– ಹೂಲಿಶೇಖರ
ಇದು ೧೯೭೮ ರ ನೆನಪು. ಅಕ್ಟೊಬರ ಅಥವಾ ನವೆಂಬರ್ ತಿಂಗಳಿರಬಹುದು. ಅವತ್ತು ದೆಹಲಿಯಲ್ಲಿದ್ದ ನಾವು ಭಾರತದ ಉಪರಾಷ್ಟ್ರಪತಿಗಳನ್ನು ಭೇಟಿಯಾಗಲು ಅತ್ಯಂತ ಕಾತರದಿಂದ ಕಾಯುತ್ತಿದ್ದೆವು. ೫೦ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲೆಂದು ಉ.ಕ.ಜಿಲ್ಲೆಯ ಅಂಬಿಕಾನಗರದಿಂದ ದೆಹಲಿಗೆ ಹೋಗಿದ್ದ ನಮಗೆ ಮಾನ್ಯ ಶ್ರೀ ಬಿ.ಡಿ.ಜತ್ತಿಯವರನ್ನು ಭೇಟಿಯಾಗುವ ಬಯಕೆಯಾಗಿತ್ತು. ಅದರ ಬಗ್ಗೆ ಪ್ರಯತ್ಸಿಸಿದೆವು. ನಮಗೆ ಪರಿಚಯವಿದ್ದ ಮೆಸರ್ಸ್‌ರೋಡಿಯೋ ಹಜರತ್ ಕಂಪನಿಯ ಬ್ರಹ್ಮದೇವ ಮುಖರ್ಜಿಯವರ ಮೂಲಕ ಪ್ರಯತ್ನಿಸಿದ್ದೆವು. ಅದಕ್ಕಾಗಿ ನಮ್ಮ ಸಂಪೂರ್ಣ ಮಾಹಿತಿಗಳನ್ನು ಅವರ ಮೂಲಕ ಉಪರಾಷ್ಟ್ರಪತಿಗಳ ಕಚೇರಿಗೆ ತಲುಪಿಸಿದ್ದೆವು. ವಾಪಸು ಊರಿಗೆ ಹೋಗುವುದರೊಳಗೆ ಅವರ ಭೇಟಿ ಸಾಧ್ಯವಾಗುತ್ತದೋ ಇಲ್ಲೋ ಎಂದು ಅರ್ಧ ನಿರಾಸೆಯಲ್ಲೇ ಇದ್ದೆವು.
ಕೊನೆಗೂ ಬ್ರಹ್ಮದೇವ ಮುಖರ್ಜಿಯವರಿಂದ ಫೋನು ಬಂತು. ನಾಳೆ ಬೆಳಿಗ್ಗೆ ಹನ್ನೊಂದು ಗಂಟೆಗೆ ಭಾರತದ ಉಪರಾಷ್ಟ್ರಪತಿ ಗಳನ್ನು ನೀವು ಭೇಟಿಯಾಗಬಹುದು ಎಂದು ಅವರ ಕಚೇರಿಯಿಂದ ಸಂದೇಶ ಬಂದಿದೆ ಅಂದಾಗ ನಮ್ಮ ಗೆಳೆಯರ ಗುಂಪಿಗೆ ಸಂತೋಷವೋ ಸಂತೋಷ. ಎಲ್ಲರಿಗೂ ಖುಶಿಯಾಯಿತು. ಬೆಳಗಾಗುವುದನ್ನೇ ಕಾಯುತ್ತ ಕುಳಿತೆವು.
ಆಗ ನಾವು ತಂಗಿದ್ದು ದೆಹಲಿಯ ದಕ್ಷಿಣ ಭಾಗದ ಗ್ರೇಟರ್ ಕೈಲಾಸ್ ನ ಹೊಟೆಲೊಂದರಲ್ಲಿ. ಪ್ರಖ್ಯಾತ ಕನ್ನಡ ಕವಿಗಳಾಗಿದ್ದ ಡಾ. ಜಿ.ಪಿ.ರಾಜರತ್ನಂ ಅವರು ಅಂದಿನ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿದ್ದರು. ಸಮ್ಮೇಳನದ ಸವಿನೆನಪಿನೊಂದಿಗೆ ಅವತ್ತು ಉಪರಾಷ್ಟ್ರಪತಿಗಳಾಗಿದ್ದವರೂ ಕನ್ನಡಿಗರು ಎಂಬ ಹೆಮ್ಮೆ ನಮಗಾಗಿತ್ತು. ಆಗ ಪ್ರಧಾನ ಮಂತ್ರಿಗಳಾಗಿದ್ದವರು ಶ್ರೀ ಮುರಾರಜಿ ದೇಸಾಯಿಯವರು. ಹಿಂದೆ ನಮ್ಮ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಶ್ರೀ ಬಿ.ಡಿ.ಜತ್ತಿಯವರೇ ಅಂದಿನ ಉಪರಾಷ್ಟ್ರಪತಿಗಳ ಪೀಠ ಅಲಂಕರಿಸಿದ್ದರು.
ನನಗಾದ ಅದಕ್ಕೂ ಹೆಚ್ಚಿನ ಸಂತೋಷವೆಂದರೆ ೧೯೬೩-೬೪ ರಲ್ಲಿ ನಾನು ನನ್ನೂರು ಹೂಲಿಯಲ್ಲಿ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದೆ. ಆಗ ನಮ್ಮೂರಿಗೆ ಆಗಾಗ ಬರುತ್ತಿದ್ದ ಮಾನ್ಯ ಶ್ರೀ ಬಿ.ಡಿ ಜತ್ತಿಯವರನ್ನು ಅನೇಕ ಬಾರಿ ನಮ್ಮೂರಲ್ಲಿಯೇ ದೂರದಿಂದ ನೋಡಿದ್ದೆ. ಆಗ ಮಾನ್ಯ ಜತ್ತಿಯವರು ನಮ್ಮೂರಿನ ಸ್ವಾತಂತ್ರ. ಹೋರಾಟಗಾರರಾಗಿದ್ದ ಶ್ರೀ ಹೂಲಿ ವೆಂಕರೆಡ್ಡಿಯವರನ್ನು ಭೇಟಿಯಾಗಲು ಬರುತ್ತಿದ್ದರು. ವೆಂಕರಡ್ಡಿಯವರು ಮತ್ತು ಜತ್ತಿಯವರು ಸಂಬಂಧಿಕರೇನೂ ಇಲ್ಲ. ಜಾತಿಷ್ಟರೂ ಅಲ್ಲ. ಆದರೂ ಬರುತ್ತಿದ್ದರು. ಯಾಕೆ ಬರುತ್ತಿದ್ದರು ಎಂದು ಹುಡುಗರಾದ ನಮಗೆ ಗೊತ್ತಿರಲಿಲ್ಲ.
ಆಗ ನಮ್ಮೂರಿಗೆ ರಾಜ ರಸ್ತೆಯಂದರೆ ಎಂಟಡಿ ಅಗಲದ ಕಿತ್ತೋದ ಟಾರು ರಸ್ತೆ. ಅದು ಸವದತ್ತಿಯಿಂದ ಆರಂಭವಾಗಿ ರಾಮದುರ್ಗಕ್ಕೆ ಹೋಗಿ, ಅಲ್ಲಿಂದ ಲೋಕಾಪೂರ-ಮುಧೋಳ ಮೂಲಕ ಹಾಯ್ದು ಜಮಖಂಡಿಗೆ ಹೋಗುತ್ತಿತ್ತು. ಅಲ್ಲಿಂದ ಮುಂದೆ ಎಲ್ಲಿಗೆ ಹೋಗುತ್ತಿತ್ತೆಂದು ಗೊತ್ತಿರಲಿಲ್ಲ. ಜಮಖಂಡಿ-ಧಾರವಾಡ ಎಂದು ಬೋರ್ಡು ಅಂಟಿಸಿಕೊಂಡಿದ್ದ ಒಂದು ಕೆಂಪು ಬಸ್ಸು ದಿನಕ್ಕೊಮ್ಮೆ ನಮ್ಮ ಊರ ಮೇಲೆಯೇ ಹಾದು ಹೋಗುತ್ತಿತ್ತು. ಆಗ ಟ್ರಾಕ್ಟರುಗಳಾಗಲೀ, ಮೋಟರುಗಳಾಗಲಿ ಇರಲಿಲ್ಲ. ಬೈಕು ಸ್ಕೂಟರುಗಳಂತೂ ಇರಲೇ ಇಲ್ಲ. ಚಕ್ಕಡಿಗಳು ಓಡಾಡುವ ರಸ್ತೆಅದಾಗಿತ್ತು. ಈ ಕಚ್ಚಾ ರಸ್ತೆಗೆ ಜಲ್ಲಿ ಹಾಕಿದ್ದು ನಾನು ಹುಟ್ಟುವ ಮುಂಚೆಯೇ ಎಂದು ಅಪ್ಪ ಹೇಳುತ್ತಿದ್ದ. ಇದರ ಹೆಚ್ಚಿನ ಭಾಗ ತಗ್ಗು ದಿನ್ನೆಗಳ ಮಣ್ಣ ರಸ್ತೆಯೂ ಅದಕ್ಕೆ ಜೋಡಣೆಯಾಗಿತ್ತು.
ಆ ರಸ್ತೆಯಲ್ಲಿಯೇ ಧೂಳೆಬ್ಬಿಸುತ್ತ ಸರಕಾರಿ ಕೆಂಪು ಲೈಟಿನ ಅಂಬಾಸಡಾರ್ ಕಾರ್‌ನಲ್ಲಿ ಜತ್ತಿಯವರು ಬರುತ್ತಿದ್ದರು. ಅವರು ಬರುವ ಹಿಂದಿನ ದಿನ ಊರಿನ ಪ್ರಮುಖರಾದ ಶ್ರೀ ರಂಗಪ್ಪ ಚಿಕರಡ್ಡಿ, ಗೋವಿಂದ ರಡ್ಡಿ ತಿಮ್ಮಾಪೂರ ಅವರು ಶಾಲೆಯ ಹೆಡ್ ಮಾಸ್ತರ ನಿವೃತ್ತಿಯ ಅಂಚಿನಲ್ಲಿದ್ದ ಶ್ರೀ ಸತ್ಯಪ್ಪನವರಿಗೆ ಸುದ್ದಿ ಮುಟ್ಟಿಸುತ್ತಿದ್ದರು. ನಮ್ಮದು ನೂರು ವರ್ಷ ಹಿಂದಿನ ಸರಕಾರಿ ಶಾಲೆ. ಶ್ರೀ ಜತ್ತಿಯವರು ಬರುವ ಹೊತ್ತಿಗೆ ನಮ್ಮ ಸಾಲೆಯ ಮಾಸ್ತರರು ಹುಡುಗರನ್ನೆಲ್ಲ ಸೇರಿಸಿ, ರಸ್ತೆ ಬದಿ ಎರಡು ಸಾಲಿನಲ್ಲಿ ನಿಲ್ಲಿಸಿ ಸ್ವಾಗತ ಹಾಡು ಹೇಳಿಸುತ್ತಿದ್ದರು. ಮಕ್ಕಳೆಲ್ಲ ಖಾದಿ ಟೋಪಿ, ಬಿಳೀ ಅಂಗಿ, ಖಾಕೀ ಅರ್ಧ ಪ್ಯಾಂಟು ಧರಿಸುವುದು ಕಡ್ಡಾಯವಾಗಿತ್ತು. ಹಾಗೆಯೇ ನಮ್ಮ ಶಿಕ್ಷಕರೆಲ್ಲರೂ ಟೋಪಿ, ಬಿಳೀ ಜುಬ್ಬ,ಮತ್ತು ಧೋತರ ಧರಿಸುತ್ತಿದ್ದರು. ಅದು ಅವತ್ತಿನ ಶಾಲೆ.
ಅತಿಥಿಗಳ ಕಾರು ಬರುತ್ತಲೂ ಸ್ವಾಗತವು ನಿಮಗೆ ನಮ್ಮೂರು ಹೂಲಿಗೆ, ಎಂದು ಎಲ್ಲರೂ ಹಾಡುತ್ತಿದ್ದೆವು. ಸಾಲಾಗಿ ನಿಂತ ಹುಡುಗರ ಸಾಲನ್ನು ನೋಡಿ ಜತ್ತಿಯವರು ಕೈ ಬೀಸುತ್ತ ಮುಂದೆ ಸಾಗುತ್ತಿದ್ದರು. ಹಣೆ ತುಂಬ ವಿಭೂತಿ, ತಲೆಯ ಮೇಲೊಂದು ನೀಟಾದ ಖಾದೀ ಟೊಪ್ಪಿಗೆ. ಖಾದೀ ಕಚ್ಚೆ ಧೋತರ, ನೆಹ್ರೂ ಅಂಗಿ, ಮೇಲೊಂದು ಜಾಕೀಟು. ನೋಡಲು ಕುಳ್ಳ ವ್ಯಕ್ತಿ. ಜತ್ತಿಯವರು ಯಾವ ಸ್ಥಾನದಲ್ಲಿದ್ದರೆಂದು ನಮಗೆ ಆಗ ಸರಿಯಾಗಿ ಗೊತ್ತಿರಲಿಲ್ಲ. ಆದರೆ ಅವರು ಜಮಖಂಡಿಯವರೆಂದು ಮಾತ್ರ ಗೊತ್ತಿತ್ತು. ಜಮಖಂಡಿಗೂ ನಮ್ಮೂರಿಗೂ ಹತ್ತಿರದ ದಾರಿಯೇ.
ಜತ್ತಿಯವರ ಕಾರು ನಮ್ಮನ್ನು ದಾಟಿಕೊಂಡು ಮುಂದೆ ಹೋಗುತ್ತಿತ್ತು. ಹುಡುಗರಾಗಿದ್ದ ನಾವು ಕಣ್ಣು ಬಿಟ್ಟು ನೋಡುತ್ತಿದ್ದೆವು. ಅವರ ಕಾರಿನ ಮುಂದೆ ಇದ್ದ ಗೂಟಕ್ಕೆ ಸಿಕ್ಕಿಸಿದ್ದ ಪುಟ್ಟ ರಾಷ್ಟ್ರ ಧ್ವಜ ಪಟಪಟ ಹಾರಾಡುತ್ತಿತ್ತು. ಆಗ ಅವರೆಷ್ಟು ದೊಡ್ಡವರೆಂದು ನಮಗೆ ಗೊತ್ತಿರಲಿಲ್ಲ. ಅವರಕ್ಕಿಂತ ಅವರ ಗೂಟದ ಕಾರು ಮತ್ತು ಅದರ ಹಿಂದೆಯೇ ಬರುತ್ತಿದ್ದ ಪೋಲೀಸರ ಜೀಪು ನೋಡುವುದರಲ್ಲೇ ಬಾಲಕರಾಗಿದ್ದ ನಮಗೆ ಕುತೂಹಲ.
