ದಕ್ಷಿಣ ಆಫ್ರಿಕ ಬಹುತೇಕ ಹಸಿವಿನ ಹೊಡೆತಕ್ಕೆ ಸಿಕ್ಕಿ ನಲುಗಿದ ದೇಶ. ಇಂತಹ ಬರಗೆಟ್ಟ ನಾಡಲ್ಲಿ ಹುಟ್ಟಿದ ಪ್ರತಿಭಾನ್ವಿತ ಕೆವಿನ್ ಕಾರ್ಟರ್. ಓದಿ ಫಾರ್ಮಾಸಿಸ್ಟ್ ಆಗಬೇಕಂದು ಕನಸು ಕಂಡವನು ಮುಂದೆ ಕ್ಯಾಮೆರಾಕ್ಕೆ ಸೆರೆಯಾಗುತ್ತಾನೆ. ಕೆವಿನ್ ಕಾರ್ಟರ್ ಮತ್ತು ಅವರ ಛಾಯಾಚಿತ್ರದ ಬಗ್ಗೆ ಉದಯ ಕುಂದಾಪುರ ಅವರು ಬರೆದ ಈ ಲೇಖನವನ್ನು ತಪ್ಪದೆ ಮುಂದೆ ಓದಿ…
ಇದೊಂದು ಫೋಟೋ ಕಾಡಿದಷ್ಟು ಮತ್ತು ಇವತ್ತಿಗೂ ಕಾಡುವಷ್ಟು ಇನ್ನೊಂದು ಚಿತ್ರ ನನ್ನ ಚಿತ್ತಬಿತ್ತಿಯನ್ನು ಕಾಡಿದ್ದಿಲ್ಲ. ವಾರಗಟ್ಟಲೆ ನನ್ನ ನಿದ್ರೆಗೆ ಭಂಗ ಬಂತು, ಬಟ್ಟಲ ಮುಂದೆ ಕುಳಿತರೆ ಅಸ್ತಿಪಂಜರದ ಆ ಮಗು ಎದುರು ಬಂದು ಕುಳಿತ ಹಾಗಾಗುತ್ತಿತ್ತು. ಹಾಗಾದರೇ ಇಂತಹ ಮನಕಲುಕುವ ಭಾವಚಿತ್ರವನ್ನು ತೆಗೆದ ಆ ಛಾಯಾಚಿತ್ರಗಾರ ಯಾರಿರಬಹುದು? ಆತನ ಪತ್ತೆಗಾಗಿ ಬಿಟ್ಟುಬಿಡದೆ ಹುಡುಕಾಡತೊಡಗಿದೆ.
ಕೊನೆಗೂ ಸಿಕ್ಕಿಯೇ ಬಿಟ್ಟ ನೋಡಿ. ಹೆಸರು ಕೆವಿನ್ ಕಾರ್ಟರ್. ಮೂಲತಃ ದಕ್ಷಿಣ ಆಫ್ರಿಕಾದ ಜೊಹಾನ್ಸ್ ಬರ್ಗ್ ನಗರದವನು.ಬಡತನವನ್ನೇ ಮೈತುಂಬ ಹೊದ್ದುಕೊಂಡೆ ಹುಟ್ಟಿ ಬಂದವನಿವನು. ಬಾಲ್ಯದಲ್ಲಿಯೇ ಹಸಿವೆ ಎನೆಂಬುವುದನ್ನು ಅನುಭವಿಸಿದವನು. ಮಕ್ಕಳು ಹಸಿವೆ ಅಂದಾಗ ಅವನಮ್ಮ ಮೈ ತುಂಬಾ ಹೊದಿಕೆ ಹೊದಿಸಿ ಮಲಗಿಸಿ ಬಿಡುತ್ತಿದ್ದಳಂತೆ, ಕಾರಣ ನಿದ್ರೆ ಬಂದ್ರೆ ಕಂದಮ್ಮಗಳಿಗೆ ಹಸಿವೆ ಗೊತ್ತಾಗಲ್ಲ ಎಂದು. ಆದರೆ ಆ ತಾಯಿಗೆ ಕಲ್ಪನೆ ಇರಲಿಲ್ಲ ಹೊಟ್ಟೆಯ ತಾಪದ ಎದುರು ನಿದ್ರೆಯ ಆಟ ನಡೆಯಲ್ಲವೆಂದು.

ಅವನ ತಾಯ್ನಾಡು ದಕ್ಷಿಣ ಆಫ್ರಿಕ ಬಹುತೇಕ ಹಸಿವಿನ ಹೊಡೆತಕ್ಕೆ ಸಿಕ್ಕಿ ನಲುಗಿದ ದೇಶ. ಕರಿಯರ ಮತ್ತು ಬಿಳಿಯರ ಹೋರಾಟ ಶತಶತಮಾನಗಳಿಂದ ಸಾಗಿ ಬಂದರೂ ಇವತ್ತಿಗೂ ಅದಕ್ಕೊಂದು ಸಮಾಧಾನಕರವಾದ ಇತಿಶ್ರೀಯನ್ನು ಹಾಡಲು ಯಾರಿಂದಲೂ ಸಾಧ್ಯವಾಗಲೇ ಇಲ್ಲ. ಮೂರು ದಶಕಗಳ ಕಾಲ ಸಾಮಾಜಿಕ ಆರ್ಥಿಕ ಸುಧಾರಣೆಗಾಗಿ ನೆಲ್ಸನ್ ಮಂಡೇಲಾ ಜೈಲಿನಲ್ಲಿದ್ದುಕೊಂಡೆ ಹೋರಾಟ ಮಾಡಿದರು,ಮಹಾತ್ಮ ಗಾಂಧೀಜಿಯವರ ಚಳುವಳಿಗಳು ಆರಂಭವಾಗಿದ್ದೆ ಕರಿಯರ ಆ ಕಗ್ಗತ್ತಲೆಯ ಖಂಡದಿಂದಲೇ.
ಏನು ಮಾಡಲಿ ಒಡಲುರಿಯ ತಾಪ ಆ ದೇಶಕ್ಕೆ ತಟ್ಟಿದ ಶಾಪ.ಪ್ರತಿ ವರ್ಷ ಒಂದು ಸಾವಿರಕ್ಕೆ ನಾಲ್ಕು ಮಕ್ಕಳು ಅಲ್ಲಿ ಹಸಿವೆಯಿಂದ ಸಾಯುತ್ತಾರೆ. ಹಣ ಸಂಪಾದನೆಗಾಗಿ ಕೆಟ್ಟ ಕೆಲಸಕ್ಕೆ ಇಲ್ಲಿಯ ಯುವಕರು ಇಳಿದು ಬಿಡುತ್ತಾರೆ, ಗಾಂಜಾ ಅಫೀಮುಗಳನ್ನು ವಿಶ್ವಕ್ಕೆ ಪಸರಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ಇಂತಹ ಬರಗೆಟ್ಟ ನಾಡಲ್ಲಿ ಹುಟ್ಟಿದ ಪ್ರತಿಭಾನ್ವಿತ ಕೆವಿನ್ ಕಾರ್ಟರ್. ಓದಿ ಫಾರ್ಮಾಸಿಸ್ಟ್ ಆಗಬೇಕಂದು ಕನಸು ಕಂಡವ ಬಂದು ಮುಟ್ಟಿದ್ದು ಕ್ಯಾಮೆರದ ಕಣ್ಣಲ್ಲಿ ಕಣ್ಣಿಟ್ಟು ಜಗತ್ತಿನ ಬೆರಗನ್ನು ಜನರೆದುರು ತೆರೆದಿಡುವ ಕೌತುಕದ ಕಾಯಕಕ್ಕೆ. ಅಲ್ಲಿಯ ಪ್ರಸಿದ್ದ ದಿನ ಪತ್ರಿಕೆ “ದಿ ಸಂಡೇ ಎಕ್ಸ್ ಪ್ರೆಸ್”ಗೆ ಛಾಯಾಚಿತ್ರ ವರದಿಗಾರನಾಗಿ ಸೇರಿಕೊಳ್ಳುತ್ತಾನೆ.
ಎಲ್ಲಿಯೇ ಕರಿಯರ ವಿರುದ್ಧ ಗಲಾಟೆ ನಡೆಯಲಿ ಅದನ್ನು ಯತಾವತ್ತಾಗಿ ಫೋಟೋ ಸಮೇತ ಪತ್ರಿಕೆಗೆ ವರದಿ ಮಾಡುತ್ತಿದ್ದ. ಅನೇಕರ ಕೆಂಗಣ್ಣಿಗೆ ಇದರಿಂದ ಗುರಿಯಾದ.ಸತ್ಯವನ್ನೇ ಹೇಳಿದ ಪರಿಣಾಮ ಜೈಲುವಾಸ ಅನುಭವಿಸಿ ಬಂದ,ದಿನ ನಿತ್ಯ ಅವನನ್ನು ಸುತ್ತುವರೆದು ಹೊಡೆಯಲಾಗುತಿತ್ತು. ಆದರೂ ಕೆವಿನ್ ಹೆದರಲಿಲ್ಲ, ಸತ್ಯವನ್ನು ಹೇಳುವುದು ಬಿಡಲಿಲ್ಲ. ದಕ್ಷಿಣ ಆಫ್ರಿಕಾದ ಅಯೋದ್ ಎಂಬ ಹಳ್ಳಿಯಲ್ಲಿ ಕರಿಯರ ಸ್ಥಿತಿ ಅತ್ಯಂತ ಚಿಂತಜನಕವಾಗಿತ್ತು.ಅಲ್ಲಿ ಪ್ರತಿದಿವಸ ಹತ್ತು ಮಕ್ಕಳು ಹಸಿವಿನಿಂದ ಬಳಲಿ ಸಾಯುತ್ತಿದ್ದರು. ವಿಶ್ವಸಂಸ್ಥೆ ವಿಶೇಷ ವಿಮಾನದ ಮೂಲಕ ಆಹಾರದ ಪೊಟ್ಟಣಗಳನ್ನು ಆ ಪ್ರದೇಶಕ್ಕೆ ಎಸೆಯುತ್ತಿದ್ದರು,ಅದನ್ನು ಬಾಚಿಕೊಳ್ಳುವ ಬರದಲ್ಲಿ ಅಮ್ಮಂದಿರು ತನ್ನ ಜೊತೆಗಿರುವ ಮಕ್ಕಳನ್ನು ಮರೆತು ಓಡುತ್ತಿದ್ದರು.
ಆ ಸನ್ನಿವೇಶದ ಫೋಟೋಗ್ರಫಿಗಾಗಿ ಕೆವಿನ್ ಕಾರ್ಟರ್ ನೈರೋಬಿಗೆ ಬಂದಿಳಿದಿದ್ದ. ಅಲ್ಲೇ ಸಮೀಪದಲ್ಲಿ ಆಹಾರ ತುಂಬಿಸಿಕೊಂಡ ವಿಮಾನವೊಂದು ಹಾರಡುತಿತ್ತು. ದೂರದಲ್ಲೊಂದು ಸಾವಿನ ಕೊನೆಯ ಕ್ಷಣದಲ್ಲಿ ನರಳುತ್ತಿರುವ ಪ್ರಾಣಿಯೊಂದರ ಆರ್ತನಾದ ಕೇಳಿಸುತ್ತಿತ್ತು,ಹತ್ತಿರ ಹೋಗಿ ನೋಡಿದರೆ ಸಣಕಲು ಶರೀರದ ಅಸ್ತಿಪಂಜರವೆ ಆಗಿದ್ದ ಮಗುವೊಂದು ತಲೆ ಕೆಳಗೆ ಹಾಕಿ ಅಳುತಿತ್ತು, ಮತ್ತು ಅನತಿ ದೂರದಲ್ಲಿ ರಣಹದ್ದೊಂದು ನಿಂತು ಮಗುವನ್ನೇ ನೋಡುತ್ತಿತ್ತು…

ಅಬ್ಬಾ , ಕೆವಿನ್ ಕಾರ್ಟರ್ ನ ಮನದಲ್ಲಿ ಹೊಯ್ದಾಟವೇ ಎದ್ದಿತು. ಜೀವನ್ಮರಣ ಹೋರಾಟದಲ್ಲಿರುವ ಜೀವ ಒಂದೆಡೆಯಾದರೆ ಅದನ್ನೇ ತಿಂದು ತೇಗುವ ತವಕದಲ್ಲಿರುವ ಇನ್ನೊಂದು ಜೀವದ ಕಾತರತೆ ನಿಜಕ್ಕೂ ಭಯಾನಕ.
ಕೆವಿನ್ ಕಾರ್ಟರ್ ಗಳಗಳನೆ ಅಳತೊಡಗಿದ. ತನ್ನನ್ನು ತಾನೇ ಸಮಾಧಾನಿಸಿಕೊಂಡು ಕ್ಯಾಮೆರಾದ ಕಣ್ಣಲ್ಲಿ ಆ ದೃಶ್ಯವನ್ನು ಅಚ್ಚೊತ್ತಿಸಿಕೊಂಡ. ಮಾರನೆಯ ದಿವಸ ಅನೇಕ ಪತ್ರಿಕೆಗಳಲ್ಲಿ ಆ ಫೋಟೋ ಪ್ರಕಟವಾಯಿತು. ಅದರಲ್ಲೂ ನ್ಯೂಯಾರ್ಕ್ ಟೈಮ್ಸ್ ನಲ್ಲಿ ಹಸಿದ ಮಗು ಮತ್ತು ರಣ ಹದ್ದಿನ ಫೋಟೋ ದೊಡ್ಡ ಚರ್ಚೆಯೇ ಆಯಿತು. ಆ ಮಗು ಏನಾಯಿತು? ಆ ಫೋಟೋ ತೆಗೆದವರು ಯಾರು? ಎಂಬ ಲಕ್ಷಾಂತರ ಕರೆಗಳು ಪತ್ರಿಕೆಯ ಕಚೇರಿಗೆ ಬರತೊಡಗಿದವು.
ಹೌದು ಕೆವಿನ್ ಕಾರ್ಟರ್ ಅದೇ ಮಗುವಿನ ಚಿಂತೆಗೆ ಬಿದ್ದ,ನಿದ್ದೆ,ಊಟಗಳನ್ನು ಬಿಟ್ಟ, ಹುಚ್ಚನಂತಾಗಿದ್ದ,ಒಂದು ಜೀವವನ್ನು ಉಳಿಸಲಾಗದ ಕಟುಕ ನಾನು ಎಂಬಂತೆ ಬಿಕ್ಕಿ ಬಿಕ್ಕಿ ಅಳತೊಡಗಿದ.ಬದುಕು ಭಾರ ಮಾತ್ರವಲ್ಲ,ಬೇಡವೂ ಅನ್ನಿಸಿತು.ಅದೊಂದು ಸಂಜೆ ಕೆವಿನ್ ಕಾರ್ಟರ್ ತಾನು ಆಡಿ ಬೆಳೆದ ಪಾರ್ಕ್ ಮೋರ್ ಮೈದಾನಕ್ಕೆ ತೆರಳಿದ,ಅಲ್ಲೇ ಸ್ವಲ್ಪ ಹೊತ್ತು ಕುಳಿತು ಧ್ಯಾನಿಸಿದ. ನಂತರ ವಿಷಪೂರಿತ ಕಾರ್ಬನ್ ಮೋನಾಕ್ಸೈಡ್ ನ್ನು ಉಸಿರಾಡುತ್ತಲೇ ಪ್ರಾಣಬಿಟ್ಟ. ಸಾಯುವಾಗ ಆತನಿಗಿನ್ನೂ ಕೇವಲ ಮುವತ್ತಮೂರು ವರ್ಷ. ಕೆವಿನ್ ಕಾರ್ಟರ್ ಮರಣ ಪತ್ರದಲ್ಲಿ ಹೀಗೆ ಬರೆದುಕೊಂಡಿದ್ದ “ಓ ದೇವರೇ ನನ್ನನ್ನು ಕ್ಷಮಿಸು, ಹಸಿವೆಯಿಂದ ಸಾಯುತ್ತಿದ್ದ ಮಗುವಿಗೆ ನಾನು ಸಹಾಯ ಮಾಡಲಾಗಲಿಲ್ಲ,ಜಗತ್ತಿನಲ್ಲಿ ಹಸಿವೆಯೇ ಇಲ್ಲದಂತೆ ಮಾಡು. ಬಂಧುಗಳೇ ನೀವು ತಿನ್ನುವ ಅನ್ನವನ್ನು ಬಿಸಾಡದಿರಿ,ಅದನ್ನು ಹಸಿದ ಮಕ್ಕಳಿಗೆ ನೀಡಿ,ಸಾವಿಗಿಂತ ಹಸಿವೆ ಕೆಟ್ಟದ್ದು….”
ಯಾಕೋ ಏನೋ ನನ್ನ ಭಾಲ್ಯ ನನಗೆ ನೆನಪಾಯಿತು. ಕಣ್ಣು ಮಂಜಾದವು. ಇಷ್ಟೇ ಬರೆಯಲು ಶಕ್ತ ನಾನು. ಆದರೆ ಸ್ನೇಹಿತರೇ ನೆನಪಿರಲಿ ನಮ್ಮ ದುಂದು ವೆಚ್ಚದ ಒಂದಂಶ ಈ ಸಮಾಜಕ್ಕೆ ನೀಡಿದರೂ ಹಸಿವೆ ಮುಕ್ತ ಸಮಾಜ ನಮ್ಮದಾಗಬಹುದು. ಹಣದ ಗುಣ ಅಂತಃಕರಣವಾಗಲಿ ಇದೊಂದೇ ಪ್ರಾರ್ಥನೆ ನನ್ನದು.
- ಉದಯ ಕುಂದಾಪುರ
