ಕರ್ನಾಟಕ ಲೇಖಕಿಯರ ಸಂಘ ಜಿಲ್ಲಾ ಘಟಕದ ವತಿಯಿಂದ ಪತ್ರಕರ್ತರ ಭವನದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ರಾಜ್ಯ ಮಟ್ಟದ ಕವಿಗೋಷ್ಠಿಯ ವರದಿ ತಪ್ಪದೆ ಓದಿ…
ಕಲೇಸಂ ಚಿತ್ರದುರ್ಗ ಜಿಲ್ಲಾ ಘಟಕದಿಂದ ಆಯೋಜಿಸಲಾಗಿದ್ದ ಉಪನ್ಯಾಸ ಮತ್ತು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮ ಸರ್ಕಾರಿ ಕಲಾ ಕಾಲೇಜು ಪ್ರಾಂಶುಪಾಲರಾದ ಡಾ.ಜೆ.ಕರಿಯಪ್ಪ ಮಾಳಿಗೆ ಇವರು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು.
ಮಹಿಳೆಗೆ ಭೂಮಿ ತೂಕದ ಅರ್ಥವಿದೆ. ಸಹಜತೆಯಲ್ಲಿ ಆಕರ್ಷಣೆ, ಸೌಂದರ್ಯ, ಸೊಗಸಿರುತ್ತದೆ. ಮಹಿಳೆ ಸಾಂಸ್ಕೃತಿಕ, ಸಂಘಟನಾತ್ಮಕವಾಗಿ ಬೆಳೆಯಬೇಕು. ಮಹಿಳಾ ಚಳುವಳಿಗಳು ಹೇಗೆ ಹುಟ್ಟಿಕೊಂಡವು ಎನ್ನುವ ಬಗ್ಗೆಯೂ ನೀವುಗಳು ಮಾಹಿತಿ ತಿಳಿದುಕೊಂಡಿರಬೇಕು. ಸಾಧನೆಗೆ ಪೂರಕವಾದ ವಾತಾವರಣ ಸೃಷ್ಠಿಯಾಗಬೇಕು. ಹೆಣ್ಣಾದರೆ ಮಾತ್ರ ಶರಣಾಗಲು ಸಾಧ್ಯ ಎಂದು ಹೇಳಿದರು.

ಮಹಿಳೆ ಶಿಕ್ಷಣವಂತಳಾದಾಗ ಎಲ್ಲ ಕ್ಷೇತ್ರಗಳಲ್ಲೂ ಸ್ಥಾನ ಸಿಗುತ್ತದೆ ಎಂದು ಕಾರ್ಯಕ್ರಮದ ಕುರಿತು ಮಾತಾಡಿದರು. ಕನ್ನಡದಲ್ಲಿ ಮಹಿಳಾ ಸಾಹಿತ್ಯ ಸೃಷ್ಠಿಯಾಗಿದೆ. ಚಳುವಳಿ ಎಂದರೆ ಕೇವಲ ವಿರೋಧಿಸುವುದಲ್ಲ. ಸಾಮರಸ್ಯ, ಸುಧಾರಣೆ, ಪ್ರೀತಿಯಿರುತ್ತದೆ. ಪ್ರೀತಿಯಿಂದ ಜಗತ್ತನ್ನು ಗೆಲ್ಲಬಹುದು ಎನ್ನುವುದನ್ನು ಬುದ್ದ ತೋರಿಸಿದ್ದಾನೆ. ಜಗದ, ಮನಸ್ಸಿನ ಬೆಳಕು ಮಹಿಳೆ. ಶಿಕ್ಷಣವೆಂದರೆ ಕೇವಲ ಅಕ್ಷರ ತಿಳುವಳಿಕೆಯಲ್ಲ. ಜೀವನದಲ್ಲಿನ ಅನುಭವ ಕೂಡ ಶಿಕ್ಷಣವೆ. ಕೀಳರಿಮೆ, ಹಿಂಜರಿಕೆಯನ್ನು ಬಿಟ್ಟು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಭಾಗವಹಿಸುವುದರಿಂದ ನಿಮ್ಮಲ್ಲಿ ಆತ್ಮವಿಶ್ವಾಸ ಮೂಡಿಸುತ್ತದೆ. ಜನಪದರಲ್ಲಿ ಸ್ತ್ರೀಗೆ ಗೌರವವಿದೆ. ಮಹಿಳೆ-ಪುರುಷ, ಜಾತಿ-ಧರ್ಮದ ನಡುವೆ ಒಡಕಿರುವ ಇಂದಿನ ಕಾಲಘಟ್ಟದಲ್ಲಿ ಸೌಹಾರ್ಧ, ಸಹಬಾಳ್ವೆಯಿಂದ ಇರುವುದನ್ನು ಕಲಿತಾಗ ಮಾತ್ರ ಎಲ್ಲಿಯೂ ಸಂಘರ್ಷಕ್ಕೆ ಜಾಗವಿರುವುದಿಲ್ಲ. ವಾಸ್ತವ ಪ್ರ್ರಜ್ಞೆಯ ಸಂಕೇತವಾಗಿರುವ ಮಹಿಳೆಯರು ಸೂಕ್ಷ್ಮ ಸಂವೇದನೆಗಳನ್ನು ಬೆಳೆಸಿಕೊಳ್ಳುವಂತೆ ಡಾ.ಜೆ.ಕರಿಯಪ್ಪ ಮಾಳಿಗೆ ಕರೆ ನೀಡಿದರು.
ಖ್ಯಾತ ವಿಮರ್ಶಕರಾದ ತಾರಿಣಿ ಶುಭದಾಯಿನಿ ಸ್ತ್ರೀ ಬರವಣಿಗೆಯಲ್ಲಿನ ಕುಶಲತೆಗಳು ಎಂಬ ವಿಷಯ ಕುರಿತು ಮಾತನಾಡುತ್ತ ಸೃಜನಶೀಲತೆ ಯಾರ ಸ್ವತ್ತಲ್ಲ. ಅಕ್ಕಮಹಾದೇವಿ ಮೊದಲ ಮಹಿಳಾ ಕವಿ, ನಂತರದಲ್ಲಿ ಶರಣೆಯರು, ವಚನಗಾರ್ತಿಯರು ಬರುತ್ತಾರೆ. ಅಭಿವ್ಯಕ್ತಿಯಲ್ಲಿಯೂ ಅನುಭವದ ಸಂವೇದನೆಯ ಸೆಳಹುಗಳಿರುತ್ತವೆ. 19 ನೇ ಶತಮಾನದಲ್ಲಿ ಸ್ತ್ರೀಗೆ ಶಿಕ್ಷಣ ಕಠಿಣವಾಗಿದ್ದರಿಂದ ಮನೆಯಲ್ಲಿ ಅನೇಕ ಕಟ್ಟುಪಾಡುಗಳನ್ನು ಪಾಲಿಸುವುದೇ ದೊಡ್ಡ ಸವಾಲಾಗಿತ್ತು. ಕೀರ್ತನಕಾರರು ಮೌಖಿಕ ಪರಂಪರೆಯವರು. ಮೌಖಿಕ ಪರಂಪರೆಯನ್ನು ಒಗ್ಗಿಸಿಕೊಳ್ಳುವುದು ಒಂದು ಕೌಶಲ್ಯ ಎಂದರು.
ಅಭಿವ್ಯಕ್ತಿ ತುಡಿತ ನೈಜವಾಗಿದ್ದಷ್ಟು ಮುನ್ನಡೆಸಿಕೊಂಡು ಹೋಗುತ್ತದೆ. ತಂತ್ರಗಾರಿಕೆಯಿಂದ ಸಾಹಿತ್ಯವನ್ನು ಉಳಿಸಿಕೊಂಡು ಬರಲಾಗಿದೆ. ಮಹಿಳಾ ಅಭಿವ್ಯಕ್ತಿಯಲ್ಲಿ ತನ್ನ ತನದ ಬರವಣಿಗೆಯಿರಬೇಕು. ಬರವಣಿಗೆಯಲ್ಲಿ ಗುರುತಿಸಿಕೊಳ್ಳಬೇಕಾದರೆ ಅನನ್ಯತೆಗಳನ್ನು ಶೋಧಿಸಿಕೊಳ್ಳಬೇಕಾದರೆ ಅಭಿವ್ಯಕ್ತಿಗಳನ್ನು ಭಾಷೆ ಮೂಲಕ ಹೊರಗಿಡಿ. ಸೃಜನಶೀಲತೆ ಸಮಸ್ಯೆಯಿದೆ. ಅದೊಂದು ದೊಡ್ಡ ಸವಾಲನ್ನು ಮಹಿಳೆಯರು ಸಮರ್ಥವಾಗಿ ಎದುರಿಸಲು ಸಿದ್ದರಾಗಬೇಕೆಂದು ನುಡಿದರು.

ಕವಿ ಜಬೀವುಲ್ಲಾ ಎಂ.ಅಸದ್ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಕಲೇಸಂ ಚಿತ್ರದುರ್ಗ ಜಿಲ್ಲಾ ಘಟಕದ ಅಧ್ಯಕ್ಷರಾದ ಕೆ.ನಿರ್ಮಲ ಮರಡಿಹಳ್ಳಿ ಕಾರ್ಯಕ್ರಮದ ಪ್ರಾಸ್ತಾವಿಕ ನುಡಿ ಮಾತನಾಡಿದರು. ಕಲೇಸಂ ಜಿಲ್ಲಾ ಘಟಕದ ಉಪಾಧ್ಯಕ್ಷರಾದ ಶ್ರೀಮತಿ ಡಿ. ಶಬ್ರಿನಾ ಮಹಮದ್ ಅಲಿ ಸಂಘದ ಬೆಳವಣಿಗೆಯ ಬಗ್ಗೆ ಮಾತನಾಡಿದರು. ಕಲೇಸಂ ಜಿಲ್ಲಾ ಘಟಕದ ಕಾರ್ಯದರ್ಶಿ ಶ್ರೀಮತಿ ದೀಪಿಕಾ ಬಾಬು ಕಾರ್ಯಕ್ರಮವನ್ನು ಆಯೋಜಿಸಿದರು. ಸಹ ಕಾರ್ಯದರ್ಶಿ ಡಾ.ಚಾಂದಿನಿಖಾಲಿದ್, ಖಜಾಂಚಿ ಮೀರಾ ನಾಡಿಗ್ ವೇದಿಕೆಯಲ್ಲಿದ್ದರು.
ಕೆ.ಸಿ.ಶಿಲ್ಪಾ ಜಗದೀಶ್, ಪ್ರಾರ್ಥನೆ ಮಾಡಿದರು, ಶಕುಂತಲಾ ಪಿ.ಆಚಾರ್ ಎಲ್ಲರೂ ಸ್ವಾಗತಿಸಿದರು. ವಿಜಯಲಕ್ಷ್ಮಿ ಮತ್ತು ಶಾಂತ ಅಹೋಬಲಪತಿ ನಿರೂಪಣೆ ಮಾಡಿದರು. ಮಧು ಸಜ್ಜನ್, ಗೀತಾ ನಾಗರಾಜ್, ಸರಸ್ವತಿ, ಸ್ವಪ್ನ, ವಿಜಯಗುರು, ಮೀನಾ ಬಾಲರಾಜ್ ಸೇರಿದಂತೆ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಮತ್ತು ಕರ್ನಾಟಕ ಲೇಖಕಿಯರ ಸಂಘ ಜಿಲ್ಲಾ ಘಟಕದ ಪದಾಧಿಕಾರಿಗಳು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಭಾಗವಹಿಸಿದ್ದರು. ರಾಜ್ಯದ ನಾನಾ ಜಿಲ್ಲೆಗಳಾದ ದಾವಣಗೆರೆ, ಬೆಂಗಳೂರು, ದಕ್ಷಿಣ ಕನ್ನಡ, ವಿಜಯನಗರ, ಕೋಲಾರ ಹೀಗೆ ನಾನಾ ಭಾಗಗಳಿಂದ ಆಗಮಿಸಿದ್ದ 60 ಕ್ಕೂ ಹೆಚ್ಚು ಕವಿಗಳು ತಮ್ಮ ಕವನಗಳನ್ನು ವಾಚಿಸಿದರು.
- ಆಕೃತಿಕನ್ನಡ ನ್ಯೂಸ್
