#ಅಕ್ಯುಪಂಕ್ಚರ್ ಮೂಲತಃ ಚೀನಿಯರ ಸಾಂಪ್ರದಾಯಿಕ ಚಿಕಿತ್ಸಾ ಪದ್ದತಿ. ಯಾವುದೇ ಅಡ್ಡಪರಿಣಾಮವಿಲ್ಲದ ವಿಶೇಷ ಚಿಕಿತ್ಸೆಯಾಗಿದ್ದು ನೋವು ನಿವಾರಣೆಗೆ ಮತ್ತು ಇತರೆ ಚಿಕಿತ್ಸೆಗಳ ಜೊತೆ ಸಂಯೋಜಿಸಿಲಾಗುತ್ತೆ. ಅಕ್ಯುಪಂಕ್ಚರ್ ಚಿಕಿತ್ಸೆ ನುರಿತ ವೈದ್ಯರಾದ ಡಾ ಅವರಿಂದ ಇನ್ನಷ್ಟು ಮಾಹಿತಿ.ಮುಂದೆ ಓದಿ…
ಭಾರತದಲ್ಲಿ ಅಲೋಪಥಿ, ಆಯುರ್ವೇದ, ಹೋಮಿಯೋಪಥಿ ಚಿಕಿತ್ಸೆಗಳ ಹೊರತಾಗಿಯೂ ಅಕ್ಯುಪಂಕ್ಚರ್ ಚಿಕಿತ್ಸಾ ವಿಧಾನ ಬಳಕೆಯಲ್ಲಿದೆ. ಇದೊಂದು ಪರ್ಯಾಯ ಚಿಕಿತ್ಸೆ ಎಂದು ಗುರುತಿಸಲ್ಪಟ್ಟಿದೆ. ಅಕ್ಯುಪಂಕ್ಚರ್ ಪದವನ್ನು ಬಿಡಿಸಿ ಬರೆಯುವುದಾದರೆ ಅಕ್ಯು(Acu) ಎಂದರೆ ಲ್ಯಾಟಿನ್ ಭಾಷೆಯಲ್ಲಿ ಸೂಜಿ ಎಂದರ್ಥ, ಪಂಕ್ಚರ್ (Puncture) ಎಂದರೆ ಆಂಗ್ಲ ಭಾಷೆಯಲ್ಲಿ ಚುಚ್ಚುವುದು.
ಆರಂಭದಲ್ಲಿ ಮೀನಿನ ಮುಳ್ಳು (Fish bone) ಅಥವಾ ಬಿದಿರಿನ ಸಣ್ಣ ಮುಳ್ಳು ಬಳಕೆಯಲ್ಲಿತ್ತು. ಸದ್ಯ ಚಿನ್ನ, ಬೆಳ್ಳಿ ಮತ್ತು ತಾಮ್ರದ ಹೊರಕವಚಿನ ಸ್ಟೇನ್‌ಲೆಸ್ ಸ್ಟೀಲ್’ನ್ನು ವೈದ್ಯರು ಬಳಸುತ್ತಿದ್ದಾರೆ. ಕಿವಿ, ಮೂಗು ಚುಚ್ಚುವುದೂ ಸಹ ಅಕ್ಯುಪಂಕ್ಚರ್‌ನ ವಿಧಾನವಾಗಿದೆ.ಇವುಗಳು ಸಂಪ್ರದಾಯ ಆಚರಣೆಯ ಭಾಗವಾಗಿವೆ.

#ಅಕ್ಯುಪಂಕ್ಚರ ಕಾರ್ಯ ನಿರ್ವಹಿಸುವ ರೀತಿ :
ದೇಹದಲ್ಲಿ ಮುಖ್ಯವಾದ 12 ಅಂಗಗಳಿವೆ. ಈ ಅಂಗಗಳಿಂದ ಉತ್ಪತ್ತಿಯಾಗುವ ಜೀವಶಕ್ತಿಯು (Vital Energy) ದೇಹದ ಎಲ್ಲ ಭಾಗಗಳಲ್ಲೂ ಸಂಚರಿಸುತ್ತದೆ. ಈ ಶಕ್ತಿಯು ಸಂಚರಿಸುವ ಪಥದಲ್ಲಿ ತಡೆಯುಂಟಾದಾಗ ಯಾವುದಾದರೂ ತೊಂದರೆ ಅಥವಾ ಕಾಯಿಲೆ ಬರುತ್ತದೆ.
ಈ ತಡೆಯನ್ನು ಅಕ್ಯುಪಂಕ್ಚರ್ ಮೂಲಕ ತೆಗೆದು ಹಾಕಿ ನಮ್ಮದೇಹದ ಎಲ್ಲ ಭಾಗಗಳಿಗೂ ಸರಿಯಾಗಿ ಜೀವಶಕ್ತಿ ಸಂಚರಿಸುವ ಹಾಗೆ ಮಾಡುತ್ತದೆ. ಇದರಿಂದಾಗಿ ಕಾಯಿಲೆ ವಾಸಿಯಾಗುತ್ತದೆ.
ಬೇರೆ ಚಿಕಿತ್ಸಾ ಪದ್ಧತಿಯಂತೆ ಔಷಧಿಗಳನ್ನು ನೀಡದೆ, ದೇಹದ ನಿರ್ದಿಷ್ಟ ಭಾಗಗಳಿಗೆ ಸೂಚಿ ಚುಚ್ಚುವುದರ ಮೂಲಕ ಕಾಯಿಲೆ ವಾಸಿ ಮಾಡುವ, ಅಡ್ಡಪರಿಣಾಮಗಳಿಲ್ಲದ ಪರಿಣಾಮಕಾರಿ ಚಿಕಿತ್ಸಾ ಪದ್ಧತಿಯೇ ಅಕ್ಯುಪಂಕ್ಚರ್.

ಅಕ್ಯುಪಂಕ್ಚರ ದೇಹದಲ್ಲಿ Endorphin ಗಳ ಬಿಡುಗಡೆಯನ್ನು ಉತ್ತೇಜಿಸುತ್ತದೆ. ದೇಹದಲ್ಲಿ ನೈಸರ್ಗಿಕ ನೋವು ನಿವಾರಕ ರಾಸಾಯನಿಕಗಳು ಸಹಜವಾಗಿ ಉತ್ಪತ್ತಿಯಾಗುತ್ತವೆ ಎನ್ನುವ ಸಿದ್ಧಾಂತದ ಜೊತೆ ಹಲವು ಸಿದ್ದಾಂತಗಳು ಪ್ರತಿಪಾದನೆಯಲ್ಲಿವೆ.
ಸ್ವನಿಯಂತ್ರಿತ ನರಮಂಡಲ (ದೈಹಿಕ ಕಾರ್ಯಗಳನ್ನು ನಿಯಂತ್ರಿಸುವ), ರಕ್ತದ ಹರಿವು ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುವ ರಾಸಾಯನಿಕಗಳು ಅಕ್ಯುಪಂಕ್ಚರ್’ ನಿಂದ ಸಹಜವಾಗಿ ಉತ್ಪತ್ತಿಯಾಗುತ್ತವೆ. ಉರಿಯೂತವನ್ನು (Inflammation) ಕಡಿಮೆ ಮಾಡಿ ಮೆದುಳು ಶಾಂತವಾಗುತ್ತದೆ ಇದರಿಂದ ರೋಗಿಯ ಮನಸ್ಸು ತಹಬದಿಗೆ ಬಂದು ಶಾಂತವಾಗುತ್ತಾನೆ.
#ಅಕ್ಯುಪಂಕ್ಚರ ಹಲವು ತೊಂದರೆಗಳಲ್ಲಿ ಉಪಯುಕ್ತ

ಅಕ್ಯುಪಂಕ್ಚರ್ ವಿವಿಧ ಆರೋಗ್ಯ ಪರಿಸ್ಥಿತಿಗಳನ್ನು ಒಳಗೊಂಡಂತೆ ಉಪಯುಕ್ತವಾಗಿದೆ ಎಂದು ಹೇಳಲಾಗುತ್ತದೆ :
- ಸಂಧಿವಾತ
- ದೀರ್ಘಕಾಲದ ನೋವು.
- ಖಿನ್ನತೆ
- ನಿದ್ರಾಹೀನತೆ
- ಮೈಗ್ರೇನ್
- ವಾಕರಿಕೆ
- ಸಿಯಾಟಿಕಾ
- ಒತ್ತಡ ಮತ್ತು ಆತಂಕ.
- ರೋಗನಿರೋಧಕ ಶಕ್ತಿ ಹೆಚ್ಚಿಸಲು.
- ಮಧುಮೇಹ
- ರಕ್ತದೊತ್ತಡ.
- ಮುಟ್ಟಿನ ತೊಂದರೆ.

ಇನ್ನೀತರೆ ಹಲವು ಕಾಯಿಲೆಗಳಲ್ಲಿ ಮತ್ತು ಬೇರೆ ಚಿಕಿತ್ಸಾ ಪದ್ಧತಿ ಜೊತೆ ಸಂಯೋಜಿತ ಚಿಕಿತ್ಸೆಯಾಗಿ “ಅಕ್ಯುಪಂಕ್ಚರ” ಬಹು ಪರಿಣಾಮಕಾರಿ. ಹೆಚ್ಚಿನ ಮಾಹಿತಿಗಾಗಿ ಮತ್ತು ಸುರಕ್ಷಿತ ಅಕ್ಯುಪಂಕ್ಚರ ಚಿಕಿತ್ಸೆಗಾಗಿ ಅಕ್ಯುಪಂಕ್ಚರ ಪರಿಣಿತರು ಅಥವಾ ನ್ಯಾಚುರೋಪಥಿ ವೈದ್ಯರನ್ನು ಸಂಪರ್ಕಿಸಿ.
- ಡಾ.ಸೌಮ್ಯ ಬಿದ್ಕಲ್ಕಟ್ಟೆ (ವೈದ್ಯರು, ಸರ್ಕಾರಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರ) ತೀರ್ಥಹಳ್ಳಿ.
[ಕರ್ನಾಟಕ ಸರ್ಕಾರ ಮತ್ತು ಶಾಂತಿವನ ಟ್ರಸ್ಟ್ (ರಿ) ಶ್ರೀಕ್ಷೇತ್ರ ಧರ್ಮಸ್ಥಳದ ಆಡಳಿತಕ್ಕೊಳಪಟ್ಟಿದೆ]
