ಯುವಜನತೆಗೆ ಏನಾಗಿದೆ?

ಇಂದಿನ ಯುವ ಜನತೆಗೆ ಕ್ರಿಕೆಟ್, ಸಿನಿಮಾಗೆ ಇರೋ ಹುಚ್ಚು ಸಾಹಿತ್ಯ, ಚಿತ್ರಕಲೆಗಳಲ್ಲಿ ಆಸಕ್ತಿಯಿಲ್ಲ. ಮಾನವೀಯ ಮೌಲ್ಯಗಳನ್ನು ಬಿತ್ತುವ ಸಾಹಿತ್ಯದ ಓದು, ನಾಟಕ, ಸಂಗೀತ, ಚಿತ್ರಕಲೆ, ಹಾಡು ಹಸೆ, ನೃತ್ಯ, ಬರಹ ಇನ್ನೂ ಮುಂತಾದವುಗಳಲ್ಲಿ ಯುವಶಕ್ತಿಯನ್ನು ಒಳಗೊಳ್ಳುವ ಬಗೆ ಹೇಗೆ ? ಚಿಂತನಕಾರ ವಡ್ಡಗೆರೆ ನಾಗರಾಜಯ್ಯ ಅವರ ಈ ಲೇಖನವನ್ನು ತಪ್ಪದೆ ಮುಂದೆ ಓದಿ…

ನಮ್ಮ ಯುವ ಜನತೆ ಕ್ರಿಕೆಟ್ ತಾರೆಯರ, ಸಿನಿಮಾ ಹೀರೋಗಳ, ಮತೀಯವಾದಿ ಸಂಘಟನೆಗಳ, ರಾಜಕೀಯದ ಇನ್ನೂ ಮುಂತಾದ ಸಂಗತಿಗಳ ಬಗ್ಗೆ ಯಾವ ಪರಿಯಲ್ಲಿ enmass ಆಗಿ ಅಮಲೇರಿಸಿಕೊಂಡು ಬಳಲುತ್ತಿದೆ ಎಂಬುದು ನನಗೆ RCB ಕ್ರಿಕೆಟ್ ಗೆಲುವಿನ ಆಚರಣೆಯಲ್ಲಿ ತೊಡಗಿರುವ ಯುವಕ- ಯುವತಿಯರ ವರ್ತನೆಗಳಿಂದ ಅನುಭವಕ್ಕೆ ಬಂತು. ನನಗಾದ ಅನುಭವವನ್ನು ಎರಡು ಪ್ರತ್ಯಕ್ಷ ಘಟನೆಗಳಿಂದ ತಿಳಿಸಲು ಬಯಸುತ್ತೇನೆ.

ಘಟನೆ ೧ :

ನಾನು ಗಾಢ ನಿದ್ದೆಯಲ್ಲಿದ್ದಾಗ ಕೋಣೆಯ ಕಿಟಕಿ ಬಳಿಯಲ್ಲಿಯೇ ಪಟಾಕಿ ಹಚ್ಚಿದಂತೆ ಢಂ ಢಮಾರ್ ಶಬ್ದವನ್ನು ಕೇಳಿ ದಡಕ್ಕನೆ ಎಚ್ಚರಗೊಂಡು ಎದ್ದು ಕುಳಿತೆ. ಕಿಟಕಿಯಾಚೆಗೆ ನೋಡಿದೆ ಹಗಲೊತ್ತಿನಂತೆ ಬೆಳಕು. ಪಟಾಕಿಗಳ ರಾಸಾಯನಿಕ ಘಾಟು ಮೂಗಿಗೆ ಅಡರಿತು. ಕ್ರಿಕೆಟ್ ಆಟವನ್ನು ನನ್ನ ಜೀವಮಾನದಲ್ಲಿ ಒಮ್ಮೆಯೂ ನೋಡಿರದ ನಾನು RCB ಸ್ಪರ್ದೆ ನಡೆಯುತ್ತಿರುವ ಕಡೆಗೆ ಕನಿಷ್ಠ ಗಮನ ಹರಿಸಿದವನಲ್ಲ. ಅಷ್ಟು ಹೊತ್ತಿನಲ್ಲಿ ನನ್ನ ಫ್ರೆಂಡತಿ ರಮ್ಯಾ ಶಕ್ಯ ಅವರಿಂದ ಕ್ರಿಕೆಟ್‌ ಆಟದ ಗೆಲುವಿನ ಸಂಭ್ರಮದ ಆಚರಣೆ ಅದೆಂದು ತಿಳಿಯಿತು. ತಕ್ಷಣವೇ ನನಗೆ ಶ್ವಾಸಕೋಶ, ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರಿಗೆ, ನಮಗೂ ಸೇರಿದಂತೆ ಒಟ್ಟಾರೆ ಪರಿಸರದ ಮೇಲೆ ಪಟಾಕಿಗಳನ್ನು ಸುಡುವ ಜನ ವಾಯುಮಾಲಿನ್ಯ, ಶಬ್ದ ಮಾಲಿನ್ಯ, ಜಲಮಾಲಿನ್ಯ ಉಂಟುಮಾಡಿ ಎಷ್ಟೊಂದು ಅನಾರೋಗ್ಯಕ್ಕೆ ಈಡುಮಾಡುತ್ತಿದ್ದಾರೆಂದು ಆತಂಕವಾಯಿತು.

ಘಟನೆ ೨ :

ಇವತ್ತು ಮಧ್ಯಾಹ್ನ ೩:೩೦ ರ ಸುಮಾರಿನಲ್ಲಿ ಬೆಂಗಳೂರಿನ ಕೆಂಗೇರಿ ಮೆಟ್ರೋ ರೈಲು ನಿಲ್ದಾಣದಿಂದ ಮೆಟ್ರೋ ರೈಲಿನಲ್ಲಿ ಪ್ರೆಸ್ ಕ್ಲಬ್ ಕಡೆಗೆ ಹೋಗಲೆಂದು ಪ್ರಯಾಣಿಸುತ್ತಿದ್ದೆ. ನೂರಾರು ಯುವಕರು ರೈಲಿನಲ್ಲಿ ಕಿಕ್ಕಿರಿದು ತುಂಬಿಕೊಂಡು RCB RCB… ಕೊಹ್ಲಿ ಕೊಹ್ಲಿ ಎಂದು ಇಡೀ ಬೋಗಿಯ ಯುವಕ ಯುವತಿಯರು ಒಂದೇ ಸಮನೆ ಕಿವಿಗಳು ಗಡಚಿಕ್ಕುವಷ್ಟು ಅರಚುತ್ತಿದ್ದರು. ಅವರ ಶಿಳ್ಳೆ ಕೇಕೆ ದೊಂಬಿಯನ್ನು ಕಂಡು ಸಹಪ್ರಯಾಣಿಕನೊಬ್ಬನನ್ನು ‘ಇವರೆಲ್ಲಾ ಹೀಗೆ ಕೂಗಾಡುತ್ತಿರುವುದು ಯಾಕೆ ? ಇವರು ಹೋಗುತ್ತಿರುವುದು ಎಲ್ಲಿಗೆ?” ಎಂದು ವಿಚಾರಿಸಿದೆ. RCB ತಂಡದ ಆಟಗಾರರನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೋಡಲು ವಿಧಾನಸೌಧದ ಕಡೆಗೆ ಹೋಗುತ್ತಿದ್ದಾರೆ” ಎಂಬ ಉತ್ತರ ಬಂತು. ಅಂತೂ ವಿಧಾನಸೌಧದ ಎದುರು ಮೆಟ್ರೋ ಇಳಿದು ಆ ಕಿಕ್ಕಿರಿದ ಯುವದಟ್ಟಣೆಯ ನಡುವೆ ಸಿಲುಕಿಕೊಂಡು ಪ್ರಯಾಸಪಟ್ಟುಕೊಂಡು ಹೊರಗೆ ಬಂದೆ. ಪ್ರೆಸ್ ಕ್ಲಬ್ ಕಡೆಗೆ ನಾನು ದಾಟಿಕೊಂಡು ಹೋಗಲು ಸಾಧ್ಯವೇ ಇರದಷ್ಟು ರಸ್ತೆ ಬಂದ್ ಆಗಿತ್ತು. ವಾಪಸ್ ಹೋಗೋಣವೆಂದರೆ ಮೆಟ್ರೋ ಸಂಚಾರ ಕೂಡಾ ಬಂದ್ ಆಗಿತ್ತು ! ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉಂಟಾದ ನೂಕುನುಗ್ಗಲಿನಲ್ಲಿ ಕಾಲ್ತುಳಿತಕ್ಕೆ ಸಿಕ್ಕಿ ಹತ್ತನ್ನೆರಡು ಯುವಕರು ಸತ್ತು ಹೋಗಿದ್ದಾರೆಂಬ ಸುದ್ದಿ ಜನರ ನಡುವೆ ಕೇಳಿಬರುತ್ತಿತ್ತು ..! ಬದುಕಿ ಬಾಳಬೇಕಾದ ಯುವಕರು ಪ್ರಾಣ ಕಳೆದುಕೊಂಡರೇ…?! ಅಯ್ಯೋ..

ನಮ್ಮ ಸಮಾಜದಲ್ಲಿ ಒಪ್ಪೊತ್ತಿನ ಊಟಕ್ಕೆ ಗತಿಯಿಲ್ಲದೆ, ಮೈಗೆ ಬಟ್ಟೆ ನೆತ್ತಿಯ ಮೇಲೆ ಆಸರೆಗೂ ಗತಿಯಿರದೆ ಕೋಟ್ಯಾಂತರ ಜನ ನರಳುತ್ತಿದ್ದಾರೆ. ನಮ್ಮ ಇಂದಿನ ಅಪಾರ ಯುವಕ ಯುವತಿಯರಿಗೆ ಇಂತಹ ಸಂಕಟಗಳು ಅರ್ಥವಾಗುತ್ತಿಲ್ಲ. ಕ್ರಿಕೆಟ್ ಗೆಲುವಿನ ಸಂಭ್ರಮಾಚರಣೆಯ ಅಮಲಿನಲ್ಲಿ ಲಯವಾಗುತ್ತಿರುವ ದೊಡ್ಡ ಯುವಶಕ್ತಿಯನ್ನು ಹಾಗೂ ವ್ಯಯವಾಗುತ್ತಿರುವ ಅಪಾರ ಮೊತ್ತದ ಹಣವನ್ನು ಬಡವರಿಗೆ ಮನೆ, ವಿದ್ಯಾರ್ಥಿಗಳಿಗೆ ಶಾಲೆ, ಗ್ರಂಥಾಲಯ, ರಸ್ತೆ, ಚರಂಡಿ, ಮುಂತಾದವುಗಳಿಗೆ ಸರಿಯಾಗಿ ವ್ಯಯಿಸಿದ್ದರೆ ಲಕ್ಷಾಂತರ ಕುಟುಂಬಗಳ ಬದುಕು ಹಸನಾಗುತ್ತಿತ್ತು. ಕಾರ್ಪೊರೇಟ್ ಬಂಡವಾಳಶಾಹಿಗಳನ್ನು ಆರ್ಥಿಕವಾಗಿ ಮತ್ತಷ್ಟು ಕೊಬ್ಬಿಸುವ ಮತ್ತು ಅನೇಕ ದೇಶೀಯ ಕ್ರಿಕೆಟ್‌ ಆಟಗಳನ್ನು ನುಂಗಿ ನೀರು ಕುಡಿದಿರುವ ಕ್ರಿಕೆಟ್ ಆಟವನ್ನು ಪ್ರಚೋದಿಸಿ ಬೆಳೆಸುವುದಾಗಲೀ , ಆಟದ ವಿಜಯಾಚರಣೆಯ ಈ ಪರಿಯ ಅಮಲಾಗಲೀ ನಮಗೆ ಬೇಕೆ ? ಹಳ್ಳಿಗಾಡಿನ ಕುಗ್ರಾಮಗಳಿಂದ ಹಿಡಿದು ಮೆಟ್ರೋಪಾಲಿಟನ್ ಮಹಾನಗರಗಳವರೆಗೆ ನಮ್ಮ ಯುವಕ ಯುವತಿಯರಿಗೆ ಇಂತಹ ಹುಚ್ಚು ಹಿಡಿದಿದೆ. ಮಾನವೀಯ ಮೌಲ್ಯಗಳನ್ನು ಬಿತ್ತುವ ಸಾಹಿತ್ಯದ ಓದು, ನಾಟಕ, ಸಂಗೀತ, ಚಿತ್ರಕಲೆ, ಹಾಡು ಹಸೆ, ನೃತ್ಯ, ಬರೆಹ ಇನ್ನೂ ಮುಂತಾದವುಗಳಲ್ಲಿ ಯುವಶಕ್ತಿಯನ್ನು ಒಳಗೊಳ್ಳುವ ಬಗೆ ಹೇಗೆ ?


  • ವಡ್ಡಗೆರೆ ನಾಗರಾಜಯ್ಯ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW