‘ಕುಂತಿ ಭಾರತ’ ಮುನ್ನುಡಿ : ಮಂಡಗದ್ದೆ ಶ್ರೀನಿವಾಸಯ್ಯ

‘ಕುಂತಿ ಭಾರತʼ ಎಂಬ ಶಿರೋನಾಮೆಯಲ್ಲಿ ಲೇಖಕಿ ಬಿಟ್ಟೀರಾ ಕೆ.ಪಿ.ಚೋಂದಮ್ಮ ಅವರು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ನಿರೂಪಿಸುತ್ತಲೇ, ʼಕುಂತಿʼ ಯ ಚಿತ್ರಣವನ್ನು ಮಹಾಭಾರತ ಕಥೆಯ ಭಾಗವಾಗಿ ಸೊಗಸಾಗಿ ಕಟ್ಟಿಕೊಡುತ್ತಾ ಹೋಗುತ್ತಾರೆ. ಈ ಕೃತಿಗೆ ಮಂಡಗದ್ದೆ ಶ್ರೀನಿವಾಸಯ್ಯ ಅವರು ಮುನ್ನುಡಿ ಬರೆದಿದ್ದಾರೆ, ತಪ್ಪದೆ ಮುಂದೆ ಓದಿ… 

ಕೃತಿ : ಕುಂತಿ ಭಾರತ
ಲೇಖಕರು : ಕೆ.ಪಿ.ಚೋಂದಮ್ಮ
ಬೆಲೆ : ೧೩೦.೦೦

ಭಾರತೀಯ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತ ಕಥೆಗಳು ಭಾರತದ ಸಾಂಸ್ಕೃತಿಕ ಜೀವನದಲ್ಲಿ ಬೀರಿರುವ ಪ್ರಭಾವ ಅನನ್ಯ. ರಾಮಾಯಣವನ್ನು ʼವೇದ ಸಮಃʼ ಎಂದರೆ, ಮಹಾಭಾರತವನ್ನು ʼಪಂಚಮೋ ವೇದಃʼ ಎನ್ನುತ್ತಾರೆ. ಇಲ್ಲಿ ನಮ್ಮ ವಸ್ತು ಮಹಾಭಾರತ. ಮಹಾಭಾರತವನ್ನು ಕುರುಕುಲದ ಇತಿಹಾಸ ಎನ್ನುವುದಕ್ಕಿಂತ, ಮನುಕುಲದ ಇತಿಹಾಸ ಎಂದು ತಿಳಿಯಬಹುದು. ಶತಕೋಟಿ ಜನರು ತಮ್ಮ ದುಃಖ ದುಮ್ಮಾನಗಳಿಗೆ ಇಲ್ಲಿ ಪರಿಹಾರ ಕಂಡುಕೊಳ್ಳುತ್ತಾರೆ. ಮೂಲ ಕರ್ತೃ ಮಹರ್ಷಿ ವೇದವ್ಯಾಸ ಎಂಬುದು ಗೊತ್ತಿದೆ. ಇದನ್ನು ಆಧರಿಸಿದ ಪಂಪನ “ವಿಕ್ರಮಾರ್ಜುನ ವಿಜಯʼ, ರನ್ನನ ʼಗಧಾಯುದ್ಧʼ, ಕುಮಾರ ವ್ಯಾಸ ಭಾರತ, ಜೈಮಿನಿ ಭಾರತ, ಪರಮದೇವ ಕವಿಯ ʼಶ್ರೀ ತುರಂಗ ಭಾರತ, ಬೈರಪ್ಪನವರ ʼಪರ್ವʼ ಹೀಗೆ, ಈ ಎಲ್ಲವೂ ಕಾಲಾನುಕಾಲಕ್ಕೆ ಸ್ವೋಪಜ್ಞತೆಯ ಆಯಾಮವನ್ನು ಪಡೆಯುತ್ತಾ, ಪರಿಷ್ಕರಣೆಗೊಳ್ಳುತ್ತಾ ಹೋಗುತ್ತಿದೆ. ಅದೆಷ್ಟು ಸಾಹಿತಿಗಳು, ಕವಿಗಳು ಮಹಾಭಾರತವನ್ನು ಪುನರ್ನಿಮಿಸಿದ್ದಾರೆಯೋ ತಿಳಿಯಲಾಗದು. ಅದರಲ್ಲಿ ಶ್ರೀಮತಿ ಕೆ.ಪಿ.ಚೋಂದಮ್ಮ ಬಿಟ್ಟೀರ(ಲಲಿತಾ) ಇವರು ʼಕುಂತಿ ಭಾರತʼ ಎನ್ನುವ ಕೃತಿಯನ್ನು ಕನ್ನಡ ಜನತೆಗೆ ಹೊಸ ಆಯಾಮದಲ್ಲಿ ಪರಿಚಯಿಸುತ್ತಿದ್ದಾರೆ ಎನ್ನುವುದು ಸಂತೋಷದ ಸಂಗತಿ.

ಯದುವಂಶದ ರಾಜ ಶೂರಸೇನನ ಮಗಳು ಪೃಥೆ. ಮಕ್ಕಳಿಲ್ಲದ ಕುಂತಿಭೋಜ ಪೃಥೆಯನ್ನು ದತ್ತು ಪಡೆದುಕೊಂಡ ಮೇಲೆ, ಆಕೆ ಕುಂತಿ ಎಂಬ ಹೆಸರನ್ನು ಪಡೆದಿದ್ದಾಳೆ. ತನ್ನರಿವಿಲ್ಲದೆ ಜನ್ಮಜಾತರಿಂದ ದೂರಾಗಿದ್ದು ಕುಂತಿಯ ಬೇಸರಕ್ಕೆ ಕಾರಣವಾಗಿತ್ತು. ಆದರೂ ಕುಶಲಮತಿ ಕುಂತಿ, ಮಗಳಾಗಿ ಕಾಲಿಟ್ಟ ಮನೆಯಲ್ಲಿ ಯೋಗ್ಯಳಾಗಿ ನಡೆದುಕೊಂಡಳು. ಹಾಗೆಯೇ ಅವಳ ಬದುಕಿನಲ್ಲಿ ಹಲವಾರು ಹಿತ ಮತ್ತು ಅಹಿತ ಘಟನೆಗಳು ನಡೆದುಹೋದವು. ಎಂಥಹ ಕ್ಲಿಷ್ಟ ಸನ್ನಿವೇಶದಲ್ಲಿಯೂ, ಸಮಚಿತ್ತ ಕಳೆದುಕೊಳ್ಳದೆ ತನ್ನ ಹಿರಿತನ ಮತ್ತು ಕುಲಗೌರವವನ್ನು ಎತ್ತಿಹಿಡಿಯುತ್ತಾ ಬಂದವಳು ಕುಂತಿ.

ಒಮ್ಮೆ ದೂರ್ವಾಸರಿಂದ ಶಾಪಗ್ರಸ್ಥನಾಗಬೇಕಿದ್ದ ಕುಂತಿಭೋಜ, ಕುಂತಿಯ ಸಮಯ ಪ್ರಜ್ಞೆಯಿಂದ ಉಳಿದುಕೊಂಡನು. ಆಕೆಯ ಅನನ್ಯ ಸೇವೆಗೆ ಸಂಪ್ರೀತನಾದ ದೂರ್ವಾಸ ಮುನಿ, ಆಕೆಗೆ ಮಕ್ಕಳು ಹುಟ್ಟುವ ಮಂತ್ರವನ್ನು ಉಪದೇಶಿದನು. ವಯೋ ಸಹಜ ಕುತೂಹಲದಿಂದ ಅದನ್ನು ಪರೀಕ್ಷಿಸುವ ತವಕದಲ್ಲಿ ಗಂಗಾನದಿಯ ತಟದಲ್ಲಿ ಸೂರ್ಯನನ್ನು ಕುರಿತು ಮಂತ್ರವನ್ನು ಉಚ್ಛರಿಸಿದ್ದಾಳೆ. ಇದರ ಪರಿಣಾಮ ಅವಳ ಕಿವಿಯಿಂದ ಕರ್ಣ ಮದುವೆಗೆ ಮುನ್ನವೇ ಹುಟ್ಟಿದನು. ಕುಲ ಮರ್ಯಾದೆ ಮತ್ತು ಲೋಕೋಪವಾದದಿಂದ ಈ ಘಟನೆಯನ್ನು ಮುಚ್ಚಿಟ್ಟಳು. ಕರ್ಣ ಬೇರೊಂದು ಕಡೆ ಸೂತಕುಲದಲ್ಲಿ ಬೆಳೆದನು. ಆತ ಕುರುಕುಲದ ಸಾಮ್ರಾಟನಾಗಬಹುದಾಗಿತ್ತು. ಆದರೆ ಆಗಿದ್ದೇ ಬೇರೆ. ಕರ್ಣನ ಹಿತವಲ್ಲದ ಪರಿಸ್ಥಿತಿಯನ್ನು ನೋಡಿ ಕುಂತಿ ಚಿಂತೆಗೆ ಒಳಗಾದಳು.

ಕುಂತಿಭೋಜ ಕುಂತಿಯನ್ನು ಕುರುವಂಶದ ರಾಜ ಪಾಂಡುವಿಗೆ ವಿವಾಹ ಮಾಡುವಾಗ, ಈಕೆಯ ಅಭಿಪ್ರಾಯವನ್ನೇ ಗಣಿಸಿಲ್ಲ. ಇದು ಕೂಡ ಆಕೆಯ ಬೇಸರಕ್ಕೆ ಕಾರಣವಾಗಿದೆ. ಆದರೂ ಪ್ರತಿಷ್ಠಿತ ಕುರುವಂಶಕ್ಕೆ ಮಹಾರಾಣಿಯಾಗಿ ಸೇರಿದ ಮೇಲೆ ಆ ವಂಶಕ್ಕೆ ಕಿಂಚಿತ್ತೂ ಅಪಖ್ಯಾತಿ ಬರದಂತೆ ತನ್ನ ಜವಾಬ್ದಾರಿಯನ್ನು ಮುತ್ಸದ್ಧಿತನದಿಂದ ನಿರ್ವಹಿಸಿದಳು. ಮದುವೆಯಾದ ದಿನ ಪಾಂಡುರಾಜನ ಜೊತೆ ಮೊದಲ ರಾತ್ರಿಯನ್ನು ಸಂತೋಷದಿಂದ ಕಳೆಯಬೇಕಾಗಿದ್ದ ಸಮಯದಲ್ಲಿ, ರಾಜನು ಮದ್ರದೇಶದ ರಾಜನ ಕರೆಯನ್ನು ಸ್ವೀಕರಿಸಿ, ಯುದ್ಧಕ್ಕೆ ತೆರಳಬೇಕಾದ ಸನ್ನಿವೇಶ ಉಂಟಾಗಿದ್ದರಿಂದ, ಕುಂತಿಯು ತನ್ನ ಮಧುರ ಭಾವನೆಯನ್ನು ಹತ್ತಿಕ್ಕಿ, ಪಾಂಡುರಾಜನಿಗೆ ಆರತಿ ಎತ್ತಿ, ವಿಜಯಿಯಾಗಿ ಬನ್ನಿ ಎಂದು ಬೀಳ್ಕೊಟ್ಟಳು. ಆದರೆ ಪಾಂಡುರಾಜ ಮದ್ರದೇಶದಿಂದ ವಾಪಸ್ಸು ಬರುವಾಗ, ಮದ್ರದೇಶದ ರಾಜನ ಮಗಳು ಮಾದ್ರಿಯನ್ನು ವಿವಾಹವಾಗಿ ಕರೆತಂದಾಗ, ತನ್ನೆಲ್ಲಾ ತಳಮಳವನ್ನು ಹತ್ತಿಕ್ಕಿ, ಮದುಮಕ್ಕಳನ್ನು ಸ್ವಾಗತಿಸಿ, ನಿರ್ಲಿಪ್ತಳಾಗಿ ತನ್ನನ್ನು ತಾನು ಸಂತೈಸಿಕೊಂಡಳು.

ಕಿಂದಮ ಋಷಿಯಿಂದ ಶಾಪಗ್ರಸ್ಥನಾಗಿದ್ದ ಪಾಂಡುರಾಜನು, ಕಾಮನೆಯನ್ನು ಹತ್ತಿಕ್ಕಲಾರದೆ ಮಾದ್ರಿಯೊಂದಿಗೆ ರತಿಕ್ರೀಡೆಯಲ್ಲಿ ತೊಡಗಿ ಮರಣ ಹೊಂದಿದನು. ಮಾದ್ರಿ ಸಹಗಮನ ಮಾಡಿದಳು. ಕುಂತಿ ಎಳವೆಯಲ್ಲೇ ವಿಧವೆಯಾಗಿ ಸುಖದ ಬದುಕಿಗೆ ಎರವಾದಳು. ಕರ್ಣನು ಸೂತಪುತ್ರ ಎಂದು ಭಾವಿಸಿದ್ದ ದ್ರೋಣರು ಬಿಲ್ಲು ವಿದ್ಯೆ ಪ್ರದರ್ಶನಕ್ಕೆ ನಿರಾಕರಿಸಿದಾಗ ಕುಂತಿ ಮಮ್ಮಲ ಮರುಗಿದ್ದಳು. ತನ್ನ ಅಚಾತುರ್ಯದ ನುಡಿಯಿಂದ ದ್ರೌಪದಿಯು ಮಕ್ಕಳೈವರ ಪತಿಯಾಗಬೇಕಾಗಿ ಬಂದದ್ದು ಕುಂತಿಗೆ ಆತಂಕವಾಗಿತ್ತು. ಪಗಡೆಯಾಟದಲ್ಲಿ ಧುರ್ಯೋಧನನಿಗೆ ಸೋತು ಹೊಗಿದ್ದ ತನ್ನ ಮಕ್ಕಳು ವನವಾಸ, ಅಜ್ಞಾತವಾಸ ಮಾಡಬೇಕಾಗಿ ಬಂದದ್ದು, ತಾನು ಮಾತ್ರ ವಿದುರನ ಮನೆಯಲ್ಲಿ ಉಳಿಯಬೇಕಾಗಿ ಬಂದದ್ದು ಕುಂತಿಗೆ ಒಳಗೊಳಗೇ ಸಂಕಟ ತಂದಿದೆ. ಕುರುಕ್ಷೇತ್ರ ಯುದ್ಧ ಸನ್ನಿವೇಶದಲ್ಲಿ ಮಾತ್ರ ಕರ್ಣನನ್ನು ಭೇಟಿಮಾಡಿ, ಆತನ ಜನ್ಮವೃತ್ತಾಂತವನ್ನು ತಿಳಿಸಿ, ತನ್ನ ಆತ್ಮಸಾಕ್ಷಿಗೆ ವಿರುದ್ಧವಾಗಿ, ʼತೊಟ್ಟ ಬಾಣವನ್ನು ಮತ್ತೆ ತೊಡದಂತೆʼ ಕರ್ಣನಿಂದ ಪ್ರತಿಜ್ಞೆ ಮಾಡಿಸಿ ʼತಿಳಿಗೊಳದಂತಿದ್ದ ಕರ್ಣನ ಮನಸ್ಸನ್ನು ರಾಡಿ ಮಾಡಿಬಿಟ್ಟೆ” ಎಂದು ಸಂಕಟ ಪಟ್ಟುಕೊಂಡಿದ್ದಾಳೆ. ಅಷ್ಟು ಮಾತ್ರವಲ್ಲದೆ, ಯುದ್ಧದಲ್ಲಿ ಕರ್ಣನು ಮಡಿದಾಗ, ರಣರಂಗದಲ್ಲಿ ಬಿದ್ದಿದ್ದ ಹೆಣದ ರಾಶಿಯ ಮಧ್ಯೆ, ಕರ್ಣನ ತಲೆಯನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡು ರೋದಿಸಿದ್ದಳು. ಇಂಥಹ ಹಲವಾರು ಘಟನೆಗಳು ಕುಂತಿಯ ಬದುಕಿನಲ್ಲಿ ಬಂದು ಹೋಗಿವೆ. ಈ ಎಲ್ಲವನ್ನೂ ಸ್ಥಿತ ಪ್ರಜ್ಞೆಯಿಂದ ನಿಭಾಯಿಸಿದ ಕುಂತಿಯು ಮಹಾಭಾರತ ಮಹಾಕಾವ್ಯದಲ್ಲಿ ಎದ್ದು ನಿಲ್ಲುತ್ತಾಳೆ.

ಮೇಲೆ ತಿಳಿಸಿದ ಎಲ್ಲಾ ಘಟನೆಗಳನ್ನು ʼಕುಂತಿ ಭಾರತʼ ಎಂಬ ಶಿರೋನಾಮೆಯಲ್ಲಿ ಲೇಖಕಿ ಶ್ರೀಮತಿ ಬಿಟ್ಟೀರಾ ಕೆ.ಪಿ.ಚೋಂದಮ್ಮ ಅವರು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ನಿರೂಪಿಸುತ್ತಲೇ, ʼಕುಂತಿʼ ಯ ಚಿತ್ರಣವನ್ನು ಮಹಾಭಾರತ ಕಥೆಯ ಭಾಗವಾಗಿ ಸೊಗಸಾಗಿ ಕಟ್ಟಿಕೊಡುತ್ತಾ ಹೋಗುತ್ತಾರೆ. ಇದು ಕುಂತಿಯ ಕಥೆಯಾದರೂ, ಕುತೂಹಲದಿಂದ ಓದಿಸಿಕೊಡು ಹೋಗುವ ಹಾಗೂ ʼಕುಂತಿಯನ್ನು ಬಿಟ್ಟು ಮಹಾಭಾರತವಿಲ್ಲ, ಮಹಾಭಾರತವಿಲ್ಲದೆ ಕುಂತಿಯಿಲ್ಲ” ಎಂಬುದನ್ನು ಪ್ರಸ್ತುತಪಡಿಸುವ ಮೂಲಕ, ಕುಂತಿಯ ಪಾತ್ರಕ್ಕೆ ನ್ಯಾಯವನ್ನು ಒದಗಿಸಿದ್ದಾರೆ.

ವೀರರ ನಾಡು ಕೊಡಗು ಜಿಲ್ಲೆಯ ಬೇಂಗೂರು ಗ್ರಾಮದಲ್ಲಿ ಜನಿಸಿದ ಶ್ರೀಮತಿ ಬಿಟ್ಟೀರಾ ಚೋಂದಮ್ಮ ಅವರು, ಈಗಾಗಲೇ “ಶಾಸ್ತ್ರ ಗ್ರಂಥ ಛಂದಸ್ಸಿನ ಮಡಿಲುʼ ಮತ್ತು ʼಲಲಿತ ಲಹರಿʼ “ಕವನ ಸಂಕಲನ” ಎಂಬ ಎರಡು ಕೃತಿಗಳನ್ನು ಹೊರತಂದಿದ್ದಾರೆ. ʼಚಿಣ್ಣರ ಚಾವಡಿಗಾಗಿ ʼಮಕ್ಕಳ ಕವನ ಸಂಕಲನʼ, ಪ್ರಕಟಣೆಗೆ ಸಿದ್ಧವಾಗಿದೆ. ʼಛಂದಸ್ಸುʼ ಬರೆದಿರುವ ಲೇಖಕರು ಯಾವುದೇ ಬರಹಗಳನ್ನು ಸಮರ್ಪಕವಾಗಿ ನಿರ್ವಹಿಸುವ ಶಕ್ತಿಯನ್ನು ಹೊಂದಿದ್ದಾರೆ. ಅವರು ತಮ್ಮ ಸಾಹಿತ್ಯ ಸೇವೆಯನ್ನು ಇತೋಪ್ಯತಿಶಯವಾಗಿ ಮುಂದುವರಿಸಿಕೊಂಡು ಹೋಗಲಿ, ಉಜ್ವಲ ಭವಿಷ್ಯವಿರಲಿ ಎಂದು ಆಶಿಸುತ್ತೇನೆ. ನಾನೊಬ್ಬ ಓದುಗ ಮತ್ತು ಸಣ್ಣ ಪ್ರಮಾಣದ ಬರೆಹಗಾರ. ಆದರೂ ತಮ್ಮ ʼಕುಂತಿ ಭಾರತಕ್ಕೆʼ ಮುನ್ನುಡಿ ಬರೆಯುವ ಶಕ್ತಿಯನ್ನು ನನಗೆ ಒದಗಿಸಿದ್ದಕ್ಕೆ ಲೇಖಕರಿಗೆ ಉಪಕೃತನಾಗಿದ್ದೇನೆ.


  •  ಮಂಡಗದ್ದೆ ಶ್ರೀನಿವಾಸಯ್ಯ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading