(ಶಿರಸಿ, ಕುಮಟಾ ಎಂದಾಕ್ಷಣ ನಮ್ಮ ಕಣ್ಣಿಗೆ ಕಟ್ಟುವುದು ಹಸಿರು ತೆಂಗಿನ ಮರ, ಅಡುಕೆ ಮರಗಳು. ಈ ಹಸಿರು ರಾಶಿಗಳ ಮಧ್ಯೆ ಮಕ್ಕಳ ಶಿಬಿರ ಮಾಡಿದರೆ ಹೇಗಿರುತ್ತದೆ? ಎಂದು ಯೋಚಿಸಿದ ತಡ ಮನಸ್ಸು ಉಲ್ಲಾಸ ಗೊಳ್ಳುತ್ತದೆ. ನಗರೀಕರಣದ ಬದುಕಿನಲ್ಲಿ ಇಂದಿನ ಮಕ್ಕಳಿಗೆ ಪ್ರಕೃತಿ ಮಡಿಲಿನಲ್ಲಿ ಕಾಲ ಕಳೆಯುವುದು ಎಂದರೆ ಬರಿ ಒಂದು ಕನಸ್ಸಿದ್ದಂತೆ. ಆ ಕನಸ್ಸನ್ನು ಮಕ್ಕಳ ಶಿಬಿರದ ಮೂಲಕ ನನಸ್ಸು ಮಾಡುತ್ತಿದ್ದಾರೆ ರಂಗಕರ್ಮಿ ಕಿರಣ ಭಟ್.
ಮಕ್ಕಳನ್ನು ಅರ್ಧಗಂಟೆ ಒಂದೆಡೆ ಹಿಡಿಯುವುದೇ ಕಷ್ಟ ಅಂಥದರಲ್ಲಿ ಮಕ್ಕಳನ್ನು ಹಿಡಿದು ಅವರಲ್ಲಿನ ಪ್ರತಿಭೆಗೆ ಬಣ್ಣ ಹಚ್ಚಿ ನಾಟಕ ಮಾಡಿಸುವ ಕಿರಣ ಭಟ್ ಅವರ ತಾಳ್ಮೆಯನ್ನು ಮೆಚ್ಚಲೇ ಬೇಕು. ೨೫ ವರ್ಷಗಳಿಂದ ಮಕ್ಕಳ ನಾಟಕಗಳನ್ನು ನಿರ್ದೇಶಿಸುತ್ತಾ ಬಂದಿರುವ ಇವರು, ಮಕ್ಕಳ ಶಿಬಿರಗಳು ಸೇರಿದಂತೆ ಸದಾ ನಾಟಕರಂಗದಲ್ಲಿ ಸಕ್ರಿಯರಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇವರ ಸೇವೆಗೆ ನಾಟಕ ಅಕಾಡೆಮಿ ಪ್ರಶಸ್ತಿಯು ಲಭಿಸಿದೆ ಮತ್ತು ನಾಟಕ ಅಕಾಡೆಮಿ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಇತ್ತೀಚಿಗೆ ಇವರ ಮಾರ್ಗದರ್ಶನದಲ್ಲಿ ಉತ್ತರ ಕನ್ನಡ ಜಿಲ್ಲೆಯ ಕೆರೆಕೋಣದಲ್ಲಿ ನಡೆದ ಮಕ್ಕಳ ಶಿಬಿರದ ಅನುಭವವನ್ನು ಕಿರಣಭಟ್ ಅವರು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. )
ಶಿಬಿರದ ನಿರ್ದೇಶಕಿ ಪ್ರತಿಭಾ
ಈಗೊಂದು ಸುಮಾರು ಇಪ್ಪತೈದು ವರ್ಷ ಆಗೋಯ್ತೇನೋ ಈ ಮಕ್ಕಳ ಶಿಬಿರ ನಾವು ಶುರು ಹಚ್ಕೊಂಡು. ಮೊದ್ಲು ಶಿರಸಿಯಲ್ಲಿ, ನಂತ್ರ ಕುಮಟಾದಲ್ಲಿ. ಈಗ ಸಹಯಾನ, ಕೆರೆಕೋಣದಲ್ಲಿ. ‘ಚಿಂತನ ರಂಗ ಅಧ್ಯಯನ ಕೇಂದ್ರ’, ಸಹಯಾನ ನಡೆಸೋ ಶಿಬಿರ.
ಆದ್ಯಾಕೋ ಏನೋ ಮಕ್ಕಳ ಶಿಬಿರ ಅಂದ್ಕೂಡ್ಲೇ ನಾವೆಲ್ಲ ಒಂಥರಾ ಕಿವಿಗೆ ಗಾಳಿ ಹೊಕ್ಕಿದ ಕರುವಿನ ಥರ ಆಡೋದಕ್ಕೆ ಶುರು ಮಾಡ್ತೀವಿ. ಒಂಥರಾ ಥ್ರಿಲ್, ಒಂಥರಾ ಟೆನ್ಷನ್, ಒಂಥರಾ ಮಜಾ. ಅದ್ಕೇನೇ ಮಕ್ಕಳ ಶಿಬಿರ ಅಂದ್ರೆ ನಾವು ವರಷನೂಗಟ್ಲೇ ಕಾಯೋ ಇವೆಂಟ್.
ಈ ವರ್ಷದ ಇವೆಂಟ್ ಕೂಡ ಹಾಗೇ ಇತ್ತು.
ಡಾ. ಆರ್.ವಿ ಭಂಡಾರಿಯವರು ನಮಗಾಗಿ ಬಿಟ್ಟು ಹೋದ ಅಂಗಳ, ಮನೆ, ಹಿತ್ತಲು, ಮರಗಳು, ಹಸಿರು ಇವೇ ನಮ್ಮ ಮೂಲ ಸಂಪತ್ತು. ನಮ್ಮ ಶಿಬಿರದ ಮಕ್ಕಳೆಲ್ಲ ಅರಳೋದು ಅದೇ ಸಹಯಾನದ ಅಂಗಳದಲ್ಲಿ, ಅದೇ ಗಾಳೀಲಿ. ಆರ್.ವಿ. ಮಕ್ಕಳಿಗಾಗಿ ಏನೆಲ್ಲ ಮಾಡಿದ್ದಾರೆ. ಹಲವಾರು ವರ್ಷ ಮಕ್ಕಳ ಜೊತೆ ಕಳೆದಿದ್ದಾರೆ. ಪ್ರೀತಿ ಕೊಟ್ಟಿದ್ದಾರೆ, ಪ್ರೀತಿ ಪಡೆದಿದ್ದಾರೆ. ನಮಗಾಗಿ ಹಂಡೆಗಟ್ಲೇ ಪ್ರೀತೀಯನ್ನು ಬಿಟ್ಟು ಹೋದರು. ಮಕ್ಕಳಿಗಾಗೇ ಸಾಹಿತ್ಯ ರಚಿಸುವುದರ ಮೂಲಕ ಅವರೊಳಗೆ ಹಿರಿದಾದ ಮೌಲ್ಯಗಳನ್ನು ಬೆಳೆಸಿದವ್ರು. ಈಗ ಅವರ ಪ್ರೀತಿಯ ಅಂಗಳ ನಮ್ಮ ಆಡುಂಬೊಲ.
ಶಿಬಿರದಲ್ಲಿ ಮಕ್ಕಳಿಗೆ ರಂಗ ಮಾಹಿತಿ ನೀಡುತ್ತಿರುವ ಕಿರಣ ಭಟ್
ನಮ್ಮ ಶಿಬಿರಗಳಲ್ಲಿ ಹೆಚ್ಚಿನವು ಥೀಮ್ ಇಟ್ಕೊಂಡೇ ಕಟ್ಟಿದಂಥವು , ಮಕ್ಕಳ ಸಾಹಿತಿಗಳ ಬದುಕು ಬರಹಗಳ ಮೇಲೇ ಕಟ್ಟಿದಂಥವು. ಈ ನಮ್ಮ ಗಾಂಧಿ 150 ಆದದ್ರಿಂದ ನಮ್ಮ ಶಿಬಿರದ ಥೀಮ್ ಗಾಂಧಿ ಯಾನೆ ಗಾಂಧೀ ಅಜ್ಜ.
ಶಿಬಿರದ ನಿರ್ದೇಶಕರು ಸಾಗರದ ಪ್ರತಿಭಾ. ಆರ್ .ವಿ.ಭಂಡಾರಿ ಥರಾನೇ ಪ್ರೀತಿ ತುಂಬಿದ ಕೊಡ. ಶಿಬಿರ ಶುರುವಾಗೋ ಹೊತ್ಗೆ ‘ಮಿಸ್’ ಆಗಿದ್ದ ಅವ್ರ ಶಿಬಿರ ಮುಗಿಯೋ ಹೊತ್ಗೆ ಮಕ್ಳಿಗೆಲ್ಲ ‘ಅತ್ತೆ’ ಆಗ್ಬಿಟ್ಟಿದ್ರು. ಎಷ್ಟು ಅತ್ತೆ ಅಂದ್ರೆ ಶಿಬಿರ ಬಿಟ್ಟು ಹೋಗೋವಾಗ ಮಕ್ಕಳೆಲ್ಲ ಅತ್ತೇನ ತಬ್ಕೊಂಡು ಅತ್ತಿದ್ದೇ ಅತ್ತಿದ್ದು. ಪ್ರೀತಿಯ ಶಕ್ತಿ ಅದು.
ಶಿಬಿರವನ್ನು ಉದ್ಘಾಟಿಸಿದವರು ಮಕ್ಕಳ ಸಾಹಿತಿ, ಕಲಾವಿದ, ರಾಷ್ಟ್ರಪ್ರಶಸ್ತಿ ಪಡೆದ ಶಿಕ್ಷಕ ತಮ್ಮಣ್ಣ ಬೀಗಾರ್. ಮಕ್ಕಳ ಕವನ ಒದೋದ್ರ ಜೊತೆಗೇನೇ ಅವ್ರ ಗಾಂಧಿ ಅಜ್ಜನ್ನ ರೇಖೆಗಳಲ್ಲಿ ಕಾಣೋದನ್ನೂ ಮಕ್ಕಳಿಗೆ ಹೇಳಿಕೊಟ್ರು.
ಮಜಾ ಅಂದ್ರೆ ಅನೇಕ ಮಕ್ಕಳ ಚಿತ್ರಗಳಲ್ಲಿ ಗಾಂಧಿ,ಅಂಬೇಡ್ಕರ್ ಥರಾ ಕಾಣ್ತಿದ್ರು. ದೊಡ್ಡವರು ಅವ್ರನ್ನ ಹಿಡ್ಕೊಂಡು ವಾದ ಮಾಡೋ ಹೊತ್ಗೆ ಮಕ್ಳು ಅವ್ರನ್ನ ಒಂದೇ ಮಾಡ್ಬಿಟ್ಟಿದ್ರು.
ಕೈ ನೋವು ಬೆರಳು ನೋವಿನ ಮಧ್ಯೇನೂ ಕರ‌್ಕಿಯ ಮಂಜಣ್ಣ ಮಕ್ಳಿಗಾಗಿ ಮಣ್ಣು ಕಲಸ್ಕೊಂಡು ಬಂದು ಮಣ್ಣುಗಳ ಜೊತೆ ಆಟ ಆಡ್ತ ಆಡ್ತ ಬೆರಗು ಹುಟ್ಟೋ ಥರ ಆಕೃತಿಗಳನ್ನ ಮಕ್ಕಳ ಕೈಲಿ ಮಾಡಿಸಿದ್ರು. ಮಾಧವಿ ಭಂಡಾರಿ ಹಾಡು ಹೇಳಿಕೊಟ್ರು. ಕಾರವಾರದಿಂದ ಬಂದ ಎಸ್.ಎಫ್. ಐ ನ ಅಣ್ಣಂದಿರು ಡಾನ್ಸ್
ಕಲಿಸಿದ್ರು. ಅತ್ತೆಯಂತೂ ದಿನಾ ಇಡೀ ಬ್ಯುಸಿ. ಹಾಡು ಕಲಿಸೋದು, ನಾಟ್ಕ ಕಲಿಸೋದು. ಆಬ್ರಹಾಮ್ ಲಿಂಕನ್ ರ ಪತ್ರದ ಹಾಡು, ನಾಟ್ಕದ ಹಾಡು, ಆಟ ಅಡೋದು ಅದೂ ಇದೂ…ಶಿಬಿರದಲ್ಲಿ ಮಕ್ಳಿಗೆ ಪುರುಸೊತ್ತೇ ಇಲ್ಲ!
ಕೆಲವು ಮಕ್ಳು ಅಲ್ಲೇ ಉಳಕೊಂಡಿದ್ವು. ಅವಕ್ಕೆ ದಿನ, ರಾತ್ರಿ ಎಲ್ಲ ಮಜಾ. ಪ್ರತಿಭಾ ಮಕ್ಳಿಗೆ, ದೊಡ್ಡವ್ರಿಗೆ ಸಿನಿಮಾನೂ ತೋರಿಸಿದ್ರು. ಪಾಪು ಅಣ್ಣ, ವಿದ್ಯಾಧರಣ್ಣ, ಅನಿಲಣ್ಣ, ದಾಮಣ್ಣ, ರಾಘಣ್ಣ, ಮಂಜಣ್ಣ, ರಾಮಣ್ಣ, ಅನಂತಣ್ಣ ಮುಂತಾದ ಅಣ್ಣಂದಿರೂ ಯಮುನಕ್ಕ, ಛಾಯಕ್ಕ ಮುಂತಾದ ಅಕ್ಕಂದಿರೂ ಜೊತೆಗೆ ವಿಠ್ಠಲ ಯಜಮಾನ್ರು. ಆಟ, ನಾಟ್ಕದ ಮಧ್ಯೆ ಹಸಿವೂ ಉಂಟಲ್ಲ. ಅದ್ಕಾಗೇ ಸೊಂಟಕ್ಕೆ ಬೆಲ್ಟ್ ಕಟ್ಕೊಂಡು ಇಂದಿರಕ್ಕ ನಿಂತಿದ್ರು. ರುಮಾಲು ಸುತ್ಕೊಂಡು ಗಣೇಶಣ್ಣ ಓಡಾದ್ತಿದ್ರು. ಅರದ್ದು ಮಲ್ಟಿಪಲ್ ರೋಲ್. ಎರಡೂ ಹೊತ್ತು ತಿಂಡಿ, ಊಟ, ಪಾಯ್ಸ, ಸ್ವೀಟು….
ಶಿಬಿರದಲ್ಲಿ ಭೋಜನವಿದು, ವಿಚಿತ್ರ ಭಕ್ಷ್ಯದ್ದವು. ಕೊನೇ ದಿನ ಕವಲಕ್ಕಿಯ ಅನುಪಮಾ ಮೇಡಮ್, ಕೃಷ್ಣ ಡಾಕ್ಟ್ರು, ಕಲಾವಿದ ಕಿರಣ್ ಪ್ರೀತಿ ಹಂಚ್ಕೊಂಡ್ರು. ಶಿಬಿರದಲ್ಲಿ ಆಯ್ದುಕೊಂಡದ್ದು ಎರಡು ಚಿಕ್ಕ ನಾಟ್ಕಗಳು. ಎರಡೂ ಆರ್.ವಿ ಯವರದ್ದೇ. ‘ನಾನೂ ಗಾಂಧೀ ಆಗ್ತೇನೆ’ ಮತ್ತೆ ‘ಉಪ್ಪಿನ ಸತ್ಯಾಗ್ರಹ’. ಶಿಬಿರದ ಕೊನೇದಿನ ನಾಟ್ಕಗಳನ್ನ ಮಕ್ಳು ಚಂದವಾಗಿ ಆಡಿದ್ರು. ಎಷ್ಟು ಚಂದ ಅಂತ ಚಿತ್ರಗಳೇ ಹೇಳ್ತವೆ ನೋಡಿ.
ಆರ.ವಿ.ಯವರ ಮಾತು.. ಪ್ರೀತಿಯ ಕಾಳನು ಬಿತ್ತ ಬಯಸುವೆವು ಜಾಗ ಕೊಡಿವಿರೇನು?
ಬಿತ್ತೋಕೆ ಹೊರಟಿದೀವಿ, ನಮ್ಮ ಜೊತೆ ಬನ್ನಿ.ಮತ್ತು ಮಕ್ಕಳ ರಂಗ ಚಟುವಟಿಕೆಯ ಮತ್ತೊಂದು ಅನುಭವವನ್ನು ನಿಮ್ಮೊಂದಿಗೆ ಮತ್ತೆ ಹಂಚಿಕೊಳ್ಳುತ್ತೇನೆ.
ಇಂತಿ ನಿಮ್ಮ ರಂಗಕರ್ಮಿ
ಕಿರಣ ಭಟ್