ಆಸ್ತಿಗಾಗಿ ಬಾಯಿತೆರೆಯುವ ಸಂಬಂಧಿಕರು, ಸಾಲವಾದಾಗ ದೂರ ಸರಿಯುತ್ತಾರೆ. ಪುಟ್ಟ ಕತೆಯ ಮೂಲಕ ವಸುಧಾ ಪ್ರಭು ಅವರು ಸಂಬಂಧಗಳ ಕುರಿತು ಬರೆದ ಈ ಮಿನಿಕತೆಯನ್ನು ತಪ್ಪದೆ ಮುಂದೆ ಓದಿ…
ದೀರ್ಘಕಾಲ ಅನಾರೋಗ್ಯದಿಂದ ಬಳಲುತಿದ್ದ ವಾಸುದೇವ ರಾಯರು ಸ್ವರ್ಗಸ್ತರಾದರು. ಹೆಂಡತಿ ಮೊದಲೇ ತೀರಿ ಹೋಗಿದ್ದರು. ಅದೂ ಕ್ಯಾನ್ಸರ್ ನಿಂದ. ಹೇಳಲು ಬೇಕಾದಷ್ಟು ಜಮೀನು ಮನೆ ಎಲ್ಲಾ ಇದ್ದರೂ, ಬ್ಯಾಂಕಿನಲ್ಲಿ ತೆಗೆದ ಸಾಲ ಬಡ್ಡಿಗೆ ಬಡ್ಡಿ ಕೂಡಿ ಕೂಡಿ ಸಾಲ ದುಪ್ಪಟ್ಟು ಆಗಿತ್ತು.
ಇಬ್ಬರೇ ಮಕ್ಕಳು ಮಗಳು ಮದುವೆಯಾಗಿ ಗಂಡನ ಮನೆಯಲ್ಲಿದ್ದಳು, ಮದುವೆ ನೆಪದಲ್ಲಿ ಆಗಲೇ ಗಂಡಿನ ಕಡೆಯವರು ಇವರನ್ನು ಹಿಂಡಿದ್ದರು.ಮಗ ಸೊಸೆ ದುಡಿದು ಕಷ್ಟಪಟ್ಟು ಮನೆಯ ಘನಸ್ತಿಕೆಯನ್ನು ಕಾಪಾಡಲು ಹೆಣಗುತ್ತಿದ್ದರು. ಅಂತೂ ಎಲ್ಲ ಕಾರ್ಯಕ್ರಮಗಳು ಸಾಂಗವಾಗಿ ನೆರವೇರಿತು.

ನಂತರ ಎಂಟು ದಿನಗಳಲ್ಲೇ ಮಗಳು ಅಳಿಯ ಆಸ್ತಿಯಲ್ಲಿ ಪಾಲು ಕೇಳಲು ಮನೆಗೆ ಬಂದರು. ಶಾಂತವಾಗಿದ್ದ ವಾಸುದೇವರಾಯರ ಮಗ ಚೆನ್ನಾಗಿಯೇ ಉಪಚಾರವನ್ನು ಮಾಡಿದ. ಕಾಫಿ, ತಿಂಡಿ ಮುಗಿಸಿ ಆದ ಕೂಡಲೇ ಒಂದು ದೊಡ್ಡ ಫೈಲು ಬಾಕ್ಸ್ ನ್ನು ತಂಗಿ ಮುಂದೆ ಹಿಡಿದ. ಅದರಲ್ಲಿ ಮನೆ ಕಟ್ಟುವಾಗ ಮಾಡಿದ ಸಾಲ, ಮಗಳ ಮದುವೆಗೆ, ಅನಾರೋಗ್ಯಕ್ಕೆ, ಅಮ್ಮನ ಕ್ಯಾನ್ಸರ್ ಚಿಕಿತ್ಸೆಗೆ ಮಾಡಿದ ಸಾಲ ಎಲ್ಲಾ ಕೂಡಿ ಇದ್ದ ಮನೆ, ಜಮೀನಿಗಿಂತ ಎರಡು ಪಟ್ಟು ಹೆಚ್ಚಾಗಿತ್ತು.
ಕೂಡಲೇ ವಾಸುದೇವರಾಯರ ಮಗ ” ನೀವೇ ಎಲ್ಲಾ ಇಟ್ಟುಕೊಳ್ಳಿ, ಸಾಲಾನೂ ತುಂಬಿ, ನಾನು ನಾಳೇನೇ ಬಾಡಿಗೆ ಮನೆಗೆ ಹೋಗುತ್ತೇನೆ ” ಎಂದು ಚೂರೂ ತಾಳ್ಮೆಯನ್ನು ಕಳಕೊಳ್ಳದೆ ಹೇಳಿದಾಗ ಮನೆ ಅಳಿಯ ಮೆಲ್ಲನೆ ಎದ್ದು ನಿಂತು ಹೆಂಡತಿಯನ್ನೂ ಎಬ್ಬಿಸಿ ಹೊರಗೆ ಹೋಗಿ ಕಾರಿನಲ್ಲಿ ಕುಳಿತರು. ಮಗ ಸೊಸೆ ಅವರು ಹೋಗುವುದನ್ನೇ ನೋಡುತ್ತಾ ನಿಂತರು. ಕಿರುನಗೆಯೊಂದು ಅವರ ಮುಖದ ಮೇಲೆ ಮೂಡಿತು.
- ವಸುಧಾ ಪ್ರಭು – ಮುಂಬೈ
