ಕಾಶಿ ಅನುಭವ (ಭಾಗ೪) – ಡಾ.ಪ್ರಕಾಶ ಬಾರ್ಕಿ



ಮಹಾರಾಜ ರಾಜರ್ಷಿ ನಾಲ್ವಡಿ ಶ್ರೀಕೃಷ್ಣರಾಜ ಒಡೆಯರ್ ಯವರ ಕೊಡುಗೆಯಿಂದ ಕಾಶಿಯಲ್ಲಿ ಕನ್ನಡಿಗರ ವಸತಿ ಗೃಹವಿದೆ. ಇದು “ಕರ್ನಾಟಕ ಅತಿಥಿ ಗೃಹ” ಹೆಸರಿನಲ್ಲಿದ್ದು, ಗಂಗಾ ನದಿಯ ದಡದ ಹನುಮಾನ್ ಘಾಟ್ ನಲ್ಲಿದೆ. ವೈದ್ಯರಾದ ಡಾ.ಪ್ರಕಾಶ ಬಾರ್ಕಿ‌ ಇತ್ತೀಚಿಗೆ ಕಾಶಿಗೆ ಭೇಟಿ ನೀಡಿದಾಗ ತಮ್ಮ ಅನುಭವದ ಕಂತುಗಳನ್ನು ಓದುಗರ ಮುಂದಿಟ್ಟಿದ್ದಾರೆ. ಮುಂದೆ ಓದಿ…

ಕಾಶಿಯಲ್ಲಿ ಕನ್ನಡಿಗರ ವಸತಿ ಗೃಹ : ನಾಲ್ವಡಿಯವರ ಕೊಡುಗೆ.

ಹಿಂದೂಗಳ ಪವಿತ್ರ ಧಾರ್ಮಿಕ ಕ್ಷೇತ್ರ, ಜ್ಯೋತಿರ್ಲಿಂಗವಿರುವ ಯಾತ್ರಾ ಸ್ಥಳವಾದ ವಾರಣಾಸಿಯಲ್ಲಿ “ಕನ್ನಡಿಗ ಯಾತ್ರಿ”ಗಳಿಗೆ ಅಂತಲೆ ಒಂದು ಅತಿಥಿ ಗೃಹವಿದೆ ಎಂದರೆ ನಂಬುತ್ತೀರಾ? ನಂಬಲೇಬೇಕು. ಇದೆ.

ಮೈಸೂರು ಸರ್ಕಾರ ಆಡಳಿತವಿದ್ದಾಗ 1928 ರಲ್ಲಿ ಆಗಿನ ಮಹಾರಾಜ ರಾಜರ್ಷಿ ನಾಲ್ವಡಿ ಶ್ರೀಕೃಷ್ಣರಾಜ ಒಡೆಯರ್ ಅವರು ಉತ್ತರ ಭಾರತದ ವಿಶೇಷವಾಗಿ ಕನ್ನಡಿಗ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಗಂಗಾ ನದಿಯ ದಡದಲ್ಲಿನ ಹನುಮಾನ್ ಘಾಟ್ ನಲ್ಲಿ “ಕರ್ನಾಟಕ ಅತಿಥಿ ಗೃಹ” ನಿರ್ಮಿಸಿದರು.

ಒಡೆಯರ್ ಆಡಳಿತ ಪರ್ವವನ್ನು ಮೈಸೂರು ಸಂಸ್ಥಾನದ ಸುವರ್ಣ ಯುಗವೆಂದೆ ವ್ಯಾಖ್ಯಾನಿಸಲಾಗಿದೆ. ಮಿಂಟೋ ಕಣ್ಣಿನ ಆಸ್ಪತ್ರೆ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಕನ್ನಡ ಸಾಹಿತ್ಯ ಪರಿಷತ್ತ್, ಮೈಸೂರು ವಿಶ್ವವಿದ್ಯಾಲಯ, ಬೆಂಗಳೂರು ತಾಂತ್ರಿಕ ಕಾಲೇಜು, ಕೆ.ಆರ್. ಎಸ್ ಅಣೆಕಟ್ಟು, ಬೆಂಗಳೂರು ಪುರಭವನ, ನಿಮ್ಹಾನ್ಸ್, ಮೈಸೂರು ಪೇಪರ್ ಮಿಲ್, ಗಂಧದೆಣ್ಣೆ ಕಾರ್ಖಾನೆ, ಸಾಮಾಜಿಕ ಅಭಿವೃದ್ಧಿ ಸಂಸ್ಥೆ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸಹಿತ ನೂರಾರು ವಿದ್ಯಾಸಂಸ್ಥೆ ಗಳನ್ನೂ, ಇನ್ನೂರಕ್ಕೂ ಅಧಿಕ ಉಚಿತ ಚಿಕಿತ್ಸೆಯ ಆಸ್ಪತ್ರೆಗಳು ಮತ್ತು ವಾರಣಾಸಿಯ “ಕರ್ನಾಟಕ ಅತಿಥಿ ಗೃಹ” ಸಹ ನಿರ್ಮಿಸಿದ್ದಾರೆ.

1915 ರಲ್ಲಿಯೇ ಹನುಮಾನ್ ಘಾಟ್’ನ ಎಡ ಪಾರ್ಶ್ವ ಭಾಗವನ್ನು ಪುನರ್ ನಿರ್ಮಾಣ ಮಾಡಿ “ಕರ್ನಾಟಕ ಘಾಟ್” ಎಂದು ಮರುನಾಮಕರಣ ಮಾಡಲಾಗಿದೆ. ಈ ವಿಷಯವನ್ನು ಘಾಟ್’ಗೆ ಹೋಗಲು ನಿರ್ಮಿಸಿರುವ ಮೂರು ಮೆಟ್ಟಿಲುಗಳ ಮೇಲೆ ಹಿಂದಿ ಮತ್ತು ಇಂಗ್ಲೀಷನಲ್ಲಿ ಕೆತ್ತಲಾಗಿದೆ.

ಮೊದಲು ನಾಲ್ವಡಿ ಕೃಷ್ಣರಾಜ ಒಡೆಯರ್ ವರ್ಷಕ್ಕೊಮ್ಮೆ ಕಾಶಿಗೆ ಭೇಟಿ ನೀಡಿದಾಗ ಇದೇ ಅತಿಥಿ ವಸತಿ ಗೃಹದಲ್ಲಿ ವಾಸ್ತವ್ಯ ಹೂಡುತ್ತಿದ್ದರು. 50 ಮೆಟ್ಟಿಲುಗಳನ್ನು ಇಳಿದು ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡುತ್ತಿದ್ದರು. ಮಹಾರಾಜರು ನದಿಯತ್ತ ಸಾಗುತ್ತಿದ್ದ ಭೂಗತ ದಾರಿಯನ್ನು ಯಥಾವತ್ತು ಈಗಲೂ ಸಂರಕ್ಷಿಸಿದ್ದು ಕಾಣಬಹುದಾಗಿದೆ.

ವಸತಿಗೃಹದ ಪಕ್ಕವೆ ಗಂಗಾ ನದಿ ಹರಿಯುತ್ತಿದ್ದು, ಮೆಟ್ಟಿಲು ಇಳಿಯುವಾಗಿನ ಎಡಭಾಗದಲ್ಲಿ ಶ್ರೀ ಸತ್ಯಹರಿಶ್ಚಂದ್ರ ಘಾಟ್ ಮತ್ತು ಬಲ ಭಾಗದಲ್ಲಿ ಹನುಮಾನ್ ಘಾಟ್ ಮತ್ತು ಮಂದಿರವಿದೆ.

ಮೈಸೂರು ಸರ್ಕಾರದ ರಾಜರ ಆಳ್ವಿಕೆ ನಂತರ ಕರ್ನಾಟಕ ಸರ್ಕಾರ ಈ ಅತಿಥಿ ಗೃಹದ ಉಸ್ತುವಾರಿ ವಹಿಸಿಕೊಂಡಿದೆ‌ ಮತ್ತು ನವೀಕರಿಸಿ ಹೊಸ ಕಟ್ಟಡ, ವಿಶೇಷ ವ್ಯವಸ್ಥೆಯ ರೂಮುಗಳು ಮತ್ತು ವ್ಯವಸ್ಥಾಪಕರನ್ನು ನೇಮಿಸಿದೆ ಆದರೆ ಸಿಬ್ಬಂದಿಗಳ ಕೂರತೆಯನ್ನು ಬಗೆಹರಿಸುತ್ತಿಲ್ಲ.

ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಸುಪರ್ದಿಯಲ್ಲಿ “ಅತಿಥಿಗೃಹದಲ್ಲಿ” ಹೊಸ ಕೂಠಡಿಗಳನ್ನು ನಿರ್ಮಾಣ ಮಾಡಲಾಗಿದೆ. ಕೊಠಡಿಗಳು ಸ್ವಚ್ಚವಾಗಿದ್ದು ಶೌಚಾಲಯವನ್ನು ಮತ್ತು ದಿನಪೂರ್ತಿ ಬಿಸಿನೀರಿನ ವ್ಯವಸ್ಥೆ ಹೊಂದಿವೆ. ರಿಯಾಯಿತಿ ದರದಲ್ಲಿ ಅದೂ ಗಂಗಾನದಿಯ ದಡದಲ್ಲಿ ಕನ್ನಡಿಗರಿಗೆ ಉತ್ಕೃಷ್ಟ ರೂಮುಗಳು ಸಿಗುತ್ತವೆ. ಈ ಸೌಭಾಗ್ಯ ನಮ್ಮದು.

ಗಂಗಾ ನದಿಯ ದಡದಲ್ಲಿನ ಲಾಡ್ಜ್, ಇತರೆ ವಸತಿಗೃಹಗಳ ಬೆಲೆಗೆ ಹೋಲಿಸಿದರೆ “ಕರ್ನಾಟಕ ವಸತಿ ಗೃಹ” ಅತ್ಯುತ್ತಮ. ಸಂಪೂರ್ಣ ಸುರಕ್ಷೆಯಿದೆ. ವಸತಿ ಗೃಹದ ಸುತ್ತಲೂ ಮೇಲೆ ತಂತಿಯಿಂದ ಜಾಲರಿ ನಿರ್ಮಿಸಿದ್ದು ಕೋತಿಗಳ ಕೀಟಲೆಗಳಿಂದ ಮುಕ್ತಿ ದೂರೆತಿದೆ. ಕನ್ನಡಿಗ ಆಡಳಿತಗಾರರಿದ್ದು, ಆತ್ಮೀಯ ಪರಿಸರವಿದೆ.

ಮೊದಲಿನ ಬಾರಿಗೆ ಕಾಶಿಗೆ ಬರುವ ಕರ್ನಾಟಕದ ಯಾತ್ರಾರ್ಥಿಗಳಿಗೆ ಮತ್ತು ಹಿಂದಿ ಗೊತ್ತಿಲ್ಲದವರಿಗೆ ಸೂಕ್ತ ಮಾರ್ಗದರ್ಶನ ನೀಡಲಾಗುತ್ತೆ. ಪ್ರಯಾಣಿಕರಿಗೆ ಗಂಗಾನದಿ ಸ್ನಾನ, ವಾಹನ ವ್ಯವಸ್ಥೆ, ಆಹಾರ ಸೌಲಭ್ಯದ ಬಗ್ಗೆ ಮಾಹಿತಿ ನೀಡಲಾಗುವುದು ಮತ್ತು ಮೊದಲು ಬಂದವರಿಗೆ ಆದ್ಯತೆ ನೀಡಿ ರೂಮು ನೀಡಲಾಗುವುದೆಂದು ವ್ಯವಸ್ಥಾಪಕರಾದ ಶ್ರೀ ಟಿ. ಕೃಷ್ಣಮೂರ್ತಿಯವರು ತಿಳಿಸಿದರು. ವಾರಣಾಸಿಯ “ಕರ್ನಾಟಕ ಅತಿಥಿ ಗೃಹ” ಅಷ್ಟೊಂದು ಪ್ರಸಿದ್ಧಿ ಪಡೆದಿಲ್ಲ. ಇದರ ಬಗ್ಗೆ ತಿಳಿದು ಕನ್ನಡಿಗರು ಇಲ್ಲಿಗೆ ಬಂದರೆ ನಾವು ಸೇವೆಗೆ ದಿನದ 24 ಘಂಟೆ ಸದಾ ಸಿದ್ದ ಎನ್ನುತ್ತಾರೆ ವ್ಯವಸ್ಥಾಪಕ ಸಿಬ್ಬಂದಿ.

1969ರವರೆಗೆ ವಸತಿಗೃಹದಲ್ಲಿ ಉಚಿತ ಅನ್ನದಾಸೋಹ ಇತ್ತು. ಅಡುಗೆಯವರು ಮತ್ತು ಸಿಬ್ಬಂದಿಗಳ ಕೊರತೆಯಿಂದ ಅನ್ನದಾಸೋಹ ಸ್ಥಗಿತಗೊಂಡಿದೆ.

ಸಾರಿಗೆ ವ್ಯವಸ್ಥೆ: ವಾರಣಾಸಿಗೆ ಕರ್ನಾಟಕದಿಂದ ನೇರವಾಗಿ ಬರಲು ಬೆಂಗಳೂರು, ಮೈಸೂರು, ಹುಬ್ಬಳ್ಳಿಯಿಂದ ನೇರ ರೈಲು ವ್ಯವಸ್ಥೆಯಿದೆ.
ವಿಮಾನ ಸೌಲಭ್ಯಗಳು ಸಹ ಇವೆ.

“ವಸತಿ ಗೃಹ”ವಿರುವ ಹನುಮಾನ್ ಘಾಟ್ ರೈಲು ನಿಲ್ದಾಣದಿಂದ 8 ಕಿ. ಮೀಟರ್ ದೂರವಿದೆ.

ವಾರಣಾಸಿಗೆ ಬರುವ ಮೊದಲು “ಕರ್ನಾಟಕ ಅತಿಥಿ ಗೃಹ” ಸಂಪರ್ಕಿಸಿ..

ವ್ಯವಸ್ಥಾಪಕರಾದ ಶ್ರೀ ಟಿ. ಕೃಷ್ಣಮೂರ್ತಿ ಯವರ ಮೊಬೈಲ್ ಸಂಖ್ಯೆ : 9491409777
ಅಥವಾ ಸಹಾಯಕ ಎಂ. ಅರುಣಕುಮಾರ್ ರಾವ್ ಅವರ ಮೊಬೈಲ್ ಸಂ. 09026827610 ಸಂಪರ್ಕಿಸಿ.

ಕನ್ನಡಿಗರ ವಸತಿ ಗೃಹದಲ್ಲಿದ್ದು ಸಂಪೂರ್ಣ ಕಾಶಿಯ ದರ್ಶನ ಪಡೆಯಬಹುದು.

ಸಾಯಂಕಾಲ ಮತ್ತು ರಾತ್ರಿ ಗಂಗೆಯ ತಟದಲ್ಲಿ ವಿಹರಿಸಬಹುದು.


  • ಡಾ.ಪ್ರಕಾಶ ಬಾರ್ಕಿ‌  (ವೈದಕೀಯ ಬರಹಗಾರರು, ಆಯುರ್ವೇದ ವೈದ್ಯರು) , ಕಾಗಿನೆಲೆ.

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW