ವಸ್ತುವೈವಿಧ್ಯದ ಸುಂದರಿ ‘ವಸುಂಧರೆ’

ಕಲ್ಪನೆಯ ಮುಗಿಲಿನಿಂದ ಎದೆಗೆ ಬಿದ್ದ ಭಾವದ ಹನಿಗಳನ್ನು ಸರಮಾಲೆಯಾಗಿ ನೆನೆದ ಸಂಭ್ರಮದಲ್ಲಿ ಹುಟ್ಟಿ ಬಂದ ಕವಿತೆಗಳು ‘ವಸುಂಧರೆ’ ಕವನ ಸಂಕಲನದ ಗರ್ಭದಲ್ಲಿವೆ.  ಈ ಕೃತಿಯ ಕುರಿತು ದತ್ತಾತ್ರೇಯ ಹೆಗಡೆ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…. 

ಕೃತಿ : ವಸುಂಧರೆ
ಲೇಖಕಿ : ಭವ್ಯಾ ಟಿ. ಎಸ್.
ಪ್ರಕಾರ : ಕವನ ಸಂಕಲನ
ಪ್ರಕಾಶಕರು : ಚಿನ್ಮಯ ಪ್ರಕಾಶನ, ಬಳೆಪೆಟೆ, ಬೆಂಗಳೂರು-೫೩,
ಪುಟಗಳು : ೧೬೪/-
ಬೆಲೆ : ೨೦೦/-

ಈ ಕೃತಿಯ ಲೇಖಕರು ಟಿ ಎಸ್ ಭವ್ಯಾ. ಇವರು ಹೊಸನಗರ ತಾಲೂಕು ಕಾನುಗೋಡು ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ ತಿಂಗಳಷ್ಟೇ ಮಾರುಕಟ್ಟೆಗೆ ಬಂದ ‘ವಸುಂಧರೆ’ ಭವ್ಯಾ ಅವರ ಚೊಚ್ಚಲ ಹೆರಿಗೆ. ಮಲೆನಾಡಿನವರೇ ಆದ ಇವರು, ತಾನು ಇಲ್ಲಿ ಕಂಡುಂಡ ಅನುಭವ, ಪ್ರಕೃತಿ ಸೌಂದರ್‍ಯ, ಮೋಹಕತೆ, ಐಸಿರಿ, ಮಳೆಗಳನ್ನು ಶ್ರೀಮಂತ ಪದಪುಂಜಗಳಲ್ಲಿ ಬಣ್ಣಿಸಿ ಕಾವ್ಯಪ್ರಿಯರಿಗೆ ರಸದೌತಣ ನೀಡುವ ಪ್ರಯತ್ನವನ್ನು ಮಾಡಿದ್ದಾರೆ.

ಮಲೆನಾಡಿನವರು ಹೆಚ್ಚಾಗಿ ಇಲ್ಲಿನ ಸೊಬಗನ್ನು ವರ್ಣಿಸುವುದು ಸಾಮಾನ್ಯ. ಆದರೆ ಈ ವರ್ಣನೆಯಲ್ಲಿ ವೈವಿಧ್ಯತೆ ಇರುತ್ತದೆ. ಒಬ್ಬೊಬ್ಬರ ಅನುಭವ ಒಂದೊಂದು ರೀತಿಯಲ್ಲಿಇರುತ್ತದೆ. ಅದರಂತೆ ಮಲೆನಾಡಿನ ಸಹಜತೆ, ಸೌಂದರ್ಯ, ಹಸಿರುಟ್ಟ ಭೂರಮೆಯನ್ನು ಸುಂದರವಾಗಿ ಚಿತ್ರಿಸಿದ್ದಾರೆ. ಇಂದಿನ ಬಹುತೇಕ ಯುವ ಕವಿಗಳು ತಮ್ಮ ಚೊಚ್ಚಲ ಸಂಕಲನದಲ್ಲಿ ಪ್ರೇಮಗೀತೆಗಳನ್ನು ತುಂಬುವುದೇ ಹೆಚ್ಚು. ಹೆಣ್ಣಿನ ಶೋಷಣೆಯ ಬಗ್ಗೆ ಬರೆಯುವುದೇ ಅಧಿಕ. ಆದರೆ ‘ವಸುಂಧರೆ’ ಇವೆಲ್ಲವುಗಳಿಗಿಂತ ಭಿನ್ನವಾಗಿದೆ. ಇಲ್ಲಿ ಸಾಂಸಾರಿಕ, ಆಧ್ಯಾತ್ಮಿಕ, ಸ್ತ್ರೀ ಸಂವೇದನೆಯ, ಲಹರಿಗಳ, ವೈಚಾರಿಕ ಚಿಂತನೆಯ ಕವನಗಳಿಗೆ ಆದ್ಯತೆ ಕೊಟ್ಟಿದ್ದಾರೆ.

೧೧೫ ಕವಿತೆಗಳುಳ್ಳ ಈ ಕವನ ಸಂಕಲನದಲ್ಲಿ ಕವಯತ್ರಿ, ಶಿಕ್ಷಕ ವೃತ್ತಿ, ಶಾಲೆ, ವಿದ್ಯಾರ್ಥಿಗಳು, ಗುರುಗಳು, ತಂದೆ, ತಾಯಿ, ದೇಶ, ಸೈನಿಕರು ಮೊದಲಾದವುಗಳ ಬಗ್ಗೆಯೂ ತಮಗೆ ಕಾಡಿದ ಭಾವಗಳನ್ನು ಚಿತ್ರಿಸದೆ ಬಿಟ್ಟಿಲ್ಲ. ತಾನು ಸ್ವತಃ ಮಲೆನಾಡಿನ ಮಗಳಾಗಿ ಇಲ್ಲಿನ ರಮ್ಯ ಮೋಹಕತೆಯ ಬಂಧಿಯಾಗಿ, ವಾತ್ಸಲ್ಯಮಯಿ ಮಗಳಾಗಿದ್ದೇನೆ ಎಂದು ‘ಮಲೆನಾಡ ಮಗಳು’ ಕವಿತೆಯಲ್ಲಿ ಬರೆದುಕೊಂಡಿದ್ದಾರೆ.

ಮನಸೆಳೆಯುವ ಚೆಲುವಿನ ಗಣಿ ಮಲೆನಾಡು ಅನೇಕ ಸಮಸ್ಯೆಯನ್ನು ಹೊತ್ತು ಮಲಗಿದ್ದರೂ ಕತ್ತಲೆ ನುಂಗಿ ಬೆಳಕ ಬಿತ್ತರಿಸುವವಳಾಗಿದ್ದಾಳೆ ಎನ್ನುವ ಉಪಮೆ ಮೂಲಕ ವಿದ್ಯುತ್ತಿಗಾಗಿ ತಮ್ಮ ಆವಾಸವನ್ನೇ ಬಿಟ್ಟುಕೊಟ್ಟು ನಿರಾಶ್ರಿತರಾದವರ ಕುರಿತು ಬರೆದಿದ್ದಾರೆ. ‘ಸೌಂದರ್ಯದ ಸಮಾಗಮ’ದಲ್ಲಿ ಕೆಂಪು ಕುಪ್ಪಸ ಉಟ್ಟ ಹಸಿರು ಸೀರೆ/ ವರುಣನಿಗೆ ಸೋತಂತಿದೆ ವಸುಂಧರೆ/ಎನ್ನುತ್ತಾ ಮಲೆನಾಡಿನ ಸೌಂದರ್ಯ ಎಂತಹ ಬದುಕಿನ ಜಂಜಾಟಗಳನ್ನೂ ಪರಿಹರಿಸಬಲ್ಲದು ಎನ್ನುತ್ತಾರೆ.

‘ಮುತ್ತಿನ ಸುಂದರಿ’ಯಲ್ಲಿ ಧರೆಗಿಳಿದ ಅಪ್ಸರೆಯಂತೆ ಹೊಳೆಯುತ/ ಸೌಂದರ್ಯದ ಐಸಿರಿಯೋ/ ಸುರಲೋಕದ ಕನ್ನಿಕೆಯೋ/ ಇಬ್ಬನಿ ನೀ ಕಿನ್ನರಿ ಇದು ಮಲೆನಾಡಿನ ಮಂಜಿನ ಸೊಬಗನ್ನು ಬಣ್ಣಿಸಿದ್ದಾರೆ. ಇಂತಹುದೇ ಇನ್ನೊಂದು ಕವನ ‘ಇಬ್ಬನಿ’ಯಲ್ಲಿ ಮುತ್ತಿನ ತೋರಣ ಕಟ್ಟಿದೆ/ ಮುಂಜಾನೆಯ ಮೋಹಕಗೊಳಿಸಿದೆ/ ಸೂರ್ಯದೇವನಿಗೆ ಹುಲ್ಲುಹಾಕಿಸಿನ ಜಮಖಾನ ಹಾಸಿದೆ ಎಂಬ ಸಾಲು ನಮ್ಮನ್ನು ಮುದಗೊಳಿಸುತ್ತದೆ.

ಕೃತಿಯ ಶೀರ್ಷಿಕೆಯೂ ಆಗಿರುವ ‘ವಸುಂಧರೆ’ ಯಲ್ಲಿ ಮಲೆನಾಡನ್ನು ಸ್ವರ್ಗದ ಬಾಗಿಲು ಎಂದು ವರ್ಣಿಸುತ್ತ ಮಳೆಯಲಿ ಮಿಂದು ಹಸಿರುಟ್ಟು ಸಂಭ್ರಮಿಸುವ/ ಮಲೆನಾಡಿನ ಮಳೆಯ ಕಾಡು/ ಮಂಕಾದ ಮನಕೆ ಇಲ್ಲಿದೆ ನವಭಾವಗಳ ಔತಣ/ ಕವಿಯೆದೆಯ ನೆಲ ಹಸನಾಗಿಸುವ ಸೌಂದರ್ಯ ಎಂದು ವಿವರಿಸುತ್ತಾ, ಉದಯಾಸ್ತಗಳ ಸೊಬಗ ಸವಿಯುತ/ ಕವಿಮನ ಸಗ್ಗದ ಸಿರಿಗೆ ಸೋಲುತಿದೆ/ ಎಂಬ ಮನಸೆಳೆಯುವ ಹೋಲಿಕೆ ನೀಡುತ್ತಾರೆ. ‘ಮಲೆನಾಡಿನ ಮನೆ’ ತುಂಬಾ ಆಕರ್ಷಕ ಕವಿತೆಯಾಗಿದೆ. ಈ ಕವಿತೆಯನ್ನು ಓದುವಾಗ ಕುವೆಂಪು ಅವರ ‘ಸದ್ದಿರದ ಪಸುರುಡೆಯ ಮಲೆನಾಡ ಬನಗಳಲಿ’ ಎಂಬ ಕವನ ನೆನಪಾಗುತ್ತದೆ ಮಲೆನಾಡಿನ ಮನೆಗಳ ಸುತ್ತಮುತ್ತ ಇರುವ ಅಂದ -ಚಂದ, ವಾತಾವರಣ, ತೋಟ ಮುಂತಾದವುಗಳನ್ನು ಹೃದಯಕ್ಕೆ ತಟ್ಟುವಂತೆ ವರ್ಣಿಸಿದ್ದಾರೆ. ಹಸಿರುಟ್ಟು ನಿಂತು ನಕ್ಕಂತೆ ಲಲನೆ/ ಶೋಭಿಸುತಿದೆ ಮಲೆನಾಡಿನ ಮನೆ/ ತಂಗಾಳಿಯಲ್ಲಿ ಸ್ವಾಗತವ ಕೋರಿದೆ/ ಬರಡಾದ ಕಣ್ಮನಕ್ಕೆ ನೀಡುತಿದೆ ತಂಪು/ ಎದೆಯಲ್ಲಿ ನವಿರಾದ ಭಾವಗಳ ಇಂಪು/ ಎಂದು ಸೊಗಸಾಗಿ ವರ್ಣಿಸಿದ್ದಾರೆ. ಇಲ್ಲಿ ಕವಯತ್ರಿಯ ಕಾವ್ಯಕನ್ನಿಕೆ ನರ್ತಿಸಿರುವುದನ್ನು ಕಾಣಬಹುದು.

ಈಗ ಶಾಲೆಗಳು ಆರಂಭವಾಗಿವೆ. ಅದಕ್ಕೆ ಸರಿಯಾಗಿ ‘ಶಾಲಾ ಪ್ರಾರಂಭೋತ್ಸವ’ ಎಂಬ ಕವನ ಇಲ್ಲಿದೆ. ಬನ್ನಿ ಮಕ್ಕಳೆ ಬನ್ನಿರಿ ಶಾಲೆಗೆ/ ಸುಜ್ಞಾನದ ಸತ್ಕಾರ ನೀಡುವ ಮನೆಗೆ/ ಎಂದು ಶಾಲೆಯನ್ನು ವರ್ಣಿಸುತ್ತಾ, ವೈಚಾರಿಕತೆ ಅರಳಿಸಲು, ಗೆಳೆತನದ ಸಂತಸ ಪಡೆಯಲು, ಭಾವ ಚಿಗುರಲು, ಜಡತನ ಅಳಿಯಲು ಕನಸಿನ ರೆಕ್ಕೆಯ ಬಡಿಯುತ ಬನ್ನಿ ಎಂದು ಆಹ್ವಾನಿಸುತ್ತಾ, ವಿದ್ಯೆ, ವಿಚಾರ ಬೆಳೆಸುವ, ಸಮನ್ವಯತೆ ಬೆಳಗುವ, ಕ್ಲಿಷ್ಟತೆಯಿಂದ ಸರಳತೆಗೆ ಕೊಂಡೊಯ್ಯುವ ಭವ್ಯ ಭವಿತ್ಯದ ನೇತಾರರು ಶಿಕ್ಷಕರು ಎಂದು ‘ನಾವು ಶಿಕ್ಷಕರು’ ಎಂಬ ಕವನದಲ್ಲಿ ಹೇಳುತ್ತಾರೆ.

ಅಪ್ಪ-ಅಮ್ಮನ ಪ್ರೀತಿ ಈ ಸಂಕಲನದಲ್ಲಿ ಹರಿದಿದೆ. ಅಮ್ಮನೆಂದರೆ ಅಳಿಸಲಾರದ ಭಾವಚರಿತೆ ಎನ್ನುತ್ತಾ, ಅಮ್ಮನೆಂದರೆ ಮಮತೆಯ ಕಡಲು, ನಮ್ಮ ತಿದ್ದುವ ಮೊದಲು ಗುರು, ಬತ್ತದ ಒರತೆ ಎನ್ನುವ ಕವಯತ್ರಿ, ಅಮ್ಮನೆಂದರೆ ಮುತ್ತು, ಬದುಕು ರೂಪಿಸುವ ಮಹಾಶಿಲ್ಪಿ, ಮಮತೆ ಎರೆಯುವ ಮುತ್ತು, ಅನರ್ಘ್ಯ ರತ್ನ, ಕಳೆದರೆ ಸಿಗಲಾರದ ಸೊತ್ತು ಎಂದೆನ್ನುವರು. ‘ಅಪ್ಪನೆಂಬ ಚೈತನ್ಯ’ದಲ್ಲಿ ಪ್ರೀತಿ ತುಳುಕುವ ಹೃದಯವದು/ ಮುಂದಿನ ಚಿಗುರುಗಳ ಹೆಮ್ಮರವಾಗಿಸುವ ಹೆಬ್ಬಯಕೆ ಅವನಲ್ಲಿದೆ ಎಂದು ಹೃದಯತುಂಬಿ ಬಂದ ಮಾತನ್ನು ಹೇಳುತ್ತ್ತಾರೆ.
ಸ್ತ್ರೀಪರ ಚಿಂತನೆಯ ಕವನಗಳಲ್ಲಿ ಬೇಗುದಿ, ಬಿಳಿಹಾಳೆ ಮತ್ತು ನಾನು, ಸಂಸಾರ-ಸ್ವಾತಂತ್ರ್ಯ, ಬಣ್ಣವಿಲ್ಲದ ಕವಿತೆ ಗಮನಸೆಳೆಯುತ್ತವೆ. ‘ಬರೆಯಲಾಗದ ಕವಿತೆ’ಯಲ್ಲಿ ಪುಟ್ಟ ಕಂದನ ಚಿತ್ರಣ ಅವರ್ಣನೀಯವಾಗಿದ್ದರೆ, ‘ಜಗದ ಜೀವಸೆಲೆ’ಯಲ್ಲಿ ಕರುಳಕುಡಿ ನೋವ ಮರೆಸುವುದನ್ನು ಚಿತ್ರಿಸುತ್ತಾ, ‘ಮಾತೆಯ ಪಯಣಕೆ ಕರುಳಕುಡಿಯೇ ಚೇತನ’ ಎನ್ನುತ್ತಾರೆ. ಸಂಸಾರ-ಸ್ವಾತಂತ್ರ್ಯದಲ್ಲಿ ಮನೆಯ ಕಷ್ಟ-ನಷ್ಟ- ಇಷ್ಟದ ಮಧ್ಯೆ ಎದೆಯ ದನಿ ಬಿಡುಗಡೆಯಾಗಬೇಕು, ಪ್ರತಿಭೆಗೆ ತಡೆಗೋಡೆ ಕಟ್ಟಿದರೂ ಅದನ್ನು ಮುರಿದು ಹೊರಬಂದಾಗಲೇ ಸ್ವಾತಂತ್ರ್ಯ ಎನ್ನುತ್ತ್ತಾರೆ. ಮುಕ್ತವಾಗಿ ಹೆಣ್ಣು ನೋವು, ನಲಿವು, ಸಂಕಷ್ಟ, ಓರೆಕೋರೆಗಳನ್ನು ಬರೆಯುತ್ತಲೇ ಇರಬೇಕು ಎಂದು ‘ಬಿಳಿಹಾಳೆ’ಯಲ್ಲಿ ವಿವರಿಸುವ ಕವಯತ್ರಿ, ಎಷ್ಟೇ ನೊಂದು-ಬೆಂದರೂ ಅವಳ ನೋವಿನ ಮುಖ ಗಮನಿಸುವವರೇ ಇಲ್ಲ್ಲ ಎಂದು ‘ಯಾರಿಗೂ ಕಾಣದ ಮುಖ’ದಲ್ಲಿ ವಿಷಾದಿಸುತ್ತಾರೆ.

ವರುಣಲೀಲೆ, ಕರುಣೆ ಇಲ್ಲದ ಕಾಂಚಾಣ, ಮರೀಚಿಕೆ, ನೈವೇದ್ಯ, ಕ್ರಾಂತಿ ಸೂರ್ಯ ಬಸವಣ್ಣ, ಅಪರಿಚಿತ ಹಕ್ಕಿ, ಮತ್ತೆ ಮಳೆಯಾಗಿದೆ, ಮರಳಿ ಬಾ ಬಾಲ್ಯವೇ, ಸಮ್ಮಿಲನ, ಬಾಳಹಣತೆ… ಮುಂತಾದ ಸಾಕಷ್ಟು ಕವನಗಳು ಸಹ ಆಪ್ತವಾಗುತ್ತವೆ.

