ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಬೇಕಿದೆ…ಸುಲಭವಾಗಿ ಹಣ ಗಳಿಸುವ ಹುಚ್ಚು ಹಿಡಿದಿದೆ…ಕವಿ ನಾಗರಾಜ ಜಿ.ಎನ್.ಬಾಡ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಹಣವು ಇಂದು ಎಲ್ಲರನ್ನೂ ಆಳುತ್ತಿದೆ
ಬಡವರ ನಿತ್ಯದ ಬವಣೆ ನೋಡದಾಗಿದೆ
ಉಳ್ಳವರ ದರ್ಪ..ಅಹಂಕಾರ ಮಿತಿ ಮೀರುತ್ತಿದೆ
ಆಡಳಿತ ವ್ಯವಸ್ಥೆಯು ಅವರ ಕೈಗೊಂಬೆಯಾಗಿದೆ
ಹದ್ದುಬಸ್ತಿನಲ್ಲಿಡಬೇಕಾದವರು ಮೂಕರಾಗಿದ್ದಾರೆ
ಪುಂಡರ ಅಟ್ಟಹಾಸಕ್ಕೆ ಬದುಕು ಹೈರಾಣವಾಗಿದೆ
ನೆಮ್ಮದಿ ಎನ್ನುವುದು ಯಾರಲ್ಲೂ ಕಾಣದಾಗಿದೆ
ಬೇಕು ಬೇಕೆಂಬ ದುರಾಸೆ ಎಲ್ಲರನ್ನ ಕಿತ್ತು ತಿನ್ನುತ್ತಿದೆ
ಸ್ವಚ್ಛಂದ ನಗುವಿಗೂ ಇಲ್ಲಿ ಬರವು ಬಂದಿದೆ
ಸಾಮಾಜಿಕ ಚಿಂತನೆ ಯಾರಿಗೂ ಬೇಡವಾಗಿದೆ
ವೈಯಕ್ತಿಕ ಹಿತಾಸಕ್ತಿಯಷ್ಟೇ ಬದುಕಾಗಿದೆ
ನಾಳೆಗಳ ಸುಂದರ ಕನಸುಗಳು ಬರಿದಾಗಿದೆ
ಅವರವರದೇ ಚಿಂತೆ ಅವರಲ್ಲಿ ತುಂಬಿದೆ
ಸಮಾಜದ ಹಿತ ಚಿಂತನೆ ಯಾರಿಗೂ ಬೇಡವಾಗಿದೆ
ಸಾಮಾಜಿಕ ಸ್ವಾಸ್ಥ್ಯ ಇಂದು ಕೆಡುತ್ತಾ ಹೋಗಿದೆ
ಎಲ್ಲಾ ರಂಗದಲ್ಲೂ ಅವ್ಯವಸ್ಥೆ ತುಂಬಿ ತುಳುಕುತ್ತಿದೆ
ಎಲ್ಲರ ಕೈಯಲ್ಲೂ ಜಂಗಮವಾಣಿ ಓಡಾಡುತ್ತಿದೆ
ಓದಿ ನಲಿಯುವ ಸಂಸ್ಕೃತಿ ಕಡಿಮೆಯಾಗುತ್ತಿದೆ
ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಬೇಕಿದೆ
ಸುಲಭವಾಗಿ ಹಣ ಗಳಿಸುವ ಹುಚ್ಚು ಹಿಡಿದಿದೆ
ಎದಿರು ಸಿಕ್ಕಾಗ ಹಾಯ್ ಬಾಯ್ಗೆ ಸೀಮಿತವಾಗಿದೆ
ದೂರವಾಣಿಯಲ್ಲಿ ಗಂಟೆಗಟ್ಟಲೆ ಕೊರೆತ ನಡೆದಿದೆ
ನಮ್ಮ ಭವ್ಯ ಸಂಸ್ಕೃತಿಯು ನಶಿಸಿ ಹೋಗುತ್ತಿದೆ
ಸ್ವಾರ್ಥಿಗಳ ಕೈಯಲ್ಲಿ ದುರಾಡಳಿತ ನಡೆಯುತ್ತಿದೆ
ಭವಿಷ್ಯ ಯಾಕೋ ಮಂಕು ಮಂಕಾಗಿ ಕಾಣುತ್ತಿದೆ
ರಕ್ತ ಸಿಕ್ತ ದುಷ್ಟ ಕೈಗಳ ಆಟ ಎಲ್ಲೆಡೆ ಹೆಚ್ಚಾಗಿದೆ
- ನಾಗರಾಜ ಜಿ. ಎನ್. ಬಾಡ, ಕುಮಟ.
