ಲೇಖನ : ರೇಶ್ಮಾಗುಳೇದಗುಡ್ಡಾಕರ್
ಪರಿಚಯ : ವಿಜ್ಞಾನ ವಿಷಯದಲ್ಲಿ ಪದವಿಯನ್ನು ಪಡೆದಿದ್ದಾರೆ. ಗೃಹಿಣಿಯಾಗಿದ್ದು, ಸಾಹಿತ್ಯದಲ್ಲಿ ಆಸಕ್ತಿಯನ್ನು ಹೊಂದಿದ್ದಾರೆ. ಅವರು ರಚಿಸಿದ ‘ಗಾಂಧಿ ಕವನ’ ವು ಕೇಂದ್ರ ಸಾಹಿತ್ಯ ಅಕಾಡೆಮಿಯ ವಾರ್ಷಿಕ ಪುಸ್ತಕದಲ್ಲಿ ಪ್ರಕಟಗೊಂಡಿದೆ.
ಅಮೇರಿಕಾದಲ್ಲಿ ನಡೆದ ಜನಾಂಗೀಯ ಹಿಂಸೆಯ ಘೋರ ಮುಖ ಓದಿದಾಗ ಪತ್ರಿಕೆಗಳಲ್ಲಿ ಜಗತ್ತಿನಲ್ಲಿ ದೌರ್ಜನ್ಯ ಕ್ಕೆ ಕೊನೆಯೇ ಇಲ್ಲ ಎಂಬ ಕಳವಳ ನೋವು ಉಂಟಾಗುತ್ತದೆ .
ಹಾಗೆಂದು ನಾವು ದೌರ್ಜನ್ಯ , ದುರ್ಬಲರ ಹಿಂಸೆ, ಅನ್ಯಾಯ, ಅತ್ಯಾಚಾರ ಇವುಗಳಿಂದ ಮುಕ್ತವಾಗಿಲ್ಲ. ಇತ್ತೀಚಿಗೆ ನಡೆದ ಗರ್ಭಿಣಿ ಆನೆಯ ಸಾವು, ಅದಕ್ಕೊ ಮೊದಲು ನ್ಯಾಯಕ್ಕಾಗಿ ಹಂಬಲಿಸಿದ ಉನ್ನವೋ ಸಹೋದರಿಯ ದಾರುಣ ಅಂತ್ಯ.ಇನ್ನೂ ಹಸಿರಾಗಿ ಉಳಿದಿದೆ. ಜನಮಾನಸದಲ್ಲಿ ಇವೇಲ್ಲಾ ದೌರ್ಜನ್ಯ ಹಿಂಸೆಯ ವಿವಿಧ ರೂಪಗಳು. ಆದರೆ ನೋವು, ಸಾವು ಒಂದೇ ಅಲ್ಲವೇ ?
ಪುರಾಣಗಳಲ್ಲಿ, ಧರ್ಮಶಾಸ್ತ್ರಗಳಲ್ಲಿ, ವೇದ ಉಪನಿಷತ್ತುಗಳಲ್ಲಿ ಹೆಣ್ಣಿಗೆ ಗೌರವ, ಸ್ಥಾನ-ಮಾನ ಎಲ್ಲವೂ ಉಂಟು. ಆದರೆ ಬಳಕೆಗೆ ಇಲ್ಲ. ಪ್ರತಿ ಪ್ರಾಣಿ ಸರಸೃಪಗಳಿಗೆ ದೈವೀಕ ಸ್ಥಾನ ನೀಡಿ ದೇವಾಲಯ ಕಟ್ಟಿ ಪೂಜಿಸುತ್ತೇವೆ. ಹಬ್ಬಗಳನ್ನು ಆಚರಿಸುತ್ತೇವೆ. ವಿಜೃಂಬಿಸುತ್ತೇವೆ. ಆದರೆ ಅಷ್ಟೇ ಘನ ಘೋರವಾಗಿ ಹತ್ಯೆ ಮಾಡುತ್ತೇವೆ. ಇದು ಇತಿಹಾಸಗಳಿಂದಲೂ ನಡೆದು ಬಂದಿದೆ .
ಪ್ರಜ್ಞಾವಂತ ನಾಗರೀಕ ಸಮಾಜದಲ್ಲಿ ನಾವುಗಳು ಹಿಂಸೆಗೆ ಸಾಕ್ಷಿಯಾಗಿ ಅಥವಾ ಮೂಕರಾಗಿ ಉಳಿದು ಬಿಟ್ಟಿದ್ದೇವೆ. ಅದನ್ನು ತಡೆಯುವ ಅಥವಾ ಬದಲಾಯಿಸುವ ಪ್ರಯತ್ನವನ್ನು ಮಾಡುವುದೇ ಇಲ್ಲ. ವರ್ಣಬೇಧ ನೀತಿ ಇನ್ನೂ ಜೀವಂತವಾಗಿದೆ. ಉಸಿರಾಡುತ್ತಿದೆ ಎಂಬುದು ಸಾಬಿತಾಯಿತು. ನಮ್ಮಲ್ಲೂ ಇದಕ್ಕೆ ಬಲಿಯಾಗುವುದು ನೇರವಾಗಿ ಹೆಣ್ಣು. ಸೌಂದರ್ಯ, ರಚನೆ, ಶ್ರೀಮಂತಿಕೆ, ವಿದ್ಯಾ, ಬುದ್ದಿ, ಜಾತಿ ಹೀಗೆ ಎಲ್ಲ ವಿಭಾಗದಲ್ಲೂ ಹೆಣ್ಣನ್ನು ಪರೀಕ್ಷಗೆ ಒಡ್ಡುತ್ತಾರೆ. ಈಗಂತೂ ಜಾಹೀರಾತು ‘ಗೌರವರ್ಣ’ ಎಂಬ ಶೀರ್ಷಿಕೆ ಅಡಿ ಪ್ರಸಾರ ಮಾಡುತ್ತಾರೆ. ಬಿಳಯ ತ್ಚಚೆಯೇ ಗೌರವರ್ಣವೇ? ಗುಣ, ಪ್ರೀತಿ, ಮಾನವೀಯತೆ ಯಾವುದು ಗೌರವ ಅಲ್ಲವೇ? ಎಂಬಂತಾಗಿದೆ.
” ಸಾಲಿಗ್ರಾಮವೇ ಕಪ್ಪು,
ಸರಸಿಜೋದ್ಭವ ಕಪ್ಪು , ಲೋಲಂಬಗಳು ಕಪ್ಪು
ರುಚಿತ ಕೋಗಿಲೆ ಕಪ್ಪು , ಮಾಲವುತ್ವವೆ ಕಪ್ಪು
ನಿರ್ಮಲಚಿತ್ತವೆ ಕಪ್ಪು
ಕಾಲಿಂದೀ ನದಿಯೆ ಕಪ್ಪು, ಕಾಮಿನಿಯರ ಕರಿಮಣಿ ಸರವೆ ಕಪ್ಪು
ಅಂಗನೆ ಕೇಳು ಮೂರುಲೋಕದಿ
ನಮ್ಮ ಪುರಂದರ ವಿಠಲ ಮೂರುತಿ ಕಪ್ಪು||”
ಎನ್ನುವ ಪುರಂದರದಾಸರ ಈ ಪದಗಳು ಕಪ್ಪು ಬಣ್ಣದ ಮಹತ್ವ ಸಾರಿ ಹೇಳುತ್ತವೆ.
ಫೋಟೋ ಕೃಪೆ : Incrediable Snaps
ಆದರೆ ನಾವು ಶಿಕ್ಷತರಾಗಿದ್ದು , ಚಂದ್ರಲೋಕಕ್ಕೆ ಲಗ್ಗೆ ಇಟ್ಟು ಹೊಸ ಆವಿಷ್ಕಾರಳ ಮೂಲಕ ಮಾನವನಿಗೆ ಸಾಟಿಯೇ ಇಲ್ಲ ಎಂಬ ಮಾತನ್ನು ಅಚ್ಚಳಿಯದಂತೆ ಮಾಡಿದ್ದೇವೆ. ಮಾಡುತ್ತಲೇ ಇದ್ದವೆ. ಆದರೆ ನಮ್ಮಲ್ಲಿನ ಮನುಷ್ಯ ಸಹಜ ಗುಣಗಳು ದಿನೇ ದಿನೇ ಮಾಯವಾಗುತ್ತಿವೆಯೇ. ಭಾವುಕ ಮಡಿಲು ಬರಿದಾಗುತ್ತಿದೆಯೇ ? ಎಂಬ ಭಾವ ಮೂಡುತ್ತದೆ.
ಜ್ಞಾನ -ವಿಜ್ಞಾನ ಬೆಳದಂತೆ ನಮ್ಮ ಅಜ್ಞಾನ ಅಂಧಕಾರ ಕೊನೆಯಾಗಬೇಕು. ಮನುಜಮತ ಸ್ನೇಹ, ವಿಶ್ವಾಸ, ನಂಬಿಕೆ, ಭಾವೈಕ್ಯತೆ, ಭ್ರಾತೃಯ್ವ ಉಕ್ಕಿ ಹರಿಯಬೇಕೆ ಹೊರತು ಅಸಹಿಷ್ಣುತೆ, ದ್ವೇಷವಲ್ಲ. ಮನವೀಯತೆ ಇಲ್ಲದ ನಾಗರೀಕತೆ ಕಾಳಜಿ ಇಲ್ಲದ ಅಭಿವೃದ್ಧಿ (ಪರಿಸರ ನಾಶ) ಯಾಕೆ ಬೇಕು?. ಮಾನವ ಸಂಘಜೀವಿ. ಆದರೆ ಈಗ ಭಯೋತ್ಪಾದಕ ಜೀವಿಯಾಗಿ ಬದಲಾಗುತ್ತಿದ್ದಾನೆ. ತನ್ನವರಲ್ಲಿ ಮತ್ತು ಪರಿಸರದಲ್ಲಿ ಸಾಕಷ್ಟು ಬದಲಾವಣೆಯಾಗುವಾಗ ನಾವು ಬದಲಾಗಬೇಕಿದೆ. ಹಿಂಸೆಯನ್ನು ಮರೆಯಬೇಕು. ಇಲ್ಲವಾದಲ್ಲಿ ಉಳಿದಿರುವ ತುಸು ಪ್ರೀತಿ ,ಕಾಳಜಿ, ಮಮತೆ, ಕರುಣೆ ಪುಸ್ತಕದಲ್ಲಿ ಮಾತ್ರ ಉಳಿಯುತ್ತದೆ ಎನ್ನುವ ಆತಂಕ ಮನೆ ಮಾಡಿದೆ.
( ಸೂಚನೆ : ಕತೆ, ಕವನ, ಲೇಖನ ಬರೆಯುವ ಆಸಕ್ತಿಯುಳ್ಳವರು ಇ – ಮೇಲ್ aakrutikannada@gmail.com ಮಾಡಬಹುದು.ಮತ್ತು ನಿಮ್ಮ ಅಭಿಪ್ರಾಯವನ್ನು ಮೇಲಿನ ಕಾಮೆಂಟ್ ಬಾಕ್ಸ್ ಮೂಲಕ ಹಂಚಿಕೊಳ್ಳಬಹುದು)
ರೇಶ್ಮಾಗುಳೇದಗುಡ್ಡಾಕರ್ ಅವರ ಹಿಂದಿನ ಬರಹಗಳು :