ಕಾಳೀ ಕಣಿವೆಯ ಕತೆಗಳು- ಭಾಗ-2 * ಹೂಲಿ ಶೇಖರ್
ಪ್ರಖ್ಯಾತ ಇಂಗ್ಲಿಷ್ ಕಾದಂಬರಿಕಾರ ಶ್ರೀ ಮನೋಹರ ಮಳಗಾಂವಕರ ಅವರು ಕರ್ನಾಟಕದ ಜಗಲಬೇಟ್‌ನಲ್ಲಿದ್ದರೂ ಅವರಿಗೆ ಕರ್ನಾಟಕದ ಕನ್ನಡ ಸಾಹಿತಿಗಳ ಯಾವ ಸಂಪರ್ಕವೂ ಇರಲಿಲ್ಲ ಎಂಬುದು ವಿಚಿತ್ರ ಸಂಗತಿ. ಅವರ ಪ್ರಸಿದ್ಧಿಯ ಬಗ್ಗೆ ನನಗೆ ತಿಳಿದಿತ್ತಾದರೂ ಅವರು ನಾನಿರುವ ಕಾಡಿನ ಸೆರಗಿನಲ್ಲಿಯೇ ಇದ್ದಾರೆಂದು ತಿಳಿದಿರಲಿಲ್ಲ.
ಚಾಂದೇವಾಡಿ ಕಾಡಿನ ಕಣಿವೆಗೆ ಬದಲಾದ ನಮ್ಮ ಶಿಬಿರ.
ಆಗ ಡಿಸೆಂಬರ ಮೊದಲ ವಾರ ಇರಬೇಕು. ಸೂಪಾ ಜಲಾಶಯದ ನೀರಿನ ಮಟ್ಟ ಗುರುತಿಸಲು ಕಾಳೀ ನದಿ ಎಡದಂಡೆಯ ಕಾಡಿನಲ್ಲಿ ಸರ್ವೇ ಮಾಡುತ್ತಿದ್ದ ನಮ್ಮ ತಂಡ ಎರಡನೇ ಹಂತದ ಕಾರ್ಯ ಆರಂಭಿಸಬೇಕಾಗಿತ್ತು. ಜಗಲಬೇಟ್ ಕಾಡಿನಲ್ಲಿ ನೀರಿನ ಮಟ್ಟದ ಎತ್ತರವನ್ನು ಗುರುತಿಸಿ ಮುಂದೆ ಸಾಗಿದ ನಮ್ಮ ತಂಡ ಗೋವಾ ಗಡಿಯ ಕ್ಯಾಸ್ಟಲ್‌ರಾಕ್ ಕಡೆಗೆ ಮುಖ ಮಾಡಿತು. ಆಣೆಕಟ್ಟು ನಿರ್ಮಾಣದ ಸ್ಥಳದಿಂದ ಪಶ್ಚಿಮಕ್ಕೆ ಇಪ್ಪತ್ತು ಕಿ.ಮೀ. ದೂರವಿರುವ ದಟ್ಟ ಕಾಡಿನಲ್ಲಿ ಸರ್ವೇ ಕೆಲಸಕ್ಕಾಗಿ ಸಿದ್ಧರಾದೆವು. ಸೂಪಾದಲ್ಲಾಗಲೀ, ಕಾಡಿನ ಬೀಡುಗಳಲ್ಲಾಗಲೀ ಕಾಣುವ ಜನಕ್ಕೆ ಕನ್ನಡ ಬರುತ್ತಿರಲಿಲ್ಲ. ಅಲ್ಲಿಯವರ ಮಾತೃಭಾಷೆ ಮರಾಠಿ ಅಥವಾ ಕೊಂಕಣಿಯಾಗಿತ್ತು. ನಮ್ಮ ತಂಡದಲ್ಲಿದ್ದ ಎಲ್ಲರೂ ಕನ್ನಡಿಗರು. ನಮಗ್ಯಾರಿಗೂ ಮರಾಠಿಯಾಗಲೀ, ಕೊಂಕಣಿಯಾಗಲೀ ಬರುತ್ತಿರಲಿಲ್ಲ. ಆದರೆ ಟೆಂಟು ಕಾವಲು ಮಾಡುತ್ತಿದ್ದ ವೀರೂ ಸಿದ್ಧಿ ಮತ್ತು ನಮ್ಮ ತಂಡದ ಇಂಜನಿಯರ ನಾಗೇಶ ಶಿರೋಡ್ಕರ ಅವರಿಗೆ ಮಾತ್ರ ಕೊಂಕಣಿ ಬರುತ್ತಿತ್ತು. ಅದರಿಂದ ನಮಗೆ ಸ್ಥಳೀಯ ಸಂವಹನದ ಬಗ್ಗೆ ಆತಂಕವಿರಲಿಲ್ಲ.
ಸೂಪಾದಿಂದ ಲೋಂಡಾಕ್ಕೆ ಹೋಗುವ ರಾಜ್ಯ ರಸ್ತೆಯಲ್ಲಿ ಹದಿನಾಲ್ಕು ಮೈಲಿ ದೂರದಲ್ಲಿ ಜಗಲಬೇಟ್ ಎಂಬ ಪುಟ್ಟ ಹಳ್ಳಿಯಿದೆ. ಇಲ್ಲಿ ಚಿಕ್ಕ ಪುಟ್ಟ ಗದ್ದೆ ತೋಟ ಮಾಡಿಕೊಂಡು, ಇಲ್ಲಾ ಅರಣ್ಯ ಇಲಾಖೆಯಲ್ಲಿ ನೌಕರಿ ಮಾಡಿಕೊಡೋ, ಇಲ್ಲಾ ಅರಣ್ಯ ಕೂಲಿಗಳಾಗಿಯೋ ಇರುವ ಸಂಸಾರಗಳೇ ಜಾಸ್ತಿ. ಹೆಚ್ಚೆಂದರೆ ಊರಲ್ಲಿ ನೂರು ಮನೆಗಳೂ ಇರಲಿಲ್ಲ. ಒಂದೆರಡು ಜೀವನಾವಶ್ಯಕ ವಸ್ತುಗಳನ್ನು ಮಾರುವ ಕಿರಾಣಿ ಅಂಗಡಿಗಳು, ಒಂದೆರಡು ಮೀನು ಅಂಡಿಗಳು, ಒಂದೆರಡು ಕಡೆ ಗೂಡಂಗಡಿಗಳಲ್ಲಿ ಚಹ ಮಾರುವ ಒಂದಿಬ್ಬರು ಹೆಂಗಸರು. ಹಗಲು ಹೊತ್ತು ಚಹಾ ಅಂಗಡಿಯಾಗಿದ್ದರೆ ರಾತ್ರಿ ಹೊತ್ತು ಅವು ಸಾರಾಯಿ ಅಂಗಡಿಯಾಗಿ ಮಾರ್ಪಡುತ್ತಿದ್ದವು. ಕಾಡಿನಲ್ಲಿದ್ದ ಗೌಳಿ ಹೆಂಗಸರು ಊರಿಗೆ ಬಂದು ಹಾಲು ಮಾರಿ ಬೇಕಾದ ದಿನಸಿ ಕೊಂಡು ಮತ್ತೆ ಕಾಡಿನತ್ತ ಹೋಗುತ್ತಿದ್ದರು. ಇಲ್ಲಿಯ ಬಹುತೇಕ ಮಂದಿ ಮರಾಠಿ ಮಾತನಾಡುವವರು, ಕನ್ನಡ ಹೆಚ್ಚಿನವರಿಗೆ ಅರ್ಥವಾಗುತ್ತಿರಲಿಲ್ಲ. ನಮ್ಮ ಆಫೀಸಿನಿಂದ ಈ ಊರಲ್ಲಿ ಒಂದು ಮಳೆ ಅಳೆಯುವ ಯಂತ್ರವನ್ನು ಸ್ಥಾಪಿಸಿ ಇಟ್ಟಿತ್ತು. ಅದಕ್ಕೊಬ್ಬ ರೇನ್‌ಗೇಜ್ ರೀಡರನ್ನು ಗುತ್ತಿಗೆ ಆಧಾರದ ಮೇಲೆ ನಿಯಮಿಸಲಾಗಿತ್ತು. ಆತ ಅಲ್ಲಿಯವನೇ ಆಗಿದ್ದ ವಸಂತ ಹುಳಗೋಳಕರ ಎಂಬ ಮರಾಠಿ ಹುಡುಗನಾಗಿದ್ದ.
ಪ್ರಖ್ಯಾತ ಇಂಗ್ಲಿಷ್ ಕಾದಂಬರಿಕಾರ ಶ್ರೀ ಮನೋಹರ ಮಳಗಾಂವಕರ. ಫೋಟೋ ಕೃಪೆ : kamat’s Potpori
ಇಲ್ಲಿಯ ಕಾಡಿನಲ್ಲಿಯೇ ವಾಸವಾಗಿದ್ದ ಪ್ರಖ್ಯಾತ ಇಂಗ್ಲಿಷ್ ಕಾದಂಬರಿಕಾರ
ಹನ್ನೆರಡನೇ ಶತಮಾನದಲ್ಲಿ ಕಲ್ಯಾಣದಿಂದ ಬಂದ ಶರಣರ ಒಂದು ತಂಡ ಇಲ್ಲಿಯ ಜಗಲಬೇಟ್ ಮೂಲಕ ಉಳವಿಯತ್ತ ಪ್ರಯಾಣ ಬೆಳೆಸಿತೆಂದು ಹೇಳುತ್ತಾರೆ. ಹಳಿಯಾಳ ಸಮೀಪದ ಕಕ್ಕೇರಿ ಕಡೆಯಿಂದ ಬಂದ ಆ ತಂಡ ಜಗಲಬೇಟದಿಂದ ಸೂಪಾ, ಜೊಯಡಾ, ಗುಂದ, ಕುಂಬಾರವಾಡ, ಕಾನೇರಿ ಮೂಲಕ ಉಳುವಿ ತಲುಪಿತಂತೆ. ಇಲ್ಲಿ ಒಂದು ಮಾತನ್ನು ನಿಮಗೆ ಹೇಳಲೇಬೇಕು. ಆಗ ವಿಶ್ವಮಟ್ಟದಲ್ಲಿ ಪ್ರತಿಷ್ಠಿತರೂ, ಇಂಗ್ಲೀಷ್ ಕಾದಂಬರಿಕಾರರೂ ಆಗಿದ್ದ ಶ್ರೀ ಮನೋಹರ ಮಳಗಾಂವಕರ ಅವರು ಈ ಊರಿನ ಹೊರಗೆ ಕಾಡಿನಲ್ಲಿದ್ದರು. ಜಗಲಬೇಟ್ ಊರಿನಿಂದ ಸ್ವಲ್ಪ ದೂರ ಕಾಡಿನಲ್ಲಿ ನಾಲ್ಕೆಕೆರೆ ಜಾಗದಲ್ಲಿ ಒಂದು ಫಾರ್ಮ ಹೌಸ್ ಒಂದನ್ನು ಕಟ್ಟಿಕೊಂಡಿದ್ದರು. ಮತ್ತು ಅಲ್ಲಿಯೇ ವಾಸವಾಗಿದ್ದರು.
ನಿಸರ್ಗ ಯಾವತ್ತೂ ಸಾಹಿತಿಗಳನ್ನು ಬೇಗ ಬೆಸೆದು ಬಿಡುತ್ತದೆ. ಲೋಕದ ಜಂಜಾಟಗಳಿಂದ ದೂರವಿರುವ ವಿಕ್ಷಿಪ್ತ ಮನೋಭಾವವೂ ಅದಕ್ಕೆ ಕಾರಣವಿರಬಹುದು. ಶ್ರೀ ಮನೋಹರ ಮಳಗಾಂವಕರರೂ ಅದಕ್ಕೆ ಹೊರತಾಗಿರಲಿಲ್ಲ. ಅಮೇರಿಕ, ಇಂಗ್ಲೆಂಡುಗಳಲ್ಲಿ ಅವರಿಗೆ ದೊಡ್ಡ ಹೆಸರಿತ್ತು. ಅವರ ಪ್ರಸಿದ್ಧಿಯ ಬಗ್ಗೆ ನನಗೆ ತಿಳಿದಿತ್ತಾದರೂ ಅವರು ನಾನಿರುವ ಕಾಡಿನ ಸೆರಗಿನಲ್ಲಿಯೇ ಇದ್ದಾರೆಂದು ತಿಳಿದಿರಲಿಲ್ಲ. ತಿಳಿದಾಗ ಅಚ್ಚರಿಯೂ ಆಗಿತ್ತು. ವಿದೇಶಗಳಲ್ಲಿ ಅವರ ಕಾದಂಬರಿಗಳಿಗೆ ದೊಡ್ಡ ಓದುಗರ ಸಂಖ್ಯೆಯಿತ್ತು. ಇದು ನಮಗೆ ಅಭಿಮಾನದ ಸಂಗತಿಯೇ.
ಮನೋಹರ ಮಳಗಾಂವಕರ ಅವರು ಕರ್ನಾಟಕದ ಜಗಲಬೇಟ್‌ನಲ್ಲಿದ್ದರೂ ಅವರಿಗೆ ಕರ್ನಾಟಕದ ಕನ್ನಡ ಸಾಹಿತಿಗಳ ಯಾವ ಸಂಪರ್ಕವೂ ಇರಲಿಲ್ಲ ಎಂಬುದು ವಿಚಿತ್ರ ಸಂಗತಿ. ಅವರಿಗೆ ಮುಂಬೈ ನಂಟೇ ಹೆಚ್ಚು. ಅಲ್ಲಿದ್ದ ಮರಾಠಿ ಸಾಹಿತಿಗಳು, ರಂಗ ಕಲಾವಿದರು, ಹಿಂದೀ ಚಿತ್ರರಂಗದ ಹೆಸರಾಂತ ಗಣ್ಯರು ಆಗಾಗ ಶ್ರೀ ಮನೋಹರ ಮಳಗಾಂವಕರರನ್ನು ಭೇಟಿಯಾಗಲು ಜಗಲಬೇಟ್‌ಗೆ ಬರುತ್ತಿದ್ದರಂತೆ. ಊರಿನ ಬಹುತೇಕರು ಯಾರೂ ಅವರ ಮನೆಯತ್ತ ಸುಳಿಯುತ್ತಿರಲಿಲ್ಲ. ಸ್ಥಳೀಯ ಕೆಲವು ಮರಾಠೀ ಆಳು-ಕಾಳುಗಳನ್ನು ಬಿಟ್ಟರೆ ಇನ್ಯಾರೂ ಅವರ ಮನೆಯತ್ತ ಸುಳಿಯುತ್ತಿರಲಿಲ್ಲ. ಊರಲ್ಲಿ ಕಾನಡಿ [ಕನ್ನಡ] ಭಾಷೆ ಮಾತಾಡುವವರೂ ಇರಲಿಲ್ಲ.
ಮಳಗಾಂವಕರರಿಗೆ ಹೊರಜಗತ್ತಿನ ಸಂಪರ್ಕ ಅಷ್ಟೊಂದು ಇಷ್ಟವಾಗುತ್ತಿರಲಿಲ್ಲವೇನೋ. ಹಾಗಾಗಿ ಹೊರಗಿನಿಂದ ಅವರನ್ನು ಭೇಟಿಯಾಗಲು ಬರುವವರೂ ಅಷ್ಟಕ್ಕಷ್ಟೇ ಇದ್ದರು. ನನಗೆ ಸಾಹಿತ್ಯದಲ್ಲಿ ಆಸಕ್ತಿ ಇದ್ದ ಕಾರಣ ಅವರನ್ನು ಒಮ್ಮೆ ಭೇಟಿ ಆಗಬೇಕೆಂದು ಬಯಸಿದ್ದೆ. ಆದರೆ ಅವರು ಇಂಗ್ಲಿಷ್ ಲೇಖಕರು. ಜೊತೆಗೆ ಮರಾಠೀ ಭಾಷಿಕರು. ನನಗೆ ಮರಾಠಿ ಬರುತ್ತಿರಲಿಲ್ಲ. ಹಾಗೂ ಸಂವಹನಕ್ಕೆ ಸಾಧ್ಯವಾಗುವ ಇಂಗ್ಲೀಷೂ ನನಗೆ ದಕ್ಕಿರಲಿಲ್ಲ. ಹೀಗಾಗಿ ಮುಂದೆ ನೋಡಿದರಾಯಿತು ಅಂದುಕೊಂಡು ಸುಮ್ಮನಾದೆ. ಮತ್ತು ನಮ್ಮ ಸರ್ವೇ ತಂಡದ ಕೆಲಸಕ್ಕೆ ನಾನು ಹೊಂದಿಕೊಂಡು ಇರಬೇಕಾದದ್ದರಿಂದ ಸಮಯಾಭಾವವೂ ಅದಕ್ಕೆ ಕಾರಣವಾಗಿತ್ತು.
ಕ್ಯಾಸ್ಟಲರಾಕ್ ಕಾಡಿನತ್ತ ಪಯಣ
ಸೂಪಾದಿಂದ ಹೊರಟು ಜಗಲಬೇಟ್‌ಗೆ ಬಂದು ಅಲ್ಲಿ ಊರ ಮಧ್ಯದಲ್ಲಿರುವ ಗಣಪತಿ ಗುಡಿಯ ಹತ್ತಿರ ಪಶ್ಚಿಮಕ್ಕೆ ತಿರುಗಿದರೆ, ಒಂದು ಎಂಟು ಅಡಿ ಅಗಲದ ಮಣ್ಣು ರಸ್ತೆ ಕಾಣುತ್ತದೆ. ಅದು ಕರ್ನಾಟಕ -ಗೋವಾ ಗಡಿ ಊರು ಕ್ಯಾಸ್ಟಲರಾಕ್ ಕಡೆಗೆ ಹೋಗುತ್ತದೆ. ಬೇಸಿಗೆಯಲ್ಲಿ ಕಂಪು ಧೂಳು, ಮಳೆಗಾಲದಲ್ಲಿ ಮಳೆ ನೀರು ಬಿದ್ದು ಕೊರಕಲಾದ ಮತ್ತು ನೀರಿನ ಹೊಂಡವಾಗಿರುವ ರಸ್ತೆ. ಇಲ್ಲಿಂದ ಹದಿನೆಂಟು ಕಿ.ಮೀ. ದೂರದ ಕಾಡಿನಲ್ಲಿಯೇ ಸಾಗುವ ಹಾದಿ. ಕ್ಯಾಸ್ಟಲ್ ರಾಕ್ ಈಗ ಕರ್ನಾಟಕದಲ್ಲಿದ್ದರೂ ಆಗ ಪೋರ್ಚುಗೀಸ್ ರ ಹಿಡಿತದಲ್ಲಿತ್ತು. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷ್ ಮತ್ತು ಪೋರ್ಚುಗೀಸ್ ರ ವ್ಯಾಪಾರೀ ಸರಕು ಸಾಗಣೆಗಾಗಿ ಇಲ್ಲಿ ರೈಲು ಮಾರ್ಗ ಹಾದು ಹೋಗುತ್ತಿತ್ತು. ಖಾನಾಪುರ ತಾಲೂಕಿನ ಲೋಂಡಾದಿಂದ ಗೋವಾದ ವಾಸ್ಕೋವರೆಗೆ ರೈಲು ಮಾರ್ಗವಿತ್ತು. ಮತ್ತು ಈ ರೈಲನ್ನು ಈ ಊರಲ್ಲಿ ನಿಲ್ಲಿಸಿ, ಇಡೀ ರೈಲನ್ನು ತಪಾಸಣೆ ಮಾಡಲಾಗುತ್ತಿತ್ತು. ಲೋಂಡಾದಿಂದ ವಾಸ್ಕೋಗೆ ಹೋಗುವ ರೈಲನ್ನು ಪೋರ್ತುಗೀಜರೂ, ವಾಸ್ಕೋದಿಂದ ಲೋಂಡಾ ಕಡೆ ಹೋಗುವ ಪೋರ್ತುಗೀಜರ ರೈಲುಗಳನ್ನು ಬ್ರಿಟಿಷರೂ ತಪಾಸಣೆ
ಮಾಡಿ ಬಿಡುತ್ತಿದ್ದರು. ಈ ಊರಿನ ಬಗ್ಗೆ ಮುಂದೆ ಪ್ರತ್ಯೇಕವಾಗಿ ಬರೆಯುತ್ತೇನೆ. ಇಲ್ಲಿಂದ ದಾಟಿ ಮುಂದೆ ಹೋದರೆ ಗೋವಾ ಸರಹದ್ದಿನಲ್ಲಿ ಕಾಲಿಡುತ್ತೇವೆ. ಗೋವಾದ ಮಡಂಗಾವ್ ಪಟ್ಟಣ ಇಲ್ಲಿಂದ ತುಂಬ ಹತ್ತಿರ.
ಕ್ಯಾಸ್ಟಲ್ ರಾಕ್ ಅರಣ್ಯ ಪ್ರವೇಶ
ಜಗಲಬೇಟ್-ಕ್ಯಾಸ್ಟಲ್‌ರಾಕ್ ಮಾರ್ಗದಲ್ಲಿ ಯಾವುದೇ ಸಾರಿಗೆ ವಾಹನಗಳ ಸಂಚಾರವಿರಲಿಲ್ಲ. ಗೋವಾಕ್ಕೆ ಹೋಗುವ ಸಣ್ಣ ವ್ಯಾನುಗಳು, ಕಾಡಿನಲ್ಲಿ ಮರದ ದಿಮ್ಮು ಸಾಗಿಸಲು ಹೋಗಿಬರುವ ಅರಣ್ಯ ಇಲಾಖೆ ಅನುಮೋದಿತ ಹಳೆಯ ಫೋರ್ಡ್ ಲಾರಿಗಳು ಮಾತ್ರ ಸಂಚಾರಕ್ಕಿದ್ದವು. ಆಗ ಬೈಕು, ಕಾರು, ಜನರ ಬಳಿ ಇರಲಿಲ್ಲ. ಟ್ರಾಕ್ಟರುಗಳ ಬಳಕೆಯೂ ಬಂದಿರಲಿಲ್ಲ. ಸೈಕಲ್ಲುಗಳಿದ್ದರೂ ಕೊರಕಲು ರಸ್ತೆಯ ಕಾಡು ದಾರಿಯಾದ್ದರಿಂದ ಅದು ಸವಾರರಿಗೆ ಯೋಗ್ಯವಾಗಿರಲಿಲ್ಲ. ಜೊತೆಗೆ ವನ್ಯ ಪ್ರಾಣಿಗಳ ಭಯವೂ ಇತ್ತು.
ರಸ್ತೆಯ ಇಕ್ಕೆಲದಲ್ಲೂ ದಟ್ಟ ಕಾಡು. ಇಲ್ಲಿ ಕಾಡುಕೋಳಿಗಳು, ಮೊಲಗಳು ಕಣ್ಮುಂದೆಯೇ ಹಿಂಡು ಹಿಂಡಾಗಿ ಕುಪ್ಪಳಿಸಿ ಕೊಂಡು ಹೋಗುತ್ತಿದ್ದವು. ಕೆಲವೊಮ್ಮೆ ಜಿಂಕೆಗಳ ದೊಡ್ಡ ಹಿಂಡೂ ರಸ್ತೆಗೆ ಅಡ್ಡಲಾಗಿ ನಿಂತು ನೋಡಿ ಸಾಗಿ ಹೋಗುತ್ತಿದ್ದವು. ಇದ್ದಕ್ಕಿದ್ದಂತೆ ಮೈಮೇಲೇ ಬರುವ ಕಾಡಿನ ಕೋರೇ ಹಂದಿಗಳಿಂದ ಎಚ್ಚರಿಕೆಯಿಂದ ಇರಬೇಕಾಗಿತ್ತು. ಎಲ್ಲಿ ನೋಡಿದರೂ ಹಸಿರು. ಮುಗಿಲೆತ್ತರದ ಮರಗಳು, ಅವುಗಳಿಗೆ ಅಂಟಿಕೊಂಡ ಬಳ್ಳಿಗಳು, ಎತ್ತರದ ಹುಲ್ಲು ಮೆದೆಗಳು, ಅಲ್ಲಲ್ಲಿ ಕಾಡಿನೊಳಗೆ ಹೋಗಲು ಮನುಷ್ಯರ ಹೆಜ್ಜೆ ಗುರುತು ಬಿದ್ದ ಕೆಂಪು ಮಣ್ಣಿನ ಕಾಡು ದಾರಿಗಳು. ಈ ರಸ್ತೆಯಲ್ಲಿ ದಾರಿ ತಪ್ಪಿದರೆ ಮುಗಿಯಿತು. ಅರಣ್ಯದ ಇನ್ಯಾವುದೋ ಭಾಗಕ್ಕೆ ಹೋಗಿ ಸೇರುತ್ತಿದ್ದೆವು.
[ಈಗ ಇದು ಉತ್ತಮ ಡಾಂಬರು ರಸ್ತೆಯಾಗಿದೆ. ಇಕ್ಕೆಲದ ಕಾಡೂ ಬಯಲಾಗಿದೆ]
ಸಾಂದರ್ಭಿಕ ಚಿತ್ರ ಕೃಪೆ : You Tube
ದಟ್ಟಾರಣ್ಯದ ಮಧ್ಯೆ ಹಾಕಿದೆವು ಗುಡಾರದ ಟೆಂಟು
ನಮ್ಮನ್ನು ಹೊತ್ತ ಫೋರ್‌ವೀಲ್ ಜೀಪು ಜಗಲಬೇಟ್ ನ ಈ ರಸ್ತೆಯಿಂದಲೇ ಕಾಡು ಪ್ರವೇಶಿಸಿತ್ತು. ಕರ್ನಾಟಕ- ಗೋವಾದ ಗಡಿಗೆ ಹೊಂದಿಕೊಂಡ ಕ್ಯಾಸ್ಟಲ್‌ರಾಕ್ ಎಂಬ ಪುಟ್ಟ ಪಟ್ಟಣದ ಪೂರ್ವ ದಿಕ್ಕಿನ ಕಾಡಿನೊಳಗೆ ಸುಮಾರು ಏಳು ಕಿ.ಮೀ. ದೂರಕ್ಕೆ ನಮ್ಮ ಕ್ಯಾಂಪ್‌ನ್ನು ಬದಲಾಯಿಸಿಕೊಂಡೆವು. ಇದೇ ರಸ್ತೆಯಿಂದ ಅನತಿ ದೂರದಲ್ಲಿ ನಮ್ಮ ಟೆಂಟು ತಲೆಯೆತ್ತಿತು. ಕಾಡಿನ ಒಂದು ಎತ್ತರದ ಗುಡ್ಡದ ಮೇಲೆ ನೀರಿನ ಸೌಕರ್ಯ ಇರುವ ಪುಟ್ಟ ಬಯಲು ವಾತಾವರಣ. ಎಷ್ಟು ದಿನವಿದ್ದರೂ ಬೇಸರವಾಗದ ಆಹ್ಲಾದಕರ ನಿಸರ್ಗದತ್ತ ಜಾಗ. ನಾವೇ ಕೈಗೆ ಕೊಯ್ತ ಹಿಡಿದು ಅಲ್ಲಿಯ ಜಾಗ ಹಸನು ಮಾಡಿ ಟೆಂಟು ಹಾಕಿದೆವು. ಹಾವು ಚೇಳು ನಮ್ಮ ಟೆಂಟಿನೊಳಗೆ ಬಂದು ಸೇರಿಕೊಳ್ಳ ಬಾರದೆಂದು ಸುತ್ತಲಿನ ಗಿಡಗಂಟಿಗಳನ್ನು ನಾವೇ ಸವರಿಕೊಂಡು ಸ್ವಚ್ಛ ಮಾಡಿದೆವು. ಹಾಗೂ ಟೆಂಟಿನ ಮುಂದೆ ಅಗಲವಾದ ಕೆಂಡದ ಹೊಂಡ ನಿರ್ಮಿಸಿ ಅದರಲ್ಲಿ ಅಲ್ಲೇ ಒಣಗಿ ಬಿದ್ದಿದ್ದ ಕಟ್ಟಿಗೆಗಳನ್ನು ತುಂಬಿಸಿದೆವು. ರಾತ್ರಿ ಹೊತ್ತಿನಲ್ಲಿ ಉರಿಯುವ ಬೆಂಕಿಯನ್ನು ಕಂಡರೆ ಹುಲಿ, ಕಾಡುಕೋಣ, ಕಾಡು ಹಂದಿ, ಕರಡಿ ಹತ್ತಿರ ಸುಳಿಯುವುದಿಲ್ಲ. ಅವುಗಳನ್ನು ಹೆದರಿಸಲು ಈ ಉಪಾಯ ಮಾಡಲೇಬೇಕಾಗಿತ್ತು. ಆದರೆ ಮೊಲ, ನರಿಗಳು, ಶೀಳು ನಾಯಿಗಳು ಮಾತ್ರ ಹಣಿಕಿಕ್ಕಿ ಬೆಂಕಿಯನ್ನು ನೋಡಿ ಹಿಂದೆ ಸರಿಯುತ್ತಿದ್ದವು. ಹಾಗೆಯೇ ಹಗಲು ಹೊತ್ತಿನಲ್ಲಿ ಪ್ರಾಣಿಗಳನ್ನು ಹೆದರಿಸಲು ಕಡುಬಣ್ಣದ ಬಟ್ಟೆಗಳನ್ನು ಟೆಂಟಿನ ಸುತ್ತ ಮರಗಳ ಟೊಂಗೆಗಳಿಗೆ ತೂಗು ಹಾಕಿದೆವು. ತಂಡದ ಎಲ್ಲರಿಗೂ ಹಂಟರ್ ಶೂ, ಗಮ್ ಬೂಟು, ಲೆದರ್ ಶೂಗಳನ್ನು ಕಚೇರಿಯಿಂದಲೇ ಕೊಡಲಾಗಿತ್ತು. ರಾತ್ರಿ ಹೊತ್ತು ಗಮ್ ಬೂಟು ಇಲ್ಲದೆ ಯಾರೂ ಹೊರಗೆ ಬರುತ್ತಿರಲಿಲ್ಲ. ಈ ಹೊತ್ತಿಗೆ ನಮ್ಮ ತಂಡಕ್ಕೆ ಮತ್ತೊಬ್ಬ ಸಿವಿಲ್ ಇಂಜನಿಯರರ ಸೇರ್ಪಡೆಯಾಯಿತು. ಬೆಂಗಳೂರಿನ ಕಡೆಯಿಂದ ಬಂದ ಶ್ರೀನಿವಾಸ ಶೆಟ್ಟಿ ಎಂಬ ಯುವಕ ಅದೇ ತಾನೇ ಕಾಲೇಜು ಮುಗಿಸಿ ಎಲ್ಲರ ಹಾಗೆ ದಿನಗೂಲಿ ಪಗಾರದ ಮೇಲೆ ಬಂದು ನಮ್ಮ ತಂಡ ಸೇರಿಕೊಂಡರು. ಪಾಪ! ನಗರದಲ್ಲಿ ಹುಟ್ಟಿ ಬೆಳೆದು,ಅಲ್ಲಿಯೇ ಓದಿದ ಆ ಯುವ ಇಂಜನೀಯರು ಇಂಥ ಕಾಡನ್ನು ನೋಡಿದವರೇ ಅಲ್ಲ. ಇಲ್ಲಿ ನಾವೇ ಎಲ್ಲ ಸೇರಿ ಅಡುಗೆ ಮಾಡಿಕೊಂಡು ಊಟ ಮಾಡಬೇಕಾಗಿತ್ತು. ಇಲ್ಲಿಯ ದಟ್ಟ ಅರಣ್ಯ ನೋಡಿಯೇ ಅವರು ಗಾಬರಿಯಾಗಿದ್ದರು. ಆದರೂ ನೌಕರಿ ಮಾಡುವುದು ಅನಿವಾರ್ಯವಾಗಿತ್ತು. ನಾವೇ ಅವರಿಗೆ ಧೈರ್ಯ ಹೇಳಿ ಬರಮಾಡಿಕೊಂಡೆವು. ಅವರು ಬರುವಾಗ ಒಂದಷ್ಟು ಜ್ವರದ ಮಾತ್ರೆ, ತಲೆನೋವಿನ ಮಾತ್ರೆ, ಭೇದಿ ಔಷಧಗಳನ್ನು ಆಫೀಸಿನವರು ಕಳುಹಿಸಿಕೊಟ್ಟಿದ್ದರು.
ಸಾಂದರ್ಭಿಕ ಚಿತ್ರ ಕೃಪೆ : Globle Excursion India
ಸೂಪಾ ಆಣೆಕಟ್ಟಿಗಾಗಿ ಸಿಕ್ಕ ಉಸುಕಿನ ಉಗ್ರಾಣಗಳು
ನಮ್ಮ ಕ್ಯಾಂಪಿನ ಉತ್ತರ ದಿಕ್ಕಿಗೆ ಚಾಂದೇವಾಡಿ ಎಂಬ ಹದಿನೈದು ಮನೆಗಳಿರುವ ಹಳ್ಳಿ ಇರುವುದು ನಮಗೆ ಕೊಟ್ಟ ನಕಾಶೆಯಲ್ಲಿ ಇತ್ತು. ಹಿರಣ್ಯಕೇಶಿ ನದಿ ಮತ್ತು ಕಾಳೀ ನದಿಗಳು ಇದೇ ಕಾಡಿನಲ್ಲಿ ಹರಿಯುತ್ತಿದ್ದವು. ಈ ನದಿಗಳ ಪಾತಳಿಯಲ್ಲಿ ನಿಸರ್ಗದತ್ತ ಉಸುಕಿನ ದೊಡ್ಡ ಉಗ್ರಾಣ ಇರುವುದು ಇಲಾಖೆಗೆ ಗೊತ್ತಾಗಿತ್ತು. ಅದುವರೆಗೆ ಗೋವಾದಲ್ಲಿ ಆಳ್ವಿಕೆ ನಡೆಸಿದ ಪೋರ್ತುಗೀಜರೂ ಇದರ ಬಗ್ಗೆ ಅಷ್ಟು ಗಮನ ಕೊಟ್ಟಿರಲಿಲ್ಲ. ಸಾವಿರಾರು ವರ್ಷಗಳಿಂದ ಈ ನದಿಗಳ ಪಾತಳಿಯಲ್ಲಿ ಸಂಗ್ರಹವಾಗಿದ್ದ ಉಸುಕು ಶ್ರೇಷ್ಠ ದರ್ಜೆಯದಾಗಿತ್ತು. ಚಾಂದೇವಾಡಿ ಮತ್ತು ಶಿಂಗರಗಾಂವ್ ಎಂಬಲ್ಲಿ ಇದರ ಸಂಗ್ರಹ ಅಪಾರವಾಗಿತ್ತು. ಈ ಸಂಗ್ರಹ ದಟ್ಟಕಾಡಿನ ಮಧ್ಯೆದಲ್ಲಿ ಇತ್ತಾದ್ದರಿಂದ ಹೊರಗಿನ ನಾಗರಿಕ ಸಮಾಜದ ಕಣ್ಣೂ ಈ ಉಸುಕು ಸಂಪತ್ತಿನ ಮೇಲೆ ಬಿದ್ದಿರಲಿಲ್ಲ. ಆಗ ಕಾಂಕ್ರೀಟ ಮನೆ ಕಟ್ಟುವ ಇರಾದೆ ಯಾರಿಗೂ ಇರಲಿಲ್ಲ. ಅಲ್ಲಿಯೇ ಸಿಗುತ್ತಿದ್ದ ಜಂಬಿಟ್ಟಿಗೆ ಮತ್ತು ಸುಣ್ದ ಗಾರೆಯನ್ನು ಕಲೆಸಿ ಮನೆ ಕಟ್ಟವುದೇ ಎಲ್ಲ ಕಡೆ ವಾಡಿಕೆಯಾಗಿತ್ತು. ಹಾಗಾಗಿ ಕಾಡಿನೊಳಗೆ ಹೋಗಿ ಇಲ್ಲಿಯ ಉಸುಕು ಎತ್ತುವ ಪ್ರಯತ್ನ ಯಾರೂ ಮಾಡಿರಲಿಲ್ಲ. ಅಲ್ಲದೆ ಅರಣ್ಯ ಇಲಾಖೆಯು ಈ ಸಂಪತ್ತಿನ ಮೇಲೆ ಸದಾ ನಿಗಾ ಇಟ್ಟಿತ್ತು. ಉಸುಕು ಕಳ್ಳ ದಂಧೆಕೋರರನ್ನು ಹತ್ತಿರ ಸುಳಿಯಲೂ ಬಿಟ್ಟಿರಲಿಲ್ಲ. ಮುಂದೆ ಈ ಉಸುಕು ಸಂಪತ್ತನ್ನೇ ಸೂಪಾ ಆಣೆಕಟ್ಟು ನಿರ್ಮಾಣ ಕಾರ್ಯಕ್ಕೆ ಬಳಸಿಕೊಳ್ಳಬಹುದೇನೋ ಎಂದು ತಜ್ಞರು ಯೋಚಿಸುತ್ತಿದ್ದರು. ಅದಕ್ಕಾಗಿ ಬೆಂಗಳೂರಿನಲ್ಲಿದ್ದ ಅನ್ವೇಷಣಾ ಇಲಾಖೆಯ ಭೂಗರ್ಭ ತಜ್ಞರ ಜೊತೆ ಚರ್ಚೆಯನ್ನೂ ನಡೆಸಿತ್ತು.
ಮುಂದಿನ ಸಂಚಿಕೆಯಲ್ಲಿ – ಚಾಂದೇವಾಡಿ ಕಾಡಿನ ನದಿಗಳ ಪಾತಳಿಯಲ್ಲಿ ಉಸುಕಿನ ಖಣಿ ಶೋಧನೆ…
( ಸೂಚನೆ : ಕತೆ, ಕವನ, ಲೇಖನ ಬರೆಯುವ ಆಸಕ್ತಿಯುಳ್ಳವರು ಇ – ಮೇಲ್ aakrutikannada@gmail.com ಮಾಡಬಹುದು. ಮತ್ತು ನಿಮ್ಮ ಅಭಿಪ್ರಾಯವನ್ನು ಮೇಲಿನ ಕಾಮೆಂಟ್ ಬಾಕ್ಸ್ ಮೂಲಕ ಹಂಚಿಕೊಳ್ಳಬಹುದು)
ಹೂಲಿಶೇಖರ್ ಅವರ ಹಿಂದಿನ ಬರಹಗಳು :