ನಾನು ಘನಘೋರ ಬುದ್ದಿವಂತ ನನ್ನನ್ನು ಪ್ರಶ್ನಿಸಿದ ಆ ಸರ್ಕಾರಿ ನೌಕರ ಬಾಂಧವನ ಕಡೆ ಹಿಂತಿರುಗಿ ನೋಡಲಿಲ್ಲ. ಆತ ಯಾವ ಊರಿನವನೋ, ಸೇವೆಯಲ್ಲಿರುವನೋ, ನಿವೃತ್ತಿಯಾಗಿರುವನೋ ದೇವರಿಗೇ ಗೊತ್ತು.ಕೇಶವರೆಡ್ಡಿ ಹಂದ್ರಾಳ ಅವರ ಜೀವನದ ಒಂದು ಸಖತ್ ಮಜವಾದ ಘಟನೆಯನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
” ಎಲ್ಲೋ ಜೋಗಪ್ಪ ನಿನ್ನರಮನೆ..” ಮತ್ತು
‘ ಶಾಲು ಮುಕುಟ ‘ ದ ಮೊದ್ಲು ಕೊನೆ …
ಬಹುಶಃ 2016 ಅಥವಾ 2017 ರಲ್ಲಿರಬೇಕು; ಸರ್ಕಾರಿ ನೌಕರರ ಸಂಘದ ವತಿಯಿಂದ ಸರ್ಕಾರಿ ಸೇವೆಯಲ್ಲಿದ್ದೂ ಸಾಹಿತ್ಯದಲ್ಲಿ ತೊಡಗಿದ್ದವರಿಗೆ ಸನ್ಮಾನ ಕಾರ್ಯಕ್ರಮವನ್ನು ಕಬ್ಬನ್ ಪಾರ್ಕಿನ ಎನ್ ಜಿ ಓ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು. ಆ ಸನ್ಮಾನಕ್ಕೆ ಬೇಡ ಬೇಡವೆಂದರೂ ನಮ್ಮ ಇಲಾಖೆಯಿಂದ ನನ್ನನ್ನು ಮತ್ತು ಯೋಗನಂದ ಎಂಬ ನನ್ನ ಸ್ನೇಹಿತನನ್ನು ಆಯ್ಕೆ ಮಾಡಿದ್ದರು. ಅದೊಂದು ವಾರ್ಷಿಕ ಸಮಾವೇಶ ಆಗಿದ್ದು ರಾಜ್ಯದ ಮೂಲೆ ಮೂಲೆಯಿಂದ ಸರ್ಕಾರಿ ನೌಕರರು ಬಂದಿದ್ದರು. ಸಂಘದ ಅಧ್ಯಕ್ಷ ಮಂಜೇಗೌಡರು ಭರ್ಜರಿಯಾಗಿ ಕಾರ್ಯಕ್ರಮ ಏರ್ಪಡಿಸಿದ್ದರು. ಆ ಕಾರ್ಯಕ್ರಮದ ಸನ್ಮಾನಿತರಲ್ಲಿ ಕವಿಯಿತ್ರಿ ಕೆ. ಷರೀಫಾ ಮತ್ತು ಲೇಖಕಿ ಸಂಧ್ಯಾ ರೆಡ್ಡಿ ಮೇಡಮ್ ರವರು ಕೂಡಾ ಇದ್ದರು. ಸನ್ಮಾನಕ್ಕೆ ಮುಂಚೆ ಗೆಳೆಯ ಅಪ್ಪಗೆರೆಯ ಹಾಡುಗಾರಿಕೆಯೂ ಇತ್ತು. ಅಪ್ಪಗೆರೆ ನನ್ನ ಕಡೆಗೊಮ್ಮೆ ನೋಡಿ ನನ್ನ ಹೆಸರನ್ನು ಪ್ರಸ್ತಾಪಿಸುತ್ತಾ ನನಗೆ ಇಷ್ಟವಾದ ‘ಎಲ್ಲೋ ಜೋಗಪ್ಪ ನಿನ್ನರಮನೆ..’ ಹಾಡನ್ನು ಧ್ವನಿಯೆತ್ತಿ ಹಾಡಿದ್ದರು.

ಸರಿ, ಸನ್ಮಾನ ಘನವಾಗಿಯೇ ನಡೆಯಿತು. ಕಾರ್ಯಕ್ರಮ ಮುಗಿದ ನಂತರ ಸ್ಟೇಜ್ ನಿಂದ ಕೆಳಗಿಳಿದು ಬಂದಾಗ ಸುಮಾರು ಜನ ಹಸ್ತಾಕ್ಷರ ಪಡೆದಿದ್ದರು. ಒಬ್ಬ ನೌಕರ ಬಾಂಧವ ಬಂದು ನನ್ನ ಹೆಗಲ ಮೇಲೆ ಕೈಹಾಕಿದ್ದ. ನನಗೆ ಅಚ್ಚರಿಯಾಗುವುದರೊಂದಿಗೆ ಆತನ ಕಡೆಯಿಂದ ಘಮ್ಮನೆಯ ದ್ರವರಾಕ್ಷಸಿಯ ವಾಸನೆ ಅಡರುತ್ತಿತ್ತು. ಮೆದುಳನ್ನೆಲ್ಲಾ ತಡಕಾಡಿದರೂ ಆತನ ನೆನಪಾಗಲಿಲ್ಲಿ. ಅಷ್ಟರಲ್ಲಿ ” ಸಾಹೇಬ್ರೆ ನನಗೊಂದು ಡೌಟು..” ಎಂದು ಕೇಳಿದ್ದನಾತ. ” ಏನು ಹೇಳಿ ಸಾರ್..” ಎಂದೆ. ” ನೀವು ರೆಡ್ಡಿ ಅಂತ ಹೆಸರಿಟ್ಕಂಡಿದ್ದೀರಿ, ಕನ್ನಡದಲ್ಲಿ ನಿಜವಾಗ್ಲೂ ಇಷ್ಟೊಂದು ಬರ್ದಿದ್ದೀರಾ? ನೀವು ಟ್ಯಾಕ್ಸ್ ಡಿಪಾರ್ಟ್ಮೆಂಟ್ನಲ್ಲಿದ್ದೀರಿ ಸನ್ಮಾನಕ್ಕೆ ಮಸ್ತಾಗಿ ದುಡ್ಡು ಕೊಟ್ಟು ಏನೋ ರಾಜಕೀಯ ಮಾಡಿದ್ದೀರಿ ಎಂಬ ಅನುಮಾನ ನನಗೆ. ಏನೇಳ್ತೀರಿ.. ನಡೀಲಿ, ನಡೀಲಿ ಏನೇನು ನಡಿತದೋ …” ಎಂದು ನಕ್ಕಿದ್ದ. ನನಗೆ ಒಮ್ಮೆಲೇ ಶ್ರವಣಬೆಳಗೊಳದ ಗೊಮ್ಮಟೇಶ್ವರ ನೆನಪಾಗಿ ಗೊಮ್ಮಟನ ಜೊತೆಗೆ ಶ್ರವಣಬೆಳಗೊಳದ ಯಾವುದಾದರೊಂದು ಗುಡ್ಡದ ಮೇಲೆ ನಾನೂ ಹೋಗಿ ಏಕೆ ನಿಲ್ಲಬಾರದು ಅನ್ನಿಸಿತ್ತು.
ಅಷ್ಟರಲ್ಲಿ ಕೆ. ಷರೀಫಾ ಮೇಡಮ್ ಕರೆದಿದ್ದರಿಂದ ” ಹೌದು, ನಿಮ್ಮ ಅನುಮಾನ ನಿಜ. ನಾನು ಬರ್ತೀನಿ ” ಎಂದು ಆತನ ಕೈಕುಲುಕಿ ಷರೀಫಾ ಮೇಡಮ್ ನಿಂತಿದ್ದ ಕಡೆ ನಡೆದೆ. ಅಲ್ಲಿಗೆ ಸಂಧ್ಯಾ ರೆಡ್ಡಿ ಮೇಡಮ್ ನವರೂ ಬಂದಿದ್ದರು. ಮೂವರೂ ಸನ್ಮಾನದ ಪರಿಕರಗಳು ತುಂಬಿದ ಬ್ಯಾಗುಗಳನ್ನು ಹಿಡಿದು ಮೀನು ಊಟ ಮಾಡಲೆಂದು ಕರ್ನಾಟಕ ಪಿಶರೀಸ್ ಡಿಪಾರ್ಟ್ಮೆಂಟ್ ಕಡೆ ನಡೆದೆವು. ಅಪ್ಪಿತಪ್ಪಿಯೂ ನಾನು ಘನಘೋರ ಬುದ್ದಿವಂತ ನನ್ನನ್ನು ಪ್ರಶ್ನಿಸಿದ ಸರ್ಕಾರಿ ನೌಕರ ಬಾಂಧವನ ಕಡೆ ಹಿಂತಿರುಗಿ ನೋಡಲಿಲ್ಲ. ಆತ ಯಾವ ಊರಿನವನೋ, ಸೇವೆಯಲ್ಲಿರುವನೋ, ನಿವೃತ್ತಿಯಾಗಿರುವನೋ ದೇವರಿಗೇ ಗೊತ್ತು. ಭಾರತ ದೇಶದಲ್ಲಿ ಅಂಥವರು ಇನ್ನೆಷ್ಟು ಜನರಿರುವರೋ…! ಇಷ್ಟಕ್ಕೂ ಅವನ ಅನುಮಾನಕ್ಕೆ ಕಾರಣವೂ ಇತ್ತು ಬಿಡಿ ; ಆಗಿನ್ನೂ ಜನಾರ್ಧನ ರೆಡ್ಡಿಯ ಪ್ರಕರಣ ಜೀವಂತವಾಗಿತ್ತು !! ಕೆಸ್ತೂರು ಸರ್ಕಾರಿ ಜೂನಿಯರ್ ಕಾಲೆಜಿನಲ್ಲಿ ನನ್ನ ಸೇವೆಯ ಆರಂಭದಲ್ಲಿ ನನ್ನ ಸಹದ್ಯೋಗಿಯಾಗಿದ್ದ ಮತ್ತು ಕಲಾವಿದರೂ ಆಗಿದ್ದ ಸಿ. ತಿಮ್ಮಯ್ಯ ಎನ್ನುವ ಕನ್ನಡ ಮೇಷ್ಟ್ರು ಎಲ್ಲಿಗಾದರೂ ಸನ್ಮಾನಕ್ಕೆ ಹೋಗಿ ಬಂದಾಗ ” ಏನ್ಸಾರ್, ಸನ್ಮಾನ ಚನ್ನಾಗಿತ್ತಾ..” ಎಂದು ಕೇಳಿದಾಗಲೆಲ್ಲಾ ಹುಸಿ ನಗೆ ನಗುತ್ತಾ ” ಊಂ ಸಾ, ‘ ಶಾಲು ಮುಕುಟ ‘ ದ ಮೊದ್ಲು ಕೊನೆ ಕೊಟ್ಟು ಚನ್ನಾಗಿ ಮಾಡಿದ್ರು..” ಎನ್ನುತ್ತಿದ್ದ ಮಾತುಗಳು ನೆನಪಾಗಿ ಮುದಗೊಳ್ಳುವುದೊಂದು ಮಜದ ಸಂಗತಿಯೇ ಸರಿ. ಮೈಗಾಡ್ ! ಕೆಲವು ನೆನಪುಗಳು, ಘಟನೆಗಳು ಎಷ್ಟೊಂದು ಮಜ ನೀಡುತ್ತವೆ !!
ಶುಭ ಸಂಜೆ , ನೀವೂ ಕಾಫಿ, ಟೀ ಜೊತೆಗೆ ನೆನಪುಗಳನ್ನು ನಂಚಿಕೊಳ್ಳಿ…
- ಕೇಶವರೆಡ್ಡಿ ಹಂದ್ರಾಳ – ಸುಮಾರು ಐನೂರು ಕಥೆಗಳು , ಮುನ್ನೂರು ಪ್ರಬಂಧಗಳು ಕನ್ನಡದಲ್ಲಿ ಪ್ರಕಟಗೊಂಡಿವೆ. ಕೆ ಎ ಎಸ್ ಅಧಿಕಾರಿಯಾಗಿ ನಿವೃತ್ತಿಯನ್ನು ಹೊಂದಿದ್ದಾರೆ