ಶ್ರೀ ವೆಂಕರಡ್ಡಿ ಹೂಲಿಯವರು
ನಮ್ಮೂರಿನ ಶ್ರೀ ಹೂಲಿ ವೆಂಕರಡ್ಡಿಯವರು ಜತ್ತಿಯವರಿಗಿಂತಲೂ ವಯಸ್ಸಿನಲ್ಲಿ ಹಿರಿಯರಾಗಿದ್ದವರು. ಅವರ ಬಗ್ಗೆ ಮನೆಯಲ್ಲಿ ಅಪ್ಪ ನಮಗೆ ಸಾಕಷ್ಟು ಹೇಳಿದ್ದರು. ಅವರು ಗಾಂಧೀಜಿಯವರ ಜತೆಗೆ ಜೈಲಿನಲ್ಲಿದ್ದರಂತೆ. ನಲವತ್ತೆರಡರ ಹೋರಾಟದಲ್ಲಿ ಅವರ ಜತೆ ಅಪ್ಪನೂ ಮೂರು ತಿಂಗಳು ಹಿಂಡಲಗಾ ಜೈಲಿನಲ್ಲಿದ್ದರಂತೆ. ಅದಕ್ಕೇ ಅಪ್ಪನಿಗೆ ವೆಂಕರಡ್ಡಿ ಹೂಲಿಯವರೆಂದರೆ ಅಪ್ಪಟ ಪ್ರೀತಿ. ನಾವು ದಿನ ನಿತ್ಯ ಪಾಟೀ ಚೀಲ ಹಿಡಿದು ಶಾಲೆಗೆ ಹೋಗುತ್ತಿದ್ದಾಗ ಊರಿನ ಝಂಡಾ ಕಟ್ಟೆಯ ಬಳಿ ಕೂತು ನಮ್ಮತ್ತ ಕೈ ಬೀಸುತ್ತಿದ್ದ ಕೆಂಪು ಬಣ್ಣದ ಮುದುಕರೇ ವೆಂಕರಡ್ಡಿ ಹೂಲಿಯವರಾಗಿದ್ದರು. ಅವರಿಗೆ ನನ್ನ ಅಪ್ಪನಕ್ಕಿಂತಲೂ ಹೆಚ್ಚು ವಯಸ್ಸಾಗಿತ್ತು. ಸದಾ ನಗು ಮುಖ. ನೋಡಲು ಥೇಟ್ ಫೋಟೋದಲ್ಲಿದ್ದ ಗಾಂಧೀಜಿಯವರ ಹಾಗೆಯೇ ಕಾಣುತ್ತಿದ್ದರು. ಹಣೆಗೆ ಕುಂಕುಮದ ಬೊಟ್ಟಿನ ಜತೆ ಒಂದೆರಡು ಅಕ್ಷತೆ ಕಾಳುಗಳು ಅಂಟಿಕೊಂಡಿರುತ್ತಿದ್ದವು. ಅವರು ಯಾವಾಗಲೂ ಖಾದೀಧಾರಿಯಾಗಿರುತ್ತಿದ್ದರು.
ಅವರ ಹೆಂಡತಿಯನ್ನೂ ನೋಡಿದ್ದೇನೆ. ಎಪ್ಪರ ವಯಸ್ಸು ದಾಟಿದ್ದ ಅವರೂ ಖಾದೀ ಸೀರೆ ಉಟ್ಟು ಮನೆಯ ಹೊರಬಾಗಿಲ ಬಳಿ ಕೂತದ್ದನ್ನು ಅನೇಕ ಸಲ ನೋಡಿದ್ದೇನೆ. ವೆಂಕರಡ್ಡಿಯವರು ನಮ್ಮೂರಿನ ಮಹಾತ್ಮಾ ಗಾಂಧೀ ಅಜ್ಜನೇ ಆಗಿದ್ದರು. ಊರಿನ ಎಲ್ಲರೂ ಅವರೆಂದರೆ ಭಕ್ತಿ. ಎಲ್ಲರೂ ಅವರಿಗೆ ದೊಡ್ಡ ಮರ್ಯಾದೆ ಕೊಡುತ್ತಿದ್ದರು. ಜತ್ತಿಯವರಿಗೆ ಆಗಿನಿಂದ ರಾಜಕೀಯ ಮಾರ್ಗದರ್ಶನ ಮಾಡುತ್ತಿದ್ದರು.
ಶ್ರೀ ಜತ್ತಿಯವರೊಂದಿಗೆ ಶ್ರೀ ವೆಂಕರೆಡ್ಡಿ ಹೂಲಿಯವರು ಮತ್ತ್ತು ಊರಿನ ಗಣ್ಯರು
ಕೊನೆ ಕೊನೆಗೆ ವೆಂಕರಡ್ಡಿಯವರು ನಿರ್ಲಿಪ್ತ ಭಾವ ತಾಳಿದರು. ಫಂಡರಪುರ ವರದಾ ಪುಂಡಲೀಕನ ಭಕ್ತರಾದರು. ಅದರಿಂದ ಊರಿಗೆ ಬೆಳಗಾವಿ, ಕೊಲ್ಹಾಪುರ ಕಡೆಯಿಂದ ದಿಂಡೀ ಭಜನಾ ಮೇಳಗಳೂ ಬರತೊಡಗಿದವು. ಅದರಿಂದ ಊರಲ್ಲಿ ದಿಂಡೀ ಸಂತರು ಹೆಚ್ಚಾದರು. ಎಲ್ಲರೂ ತುಳಸಿ ಮಾಲೆ ಹಾಕಿಕೊಂಡರು. ಸಂತ ತುಕಾರಾಮ್ ರ ಅಭಂಗಗಳನ್ನು ಹಾಡುತ್ತ ನಿತ್ಯ ಭಜನೆ ಮಾಡತೊಡಗಿದರು.ಇವರಿಗೆಲ್ಲ ವೆಕರಡ್ಡಿಯವರೇ ಮಾರ್ಗದರ್ಶಕರು.
ದೇಶಕ್ಕೆ ಸ್ವಾತಂತ್ರ್ಯ ಬಂತು. ಅಧಿಕಾರದ ಗುಲಾಮತನ ಬೇಡ. ಈ ಪಕ್ಷ ರಾಜಕೀಯ, ಅಧಿಕಾರ ರಾಜಕೀಯ ಬೇಕೆಂದು ನಾನು ಚಳುವಳಿಗೆ ಇಳಿಯಲಿಲ್ಲ. ಗಾಂಧೀಜಿಯವರು ಕೂಡ ಸ್ವಾತಂತ್ರ್ಯ ಬಂದ ಕೂಡಲೇ ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸಬೇಕು ಅಂದಿದ್ದರು. ಆದರೆ ಆನಂತರದ ಸ್ವಾತಂತ್ರ್ಯ ಹೋರಾಟಗಾರರು ಅಧಿಕಾರದ ಅಮಲಿಗೆ ಬಿದ್ದರು ಎಂದು ವ್ಯಥೆ ಪಡುತ್ತಿದ್ದರು. ಅಪ್ಪಟ ಕಾಂಗ್ರೆಸ್ಸಿಗರಾದ ಮತ್ತು ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರಾದ ವೆಂಕರಡ್ಡಿಯವರು ಸ್ವಾತಂತ್ರ್ಯಾ ನಂತರ ಊರಿನ ಝಂಡಾ ಕಟ್ಟೆ ಹಿಡಿದು ಕೂತು ಬಿಟ್ಟರು.
ಅವರು ನಲವತ್ತೇಳರ ನಂತರ ಪ್ರದೇಶ ಕಾಂಗ್ರೆಸ್ ಕಮೀಟಿಯಲ್ಲೂ ಇದ್ದರು. ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರೂ ಆಗಿದ್ದರು. ಆಗ ಜಿಲ್ಲೆಯಲ್ಲಿ ಇವರನ್ನು ಕೇಳದೆ ಯಾರಿಗೂ ಯಾವುದೇ ಚುನಾವಣಾ ತಿಕೀಟು ಸಿಗುತ್ತಿರಲಿಲ್ಲ. ಆದರೆ ತಾವು ಮಾತ್ರ ಅಧಿಕಾರದ ಬೆನ್ನು ಹತ್ತಲೇ ಇಲ್ಲ. ಜತ್ತಿಯವರ ಪ್ರಾಮಾಣಿಕತೆಯನ್ನು ಮನಗಂಡಿದ್ದ ವೆಂಕರಡ್ಡಿಯವರು ಅವರ ಬಗ್ಗೆ ಸಡಿಲು ಮನೋಭಾವ ತಳೆದಿದ್ದರು. ವೆಂಕರಡ್ಡಿಯವರ ನೆನಪಿಗೆ ಹೂಲಿಯಲ್ಲಿ ಹರಿಮಂದಿರವೊಂದು ನಿರ್ಮಾಣವಾಯಿತು. ಹೂಲಿ ಮಠದ ಅಜ್ಜನವರು ಮುಂದೆ ನಿಂತು ಆ ಕಾರ್ಯ ಮಾಡಿದರು. ಅಲ್ಲಿ ಈಗ ವೆಕರಡ್ಡಿಯವರ ಪುತ್ಥಳಿವೊಂದನ್ನು ಸ್ಥಾಪಿಸಲಾಗಿದೆ. ಹೀಗೆ ಒಂದೊಂದೇ ಸಂಗತಿಗಳು ನೆನಪಾಗತೊಡಗಿದವು.
ಹಿಂದಿರುಗಿ ನೊಡಲಿಲ್ಲ ಈ ಜಟ್ಟಿ
ಸ್ವಾತಂತ್ರ್ಯಾದ ನಂತರ ಜತ್ತಿಯವರು ಅಧಿಕಾರದ ಹಂತ ಏರುತ್ತ ಹೋದರು. ಮರುದಿನ ಬೆಳಿಗ್ಗೆ ಬೇಗ ಎದ್ದ ನಾವು ಉಪರಾಷ್ಟ್ರಪತಿಗಳ ನಿವಾಸದತ್ತ ಹೊರಟೆವು. ಬ್ರಹ್ಮದೇವ ಮುಖರ್ಜಿಯವರು ನಮಗೆ ಕಾರಿನ ವ್ಯವಸ್ಥೆ ಮಾಡಿದ್ದರು. ಅನೂಪಸಿಂಗ್ ಚವ್ಹಾಣ ಎಂಬ ಡ್ರೈವರ್ ನಮ್ಮನ್ನು ಉಪರಾಷ್ಟ್ರಪತಿಗಳ ನಿವಾಸದೆದುರು ಕರೆ ತಂದಾಗ ಆಗ ಹತ್ತು ಗಂಟೆ. ಸೆಕ್ಯೂರಿಟಿಯವರು ನಮ್ಮನ್ನು ಅಮೂಲಾಗ್ರ ಪರಿಶೀಲಿಸಿ ಹೆಬ್ಬಟ್ಟು ಸಹಿ ಮಾಡಿಸಿಕೊಂಡು ಒಳಗೆ ಕರೆದೊಯ್ದು ಅಲ್ಲಿದ್ದ ಸಂದರ್ಶಕರ ಕೊಠಡಿಯ ಸೋಫಾದಲ್ಲಿ ಕೂಡಿಸಿದರು. ಸಾಬ್ ಆಯೇಂಗೆ ಬೈಠೋ ಎಂದು ಹೇಳಿ ಚಹಾ ಸರಬರಾಜೂ ಮಾಡಿದರು. ಕಚೇರಿಯ ಒಬ್ಬ ಫೋಟೋಗ್ರಾಫರ್ ಹತ್ತಿರ ಬಂದು ನಿಂತರು. ನಾವು ವಿಶಾಲವಾದ ರಾಷ್ಟ್ರಪತಿ ಭವನದ ಅಂಗವೇ ಆಗಿದ್ದ ಆ ಕಟ್ಟಡವನ್ನು ವಿಸ್ಮಯದಿಂದ ನೋಡುತ್ತಿದ್ದೆವು. ನಾವು ಕೂತಿದ್ದ ಎದುರಿನ ದೊಡ್ಡ ಖುರ್ಚಿಯಲ್ಲಿ ಸಾಹೇಬರು ಬಂದು ಕೂಡುತ್ತಾರೆಂದು ಹೇಳಿದರು. ಸಿಂಹಾಸನದಂತ ದೊಡ್ಡ ಖುರ್ಚಿ. ಅದರ ಪಕ್ಕದಲ್ಲಿ ಬಸವಣ್ಣನವರ ದೊಡ್ಡ ಕಂಚಿನ ಮೂರ್ತಿ. ಅದಕ್ಕೆ ಅವತ್ತೇ ಹಾಕಿದ್ದ ಹೂ ಮಾಲೆ. ಹಿಂದೀ ನಾಡಿನ ದೆಹಲಿಗೂ ಬಸವಣ್ಣನವರ ಮೂರ್ತಿ ತಂದು ಅದನ್ನು ತಮ್ಮ ತಲೆಯೆತ್ತರದ ಪೀಠದಲ್ಲಿಟ್ಟುಕೊಳ್ಳುತ್ತಿದ್ದ ಮಾನ್ಯ ಜತ್ತಿಯವರ ಬಗ್ಗೆ ಅಭಿಮಾನವೆನಿಸಿತು. ನನಗೆ ಮತ್ತೆ ವೆಂಕರಡ್ಡಿ ಹೂಲಿ ಯವರು ನೆನಪಾದರು. ಬಿಟಿಷರ ವಿರುದ್ಧ ಚಳುವಳಿ ಮಾಡಿ ಅತ್ಯಧಿಕ ವರ್ಷ ಜೈಲು ಕಂಡ ಆ ಮುದುಕ ಈಗಲೂ ನಮ್ಮೂರಿನ ಝಂಡಾ ಕಟ್ಟೆಯ ಕಲ್ಲು ಹಾಲಿನ ಮೇಲೆ ಕೂತು, ಹೋಗಿ-ಬರುವವರನ್ನು ನೋಡುತ್ತ ಮಾತನಾಡಿಸುತ್ತ ಕೂಡುತ್ತಿದ್ದ ಚಿತ್ರ ಕಣ್ಮುಂದೆ ಬಂತು. ಅವರಿಗಿಂತ ಕಿರಿಯರಾದ ಜತ್ತಿಯವರು ಎಂಥ ಅದೃಷ್ಟವಂತರು ಅಂದುಕೊಂಡೆ ಮನಸ್ಸಿನಲ್ಲಿಯೇ.
ಒಳಗಿಂದ ರಕ್ಷಣಾ ಸಿಬ್ಬಂದಿಯೊಬ್ಬರು ಧಾವಿಸಿ ಬರುತ್ತ ”ಸಾಬ್ ಆ ರಹೇ ಹೈ” ಎನ್ನುತ್ತ ಎದ್ದು ನಿಲ್ಲಲು ಸನ್ನೆ ಮಾಡಿದರು. ನಾವು ಕುತೂಹಲ- ಸಂತೋಷದಿಂದ ಎದ್ದು ನಿಂತೆವು. ಉಪರಾಷ್ಟಪತಿಗಳು ಬಂದರು. ನಮ್ಮೆಲ್ಲರನ್ನು ನೋಡಿ ಕೈಮಿಗಿದರು. ಪ್ರತಿಯಾಗಿ ನಾವೂ ವಂದಿಸಿದೆವು. ಹೌದು ಏನೂ ಫರಕಿಲ್ಲ. ಅದೇ ವಿನಯವಂತ ಸಜ್ಜನ ಮೂರ್ತಿ. ನಾನು ನಾಲ್ಕನೆಯ ಇಯತ್ತೆ ಓದುತ್ತಿದ್ದಾಗ ನೋಡಿದ ಅದೇ ವ್ಯಕ್ತಿ. ಬಂಗಾರ ಎಲ್ಲಿದ್ದರೂ ಬಂಗಾರವೇ ಅನಿಸಿತು.
”ಎಲ್ಲಾರೂ ಕರ್ನಾಟಕದಿಂದ ಬಂದೀರಿ?”
ಪ್ರೀತಿಯಿಂದ ಅವರೇ ಮೊದಲು ಮಾತಾಡಿದರು. ”ಹೌದ್ರಿ ಸರ್… ” ಅಂದ ನಾವು ನಮ್ಮ ಊರುಗಳ ಬಗ್ಗೆ ಹೇಳಿದೆವು. ನನಗೆ ತಡೆಯಲಾಗಲಿಲ್ಲ.
”ನಾನು ಹೂಲಿಯವನು ಸರ್. ತಾವು ನಮ್ಮೂರಿಗೆ ಬರುತ್ತಿದ್ದಿರಿ. ವೆಂಕರಡ್ಡಿ ಅಜ್ಜಾರನ್ನ ನೋಡೂದಕ್ಕ”
ಅಂದಾಗ ಅವರು ಅಕ್ಷರಶಃ ಪುಳಕಿತರಾದರು. ನನ್ನನ್ನು ಪ್ರೀತಿ ಭಾವದಿಂದ ನೋಡಿ ಹೇಳಿದರು.
” ಓಹೋ…ವೆಂಕರಡ್ಡಿ ಹೂಲಿಯವರ ಊರಿನವ್ರ ನೀವು? ನೋಡ್ರಿ. ನಿಮ್ಮೂರಿಗೆ ನಾನು ಅದೆಷ್ಟು ಸಲ ಬಂದೇನಿ. ವೆಂಕರಡ್ಡಿಯವ್ರು ನನ್ನ ರಾಜಕೀಯ ಗುರುಗಳು ನೋಡ್ರಿ. ಅವರಿಂದ ನಾನು ಭಾಳ ಕಲತೇನಿ. ಅವ್ರು ನನಗ ಯಾವತ್ತಿಗೂ ನನಗ ಪೂಜ್ಯರ…”
ಅವರ ಮೃದು ಮಾತುಗಳು, ವಿನೀತ ಭಾವ ನನ್ನನ್ನು ಮೂಕರನ್ನಾಗಿಸಿದವು. ದೇಶದ ಒಂದು ಉನ್ನತ ಹುದ್ದೆಯಲ್ಲಿರುವ ಒಬ್ಬ ನಾಯಕ ತನ್ನ ಸ್ಥಾನದ ಎತ್ತರವನ್ನೂ ಮರೆತು ತನ್ನ ರಾಜಕೀಯ ಗುರುವನ್ನು ನೆನಪಿಸಿಕೊಂಡು ಇನ್ನೊಬ್ಬ ರೆದುರಿಗೆ ಹೇಳುವುದು ಇವತ್ತಿನ ಸಂದರ್ಭದಲ್ಲಿ ಸಣ್ಣ ವಿಷಯವಲ್ಲ. ಇಂದಿನ ರಾಜಕಾರಣಿಗಳ ಬಗ್ಗೆ, ಅವರ ಅಹಂಮಿಕೆಯ ಬಗ್ಗೆ ತಿಳಿದಿದ್ದ ನನಗೆ ಮಾನ್ಯ ಜತ್ತಿಯವರ ಮನಸ್ಸು ಕಂಡು ಅಭಿಮಾನ ಇಮ್ಮಡಿಸಿತು. ಇವತ್ತು ರಾಜಕಾರಣಿಗಳು ಹತ್ತಿದ ಏಣಿಯನ್ನು ಒದೆಯುವುದರಲ್ಲಿ ನಿಸ್ಸೀಮರು. ಸಹಾಯ ಮಾಡಿದವರನ್ನು ನೆನಪಿಸಿಕೊಳ್ಳು ವುದರಲಿ. ಅವರನ್ನು ಮೂಲೆಗುಂಪು ಮಾಡಿ ಸರ್ವನಾಶ ಮಾಡದೆ ಬಿಡುವುದಿಲ್ಲ. ಕೃತಘ್ನ ರಾಜಕಾರಣದಲ್ಲಿ ಜತ್ತಿಯವರಂಥವರು ಅಪರೂಪದ ರತ್ನ.
ಹತ್ತು ನಿಮಿಷ ನಮಗೆ ಸಮಯ ಮೊದಲೇ ನಿಗದಿಯಾಗಿತ್ತು. ಹಾಗಾಗಿ ಭೇಟಿ ಸಂತೋಷಮಯವಾಗಿತ್ತು. ನಂತರ ನಮ್ಮೊಡನೆ ಗ್ರೂಪ್ ಫೋಟೋ ತಗೆಸಿಕೊಂಡು ಬೀಳ್ಕೊಟ್ಟರು. ಅಷ್ಟೇ ಅಲ್ಲ. ಪರವಾಣಿಗೆ ಕೊಡಿಸುತ್ತೇನೆ. ಪಾರ್ಲಿಮೆಂಟ್ ಭವನ ನೋಡಿ ಕೊಂಡು ಹೋಗಿ ಎಂದೂ ಹೇಳಿದರು. ಮತ್ತು ಅದರ ವ್ಯವಸ್ಥೆಯನ್ನೂ ಮಾಡಿದರು. ಮಾರನೇ ದಿನ ಅಲ್ಲಿಗೂ ಹೋದೆವು. ಸಂಸತ್ತು ಭವನದಲ್ಲಿ ನಡೆಯುವ ಕಲಾಪವನ್ನು ಗ್ಯಾಲರಿಯಲ್ಲಿ ಕೂತು ವೀಕ್ಷಿಸಿದೆವು. ಸಜ್ಜನರ ಸಂಗ ಹೆಜ್ಜೇನು ಸವಿದಂತೆ ಎಂಬ ಮಾತು ಅಕ್ಷರಶಃ ಸತ್ಯ ಎಂದು ಮಾನ್ಯ ಶ್ರೀ ಜತ್ತಿಯವರನ್ನು ಕಂಡಾಗ ಅನಿಸಿತು.
ನನಗನಿಸಿತು. ಮನುಷ್ಯ ದೊಡ್ಡವನಾಗುವುದು ಕೇವಲ ಸ್ಥಾನ ಬಲದಿಂದ ಮಾತ್ರ ಅಲ್ಲ. ಸಂಸ್ಕಾರ ಬಲವೂ
ಆತನಿಗಿರಬೇಕು. ಜತ್ತಿಯವರು ಸ್ಥಾನದಲ್ಲೂ ದೊಡ್ಡವರು. ಸಜ್ಜನಿಕೆಯಲ್ಲೂ ದೊಡ್ಡವರು. ಅವರಿಗೆ ಅವರೇ ಸಾಟಿ. ಅವರ
ಸ್ಥಾನ ತುಂಬಬಲ್ಲ ಮತ್ತೊಬ್ಬ ರಾಜಕಾರಿಣಿ ಕರ್ನಾಟಕದಲ್ಲಿ ಮತ್ತೆ ಬರಲೇ ಇಲ್ಲ ಎನ್ನುವುದೇ ವ್ಯಥೆ.
ಕೆಂಗೇರಿ ಹೋಬಳಿ, ವೆಂಕಟಾಪುರದಲ್ಲಿರುವ ಶ್ರೀ ಬಿ ಡಿ ಜಟ್ಟಿಯವರ ಗದ್ದುಗೆ ಸ್ಥಳ
ಮಾನ್ಯ ಬಿ.ಡಿ.ಜತ್ತಿಯವರ ಕಿರು ಪರಿಚಯ.
ಜನನ – ೧೦.೯.೧೯೧೩
ಮರಣ – ೦೭.೬.೨೦೦೨
ಜಮಖಂಡಿ ತಾಲೂಕಿನ ಸಾವಳಗಿಯಲ್ಲಿ.
ಜಮಖಂಡಿಯಲ್ಲಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ. ಮತ್ತು ಕೊಲ್ಹಾಪೂರನಲ್ಲಿ ರಾಜಾರಾಮ ಲಾ ಕಾಲೇಜಿನಲ್ಲಿ ಪದವಿ ಶಿಕ್ಷಣ.
* ಜಮಖಂಡಿಯಲ್ಲಿ ವಕೀಲ ವೃತ್ತಿ ಆರಂಭ. ೧೯೪೦ ರಲ್ಲಿ ರಾಜಕೀಯ ಪ್ರವೇಶ. ಜಮಖಂಡಿ ಮುನಸಿಪಾಲ್ಟಿ ಸದಸ್ಯನಾಗಿ ಆಯ್ಕೆ. ಮುಂದೆ ೧೯೪೫ ರಲ್ಲಿ ಅದೇ ಪುರಸಭೆಯ ಅಧ್ಯಕ್ಷರಾಗಿಯೂ ಆಯ್ಕೆ. ಒಂದೇ ವರ್ಷದಲ್ಲಿ ಜಮಖಂಡಿ ಸಂಸ್ಥಾನದ ಮಹಾರಾಜ ಶಂಕರರಾವ ಪಟವರ್ಧನರ ಮಂತ್ರಿ ಮಂಡಲ ಸೇರ್ಪಡೆ.
* ೧೯೪೮ ರಲ್ಲಿ ಸಂಸ್ಥಾನದ ದಿವಾನರಾಗಿ [ಮುಖ್ಯಮಂತ್ರಿ] ಆಯ್ಕೆ. ಅದೇ ವರ್ಷ ೦೮.೩.೧೯೪೮ ರಲ್ಲಿ ಜಮಖಂಡಿ ಸಂಸ್ಥಾನ ಭಾರತ ಗಣರಾಜ್ಯದಲ್ಲಿ ವಿಲೀನ.
* ೧೯೫೨ ರಲ್ಲಿ ಮುಂಬಯಿ ಸರಕಾರದಲ್ಲಿ ಮುಖ್ಯಮಂತ್ರಿ ಮೊರಾರ್ಜಿ ದೇಸಾಯಿಯವರ ಸಂಪುಟದಲ್ಲಿ ಆರೋಗ್ಯ ಮಂತ್ರಿಯಾಗುತ್ತಾರೆ. ರಾಜ್ಯ ಪುನರ್‌ವಿಂಗಡೆಯಾದ ನಂತರ ಮೈಸೂರು ರಾಜ್ಯದ ವಿಧಾನ ಸಭೆಗೆ ಶಾಸಕರಾಗಿ ಚುನಾಯಿತರಾಗುತ್ತಾರೆ.
* ೧೯೫೮-೬೨ ರ ಅವಧಿಯಲ್ಲಿ ಮೈಸೂರು ರಾಜ್ಯದ ಮುಖ್ಯಮಂತ್ರಿಗಳಾಗುತ್ತಾರೆ.
* ರಾಜ್ಯದ ಲ್ಯಾಂಡ್ ರೀಫಾರ್ಮ ಬೋರ್ಡನ ಚೇರ್ಮನ್‌ರೂ ಆಗುತ್ತಾರೆ.
* ಮುಂದೆ ೧೯೬೩ ರಲ್ಲಿ ನಿಜಲಿಂಗಪ್ಪನವರು ಮುಖ್ಯಮಂತ್ರಿಗಳಾದಾಗ ಅವರ ಸಂಪುಟದಲ್ಲಿ ಹಣಕಾಸು ಸಚಿವರಾಗುತ್ತಾರೆ.
* ೧೯೬೮ ರಲ್ಲಿ ಪುದುಚೇರಿಯ ಗವರ್ನರ್ ಆಗುತ್ತಾರೆ. ಮತ್ತು ೧೯೭೨ ರಲ್ಲಿ ಓಡಿಸಾ ರಾಜ್ಯದ ರಾಜ್ಯಪಾಲರೂ ಆಗುತ್ತಾರೆ.
* ೧೯೭೪- ೧೯೭೯ ರ ಅವಧಿಗೆ ದೇಶದ ಐದನೇ ಉಪರಾಷ್ಟ್ರಪತಿಗಳಾಗಿ ಆಯ್ಕೆಯಾಗುತ್ತಾರೆ.
೧೯೭೭ ರಲ್ಲಿ ರಾಷ್ಟರಪತಿ ಶ್ರೀ ಫಕ್ರುದ್ದೀನ ಅಲಿ ಅಹ್ಮದ್ ಅವರು ಅಕಾಲಿಕವಾಗಿ ನಿಧನರಾದಾಗ ಆರು ತಿಂಗಳು ಹಂಗಾಮಿ ರಾಷ್ಟ್ರಪತಿಯೂ ಆಗುತ್ತಾರೆ.
* ೦೭.೬.೨೦೦೨ ರಂದು ನಿಧನರಾದರು.
ಲೇಖಕರು
– ಹೂಲಿಶೇಖರ
#ನನಪನಸರಳ