ಹೊರಟರೆ ತಲುಪಿದ್ದೆಲ್ಲಿಗೊ ಅರಿಯದೆ ದಿಗ್ಭ್ರಮೆಯಲ್ಲಿ ಕ್ಷಣ ನಿಂತು…ಆಕೃತಿಕನ್ನಡ ಸುಬ್ರಾಯ ಚೊಕ್ಕಾಡಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತಾ ಅವರ ರಚನೆಯ ಒಂದು ಕವಿತೆ ಓದುಗರ ಮುಂದಿದೆ, ತಪ್ಪದೆ ಮುಂದೆ ಓದಿ…
ನುಗ್ಗಿದ್ದಾನೆ ನಮ್ಮಭಿಮನ್ಯು
ಚಕ್ರವ್ಯೂಹದ ಒಳಗೆ
ವೃತ್ತವ ಮೀರುತ ಒಂದೊಂದಾಗಿ
ಕೇಂದ್ರವ ತಲುಪಿದ ಖುಶಿಯಲ್ಲಿ.
ಸಾದಾ ಮೆಟ್ಟಿಲು, ಚಲಿಸುವ ಮೆಟ್ಟಿಲು
ಏರುವ ಪೆಟ್ಟಿಗೆಗಳ ಹೊಕ್ಕು
ಹೊರಟರೆ ತಲುಪಿದ್ದೆಲ್ಲಿಗೊ ಅರಿಯದೆ
ದಿಗ್ಭ್ರಮೆಯಲ್ಲಿ ಕ್ಷಣ ನಿಂತು
ಹೊರ ಹೋಗುವ ಕದವೆಲ್ಲಿದೆ ಅರಿಯದೆ
ಇಳಿಯುವ ಹತ್ತುವ ಕ್ರಿಯೆಯಲ್ಲಿ
ದಾರಿಯ ಸವೆಸಿದ್ದಷ್ಟೇ ಬಂತು
ಹೊರಟಲ್ಲಿಗೇ ತಲುಪಿದನಂತು
ಚಲಿಸುವುದಿರದೆ ಚಲಿಸುವ ಮೋಡಿ
ಎಲ್ಲಿಗೆ ಒಯ್ಯುವುದೆನ್ನನು ಖೋಡಿ
ನಡೆದೂ ನಡೆದೂ ಸುಸ್ತಾದರೂನೂ
ಹೊರದಾರಿಯು ಎಲ್ಲೂ ಕಾಣಿಸದು.
ಮುಂದೇನೆನುವುದೆ ಅರಿಯದೆ ಹೋಗಿ
ಕುಳಿತಭಿಮನ್ಯು ಹತಾಶೆಯಲಿ
ಎಕ್ಸಿಟ್ ಡೋರನು ಕಾಣದೆ ಎಲ್ಲೂ
ಕೃಷ್ಣನ ನೆರವ ನಿರೀಕ್ಷೆಯಲಿ!
- ಸುಬ್ರಾಯ ಚೊಕ್ಕಾಡಿ
