ಲೇಖನ : ಶಾಲಿನಿ ಪ್ರದೀಪ
ak.shalini@outlook.com
ನಿಮ್ಮ ಮನೆಗೆ ವಿಷಕಾರಿ ಹಾವು, ಜಂತುಗಳು ಸೇರಿಕೊಂಡರೆ ನೀವು ಏನು ಮಾಡುತ್ತೀರಾ? ಜೋರಾಗಿ ಬೊಬ್ಬೆ ಹೊಡೆಯುತ್ತೀರಾ,ಇಲ್ಲವೇ ಧೈರ್ಯವಾಗಿ ನಿಂತು ದೊಡ್ಡ ಕೋಲಿನಿಂದ ಆ ಪ್ರಾಣಿಗೆ ಸರಿಯಾಗಿ ಒಂದು ಏಟು ಭಾರಿಸುತ್ತೀರಾ ಅಲ್ಲವೇ?. ಆದರೆ ನನ್ನ ಮನೆಯ ಎದುರಿನ ಮನೆಯ ನೀರಿನ ತೊಟ್ಟಿಯಲ್ಲಿ ಹಾವು ಸೇರಿಕೊಂಡಾಗ ಆ ಮನೆಯವರು ಎಸ್. ಪ್ರಸನ್ನ ಕುಮಾರ ಎ ಅವರಿಗೆ ಫೋನ್ ಮಾಡಿ ಕರೆಸಿದರು. ಆಗ ಪ್ರಸನ್ನ ಕುಮಾರ ಅವರು ಆ ಹಾವಿಗೆ ಯಾವುದೇ ತೊಂದರೆಯಾಗದಂತೆ ನೀರಿನ ತೊಟ್ಟಿಯಿಂದ ಹೊರಗೆ ತಗೆದರು ಮತ್ತು ತಾವು ತಂದಿದ್ದಗೋಣಿ ಚೀಲದಲ್ಲಿ ಅದನ್ನು ಹಾಕಿಕೊಂಡು ಕಾಡಿನತ್ತ ನಡೆದೇಬಿಟ್ಟರು.
ಈ ಪ್ರಸನ್ನಕುಮಾರ ಅವರು ಬೆಕ್ಕಿನಗೆರೆ ಗ್ರಾಮದ ಸಮೀಪದ ಹಳ್ಳಿಯವರು. ಇವರ ಕುಟುಂಬದ ಮೂಲ ಕಸುಬು ಕುರಿಮೇಯಿಸುವುದು ಮತ್ತು ವ್ಯವಸಾಯವಾಗಿತ್ತು. ತದನಂತರ ದಿನಗಳಲ್ಲಿ ತುರಹಳ್ಳಿಗೆ ಈ ಕುಟುಂಬ ಬಂದು ನೆಲೆಸಿತು. ಆಗ ತಾನೇ ಅಲ್ಲಿಆರಂಭವಾಗಿದ್ದ ವನ್ಯ ಜೀವಿಗಳ ಪುನರ್ವಸತಿ ಕೇಂದ್ರದಲ್ಲಿ ಪ್ರಸನ್ನ ಕುಮಾರ ಅಪ್ಪ-ಅಮ್ಮನಿಗೆ ಪ್ರಾಣಿಪಾಲಕರನ್ನಾಗಿ ಕಾರ್ಯನಿರ್ವಹಿಸುವ ಅವಕಾಶ ಸಿಕ್ಕಿತು. ಆಗ ಪ್ರಸನ್ನಕುಮಾರ್ ಅವರಿಗೆ ೧೪ ವರ್ಷ ವಯಸ್ಸು. ಅಪ್ಪ-ಅಮ್ಮ ಪ್ರಾಣಿಗಳನ್ನು ಆರೈಕೆ ಮಾಡುತ್ತಿದ್ದನ್ನು ತದೇಕಚಿತ್ತವಾಗಿ ನೋಡುತ್ತಿದ್ದ ಇವರು ಮುಂದೆ ಪ್ರಾಣಿಗಳ ಜೊತೆ ಒಂದು ಒಡನಾಟ ಬೆಳೆಸಿಕೊಂಡರು.
೨೦೦೫ ರಲ್ಲಿ ವನ್ಯಜೀವಿ ಪುನರ್ವಸತಿ ಕೇಂದ್ರದಲ್ಲಿ ಪ್ರಸನ್ನಅವರು ಪೂರ್ಣಪ್ರಮಾಣದಲ್ಲಿ ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸ ತೊಡಗಿದರು. ಅಲ್ಲಿನ ವೈದ್ಯರಿಗೆ ಸಹಾಯಕರಾಗಿ ಕೆಲಸ ಮಾಡುತ್ತಾ ಮೂರು ವರ್ಷಗಳ ಕಾಲ ವನ್ಯಜೀವಿಗಳ ರಕ್ಷಣೆ ಹಾಗೂ ಪರಿಸರ ಕಾಳಜಿ ಬಗ್ಗೆ ತರಬೇತಿಯನ್ನು ಪಡೆದುಕೊಂಡರು. ಈ ತರಬೇತಿಯಲ್ಲಿ ಪ್ರಾಣಿಗಳ ಸ್ವಭಾವ, ಅದರ ಆರೈಕೆ ಬಗ್ಗೆ ಹೆಚ್ಚು- ಹೆಚ್ಚಾಗಿ ಗ್ರಹಿಸಿಕೊಂಡರು.
ವನ್ಯ ಜೀವಿಗಳ ಸಂರಕ್ಷಣಾ ಹೊಣೆಗಾರಿಕೆ ಅರಣ್ಯ ಇಲಾಖೆಯದ್ದಾಗಿತ್ತು. ೨೦೦೮ ರಲ್ಲಿ ಬಿಬಿಎಂಪಿಯಲ್ಲಿಅರಣ್ಯ ಘಟಕ ಆರಂಭವಾದಾಗ ಅದರಲ್ಲಿ ವನ್ಯಜೀವಿ ಸಂರಕ್ಷಕನಾಗಿ ಕೆಲಸಕ್ಕೆ ಸೇರಿಕೊಂಡರು. ಹೀಗೆ ಶುರುವಾದ ವನ್ಯಜೀವಿಗಳ ಸಂರಕ್ಷಣೆಯ ಕಾರ್ಯದಲ್ಲಿ ಇಲ್ಲಿಯವರೆಗೂ ೧೦೦೦ಕ್ಕೂ ಹೆಚ್ಚು ಹಾವುಗಳನ್ನು ರಕ್ಷಿಸಿದ್ದಾರೆ. ಅಪಘಾತದಲ್ಲಿ ಗಾಯಗೊಂಡ ಧನ, ಬೀದಿ ನಾಯಿಗಳನ್ನು ಆರೈಕೆ ಮಾಡಿದ್ದಾರೆ. ಗಾಳಿಪಟದ ದಾರ, ಎತ್ತರದ ಕಟ್ಟಡಗಳಿಂದ ಗಾಯಗೊಂಡ ಒದ್ದಾಡುವ ಪಕ್ಷಿಗಳನ್ನು ಉಪಚರಿಸಿದ್ದಾರೆ.
ದೇಶದಲ್ಲಿ ವನ್ಯಜೀವಿಗಳ ಸಂರಕ್ಷಣೆಯ ಕಾರ್ಯದಲ್ಲಿ ಬಿಬಿಎಂಪಿ ಪ್ರಥಮ ಸ್ಥಾನ ಪಡೆದಿದ್ದು, ಬಿಬಿಎಂಪಿಗೆ ಅಂತಾರಾಷ್ಟ್ರೀಯ ಮಟ್ಟದ ‘ಗುಬ್ಬಚ್ಚಿ ಪ್ರಶಸ್ತಿ’ ಕೂಡಾ ಲಭಿಸಿದೆ ಎನ್ನುವ ಮಾತನ್ನು ಹೆಮ್ಮೆಯಿಂದ ಹೇಳುತ್ತಾರೆ ಪ್ರಸನ್ನ ಕುಮಾರ.
ಒಮ್ಮೆ ಪ್ರಸನ್ನ ಕುಮಾರ ಅವರು ಹೆಮ್ಮಿಗೆಪುರದಲ್ಲಿ ನಾಗರಹಾವು ಹಿಡಿಯುವಾಗ ಜನರ ಫೋಟೋ ಗೀಳಿನಿಂದ ಮತ್ತು ಅವರ ಚೀರಾಟಕ್ಕೆ ಹಾವು ಅವರ ಮಣಿಗಂಟಿಗೆ ಕಚ್ಚಿತ್ತಂತೆ. ಇದರಿಂದ ತಮ್ಮ ಪ್ರಾಣಕ್ಕೆ ಆಪತ್ತಾದಾಗ ಅವರ ಬಳಿ ಹಣವಿರಲಿಲ್ಲ. ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಅರಣ್ಯ ಘಟಕದ ಸಿಬ್ಬಂದಿಗಳು ದುಡ್ಡು ಒಟ್ಟು ಮಾಡಿ ತಮಗೆ ಚಿಕಿತ್ಸೆ ಕೊಡಿಸಿದ್ದನ್ನು ಇಲ್ಲಿ ಸ್ಮರಿಸುವುದನ್ನು ಅವರು ಮರೆಯುವುದಿಲ್ಲ.
ವನ್ಯ ಜೀವಿಗಳನ್ನು ಹಿಡಿಯಲು ಬರಿ ಧ್ಯೆರ್ಯ ಒಂದೊಂದಿದ್ದರೆ ಸಾಲದು, ಜೊತೆಗೆ ಸರಿಯಾದ ತರಬೇತಿ ಇರಬೇಕು. ಇಲ್ಲವಾದರೆ ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಅಲ್ಲದೆ ವನ್ಯ ಜೀವಿಗಳಿಗೆ ಹಿಂಸೆ ಮಾಡುವುದಾಗಲಿ ಅಥವಾ ಹತ್ಯೆ ಮಾಡುವುದಾಗಲಿ ಮಾಡಿದರೆ ಮೂರೂ ವರ್ಷಗಳ ಕಾಲ ಸೆರೆಮನೆ ವಾಸ ತಪ್ಪಿದ್ದಲ್ಲ ಎಂದು ಎಚ್ಚರಿಕೆಯ ಮಾತುಗಳನ್ನು ಇಲ್ಲಿ ಒತ್ತಿ ಹೇಳುತ್ತಾರೆ.
ಶಾಲಾ-ಕಾಲೇಜಿಗಳಲ್ಲಿ ವನ್ಯ ಜೀವಿಗಳಿಗೆ ಸಂಬಂಧಿಸಿದಂತೆ ಜಾಗೃತಿ ಕಾರ್ಯಕ್ರಮ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಪ್ರಸನ್ನಕುಮಾರ ಹಮ್ಮಿಕೊಂಡಿದ್ದಾರೆ.
ಮಂಗಗಳಿಗೆ ವಿಷ ಹಾಕಿ ಸಾಯಿಸುವುದು, ಹಾವುಗಳನ್ನು ಬಡೆದು ಕೊಲ್ಲುವ ಬದಲು ನನಗೆ ಒಂದೇ ಒಂದು ಕರೆ ಮಾಡಿ. ಎಷ್ಟೇ ದೂರವಿದ್ದರೂ ನಾನು, ಇಲ್ಲವೇ ಬಿಬಿಎಂಪಿ ಅರಣ್ಯ ಘಟಕದ ಸಿಬ್ಬಂದಿ ಹಾಜರಾಗುತ್ತೇವೆ. ಮತ್ತು ಅವುಗಳನ್ನು ಹಿಡಿದು ಸುರಕ್ಷಿತ ಸ್ಥಳಗಳಿಗೆ ಬಿಡುತ್ತೇನೆ ಎಂದು ಸಾರ್ವಜನಿಕರಲ್ಲಿ ವಿನಂತಿ ಮಾಡಿಕೊಳ್ಳುತ್ತಾರೆ.
ಪ್ರಸನ್ನ ಕುಮಾರ ಸಂಪರ್ಕ : ೯೯೦೨೭೯೪೭೧೧ (9902794711)
(ನಿಮ್ಮಲ್ಲಿಯೂ ಸಾಹಸಿಗರು,ವಿಶೇಷ ವ್ಯಕ್ತಿಗಳಿದ್ದರೇ ಅವರ ಬಗ್ಗೆ ಲೇಖನ ಬರೆದು ಕಳುಹಿಸಿ.ನಾವು ಅದನ್ನು ಪ್ರಕಟಿಸುತ್ತೇವೆ)