‘ವಿಕ್ರಮಾರ್ಜುನ ವಿಜಯ’ ಕೃತಿ ಪರಿಚಯ

 ಇತ್ತೀಚೆಗೆ ಈ ಲೋಕವನ್ನಗಲಿದ ಕವಿ- ಸಾಹಿತಿಗಳಾದ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅವರು ಇದುವರೆಗೂ ನೂರಕ್ಕಿಂತ ಅಧಿಕ ಕೃತಿಗಳನ್ನು ಪ್ರಕಟಿಸಿದ್ದಾರೆ. ಮಕ್ಕಳಿಗಾಗಿ ‘ಚಿನ್ನಾರಿ ಮುತ್ತ’ ದಂತಹ ಕಥೆಯ ಸದಭಿರುಚಿಯ ಚಲನಚಿತ್ರವನ್ನೂ ನೀಡಿದ್ದಾರೆ. ಭಾವಕವಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅವರ ನೆನಪಿಗೆ ನನ್ನ ಅಕ್ಷರ ನಮನಗಳು.

ಕೃತಿ  : ಪಂಪನ ವಿಕ್ರಮಾರ್ಜುನ ವಿಜಯ – ತಿಳಿಗನ್ನಡ ಅವತರಣ.
ಲೇಖಕರು: ಡಾ.ಎಚ್.ಎಸ್.ವೆಂಕಟೇಶಮೂರ್ತಿ
ಅಭಿನವ ಪ್ರಕಾಶನ ಬೆಂಗಳೂರು
ಮುದ್ರಣದ ವರ್ಷ:೨೦೧೪& ೨೦೧೬.(೨ ಮುದ್ರಣ)
ಪುಟಗಳು: ೨೨೦.
ಬೆಲೆ: ರೂ. ೨೦೦.

ಇತ್ತೀಚೆಗೆ ಈ ಲೋಕವನ್ನಗಲಿದ ಕವಿ- ಸಾಹಿತಿಗಳಾದ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅವರು ಇದುವರೆಗೂ ನೂರಕ್ಕಿಂತ ಅಧಿಕ ಕೃತಿಗಳನ್ನು ಪ್ರಕಟಿಸಿದ್ದಾರೆ. ಮಕ್ಕಳಿಗಾಗಿ ‘ಚಿನ್ನಾರಿ ಮುತ್ತ’ ದಂತಹ ಕಥೆಯ ಸದಭಿರುಚಿಯ ಚಲನಚಿತ್ರವನ್ನೂ ನೀಡಿದ್ದಾರೆ. ಇಂದು ಅವರಿಲ್ಲವಾದರೂ, ಅವರ ಅನೇಕ ಜನಪ್ರಿಯ ಭಾವಗೀತೆಗಳು ಕನ್ನಡದ ಗಾಯಕರ ಮೂಲಕ ಜೀವಂತವಾಗಿದ್ದು ಸದಾ ಅವರ ನೆನಪನ್ನು ತರುತ್ತಿವೆ. ಭಾವಕವಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅವರ ನೆನಪಿಗೆ ನನ್ನ ಅಕ್ಷರ ನಮನಗಳು.

ಇಂದು ಅವರು ನಮ್ಮ ಕಿರಿಯರಿಗೆ ಪಂಪನನ್ನು ಹತ್ತಿರ ತರುವ ಹೊಸ ಪ್ರಯತ್ನದಲ್ಲಿ ರಚಿಸಿದ ಪಂಪನ “ವಿಕ್ರಮಾರ್ಜುನ ವಿಜಯ” ಎನ್ನುವ ಕೃತಿಯನ್ನು ನಾನು ಪರಿಚಯ ಮಾಡುತ್ತಿದ್ದೇನೆ. ಇದೊಂದು ಹಳಗನ್ನಡ ಮತ್ತು ಹೊಸಗನ್ನಡದ ಆ ಎರಡು ಲೋಕಗಳ ನಡುವಿನ ಅನುಸಂಧಾನದ ಅನುವಾದದ ಕಾವ್ಯ. ಆದ್ದರಿಂದ ಹೆಚ್.ಎಸ್.ವಿ.ಅವರು ‘ಉಭಯಕವಿ’ ಎಂದು ಮುನ್ನುಡಿಯಲ್ಲಿ ಯು.ಆರ್. ಅನಂತಮೂರ್ತಿ ಯವರು ಅಭಿಪ್ರಾಯ ಪಡುತ್ತಾರೆ.

ಪಂಪನನ್ನು ಅವನ ಮಹಾಕಾವ್ಯದ ಪಂಕ್ತಿಗಳು ಹರಳು ಕಡೆದಂತ ಮಹೋಕ್ತಿಗಳು, ಹಿತಮಿತಮಧುರ ವಚನ, ಸಹಜ ಛಂದ ಕಥಾವಿನ್ಯಾಸ, ಕಥಾಂತರದ ಸೋದ್ದಿಶ್ಯ ತಿರುವುಗಳ ಸಮೇತ ನಮ್ಮ ಹೊಸ ಪೀಳಿಗೆಗೆ ದೊರಕಿಸ ಬೇಕೆಂಬುದೇ ತಮ್ಮ ಈ ಶ್ರಮದ ಹಿಂದಿನ ಸಂಕಲ್ಪ. ಕಥೆಗೊಂದು ಅರ್ಥ, ಅದಕ್ಕೆ ಮತ್ತೊಂದು ಸ್ವ-ಅರ್ಥವನ್ನು ಭಾಷಾಕಲ್ಪದ ಮೂಲಕ ಸದ್ಯಸ್ಫುರಣಗೊಳಿಸುವುದೇ ಪಂಪನ ಕಾವ್ಯಾನುಕ್ರಮದ ಹೊಸ ಉಪಕ್ರಮ. ಎನ್ನುತ್ತಾರೆ ಲೇಖಕರು.

ಹಸ್ತಿನಾವತಿಯ ದೊರೆ ಶಂತನುವಿಗೆ ಇಬ್ಬರು ಪತ್ನಿಯರಿಂದ ಭೀಷ್ಮ, ಚಿತ್ರಾಂಗದ, ವಿಚಿತ್ರವೀರ್ಯ ಎನ್ನುವ ಮೂರು ಪುತ್ರರು. ಚಿತ್ರಾಂಗದ ಒಬ್ಬ ಗಂಧರ್ವನೊಡನೆ ನಡೆದ ದ್ವಂದ್ವ ಕಾಳಗದಲ್ಲಿ ಮೃತನಾಗಲು ವಿಚಿತ್ರವೀರ್ಯನಿಗೆ ಪಟ್ಟಾಭಿಷೇಕವಾಯಿತು. ಆತನಿಗೆ ಮದುವೆ ಮಾಡುವ ಉದ್ದೇಶದಿಂದ ಭೀಷ್ಮನು ಸ್ವಯಂವರವನ್ನು ಗೆದ್ದು, ಕಾಶೀರಾಜನ ಮೂವರು ಪುತ್ರಿಯರಾದ ಅಂಬೆ, ಅಂಬಿಕೆ, ಅಂಬಾಲಿಕೆಯರನ್ನು ಅರಮನೆಗೆ ಕರೆತಂದಿದ್ದನು.

ಅವರಲ್ಲಿ ಅಂಬೆ ಭೀಷ್ಮನೇ ತನ್ನನ್ನು ವಿವಾಹವಾಗಬೇಕೆಂದು ಆಗ್ರಹಿಸಿದಳು. ತಾನು ಆಜನ್ಮ ಬ್ರಹ್ಮಚಾರಿಯಾಗುವುದಾಗಿ ತಂದೆಗೆ ಮಾತು ಕೊಟ್ಟಿದ್ದ ಭೀಷ್ಮ ತನ್ನ ಪ್ರತಿಜ್ಞೆ ಮುರಿಯಲಾರೆನೆಂದಾಗ, ಆಕೆ ಅಗ್ನಿ ಪ್ರವೇಶ ಮಾಡಿದಳು.

ಕಾಲಾನಂತರ ವಿಚಿತ್ರವೀರ್ಯ ಮಕ್ಕಳಿಲ್ಲದೆ ಮೃತನಾದ ಮೇಲೆ, ವ್ಯಾಸನ ಕೃಪೆಯಿಂದ ಅಂಬಿಕೆಗೆ ‘ಧೃತರಾಷ್ಟ್ರ’ನೆಂಬ ಅಂಧ ಮಗನೂ, ಅಂಬಾಲಿಕೆಗೆ ‘ಪಾಂಡು’ವೆಂಬ ಪಾಂಡು ರೋಗದ ಮಗನೂ ಹಾಗೂ ಅಂಬಿಕೆಯ ದಾಸಿಗೆ ‘ವಿಧುರ’ ನೆಂಬ ಧರ್ಮಾತ್ಮನಾದ ಪುತ್ರನೂ ಜನಿಸಿ ಭೀಷ್ಮನೇ ಅವರನ್ನು ಬೆಳೆಸಿದನು.

ಮುಂದೆ ಧೃತರಾಷ್ಟ್ರನಿಗೆ ಗಾಂಧಾರಿ, ಪಾಂಡುವಿಗೆ ಕುಂತಿ ಮತ್ತು ಮಾದ್ರಿ ರಾಜಕುಮಾರಿಯರ ಜೊತೆ ಮದುವೆ ಮಾಡಿದನು. ಬಹುಕಾಲ ಮಕ್ಕಳಾಗದೇ ಹೋದಾಗ ಕುಂತಿ ದೂರ್ವಾಸ ಮುನಿಯ ವರದಿಂದ ಯುಧಿಷ್ಟರ- ಅರ್ಜುನ ಭೀಮ ಎಂಬ ಮಕ್ಕಳನ್ನೂ, ಮಾದ್ರಿ ನಕುಲ -ಸಹದೇವ ರೆಂಬ ಇಬ್ಬರು ಮಕ್ಕಳನ್ನೂ ಪಡೆದರು.ಅವರೇ ಪಂಚ ಪಾಂಡವರು. ಕುಂತಿ ಅವಿವಾಹಿತೆಯಾಗಿದ್ದಾಗ ಮಂತ್ರವನ್ನು ಪಠಿಸಿ ಸೂರ್ಯದೇವನ ವರಪ್ರಸಾದದಿಂದ ಕರ್ಣನೆಂಬ ಮಗನನ್ನು ಹೆತ್ತು, ಲೋಕಾಪವಾದಕ್ಕೆ ಹೆದರಿ ಗಂಗಾ ನದಿಯಲ್ಲಿ ತೇಲಿ ಬಿಟ್ಟಿದ್ದಳು! ಕರ್ಣನು ಅಧಿರಥನೆಂಬ ಸೂತನ ಸಾಕುಪುತ್ರನಾಗಿ ಬೆಳೆದನು.

ಗಾಂಧಾರಿಯು ಪರಾಶರವರದಿಂದ ನೂರು ಮಕ್ಕಳನ್ನು ಪಡೆದಳು.ಅವರೇ ಕೌರವರು. ಅವರಲ್ಲಿ ಹಿರಿಯನೇ ದುರ್ಯೋಧನ. ದ್ರೋಣಾಚಾರ್ಯರು ಹಸ್ತಿನಾವತಿಗೆ ಬಂದು ಆ ಎಲ್ಲಾ ರಾಜಕುಮಾರರನ್ನು ಶಿಷ್ಯರನ್ನಾಗಿ ಪಡೆದರು. ಚಿಕ್ಕವರಿದ್ದಾಗಲೇ ಕೌರವರು ಪಾಂಡವರನ್ನು ದ್ವೇಷಿಸ ತೊಡಗಿದ್ದರು. ಕರ್ಣನು ದುರ್ಯೋಧನನ ಪರಮಾಪ್ತ ಸ್ನೇಹಿತನಾದನು.

ಮುಂದೆ ರಾಜ್ಯದ ಅಧಿಕಾರದ ಸಂದರ್ಭದಲ್ಲೂ ಪಾಂಡವರನ್ನು ಪ್ರತ್ಯೇಕವಾಗಿಸಿ, ವಾರಣವತದ ಅರಗಿನ ಮನೆಯಲ್ಲಿಟ್ಟು ಬೆಂಕಿಯಿಂದ ಸುಡಲು ಪ್ರಯತ್ನಿಸಿದ್ದರು. ಅಲ್ಲಿಂದ ಸುರಂಗಮಾರ್ಗದ ಮೂಲಕ ಪಾರಾದ ಪಾಂಡವರು ಮುಂದೆಯೂ ಕೌರವರ ದೆಸೆಯಿಂದ ನಾನಾ ಕಷ್ಟಗಳನ್ನು ಅನುಭವಿಸಿ ‘ಮಹಾಭಾರತದ ಕುರುಕ್ಷೇತ್ರ’ ಯುದ್ಧವೇ ನಡೆದು ಹೋಯಿತು.ಹೀಗೆ ಸಾಧಾರಣವಾಗಿ ಎಲ್ಲರಿಗೂ ತಿಳಿದಿರುವ ಮಹಾಭಾರತದ ಸುಧೀರ್ಘ ಕಥೆ ಇಲ್ಲಿಯೂ ಮುಂದುವರೆದಿದೆ . ಅದನ್ನು ಸಂಕ್ಷಿಪ್ತದಲ್ಲಿ ವಿವರಿಸುವುದಕ್ಕಿಂತ ಓದುವುದೇ ಆಪ್ಯಾಯಮಾನವಾಗಿದೆ.

ಈ ಕಥೆಯನ್ನು ಲೇಖಕರು ಮೊದಲ ಭಾಗದಲ್ಲಿ ೧೪ ಆಶ್ವಾಸಗಳಲ್ಲಿ ಕಿರಿಯರಿಗಾಗಿ ಮತ್ತು ಹಿರಿಯರೂ ಓದಿ ಸಂತಸ ಪಡುವಂತೆ ನಾನಾ ಪ್ರಸಂಗಗಳ ಬಣ್ಣನೆಯೊಂದಿಗೆ ಅತ್ಯಂತ ಸರಳವಾಗಿ ಬರೆದಿದ್ದಾರೆ. ಮೇಲಿನ ಕಥೆಯ ವಚನ ರೂಪದ ‘ತಿಳಿಗನ್ನಡ ಅವತರಣ’ ಎರಡನೆಯ ಭಾಗದಲ್ಲಿದೆ.

ಉದಾ: ಬಕಾಸುರ ಪ್ರಸಂಗ:
ಅಳುತ್ತಿರೆ ಕೊಡಲಿಕ್ಕಿರುವ ಮಗಳು,
ನೆಲದಲಿ ಹೊರಳುತ್ತಿರೆ ಪತ್ನಿ, ಮಾ-
ತಳಿದು ಕೊರಳನ್ನಪ್ಪಿರಲು ಹರಿದಾಡುವ ಹುಡುಗ,
ಆದ ಶೋಕದಿಂದ ಗಳಗಳ ಕಣ್ಣೀರ್ಗರೆದಳುತ್ತಿರುವ
ಬ್ರಾಹ್ಮಣನನ್ನು ನೋಡಿ, ಶೋಕದು- ಮ್ಮಳದಿಂದ ಕರುಣೆ ಹೆಚ್ಚಲು ಕುಂತಿ ಚಿಂತಾಕ್ರಾಂತೆ ನುಡಿದಳಿಂತುll

ಅದರ ವಚನ ರೂಪ ll
ಬಕಾಸುರನೆಂಬ ಅಸುರನಿಗೆ ನಿತ್ಯವೂ ಒಂದೊಂದು ಮನೆಯವರು ಬಂಡಿ ಅನ್ನ, ಅದಕ್ಕೆ ತಕ್ಕ ಪರಿಕರಗಳು ಜೊತೆಗೊಬ್ಬ ಮನುಷ್ಯನನ್ನೂ ಕಳಿಸಬೇಕು. ಇದಕ್ಕೆ ತಪ್ಪಿದರೆ ಅವನು ಊರನ್ನೇ ತಿಂದು ತೇಗುವನು. ನಮ್ಮ ಮನೆಯಲ್ಲಿ ನಾನು, ಪತ್ನಿ ಮತ್ತು ಇಬ್ಬರು ಮಕ್ಕಳು ಅಷ್ಟೇ ಇರುವುದು ಯಾರು ಹೋದರೂ ತೊಂದರೆ. ಆದ್ದರಿಂದ ನಾನೇ ಬಕಾಸುರನಲ್ಲಿಗೆ ಹೋಗುತ್ತೇನೆ ಎಂದು ವ್ಯಾಕುಲಗೊಂಡ ಬ್ರಾಹ್ಮಣನಿಗೆ ಕುಂತಿ ಸಮಾಧಾನ ಮಾಡುತ್ತಾಳೆ.

ಈ ಮಾದರಿಯಲ್ಲಿ ಅತ್ಯಂತ ಸೊಗಸಾಗಿ ಎಲ್ಲಾ ಶ್ಲೋಕಗಳ ಪ್ಯಾರಾವನ್ನೂ ಸರಳವಾದ ತಿಳಿಗನ್ನಡ ಕ್ರಮದಲ್ಲಿ ವಚನ ರೂಪದ ಅರ್ಥದಲ್ಲಿ ವಿವರಿಸಲಾಗಿದೆ.

ಪುಸ್ತಕದ ಕೊನೆಯಲ್ಲಿ ಪಂಪ ಭಾರತ ಶಬ್ಧಾರ್ಥ ಸೂಚಿ:
ಎಂದು ಆಶ್ವಾಸ ೧ ರಿಂದ ೧೪ ಪದ್ಯಗಳ ಶಬ್ಧಾರ್ಥವನ್ನೂ
ನೀಡಿದ್ದು ಅತ್ಯಂತ ಉಪಯುಕ್ತವಾಗಿದೆ.

ಉದಾ: ಪದ್ಯ -೧
ಶ್ರೀ= ಲಕ್ಷ್ಮಿ, ರಾಜ್ಯ ಸಂಪತ್ತು.
ಪಯೋನಿಧಿ= ಹಾಲಿನ ಸಮುದ್ರ
ಜೀಯಾ = ಒಡೆಯ
ಸುಪುಷ್ಟ ಪಟ್ಟ= ದೇವತೆಗಳು ಧರಿಸುವ ಕಿರೀಟ.
ಶಾಲಿ = ಭತ್ತ.
ಶುಕಾಳಿ= ಗಿಣಿಗಳ ಗುಂಪು
ಅಮಲ = ಶ್ರೇಷ್ಠ.

ಅಲ್ಲದೇ ಕೆಲವು ಪ್ರಸಿದ್ಧ ೭೦ ಪಂಪೋಕ್ತಿಗಳೂ ಇಲ್ಲಿವೆ. ಅವುಗಳ ಮಾದರಿ ಹೀಗಿವೆ ನೋಡಿ….

೫೮.ನಿಜದೊಳೆ ಭೂಪರೆಂಬರ್ ಅವಿವೇಕಿಗಳಪ್ಪರ್! ( ನಿಜವಾಗಿಯೂ ಭೂಪರು ಎನ್ನುವವರು ಅವಿವೇಕಿಗಳೇ)

೫೨. ನಾಲಗೆ ಕುಲಮಂ ತಬ್ಬುವವೊಲು ಉರದೆ ನೀಂ ಕೆಡೆ ನುಡಿವೈ! ( ನಾಲಿಗೆ ಕುಲವನ್ನು ತೋರಿಸುವುದು ಎನ್ನುವಂತೆ ನೀನು ಸುಮ್ಮನಿರದೇ ಕೆಟ್ಟ ಮಾತು ನುಡಿದೆ)

೨೯. “ಚಾಗದ ಭೋಗದ ಅಕ್ಕರದ ಗೇಯದ ಗೊಟ್ಟಿಯ ಅಲಂಪಿನಿಂಪುಗಳ್ಗಾಗರಮಾದ ಮಾನಸರೆ ಮಾನಸರ್! ”
(ತ್ಯಾಗದ, ಭೋಗದ, ವಿದ್ಯೆಯ, ಗಾಯನದ, ಗೋಷ್ಠಿಯ, ಸುಖವಾದ ಇಂಪುಗಳಿಗೆ ಆಸರೆಯಾದ ಮನುಷ್ಯರೇ ಮನುಷ್ಯರು!)

ಬಾಲ್ಯದಲ್ಲಿ ನಾವು ಕಲಿತಿದ್ದು ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತದೆ. ಆದ್ದರಿಂದ ಎಳವೆಯಲ್ಲಿ ಮಕ್ಕಳಿಗೆ ನಮ್ಮ ಸಂಸ್ಕೃತಿಯ ಮಹತ್ವದ ಬಗ್ಗೆ ತಿಳಿಸಿ ಹೇಳುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.

ನಾವು ನಿಜವಾಗಿ ಕಳೆದು ಕೊಳ್ಳುತ್ತಿರುವುದು ಮತ್ತು ಪಡೆದು ಕೊಳ್ಳುತ್ತಿರುವುದರ ಅರಿವು ನಮಗಿದೆಯೇ?. ಗಮನಿಸಿದರೆ ಆಗ ಮಹಾ ಭಾರತದ ಕತೆಯನ್ನು ಹೇಳುತ್ತಿದ್ದ ಕೆಲವರಾದರೂ ಹಳ್ಳಿಯಲ್ಲಿ ಸಿಗುತ್ತಿದ್ದವರೀಗ ಅಪರೂಪವಾಗುತ್ತಿದ್ದಾರೆ. ನಮಗೇ ಗೊತ್ತಿಲ್ಲದ ಎಷ್ಟೋ ವಿಷಯವನ್ನು ಇನ್ನು ಎಳೆಯರಿಗೆ ಹೇಳುವುದಾದರೂ ಹೇಗೆ?… ಹಾಗಾಗಿ ಎಲ್ಲರಿಗೂ ಇಂದು ಓದಿನ ಅಗತ್ಯವಿದೆ.

ಈ ಕಾವ್ಯವು ಮೂಲ ಆಶಯಕ್ಕೆ ಧಕ್ಕೆಯಾಗದಂತೆ, ಹೊಸಕಾಲಕ್ಕೆ ಒಗ್ಗುವಂತೆ ಮತ್ತು ಲೀಲಾಜಾಲವಾಗಿ ಎಲ್ಲರೂ ಓದಿಸಿಕೊಂಡು ಹೋಗುವಂತೆ ರಚಿತಗೊಂಡಿದೆ.

ಮಾಲತಿ ರಾಮಕೃಷ್ಣ ಭಟ್ ಅವರು ಸಾಕಷ್ಟು ಪುಸ್ತಕಗಳನ್ನು ಓದಿ ಓದುಗರಿಗೆ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಅವರು ಮಾಡಿದ ಪುಸ್ತಕಗಳ ಪರಿಚಯ : 


  • ಮಾಲತಿ ರಾಮಕೃಷ್ಣ ಭಟ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW