ಕೇವಲ ಪುಸ್ತಕದ ಗಿಣಿಪಾಠಗಳಾಗದೆ ಜೀವನಾನುಭೂತಿಯಿಂದ ಮೂಡಿಬಂದವುಗಳಾಗಿದೆ ಎಂಬುದು ಈ ಕೃತಿಯ ಹಿರಿಮೆಯಾಗಿದೆ. “ಯಾರೂ ಅಮುಖ್ಯರಲ್ಲ” ಎಂಬುದನ್ನು, ಮನೆಯ ಸಹಾಯಕಿ ಗಂಗಮ್ಮನಿಗೆ ಕೃತಿಯನ್ನು ಅರ್ಪಿಸಿದ್ದಾರೆ. ಲೇಖಕರಾದ ರಘುನಾಥ್ ಕೃಷ್ಣಮಾಚಾರ್ ಅವರು ಈ ಕೃತಿಯ ಕುರಿತು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…
ಖ್ಯಾತ ಲೇಖಕಿ ಎಂ ಆರ್ ಕಮಲಾ ಅವರಿಗೆ ಆಕೃತಿ ಕನ್ನಡದ ಪರವಾಗಿ ಹುಟ್ಟುಹಬ್ಬದ ಶುಭಾಶಯಗಳು…
ಪುಸ್ತಕ : ಊರ ಬೀದಿಯ ಸುತ್ತು
ಲೇಖಕರು : ಎಂ.ಆರ್.ಕಮಲಾ
ಪ್ರಕಾಶನ: ಕಥನ ಪ್ರಕಾಶನ
ಬೆಲೆ : 175.00
ಪುಟ : 182
ಯಾವುದೂ ಅಮುಖ್ಯವಲ್ಲ ಎನ್ನುವ ಭರತವಾಕ್ಯದಿಂದ ಕೊನೆಯಾಗುವ ಕಮಲಾ ಅವರ ಕೃತಿ ಕೇವಲ ಆ ಪ್ರಬಂಧಕ್ಕೆ ಮಾತ್ರ ಸೀಮಿತವಾಗದೆ , ಅವರ ಕೃತಿಯಲ್ಲಿ ಹಾಸುಹೊಕ್ಕಾಗಿದೆ.ಅದಕ್ಕೆ ನಿದರ್ಶನಗಳು ಎಲ್ಲೆಂದರಲ್ಲಿ ದೊರೆಯುತ್ತವೆ. ಈ ಕೃತಿಯನ್ನು ಓದುವಾಗ ನಾಲ್ಕು ದಶಕಗಳ ಹಿಂದೆ ನಾನು ನೋಡಿದ ಕಮಲಾ ಕಣ್ಮುಂದೆ ಬರುತ್ತಾರೆ. ಆಗಿನ ಅವರ ತರಗತಿಯ ಹೊರಗಿನ ಕ್ರಿಯಾಶೀಲತೆ ನನಗೆ ಬೆರಗನ್ನು ಉಂಟುಮಾಡಿದಂತೆ ಈಗ ಕೂಡ ಅದೇ ಬೆರಗು ನನ್ನ ನ್ನು ಆವರಿಸಿದೆ. ಅದಕ್ಕೆ ನಾನು ಕಂಡುಕೊಂಡ ಕಾರಣಗಳು ಅನೇಕ.ಅವುಗಳಲ್ಲಿ ಕೆಲವನ್ನು ಮಾತ್ರ ಇಲ್ಲಿ ಉಲ್ಲೇಖಿಸುವೆ.
ಅವು:
೧.ಅವರ ನಿರೀಕ್ಷಣ ಸಾಮರ್ಥ್ಯ
೨. ಅವರ ಅಭಿವ್ಯಕ್ತಿ ಸಾಮರ್ಥ್ಯ
೩. ಅವರ ಸ್ಮೃತಿ ಪರಂಪರೆ
೪.ಅವರ ಶ್ರುತಿ ಪರಂಪರೆ
೫. ಸಹ ಅನುಭೂತಿ

೧.ಅವರ ನಿರೀಕ್ಷಣ ಸಾಮರ್ಥ್ಯ:
ಅವರ ನಿರೀಕ್ಷಣ ಸಾಮರ್ಥ್ಯ ಕ್ಕೆ ನಿದರ್ಶನವಾಗಿ ಅವರ ಗಂಡನ ಮಾತಿನಲ್ಲಿ ಹೇಳುವುದಾದರೆ’ ಬೇರೆ ಯಾರಿಗೂ ಕಾಣದ್ದು ನಿನಗೆ ಮಾತ್ರ ಯಾಕೆ ಕಾಣುತ್ತದೆ.? ” ಎಂಬ ಪ್ರಶ್ನೆ ನಮಗೆ ಕೂಡ ಕಾಡುತ್ತದೆ. ನಾವು ದಿನಾಗಲೂ ಅದೆ ಬೀದಿಗಳಲ್ಲಿ ಸುತ್ತಿದರೂ ನಮಗೆ ಕಾಣುವುದಿಲ್ಲ ಏಕೆ.ಅದಕ್ಕೆ ಉತ್ತರ ರವಿ ಕಾಣದ್ದನ್ನು ಕವಿ ಕಂಡ ಎನ್ನುವುದು.ಕಮಲಾ ಸಂವೇದನಾ ಶೀಲ ಕವಿಯೂ ಆದ್ದರಿಂದ ಅವರಿಗೆ ಇಂತಹ ದೃಶ್ಯಗಳೆಲ್ಲಾ ಕಣ್ಣಿಗೆ ಬೀಳತ್ತವೆ. ಬಸಿರು ಹೊತ್ತಿರುವ ನಾಯಿಗಳು, ಹಸಿವಿನಿಂದ, ನೋವಿನಿಂದ ಕಂಗಾಲಾಗಿರುವ, ಪುಟ್ಟ ನಾಯಿಗಳು, ಹುಚ್ಚರು., ಅದಕ್ಕೆ ಅವರು ಒಂದು ಕಡೆ ಹೇಳುವುದು ” ಯಾವ ಪುಸ್ತಕಗಳು ಕಲಿಸದ ಪಾಠಗಳು ಈ ರಸ್ತೆಗಳು ಕಲಿಸುತ್ತವೆ” ಎಂದು. ನಮಗೆ ಬೇಕಾದ್ದು ಕಲಿತುಕೊಳ್ಳುವ ಮನೋಧರ್ಮ. ಇವು ಲೋಕ ನಿರೀಕ್ಷಣೆಯಿಂದ ಹುಟ್ಟಿದ್ದಾದರೆ, ಇನ್ನು ಆತ್ಮ ನಿರೀಕ್ಷೆಯಿಂದ ಹುಟ್ಟಿದವು ಬೇರೆ.ಅದು ತನ್ನ ಒಳಗನ್ನು ತೆರೆದು ನೋಡಿ ಕೊಳ್ಳುವಂತೆ ಮಾಡುತ್ತವೆ.” ನಾವು ತೋರಿಸುವ ಅನುಕಂಪ, ನೋವು, ಸಂಕಟಗಳು ಎಲ್ಲಿಯೋ ಸ್ವಾರ್ಥದಿಂದ ಪ್ರೇರಿತವಾದವು” ಎನ್ನುವಲ್ಲಿ ನಾವು ಇದನ್ನು ಕಾಣಬಹುದು. ಅಲ್ಲದೆ ಅದು ನಮ್ಮ ಆತ್ಮಾವಲೋಕನಕ್ಕೂ ಎಡೆ ಮಾಡಿಕೊಡುತ್ತದೆ.
೨. ಅಭಿವ್ಯಕ್ತಿ ಸಾಮರ್ಥ್ಯ:
ಇದರಲ್ಲಿ ಸ್ವಭಾವೋಕ್ತಿಯಿಂದ ಹಿಡಿದು ಸಂನಿವೇಶ ನಿರ್ಮಾಣ, ನಾಟಕೀಯ ಶೈಲಿ, ಕಾವ್ಯ, ಗದ್ಯಗಳ ಉಲ್ಲೇಖಗಳವರೆಗೆ ಅನೇಕ ಬಗೆಗಳಿವೆ.ಸ್ವಭಾವೋಕ್ತಿಗೆ” ಉಗಿದು ಉಪ್ಪುಹಾಕು, ಹೂತುಹಾಕು, ಹೊಗೆಹಾಕು, ಶನಿ , ಅಟ್ಲು, ಗೂಡುರು ಇತ್ಯಾದಿ. ಮನೆಯಲ್ಲಿ ದಿನ ನಿತ್ಯ ಎನ್ನುವಂತೆ ನಡೆಯುವ ಕಿತ್ತಾಟವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುವುದು. ನಾಯಿಗಳ ಕುರಿತು ಬೆಳಿಗ್ಗೆ ಎದ್ದು ಮನೆಯವರೆಲ್ಲ ಸೇರಿ ನಡೆಸುವ ಸಂಭಾಷಣೆ.ನಾಟಕೀಯ ಶೈಲಿಗೆ ನಿದರ್ಶನ. ವಡ್ಡಾರಾಧನೆಯಿಂದ ಮೊದಲುಗೊಂಡು ,ಕಾರಂತರ ಬಾಳ್ವೆಯೆ ಬೆಳಕು ವರೆಗೆ, ಪಂಪನಿಂದ ಹಿಡಿದು ಪು ತಿ. ನ ಕುವೆಂಪು ವರೆಗೆ ಕಾವ್ಯದ ಉಲ್ಲೇಖಗಳು ಆಯಾ ಸಂದರ್ಭಕ್ಕೆ ಅನುಗುಣವಾಗಿ ಮೂಡಿಬರುತ್ತವೆ.

೩. ಅವರ ಸ್ಮೃತಿ ಪರಂಪರೆ:
ಮೇಲೆ ಹೇಳಿದ್ದು ಅವರ ಸ್ಮೃತಿ ಪರಂಪರೆಗೂ ಅನ್ವಯಿಸುತ್ತದೆ. ಅವಲ್ಲದೆ ಅವರು ನೋಡಿದ ಚಿತ್ರಗಳು, ನಾಟಕಗಳು, ಕೇಳಿದ ಹಾಡುಗಳು , ಒಂದೇ ಸಮನೆ ಬರುತ್ತವೆ.
೪.ಅವರ ಶ್ರುತಿ ಪರಂಪರೆ :
ಅವರ ಶ್ರುತಿ ಪರಂಪರೆಯಲ್ಲಿ ತಂದೆ ತಾಯಿ ಹೇಳುತ್ತಿದ್ದ ಮಾತುಗಳು, ಸ್ನಾತಕೋತ್ತರದಲ್ಲಿ ಡಿ.ಆರ್.ಎನ್. ಮುಂತಾದ ಮೇಷ್ಟ್ರುಗಳು ಹೇಳುತ್ತಿದ್ದ ಮಾತುಗಳು ಇವೆಲ್ಲವೂ ಓತಪ್ರೋತವಾಗಿ ಉಲ್ಲೇಖಗೊಳ್ಳುತ್ತವೆ.
೫. ಸಹ ಅನುಭೂತಿ :
ಕೊನೆಯದಕ್ಕೆ ಸಕಲ ಜೀವಿಗಳ ಕುರಿತ ಅವರ ಲೋಕಾನುಂಪೆ. ಅದು ಕೇವಲ ಶೋಕಿಯಾಗದೆ ನೈಜ ಸಹ ಅನುಭೂತಿಯಿಂದ ಮೂಡಿಬಂದದ್ದು. ಮನೆಯೆದುರು ಬಿಟ್ಟು ಹೋದ ನಾಯಿಮರಿಯಿಂದ ಮೊದಲುಗೊಂಡು,ಕಾಣದೆ ಹೋದ ಕೆಂಚಿಯವರೆಗೆ, ಹುಚ್ಚು ಯುವಕನಿಂದ ಹಿಡಿದು ಸತ್ತ ವ್ಯಾಯಾಮ ಶಿಕ್ಷಕನವರೆಗೆ ಇದು ಅಡೆ ತಡೆಯಿಲ್ಲದೆ ಹರಿಯುತ್ತದೆ. ಆದ್ದರಿಂದಲೆ ಮೊದಲಿಗೆ ಹೇಳಿದ್ದು ,ಇಲ್ಲಿ ಯಾವುದೂ ಅಮುಖ್ಯವಲ್ಲ ಎನ್ನುವುದು ಈ ಕೃತಿಯನ್ನು ಇಡಿಯಾಗಿ ಆವರಿಸಿದೆ ಎಂದು.
ಇದನ್ನು ಓದುವುದರ ಮೂಲಕ ನಾವು ಕಮಲಾ ಮೇಡಂ ಅವರಿಂದ ಕಲಿಯಬೇಕಾದ ,ಕಲಿಯಬಹುದಾದ ಪಾಠಗಳು ಅನಂತ. ಅವು ಕೇವಲ ಪುಸ್ತಕದ ಗಿಣಿಪಾಠಗಳಾಗದೆ ಜೀವನಾನುಭೂತಿಯಿಂದ ಮೂಡಿಬಂದವುಗಳಾಗಿದೆ ಎಂಬುದು ಈ ಕೃತಿಯ ಹಿರಿಮೆಯಾಗಿದೆ.ಕುವೆಂಪು ಅವರು ಪ್ರಾರಂಭಿಸಿದ “ಗೊಬ್ಬರದ ಮೇಲೆ ಬರೆವುದೆ ಕಬ್ಬಮಂ” ಎಂಬುದನ್ನು “ಊರ ಬೀದಿ”ಯನ್ನೇ ಕೃತಿಯ ಕ್ರಿಯಾ ಕೇಂದ್ರಕ್ಕೆ ತರುವ ಮೂಲಕ , ಅವರ “ಯಾರೂ ಅಮುಖ್ಯರಲ್ಲ” ಎಂಬುದನ್ನು, ಮನೆಯ ಸಹಾಯಕಿ ಗಂಗಮ್ಮನಿಗೆ ಕೃತಿಯನ್ನು ಅರ್ಪಿಸುವುದರ ಮೂಲಕ , ಹುಲಿಯನನ್ನು ಅವರ ಕಾಳನಾಮ ಚರಿತೆಯಲ್ಲದೆ” ಕಾಳನಾಗುವುದು ಸುಲಭವಲ್ಲ”ಎನ್ನುವ ಮೂಲಕ ಪರಂಪರೆಯ ಸಮರ್ಥ ವಾರಸುದಾರಿಣಿಯಾಗಿದ್ದಾರೆ.ಅಭಿನಂದನೆ
- ರಘುನಾಥ್ ಕೃಷ್ಣಮಾಚಾರ್ – ಲೇಖಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು, ಬೆಂಗಳೂರು.
