ಎಲ್ಲರೂ ವ್ಯಾಪಾರಿಗಳು (ಲಲಿತ ಪ್ರಬಂಧ)

ದಿವಂಗತ ರಂಗಪ್ಪ ಶೆಟ್ಟರ ಹೆಣ್ಣು ಮಕ್ಕಳಿಬ್ಬರು ‘ ನಮಗೆ ಊಟ ಬೇಡ, ಊಟ ಮಾಡುವುದಿಲ್ಲ..’ ಎಂದು ಅಳುತ್ತಿದ್ದರು. ‘ಹೆಣ್ಣು ಮಕ್ಕಳದೇ ನಿಜವಾದ ಕರುಳು..’ ಎಂದುಕೊಂಡ ನಾನು ಎರಡು ಹನಿ ಕಣ್ಣಲ್ಲಿ ನೀರು ತರುವ ತೀರ್ಮಾನಕ್ಕೆ ಬಂದಿದ್ದೆ ‘ ನಾವೂ ಅಪ್ಪನ ಮಕ್ಕಳೇ… ಅಪ್ಪನ ಆಸ್ತಿಯಲ್ಲಿ ನಮ್ಮ ಪಾಲು ನಿರ್ಧಾರವಾಗುವವರೆಗೆ ನಾವು ಊಟ ಮಾಡುವುದಿಲ್ಲ. ನೀರೂ ಕುಡಿಯುವುದಿಲ್ಲ’ ಎನ್ನುತ್ತ ದುಃಖವನ್ನು ತೀವ್ರಗೊಳಿಸಿದರು. ವಿಜಯೇಂದ್ರ ಪಾಟೀಲ ಅವರ ಲಲಿತ ಪ್ರಬಂಧವನ್ನು ತಪ್ಪದೆ ಮುಂದೆ ಓದಿ…

ನಿನ್ನೆ ರಾತ್ರಿಯವರೆಗು ವ್ಯಾಪಾರ ಮಾಡಿದ್ದ ರಂಗಪ್ಪ ಶೆಟ್ಟರು ಬೆಳಿಗ್ಗೆ ತೀರಿಹೋದರೆಂಬ ಸುದ್ದಿ ಬಂತು. ಅವರದು ತಮ್ಮ ತಾತನ, ತಾತನ ಕಾಲದಿಂದಲು ನಮ್ಮೂರಲ್ಲಿ ಪಾತ್ರೆ, ಬಟ್ಟೆ, ಕಿರಾಣಿ ಹಾಗು ಚಿನ್ನದ ವಹಿವಾಟು ಮಾಡಿಕೊಂಡು ಬಂದ ಘರಾಣೆ.

ನಮ್ಮದು ನಮ್ಮ ತಾತನ, ತಾತನ ಕಾಲದಿಂದಲು ಅವರಲ್ಲಿ ಪಾತ್ರೆ, ಬಟ್ಟೆ, ಕಿರಾಣಿ ಮತ್ತು ಚಿನ್ನದ ಉದ್ರಿ ವ್ಯಾಪಾರ ಮಾಡಿಕೊಂಡು ಬಂದ ಮನೆತನ.  ಈ ನಾತೆಯಲ್ಲಿ ಅವರ ಅಂತಿಮ ದರ್ಶನಕ್ಕೆ ಹೊರಡ ಬೇಕಾಯಿತು. ದೊಡ್ಡ ಅಣ್ಣ ಬಂದರೆ ಅವನ ಗಾಡಿಯಲ್ಲೇ ಹೋಗಿ ಬರಬಹುದೆಂಬ ಲೆಕ್ಕದಲ್ಲಿ ಅವನಿಗೆ ಫೋನ್ ಮಾಡಿ ವಿಷಯ ತಿಳಿಸಿದೆ. ಆತ, ತಾನೀಗ ಅವರಲ್ಲಿ ಉದ್ರಿ ಲೆಕ್ಕ ಇಟ್ಟಿಲ್ಲವೆಂದು ಹೇಳುವ ಮೂಲಕ ತನಗೆ ಅವರ ಅಂತಿಮ ದರ್ಶನ ಕಡ್ಡಾಯವಲ್ಲ ಎಂದು ಸೂಚಿಸಿದ. ಕಡೆಗೂ ನನ್ನ ಬೈಕ್ ನಲ್ಲೇ ಹೋಗಬೇಕಾಯಿತು.

ಎರಡು ಮೂರು ತಿಂಗಳ ಉದ್ರಿ ಬಾಕಿ ಇದ್ದರೂ ಅವರ ಮಕ್ಕಳನ್ನು ನೋಡಲು ಈಗ ಯಾವ ಹೆದರಿಕೆಯೂ ಆಗಲಿಲ್ಲ. ಅಷ್ಟೇ ಏಕೆ, ‘ನಾವೆಲ್ಲ ನಿಮ್ಮ ಜೊತೆಗಿದ್ದೇವೆ..’ ಎಂಬ ಧೈರ್ಯ ಹೇಳುವಲ್ಲಿಯೂ ಅಳುಕು ಉಂಟಾಗಲಿಲ್ಲ. ಸಂಸ್ಕಾರ ಮುಗಿಸಿ ಮರಳುವಾಗ ರಾಮಣ್ಣ, ನನ್ನ ಗಾಡಿಯನ್ನೇ ಏರಿದ. ‘ಅಂತೂ, ವ್ಯಾಪಾರ ಮತ್ತು ಇಹಲೋಕ ವ್ಯಾಪಾರ ಎರಡನ್ನೂ ಮುಗಿಸಿ ಭೂಮಿಯ ಋಣಮುಗಿಸಿದರು..’ ಎಂದು ಸಾಂದರ್ಭಿಕ ತತ್ವಜ್ಞಾನದ ನಿಟ್ಟುಸಿರು ಬಿಟ್ಟ. ಉದ್ರಿ ಚುಕ್ತಾ ಆಗುವವರೆಗು ನನ್ನ ಋಣ ಹಾಗೆ ಉಳಿಯುವುದೆಂದು ನಾನು ನಿಟ್ಟುಸಿರು ಬಿಟ್ಟೆ. ರಾಮಣ್ಣನನ್ನು ನನ್ನ ಗಾಡಿಯಲ್ಲಿ ಕೂಡ್ರಿಸಿಕೊಂಡು ಬಂದದ್ದರಿಂದ ದಾರಿಯಲ್ಲಿ ಕುಡಿದ ತಂಪು ಪಾನೀಯದ ದುಡ್ಡನ್ನು ಅವನೇ ಕೊಡಬೇಕಾಯಿತು.

ಸಂಸ್ಕಾರಕ್ಕೆ ಹೋದ ಕರ್ತವ್ಯದಿಂದಾಗಿ ವೈಕುಂಠ ಸಮಾರಾಧನೆಯ ಊಟಕ್ಕೆ ಹೋಗುವ ಹಕ್ಕಿನ ಆಮಂತ್ರಣ ಪ್ರಾಪ್ತವಾಗಿತ್ತು. ಬರುವಾಗ ರಾಮಣ್ಣನನ್ನು ಕರೆತರಬೇಕಾಗುತ್ತದೆ ಎಂಬುದು ನೆನಪಾಗಿ ಬೈಕ್ ಬೇಡ ಎಂದು ನಿರ್ಧರಿಸಿದೆ. ಬಸ್ ನಲ್ಲಿಯೇ ಹೋದೆ. ಆಶ್ಚರ್ಯವೆಂದರೆ ಉದ್ರಿ ವ್ಯವಹಾರ ಇರಿಸಿಕೊಳ್ಳದ ನಮ್ಮ ಅಣ್ಣನೂ ಸಮಾರಾಧನೆಯ ಊಟಕ್ಕೆ ಹಾಜರಿದ್ದ. ಆದರೆ ಆತ ನನಗೆ ಬರುವ ವಿಷಯ ಹೇಳಿರಲೆ ಇಲ್ಲ. ಸಮಾರಾಧನೆಯ ವಿಷಾದದ ಜಾಗವನ್ನು ಯಾವುದೊ ಸಂಭ್ರಮದ ವಾತಾವರಣ ಹಿಡಿದಿಟ್ಟುಕೊಂಡಂತೆ ಕಂಡಿತು. ನಿಜ ತೀರಿ ಹೋದ ಶೆಟ್ಟರು ಮೊಮ್ಮಗನ ರೂಪದಲ್ಲಿ ಅವತರಿಸಿ ಬಂದಿದ್ದಾರೆ ಎಂಬ ಸುದ್ದಿ ಅಲ್ಲೆಲ್ಲ ನವ ಸಂಚಲನ ಮೂಡಿಸಿತ್ತು. ಬೇರೆ ಬೋರ್ಡಿನೊಂದಿಗೆ ವ್ಯಾಪಾರ ಮಾಡಲು ಬಂದ ಮರಿ ಶೆಟ್ಟರನ್ನು ನೋಡುವ ಕುತೂಹಲದಿಂದ ಮಗು ಇರುವಲ್ಲಿಗೆ ಹೋದೆ. ಕೋಣೆಯ ಹೊರಗಿನಿಂದಲೇ ನೋಡಬೇಕಾಯಿತು. ಆರೆಂಟು ದಿನಗಳ ಮಗು ಆಗಲೇ ಚಿನ್ನಾಭರಣ ಧಾರಣ ಮಾಡಿ ಅದರ ಧಾರಣೆಯ ಬಗ್ಗೆ ಯೋಚಿಸುತ್ತಿತ್ತೊ ಏನೊ,ನಮ್ಮ ಕಡೆಗೆ ನೋಡಲೇ ಇಲ್ಲ! ಆದರೆ ಇದ್ದಕ್ಕಿದ್ದಂತೆ ಶೇರು ಮಾರುಕಟ್ಟೆ ಬಿದ್ದು ಹೋದಂತೆ ಅಳತೊಡಗಿತು. ನಾನು ಅದರ ವ್ಯಕ್ತಿತ್ವದಲ್ಲಿ ರಟ್ಟಿನ ಕೆಂಪು ಟೊಪ್ಪಿಗೆಯ, ಕರಿ ಕೋಟಿನ ರಂಗಪ್ಪ ಶೆಟ್ಟರನ್ನು ಹುಡುಕಲು ನೋಡಿದೆ. ಆದರೆ ಆಧುನಿಕ ಕೇಶ ವಿನ್ಯಾಸದ, ಬಣ್ಣ – ಬಣ್ಣದ ಸೂಟು ಮತ್ತು ಉದ್ದೋ ಉದ್ದದ ಕಾರುಗಳು ಕಂಡವು. ಹಿಂದೊಂದು ಹೆಲಿಕಾಪ್ಟರ್ ಬೇರೆ. ಇನ್ನು ಮುಂದೆ ನಡೆಯುವ ಹೊಸ ನಮೂನೆಯ ವ್ಯಾಪಾರ ವೈಭವ ಕಲ್ಪಿಸಿಕೊಳ್ಳುತ್ತ, ಇನ್ನು ಮುಂದೆ ನಮಗೆ ಉದ್ರಿ ಅನುಕೂಲ ಸಿಗುತ್ತದೊ ಇಲ್ಲವೊ ಎಂದು ಆತಂಕ ಪಡುತ್ತ ಹೊರಗೆ ಬಂದೆವು.

ಸಮಾರಾಧನೆ ಭರ್ಜರಿಯಾಗಿತ್ತು. ತಲೆ, ಮೀಸೆ – ಗಡ್ಡ ಬೋಳಿಸಿಕೊಂಡ ಮೂವರು ರಾಯರ ಮಕ್ಕಳೆಂದು ಗೊತ್ತಾಗುತ್ತಿತ್ತಾದರು ಇವರೇ ಇವರೆಂದು ತಿಳಿಯುವಂತಿರಲಿಲ್ಲ. ಅವರಲ್ಲೊಬ್ಬ ಆಪ್ತರೊಬ್ಬರಿಗೆ ಹೇಳುತ್ತಿದ್ದ. ‘ಪ್ರತಿ ಊಟಕ್ಕೆ ಮುನ್ನೂರೈವತ್ತು. ಸಾವಿರ ಜನ. ಎಲ್ಲಾ ಗುತ್ತಿಗೆ, ಪುರೋಹಿತರಿಗೆ ಐವತ್ತು ಸಾವಿರ. ಕಾಂಟ್ರಾಕ್ಟು. ದಾನ ಧರ್ಮಕ್ಕೆ ಒಂದು ಲಕ್ಷ. ಗರುಡ ಪುರಾಣದವರು ಹದಿನೈದು ಕೇಳಿದರು. ಪುರೋಹಿತರು ಹತ್ತಕ್ಕೆ ಒಪ್ಪಿಸಿದರು. ಅದಕ್ಕಾಗಿ ಅವರಿಗೆ ಎರಡು ಕೊಡಬೇಕಾಯಿತು. ಅಷ್ಟಾದರು ಮೂರು ಉಳಿಯಿತು. ಪೆಂಡಾಲು, ಅದು-ಇದು ಅಂತ ಸುಮಾರು ಖರ್ಚಾಯ್ತು. ಆದರೆ ಹಿರಿಯರ ಕಾರ್ಯ ನೋಡಿ.. ಅವರಿಗೆ ಸಮಾಧಾನವಾದರೆ ಆಯ್ತು..!’ ಇದನ್ನೆಲ್ಲ ಕೇಳುತ್ತಿದ್ದ ನನಗೆ ‘ಈ ಖರ್ಚನ್ನೆಲ್ಲ ಭವಿಷ್ಯದಲ್ಲಿ ಇವರು ಯಾವ ಯಾವ ರೂಪದಲ್ಲಿ ತಮ್ಮ ಗಿರಾಕಿಗಳಿಂದ ವಸೂಲು ಮಾಡಬಹುದು?’ ಎಂಬ ಕ್ಷಣಕಾಲದ ಚಿಂತೆ ಸುಳಿದು ಹೋಯಿತು…ಅಷ್ಟರಲ್ಲಿ ಯಾವುದೊ ಸದ್ದು ಮಾಡದ, ಹೊಳೆಹೊಳೆಯುವ ಕಾರು ಬಂತು.ದೊಡ್ಡ ಮನುಷ್ಯರೆಂಬವರು ಇಳಿದರು. ಶೆಟ್ಟರ ಮಕ್ಕಳು ಅವರನ್ನು ಸ್ವಾಗತಿಸಿ ಪಕ್ಕದ ಕೋಣೆಗೆ ಕರೆದೊಯ್ದರು. ‘ಈಗ ಒಂದು ಮಹತ್ವದ ಡೀಲ್ ಆಗಲಿದೆ..’ ಎಂದು ರಾಮಣ್ಣ ಕಿವಿಯಲ್ಲಿ ಉಸುರಿದ.

ನಾವು ಊಟ ಮಾಡಿ ಕೈ ತೊಳೆದು ಬರುವಾಗಲೇ ದಿವಂಗತ ರಂಗಪ್ಪ ಶೆಟ್ಟರ ಹೆಣ್ಣು ಮಕ್ಕಳಿಬ್ಬರು ‘ ನಮಗೆ ಊಟ ಬೇಡ, ಊಟ ಮಾಡುವುದಿಲ್ಲ..’ ಎಂದು ಅಳುತ್ತಿದ್ದರು. ‘ಹೆಣ್ಣು ಮಕ್ಕಳದೇ ನಿಜವಾದ ಕರುಳು..’ ಎಂದುಕೊಂಡ ನಾನು ಎರಡು ಹನಿ ಕಣ್ಣಲ್ಲಿ ನೀರು ತರುವ ತೀರ್ಮಾನಕ್ಕೆ ಬರುತ್ತಿರುವಾಗಲೇ ‘ ನಾವೂ ಅಪ್ಪನ ಮಕ್ಕಳೇ… ಅಪ್ಪನ ಆಸ್ತಿಯಲ್ಲಿ ನಮ್ಮ ಪಾಲು ನಿರ್ಧಾರವಾಗುವವರೆಗೆ ನಾವು ಊಟ ಮಾಡುವುದಿಲ್ಲ. ನೀರೂ ಕುಡಿಯುವುದಿಲ್ಲ’ ಎನ್ನುತ್ತ ದುಃಖವನ್ನು ತೀವ್ರಗೊಳಿಸಿದರು. ಹೆಂಡಂದಿರ ತವರಿನ ಕರುಳು ಮಿಶ್ರಿತ ವ್ಯಾವಹಾರಿಕ ದುಃಖ ಮತ್ತು ಹಕ್ಕಿನಲ್ಲಿ ಸಮಪಾಲು-ಸಮಬಾಳು ಎನ್ನುವುದನ್ನು ಸೂಚಿಸುವಂತೆ, ಅವರ ಗಂಡಂದಿರೂ ಊಟ ಮಾಡದೆ ನಿಂತು ಪತಿ ಧರ್ಮ ಪಾಲಿಸುತ್ತಿದ್ದರು. ಅಷ್ಟರಲ್ಲಿ ಶೆಟ್ಟರ ಹಿರಿಯ ಸಂಬಂಧಿಯೊಬ್ಬರು ವೃತ್ತಿನಿರತ ಸಂಧಾನಕಾರರಂತೆ ಮುಂದೆ ಬಂದು ಎಲ್ಲರನ್ನು ಮತ್ತೊಂದು ಕೋಣೆಗೆ ಕರೆದುಕೊಂಡು ಹೋದರು. ಐದೇ ನಿಮಿಷದಲ್ಲಿ ಎಲ್ಲರು ಹೊರಬಂದು ಊಟಕ್ಕೆ ನಡೆದರು.ಈಗಲೂ ಹೆಣ್ಣುಮಕ್ಕಳ ಮುಖದಲ್ಲಿ ದುಃಖವಿತ್ತು.ಆದರೂ ಅದರ ಸ್ವರೂಪ ಭಿನ್ನವಾಗಿತ್ತು. ಇಂಥದೆಲ್ಲದರ ಅರಿವಿದ್ದೂ ಇಹಲೋಕ ವ್ಯಾಪಾರಕ್ಕೆಂದು ಪುನರಪಿ ಜನನ ಬಯಸಿ ಬಂದ ಶೆಟ್ಟರ ಧೈರ್ಯ ಮತ್ತು ವ್ಯಾಪಾರ ಪ್ರೇಮದ ಬಗೆಗೆ ಗಾಬರಿ ತುಂಬಿದ ವಿಸ್ಮಯ ಉಂಟಾಯಿತು.

ಮನೆಗೆ ಹೋಗುವ ಕಡೆಗೆ ಯಾರದಾದರು ಗಾಡಿ ಸಿಕ್ಕರೆ ನೂರು ರೂಪಾಯಿ ಉಳಿಸಬಹುದೆಂದು ಆಲೋಚಿಸುತ್ತಿದ್ದೆ. ಸಿಕ್ಕ ಒಂದಿಬ್ಬರು ನನ್ನ ಅಂತರಂಗದ ವ್ಯಾಪಾರ ಅರಿತವರಂತೆ ತಮ್ಮ ಮಾರ್ಗದ ನಕ್ಷೆಯನ್ನು ದಕ್ಷಿಣದ ಮೂಲಕ ಉತ್ತರಕ್ಕೆ ಬದಲಾಯಿಸಿದರು. ರಾಮಣ್ಣನ ನೆನಪಾಗಿ ಹುಡುಕಿಕೊಂಡು ಒಳಗೆ ಹೋದೆ. ಆತ ಅಡಿಗೆ ಗುತ್ತಿಗೆದಾರರ ಚರವಾಣಿ ಸಂಖ್ಯೆ ಪಡೆದುಕೊಳ್ಳುತ್ತಿದ್ದ. ಗಿರಾಕಿ ಹುಡುಕಿ ಕೊಟ್ಟರೆ ಶೇಕಡಾ ಎರಡೂವರೆಯ ಕಮೀಶನ್ ಎಂಬ ಹೊಸ ಒಡಂಬಡಿಕೆಯಿಂದಾಗಿ ವೈಕುಂಠ ಸಮಾರಾಧನೆಗೆ ಬಂದ ರಾಮಣ್ಣನಿಗೆ ವೈಕುಂಠವೇ ಸಿಕ್ಕಂತಾಗಿತ್ತು.ಅಷ್ಟೇನು ವ್ಯವಹಾರ ತಿಳಿಯದ ನಾನೂ ರಾಮಣ್ಣನ ಮಾದರಿ ಅನುಸರಿಸಿ ಅವರ ಮೊಬೈಲ್ ನಂಬರ್ ಕೇಳಿದೆ. ಅವರಿಗೆ ನನ್ನ ಮೇಲೆ ಯಾಕೊ ಭರವಸೆ ಹುಟ್ಟಲಿಲ್ಲ. ಆದರೂ ತೀರ ನಷ್ಟವೇನೂ ಆಗಲಿಲ್ಲವೆನ್ನಿ. ನಾಲ್ಕು ರವೆ ಉಂಡಿಗಳನ್ನು ಕಾಗದದಲ್ಲಿ ಕಟ್ಟಿ ಎಡಗೈಯಿಂದ ಕೊಟ್ಟರು.ಯಾವ ಕೈಯಿಂದ ಕೊಟ್ಟರೂ ಅದರ ಸಿಹಿಯೇನೂ ಬದಲಾಗುವುದಿಲ್ಲವೆಂಬ ಸಮಾಧಾನ ತಂದುಕೊಂಡೆ.

‘ಅಟೋದಲ್ಲಿ ಅರ್ಧರ್ಧ ಕೊಟ್ಟು ಹೋಗೋಣ..’ ಎಂಬ ಪರಸ್ಪರ ಲಾಭದ ಯೋಜನೆಯನ್ನು ರಾಮಣ್ಣನೇ ಘೋಷಿಸಿದ. ಯೋಜನೆ ಜಾರಿಯಾಗಿ ಆಟೊದಲ್ಲಿ ಸಾಗುವಾಗ ಎಲ್ಲದರಲ್ಲು ಒಳ್ಳೆಯದನ್ನು ಹುಡುಕುವ ರಾಮಣ್ಣ, ‘ ಮದುವೆ-ಮುಂಜಿ-ಹುಟ್ಟುಹಬ್ಬಗಳಂತೆ ವೈಕುಂಠ ಸಮಾರಾಧನೆಯಲ್ಲಿ ಆಹೇರು ಕೊಡುವ ರೂಢಿಯೊಂದಿಲ್ಲ ನೋಡು.ಆಟೊ ಖರ್ಚೊಂದು ಬಿಟ್ಟರೆ ಇದು ನಿಜಕ್ಕು ಒಳ್ಳೆಯ ಸಮಾರಂಭ…ಇಂಥವು ಎಷ್ಟು ಬಂದರೂ ಹೋಗುತ್ತಿರಬಹುದು..’ ಎಂದು ಹೇಳಿ, ತನ್ನ ಜಾಗ ಬಂದಾಗ ನನ್ನ ಕೈಗೆ ಐವತ್ತು ರೂಪಾಯಿ ಹಾಕಿ ಇಳಿದು ಹೋದ.ರಾಮಣ್ಣನ ತಲೆಯಲ್ಲಿದ್ದ ಲೆಕ್ಕಾಚಾರದ ಭೂತ ಈಗ ನನ್ನ ತಲೆ ಸೇರಿತು… ನನ್ನ ಆತ್ಮಸಾಕ್ಷಿ ‘ಛೀ, ಥೂ..’ ಎಂಬ ಹಿನ್ನೆಲೆ ಸಂಗೀತದೊಂದಿಗೆ ನನ್ನನ್ನು ಚುಚ್ಚುತ್ತಿರುವಾಗಲೇ, ‘ಹೋಗುವಾಗ ಬಸ್ಸಿಗೆ ಹದಿನೈದು, ಬರುವಾಗಿನ ಅಟೋದ ಐವತ್ತು, ಒಟ್ಟು ಅರವತ್ತೈದು… ಮುನ್ನೂರೈವತ್ತರ ಊಟದಲ್ಲಿ ಅರವತ್ತೈದು ತೆಗೆದರೂ ಇನ್ನೂರೆಂಭತ್ತೈದರ ಲಾಭ… ಆದರೆ ಅಷ್ಟರ ಊಟ ಮಾಡಿದೆನೇ? ಇನ್ನೂ ಸ್ವಲ್ಪ ಮಾಡಬಹುದಾಗಿತ್ತೇ..?’ ಎಂದೆಲ್ಲ ಲೆಕ್ಕ ಹಾಕಿ ಮುಗಿಸಿದೆ. ‘ತನ್ನನ್ನೂ ಲೆಕ್ಕಕ್ಕೆ ಸೇರಿಸು’ ಎನ್ನುವಂತೆ ಕೈಯಲ್ಲಿದ್ದ ಲಡ್ಡು ಪೊಟ್ಟಣ ಕಾಣಿಸಿತು.. ಆತ್ಮಸಾಕ್ಷಿ ಬೈಯುವಷ್ಟು ಬೈದು ಸುಮ್ಮನಾಗಿತ್ತು.

ನನ್ನದೆಂಬ ಈ ಆತ್ಮಸಾಕ್ಷಿ ನನ್ನ ಸೇರುವ ಮುನ್ನ ಪೂರ್ವಜನ್ಮದಲ್ಲಿ ಲೆಕ್ಕದಲ್ಲಿ ಸೊನ್ನೆ ಅಂಕ ಪಡೆಯುತ್ತಿದ್ದ ವಿದ್ಯಾರ್ಥಿಯ ಮೈಯ್ಯಲ್ಲಿತ್ತೊ ಏನೊ! ನಾನು ಕುಳಿತಲ್ಲಿಯೇ ಏನಾದರು ಸಣ್ಣ ಲಾಭ ಮಾಡಿಕೊಳ್ಳುವ ಲೆಕ್ಕಕ್ಕಿಳಿದರೆ ಸಾಕು,ಸೂಜಿ ಚುಚ್ಚಿದಂತೆ ಚುಚ್ಚುತ್ತ,ಕೆಟ್ಟ ಪದಗಳಲ್ಲಿ ತೆಗಳುತ್ತ ನನ್ನ ಕೂಡುವ ಲೆಕ್ಕವನ್ನು ಕೆಡಿಸಿ ಕಳೆಯುವ ಲೆಕ್ಕವನ್ನಾಗಿಸಿ ಬಿಡುತ್ತದೆ. ಹೆಂಡತಿ ನನ್ನ ಮತ್ತು ನನ್ನ ಆತ್ಮಗಳನ್ನು ಸೇರಿಸಿಯೇ ‘ಕೈಲಾಗದವರು,..’ ಎಂದು ಮೂದಲಿಸುತ್ತ — ‘ಮೂಲೆಯಲ್ಲಿ ಕುಳಿತು ವಟಗುಡುವ ಮುದುಕಿಗೇಕೆ ಹೆದರ ಬೇಕು? ಅದೇನು ಕಾರ್ಯಕಾರಿಣಿಯೇ? ಕೇವಲ ಸಲಹಾ ಸಮಿತಿ..’ಎಂದು ಆತ್ಮಸಾಕ್ಷಿಯನ್ನು ಅಲಕ್ಷಿಸುವಂತೆ ಬುದ್ಧಿ ಹೇಳುತ್ತಾಳೆ. ಈ ಕಲಿಯುಗದಲ್ಲಿ ಇದರದೇನು ಕೆಲಸ? ಎಂದು ನನಗೂ ನಡುನಡುವೆ ಅನಿಸುವುದಿದೆ. ಅಂತೆಯೇ,ಒಂದು ಸಾರಿ ಇದರ ಮತ್ತೊಂದು ಸಾರಿ ಹೆಂಡತಿಯ ಮಾತು ಕೇಳಿಕೊಳ್ಳುತ್ತ ಹಾಗು,ಹೀಗು ಸಂಸಾರ ವ್ಯಾಪಾರ ಸಾಗಿಸುತ್ತಿದ್ದೇನೆ. ನನಗೆ ಕಾಡುವಷ್ಟು ನನ್ನ ಅಕ್ಕ ಪಕ್ಕದವರಿಗೆ ಈ ಆತ್ಮಸಾಕ್ಷಿ ಕಾಡಲಿಕ್ಕಿಲ್ಲ ಎಂಬುದು ನನ್ನ ಕಾಯಂ ಭಾವನೆ. ಅವರೆಲ್ಲ ಸಮಾಜ ವಿಜ್ಞಾನ,ಪೌರನೀತಿ, ಕಾನೂನು ಶಾಸ್ತ್ರಗಳಲ್ಲಿ ಸೊನ್ನೆ ಅಂಕ ಪಡೆದರೂ ಲೌಕಿಕ ಜ್ಞಾನದಲ್ಲಿ ಲೋಕವಿಶಾರದರು;ಗಣೀತದಲ್ಲಂತೂ ‘ಅಗಣಿತ ಗುಣಧಾಮರು!’ ಎಂದು ಅನುಭವದ ಮೂಲಕ ಅನಿಸುವುದಿದೆ. ಅವರೂ ನನ್ನ ಬಗೆಗೆ ಹೀಗೇ ಅಂದುಕೊಳ್ಳುತ್ತಾರೊ ಏನೊ, ಅಂತಲೂ ಅನಿಸುವುದಿದೆ.

ರಂಗಪ್ಪ ಶೆಟ್ಟರ ವೈಕುಂಠದ ಊಟ ನಿದ್ದೆಗೆಳೆಯಿತು ಮತ್ತು ವ್ಯಾಪಾರಸ್ಥರ ಊಟ ರಕ್ತಗತವಾಗಿ ತನ್ನ ಪ್ರಭಾವವನ್ನು ಹಗಲುಗನಸಿನಲ್ಲಿ ತೋರಿಸಿತು. ಅವರಂತೆಯೇ ವ್ಯಾಪಾರ ಮಾಡಿದೆ,ಆಸ್ತಿ ಮಾಡಿದೆ, ಕಾರು ತೆಗೆದುಕೊಂಡು ಮೆರೆದಾಡಿದೆ. ಆದರೆ ಅವರಂತೆ ಸಾಯುವುದಕ್ಕೂ ಮೊದಲು ಸರಿಯಾದ ಸಮಯಕ್ಕೆ ಕನಸಿನಿಂದ ಹೊರಬಂದೆ…’ಊಟಕ್ಕೆ ತಕ್ಕ ಸೊಗಸಾದ ಕನಸು’ ಎಂದು ಪ್ರಕಟವಾಗಿಯೇ ಹೇಳುತ್ತ ಮಲಗಿದಾಗ ಟೀ ಶರ್ಟ್ ಸ್ವಾಮೀಜಿ ನೆನಪಾದರು. ‘ಮನಸ್ಸಿಟ್ಟು ಸಾಧನೆ ಮಾಡಿದರೆ ನೀವು ನಿರಂತರ ಒಳ್ಳೆಯ ಕನಸುಗಳನ್ನು ಕಾಣಬಹುದೆಂದು’ ಧನಾಶ್ರಮದ ಸ್ವಾಮೀಜಿಯವರು ಪ್ರವಚನದಲ್ಲಿ ಹೇಳುತ್ತಲೇ ಇರುತ್ತಾರೆ. ಆದರೆ ಇಂತಹ ಇನ್ನಷ್ಟು ಮಾತು ಕೇಳಲು ಅವರ ತುಟ್ಟಿಯ ತರಗತಿಗೆ ಸೇರಬೇಕು. ತುಟ್ಟಿಯ ಟೀ ಶರ್ಟ್ ಕೊಂಡು ಹಾಕಿಕೊಳ್ಳಬೇಕು..ಇನ್ನಷ್ಟು ಟೀ ಶರ್ಟ್ ಕೊಂಡು ಇತರರಿಗೆ ಮಾರಿ ಅವರಿಗೆ ಹಣ ಕೊಡಬೇಕು. ಈ ಲಾಭವಿಲ್ಲದ ವ್ಯಾಪಾರ ಬೇಡವೇ ಬೇಡವೆಂದು ಆ ಕಡೆಗೆ ಹೋಗುವುದನ್ನು ಬಿಟ್ಟಿದ್ದೇನೆ.

ಮುದ್ದಿನ ಮಗಳು ನೆನಪಾದಳು.. ಅತ್ಯಂತ ಕಡಿಮೆ ಖರ್ಚಿನಲ್ಲಿ ಅವಳದೊಂದು ಮದುವೆ ಮಾಡಿ ಬಿಡಬೇಕು.ಅದಕ್ಕಾಗಿ ಹಂತ ಹಂತವಾಗಿ ಅವಳ ಸಹಕಾರ ಪಡೆಯಬೇಕು..ಎಂದು ಯೋಚಿಸುತ್ತ ಅವಳ ಕೋಣೆಗೆ ಹೋದೆ.ಅವಳು ಮನೋ ವ್ಯಾಪಾರದಲ್ಲಿ ತೊಡಗಿದ್ದಳು.ಖಾಲಿ ಗೋಡೆಯ ಪರದೆಯ ಮೇಲೆ ಅವಳದು ಸದ್ಯದಲ್ಲಿ ಮುಗಿಯದ ವ್ಯಾಪಾರ… ಇಪ್ಪತ್ತು-ಇಪ್ಪತ್ತೈದು ವರ್ಷಗಳ ಹಿಂದೆ ಇಂಥ ವ್ಯಾಪಾರ ಮಾಡಿದವನೇ ನಾನು! ಹಾಗಾಗಿ ಇದರ ಒಳ ಮರ್ಮ ಬಲ್ಲವನಾಗಿದ್ದೆ.

ಗೋಡೆಯ ಪಡದೆಯ ಮೇಲೆ ಚಿತ್ರಗಳು ಬರುತ್ತಿದ್ದವು. ದೇವಸ್ಥಾನದ ಎದುರಿನ, ಬಿಎ ಸೇತುವೆ ದಾಟದ, ಬಣ್ಣ ಬಣ್ಣದ ಕನಸಿನಂತಹ ಹೂಗಳನ್ನು ಮಾರುವ ಮೊಂಡು ಮೂಗಿನ ಹುಡುಗನೊಂದಿಗೆ ಮಗಳು, ಕಣ್ಣು, ಬಾಯಿ, ಮೈ, ಮನಸ್ಸುಗಳೊಂದಿಗೆ ಅಲೌಕಿಕ ಭಾಷೆಯಲ್ಲಿ ಸಂಭಾಷಣೆ ನಡೆಸುತ್ತಿದ್ದ ಮೊದಲ ದೃಶ್ಯ… ಹುಡುಗ ಲಾರಿಯಂತಹ ಕಾರಿನಲ್ಲಿ ಹೂ ತುಂಬಿಸಿಕೊಂಡು ಬೃಹತ್ ಬಂಗಲೆಯಿಂದ ಹೊರಡುವುದು ಎರಡನೇ ದೃಶ್ಯ. ಮರಳಿ ಅದೇ ಬಂಗಲೆಗೆ ಬಂದು ಹೂ ಮಾರಿ ಬಂದ ಹಣದ ಸೂಟ್ ಕೇಸನ್ನು ಮಗಳಿಗೆ ಒಪ್ಪಿಸುವುದು ಮತ್ತು ಅವಳು ಗೋ ಡೌನಿನಂತಹ ಕೋಣೆಗೆ ಹೋಗಿ ಅದನ್ನು ಸುರಿದು ಬರುವುದು ಅಂತಿಮ ದೃಶ್ಯ. ಬಂಗಾರದ ಮನುಷ್ಯನಂತೆ ಮುಗಿಯದ, ಮತ್ತೆ ಮತ್ತೆ ಬರುತ್ತಿದ್ದ ಈ ಅಂತಿಮ ದೃಶ್ಯವನ್ನು ಮಗಳು ಕುಳಿತಲ್ಲಿಯೇ ಕುಣಿದಾಡುತ್ತ ನೋಡುತ್ತಿದ್ದಳು ಮತ್ತು ನೋಡುತ್ತ ಕುಣಿದಾಡುತ್ತಿದ್ದಳು. ಅವಳನ್ನು ಕನಸಿನ ಲೋಕದಿಂದ ಲೋಕ ವ್ಯಾಪಾರಕ್ಕೆ ಕರೆತಂದು ಹೇಳಿದೆ…
‘ ಮಗಳೇ,ಈ ಹೂ ಮಾರುವ ಹುಡುಗನಿಗೆ ಕಾರು ದೂರವಮ್ಮ.ಬೈಸಿಕಲ್ಲು ಹತ್ತಿರ ಕಣಮ್ಮ; ಹೂ ಮಾರಿದ ಮಾತ್ರಕ್ಕೆ ಬಂಗಲೆ-ಗಿಂಗಲೆ ಆಗದಮ್ಮ,ಹೆಚ್ಚೆಂದರೆ ಶೀಟ್ ಮನೆಯಮ್ಮ; ಇದಕ್ಕಿಂತ ಪಿಯುಸಿ ಹುಡುಗರಿಗೆ ಸಿಇಟಿ ಮತ್ತು ನೀಟ್ ಟ್ಯೂಶನ್ ಹೇಳುವ ಮೇಷ್ಟ್ರನ್ನು ಮನಸ್ಸಿನ ಗೋಡೆಯ ಪಡದೆಯ ಮೇಲೆ ಸ್ಥಾಪಿಸಿಕೊ. ಕಲ್ಪವೃಕ್ಷ,ಕಾಮಧೇನು ಬೇರಿಲ್ಲ,ಕಣಮ್ಮ. ಈ ಹೂ ಹುಡುಗನಿಗೆ ಕಾರು- ಬಂಗಲೆ ಕೊಡುವವರು ಯಾರಮ್ಮ?’ ಎಂದು ಮನ ಕಲಕುವಂತೆ ಅನುನಯಿಸಿಲು ಯತ್ನಿಸಿದೆ. ಮಗಳು ನನ್ನತ್ತ ನಮ್ಮ ರಿಯಲ್ ಎಸ್ಟೇಟ್ ಮುನಿಸ್ವಾಮಿ ನೋಡಿದಂತೆ ನೋಡಿ, ‘ಅಪ್ಪ, ಅದು ನನಗೂ ಗೊತ್ತು.ನನಗೆ ಮೊದಲ ದೃಶ್ಯದ ಹುಡುಗನನ್ನು ಪಡೆವುದಷ್ಟೇ ಬೇಕು.ಎರಡು ಮೂರರ ಕಾರು ಬಂಗಲೆ ದೃಶ್ಯಗಳಿಗಾಗಿ ನೀನು ಪ್ರಾಯೋಜಕನಾದರೆ ಸಾಕು’ ಎಂದು ಹೇಳಿ ‘ನಾನೊಬ್ಬಳೇ ಮಗಳೆಂದು ತಿಳಿದಾಗಿನಿಂದ ಅವನ ಪ್ರೀತಿ ಚಿನ್ನದ ದರದಂತೆ ಏರುತ್ತಲೇ ಸಾಗಿದೆ.ಅಂಗಡಿ ಬಂಗಲೆಗಳನ್ನು ಆಗಲೆ ನೋಡಿಟ್ಟಿದ್ದಾನೆ.’ ಎಂದು ಹೇಳಿದಳು.ಗೋಡೆಯ ಮೇಲೆ ನನ್ನ ಹಣ ಪಡೆಯಲೆಂಬಂತೆ ಬಂಗಾರದ ಮನುಷ್ಯ ಮತ್ತೆ ಮೂಡಿ ಬಂದ.

ನಾನು ಅವಳ ಮನೋವ್ಯಾಪಾರದ ಬಗ್ಗೆ ಮೊದಲ ಬಾರಿಗೆ ಗಂಭೀರನಾಗ ಬೇಕಾಯಿತು. ಇದುವರೆಗೆ ‘ಮನಸ್ಸಿನ ಮಂಡಿಗೆ ತಾನೇ? ತಿಂದರೆ ತಿನ್ನಲಿ.’ ಎಂದು ಹಗುರಾಗಿ ತೆಗೆದುಕೊಂಡಿದ್ದೆ.ಆದರೆ ಗೋಧಿ- ತುಪ್ಪ ಸಕ್ಕರೆಗಳ ಖರ್ಚು ನನ್ನ ಲೆಕ್ಕದಲ್ಲಿ ಎಂದು ಅಂದುಕೊಂಡಿರಲಿಲ್ಲ. ಕಾಲ ಬದಲಾಗಿದೆ.ಈಗ ಮಕ್ಕಳ ಬೆಲೆಯನ್ನು ತಂದೆ ತಾಯಿಗಳು ಕಟ್ಟುವುದಿಲ್ಲ.ಮಕ್ಕಳೇ ತಂದೆ ತಾಯಿಯರ ಬೆಲೆ ಕಟ್ಟುವುದನ್ನು ಕಲಿತಿದ್ದಾರೆ. ಈ ಇಡೀ ವಿದ್ಯಮಾನ ಏಕೊ ಚಹ ಬೇಕೆನಿಸುವಂತೆ ಮಾಡಿತು. ಆದರೆ, ನಾಲ್ಕೂವರೆಗೆ ಚಹ ಕೊಟ್ಟರೆ ಆರೂವರೆಗೆ ಮತ್ತೊಮ್ಮೆ ಚಹ ಕೇಳುವ ಸಾಧ್ಯತೆ ಇರುತ್ತದೆಂಬ ಕಾರಣಕ್ಕೆ ಹೆಂಡತಿ ಚಹದ ಸಮಯವನ್ನು ಐದೂವರೆಯ ಅನಂತರಕ್ಕೆ ನಿಗದಿಗೊಳಿಸಿದ್ದಳು. ಆಶ್ಚರ್ಯವೆಂದರೆ ಚಹ ಬಂದೇ ಬಿಟ್ಟಿತು! ಜೊತೆಗೆ, ಬೇಗ ಕುಡಿದು ದೇವಸ್ಥಾನಕ್ಕೆ ಹೊರಡಲು ಸಿದ್ಧವಾಗುವ ಸೂಚನೆಯೂ ಬಂದಿತು. ದೇವಸ್ಥಾನಕ್ಕೆ ನನ್ನ ಕಾರಣವಾಗಿಯೇ ಹೋಗಬೇಕಾಗಿತ್ತು. ಕಚೇರಿಯಲ್ಲಿಯ ಒಂದು ಬಡ್ತಿಗಾಗಿ ನಾನೂ ಸೇರಿ ಐದು ಜನ ಸಹೋದ್ಯೋಗಿಗಳು ಅದರ ದಾವೇದಾರು. ದೇವರಿಗೆ ಒಂದು ಪೂಜೆ ಮಾಡಿಸಿ, ಜೊತೆಗೊಂದು ಹರಕೆಯನ್ನೂ ಹೊತ್ತು ಬಂದರೆ ಎಂಥ ಕೆಲಸವೂ ಆಗುತ್ತದೆಂಬುದು ಹೆಂಡತಿಯ ಅಂದಾಜು. ಮತ್ತು ನಮ್ಮ ಕುಲದೇವತೆಯ ತಾಕತ್ತೂ ಅಂಥದು.

ಇಲ್ಲಿ ಒಂದು ವಿಷಯ ಸ್ಪಷ್ಟ ಪಡಿಸಬೇಕು.ನಮ್ಮ ಮೂಲ ಕುಲದೇವತೆಯ ದೇವಸ್ಥಾನ ಮನೆಯಿಂದ ಆರು ಕಿಲೊ ಮೀಟರ್ ನಷ್ಟು ದೂರ. ಅಲ್ಲಿಗೆ ಬಸ್ ಇಲ್ಲ. ನಡೆಯಲು ದೂರ.ಆಟೊ ತುಟ್ಟಿ. ಇಷ್ಟಾಗಿ ಅದಕ್ಕೆ ಜನ ಇರದೆ, ಆದಾಯ ಇರದೆ, ಅರ್ಚಕರೂ ಇರದೆ ದಿನದ ಪೂಜೆಯೇ ನಿಂತು ಹೋಗಿದೆ. ಹೀಗಾಗಿ ನಾವು ಮನೆ ಹತ್ತಿರದ ದೇವಸ್ಥಾನ ಸಂಕೀರ್ಣಕ್ಕೆ ತೆರಳುತ್ತಿದ್ದೆವು. ಅದೊಂದು ರೀತಿಯಲ್ಲಿ ‘ಟೆಂಪಲ್ ಮಾಲ್’ ಇದ್ದಂತೆ. ಎಲ್ಲಾ ದೇವರುಗಳು ಒಂದೇ ಜಾಗದಲ್ಲಿ ಸಿಗುತ್ತಿದ್ದವು. ನಿಜ ಹೇಳಬೇಕೆಂದರೆ ಈ ಸಂಕೀರ್ಣದಲ್ಲಿ ಪಾಪ! ನಮ್ಮ ಕುಲದೇವತೆಗೆ ಮೊದಲು ಜಾಗ ಇದ್ದಿರಲಿಲ್ಲ. ನಮ್ಮ ಕುಲದೇವತೆಯನ್ನು ಪರಿಚಯಿಸಿ, ಕೊಂಡಾಡಿ,ಅವಳ ಮಹಿಮೆ ಸಾರಿ,ಇದೇ ಊರಲ್ಲಿ ಅವಳಿಗೆ ಸಾವಿರಾರು ಭಕ್ತರಿದ್ದಾರೆಂದು ಅಲ್ಲಿಯ ಆಡಳಿತಕ್ಕೆ ಮನವಿ ಸಲ್ಲಿಸಿದ ಮೇಲೆ ದೇವಸ್ಥಾನದ ಆವರಣದ ಹಿಂದಿನ ಮೂಲೆಯಲ್ಲಿ ಎರಡು-ಎರಡಡಿಯ ಪುಟ್ಟ ದೇವಸ್ಥಾನ ನಿರ್ಮಿಸಿ ಅದರಲ್ಲಿ ಆರಂಗುಲದ ಪುಟ್ಟ ಮೂರ್ತಿ ಪ್ರತಿಷ್ಠಾಪಿಸಿ ಮುಂದೆ ನಮ್ಮ’ ಕುಲದೇವತಾ ಪ್ರಸನ್ನ’ ಎಂದು ಬರೆದಿದ್ದರು. ಪಕ್ಕದಲ್ಲಿಯೇ ‘ ಯಾವುದಕ್ಕೂ ಇರಲಿ’ ಎಂದು ಇಂತಹ ಎರಡೆರಡು ಅಡಿಯ ನಾಲ್ಕಾರು ಖಾಲಿ ‘ದೇವಸ್ಥಾನ’ ಗಳನ್ನು ನಿರ್ಮಿಸಿ ಇತರ ದೇವರ ಬೇಡಿಕೆಗಾಗಿ ಆಡಳಿತದವರು ಕಾದುಕೊಂಡಿದ್ದರು… ನಮ್ಮ ಕುಲದೇವತೆಯ ಬಳಿ ಹೋದಾಗ ಅದು ನಮ್ಮನ್ನು ಅತ್ಯಂತ ಕರುಣೆಯಿಂದ,ಹಂಬಲದಿಂದ ನೋಡಿದಂತೆ ನಮಗೆ ಭಾಸವಾಯಿತು.ಪಾಪ! ಅದಕ್ಕಾದರು ಯಾರಿದ್ದಾರೆ! ನಾವಿಬ್ಬರೇ ಆಗಾಗ ಬರುವ ಭಕ್ತರು! ಮತ್ತು ಬಂದಾಗಲೆಲ್ಲ ಹೆಚ್ಚೆಂದರೆ ಎಷ್ಟು ಹಾಕಲಾದೀತು?
ಅಷ್ಟೊಂದು ಹಿರಿ-ಕಿರಿಯ ದೇವಸ್ಥಾನಗಳಿದ್ದರೂ ‘ದೇವನೊಬ್ಬ ನಾಮ ಹಲವು’ ಎಂಬಂತೆ ಎಲ್ಲದಕ್ಕೂ ಒಬ್ಬರೇ ಅರ್ಚಕರು. ಅವರೂ ಸ್ವತಃ ಪೂಜೆ ಮಾಡುವ ಅರ್ಚಕರಲ್ಲ.ಇಬ್ಬರು ಮೂವರು ಅರ್ಚಕರನ್ನು ನೇಮಿಸಿಕೊಂಡು ಪೂಜೆಯ ದೇಖರೇಕಿ ಮಾಡುವ ಒಂದು ರೀತಿಯ ಮ್ಯಾನೇಜರರು.ಅವರು ಇನ್ನೂ ಎರಡು ಮೂರು ಇಂತಹ ದೇವಸ್ಥಾನ ಸಂಕೀರ್ಣಗಳನ್ನು ಗುತ್ತಿಗೆಯ ಮೇಲೆ ಹಿಡಿದಿದ್ದರಂತೆ.ಇವೆಲ್ಲವೂ ತೀರಿಹೋದ ರಂಗಪ್ಪ ಶೆಟ್ಟರ ಮಕ್ಕಳ ಮಾಲಿಕತ್ವದಲ್ಲಿ ಇರುವವಂತೆ… ಜನರಿಗೆ ಎಲ್ಲಾ ಹೇಗೊ ತಿಳಿದಿರುತ್ತದೆ. ಆದರೆ ಜನರು ಭಕ್ತಿಗು ಇದಕ್ಕು ಯಾವ ಸಂಬಂಧವನ್ನೂ ಕಲ್ಪಿಸುವುದಿಲ್ಲ. ಹಣ ನೀಡಿ ಪಾವತಿ ಪಡೆದರೆ ಆಯ್ತು, ನಾವಿರಲಿ, ಇರದೆ ಇರಲಿ; ಪೂಜೆ ನಡೆಯಿತೆಂದೇ ಲೆಕ್ಕ. ಅವರವರ ತಾಕತ್ತಿನಂತೆ ಐವತ್ತರಿಂದ ಐದು ಸಾವಿರದವರೆಗಿನ ಪೂಜೆಗಳು.

ಪದೋನ್ನತಿಗೆ ಎಷ್ಟರ ಪೂಜೆಯ ಅಗತ್ಯವಿದೆ ಎಂಬ ಸಮಸ್ಯೆ ಬಗೆ ಹರಿಯದಾದಾಗ ಹೆಂಡತಿ ಬೇರೆ ಬೇರೆ ದೇವಸ್ಥಾನಗಳ ಬಳಿ ಹೋಗಿ ಉಳಿದ ನಾಲ್ವರು ಅಭ್ಯರ್ಥಿಗಳ ಹರಕೆಯ ವಿವರಗಳನ್ನು ಅರ್ಚಕರ ಮೂಲಕವೇ ಪತ್ತೆ ಹಚ್ಚಿದಳು.ಒಬ್ಬರು ತೀರ ಸಾಧಾರಣ, ಇಬ್ಬರು ಮಧ್ಯಮ ಗಾತ್ರದ ಪೂಜೆಗೆ ಶರಣು ಹೋಗಿದ್ದರೆ ಒಬ್ಬರು ಮಾತ್ರ ಬಲವಾದ ದಿಂಡರಕಿ ಅಂದರೆ ಉರುಳು ಸೇವೆಯಲ್ಲಿ ಹಣ ಹೂಡಿದ್ದರು. ನಮ್ಮಾಕೆ ಪಂಚ ದಿಂಡರಕಿ ಎಂಬ ಬ್ರಹ್ಮಾಸ್ತ್ರ ಹೂಡಿದಳು. ಅಂದರೆ ಐವರಿಂದ ಉರುಳು ಸೇವೆ ಮಾಡಿಸುವ ಹರಕೆ. ಇದನ್ನು ನಾವೇ ಮಾಡಬೇಕಾಗಿಲ್ಲ.ಹಣ ಕೊಟ್ಟರೆ ಬಾಡಿಗೆ ಉರುಳು ಸೇವಕರನ್ನು ಅರ್ಚಕರೇ ಹೊಂದಿಸುತ್ತಾರೆ. ಎಲ್ಲ ವ್ಯವಹಾರ ಮುಗಿಸಿ ಮನೆಗೆ ಬಂದೆವು.ಎರಡನೆಯ ದಿನ ಜಾತ್ಯಾತೀತ ಉರುಳು ಸೇವಕಿಯೊಬ್ಬಳು ಮನೆಗೆ ಬಂದು ಸೇವೆ ಸಾಂಗವಾಗಿ ನಡೆದದ್ದನ್ನು ತಿಳಿಸಿ, ಪ್ರಸಾದ ಕೊಟ್ಟು,ಖುಷಿ ಪಡೆದು ಹೊರಟು ಹೋದಳು. ಜನರ ಭಕ್ತಿ ಹೆಚ್ಚಾಗಿದೆ. ಆದರೆ ಅದಕ್ಕೆ ತಕ್ಕಂತೆ ಅವರವರ ಕುಟುಂಬದಲ್ಲೂ, ಸಮುದಾಯದಲ್ಲೂ ಸೇವೆ ಮಾಡುವಷ್ಟು ಜನ ಸಿಗುತ್ತಿಲ್ಲ ಎಂಬುದು ನಮಗೆಲ್ಲ ತಿಳಿದ ವಿಷಯವೇ.ಏನು ಮಾಡಲಾಗುತ್ತದೆ?

ಮುಂದಿನ ದಿನಗಳಲ್ಲಿ ನನಗೆ ಪ್ರೊಮೋಶನ್ ಬರಲಿಲ್ಲ… ನಮ್ಮ ಸೇವೆ ದೇವರಿಗೆ ಹೇಗೆ ಕಡಿಮೆ ಬಿದ್ದಿರಲು ಸಾಧ್ಯ ಎಂದು ಶ್ರೀಮತಿ ಬೆಳತನಕ ಚಿಂತಿಸಿದಳು. ವಿಶೇಷವೆಂದರೆ ನಾಮ ಮಾತ್ರ ಸೇವೆ ಸಲ್ಲಿಸಿದ ಸಹೋದ್ಯೋಗಿಗೆ ಪ್ರೊಮೋಶನ್ ಸಿಕ್ಕಿತ್ತು! ಅತಿಯಾದ ಲೆಕ್ಕಾಚಾರ ಇರಬಾರದು,ನಿಜ. ಆದರೆ ದೇವರ ಲೆಕ್ಕಾಚಾರವೇನೆಂದು ತಿಳಿಯಬೇಕಲ್ಲವೇ? ಮುಂದಾದರು ಉಪಯೋಗಕ್ಕೆ ಬರುತ್ತದೆ.

ಗೆಳೆಯ ಸಂಗಣ್ಣ ಸುಲಭವಾಗಿ ಬಗೆಹರಿಸಿದ. “ದೇವರದು ಕೂಡ ಲೆ’ಕ್ಕಾಚಾರ’ ವೇ. ಆದರೂ ಅದರ ನಡುವೆ ಒಂದು ‘ಆಚಾರ’ ಇರುತ್ತದೆ.ಈ ಆಚಾರವೆ ಸ್ವರ್ಗ ಇದ್ದಂತೆ. ಅದರಲ್ಲಿ ವ್ಯಾಪಾರ ಭಾವ ಇರುವುದಿಲ್ಲ. ನ್ಯಾಯ ಇರುತ್ತದೆ. ಮನುಷ್ಯರು ದೇವರ ಜೊತೆಗೂ ವ್ಯಾಪಾರ ಮಾಡಲು ನೋಡುತ್ತಾರೆ.ಆದರೆ ದೇವರು ಮಾಡುವುದಿಲ್ಲ…”

ನಮ್ಮವರಲ್ಲೂ ಆಚಾರ ಇರುತ್ತದೆ. ಆದರೆ ಸ್ವಲ್ಪ ಭಿನ್ನ… ಹಾಲಿಗೆ ನೀರು ಸೇರಿಸುವುದು ಅಥವಾ ನೀರಿಗೆ ಹಾಲು ಸೇರಿಸುವುದು ತೀರ ಹಳೆಯ ಮಾದರಿಯ ವ್ಯಾಪಾರ. ಸಿಂಥೆಟಿಕ್ ಹಾಲಿನ ಪ್ಯಾಕೆಟ್ ಮೇಲೆ ನಾಟಿ ಹಸುವಿನ ಚಿತ್ರ ಇದ್ದರೆ ಹೊಸ ಮಾದರಿಯ Ehics  ಆಚಾರ ಅದು. ಈ ಹಸುವಿನ ಚಿತ್ರ ಬಹೂಪಯೋಗಿ. ಇದರ ಚಿತ್ರವಿರುವ ಪ್ಯಾಕೆಟ್ ಒಳಗೆ ಯಾವುದೊ ಹಂದಿ ತನ್ನ ನೆಣವಿರಿಸಿ ಸತ್ತು ಹೋಗಿದ್ದರೂ ಈ ಹಸು ನಗುತ್ತಿರುತ್ತದೆ. ಈ ‘ತುಪ್ಪ’ ಫಲಹಾರದಂಗಡಿಗೂ, ಖಾನಾವಳಿಗೂ,ದೇವಸ್ಥಾನಗಳ ಪ್ರಸಾದಕ್ಕೂ ಭೇದಭಾವವಿಲ್ಲದೆ ವಿತರಣೆಯಾಗುವ ಉತ್ತಮ ವ್ಯವಸ್ಥೆ ನಮ್ಮಲ್ಲಿದೆ. ಇನ್ನು, ವನಸ್ಪತಿ ತುಪ್ಪ ಎಂಬ ತುಪ್ಪ ಕೂಡ ಇರುತ್ತದೆ.ಇದರಲ್ಲಿ ತುಪ್ಪದ ಆಂಶ ಅಥವಾ ವನಸ್ಪತಿಯ ಅಂಶ ಇರಲೇ ಬೇಕೆಂದಿಲ್ಲ. ಅಡಿಗೆ ಎಣ್ಣೆ, ಔಷಧಿಗಳನ್ನು ಬಿಡಿ; ವಿಷದಲ್ಲೂ ಕಲಬೆರಕೆ ಇರುತ್ತದಂತೆ.

ಜಾಗತೀಕರಣದ ಕಾಲದಲ್ಲಿ ತರುಣರ ಹವ್ಯಾಸಗಳು ಬದಲಾಗಿವೆ. ದುಡ್ಡು ತರಲಾರದ ಲಲಿತ ಕಲೆಗಳ ಬಗ್ಗೆ ಯಾರು ಯಾಕೆ ಆಸಕ್ತಿ ವಹಿಸಬೇಕು? ಚಿತ್ರಮಂದಿರಗಳ ಜಾಗದಲ್ಲಿ ಮಾಲ್ ಬರುತ್ತಿವೆ. ಆರ್ಟ್ಸ್ ಕಾಲೇಜುಗಳ ಎತ್ತಂಗಡಿ ಮಾಡಿಸಿದ ಜಾಗದಲ್ಲಿ ಇಂಜನಿಯರಿಂಗ್ ಕಾಲೇಜು ಬರುತ್ತಲಿವೆ. ಕಾಲೇಜುಗಳಲ್ಲಿ ಭಾಷೆಗಳನ್ನು ಕಲಿಸುವುದು ವೇಳೆ, ಶ್ರಮ ಹಾಗು ಹಣದ ದುರ್ಬಳಕೆ ಎಂದು ವಿದ್ಯಾರ್ಥಿ ಮತ್ತು ಆಡಳಿತ ಮಂಡಳಿಯವರು ಕೂಡಿಯೇ ಒಪ್ಪುತ್ತಾರೆ. ಹಣವೇ ಭಾಷೆ, ಹಣವೇ ಕಲೆ ಮತ್ತು ಹಣವೊಂದೇ ಅಂತಿಮ ಉದ್ದೇಶ ಎಂದು ನಮ್ಮನ್ನೆಲ್ಲ ಮುನ್ನಡೆಸಿಕೊಂಡು ಹೊಗುತ್ತಿರುವ ಈ ಯುಗ ತಾನೇ ನಿರ್ಧರಿಸಿ ಬಿಟ್ಟಂತಿದೆ.

ಮೊನ್ನೆ ಒಂದು ವಧು ಸಂದರ್ಶನ ನಡೆಯಿತು. ಹುಡುಗಿಗೆ ನಿನ್ನ ಹವ್ಯಾಸಗಳಾವವು ಎಂದು ಹಿರಿಯರಾರೊ ಕೇಳಿದರು. ಸಾಹಿತ್ಯ, ಸಂಗೀತ,ಕ್ರೀಡೆ, ಕಲೆ. ಹೀಗೇನಾದರು ಹೇಳಬಹುದೆಂದರೆ ಆ ಹೆಣ್ಣುಮಗು, ‘ಟ್ರೇಡಿಂಗ್’ ಎಂದು ಹೇಳಿತು. ಪ್ರಶ್ನೆ ಕೇಳಿದವರಿಗೆ ಆಘಾತವಾದರೂ ಸಮಾನಾಸಕ್ತಿಯ ಹುಡುಗನಿಗೆ ಅಪಾರ ಸಂತಸವಾಯಿತು..!

ಸತತ ಹಣಗಳಿಕೆ, ಲಾಭ, ನಷ್ಟ, ಮೋಸ…! ಸದಾ ಇದರದೇ ಯೋಚನೆ.ನಾನೂ ಅದರ ಒಂದು ಭಾಗವೇ! ಯಾಕೊ ಬೇಜಾರೆನ್ನಿಸಿ ಬಿಟ್ಟಿತ್ತು. ಈ ವ್ಯಾಪಾರೀ ಲೋಕದಿಂದ ಸಾಹಿತ್ಯ ಪರಿಸರಕ್ಕೆ ಹೋದರೆ ನೆಮ್ಮದಿ ಸಿಕ್ಕ ಬಹುದೆಂದು ಅನ್ನಿಸಿತು.ಓದುವುದು, ಬರೆಯುವುದು,ತನ್ನಷ್ಟಕ್ಕೆ ತಾನು ಬೇರೆಯೇ ಲೋಕದಲ್ಲಿ ವಿಹರಿಸುವುದು! ಒಂದೊ, ಎರಡೊ ಸಲ ಕಾಫಿ; ಯಾವಾಗಲೊ ಒಂದೆರಡು ಸಿಗರೇಟು.ಮತ್ತು ಕೆಲವೇ ಕೆಲವರಿಗೆ ಸಂಜೆಯ ಮುಂದೆ ತಾಯಿಯ ನೆನಪಾಗುವ ಪುಟ್ಟ ಮಕ್ಕಳ ಹಾಗೆ ಏನೋ ಒಂದಿಷ್ಟು ಬೇಕೆನಿಸುವುದು! ಇದು ಬಿಟ್ಟರೆ, ಹಣ ಎಂಬುದು ಕಃಪದಾರ್ಥ; ಎಂತೆಲ್ಲ ನಮಗೆ ಯಾರು ಯಾರೊ ಸಾಹಿತಿಗಳ ಬಗೆಗಿನ ಒಂದು ಕಲ್ಪನೆ ನೀಡಿದ್ದರು.ಎಂತಹ ರಮ್ಯ ಲೋಕವಲ್ಲವೇ? ನನ್ನ ಹಳೆಯ ಕತೆಗಾರ ಗೆಳೆಯನ ನೆನಪಾಯಿತು.ನೋಡಿ ಹತ್ತಾರು ವರ್ಷಗಳೇ ಕಳೆದಿದ್ದವು. ಸ್ವಲ್ಪ ಹೊತ್ತು ಅವನ ಜೊತೆ ಕಳೆದರೇ? ಮನದಲ್ಲಿ ಏನೊ ಒಂದು ಪ್ರಶಾಂತ ಭಾವ.. ಹುಡುಕಿಕೊಂಡು ಹೊರಟೆ. ನನ್ನ ಪುಣ್ಯ, ಮನೆಯಲ್ಲೇ ಇದ್ದ! ಆದರೆ ‘ಕೇವಲ ಏಳು ನಿಮಿಷದ ಬಿಡುವಿದೆ,ಮಾತಾಡು..’ ಎಂದಾಗಲೆ ಅದಾವುದೊ ಝಣ ಝಣ ಕಾಂಚಾಣದ ನಾದ ಕೇಳಿಸಿದಂತಾಯಿತು. ಇತ್ತ ಮಾತಾಡುತ್ತಲೆ ಅತ್ತ ಕಂಪ್ಯೂಟರಿನಲ್ಲಿ ಪಾತ್ರಗಳನ್ನು ನಿರ್ಮಿಸುತ್ತ ಕಥೆ ಬರೆಯುತ್ತಿದ್ದ. ಅವನ ಬಗ್ಗೆ ಕೇಳಿದ್ದು ಈಗ ಅವನದೆ ಸಾನಿಧ್ಯದಲ್ಲಿ ಸಾಕ್ಷಾತ್ಕಾರಗೊಳ್ಳುವಂತಾಯ್ತು.

ಆತ ದಿನಕ್ಕೊಂದು ಕಥೆ ಬರೆಯುವ ಶಿಸ್ತಿಗೆ ತನ್ನನ್ನು ಒಳಪಡಿಸಿಕೊಂಡಿದ್ದನಂತೆ. ಹೀಗಾಗಿ ಒತ್ತಡದಲ್ಲಿದ್ದ. ಈ ಒತ್ತಡದ ಪ್ರಭಾವ ಅವನ ಪಾತ್ರಗಳ ಮೇಲೂ ಆದರೆ ಎಂಬ ಚಿಂತೆಯಾಗತೊಡಗಿತು. ಆದರೆ ಹಾಗೇನೂ ಕಾಣಲಿಲ್ಲ.ಪಾತ್ರಗಳ ಬಗ್ಗೆ ಯಾವ ಕರುಣೆ ಇರಿಸಿಕೊಳ್ಳದಷ್ಟುಆತ ವೃತ್ತಿಪರನಾಗಿದ್ದ. ಬೇಡಿಕೆಯವನೂ ಆಗಿದ್ದ. ದಿನಕ್ಕೊಂದರಂತೆ ಬರೆದ ಕಥೆಗಳನ್ನು ‘ಕರುನಾಡಕಂದ’ದಂತಹ ಐನೂರರ ವರೆಗಿನ ಸಂಭಾವನೆಯ ಪತ್ರಿಕೆಗಳು ಕೇಳಿದಾಕ್ಷಣ ಕಳಿಸುತ್ತಿದ್ದ. ಕೆಲವು ಗೆಳೆಯ ಗೆಳತಿಯರಿಗೆ ಐವತ್ತು-ನೂರರಲ್ಲಿ ಕವಿಗೋಷ್ಠಿಗಾಗಿ ಕವನ ಪೂರಯಿಸುತ್ತಾನೆಂಬ ಗುಸುಗುಸು ಇತ್ತಾದರು ನಾನದನ್ನು ನಂಬಿರಲಿಲ್ಲ. ಮೂಲತಃ ಆತ ಕವಿಯಲ್ಲ. ಆದರೆ ಇನ್ನೂರು ಮುನ್ನೂರಕ್ಕೆ ಕೇಳಿದವರಿಗೆ ತನ್ನ ‘ದಿನಕ್ಕೊಂದರ ಕಥೆ’ ಕೊಡುತ್ತಾನೆಂಬ ಸುದ್ದಿಯನ್ನು ನಂಬಬೇಕೊ,ಬೇಡವೊ ಎಂಬುದನ್ನು ನಿರ್ಧರಿಸಲಾಗಿರಲಿಲ್ಲ. ಆಹ್ವಾನಿತ ವಿಶೇಷಾಂಕಗಳಿಗಾಗಿ ಇವುಗಳಲ್ಲಿಯದೇ ಒಂದು ಕಥೆಯನ್ನು ಅರಿಸಿ ಮಸಾಲೆ ಟೀ ಕುಡಿಯುತ್ತ ನಾಲ್ಕು ದಿನ ವೆಚ್ಚಮಾಡಿ ಅವುಗಳ ಕಣ್ಣು,ಮೂಗು,ಹುಬ್ಬು ತೀಡಿ; ಬಟ್ಟೆ ಹರಿದೊ,ಹೊಸದು ಹೊಲಿದೊ ಬೇರೆ ರೂಪ ಕೊಟ್ಟು ಕಳಿಸುತ್ತಿದ್ದ. ಹತ್ತು ಸಾವಿರದ ಕಥೆಗಳಿಗೆ ಪೂರಾ ಇಪ್ಪತ್ತು ದಿನ ಹಿಡಿಯುತ್ತಿತ್ತು.ಆದರೆ ಇಪ್ಪತ್ತೈದು ಸಾವಿರದ ಮೇಲಿನ ಕಥೆಗಳಲ್ಲೇ ಅವನದು ಗಂಭೀರ ಭಾಗವಹಿಸುವಿಕೆ. ನಮ್ಮ ಕಡೆ ಗಣಪತಿ ಹಬ್ಬಕ್ಕೆ ಮನೆ ಮನೆಗೆ ಮಾರಲು ಸಣ್ಣ ಪುಟ್ಟ ಸಾವಿರಾರು ಗಣಪ್ಪನನ್ನು ಮಾಡುವವರು ಇರುತ್ತಾರೆ. ಹಾಗೇ, ಕೇವಲ ನಾಲ್ಕಾರು ಗಣಪತಿ ಮಾತ್ರ ಮಾಡಿ ಲಕ್ಷ- ಲಕ್ಷಗಳಿಗೆ ಮಾರುವವರೂ ಇರುತ್ತಾರೆ. ಆರು ತಿಂಗಳ ಮೊದಲಿನಿಂದಲೇ ಇವ ಸಣ್ಣ ಪುಟ್ಟ ಗಣಪತಿ ಮಾಡುತ್ತ ದೊಡ್ಡದಕ್ಕೂ ಕೈ ಹಾಕಿ ಯಶಸ್ವಿಯಾದವ.ಅದಿರಲಿ… ಗಂಭೀರ ಕಥೆಗಳಿಗಾಗಿ ಹಳೆಯದನ್ನು ಬಿಟ್ಟು ಹೊಸ ಹೊಸ ಫಾರ್ಮುಲಾಗಳನ್ನು ಬಳಸುತ್ತಿದ್ದ. ಶೋಷಣೆ – ಮೋಸ – ಪ್ರೀತಿಯುಳ್ಳ ಪದಾರ್ಥಗಳನ್ನು ಹದವಾಗಿ ಸ್ಲಮ್ ನಲ್ಲಿ ಬೆರೆಸಿ ಜಾಗತೀಕರಣದ ಮಿಕ್ಸಿಯಲ್ಲಿ ನಿರೂಪಕನ ಮೂಲಕ ಒಂದೂವರೆ ಸುತ್ತು ಮಾತ್ರ ತಿರುಗುವಂತೆ ಮಾಡಿ, ಅನ್ಯಾಯದ ತೆಳು ಕೆಂಬಣ್ಣದ ಎಣ್ಣೆಯ ಒಗ್ಗರಣೆ ಹಾಕಿಸುತ್ತಿದ್ದ.ಅದು ಪಾತ್ರಗಳ ಅಗತ್ಯಕ್ಕೆ ತಕ್ಕಂತೆ ಅವುಗಳಲ್ಲಿ ಮೆಲ್ಲಗೆ ಪಸರಿಸಿ ವಾಸನೆ ಬೀರಬೇಕು…! ಅನಂತರ ಮಂದವಾದ ಉಷ್ಣದಲ್ಲಿ ಬೇಯಲು ಬಿಡುತ್ತಿದ್ದ.ಕತೆ ಸೀಯದಷ್ಟು,ಆದರೆ ಹೆಚ್ಚೇ ಬೇಯುವಷ್ಟು. ರುಚಿ ಇಂಥದರದೇ, ಹೀಗೇ ಎಂಬುದು ಸ್ಪಷ್ಟವಾಗಿರಬಾರದು.ಒಬ್ಬೊಬ್ಬರು ಒಂದೊಂದು ಹೇಳಿರಬೇಕು.. ಒಟ್ಟಾರೆ ಶ್ರೀಮಂತನಿಗು ಸೈ,ಬಡವನಿಗೆ ಜೈ ಮತ್ತು ಪರಿಸ್ಥಿತಿಗೆ ಮಾತ್ರ ಬಯ್ಯಿ..ಎಂಬ ಪರಿಣಾಮ ಕೊಡಬೇಕು…
ಏಳನೆ ನಿಮಿಷದಲ್ಲಿ ಆತ ,’ಈ ಕಲೆಗೆ ಈಗ ಡಾಲರ್ ಒಲಿದಿದೆ.ನಾಳೆ ಅಣ್ಣ ಸಮ್ಮೇಳನಕ್ಕೆ ಹೊರಡಬೇಕು, ನೀನೂ ಹೊರಡು’ ಎಂದ. ಹೊರಬಿದ್ದೆ…
ದಾರಿಯಲ್ಲಿ ಸಂಗೀತದ ಕಾರ್ಯಕ್ರಮ ನಡೆದಿತ್ತು.

ಫ್ಯೂಜನ್ ಸಂಗೀತ.ನನಗೆ ಇಷ್ಟವಾಗದ್ದು.’ಅವರಿಗೆ ಶಾಸ್ತ್ರೀಯ ಸಂಗೀತ ಕೂಡ ಗೊತ್ತು.ಆದರೆ ಅದು ಹತ್ತು ಹನ್ನೆರಡು ಗಂಟೆಯ ರಿಯಾಜ್ ಬೇಡುತ್ತದೆ.ಅಷ್ಟು ವೇಳೆ ವ್ಯರ್ಥ ಮಾಡಲು ಇವರ ಬಳಿ ಸಮಯವಿಲ್ಲ..’ ಎಂದು ಯಾರೊ ಯಾರಿಗೊ ಹೇಳುತ್ತಿದ್ದರು.’ ಇದರಲ್ಲೇ ದಮ್ಮಿದೆ..’ಎಂಬ ಚೀಜನ್ನು ದಮ್ಮು ಹಾಕಿ ಹಾಕಿ ಜಡೆಯುತ್ತಿದ್ದರು.ಸಂಗೀತವೆಂದರೆ ಮನುಷ್ಯನ ಬದುಕಿನಂತಿರಬೇಕೆಂದು ಭೈರಪ್ಪನವರು ಹೇಳಿದ್ದು ನೆನಪಾಯಿತು.ವಿಲಂಬಿತ ಬಾಲ್ಯ.ಭಾವದುಂಬಿದ, ವಿಸ್ತರಣೆಯತ್ತ ಸಾಗುವ ತಾರುಣ್ಯ.ಮತ್ತು ಮಾಗಿದ,ಸಂಪದ್ಭರಿತ ಅನುಭವದ ಆವರಿಸುವಂತಹ ವೃದ್ಧಾಪ್ಯಗಳನ್ನು ಶಾಸ್ತ್ರೀಯ ಸಂಗೀತ ಅಭಿನಯಿಸಿ ತೋರಿಸುತ್ತದೆ.ಆದರೆ ಇಲ್ಲಿ ಆರಂಭದಿಂದಲೇ ಧೃತ್! ಬಾಲ್ಯವೇ ಇಲ್ಲ. ನೇರವಾಗಿ ಯೌವನವನ್ನು ಪ್ರವೇಶಿಸುವ ಆತುರ ! ಅಕಾಲದಲ್ಲಿ ಉದುರಿಹೋಗುವ ಆತುರ… ನಿಲ್ಲಲಾಗದೆ ಅಲ್ಲಿಂದಲೂ ಹೊರಟೆ..

ನನ್ನ ಕಟ್ಟ ಕಡೆಯ ಭರವಸೆಯಾಗಿ ಕವಿಗಳನ್ನು ಕಾಣಬೇಕೆಂದಿತ್ತು…ಕಥೆ-ಕಾದಂಬರಿಕಾರರಿಗೆ ಎಷ್ಟೇ ಒಳ್ಳೆಯ ಹೆಸರಿದ್ದರೂ ಕವಿಗಳು ಮಾತ್ರ ‘ಋಷಿ’ ಎನಿಸಿಕೊಂಡವರು. ಮತ್ತು ಕಾವ್ಯ ಮಾತ್ರ ಸಾಹಿತ್ಯ.ಈ ಭಾಗ್ಯ ಬೇರೆಯವರಿಗಿಲ್ಲ… ಈತನೊಬ್ಬನಾದರು ವ್ಯಾಪಾರೀಕರಣದಿಂದ ಹೊರಗುಳಿದಿರಬಹುದೆಂಬ ಹಂಬಲ ಮತ್ತು ನಿರೀಕ್ಷೆ ನನ್ನದು.

ಆದರೆ ಯಾಕೊ ಹೋಗಲು ಧೈರ್ಯ ಸಾಲಲಿಲ್ಲ…! ಈ ಕಾಲದಲ್ಲಿ ಋಷಿಗಳು ಕೂಡ ವ್ಯಾಪಾರಿಗಳೇ ಆಗಿ ಹೋಗಿದ್ದರೆ? ಕಟ್ಟಕಡೆಯ ಕನಸದು. ಒಡೆದೀತೆಂಬ ಭಯ. ಆಮೇಲೆ ಯಾರ ಬಳಿ ಹೋಗುವುದು? ಎಲ್ಲೂ ಹೋಗದೆ ಮನೆಗೆ ನಡೆದೆ. ಮನೆ ತಲುಪಿದಾಗ ಮುಸ್ಸಂಜೆ ಮೀರಿತ್ತು. ಬೆಳ್ಳಿಯ ಜಪ ಮಣಿ ತುಂಡಾದ ಮೇಲೆ ರಿಪೇರಿ ಹಣದ ಬಗ್ಗೆ ಪತ್ತಾರನ ಜೊತೆ ಒಡಂಬಡಿಕೆಯಾಗದ್ದರಿಂದ,ತಂದೆಯವರು ನೂರಾ ಎಂಟರ ಅಂಕಿಗೆ ತಮ್ಮ ಜಪವನ್ನು ಅಭ್ಯಾಸ ಬಲದಿಂದ ಸರಿಯಾಗಿ ಹೊಂದಿಸಿಕೊಂಡಿದ್ದರು.ಅದು ನೂರಾ ಏಳೂ ಅಲ್ಲ,ನೂರಾ ಒಂಭತ್ತು ಕೂಡ ಅಲ್ಲ; ಸರಿಯಾಗಿ ನೂರಾ ಎಂಟು ಮಾತ್ರ..ಅಡಿಗೆ ಮನೆಯಲ್ಲಿ ಹೆಂಡತಿ ಶೆಲ್ಫಿನಲ್ಲಿಯ ಡಬ್ಬ-ಬಾಟಲುಗಳನ್ನು ನೋಡುತ್ತ ಹತ್ತೂ ಬೆರಳು ಬಳಸಿ ಏನನ್ನೊ ಎಣಿಸುತ್ತಿದ್ದಳು.
ಏನೆಂದು ತಿಳಿಯಲಿಲ್ಲ.


  • ವಿಜಯೇಂದ್ರ ಪಾಟೀಲ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading