು ಸಾಮಾನ್ಯರಾದ ನಮ್ಮ ಗ್ರಹಿಕೆಗೆ ಅಷ್ಟು ಸುಲಭವಾಗಿ ದಕ್ಕುವುದಿಲ್ಲ. ನಾವು ನಾಲಿಗೆಯ ಚಾಪಲ್ಯಕ್ಕೆ ಒಳಗಾಗಿ ಸಿಹಿಯ ಬೆನ್ನು ಹತ್ತಿ ಕಡೆಗೆ ನಾನಾ ಬಗೆಯ ರೋಗಗಳಿಗೆ ತುತ್ತಾಗಿ ನಾವು ನರಳುತ್ತಾ ಜೊತೆಯಲ್ಲಿ ಇರುವವರನ್ನು ನರಳಿಸುತ್ತೇವೆ.
ವ್ಯಕ್ತಿಯ ಮತ್ತು ಲೋಕದ ಸ್ವಾಸ್ಥ್ಯಕ್ಕೆ ಸಿಹಿಗಿಂತ ಕಹಿ ಬಹಳ ಮುಖ್ಯ ಎಂಬ ಅರಿವು ಮೂಡುವ ವೇಳೆಗೆ ನಮ್ಮ ಬದುಕೇ ಮುಗಿದು ಹೋಗುತ್ತದೆ.ಆದ್ದರಿಂದ ಬೇವನ್ನು ಸವಿಯುವುದು ಬೆಲ್ಲವನ್ನು. ಸವಿಯುವುದಕ್ಕಿಂತ ಹೆಚ್ಚು ಹಿತಕರ. ನಮ್ಮ ಹಿರಿಯರು ಅದಕ್ಕಾಗಿಯೇ ಮೊದಲು ಬೇವು ಎಂದರು . ಮತ್ತು ಅದನ್ನು ತಿಂದು ಜೀರ್ಣಿಸಿಕೊಂಡ ಅವರು ಹೆಚ್ಚು ಕಾಲ ಸ್ವಾಸ್ಥ್ಯದಿಂದ ಬದಕಿದರು. ನಾವು?
- ರಘುನಾಥ್. ಕೆ
