‘ಯಾವ ಪ್ರೀತಿಯು ಅನೈತಿಕವಲ್ಲ’ ಪುಸ್ತಕ ಪರಿಚಯ



ಪುಸ್ತಕ : ಯಾವ ಪ್ರೀತಿಯು ಅನೈತಿಕವಲ್ಲ
ಲೇಖಕರು : ಸಂತೋಷಕುಮಾರ ಮೆಹೆಂದಳೆ
ಪ್ರಕಾಶನ : ವಿಕ್ರಮ್ ಪ್ರಕಾಶನ
ಪುಟಗಳು : 200
ಬೆಲೆ : 150/

ಲೇಖಕ ಸಂತೋಷಕುಮಾರ ಮೆಹೆಂದಳೆ ಅವರು ಹುಟ್ಟಿದ್ದು, ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ತೇರಗಾಂವ್ ಗ್ರಾಮದಲ್ಲಿ, ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ, ಮಾನವ ಸಂಪನ್ಮೂಲದಲ್ಲಿ ಸ್ನಾತಕೋತ್ತರ ಡಿಪ್ಲೋಮ ಜೊತೆಗೆ ಪತ್ರಿಕೋದ್ಯಮ ಸ್ನಾತಕೋತ್ತರ ಡಿಪ್ಲೋಮ ಮಾಡುವುದರ ಜೊತೆಗೆ ತಮ್ಮನ್ನು ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಂಡವರು. ‘ಯಾವ ಪ್ರೀತಿಯು ಅನೈತಿಕವಲ್ಲ’ ಪುಸ್ತಕದಲ್ಲಿ ಪ್ರೀತಿಯ ಬಗ್ಗೆ ಸುಂದರವಾಗಿ ಓದುಗರ ಮನಮುಟ್ಟುವಂತೆ ವಿವರಿಸಿದ್ದಾರೆ, ಪುಸ್ತಕದ ಕುರಿತು ನನ್ನ ಅನಿಸಿಕೆಯನ್ನು ಹಂಚಿಕೊಂಡಿದ್ದೇನೆ. ತಪ್ಪದೆ ಓದಿ…

ಕಾಲೇಜ್ ಡೆಸ್ಕ್ ವೊಂದರ ಮೇಲೆ ದೊಡ್ಡದಾದ ದಿಲ್, ಆ  ಚಿತ್ರದೊಳಗೆ ಆಕೆಯ ಜೊತೆ ಅವನ ಹೆಸರು, ಆಕೆ ಬೀರುವ ಕಿರು ನಗೆಯೇ ಪ್ರೀತಿಗೆ ಗ್ರೀನ್ ಸಿಗ್ನಲ್. ಆಮೇಲೆ ಒಂದಿಷ್ಟು ಒಟ್ಟೊಟ್ಟಿಗೆ ಪಾರ್ಕ್, ಗಲ್ಲಿ ಗಿಲ್ಲಿ ಸುತ್ತಾಟ, ಮುಂದೆ ಅಪ್ಪ ಅಮ್ಮನ ಮುಂದೆ ಪ್ರೇಮ ನಿವೇದನೆ, ಅವರು ಒಪ್ಪದಿದ್ದಾಗ ಓಡಿ ಹೋಗಿ ದೇವಸ್ಥಾನದಲ್ಲಿಯೋ, ರಿಜಿಸ್ಟರ್ ಆಫೀಸ್ ನಲ್ಲೋ ಎಲ್ಲೋ ಒಂದು ಕಡೆ ಮದುವೆ. ಹೀಗೆ ಹದಿ ಹರಿಯದಲ್ಲಿ ಉಕ್ಕುವ ಪ್ರೇಮ ಕತೆಗಳನ್ನು ಸಾಕಷ್ಟು ನೋಡಿದ್ದೇವೆ, ಕೇಳಿದ್ದೇವೆ.

ಆದರೆ  ಅದೇ ಮದುವೆ ಆಗಿ, ಮಕ್ಕಳಾದ ಮೇಲೆ ಹುಟ್ಟುವ ಪ್ರೀತಿ ಸಮಾಜದ ದೃಷ್ಟಿಕೋನದದಲ್ಲಿ ಪವಿತ್ರವಾಗಿ ಕಾಣಿಸಿಕೊಳ್ಳುತ್ತದೆಯೇ!? ಇಲ್ಲ, ಬದಲಾಗಿ ಅನೈತಿಕವಾಗಿ ಕಾಣುತ್ತದೆ. ಆ ಪ್ರೇಮದ ಕುರಿತೇ ಲೇಖಕ ಸಂತೋಷಕುಮಾರ ಮೆಹೆಂದಳೆ ಅವರು ‘ಯಾವ ಪ್ರೀತಿಯು ಅನೈತಿಕವಲ್ಲ’ ಪುಸ್ತಕದಲ್ಲಿ ಹೇಳ ಹೊರಟಿದ್ದಾರೆ. ಹೆಣ್ಣಿಗೆ ಪ್ರೀತಿ ನಿರ್ದಿಷ್ಟವಾದ ವಯಸ್ಸಿಗೆ ಹುಟ್ಟುವುದಿಲ್ಲ, ಅಂತೆಯೇ ನಿರ್ದಿಷ್ಟ ಸಮಯಕ್ಕೆ ಮುಗಿಯುವುದಿಲ್ಲ. ಮದುವೆ ಆದ ಮೇಲೆ ಮತ್ತೆ ಪ್ರೀತಿ ಹುಟ್ಟಬಾರದು ಎಂದೇನೂ ಇಲ್ಲ. ಪ್ರೀತಿ ಎಂದರೆ ಪವಿತ್ರವಾದದ್ದು, ಅದು ಯಾವ ವಯಸ್ಸಿನಲ್ಲಾದರೂ ಮತ್ತೆ ಹುಟ್ಟಬಹುದು. ಅದು ೪೦ ನೆಯ ವಯಸ್ಸಿನಲ್ಲೋ ಅಥವಾ ೬೦ ನೆಯ ವಯಸ್ಸಿನಲ್ಲೋ ಅಥವಾ ಯಾವುದೋ ವಯಸ್ಸಿನಲ್ಲೂ ಮತ್ತೆ ಹುಟ್ಟಬಹುದು . ಜಗತ್ತಿನಲ್ಲಿ ಒಳ್ಳೆತನವೇನಾದರೂ  ಬದುಕಿದ್ದರೆ, ಹೆಣ್ಣು ಈಗಲೂ ಕ್ಷಮಯಾ ಧರಿತ್ರಿಯಾದರೆ,  ಪ್ರೀತಿಯನ್ನು ಹರಿಸಬಲ್ಲ ಜೀವವೊಂದು ಇದ್ದರೇ ಅದು ಹೆಣ್ಣು ಮಾತ್ರ ಎನ್ನುತ್ತಾರೆ ಲೇಖಕರು. ತನ್ನ ಪ್ರೀತಿಯನ್ನು ಗಂಡ, ಮಕ್ಕಳು, ಸಂಸಾರ, ಕುಟುಂಬಕ್ಕಷ್ಟೇ ಸೀಮಿತಗೊಳಿಸದೆ ತನ್ನ ಊರು, ದೇಶದ ವಿಚಾರ ಬಂದಾಗ ಹೆಣ್ಣಿನಲ್ಲಿ ಕಾಣುವ ಪ್ರೀತಿಯ ಬದ್ಧತೆ ಬೇರೆ ಯಾವ ಜೀವದಲ್ಲಿಯೂ ಕಾಣಲು ಸಾಧ್ಯವಿಲ್ಲಾ. ಅದು ನಿಜವೂ ಕೂಡಾ. ಹೆಣ್ಣು ಹಠವಾದಿ, ಛಲವಾದಿ ಎಂದಾಗ ಅವಳಲ್ಲಿನ ಪ್ರೀತಿ ಯಾವುದೇ ವಿಷಯದಲ್ಲಿಯೂ ಕಪಟವಾಗಲು ಸಾಧ್ಯವಿಲ್ಲ.

ಹೆಣ್ಣಿಗೆ ಬೇಕಿರುವುದು ಒಂದು ಹಿಡಿ ಪ್ರೀತಿ ಮಾತ್ರ. ಆ ಪ್ರೀತಿ ಗಂಡನಿಂದ ಸಿಗದಿದ್ದಾಗ, ಕಿರಿಕ್ ಕೊಡುವ ಸಹದ್ಯೋಗಿಗಳಿದ್ದಾಗ, ಸುತ್ತಲಿನ ಸಮಾಜದ ನಡುವೆ ಬೇಸತ್ತಾಗ ಹೆಣ್ಣಿಗೆ ಸಾಂತ್ವನ ಹೇಳುವ ವ್ಯಕ್ತಿಯ ಹೆಗಲು ಸಿಕ್ಕಾಗ ಆಕೆಗೆ ಅವನ ಮೇಲೆ ಸಹಜವಾಗಿಯೇ ಪ್ರೀತಿ ಹುಟ್ಟುತ್ತದೆ. ಅವಳ ನೋವಿಗೆ ಸ್ಪಂದಿಸುವ ಯೋಗ್ಯತೆ ಇರದವರು ಅದನ್ನು ಅನೈತಿಕವೆಂದು ಯಾಕೆ ಕರೆಯಬೇಕು?. ಮತ್ತೊಂದು ಕಡೆ ಲೇಖಕರು ಹೆಣ್ಣು, ಪ್ರೇಮಕ್ಕೆ ಸುಲಭವಾಗಿ ಸೋತಂತೆ ಅಷ್ಟು ಸುಲಭವಾಗಿ ಮಂಚಕ್ಕೆ ಬರಲಾರಳು, ಮತ್ತದು ಅವಳಿಂದ ಸಾಧ್ಯವೂ ಇಲ್ಲ. ತುಂಬಾ ಜನ ಪುರುಷರು ಸ್ತ್ರೀಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಸ್ಪಷ್ಟವಾಗಿ ಪುಸ್ತಕದಲ್ಲಿ ಹೆಣ್ಣಿನ ಸ್ವಭಾವದ ಬಗ್ಗೆ ಕನ್ನಡಿ ಹಿಡಿದಂತೆ ಹೇಳುತ್ತಾರೆ.

ಮಹಿಳೆಯರಲ್ಲಿ ಶೇಕಡಾ ೫ ರಷ್ಟು ಸಮಯದ ಸಾಧಕರಾಗಿ ಅಥವಾ ತಮ್ಮ ಸ್ವಾರ್ಥಕ್ಕಾಗಿ ಗಂಡುಗಳನ್ನು ಬದಲಿಸುವವರಿದ್ದಾರೆ. ಅಂತಹ ಹೆಣ್ಣು ಮಕ್ಕಳನ್ನು ಹೊರತು ಪಡಿಸಿ, ಉಳಿದ ಹೆಣ್ಣು ಮಕ್ಕಳ ಭಾವನೆಗಳ ಪ್ರತಿಬಿಂಬವನ್ನು ಲೇಖಕರು ಈ ಪುಸ್ತಕದಲ್ಲಿ ಹಿಡಿದಿಟ್ಟಿದ್ದಾರೆ ಎನ್ನಬಹುದು.

(‘ಯಾವ ಪ್ರೀತಿಯು ಅನೈತಿಕವಲ್ಲ’ ಪುಸ್ತಕದ ಲೇಖಕರು  ಸಂತೋಷಕುಮಾರ ಮೆಹೆಂದಳೆ)

ಮದುವೆಯಾದ ಹೊಸತನದಲ್ಲಿ ಹೆಂಡತಿಯನ್ನು ರಂಬೆ, ಊರ್ವಶಿಗೆ ಹೋಲಿಕೆ ಮಾಡುತ್ತಿದ್ದ ಗಂಡ ಬರುಬರುತ್ತಾ ಟಿವಿಯಲ್ಲಿನ ಸುಂದರಿಯ ಜೊತೆಗೆ ಹೋಲಿಕೆ ಮಾಡಿ ನೋಯಿಸುತ್ತಾನೆ. ಆಗ ಹೆಣ್ಣು ಸಹಜವಾಗಿಯೇ ಗೊಂದಲ, ಬೇಸರಗಳಿಂದ ಮಾನಸಿಕ ನೆಮ್ಮದಿ ಅರಸಿ ಹೊರಟಾಗ ಇನ್ನೊಬ್ಬನಲ್ಲಿ ಸಿಗುವ ಪ್ರೀತಿಗೆ ಜೋತು ಬೀಳುತ್ತಾಳೆ. ಇಲ್ಲಿ ಯಾರಿಗೆ ತಪ್ಪಿನ ಪಟ್ಟ ಕಟ್ಟುವುದು?. ಪ್ರೀತಿಯನ್ನು ಕೊಡದ ಗಂಡನಿಗಾ? ಅಥವಾ ಪ್ರೀತಿ ಸಿಕ್ಕ ಕಡೆ ವಾಲಿದ ಹೆಂಡತಿಗಾ?. ಬರೀ  ಹೆಣ್ಣಿನ ಪ್ರೀತಿಯಲ್ಲಿಯೇ ಏಕೆ ಹುಳುಕು ಹುಡುಕಬೇಕು?. ಹೆಣ್ಣು ನಿಷ್ಕಲ್ಮಷವಾಗಿ ಯಾರನ್ನಾದರೂ ಪ್ರೀತಿಸುತ್ತೇನೆಂದು ಹೊರಟು ನಿಂತರೆ ಅದನ್ನು ಅನೈತಿಕವೆಂದು ಬಿಡುತ್ತೇವೆ ಕಾರಣ ಆಕೆ ನಮ್ಮ ಕೈಗೆ ನಿಲುಕದೆ ಇರುವುದು ಒಂದು ಕಾರಣ. ಮತ್ತೊಂದು ಆಕೆ ನಿಲುಕಿದ್ದರೂ ಅವಳಿಗೆ ಪ್ರೀತಿ ನೀಡಲು ಸಾಧ್ಯವಾಗದೆ ಇರುವುದು. ಅವಳನ್ನು ಗೆಲ್ಲುವ ಶಕ್ತಿ ಇಲ್ಲದಿದ್ದಾಗ ಇದು ಅನೈತಿಕವಾಗಿ ಕಾಣುತ್ತದೆ. ಹೀಗೆ ಅನೈತಿಕತೆಯ ಅನಾವರಣ ಮಾಡಿದ್ದಾರೆ.

ಅದೇ ರೀತಿ  ವ್ಯಕ್ತಿ ತಾನು ಪ್ರೀತಿಸಿದವಳು ತನ್ನ ಪ್ರೇಮ ನಿವೇದನೆಯನ್ನು ನಿರಾಕರಿಸಿದ ಮಾತ್ರಕ್ಕೆ ಆಸಿಡ್ ಹಾಕ್ತನಲ್ಲಾ ಅದು  ನೈತಿಕತೆಯೇ?. ಅದು ನಿಜವಾದ ಪ್ರೀತಿಯೇ?.  ಒಬ್ಬರನೊಬ್ಬರು ಗುಟ್ಟಾಗಿ ಪ್ರೀತಿಸಿಕೊಂಡಿರುವ ಪ್ರೀತಿ ಅನೈತಿಕವೇ?. ಒಂದು ಹೆಣ್ಣು ಕೈ ಕೊಟ್ಟಾಗ, ಇಬ್ಬರಲ್ಲಿ ಒಬ್ಬರ ಪ್ರೀತಿ ಪ್ರಾಮಾಣಿಕವಾಗಿದ್ದರೆ ಅದು ಅನೈತಿಕವೇ?. ಹೀಗೆ ಪ್ರಶ್ನೆಗಳನ್ನು, ಚಿಂತನೆಗಳನ್ನು ಲೇಖಕರು ಓದುಗರಲ್ಲಿ ಹುಟ್ಟು ಹಾಕುತ್ತಾ ಹೋಗುತ್ತಾರೆ .



ಈ ಪುಸ್ತಕವನ್ನು ಓದುತ್ತಾ ಓದುತ್ತಾ  ಪ್ರೀತಿಯ ವೈಶಾಲತೆ, ಅದರ ಆಳ ಅರ್ಥವಾಗುತ್ತೆ. ಪ್ರೀತಿ ದಾರಿ ತಪ್ಪಿದಾಗ ಹೆಣ್ಣೊಬ್ಬಳೇ ಕಾರಣಳಲ್ಲ. ಆ ತಪ್ಪು ಎಲ್ಲಿ ನಡೆಯುತ್ತಿದೆ ಎಂದು ಗಂಡು ಹೆಣ್ಣು  ಅರ್ಥೈಸಿಕೊಂಡು ಬಾಳಿದರೆ ಸಂಸಾರದಲ್ಲಿ ಹಾಲು ಜೇನಿನಂತೆ ಬಾಳಲು ಸಾಧ್ಯ ಎನ್ನುವುದನ್ನು ಲೇಖಕರು ಎಳೆ ಎಳೆಯಾಗಿ ಹೇಳುತ್ತಾ ಹೋಗಿದ್ದಾರೆ.

‘ಯಾವ ಪ್ರೀತಿಯು ಅನೈತಿಕವಲ್ಲ’ ಪುಸ್ತಕದ ಶೀರ್ಷಿಕೆ ಸಹಜವಾಗಿಯೇ ನನಗೂ ಕುತೂಹಲವನ್ನ ಮೂಡಿಸಿತ್ತು. ಓದುವಾಗ ಒಬ್ಬ ಪುರುಷ ಹೆಣ್ಣಿನ ಮನಸ್ಸಿನ ಆಳಕ್ಕೆ ಇಳಿದು ಬರೆದಿರುವುದು ನಿಜಕ್ಕೂ ಸಂತೋಷಕುಮಾರ ಮೆಹೆಂದಳೆ ಅವರ ಚಿಂತನೆಯನ್ನು ಮೆಚ್ಚಲೇಬೇಕು. ಓದುವಾಗ  ಸೆಕ್ಸ್ ಅಂತ ವಿಷಯ ಬಂದಾಗ ಮಡಿವಂತಿಕೆ ಸಮಾಜದಲ್ಲಿ ಒಂದಷ್ಟು ಇರಸು ಮುರುಸಾಗಬಹುದು. ಆದರೆ ಅದು ಮುಜುಗರ ಅನಿಸಿದರೂ ಗಂಡ ಹೆಂಡತಿ ಸಹಬಾಳ್ವೆಗೆ ರಾಮಬಾಣವೆನ್ನುವುದನ್ನು ಬೋಲ್ಡ್ ಆಗಿಯೇ ಓದುಗರ ಮುಂದಿಟ್ಟಿದ್ದಾರೆ .

ಕೊನೆಯಲ್ಲಿ ಪ್ರೀತಿಗೂ ಅನೈತಿಕತೆಗೂ ಸಂಬಂಧವೇ ಇಲ್ಲ. ಪ್ರೀತಿ ಪವಿತ್ರವಾದದ್ದು, ಅದು ನೋಡುವವರ ಮತ್ತು ಆಡಿಕೊಳ್ಳುವವರ ದೃಷ್ಟಿಕೋನದ ಮೇಲೆ ಅದು ನಿರ್ಧಾರವಾಗುತ್ತದೆ ಎನ್ನುತ್ತಾ ‘ಯಾವ ಪ್ರೀತಿಯು ಅನೈತಿಕವಲ್ಲ’ ಎನ್ನುವುದರ ಮೂಲಕ ಪುಸ್ತಕದ ಕೊನೆ ಪುಟ ಕೊನೆಗೊಳ್ಳುತ್ತದೆ.


  • ಶಾಲಿನಿ ಹೂಲಿ ಪ್ರದೀಪ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading