ಭಾರತದ ಪ್ರಖ್ಯಾತ ಪರ್ವತ ರೈಲುಗಳುಗಂಟೆಗೆ ೧೫ ರಿಂದ ೨೦ ಕಿಮೀ ವೇಗದಲ್ಲಿ ಚಲಿಸುವ ಶತಾಯುಷಿ ರೈಲುಗಳು ನಮ್ಮ ದೇಶದಲ್ಲಿನ್ನೂ ಚಾಲ್ತಿಯಲ್ಲಿದ್ದು, ಅವುಗಳನ್ನು’ಪರ್ವತ ರೈಲು ಮಾರ್ಗ’ ವೆಂದೇ ಪ್ರಖ್ಯಾತಿ ಪಡೆದಿವೆ. ಮತ್ತು ಈಗಲೂ ಓಡುತ್ತಿರುವ ಐದಾರು ರೈಲುಗಳ ಪಟ್ಟಿ ಇಲ್ಲಿವೆ.

ನಮ್ಮ ದೇಶದಲ್ಲೀಗ ಬುಲೆಟ್ ರೈಲು ಓಡಿಸುವ ಮಾತು ಕೇಳಿಬರುತ್ತಿದೆ. ಸಾಧಾರಣ ವೇಗದ ರೈಲುಗಳನ್ನು ಶೀಘ್ರಗಾಮಿಗಳನ್ನಾಗಿ ಮಾಡುವ ಯೋಜನೆಯಲ್ಲಿ ರೇಲ್ವೆ ಇಲಾಖೆ ತೊಡಗಿಕೊಂಡಿದೆ. ಇದೆಲ್ಲದರ ನಡುವೆ ಗಂಟೆಗೆ ೧೫ ರಿಂದ ೨೦ ಕಿಮೀ ವೇಗದಲ್ಲಿ ಚಲಿಸುವ ಶತಾಯುಷಿ ರೈಲುಗಳು ನಮ್ಮ ದೇಶದಲ್ಲಿನ್ನೂ ಚಾಲ್ತಿಯಲ್ಲಿವೆ. ಅವುಗಳನ್ನು ಹಾಗೆಯೇ ಉಳಿಸಿಕೊಂಡು ಹೋಗುವ ನಿರ್ಧಾರವಾಗಿದೆ. ಯಾವುವು ಈ ರೈಲು? ಬನ್ನಿ ತಿಳಿಯೋಣ. ಪರ್ವತ ರೈಲು ಮಾರ್ಗವೆಂದೇ ಪ್ರಖ್ಯಾತಿ ಪಡೆದಿರುವ ಈಗಲೂ ಓಡುತ್ತಿರುವ ಐದಾರು ರೈಲುಗಳು ಈ ಪಟ್ಟಿಯಲ್ಲಿ ಇವೆ.

ಫೋಟೋ ಕೃಪೆ : Times of India

ಎಪ್ಪತ್ತರ ದಶಕದಲ್ಲಿ ದೇಶಾದ್ಯಂತ ಜಯಭೇರಿ ಹೊಡೆದ ಹಿಂದಿ ಚಿತ್ರ “ಆರಾಧನಾ” ದಲ್ಲಿ ‘ಮೇರಿ ಸಪನೋಂಕಿ ರಾಣಿ ಕಬ್ಬು ಆಯೇಗಿ ತೂ…’ ಹಾಡಿನಲ್ಲಿ ಶರ್ಮಿಳಾ ಠಾಗೋರ್ ಪ್ರಯಾಣಿಸುವ ರೈಲನ್ನು ಗಮನಿಸದವರಾರು? ಮುಂದೆ ೧೯೯೮ ರಲ್ಲಿ ಜಯಭೇರಿ ಬಾರಿಸಿದ ಮತ್ತೊಂದು ಹಿಂದಿ ಚಿತ್ರ “ದಿಲ್ ಸೇ” ಚಿತ್ರದಲ್ಲಿ ಶಾರೂಖ್ ಖಾನ್ ಮಾದಕ ನಟಿ ಮಲಾಯಿಕ ಜೊತೆಗೆ “ಚೈಯ್ಯ ಚೈಯ್ಯ” ಹಾಡಿಗೆ ಕುಣಿದ ರೈಲು ಮಾರ್ಗವನ್ನು ಮರೆಯಲುಂಟೇ? ಈ ದೃಶ್ಯಗಳಲ್ಲಿ ಕಾಣಿಸಿಕೊಂಡ ಡಾರ್ಜಿಲಿಂಗ್ ಹಿಮಾಲಯನ್ ರೈಲು ಹಾಗೂ ನೀಲಗಿರಿ ಮೌಂಟೇನ್ ರೈಲುಗಳು ಇಂದಿಗೂ ತಮ್ಮ ಯಥಾಸ್ಥಿತಿಯನ್ನು ಕಾಪಾಡಿಕೊಂಡು ಪ್ರಸಿದ್ಧ ಆಕರ್ಷಣೆಯಾಗಿ ಉಳಿದಿವೆ. ಅನೇಕ ದೇಶಿ ವಿದೇಶಿ ಚಲನಚಿತ್ರಗಳಲ್ಲಿ ಈ ರೈಲುಗಳು ಕಾಣಿಸಿಕೊಂಡಿವೆ. ಇದಲ್ಲದೇ ಇದೇ ಶ್ರೇಣಿಗೆ ಸೇರುವ ಕಾಂಗ್ರಾ ಕಣಿವೆಯ ರೈಲು, ಕಲ್ಕಾ ಶಿಮ್ಲಾ ರೈಲು, ಮಾಥೆರಾನ್ ಬೆಟ್ಟದ ರೈಲುಗಳನ್ನೊಳಗೊಂಡ ಪರ್ವತ ರೈಲುಗಳು ಇಡೀ ವಿಶ್ವದ ಸುಮಾರು ಇಪ್ಪತ್ತು ನ್ಯಾರೋ/ ಮೀಟರ್ ಗೇಜ್ ಮಾರ್ಗದ ಶತಮಾನ ದಾಟಿದ ರೈಲುಗಳ ಪೈಕಿ ಪ್ರಮುಖವಾಗಿವೆ. ಇವುಗಳಲ್ಲಿ ಕಲ್ಕಾ ಶಿಮ್ಲಾ, ಡಾರ್ಜಿಲಿಂಗ್ ಹಿಮಾಲಯನ್ ಮತ್ತು ನೀಲಗಿರಿ ರೈಲು ಮಾರ್ಗಗಳು ಯುನೆಸ್ಕೋದ ಪಾರಂಪರಿಕ ತಾಣಗಳೆಂದು ಗುರುತಿಸಲ್ಪಟ್ಟಿವೆ. ಮಾಥೆರಾನ್ ರೈಲು ಸಹ ಈ ಹಿರಿಮೆ ಹೊಂದಲು ಸತತ ಪ್ರಯತ್ನ ನಡೆಸುತ್ತಿದೆ.

ಫೋಟೋ ಕೃಪೆ : wikipedia

ಈ ಪರ್ವತ ರೈಲುಗಳ ಇತಿಹಾಸವನ್ನು ಗಮನಿಸಿದರೆ ಅನೇಕ ರೋಚಕ ಸಂಗತಿಗಳು ಬಿಚ್ಚಿಕೊಳ್ಳುತ್ತವೆ. ಹಿಮಾಲಯ ಹಾಗೂ ಇತರ ಪರ್ವತಗಳ ದುರ್ಗಮ ಪ್ರದೇಶಗಳ ಮೇಲೆ ಪ್ರಭುತ್ವ ಸ್ಥಾಪಿಸುವ ಉದ್ದೇಶ ಹೊಂದಿದ ಬ್ರಿಟಿಷ್ ಅಧಿಕಾರಿಗಳು ತೋರಿದ ಆಸಕ್ತಿಯೇ ಈ ಕೆಲವು ಮಾರ್ಗಗಳ ಸ್ಥಾಪನೆಗೆ ಕಾರಣವಾಯಿತು. ಬ್ರಿಟಿಷರ ಅಚ್ಚುಮೆಚ್ಚಿನ ಬೇಸಿಗೆ ಪ್ರವಾಸಿ ತಾಣಗಳಾದ ಶಿಮ್ಲಾ, ಡಾರ್ಜಿಲಿಂಗ್, ಕಾಂಗ್ರಾ ಕಣಿವೆ, ನೀಲಗಿರಿಗಳಂತಹ ಗಿರಿಧಾಮಗಳು ರೈಲು ಮಾರ್ಗಗಳ ಸ್ಥಾಪನೆಗೆ ಸ್ವಾಭಾವಿಕ very ಆಯ್ಕೆಗಳಾದವು. ಮಾಥೆರಾನ್ ಸ್ಥಳೀಯ ಉದ್ಯಮಿಯ ಆಯ್ಕೆಯಾಗಿತ್ತು.೧೮೭೮ ರಲ್ಲಿ ಆರಂಭವಾದ ಡಾರ್ಜಿಲಿಂಗ್ ರೈಲಿನ ಕಾಮಗಾರಿ ೧೮೮೧ ಕ್ಕೆ ಕಾರ್ಯಾರಂಭ ಮಾಡಿತು. ಎರಡು ಅಡಿ ಅಗಲದ ನ್ಯಾರೋ ಗೇಜ್ ಹೊಂದಿರುವ ಈ ಮಾರ್ಗದ ಉದ್ದ ೮೮ ಕಿಮೀ. ಪಶ್ಚಿಮ ಬಂಗಾಳದ ಸಿಲಿಗುರಿಯಿಂದ ಡಾರ್ಜಿಲಿಂಗ್ ವರೆಗೆ ಇರುವ ಈ ಮಾರ್ಗದಲ್ಲಿ ೪ ಲೂಪ್ ಗಳು ಹಾಗೂ ೪ ಜಿಗ್ ಜಾಗ್ ರಿವರ್ಸ್ ಗಳಿವೆ. ಅತಿ ಎತ್ತರದ ಪ್ರದೇಶದಲ್ಲಿರುವ ಬಟೌಸಿಯಾ ಲೂಪ್ ಒಂದು ಇಂಜಿನಿಯರಿಂಗ್ ಕೌತುಕ! ವೃತ್ತಾಕಾರದಲ್ಲಿ ಸುತ್ತುವ ರೈಲು ೩೬೦ ಡಿಗ್ರಿಗಳ ತಿರುವು ಪಡೆಯುವ ಮಾರ್ಗ ಇದು. ಸ್ವಾತಂತ್ರ್ಯ ನಂತರ ಗೂರ್ಖಾ ಯೋಧರ ಸ್ಮರಣಾರ್ಥ ನಿರ್ಮಿಸಿರುವ ಸ್ಮಾರಕ ಹಾಗೂ ಇಲ್ಲಿಂದ ಕಾಣುವ ಕಾಂಚನ್ ಜುಂಗಾ ಪರ್ವತದ ನೋಟ ಈ ಪ್ರವಾಸದ ವಿಶೇಷ ಆಕರ್ಷಣೆ. ಪ್ರಸಕ್ತ ಡೀಸೆಲ್ ಇಂಜಿನ್ ನಿಂದ ಓಡುತ್ತಿದ್ದರೂ ಪ್ರಾರಂಭದ ಉಗಿ ಇಂಜಿನ್ ಅನ್ನು ಸಹ ಕೆಲಸ ಮಾಡುವ ಸ್ಥಿತಿಯಲ್ಲಿ ಉಳಿಸಿಕೊಂಡು ವಿಶೇಷ ಸಂದರ್ಭಗಳಲ್ಲಿ ಓಡಿಸಲಾಗುತ್ತದೆ. ಇದು ಈ ವರ್ಗದಲ್ಲಿ ಯುನೆಸ್ಕೋ ಪಾರಂಪರಿಕ ತಾಣದ ಮುದ್ರೆ ಒತ್ತಿಸಿಕೊಂಡ ಮೊದಲ ರೈಲು ಮಾರ್ಗ.

ಫೋಟೋ ಕೃಪೆ : tamilnadu tourism

ತಮಿಳು ನಾಡಿನ ನೀಲಗಿರಿಯ ರೈಲಿನ ರೂಪುರೇಷೆ ೧೮೭೮ ರಲ್ಲಿ ಪ್ರಾರಂಭಗೊಂಡರೂ ನಿರ್ಮಾಣ ಕಾರ್ಯ ಆರಂಭವಾಗಿದ್ದು, ೧೮೯೪ ರಲ್ಲಿ ಪರ್ವತ ಭಾಗದ ೧,೦೦೦ ಅಡಿಯಿಂದ ೭,೨೦೦ ಅಡಿ ಎತ್ತರಕ್ಕೆ ಏರುವ ದೊಡ್ಡ ಸವಾಲಾಗಿತ್ತು. ಭಾರತದ ಪರ್ವತ ಮಾರ್ಗದ ರೈಲುಗಳಲ್ಲಿ ಮೀಟರ್ ಗೇಜ್ ಹೊಂದಿರುವ ಏಕಮಾತ್ರ ರೈಲು ಮಾರ್ಗ ಇದಾಗಿದೆ. ಮೆಟ್ಟುಪಾಳ್ಯಂ ನಿಂದ ಉದಕಮಂಡಲಂ ವರೆಗೆ ಸಾಗುವ ಈ ಮಾರ್ಗದಲ್ಲಿ ೨೦೮ ತಿರುವುಗಳು, ೧೬ ರಾಕ್ ಅಂಡ್ ಪಿನಿಯನ್ ಎಂಬ ತಂತ್ರಜ್ಞಾನದ ಬಳಕೆ ಈ ಮಾರ್ಗದ ವಿಶೇಷ. ಉಗಿ ಇಂಜಿನ್ ಗಳನ್ನು ಈಗಲೂ ಬಳಸಲಾಗುತ್ತಿದೆ.

೯೬ ಕಿಮೀ ಉದ್ದ ಕಲ್ಕಾ ಶಿಮ್ಲಾ ಮಾರ್ಗದ ಕೆಲಸ ೧೮೯೮ ರಲ್ಲಿ ಪ್ರಾರಂಭಗೊಂಡು, ೧೯೦೩ ರಲ್ಲಿ ಆಗಿನ ವೈಸ್ ರಾಯ್ ಲಾರ್ಡ್ ಕರ್ಜನ್ ನಿಂದ ಉದ್ಘಾಟಿಸಲ್ಪಟ್ಟಿತು. ಎರಡೂವರೆ ಅಡಿಯ ನ್ಯಾರೋ ಗೇಜ್ ಮಾರ್ಗ ಶಿವಾಲಿಕ್ ಪರ್ವತ ಶ್ರೇಣಿಯಲ್ಲಿ (ಹಿಮಾಚಲ ಪ್ರದೇಶ ಮತ್ತು ಹರಿಯಾಣ ರಾಜ್ಯಗಳನ್ನು ಒಳಗೊಂಡಂತೆ) ಸಾಗುತ್ತದೆ. ೧೦೩ ಸುರಂಗಗಳು, ೮೬೪ ಸೇತುವೆಗಳು ಈ ಮಾರ್ಗದಲ್ಲಿವೆ. ಬಹು ಕಮಾನು ಮೊಗಸಾಲೆಯುಳ್ಳ ವಿಶಿಷ್ಟ ರೋಮನ್ ಮಾದರಿಯ ಸೇತುವೆಗಳು ಈ ಮಾರ್ಗದ ವೈಶಿಷ್ಟ್ಯ. ಇದರಲ್ಲಿ ೩೩ ನೆಯ ಸುರಂಗದ ಬಗ್ಗೆ ( ಬಾರೋಗ್ ಟನಲ್) ಬಗ್ಗೆ ಒಂದು ರೋಚಕ ದಂತಕತೆ ಇದೆ.

ಫೋಟೋ ಕೃಪೆ : through picture

ಬಾರೋಗ್ ಎಂಬ ಬ್ರಿಟಿಷ್ ಇಂಜಿನಿಯರ್ ಈ ೧೧೪೩ ಮೀಟರ್ ಉದ್ದದ ಸುರಂಗ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದ. ಆತ ಕ್ಲುಪ್ತ ಸಮಯದಲ್ಲಿ ಕಾರ್ಯ ಮುಗಿಸುವ ಉತ್ಸಾಹದಿಂದ ಎರಡೂ ದಿಕ್ಕಿನಿಂದ ಏಕ ಕಾಲದಲ್ಲಿ ಸುರಂಗ ಕೊರೆಯಲು ನಿಶ್ಚಯಿಸಿ ಕಾರ್ಯ ಆರಂಭಿಸಿದ. ದುರದೃಷ್ಟವಶಾತ್ ಎರಡೂ ಕಡೆಯಿಂದ ಹೊರಟ ಸುರಂಗಗಳು ಪರಸ್ಪರ ಎದುರಾಗಲೇ ಇಲ್ಲ. ಈ ತಪ್ಪಿಗೆ ಬ್ರಿಟಿಷ್ ಸರ್ಕಾರ ಅವನಿಗೆ ಕೇವಲ ಒಂದು ರೂಪಾಯಿ ದಂಡ ವಿಧಿಸಿತು. ಇದರಿಂದ ಬೇಸತ್ತ ಬಾರೋಗ್ ಈ ಸುರಂಗದಲ್ಲಿಯೇ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ. ಈಗಲೂ ಈ ಸುರಂಗದಲ್ಲಿ ಅವನ ಆತ್ಮ ಸಿಗರೇಟು ಹಚ್ಚಲು ಬೆಂಕಿ ಕಡ್ಡಿ ಹುಡುಕಿಕೊಂಡು ಅಲೆಯುತ್ತಿದೆಯೆಂದು ಸ್ಥಳೀಯರ ಅಭಿಪ್ರಾಯ. ಟಿವಿ ವಾಹಿನಿಗಳು (ಕನ್ನಡದಲ್ಲೂ ಸಹ) ಇದರ ಬಗ್ಗೆ ಕಾರ್ಯಕ್ರಮ ರೂಪಿಸಿ ಪ್ರಸಾರ ಮಾಡಿವೆ.

ಫೋಟೋ ಕೃಪೆ : twitter

ಟಾಯ್ ಟ್ರೈನ್ ಎಂದೇ ಪ್ರಸಿದ್ಧವಾಗಿರುವ ಮಾಥೆರಾನ್ ಹಿಲ್ ರೈಲ್ವೇ ಮಹಾರಾಷ್ಟ್ರ (ಮುಂಬೈ ಸಮೀಪ) ದಿಂದ ಮಾಥೆರಾನ್ ಬೆಟ್ಟದ ನೆತ್ತಿವರೆಗೆ ಕೇವಲ ೨೦ ಕಿಮೀ ಕ್ರಮಿಸುತ್ತದೆ. ಇದೂ ಸಹ ಎರಡು ಅಡಿಯ ನ್ಯಾರೋ ಗೇಜ್ ಮಾರ್ಗ. ಮಾಥೆರಾನ್ ಮುಂಬೈಯಿಗರ ಅಚ್ಚುಮೆಚ್ಚಿನ ಪ್ರವಾಸಿ ತಾಣ. ಇದೊಂದು ಪರಿಸರ ಸ್ನೇಹಿ ಗಿರಿಧಾಮ. ರೈಲು ಸಹ ಊರಿಂದ ಆಚೆಗೇ ನಿಲ್ಲುತ್ತದೆ. ಈ ಊರಲ್ಲಿ ಯಾವುದೇ ಪೆಟ್ರೋಲ್ ಡೀಸೆಲ್ ವಾಹನಗಳಿಗೆ ಅವಕಾಶವಿಲ್ಲ. ಕುದುರೆ ಅಥವಾ ಕಾಲ್ನಡಿಗೆಯಲ್ಲೇ ಇಲ್ಲಿ ಸುತ್ತಬೇಕು. ೧೯೦೭ರಲ್ಲಿ ಕಾರ್ಯಾರಂಭ ಮಾಡಿದ ಈ ಮಾರ್ಗದ ವಿಶೇಷವೆಂದರೆ ಇದು ಬ್ರಿಟಿಷರ ಕೊಡುಗೆಯಲ್ಲ! ಉದ್ಯಮಿಗಳಾದ ಆಡಮ್ ಜಿ ಪೀರ್ ಭಾಯ್ ಮತ್ತು ಅವರ ಮಗ ಅಬ್ದುಲ್ ಹುಸೇನ್ ಎಂಬ ಉದ್ಯಮಿ ಪರಿವಾರದವರು ಈ ಮಾರ್ಗವನ್ನು ನಿರ್ಮಿಸಿದರು.

ಫೋಟೋ ಕೃಪೆ : india today

ಕಾಂಗ್ರಾ ಕಣಿವೆಯ ರೈಲು ಮಾರ್ಗ ೧೯೨೯ ರಲ್ಲಿ ಆರಂಭವಾಯಿತು. ೧೬೪ ಕಿಮೀ ಉದ್ದದ ಎರಡೂವರೆ ಅಡಿಯ ನ್ಯಾರೋ ಗೇಜ್ ಮಾರ್ಗ. ೯೭೧ ವಿಶೇಷ ರೀತಿಯಲ್ಲಿ ನಿರ್ಮಿಸಲ್ಪಟ್ಟ ಸೇತುವೆಗಳು ಹಾಗೂ ಎರಡೇ ಸುರಂಗಗಳು ಈ ಮಾರ್ಗದಲ್ಲಿವೆ. ಪಂಜಾಬಿನ ಪಠಾಣ್ ಕೋಟ್ ನಿಂದ ಹಿಮಾಚಲ ಪ್ರದೇಶದ ಜೋಗಿಂದರ್ ನಗರದ ವರೆಗೆ ಇರುವ ಈ ಮಾರ್ಗವನ್ನು ಐದೂವರೆ ಅಡಿ ಅಗಲದ ಬ್ರಾಡ್ ಗೇಜ್ ಮಾರ್ಗವಾಗಿ ಪರಿವರ್ತಿಸುವ ಆಲೋಚನೆ ರೈಲ್ವೇ ಇಲಾಖೆಗೆ ಇದೆ.

ಈ ಎಲ್ಲಾ ಮಾರ್ಗಗಳು ಈಗ ಭಾರತೀಯ ರೈಲ್ವೆ ಆಡಳಿತಕ್ಕೆ ಒಳಪಟ್ಟು ಅತ್ಯಂತ ಕಾಳಜಿಯ ನಿರ್ವಹಣೆಗೆ ಒಳಪಟ್ಟಿವೆ. ಆನ್ ಲೈನ್ ಟಿಕೆಟ್ ಸೇವೆ ಸಹಾ ಈ ಎಲ್ಲ ರೈಲುಗಳಲ್ಲಿ ಲಭ್ಯವಿವೆ. ಮೋಜಿನ ಪ್ರವಾಸಗಳೇ ಅಲ್ಲದೆ ಇವುಗಳಲ್ಲಿನ ತಾಂತ್ರಿಕ ವಿಶೇಷಗಳನ್ನು ಅಧ್ಯಯನ ಮಾಡಲು ದೇಶ ವಿದೇಶಗಳಿಂದ ಪರಿಣತರು ಇಲ್ಲಿಗೆ ಆಗಾಗ ಭೇಟಿ ನೀಡುತ್ತಿರುತ್ತಾರೆ.


  • ಶಿವಕುಮಾರ್ ಬಾಣಾವರ  (ನಿವೃತ್ತ, ಕಾರ್ಯಪಾಲಕ ಇಂಜೀನಿಯರ್ – ಕೆ. ಪಿ.ಸಿ. ಎಲ್)

5 1 vote
Article Rating

Leave a Reply

2 Comments
Inline Feedbacks
View all comments
ರಘುರಾಂ

ಅತ್ಯುತ್ತಮ ಮಾಹಿತಿ. ಚೆನ್ನಾಗಿದೆ.

Malati

ಉತ್ತಮ ಮಾಹಿತಿ… ನಾವು ಈ darjeeling ನೋಡಿದೀವಿ. Batasia loop… ತುಂಬಾ ಸುಂದರ ತಾಣ

Home
Search
All Articles
Videos
About
2
0
Would love your thoughts, please comment.x
()
x
%d bloggers like this:
Aakruti Kannada

FREE
VIEW