ನೀನು ತುಂಬಾ ಶ್ರದ್ಧೆಯಿಂದ ಜಪಿಸುತ್ತಿದೆ. ಪ್ರತಿಫಲ ಮಾತ್ರ ಇಲ್ಲ! ಎಂದು ಸೂಫಿ ಸಂತನಿಗೆ ಶೈತಾನ ಹೇಳಿದಾಗ ಏನಾಯಿತು?… ಇಮ್ತಿಯಾಜ್ ಖಾನ್ ಅವರ ಇಂಗ್ಲಿಷ್ ನಿಂದ ಅನುವಾದ ಮಾಡಿದ ಈ ಕತೆಯನ್ನು ತಪ್ಪದೆ ಓದಿ…
ರಾತ್ರಿಯಿಡೀ ಒಬ್ಬ ಸೂಫಿ ಸಂತನು, ತುಟಿಗಳು ಸೀಳಿ ರಕ್ತಸ್ರಾವವಾಗುವವರೆಗೆ “ಅಲ್ಲಾಹು, ಅಲ್ಲಾಹು ಎಂದು ಜಪಿಸುತ್ತ ತನ್ನ ದೈವವನ್ನು ಕರೆದನು. ಅವನಿಗೆ ಉತ್ತರ ಸಿಗಲಿಲ್ಲ.
ಆಗಲೇ ಅರ್ಧ ರಾತ್ರಿ ಕಳೆದಿತ್ತು. ರಾತ್ರಿಯ ಕೊನೆಯ ಪಹರೆಯೂ ಅಂತ್ಯವಾಗುತ್ತಿತ್ತು. ಸಮಯ ಸಾಧಕ ಶೈತಾನನು ಆಗ ಅವನೆದುರು ಪ್ರತ್ಯಕ್ಷನಾದನು, ‘ಹೇ! ಮಿಸ್ಟರ್, ನೀನು ರಾತ್ರಿಯಿಡೀ ದೇವನಿಗೆ ಕರೆದೆ. ನಿನ್ನ ತುಟಿಗಳು ಒಡೆದು ಹೋದವು. ಆದರೆ ಅವನು ‘ಇಗೋ ಇಲ್ಲಿದ್ದೇನೆ ನಾನು” ಎಂದು ಮಾತ್ರ ಉತ್ತರಿಸಲಿಲ್ಲ. ನೀನು ತುಂಬಾ ಶ್ರದ್ಧೆಯಿಂದ ಜಪಿಸುತ್ತಿದೆ. ಪ್ರತಿಫಲ ಮಾತ್ರ ಇಲ್ಲ! ನಾನು ನಿನಗೆ ಏನು ಹೇಳುತ್ತೇನೆಂದರೆ, ನೀನು ಈ ಮರುಗುವಿಕೆ ಬಿಡು, ನನ್ನನ್ನು ಕರೆ. ನಾನು ನೇರ ಬಂದು ನಿನ್ನನ್ನು ಸಂತೃಪ್ತಿ ಪಡಿಸುವೆನು.
ಆತ ಶೈತಾನನ ಮಾತು ಕಿವಿಗೆ ಹಾಕಿಕೊಳ್ಳಲಿಲ್ಲ. ಆದರೆ ಅವನು ಖಿನ್ನತೆಗೆ ಒಳಗಾಗಿ ಹೇ ಪ್ರಭು… ಎನ್ನುತ್ತ ನೆಲದ ಮೇಲೆ ಕುಸಿದನು. ಅವನು ಅಲ್ಲೇ ಗಾಢ ನಿದ್ರೆಗೆ ಜಾರಿದನು. ಅಂದು ಕನಸಿನಲ್ಲಿ ಅವನು ಪ್ರವಾದಿ ಅಬ್ರಹಾಂನನ್ನು ಕಂಡನು. ಅವರು ‘ಅಲ್ಲಾಹನನ್ನು ಕರೆದು ನೀನು ಏಕೆ ವಿಷಾದಿಸುತ್ತೀಯಾ? ಎಂದು ಕೇಳಿದರು.
ಆ ವ್ಯಕ್ತಿ , ‘ನಾನು ಪ್ರತಿ ನಿತ್ಯ ರಾತ್ರಿ ಏಕಾಂತದಲ್ಲಿ ಕುಳಿತು “ಅಲ್ಲಾಹು ಅಲ್ಲಾಹು ಎಂದು ಕರೆಯುತ್ತೇನೆ. ಆದರೆ ಒಮ್ಮೆಯೂ ಅವನು ಉತ್ತರಿಸುವುದಿಲ್ಲ. ಅದಕ್ಕೆ ನಿರಾಸೆಯಾಗಿದೆ’ ಎಂದು ಹೇಳಿದನು.
ಅಬ್ರಹಾಂ ವಿವರಿಸಿದರು, “ಮನುಷ್ಯನೇ, ನಿನ್ನ ದೇವನು ಹೇಳಿದ್ದಾನೆ, ನೀವು ಅಲ್ಲಾಹು ಎಂದು ಕರೆಯುವುದೇ ನಿಮಗೆ ಅವನ ಉತ್ತರವಾಗಿದೆ, ನಿಮ್ಮ ಹಂಬಲವೇ ನಿಮಗೆ ಅವನ ಸಂದೇಶವಾಗಿದೆ. ಅವನನ್ನು ತಲುಪಲು ನಿಮ್ಮ ಎಲ್ಲಾ ಪ್ರಯತ್ನಗಳು ನಿಮ್ಮನ್ನು ತಲುಪಲು ಅವನ ಪ್ರಯತ್ನಗಳಾಗಿವೆ. ಅವನ ಬಗೆಗಿನ ಭಯ ಮತ್ತು ಸಂಪ್ರೀತಿ ಅವನನ್ನು ಪಡೆಯಲು ಒಂದು ಕುಣಿಕೆಯಾಗಿದೆ”.
ಹಾಗಾಗಿ ಓ ಮನುಷ್ಯನೇ, ‘ನಿನ್ನ ಸಾವಿರಾರು ಕರೆಗಳಿಗೆ ಅವನ ಮೌನದ ಪ್ರತ್ಯುತ್ತರವೇ ಹೆಚ್ಚು ಎಂದು ಭಾವಿಸು. ಅವನನ್ನು ಕೂಗುವ ಅವಶ್ಯಕತೆ ಇಲ್ಲ. ಮೆಲ್ಲನೆ ಉಲಿದರೂ ಆತ ಕೇಳುತ್ತಾನೆ. ನಿರಾಸೆ ಬೇಡ. ಅವನನ್ನು ಕೂಡುವವರೆಗೆ ಕರೆಯುತ್ತಿರು” ಎಂದು ಸುಮ್ಮನಾದರು.
ಜಲಾಲ್-ಉದ್-ದಿನ್ ರೂಮಿ
- ಇಮ್ತಿಯಾಜ್ ಖಾನ್ (ಇಂಗ್ಲೀಷ್ ಮೂಲ. HIKAYAT RUMI) ಕನ್ನಡಕ್ಕೆ – ಸಂತಶಿಶು.
