ಆರಾಧನೆ ಕೃತಿ ಪರಿಚಯ

ಲೇಖಕ ದಯಾನಂದ ತೋರ್ಕೆಯವರ ಅನೇಕ ಜನಪ್ರಿಯ ಕಾದಂಬರಿಗಳಲ್ಲಿ ಆರಾಧನೆಯೂ ಒಂದು. ಹೆಸರೇ ಸೂಚಿಸುವಂತೆ ಭಕ್ತಿ, ಪ್ರೇಮ, ಕಲೆ ಹೀಗೆ ಎಲ್ಲದರ ಆರಾಧನೆಯೂ ಈ ಹೃದಯಂಗಮ ಕಥೆಯಲ್ಲಿದೆ. ಅವರ ಆರಾಧನೆ ಕೃತಿಯ ಕುರಿತು ಮಾಲತಿ ರಾಮಕೃಷ್ಣ ಭಟ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಕೃತಿ  : ಆರಾಧನೆ
ಲೇಖಕರು : ದಯಾನಂದ ತೋರ್ಕೆ
ರಜತ ಸಾಹಿತ್ಯ ಶಿವಮೊಗ್ಗ
ಮುದ್ರಣದ ವರ್ಷ: ೨೦೧೦
ಪುಟಗಳು: ೧୭೪
ಬೆಲೆ: ರೂ. ೯೦

ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಭಾಗ್ಯ ವಿಲ್ಲದ ಕಾರಣ ಶಾರದಾ ಸಾಯಿಬಾಬಾ ಮಂದಿರಕ್ಕೆ ಬಂದಿದ್ದಳು. ದೇವಸ್ಥಾನ ಭಕ್ತರ ಪಾಲಿನ ನಂದನವನ. ಅಲ್ಲಿದ್ದಾಗ ಅವರ ಮನಸ್ಸಿಗಾಗುತ್ತಿದ್ದ ಸಮಾಧಾನ ವರ್ಣಿಸಲಸದಳ.

ಶಾರದಾಳ ಗಂಡ ಗೋಪಾಲಯ್ಯ ತಂದೆಯಿಂದ ಬಂದ ಅಪಾರ ಆಸ್ತಿಯ ಉಸ್ತುವಾರಿಯ ಜೊತೆಗೆ ಕಿರಾಣಿ ಅಂಗಡಿ ನಡೆಸುತ್ತಿದ್ದನು. ಸಾತ್ವಿಕ ಗುಣದವನಾದರೂ ವ್ಯಾಪಾರ ವ್ಯವಹಾರದಲ್ಲಿ ಚಾಣಾಕ್ಷನಾಗಿದ್ದನು. ಅವನ ತಾಯಿ ರುಕ್ಮಿಣಮ್ಮ ಸೊಸೆಯನ್ನು ಚೆನ್ನಾಗಿಯೇ ನೋಡಿ ಕೊಳ್ಳುತ್ತಿದ್ದರೂ, ಇನ್ನೂ ಮಕ್ಕಳಿಲ್ಲದ ಕೊರಗು ಕಾಡುತ್ತಿತ್ತು.ಹರಕೆ -ಪೂಜೆ- ಡಾಕ್ಟರು ಎಂದೆಲ್ಲಾ ಯಾರೇನೇ ಹೇಳಿದರೂ ಮಾಡಿಸುತ್ತಿದ್ದರು. ಅದು ಫಲಿಸದಾದಾಗ ನಿರಾಶೆಯಿಂದ ಬೇಸರಿಸುತ್ತಿದ್ದರು.

ತಂಬೂರಿ ದಾಸಯ್ಯನೊಬ್ಬ ನುಡಿದ ಭವಿಷ್ಯ ನಿಜವಾಗಿ ಪವಾಡವೆಂಬಂತೆ ವರ್ಷವೆನ್ನುವಷ್ಟರಲ್ಲಿ ಶಾರದಾ ಗಂಡು ಮಗುವನ್ನು ಹೆತ್ತಿದ್ದು, ಆ ಮನೆಯಲ್ಲಿ ಸಂಭ್ರಮ ತುಂಬಿತ್ತು.ಕೃಷ್ಣ ಎಂದು ಹೆಸರನ್ನಿಟ್ಟ ಆ ಮಗುವಿನ ಜಾತಕವನ್ನು ಶಾಸ್ತ್ರಿಗಳಿಗೆ ತೋರಿಸಿದಾಗ ಆತ ಒಬ್ಬ ಕಲಾವಿದನಾಗಿ ಬೆಳೆಯುತ್ತಾನೆ. ಎಂದು ಹೇಳುತ್ತಾರೆ.

ಮುಂದೆ ಶಾಲೆಗೆ ಹೋಗುವಾಗಲೂ ಕೃಷ್ಣನಿಗೆ ವಿದ್ಯೆ ಒಲಿಯದೇ ಸಂಗೀತವೇ ಇಷ್ಟವಾಗುತ್ತಿತ್ತು. ಅವನು ಚೆನ್ನಾಗಿ ಓದಿ ಆಫೀಸರ್ ಆಗಲಿ ಎನ್ನುವ ಅವನಪ್ಪ ನಿಗೆ ಮಗ ಕಲಾವಿದನಾಗುವುದು ಸ್ವಲ್ಪವೂ ಸಂತಸ ಕೊಡುವ ವಿಷಯವಾಗಿರಲಿಲ್ಲ. ಆದರೆ ದೇವರು ಅವನಿಗೆ ಕೊಟ್ಟ ಪ್ರತಿಭೆಯನ್ನು ನಾವು ತಿರಸ್ಕರಿಸುವುದು ಸರಿಯಲ್ಲ ಎಂದು ಶಾರದಾ ಗಂಡನನ್ನು ಒಪ್ಪಿಸಿ ಸಂಗೀತ ವಿದ್ವಾಂಸರಾದ ಸುಬ್ರಮಣ್ಯ ಆಚಾರ್ಯರ ಬಳಿ ಕಲಿಯಲು ಅವನನ್ನು ಸೇರಿಸುತ್ತಾಳೆ.

ಅವನು ಹುಮ್ಮಸ್ಸಿನಿಂದ ಸಂಗೀತ ಕಲಿಯುತ್ತಾನೆ. ಅಲ್ಲಿ ಗುರುಗಳ ಮೊಮ್ಮಗಳು ಭರತ ನಾಟ್ಯ ಕಲಾವಿದೆ ಸಂಗೀತಾ ಅವನಿಗೆ ಹತ್ತಿರವಾಗುತ್ತಾಳೆ. ಹೀಗೆ ವರ್ಷಗಳು ಕಳೆದು ಅವನೀಗ ೨೨ ರ ತರುಣ ನಾಗಿರುತ್ತಾನೆ. ಇತ್ತ ಮನೆಯಲ್ಲಿ ಮಗ ದುಡಿಯದೇ ಇಡೀದಿನ ಹಾಡುವುದನ್ನು ಕೇಳಿ ತಂದೆಗೆ ಕೋಪ. ಆಗಾಗ ಶಾರದಾಳಿಗೆ ನಿನ್ನ ಮುದ್ದಿನಿಂದಲೇ ಅವನು ಹಾಳಾಗು ತ್ತಿದ್ದಾನೆಂದು ಜಗಳ ಮಾಡುತ್ತಾ, ಮನೆಯ ನೆಮ್ಮದಿ ಕೆಡಿಸುತ್ತಾರೆ.ಅತ್ತೆಯೂ ತೀರಿದ ತರುವಾಯ ಶಾರದಾ ಕೊರಗಿನಿಂದ ಹಾಸಿಗೆ ಹಿಡಿಯುತ್ತಾಳೆ.

ಕೃಷ್ಣನಿಗೆ ಮದುವೆ ಮಾಡಿ ಮನೆಗೆ ಸೊಸೆ ಬಂದರೆ ಹೆಂಡತಿಯ ಪ್ರೀತಿಯಲ್ಲಿ ಅವನಿಗೆ ಜವಾಬ್ದಾರಿ ಬರ ಬಹುದು ಎಂದು ಶಾರದಾ ತನ್ನ ಅಣ್ಣನ ಮಗಳು ಪಾರ್ವತಿಯನ್ನು ಕೇಳಲು ಗಂಡನನ್ನು ತವರಿಗೆ ಕಳಿಸು ತ್ತಾಳೆ. ಅವರು ಸಂತೋಷದಿಂದ ಮಗಳನ್ನು ಕೊಟ್ಟು ಮದುವೆ ಮಾಡಲು ಒಪ್ಪಿ ಕೊಳ್ಳುತ್ತಾರೆ. ವಿಷಯ ಕೇಳಿ ಕಂಗಾಲಾದ ಕೃಷ್ಣ ತಾನು ಈಗಾಗಲೇ ಸಂಗೀತಾಳನ್ನು ಪ್ರೀತಿಸುತ್ತಿರುವ ವಿಷಯವನ್ನು ತಾಯಿ ತಂದೆಗೆ ತಿಳಿಸಿದಾಗ, ಸಿಟ್ಟಿಗೆದ್ದ ಗೋಪಾಲಯ್ಯ ನನ್ನ ಆಸ್ತಿಲ್ಲಿ ಕವಡೆ ಕಾಸು ಕೂಡ ನಿನಗೆ ಸಿಗುವುದಿಲ್ಲ. ಮನೆ ಬಿಟ್ಟು ಹೊರಟು ಹೋಗೆಂದು ಕೂಗಾಡುತ್ತಾನೆ.

ಅಲ್ಲಿಂದ ಸೀದಾ ಗುರುಗಳ ಮನೆಗೆ ಬಂದ ಕೃಷ್ಣ ನಡೆದ ಸುದ್ದಿಯನ್ನು ಅವರಿಗೆ ತಿಳಿಸಿ,ತಾನು ಸಾಕಷ್ಟು ಹಣ ಗಳಿಸಿ ನಂತರ ಮರಳಿ ಬಂದು ಸಂಗೀತಾಳನ್ನು ಮದುವೆ ಯಾಗುವುದಾಗಿ ಭಾಷೆ ಕೊಟ್ಟು ಮೈಸೂರು ಬಿಟ್ಟು ಗುರುಗಳ ಪರಿಚಿತರನ್ನು ಕಾಣಲು ತಂಜಾವೂರಿಗೆ ಬರುತ್ತಾನೆ.

ಅಲ್ಲಿ ಸಾಕಷ್ಟು ಕಷ್ಟ ಪಟ್ಟು ಕೆಲವು ವರ್ಷಗಳಲ್ಲಿ ದೊಡ್ಡ ಹೆಸರು ಹಣ ಮಾಡುತ್ತಾನೆ.ಕೃಷ್ಣನಿಗೆ ಅಲ್ಲೊಬ್ಬಳು ಚಂದ್ರಸಾನಿ ಎಂಬ ವೇಶ್ಯೆಯ ಪರಿಚಯವಾಗುತ್ತದೆ. ಅವನ ಕಷ್ಟ ಕಾಲದಲ್ಲಿ ಅವಳು ತನ್ನ ಮನೆಯಲ್ಲಿ ಆಶ್ರಯ ಕೊಡುವುದಲ್ಲದೆ, ತನ್ನ ವೇಶ್ಯಾವೃತ್ತಿಯನ್ನು ತ್ಯಜಿಸಿ ಹೊಸ ಮನುಷ್ಯಳಾಗಿ ಬದಲಾಗಿ ಕೃಷ್ಣನನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾಳೆ.

ಬಹಳ ವರ್ಷಗಳ ನಂತರ ಕೃಷ್ಣ ಮತ್ತೆ ಮೈಸೂರಿನ ತನ್ನ ಹಳೆಯ ಮನೆ ಮತ್ತು ಪ್ರೇಯಸಿ ಸಂಗೀತಾಳನ್ನು ಭೇಟಿ ಯಾಗುತ್ತಾನೆ. ಅವನ ನಿರ್ಗಮನದ ನಂತರ ಅಲ್ಲಾದ ಬದಲಾವಣೆಗಳು ಏನು? …. ಅಲ್ಲಿಯ ವರ್ತಾಮಾನಗಳಿಂದ ಕೃಷ್ಣನ ಮನಸ್ಸಿಗಾದ ಆಘಾತವೇನು?…

ತಿಳಿಯಲು ಪುಸ್ತಕವನ್ನು ಓದಿ….

ಮಾಲತಿ ರಾಮಕೃಷ್ಣ ಭಟ್ ಅವರು ಸಾಕಷ್ಟು ಪುಸ್ತಕಗಳನ್ನು ಓದಿ ಓದುಗರಿಗೆ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಅವರು ಮಾಡಿದ ಪುಸ್ತಕಗಳ ಪರಿಚಯ : 


  •  ಮಾಲತಿ ರಾಮಕೃಷ್ಣ ಭಟ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading