ಅಕಟಕಟಾ ಫೇಸುಬುಕ್ಕೇಶ್ವರ..! – ಎ.ಎನ್.ರಮೇಶ್. ಗುಬ್ಬಿ

“ಇದು ಮುಖಪುಸ್ತಕವೆಂಬ ಮಾಯಾಲೋಕದ ಕವಿತೆ. ಹತ್ತು ವರ್ಷಕ್ಕೂ ಹೆಚ್ಚಿನ ನನ್ನನುಭವದಲ್ಲಿ ಮೂಡಿದ ಸತ್ಯದ ಭಾವಗೀತೆ. ಅಡಿಗಡಿಗು ಹುಳುಕಿದ್ದವರು ಇಲ್ಲಿ ಥಟ್ಟನೆ ಥಳುಕಿನ ವೇಷ ಹಾಕಿ ಮೆರೆವ, ಬೆಳಕಿಲ್ಲದವರು ಭ್ರಾಮಕ ಲೋಕ ಸೃಷ್ಟಿಸಿ ಹೊಳೆವ, ಅಕ್ಷರವನ್ನು ಅಕ್ಷರಶಃ ವ್ಯಾಪಾರಕಿಟ್ಟು ವಂಚಿಸುವ, ಮಾತಲ್ಲೆ ಮನೆಕಟ್ಟಿ ಮರುಳಾಗಿಸುವ ಎಷ್ಟೆಲ್ಲ ಕಾಮನಬಿಲ್ಲುಗಳನ್ನು ನೋಡುತ್ತಲೇ ಇದ್ದೇವೆ. ಆಗೆಲ್ಲ ನನ್ನಂತೆ ನಿಮಗೂ ಅನಿಸುವುದು ” ಅಕಟಕಟಾ ಫೇಸುಬುಕ್ಕೇಶ್ವರ..!”. ಹೌದಲ್ವಾ,? – ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.

ನೀವು ಲೈಕು ನೀಡಿದರಷ್ಟೇ ನಿಮಗೆ ಲೈಕು
ಲೈಕು ಹೈಕು ಇಲ್ಲದಿದ್ದರೆ ನೀವು ಫೇಕು
ಹೊಗಳಿ ಕಾಮೆಂಟಿಸಿದರೆ ನೀವು ಬೇಕು
ತೆಗಳಿ ಕಾಮೆಂಟಿಸಿದರೆ ನೀವು ಬ್ಲಾಕು
ಏನಯ್ಯ ಇದು ಲೀಲೆ ಫೇಸುಬುಕ್ಕೇಶ್ವರ.?

ಬದುಕಿಗೂ ಬರಹಕ್ಕೂ ಅಜಗಜಾಂತರ
ಬರೀ ಬಿಲ್ಡಪ್ಪು ಆತ್ಮರತಿ ಅವಾಂತರ
ಸದ್ದುಮಾಡಿ ಸುದ್ದಿಯಾಗುವ ಅವತಾರ
ಮಾತೆತ್ತಿದರೆ ಸಮರ ಕೀಳುಭಾಷೆ ತಾತ್ಸಾರ
ಏನಯ್ಯ ಇದು ಕೋಟಲೆ ಫೇಸುಬುಕ್ಕೇಶ್ವರ.?

ಬಾಯ್ಬಿಟ್ಟರೆ ಮಂತ್ರಕ್ಕಿಂತ ಉಗುಳೇ ಹೆಚ್ಚು
ಬರಹಕ್ಕಿಂತ ಬರೀ ಬೈಗುಳಗಳೇ ಹೆಚ್ಚೆಚ್ಚು
ನಿತ್ಯ ಕಿಚ್ಚು ಹಚ್ಚಿ ಪ್ರಚಾರವಾಗುವ ಹುಚ್ಚು
ಬರೀ ವಾದ ವಾಗ್ವಾದ ವಿವಾದಗಳ ಕಾಳ್ಗಿಚ್ಚು
ಏನಯ್ಯ ಇದು ಜ್ವಾಲೆ ಫೇಸುಬುಕ್ಕೇಶ್ವರ.?

ಪ್ರತಿಯೊಬ್ಬರು ಅವರಿಗವರೇ ಮೆಗಾಸ್ಟಾರು
ಕರಗಳಲಿ ಕೈತುಂಬ ಮಣಗಟ್ಟಲೆ ಕೆಸರು
ಎರಚುವರು ಅವರಿವರ ಮೇಲೆ ಇವರವರು
ಈರ್ವರನು ಹುರಿದುಂಬಿಸುವರು ಸುತ್ತವರು
ಏನಯ್ಯ ಇದು ಖಾಯಿಲೆ ಫೇಸುಬುಕ್ಕೇಶ್ವರ.?

ಬಣ್ಣಬಣ್ಣದ ಕಾಗೆಗಳ ಭ್ರಮೆ ಹುಟ್ಟಿಸಿದವರು
ಭ್ರಾಂತು ಭ್ರಮೆಗಳಲ್ಲೆ ಕಳೆದು ಹೋಗುವರು
ಪರರ ಬಟ್ಟೆಯೆಳೆದು ತಾವೇ ಬೆತ್ತಲಾಗುವರು
ಬೆಂಕಿಯಂತಾಡಿ ಬೆಳಕಾಗದೆ ಬೂದಿಯಾಗ್ವರು
ಏನಯ್ಯ ಈ ತರಲೆ ಪುರಲೆ ಫೇಸುಬುಕ್ಕೇಶ್ವರ.?

ಈ ಎಲ್ಲ ತರಲೆ ಕೋಟಲೆ ಲೀಲೆ ನಡುವೆ..
ಅಂತರ್ಜಾಲ ಅಂಬುಧಿಯಲಿ ಅಕ್ಷರದ ನಾವೆ
ತೇಲುತಿದೆ ನಿಜ ಅಕ್ಷರಬಂಧುಗಳ ಸಾರಥ್ಯದಲಿ.
ಸತ್ಯ ಸಾಹಿತ್ಯಾಸಕ್ತರ ಅಕ್ಕರೆ ಸಖ್ಯ ಸಾಂಗತ್ಯದಲಿ
ಧನ್ಯ ಮಾನ್ಯತೆ ಸಂಗ ನೀಡಿಹೆ ಫೇಸುಬುಕ್ಕೇಶ್ವರ.?


  • ಎ.ಎನ್.ರಮೇಶ್. ಗುಬ್ಬಿ  (ಲೇಖಕರು, ಕವಿಗಳು), ಕೈಗಾ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading