(ಸಾಂದರ್ಭಿಕ ಚಿತ್ರ)
ಎಂಥ ಆಘಾತದ ಸುದ್ದಿ ಇದು. ದೆಹಲಿಯಲ್ಲಿದ್ದ ನಾನು ಬುಧವಾರ ಸಂಜೆ ತಾನೇ ಇಂದಿರಾಪುರಂನ ಪಿವಿಆರ್ ನಲ್ಲಿ ಸರ್ಜಿಕಲ್ ಸ್ಟ್ರೈಕ್ ಸಿನಿಮಾ ನೋಡಿ ಬಂದೆ. ಬೆಳಿಗ್ಗೆ ನೋಡಿದರೆ ಎದೆ ದಢಾರ್ ಅನ್ನು ಸುದ್ದಿ ಎಲ್ಲ ಕಡೆ ಬಿತ್ತರ ಗೊಂಡಿತು. ಕಾಶ್ಮೀರದ ಪುರವಾರಿನಲ್ಲಿ ಅದೇ ಭಯೋತ್ಪಾದಕರು ನಮ್ಮ ೪೨ ಸೈನಿಕರನ್ನು ಆಹುತಿ ತಗೆದುಕೊಂಡಿದ್ದರು. ಸರ್ಜಿಕಲ್ ಸ್ಟ್ರೈಕ್‌ನ ಅಟೋಮ್ಯಾಟಿಕ್ ಬಂದೂಕಗಳ ಟಪ-ಟಪ ಸದ್ದು ಇನ್ನೂ ನಿಂತಿಲ್ಲ ಎಂದು ಅರಿವಾಗುವುದರೊಳಗೆ ನಾವು ಬಹಳಷ್ಟು ಜೀವ ಕಳೆದುಕೊಂಡಿದ್ದೆವು. ಪಾಕ್ ಪ್ರೇರಿತ ಈ ಭಯೋತ್ಪಾದನೆಯ ಕರಾಳ ಮುಖ ಮತ್ತೊಮ್ಮೆ ಜಗತ್ತಿನ ಮುಂದೆ ತೆರೆದಿದೆ. ಇದು ಅಂತ್ಯವಲ್ಲ. ಆರಂಭ ಅನ್ನುವಂಥ ಸ್ಥಿತಿ ನಿರ್ಮಾಣವಾಗಿದೆ. ಇಡೀ ದೇಶವೇ ಈಗ ಈ ಘಟನೆಗೆ ರೋಸಿ ಹೋಗಿದೆ. ಯುದ್ಧವೇ ಇದಕ್ಕೆ ತಕ್ಕ ಉತ್ತರ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಅದಕ್ಕಾಗಿ ಒತ್ತಡಗಳೂ ಬರುತ್ತಿವೆ. ಸರಕಾರದ ಪ್ರತಿಕಾರ ಏನಿರುತ್ತದೋ ಎಂದು ಕಾಯುವಂತಾಗಿದೆ.
ಸೇನೆ ಮತ್ತು ದೇಶವಾಸಿಗಳಲ್ಲಿ ಪ್ರತಿಕಾರದ ಕೆಚ್ಚು ಮೂಡಿರುವುದು ಸುಳ್ಳಲ್ಲ. ನಮ್ಮ ಸೇನಾ ಮುಖ್ಯಸ್ಥರು ಈ ಸಮಯದಲ್ಲಿ ಒಂದು ಮಾತು ಹೇಳಿದ್ದಾರೆ. ಅದನ್ನು ಎಲ್ಲರೂ ಗಮನಿಸಲೇಬೇಕು. ಇಡೀ ದೇಶವನ್ನು ಶೇಕಡಾ ೮೦ ರಷ್ಟು ಹಾಳು ಮಾಡಿದವರು ರಾಜಕಾರಿಣಿಗಳು. ಸೈನ್ಯಕ್ಕೆ ಇಡೀ ದೇಶವೇ ಕುಟುಂಬವಾದರೆ ಈ ರಾಜಕಾರಿಣಿಗಳಿಗೆ ತಮ್ಮ ಕುಟುಂಬ ಮಾತ್ರ ದೇಶವಾಗಿರುತ್ತದೆ. ಇಂಥವರ ಮನೆಯಲ್ಲಿ ಇರುವ ನಾಯಿ-ಬೆಕ್ಕುಗಳನ್ನು ಹೊರತುಪಡಿಸಿ ಉಳಿದೆಲ್ಲರಿಗೂ ದೇಶದ ಅಧಿಕಾರ ಬೇಕು. ಆದರೆ ಇಂಥವರು ದೇಶಕ್ಕಾಗಿ ಮಾಡಿದ್ದೇನು. ಇದು ಸೇನಾ ಮುಖ್ಯಸ್ಥರ ಪ್ರಶ್ನೆ. ರಾಜಕೀಯ ಸೇರಬೇಕು ಅನ್ನುವವರು ಮೊದಲು ಐದು ವರ್ಷ ಕಡ್ಡಾಯವಾಗಿ ಸೇನೆಯಲ್ಲಿ ಸೇವೆ ಮಾಡಿರಬೇಕು ಎಂಬ ನಿಯಮ ಮಾಡಿ. ಗಡಿಯಲ್ಲಿ ಸೈನಿಕರು ಅನುಭವಿಸುವ ಕಷ್ಟಗಳನ್ನು ರಾಜಕಾರಣಿಯಾದವರು ಅರಿಯಬೇಕಾದರೆ ಇಂಥ ಕಾನೂನು ಈಗ ಅವಶ್ಯವಾಗಿದೆ. ಅದರ ಅಗತ್ಯತೆಯನ್ನು ಇತ್ತೀಚಿನ ವಿದ್ಯಮಾನಗಳು ಖಚಿತವಾಗಿಸಿವೆ.
ಸೇನಾ ಮುಖ್ಯಸ್ಥರು ಹೇಳಿದ ಈ ಮಾತಿನಲ್ಲಿ ಅತಿರೇಕವೇನಿಲ್ಲ. ಇಂದು ಏನೂ ಗೊತ್ತಿಲ್ಲದವನ ಕೊನೆಯ ಆಯ್ಕೆ ರಾಜಕೀಯ ಎಂಬಂತಾಗಿದೆ. ಅಪ್ಪ ಗಳಿಸಿದ್ದನ್ನು ರಕ್ಷಿಸಲು ಮಗ ರಾಜಕೀಯಕ್ಕೆ ಬರಬೇಕು. ಅಜ್ಜ-ಅಪ್ಪ ಗಳಿಸಿದ್ದನ್ನು ರಕ್ಷಿಸಲು ಮೊಮ್ಮಗ ರಾಜಕೀಯಕ್ಕೆ ಬರಬೇಕು ಎಂಬಂಥ ಕುಟಿಲ ನೀತಿಗೆ ಬದ್ಧರಾಗಿರುವವರು ರಾಜಕಾರಿಣಿಗಳು. ಇತ್ತೀಚೆಗೆ ಸಾಹಿತಿ ಕುಂ. ವೀರಭದ್ರಪ್ಪ ಒಂದು ಮಾತು ಹೇಳಿದ್ದರು. ‘ಮಕ್ಕಳು ಮೊಮ್ಮಕ್ಕಳೇ ಶಾಸಕರಾಗಬೇಕು ಅಂದರೆ ವಿಧಾನ ಸೌಧವೇನು ಇವರಪ್ಪನ ಆಸ್ತಿಯೇ’ ಎಂದು ಕೇಳಿದ್ದರು. ಈಗ ಸೇನಾ ಮುಖ್ಯಸ್ಥರು ರಾಜಕೀಯ ಜನರಿಂದಲೇ ದೇಶ ಶೇಕಡಾ ೮೦ ಹಾಳಾಗಿದೆ ಎಂದು ಹೇಳಿರುವುದಕ್ಕೂ ಅರ್ಥವಿದೆ. ಯಾರೇ ರಾಜಕೀಯಕ್ಕೆ ಹೋಗಲಿ. ಅವರು ಮೊದಲು ಐದು ವರ್ಷ ಸೇನೆಯಲ್ಲಿರಬೇಕು ಅನ್ನುವ ಮಾತನ್ನು ನಾವಿಂದು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಸರ್ಜಿಕಲ್ ಸ್ಟ್ರೈಕ್ ಸಿನಿಮಾ ನೋಡುವ ಅಗತ್ಯವಿದೆ. ಸೇನೆಯಲ್ಲಿದ್ದು ಇಂದು ಸಾಯುತ್ತಿರುವ ಯಾರೊಬ್ಬರೂ ರಾಜಕಾರಿಣಿಗಳ ಮಕ್ಕಳಲ್ಲ. ಸಾಮಾನ್ಯ ಮತದಾರನ ಮಕ್ಕಳು. ಇವರ್ಯಾರೂ ರಾಜಕಾರಿಣಿಯ ಮಕ್ಕಳಂತೆ ಕೋಟಿ ಕೋಟಿ ಹಣ ಮಾಡಲು ಸೇನೆ ಸೇರಿಲ್ಲ. ಇಡೀ ದೇಶವನ್ನು ಹಗಲಿರುಳು ಕಣ್ಣಲ್ಲಿ ಕಣ್ಣಿಟ್ಟು ಕಾಯುವ ನಿಜವಾದ ದೇಶಭಕ್ತರು ಇವರು.
ಪ್ರಜಾ ಜನರ ತೆರಿಗೆಯ ಹಣದಲ್ಲಿ ಮೋಜು, ಮಸ್ತಿ, ಸ್ಮಾರಕಗಳನ್ನು ಮಾಡಿಕೊಳ್ಳುವ ಈ ರಾಜಕಾರಿಣಿಗಳು ಮೊದಲು ಈ ಸರ್ಜಿಕಲ್ ಸ್ಟ್ರೈಕ್ ಎಂಬ ಸಿನಿಮಾ ನೋಡಲಿ. ದೇಶಕ್ಕಾಗಿ ನೆತ್ತರು ಚಿಮ್ಮಿಸುವ ಆ ವೀರರ ತ್ಯಾಗದ ಮುಂದೆ ದೇಶಕ್ಕಾಗಿ ತಮ್ಮದೇನು ಕೊಡುಗೆ ಎಂದು ಪರಾಮರ್ಶಿಸಕೊಳ್ಳಲಿ.
ಸಿನಿಮಾ ಅಂದರೆ ಇವತ್ತು ನಾಲ್ಕು ಗಿಲ್ ಗಿಲ್ ಡ್ಯಾನ್ಸು, ನಾಲ್ಕು ಫೈಟು, ನಾಲ್ಕು ಫಾರಿನ್ ಸೀನು ಇಷ್ಟದ್ದರಾಯಿತು. ಸೂತ್ರ ಬದ್ಧ ಕಮರ್ಷಿಯಲ್ ಸಿನಿಮಾಗಳಿಗೆ ಇನ್ನೇನೂ ಬೇಡ. ಒಂದನ್ನು ನೋಡಿದರೆ ಇನ್ನೊಂದನ್ನು ನೋಡುವುದು ಬೇಡ. ಎಲ್ಲವೂ ಹಾಗೇನೆ. ಆದರೆ ನಿನ್ನೆ ನಾನು ನೋಡಿದ ಸಿನಿಮಾ ಬೇರೆ ಥರವಾಗಿತ್ತು. ಇದು ಇತ್ತೀಚೆಗೆ ಕೇಂದ್ರ ಸರಕಾರ ದಿಟ್ಟ ನಿಲುವು ತಳೆದು ಉಗ್ರಗಾಮಿಗಳನ್ನು ದಮನಿಸಲು ಕೈಗೊಂಡಿದ್ದ ಸರ್ಜಿಕಲ್ ಸ್ಟ್ರೈಕ್ ಕುರಿತು ಬಂದ ಚಿತ್ರವಾಗಿತ್ತು. ಸಿನಿಮಾ ನೋಡುತ್ತಿದ್ದಂತೆ ಅನೇಕ ನೆನಪುಗಳು ಸಾಲಾಗಿ ಸುಳಿದು ಹೋದವು.
ನಾನು ಪಿಯೂಸಿ ಪಾಸಾದ ನಂತರ ಇಂಡಿಯನ್ ಏರ್‌ಫೋರ್ಸ ಸೇರಲು ಹೋಗಿದ್ದೆ. ಎತ್ತರ ಕಡಿಮೆ ಎಂದು ನನ್ನ ಆಯ್ಕೆಯನ್ನು ನಿರಾಕರಿಸಲಾಗಿತ್ತು. ಹಾಗೆಂದು ನನ್ನ ಮಿಲಿಟರಿ ಆಸಕ್ತಿ ಕಡಿಮೆಯಾಗಿರಲಿಲ್ಲ. ಬೆಳಗಾವಿಯಲ್ಲಿದ್ದ ಮಿಲಿಟರಿ ಕ್ಯಾಂಪಿಗೆ ತಿಂಗಳಿಗೊಮ್ಮೆಯಾದರೂ ಹೋಗಿ ಬರುತ್ತಿದ್ದೆ. ನನಗೆ ಗೊತ್ತಿದ್ದವರೊಬ್ಬರು ಈ ಕ್ಯಾಂಪಿನಲ್ಲಿ ಅಡುಗೆಯವರಾಗಿದ್ದರು. ನನ್ನನ್ನು ವಿಜಿಟರ ಕಂ ಗೆಸ್ಟ ಎಂದು ಕರೆದು ಜವಾನರೊಂದಿಗೆ ಊಟ ಮಾಡಿಸಿ ಕಳಿಸುತ್ತಿದ್ದರು. ಬೋರ್ಡಿಂಗ್‌ನಲ್ಲಿ ಊಟ ಮಾಡಿ ಓದುತ್ತಿದ್ದ ನನಗೆ ಮಿಲಿಟರಿ ಊಟ ಆಗ ಅಪ್ಯಾಯಮಾನವಾಗಿತ್ತು. ಸೇನೆ ಸೇರುವ ಋಣ ಇಲ್ಲದಿದ್ದರೂ ಅಲ್ಲಿ ಊಟ ಮಾಡುವ ಋಣ ಇತ್ತು. ಅದಕ್ಕೇ ಸೇನೆಯನ್ನು ಕುರಿತು ಯಾವುದೇ ಸಿನಿಮಾ ಬಂದರೂ ಈಗಲೂ ತಪ್ಪದೇ ನೋಡುತ್ತೇನೆ.
ಈಗ ಸರ್ಜಿಕಲ್ ಸ್ಟ್ರೈಕ್ ಸಿನಿಮಾ ನೋಡಿ ಬಂದ ಒಂದು ತಾಸು ಅದರದೇ ಗುಂಗು. ಭಾರತೀಯ ಸೇನೆ ಬಳಸಿದ ಅತ್ಯಾಧುನಿಕ ಶಸ್ತ್ರಗಳು, ಸೇನಾ ಹೆಲಿಕಾಪ್ಟರುಗಳು, ಅವುಗಳನ್ನು ಬಳಸುವ ಚಾಕಚಕ್ಯತೆ, ನಮ್ಮ ಸೇನಾನಿಗಳ ಆತ್ಮ ಸ್ಥೈರ್ಯ, ಮುನ್ನುಗ್ಗುವ ರೀತಿ ನೋಡಿ ಅಭಿಮಾನ, ಗೌರವ, ಹೆಮ್ಮೆ ನನ್ನ ಮನಸ್ಸನ್ನು ತುಂಬಿತು. ನಾನು ಕನ್ನಡ ನಾಲ್ಕನೆಯ ತರಗತಿಯಲ್ಲಿದ್ದಾಗ ಚೀನಾ ನಮ್ಮ ದೇಶದ ಮೇಲೆ ದಾಳಿ ನಡೆಸಿತ್ತು. ಆಗ ನಮ್ಮ ಸೇನೆಯ ಹತ್ತಿರ ಸರಿಯಾದ ಶಸ್ತ್ರಗಳಿರಲಿಲ್ಲವಂತೆ. ಅದೇ ತ್ರೀ ನಾಟ್ ತ್ರೀ ಬಂದೂಕುಗಳು. ಹಳೇ ಕಾಲದ ಫಿರಂಗಿಗಳು. ಒಂದಷ್ಟು ಕೈ ಬಾಂಬುಗಳು ಬಿಟ್ಟರೆ ಇನ್ನೇನೂ ಇರಲಿಲ್ಲ. ಆದರೆ ಚೀನಾದ ಬತ್ತಳಿಕೆಯಲ್ಲಿ ನಾನಾ ಅಸ್ತ್ರಗಳಿದ್ದವು. ನಮ್ಮಲ್ಲಿ ಆಗ ದೇಶ ಭಕ್ತಿ ಇತ್ತು. ಸರಿಯಾದ ಆಯುಧಗಳಿರಲಿಲ್ಲ.
(ಚೀನಾದ ಮಾಜಿ ಪ್ರಧಾನಿ ಚೌಎನ್‌ಲಾಯ್ ಮತ್ತು ನಮ್ಮ ಮಾಜಿ ಪ್ರಧಾನಿ ನೆಹರೂ ಅವರ ಭಾವಚಿತ್ರ)
ಅವತ್ತು ಇಡೀ ಪ್ರಪಂಚಕ್ಕೇ ಭಾರತ ಶಾಂತಿ ಸಂದೇಶ ಸಾರುವ ಮಹದಾಸೆ ಇಟ್ಟುಕೊಂಡಿತ್ತು. ನೆಹರೂಜಿ ಪಂಚಶೀಲ ತತ್ವಗಳನ್ನು ಜಗತ್ತಿಗೆ ಸಾರಿದರು. ಆ ಕಾರಣಕ್ಕೇ ಗಡಿ ಕಾಯುವ ನಮ್ಮ ಸೇನೆಗೂ ನಾಗರಿಕ ಕಾಯ್ದೆ ಕಾಪಾಡುವ ಪೋಲೀಸಿಗೂ ಹೆಚ್ಚು ವ್ಯತ್ಯಾಸವಿರಲಿಲ್ಲ. ಅದರ ಬೆನ್ನಿಗೇ ೧೯೬೨ ರಲ್ಲಿ ಚೀನಾದ ಪ್ರಧಾನಿ ಚೌಎನ್‌ಲಾಯ್ ಅವರು ನಮ್ಮ ಪ್ರಧಾನಿ ನೆಹರೂರ ಕೈಕುಲುಕಿ ‘ಹಿಂದೀ-ಚೀನೀ ಭಾಯೀ ಭಾಯೀ’ ಅಂದರು. ಚೀನಾ ಹೇಳಿದ ಹಾಗೆ ಮುಂದೆ ಇನ್ನೂ ಅನೇಕ ರಾಷ್ಟ್ರಗಳು ನಮಗೆ ಭಾಯೀ ಭಾಯೀ ಅನ್ನಬಹುದು ಎಂದು ನೆಹರೂ ಭಾವಿಸಿದರು. ಆ ಖುಶಿಯಲ್ಲೇ ನಮ್ಮವರು ತೇಲಿ ಹೋದರು.
ಅದನ್ನೇ ಕಾಯುತ್ತಿದ್ದ ಆ ಕೆಂಪು ರಂಗಿನ ಚೀನಾ ತನ್ನ ಸೇನೆಯನ್ನು ನಮ್ಮ ಗಡಿಯೊಳಗೆ ನುಗ್ಗಿಸಿತು. ದಾಳಿಯ ಅರಿವೇ ಇಲ್ಲದ ನಮ್ಮ ಸೇನೆ ತತ್ತರಿಸಿತು. ಚೀನಿಯರ ಕೈಯಲ್ಲಿ ಸುಸಜ್ಜಿತ ಅಸ್ತ್ರಗಳು. ನಮ್ಮ ಸೇನೆಯ ಕೈಯಲ್ಲಿ ಓಬೀರಾಯನ ಕಾಲದ 303 ಮಾದರಿ ಬಂದೂಕುಗಳು. ಅವು ಯುದ್ಧಾಸ್ತ್ರಗಳಾಗಿರಲಿಲ್ಲ. ಕೇವಲ ಚಿಕ್ಕ ಪುಟ್ಟ ಘರ್ಷಣೆಗೆ ಉಪಯೋಗಿಸುವ ಬಂದೂಕುಗಳು. ಶಾಂತಿಯೇ ನಮ್ಮ ಪರಮ ಅಸ್ತ್ರ ಎಂದು ಹೇಳಿಕೊಂಡು ಸ್ವಾತಂತ್ರ್ಯ ಗಳಿಸಿದ್ದ ನಮ್ಮ ದೇಶ ಅದೇ ಕೊನೆಯಾಸ್ತ್ರ ಎಂದೂ ಭಾವಿಸಿತ್ತು. ಆದರೆ ಮಂತ್ರಕ್ಕೆ ಮಾವಿನ ಕಾಯಿ ಬೀಳುವುದಿಲ್ಲ ಎಂಬ ಅರಿವು ಈ ಯುದ್ಧದಿಂದ ಗೊತ್ತಾಯಿತು. ಚೀನಾ ಈ ಯುದ್ಧದಲ್ಲಿ ನಮ್ಮ ಕೈಲಾಸ ಪರ್ವತ, ಗೌರೀ ಶಂಕರ [ಎವರೆಸ್ಟ ಶಿಖರ]ವನ್ನು ಕಿತ್ತುಕೊಂಡಿತು. ಉತ್ತರದ ನಮ್ಮ ಗಡಿಯಲ್ಲಿ ನಮ್ಮ ಬಹುಪಾಲು ಯೋಧರು ಬಲಿದಾನ ನೀಡಿದರು. ತನ್ನ ಪಂಚಶೀಲ ತತ್ವಗಳಿಂದ ಇಡೀ ಜಗತ್ತನ್ನೇ ಗೆಲ್ಲಬಹುದೆಂಬ ತರ್ಕದಲ್ಲಿದ್ದ ನೆಹರೂಜಿಗೆ ಅದೊಂದು ದೊಡ್ಡ ಆಘಾತ. ಶಾಂತಿಯೇ ನಮ್ಮ ಅಸ್ತ್ರ ಎಂದು ಹೇಳಿಕೊಂಡು ಬಂದಿದ್ದ ನಮ್ಮ ನಾಯಕರಿಗೆ ಹೊರ ಜಗತ್ತು ಹಾಗಿಲ್ಲ ಎಂಬ ಅರಿವು ಮೂಡುವುದರೊಳಗೆ ಉತ್ತರದ ಒಂದಷ್ಟು ನಮ್ಮ ನೆಲ ಚೀನಾದ ಪಾಲಾಗಿತ್ತು. ಭಾಯೀ ಭಾಯೀ ಅಂದವರು ‘ಮೂವ್ ಮೆ ರಾಮ್ ರಾಮ್, ಬಗಲ್ ಮೆ ಚೂರಿ’ ಎಂಬುದನ್ನು ಸಾಬೀತು ಮಾಡಿ ತೋರಿಸಿದ್ದರು. ಸ್ವಾತಂತ್ರ್ಯ ಸಿಕ್ಕು ಹದಿನೈದರ ಹರೆಯದಲ್ಲಿದ್ದ ಭಾರತೀಯರು ಆಗ ಚೀನಾದೊಡನೆ ಸಂಧಾನ ಮಾಡಿಕೊಳ್ಳುವ ಅನಿವಾರ್ಯತೆ ಬಂತು. ಒಂದು ರೀತಿಯಲ್ಲಿ ಅದು ಭಾರತಕ್ಕೆ ಒಂದು ಪಾಠವಾಯಿತು. ಮಂತ್ರದಿಂದ ಮಾವಿನಕಾಯಿ ಉದುರುವುದಿಲ್ಲ ಎಂಬ ಸತ್ಯ ಸ್ವತಂತ್ರ -ಭಾರತಕ್ಕೆ ಅರಿವಾಯಿತು.
ಹೈಸ್ಕೂಲಿಗೆಂದು ಬೆಳಗಾವಿಗೆ ಬಂದಾಗ ಪಾಕಿಸ್ತಾನದೊಂದಿಗೆ ಮೊದಲ ಯುದ್ಧ ನಡೆದಿತ್ತು. ಬೆಳಗಾವಿಯ ಮಿಲಿಟರಿ ಕ್ಯಾಂಪಿನಿಂದ ಯುದ್ಧಕ್ಕೆಂದು ಸೈನಿಕರನ್ನು ತುಂಬಿಕೊಂಡು ಸಾಲಾಗಿ ಹೊರಟ ಸೇನಾ ಟ್ರಕ್ಕುಗಳು, ಮಷಿನ್ ಗನ್ ಹೊತ್ತ ವಾಹನಗಳು, ಯುದ್ಧ ಟ್ಯಾಂಕುಗಳನ್ನು ಸಾಗಿಸುವ ವಾಹನಗಳು ಸಾಲಾಗಿ ಪೂನಾ ಕಡೆಗೆ ಹೋಗುತ್ತಿದ್ದವು. ನಾವು ರಸ್ತೆ ಬದಿ ನಿಂತು ಕುತೂಹಲದಿಂದ ನೋಡುತ್ತಿದ್ದೆವು. ಮತ್ತು ಸೈನಿಕರಿಗೆ ಗೆದ್ದು ಬನ್ನಿ ಎಂದು ಹೃದಯ ತುಂಬಿ ಕೈ ಬೀಸುತ್ತಿದ್ದೆವು. ಅಲ್ಲದೆ ಸೈನಿಕರು ಗುಂಡು ಹಾರಿಸುವುದನ್ನು ಅಭ್ಯಾಸ ಮಾಡುವ ಮಣ್ಣು ದಿನ್ನೆಯೂ ನಾನಿದ್ದ ಹಾಸ್ಟೆಲ್ಲಿನ ಬಳಿಯೇ ಇತ್ತು. ನಾವು ದೂರ ನಿಂತು ಅದನ್ನು ನೋಡುತ್ತಿದ್ದೆವು. ಅಭ್ಯಾಸ ನಡೆದಾಗ ಕೆಂಪು ನಿಶಾನೆಗಳನ್ನು ಅಲ್ಲಲ್ಲಿ ನೆಲಕ್ಕೆ ಚುಚ್ಚಿರುತ್ತಿದ್ದರು. ಅದನ್ನು ದಾಟಿ ಯಾರೂ ಒಳಗೆ ಹೋಗುವಂತಿರಲಿಲ್ಲ. ಆಗೆಲ್ಲ ಸೈನಿಕರ ಬಳಿ 3.0.3 ಮಾದರಿ ರೈಫಲ್‌ಗಳಿರುತ್ತಿದ್ದವು.
ನಮ್ಮವರು ಚೀನಾದೊಡನೆ ಹೋರಾಡಿದ್ದು ಇದೇ 3.0.3 ಬಂದೂಕುಗಳಿಂದ ಎಂದು ಈಗ ನೆನಪಿಸಿಕೊಂಡರೆ ಅಯ್ಯೋ ಅನಿಸುತ್ತದೆ. ಎಕೇ -47 ರೈಫಲ್ ಆಗಿನ್ನೂ ಬಂದಿರಲಿಲ್ಲ. ಸುಧಾರಿತ ಬಂದೂಕುಗಳು ನಮ್ಮವರ ಕೈಗೆ ಸಿಕ್ಕಿದ್ದರೆ ಹೋರಾಟದ ರೀತಿಯೇ ಬದಲಾಗುತ್ತಿತ್ತು. ಅದನ್ನರಿತ ನಮ್ಮ ಸರಕಾರ ಸೈನಿಕರ ಕೈಗೆ ಒಂದಷ್ಟು ಹೊಸ ಅಸ್ತ್ರಗಳನ್ನು ಕೊಟ್ಟಿತು. ಅದರಿಂದ ಪಾಕಿಸ್ತಾನದೊಂದಿಗಿನ ಗೆಲವು ನಮ್ಮದಾಯಿತು. ಇದರಿಂದ ಸೇನೆಯ ಕೈಗೆ ಅತ್ಯುತ್ತಮ ಶಸ್ತ್ರಗಳನ್ನು ಕೊಟ್ಟಲ್ಲಿ ಶತ್ರುಗಳು ನಮ್ಮತ್ತ ತಿರುಗಿ ನೋಡಲೂ ಹೆದರುತ್ತಾರೆ ಎಂದು ಖಚಿತಗೊಂಡಿತು.
ಆ ಕಾಲವನ್ನು ನೋಡಿದ ನಮ್ಮಂಥವರಿಗೆ ಈಗ ಭಾರತ ಎಷ್ಟು ಬದಲಾಗಿದೆ ಎಂದು ಈ ಸಿನಿಮಾ ನೋಡಿದರೆ ಗೊತ್ತಾಗುತ್ತದೆ. ಆಗಿನಂತೆ ಈಗ ಬರೀ ಶಾಂತಿ ಮಂತ್ರ ಹೇಳುತ್ತ ಕೂಡುವ ದೇಶದ ನಾಯಕರೂ ಇಲ್ಲ. ಕಾಲಕ್ಕೆ ತಕ್ಕ ಹಾಗೆ ಎಲ್ಲವೂ ಬದಲಾಗಬೇಕು. ಈಗ ಭಾರತವೂ ಬದಲಾಗಿದೆ. ಸೇನೆಯ ಕೆಚ್ಚು, ಆತ್ಮ ಸ್ಥೈರ್ಯ, ತಂತ್ರಗಳು, ದೂರದೃಷ್ಟಿ ಅದಕ್ಕೆ ತಕ್ಕ ಹಾಗೆ ಅಸ್ತ್ರಗಳೂ ಬದಲಾಗಿವೆ. ಬದಲಾದ ಭಾರತ ಮುನ್ನಡೆಸುವ ಸರಿಯಾದ ನಾಯಕ ಬರಬೇಕಷ್ಟೆ. ಇತ್ತೀಚಿನ ದಿನಗಳಲ್ಲಿ ಅನೇಕ ನಾಯಕರು ದೇಶದ ಬಗ್ಗೆ ಕಾಳಜಿ ಇದ್ದವರಿದ್ದಾರೆ. ಪಾಕಿಸ್ತಾನದೊಂದಗಿನ ಮೊದಲ ಯುದ್ಧದಲ್ಲಿ ಲಾಲ ಬಹಾದ್ದೂರ್ ಶಾಸ್ತ್ರಿಯವರು, ನಂತರದ ಯುದ್ಧದಲ್ಲಿ ಇಂದಿರಾ ಗಾಂಧಿ, ಫೋಕ್ರಾನ್‌ನಲ್ಲಿ ಅಣುಬಾಂಬ್ ಸಿಡಿಸಿದ ಅಟಲ್ ಬಿಹಾರಿ ವಾಜಪೇಯಿ ಅವರಂಥವರು ಗಟ್ಟಿ ನಿಲುವು ತಳೆದರು. ರಾಜಕಾರಿಣಿಗಳಿಂದ ಜನ ಸೇವೆ ಆಗಬೇಕು. ಅದು ಅವರಿಗೆ ದಂಧೆ ಆಗಬಾರದು. ವೃತ್ತಿ ಆಗಬಾರದು. ಹಾಗೇ ಕೈಗೆ ಸಿಕ್ಕ ಅಧಿಕಾರ ಮಗನಿಂದ ಮಗನಿಗೆ ಅನ್ನುವ ಧೂರ್ತತೆಯೂ ಹೋಗಬೇಕು.
ಏನೇ ಇರಲಿ. ಇವತ್ತಿನ ರಾಜಕಾರಣಿಗಳು, ಭವಿಷ್ಯದ ರಾಜಕಾರಿಣಿಗಳು ಒಮ್ಮೆ ಸೈನಿಕರ ಕೆಚ್ಚನ್ನು ತೋರಿಸುವ ಈ ಸರ್ಜಿಕಲ್ ಸ್ಟ್ರೈಕ್ ಸಿನಿಮಾ ನೋಡಲಿ. ಇವರ ದೇಶ ಪ್ರೀತಿಯ ಮುಂದೆ ತಮ್ಮ ಜಾಗ ಏನು ಎಂಬುದು ಅರ್ಥವಾದರೂ ಆಗಲಿ.
https://www.youtube.com/watch?v=XorJ7dCHR3Y&feature=youtu.be
Related Article –
- ಸದ್ದಿಲ್ಲದೇ ಸುದ್ದಿಯಾದ ‘URI – ಸರ್ಜಿಕಲ್ ಸ್ಟ್ರೆಕ್’ ಸಿನಿಮಾ
- ಇಂಡಿಯಾ ಅಂದರೆ ಹಿಂದೀ…! ಹಿಂದೀ ಅಂದರೆ ಇಂಡಿಯಾ…!
- ”ಪೂವಲ್ಲಿ” ನಾಡಿನ ದೇಶ ಭಕ್ತರು
ಲೇಖಕರು : ಹೂಲಿಶೇಖರ
(ಖ್ಯಾತ ಚಿತ್ರ ಸಂಭಾಷಣಾಕಾರ- ನಾಟಕಕಾರ)