ಕವಿ ಮೇಗರವಳ್ಳಿ ರಮೇಶ್ ಅವರು ಹೊಸ ವರ್ಷದ ಸಂಭ್ರಮದಲ್ಲಿ ಎರಡು ತಲೆಮಾರಿನವರನ್ನು ದೃಷ್ಟಿಕೋನದಲ್ಲಿಟ್ಟುಕೊಂಡು ಹೊಸವರ್ಷದ ವರ್ಣನೆ ಮಾಡಿದ್ದಾರೆ. ಕವನ ಅರ್ಥಪೂರ್ಣವಾಗಿದೆ. ಮುಂದೆ ಓದಿ…
ಕ್ಲಬ್ ನ ದೊಡ್ಡ ಹಾಲ್ ನಲ್ಲಿ
ಸಂತಸದ ಬಲೂನುಗಳು ತೊಗುತ್ತಿವೆ
ಭರವಸೆಯ ಬಣ್ಣ ಬಣ್ಣದ ಲೈಟುಗಳು ಹತ್ತುತ್ತಾ- ಆರುತ್ತಾ
ಝಗಮಗದ ಮಾಯಾಲೋಕ ಸೃಷ್ಟಿಸಿವೆ…
ನೆರೆದಿದ್ದಾರೆ ಬಹಳಷ್ಟು ಜನ ಯುವಕರು, ಯುವತಿಯರು
ಮಧ್ಯ ವಯಸ್ಕರು ಮತ್ತು ಮುದುಕರು ಡಿಸೆಂಬರ್ ಮೂವತ್ತರ ರಾತ್ರಿ
ಹೊಸ ವರ್ಷದ ಸ್ವಾಗತದ ಸಂಭ್ರಮದಲ್ಲಿ…
ಆಗತಾನೇ ನಶೆಯೇರತೊಡಗಿದ ಯುವಕರು
ಕುಣಿಯಲು ಶುರುಹಚ್ಚಿದ್ದಾರೆ ಸಂಗಾತಿಗಳೊಂದಿಗೆ
ಮಧ್ಯವಯಸ್ಕರು, ಬ್ಯುಸಿನೆಸ್ಸು, ಉದ್ಯೋಗ, ಹೊಸ ಮನೆ , ಕಾರು ಇತ್ಯಾದಿ ಇತ್ಯಾದಿ
ಹರಟೆ ಹೊಡೆಯುತ್ತಿದ್ದಾರೆ ಮದ್ಯದ ಗ್ಲಾಸುಗಳನ್ನು ಹಿಡಿದು
ಢಾಳಾಗಿ ಅಲಂಕರಿಸಿಕೊಂಡ ಹೆಂಗಸರು ಬಿಗುಮಾನದಲ್ಲಿ ಬಳುಕುತ್ತಿದ್ದಾರೆ…
ಮುದುಕರಾದರೋ ಕೆಲವೇ ಕೆಲವು ಟೇಬಲ್ಲುಗಳಲ್ಲಿ ಗುಂಪಾಗಿ ಕುಳಿತು
ಮಜ ತೆಗೆದುಕೊಳ್ಳುತ್ತಾ ಹೀರುತ್ತಿದ್ದಾರೆ ನಿಧ ನಿಧಾನ ಮದ್ಯವನ್ನು
ಅವರ ಮಾತು ಕತೆ ಕಳೆದು ಹೋದ ಯೌವನದ ದಿನಗಳ ಸಾಹಸಗಳನ್ನು ಕುರಿತು ನಡೆದಿದೆ.
ಕಾಲೇಜು ದಿನಗಳಲ್ಲಿ ಪ್ರೀತಿಸಿದ ಹುಡುಗಿಯರು,
ಪ್ರೀತಿ ಪ್ರೇಮಗಳ ನಶೆಯಲ್ಲಿ ಹಿಂದೆ ಬಿದ್ದ ಓದು,
ನಂತರದ ದುಡಿಮೆ, ಮದುವೆ,ಮಕ್ಕಳು
ಕಟ್ಟಿದ ಮನೆ, ಮನೆ ತುಂಬಾ ಕನಸುಗಳು ಇತ್ಯಾದಿ ಇತ್ಯಾದಿ.
ಇದಾವುದರ ಪರಿವೆಯೂ ಇಲ್ಲದ ಗಡಿಯಾರದ ಮುಳ್ಳುಗಳು ಮಾತ್ರ
ಜಿಗಿಯುತ್ತಿವೆ ಅಂಕೆಗಳಿಂದ ಅ೦ಕೆಗಳಿಗೆ
ಕಾಯುತ್ತಿದ್ದಾರೆ ಜನ ಹನ್ನೆರಡನೆಯ ಅಂಕೆಯ ಮೇಲೆ ನಡೆಯುವ
ನಿಮಿಷ ಮತ್ತು ಗಂಟೆಯ ಮುಳ್ಳುಗಳ ಸಮಾಗಮಕ್ಕೆ
ಸೆಕೆಂಡು, ನಿಮಿಷ, ಘಂಟೆ, ತಾರೀಖು ಗಳ ಸಂದು ಗೊಂದುಗಳನ್ನೆಲ್ಲ ಸುತ್ತಿ
ಬರುತ್ತಿವೆ ಮುಳ್ಳುಗಳು ಹನ್ನೆರಡರ ಹತ್ತಿರ ಹತ್ತಿರ.
ಹೊರಗೆ ಬೀಳುವಿಬ್ಬನಿಗೆ ಮಂಕಾದ ಬೀದಿ ದೀಪಗಳು ಬೀರುತ್ತಿವೆ ಮಂದ ಬೆಳಕನ್ನು
ಬಸ್ ಸ್ಟಾಪಿನಲಿ ಚಳಿಗೆ ಮುದುಡಿಕೊಂಡು ಮಲಗಿರುವ , ಕನಸುಗಳನ್ನು ಕಳಕೊಂಡ,
ಹೊಸವರ್ಷದ ಭರವಸೆಗಳೇ ಇರದ ಹರಕು ಮಂದಿಯ ಮೇಲೆ
ಅದೋ ಕೊನೆಗೂ ನಿಮಿಷ ಮತ್ತು ಗಂಟೆಯ ಮುಳ್ಳುಗಳು
ಸೇರಿಯೇ ಬಿಟ್ಟವು ಹನ್ನೆರಡನೇಯ ಅಂಕೆಯ ಮೇಲೆ
ಸೇರಿಸಿಯೇ ಬಿಟ್ಟವು ಕಳೆದ ವರ್ಷವನ್ನು ಇತಿಹಾಸಕ್ಕೆ
ಬೀದಿಯನ್ನು ಕವಿದಿದ್ದ ನೀರವ ಮೌನವನ್ನು ಹೊರಗಟ್ಟಿ
ಬಲೂನುಗಳು ಸಿಡಿದವು, ಪಟಾಕಿಗಳು ಢಮ ಢಮಿಸಿದವು
ಕೊಯ್ದ ಕೇಕುಗಳ ತುಣುಕುಗಲನ್ನು ಒಬ್ಬರಿಗೊಬ್ಬರು ತಿನ್ನಿಸಿ ಸಂಭ್ರಮಿಸಿದರು.
ಹೆಚ್ಚಾದದದ್ದನ್ನು ಮುಖಗಳಿಗೆ ಬಳಿದರು…
ತಾರಕಕ್ಕೇರಿದ ತಾಳವಾದ್ಯಗಳ ಬಿರುಸಿಗೆ
ಹುಚ್ಚೆದ್ದು ಕುಣಿಯ ತೊಡಗಿದರು ಯುವಕರು
ಕನಸುಗಳೆಲ್ಲ ಕರಗಿ ಹೋದ ಮುದುಕರು
ಗೊರಕೆ ಹೊಡೆಯ ತೊಡಗಿದ್ದರು ತೇಬಲ್ಲಿನ ಮೇಲೊರಗಿ
ಬಸ್ ಸ್ಟಾಪಿನಲ್ಲಿ ಮಲಗಿದ್ದಸಂಸಾರದ
ಮಗುವೊಂದು ಬೆಚ್ಚಿ ಬಿದ್ದು ಅಳತೊಡಗಿತು
ಏಸುವಿನ ಕರುಣೆ ಹೊತ್ತ ದೂರದ ಚರ್ಚಿನ ಗೋಪುರದ
ಗಂಟೆ ದನಿ ಗಾಳಿಯಲೆಗಳಲ್ಲಿ ರಿಂಗಣಿಸಿತು.
- ಮೇಗರವಳ್ಳಿ ರಮೇಶ್