ಗುಡು-ಸಿಡಿಲಿನ ಸಮ್ಮೇಳನದಲಿ ವರ್ಷಧಾರೆಯ ನರ್ತನ (ವರುಣಲೀಲೆ), ಗುರಿಯು ಅಂತಿಮ ನಿಲ್ದಾಣವಲ್ಲ (ಬದುಕು ಭರವಸೆಯ ಹೂಬನ), ಹೂವಿಗೆ ಯಾರು ಕಲಿಸಿದರು ಸಿಹಿ ಹಂಚುವ ಗುಣ (ಎತ್ತಣ ಮಾಮರ), ಶಿಷ್ಯನೋದ್ಧಾರವೇ ಗುರುವಿಗೆ ಸನ್ಮಾನ (ಗುರುವೆಂಬ ದೈವ), ಕಣ್ಣಿನ ಆಗಸದಲ್ಲಿ ಮೂಡಿದ ಕನಸುಗಳಿಗೆ ಬಣ್ಣವಿರಲಿಲ್ಲ ( ಆಗಸ), ಬರಹವಿಲ್ಲದೆ ಉಳಿದ ಕವಿತೆ, ಎದೆಯ ಪುಟಗಳ ಸವಿ ಚರಿತೆ (ಅಮ್ಮನಾಗುವುದೆಂದರೆ), ಮೂಡಲಿ ಯುದ್ಧ್ದವಿಲ್ಲದ ಸಹನೆಯ ವಿಶ್ವ (ಯುದ್ಧ), ಭಕ್ಷಿಸಲಾರ ದೇವ ಭೋಜನವ, ಬೇಡುವ ಕೈಗೆ ಕೊಡು ಮೃಷ್ಟಾನ್ನವ (ನೈವೇದ್ಯ) ಎಂಬ ಮೌಲ್ಯಯುತ ಸಾಲುಗಳು ಇಡೀ ಕವನ ಸಂಕಲನಕ್ಕೆ ಕಳೆಕಟ್ಟಿವೆ.

ಹೀಗೆ ಈ ಸಂಕಲನಲ್ಲಿ ಬಹುತೇಕ ಎಲ್ಲಾ ಕವನಗಳೂ ವೈವಿಧ್ಯತೆಯಿಂದ, ಸಾಹಿತ್ಯಿಕ ಭಾಷೆಯಿಂದ, ಮನಸೋಲುವ ಸಾಲುಗಳಿಂದ, ತಪ್ಪಿಲ್ಲದ ಶಬ್ದಗಳಿಂದ, ಮನಸೆಳೆಯುವ ಉಪಮೇ ಇಂದ ನಮ್ಮನ್ನಾಕರ್ಷಿಸುತ್ತವೆ. ಅಂತರಾಳದ ಭಾವನೆಗಳು ಮತ್ತು ಬದುಕಿನ ಭಾವಯಾನದಲ್ಲಿ ಕಂಡ ವಿಚಾರಗಳು ಹದವಾದ ಪದಗಳ ಮೂಲಕ ಪೋಣಿಸಲ್ಪಟ್ಟಿವೆ. ನಿಸರ್ಗದ ಚೆಲುವಿನ ನಾನಾ ರೂಪ ಇಲ್ಲಿ ಕಣ್ಣಿಗೆ ಕಟ್ಟುವಂತೆ ಚಿತ್ರಿತವಾಗಿದೆ.

ಒಟ್ಟಿನಲ್ಲಿ, ಸಂವೇದನಾಶೀಲ ಅಭಿವ್ಯಕ್ತಿಯಿಂದ ಕೂಡಿದ ವಸ್ತುವೈವಿಧ್ಯದ ಸುಂದರಿ ‘ವಸುಂಧರೆ’ ‘ವಸುಂಧರೆ’ಯಾಗಿದೆ.


  •   ದತ್ತಾತ್ರೇಯ ಹೆಗಡೆ 

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW