ಹಾದಿಯ ಚೆಲುವನು ಸವಿಯಲೆ ಇಲ್ಲ, ನೆನಪಿನಲೊಂದೂ ಉಳಿಯಲೆ ಇಲ್ಲ…ಕವಿಯತ್ರಿ ಶಿವದೇವಿ ಅವನೀಶಚಂದ್ರ ಅವರು ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಕಾಲನ ಕುದುರೆಗೆ ನಾಗಾಲೋಟ
ಎಲ್ಲಿಯೂ ನಿಲ್ಲದೆ ಸಾಗುವ ಆಟ
ಯಾವುದರಲ್ಲೂ ವಿರಮಿಸಲಿಲ್ಲ
ಹಾದಿಯ ಚೆಲುವನು ಸವಿಯಲೆ ಇಲ್ಲ
ನೆನಪಿನಲೊಂದೂ ಉಳಿಯಲೆ ಇಲ್ಲ
ಕಡಿವಾಣವಿದ್ದರೂ ಕೈಯಲ್ಲಿ
ನಿಯಂತ್ರಣವಿರದು ವೇಗದಲಿ
ಅಂಕೆ ತಪ್ಪಿದರೆ ಕ್ಷಣಕಾಲ
ಅಲ್ಲಿಗೇ ಬರುವುದು ಅಂತಿಮ ಕಾಲ
ಮದವೇರುವುದದಕೆ ಆಗಾಗ
ಹುಚ್ಚೆಬ್ಬಿಸುವುದದರ ಶರವೇಗ
ಗಾಳಿಗುದುರೆಯಲಿ ನಮ್ಮ ಸವಾರಿ
ಯಾವಾಗಲೂ ಸಹಜವಲ್ಲ ಇದನರಿ
ಅಶ್ವದ ಮೋಹಕೆ ಮರುಳಾಗದೆ ನಡೆ
ನಿನ್ನದೇ ಪದಗತಿಯಲಿ ಸಾಗುತ
ಅರಿವಿನ ಕಡೆ
ಬಾಳಿದು ನಮ್ಮದು ಭಗವಂತನ ಕೊಡುಗೆ
ದಿಟ್ಟಿಸು ಆಲಿಸು ಧ್ಯಾನಿಸು ಆಸ್ವಾದಿಸುತ ನಡೆ ಆನಂದದ ಕಡೆಗೆ
- ಶಿವದೇವಿ ಅವನೀಶಚಂದ್ರ – ನಿವೃತ್ತ ಶಿಕ್ಷಕರು, ಕೊಡಗು
