54 ಫ್ಲಾಟ್ಸ್ ಇರುವ ಏಳು ಅಂತಸ್ತುಗಳ್ಳುಳ್ಳ ಅಪಾರ್ಟ್ಮೆಂಟ್ ನಲ್ಲಿ ಮಗನ ಮನೆ ಐದನೇ ಮಹಡಿಯಲ್ಲಿತ್ತು. ಮನೆಯೊಳಗೆ ಪ್ರವೇಶಿಸುತ್ತಿದ್ದಂತೆ ಮರಳಿನೊಳಗೆ ಕಾಲು ಇಟ್ಟರೆ ಭಾಸವಾಯಿತು. ಕಿಟಕಿಯ ಪರದೆ ಸರಿಸಿದಾಗ ಕಾಣಿಸಿದ್ದು ಬೆಟ್ಟಗಳ ನಡುವೆ ಸೂರ್ಯ ಉದಯಿಸುತ್ತಿದ್ದ ಮನೋಹರ ದೃಶ್ಯ. ಮುಂದೇನಾಯಿತು ಕಮಲಾಕ್ಷಿ ಸಿ ಆರ್ ಅವರ ಅಮೇರಿಕಾದ ಪ್ರವಾಸ ಕಥನವನ್ನು ‘ಅ…ಅ…ಅಮೆರಿಕಾ ನೋಡಾ’ ಸಂಚಿಕೆಯಲ್ಲಿ ತಪ್ಪದೆ ಮುಂದೆ ಓದಿ…
ಇಲಿನೊಯ್ ರಾಜ್ಯದ ದೊಡ್ಡ ನಗರ, ‘ಗಾಳಿ ನಗರ’ವಾದ ಶಿಕಾಗೋನಿಂದ ಟೆನಿಸಿ ರಾಜ್ಯದ ಸಂಗೀತ ನಗರ ನಾಶ್ವೆಲ್ ಕಡೆ ವಿಮಾನದಲ್ಲಿ ಹೊರೆಟೆವು. ನಮ್ಮವರು ರೋಡ್ ಟ್ರಿಪ್ ಮಾಡಿದ್ರೆ ಚೆನ್ನಾಗಿರೋದು ಅಂತ ಗೊಣಗೋದು ಮುಂದುವರೆದೇ ಇತ್ತು. ಮಗ ಮತ್ತೆ ಅರ್ಥ ಮಾಡಿಸಿದ, ” ಪಪ್ಪಾ ನಾನು ಆ ಕಡೆಯಿಂದ ಕೆಲಸ ಮಾಡೋ ದಿನ ಕಾರಿನಲ್ಲಿ ಬರಬೇಕಿತ್ತು, ಆರರಿಂದ ಏಳು ಗಂಟೆಯ ಪ್ರಯಾಣ ಬೇರೆ. ನೀವು ಮೊದಲೇ ಅಮೇರಿಕಾಕ್ಕೆ ದೀರ್ಘ ಪ್ರಯಾಣ ಮಾಡಿ ಬಂದಿರ್ತೀರಿ, ಆಯಾಸವಾಗಿರುತ್ತೆ ಅಂತ ಹೀಗೆ ಮಾಡಿದೆ. ಸರಿ ಅಲ್ವಾ” ಎಂದು ಮಗ ಮತ್ತೆ ಅರ್ಥೈಸಿದ. ಅದರಂತೆ ವಾಯುಯಾನಕ್ಕೆ ಮೊದಲೇ ವ್ಯವಸ್ಥೆ ಮಾಡಿದ್ದ.
ನಾಶ್ವೆಲ್‌ಗೆ ಒಂದು ಗಂಟೆಯ ಪ್ರಯಾಣ. ಒಂದು ಗಂಟೆಯ ಅವಧಿಯಾದರೂ ಗಗನ ಸಖಿಯರು ಬಿಸ್ಕತ್, ಕಾಫಿ, ಟೀ, ತಂಪು ಪಾನೀಯಗಳೊಂದಿಗೆ ಉಪಚರಿಸಿದರು. ಡೊಮೆಸ್ಟಿಕ್ ವಿಮಾನವಾದ್ದರಿಂದ ಗಲಾಟೆ ತುಂಬಾನೇ ಇತ್ತು. ನಾಶ್ವೆಲ್ ವಿಮಾನ ನಿಲ್ದಾಣಕ್ಕೆ ಲ್ಯಾಂಡ್ ಆಗುವ ಮುನ್ನ ಹದಿನೈದು ನಿಮಿಷಗಳವರೆಗೆ ನಗರ ಗೋಚರಿಸುತ್ತಿತ್ತು. ರಸ್ತೆ, ನದಿ, ಎತ್ತರದ ಕಟ್ಟಡಗಳು ಜಗಮಗಿಸುತ್ತಿದ್ದವು. ಲಗೇಜು ಕೈಗೆ ಸಿಗಲು ಅರ್ಧ ಗಂಟೆ ಕಾದು ಮನೆಯ ದಾರಿ ಹಿಡಿದೆವು.

ನಾಶ್ವೆಲ್ ವಿಮಾನ ನಿಲ್ದಾಣದಿಂದ ಮಗನ ಮನೆಗೆ ಇಪ್ಪತ್ತು ನಿಮಿಷದ ದಾರಿಯಷ್ಟೇ. ಮನೆ ತಲುಪಿದಾಗ ರಾತ್ರಿ ಹತ್ತೂವರೆಯಾಗಿತ್ತು. 54 ಫ್ಲಾಟ್ಸ್ ಇರುವ ಏಳು ಅಂತಸ್ತುಗಳ್ಳುಳ್ಳ ಅಪಾರ್ಟ್ಮೆಂಟ್ ಅದು. ಐದನೇ ಮಹಡಿಯ ಮಗನ ಮನೆಯೊಳಗೆ ಪ್ರವೇಶಿಸುತ್ತಿದ್ದಂತೆ ಮರಳಿನೊಳಗೆ ಕಾಲು ಇಟ್ಟರೆ ಆಗುವಂತೆ ಭಾಸವಾಯಿತು. ಇನ್ನೂ ನಾಲ್ಕೈದು ಹೆಜ್ಜೆ ಹಾಕಿದಾಗ, ನೆಲಕ್ಕೆ ಮರದ ಹಲಗೆಗಳ ಹಾಸು ಕಂಡು ಸಮಾಧಾನವಾಯಿತು. ಒಂದು ಸುತ್ತು ಮನೆ ನೋಡಿ ಬಂದೆ, ದೊಡ್ಡ ಹಾಲು, ಒಂದು ರೂಮು ಅದರ ಪಕ್ಕ ವಾಕಿಂಗ್ ವಾರ್ಡ್ ರೋಬ್, ಅಡಿಗೆ ಮನೆ ಹಾಗೂ ವಾಶ್ ರೂಮ್. ಅಡಿಗೆ ಮನೆಗೆ ಬೇಕಾದ ಎಲ್ಲ ಸವಲತ್ತುಗಳು ಇದ್ದವು. ವಾಷಿಂಗ್ ಮೆಷಿನ್, ಡ್ರೈಯರ್ ಹಾಗೂ ಡಿಶ್ ವಾಷರ್ ಕೂಡ ಇದ್ದದ್ದು ಸಂತಸವಾಯಿತು.
ಕೈ ಕಾಲು ತೊಳೆದು ಹೊರಬಂದೆ. ಆನ್ಲೈನ್ ನಲ್ಲಿ ಏನಾದರೂ ತರಿಸುವೆ ಎಂದು ಇಂಡಿಯನ್ ರೆಸ್ಟೋರೆಂಟ್ ತಡಕಾಡತೊಡಗಿದ. “ಆಪದ್ಬಾಂಧವ ಚಿತ್ರಾನ್ನ ಮಾಡುವೆ, ಏನು ತರಿಸಬೇಡ, ಹೋಗಿ ಮೊದಲು ಫ್ರೆಶ್ ಆಗಿ” ಎಂದು ಸುಮ್ಮನಾಗಿಸಿದೆ. ಅಪ್ಪ, ಮಗ ಫ್ರೆಶಪ್ ಆಗುವುದರಲ್ಲಿ ಚಿತ್ರಾನ್ನ ಸಿದ್ಧವಾಗಿತ್ತು. ಮಗನಿಗಂತೂ ಎರಡೂಕಾಲು ವರ್ಷದ ಬಳಿಕ ನಾ ಮಾಡಿದ ಚಿತ್ರಾನ್ನ ಬಾಯಿಗಿಡುವಾಗ ಕಣ್ಣಲ್ಲಿ ಅದೇನೋ ಹೊಳಪು. ಅವನ ಮುಖದ ಕಾಂತಿ ನೋಡಿ ನನಗೂ ಸಮಾಧಾನವಾಗಿತ್ತು.
ಮರುದಿನ ಭಾನುವಾರ. ಬೆಳಗ್ಗೆ 6 ಗಂಟೆಗೂ ಮುನ್ನ ಎಚ್ಚರವಾಯಿತು. ಕಿಟಕಿಯ ಪರದೆ ಸರಿಸಿದಾಗ ಕಾಣಿಸಿದ್ದು ಬೆಟ್ಟಗಳ ನಡುವೆ ಸೂರ್ಯ ಉದಯಿಸುತ್ತಿದ್ದ ಮನೋಹರ ದೃಶ್ಯ. ಎರಡನೇ ಮಹಡಿಯ ಈಜು ಕೊಳ, ಪಕ್ಕದಲ್ಲಿ ಗುಬ್ಬಜ್ಜಿಗಳ ಕಲರವ ಇಂಪಾಗಿತ್ತು. ಮನೆಯ ಮುಂದೆ, ಎಡಭಾಗದಲ್ಲಿ ಬೆಟ್ಟಗಳ ಸಾಲು, ಮನೆಯ ಸುತ್ತ ಗಗನ ಚುಂಬಿ ಕಟ್ಟಡಗಳಿದ್ದವು. ನನ್ನ ಹಿಂದೆಯೇ ಎದ್ದಿದ್ದ ನಮ್ಮವರು ನಿತ್ಯ ಕರ್ಮ ಮುಗಿಸಿ ಹೊರ ಬಂದರು.

“ನೀನು ಕಸ ಗುಡಿಸಿ ಬೇರೆ ಕೆಲಸ ಏನಿದೆ ಮುಗಿಸಿಕೋ..ನಾನು ತಿಂಡಿ ಮಾಡುವೆ” ಎಂದು ಉಪ್ಪಿಟ್ಟಿನ ಸಿದ್ಧತೆಯಲ್ಲಿ ತೊಡಗಿದರು. ಮನೆಯವರು ಒಪ್ಪಿಸಿದ ಕೆಲಸ ಮುಗಿಸಿ, ಸ್ನಾನ ಮಾಡಿ ಬರುವುದರಲ್ಲಿ ಮಗನೂ ಎದ್ದು ಬಂದ.
ರುಚಿಯಾದ ಉಪ್ಪಿಟ್ಟು ತಿಂದು, ಮಧ್ಯಾಹ್ನಕ್ಕೆ ಅನ್ನ, ತಿಳಿ ಸಾರು ಮಾಡಿದೆ. ಊಟ ಮುಗಿಸಿ, ಮೊದಲೇ ನಿರ್ಧರಿಸಿದಂತೆ ಭಾರತೀಯ ಅಡುಗೆ ದಿನಸಿ ಪದಾರ್ಥಗಳು ಸಿಗುವ ‘ಪಟೇಲ್ ಬ್ರದರ್ಸ್’ ಕಡೆ ಹೊರಟೆವು. ಮಗ ಬೆಂಗಳೂರಿನಲ್ಲಿ ಡ್ರೈವಿಂಗ್ ಕಲಿತಿದ್ದರೂ ಸ್ವಂತವಾಗಿ ಕಾರು ತೆಗೆದುಕೊಂಡು ಹೋದದ್ದೇ ಇಲ್ಲ. ಮಗನ ಕಾರಿನಲ್ಲಿ ಕುಳಿತಾಗ ಅದೇನೋ ಪುಳಕ. ರಸ್ತೆಯ ಬಲಭಾಗದಲ್ಲಿ ವಾಹನಗಳು ಚಲಿಸುತ್ತ, ಬಲ ತಿರುವು ತಕ್ಷಣ ತೆಗೆದುಕೊಳ್ಳಬೇಕು. ನಡು ನಡುವೆ ತುಂಡರಿಸಿದ ಸಾಲಿನಲ್ಲಿ ಕಾರಿನ ಎಡಬಲ ಬದಲಿಸಬಹುದು, ಅಲ್ಲಿನ ಸಂಚಾರ ನಿಯಮಗಳು ಒಮ್ಮೆಗೆ ಅರ್ಥವಾಗುವಂತಹದ್ದಲ್ಲ ಎನಿಸಿತು.
ನಾಶ್ವೆಲ್ ನಗರದ ಸೌಂದರ್ಯವನ್ನು ತುಂಬಿಕೊಳ್ಳ ತೊಡಗಿದೆ. ಸಮವಸ್ತ್ರ ಧರಿಸಿದ ವಿದ್ಯಾರ್ಥಿಗಳಂತೆ, ಒಂದೇ ವಿನ್ಯಾಸದ ಮನೆಗಳು, ಮನೆಯ ಮುಂದೆ ಹಸಿರು ಲಾನ್ ಕಣ್ಣಿಗೆ ಹಬ್ಬ. ಅಲ್ಲಲ್ಲಿ ಫ್ಲೈ ಓವರ್ ರಸ್ತೆಗಳು, ಸರಸರನೆ ಓಡುವ ವಾಹನಗಳನ್ನು ನೋಡುವುದೇ ಚೆನ್ನ.
ಡೌನ್‌ಟೌನ್ ನಿಂದ ಪಟೇಲ್ ಬ್ರದರ್ಸ್‌ಗೆ ಇಪ್ಪತ್ತು ನಿಮಿಷಗಳ ಪ್ರಯಾಣ. ದಾರಿಯ ಇಕ್ಕೆಲಗಳಲ್ಲಿ ದಟ್ಟ ಹಸಿರಿನ ಸಿರಿ ನೋಡುತ್ತ ಪಟೇಲ್ ಬ್ರದರ್ಸ್ ತಲುಪಿದ್ದು ಅರಿವಿಗೆ ಬರಲಿಲ್ಲ. ‘ಪಟೇಲ್ ಬ್ರದರ್ಸ್’ ಗುಜರಾತಿನಿಂದ ಎಂ ಎಸ್ ವ್ಯಾಸಂಗಕ್ಕೆಂದು ಅಮೆರಿಕಾಕ್ಕೆ ಹೋಗಿದ್ದ ಇಬ್ಬರು ಸಹೋದರರು 1974 ರಲ್ಲಿ ಭಾರತೀಯ ಧಾನ್ಯಗಳು ಹಾಗೂ ಆಹಾರ ಪದಾರ್ಥಗಳ ಬೃಹತ್ ಇಂಡೋ ಅಮೆರಿಕನ್ ವ್ಯಾಪಾರ ಮಳಿಗೆ ತೆರೆದರು. ನಾಶ್ವೆಲ್‌ನ ಪಟೇಲ್ ಬ್ರದರ್ಸ್ ಮಳಿಗೆಯ ಮುಂದೆ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯಿದ್ದು, ಅದರ ಸಮೀಪ ಭಾರತೀಯ ಹೋಟೆಲುಗಳಿರುವುದು ವಿಶೇಷ.
ಮಕ್ಕಳಿಬ್ಬರಿಗೂ ಬೇಕಿದ್ದ ತರಕಾರಿ, ಹಣ್ಣು, ಧಾನ್ಯ, ಎಲ್ಲವನ್ನೂ ಹುಡುಕಿ ಟ್ರಾಲಿಗೆ ತುಂಬಿದೆವು. ಅಬ್ಬಾ..ಈರುಳ್ಳಿ, ಟೊಮ್ಯಾಟೊ ತೆಂಗಿನಕಾಯಿ ಗಾತ್ರದವು! ಬೆಳ್ಳುಳ್ಳಿ ಕೂಡ ಗಾತ್ರದಲ್ಲಿ ದೊಡ್ಡದು. ದಂಟು, ಮೆಂತ್ಯ, ಸಬ್ಬಸಿಗೆ ಸೊಪ್ಪು, ಕೊತ್ತಂಬರಿ, ಎಲ್ಲವನ್ನೂ ತೆಗೆದುಕೊಂಡೆ. ಕರಿಬೇವು ಮಾತ್ರ ತುಂಬಾನೆ ದುಬಾರಿ. ಅಲ್ಲಿನ ಬಹುತೇಕ ತರಕಾರಿಗಳು ಮೆಕ್ಸಿಕೋದಿಂದ ಬಂದವು. ಅಕ್ಕಿ, ಅವಲಕ್ಕಿ, ರವೆ, ಗೋದಿ ಹಿಟ್ಟು ಟ್ರಾಲಿಗೆ ತಂದು ತುಂಬಿಕೊಳ್ಳುವಾಗ, ” ಅಮ್ಮಾ.. ನೀನು ಅಡಿಗೆ ಮಾಡಿಕೊಂಡೇ ಇರಬೇಕು ಅಂತ ಇದ್ದೀಯ. ಆಗಾಗ ಹೊರಗೂ ಹೋಗೋಣಮ್ಮ.. ” ಎಂದ.
“ವಾರಂತ್ಯ ಹೊರಗೆ ಹೋದಾಗ ಮಾಡೋಣ ಬಿಡು” ಎಂದು ಅವನನ್ನು ಸುಮ್ಮನಾಗಿಸಿದೆ.
ಎರಡು ಟ್ರಾಲಿ ದಿನಸಿ ಬಿಲ್ ಪಾವತಿಸಿ ನಾಲ್ಕು ಚೀಲಗಳಲ್ಲಿ ತುಂಬಿಕೊಂಡು ಡಿಕ್ಕಿಯಲ್ಲಿ ಇಟ್ಟಾಗ ಅವೆಲ್ಲವನ್ನೂ ಮಾಡಿ ತಿನ್ನಿಸುವ ತವಕ. ಅಲ್ಲಿಂದ ವಾಲ್‌ಮಾರ್ಟಿಗೆ ಕರೆದೊಯ್ದ. ಅಲ್ಲಿ ಮೊದಲು ಕೊಂಡದ್ದು ಒಂದು ಚಾಪೆ. ಹಾಲಿನಲ್ಲಿ ಹಾಸಿಗೆಯಾಗಿ ಪರಿವರ್ತಿಸುವ ಸೋಫಾದಲ್ಲಿ ಕುಳಿತುಕೊಳ್ಳುವುದಕ್ಕಿಂತ ಚಾಪೆ ಬೇಕೆಂದು ಹುಡುಕಿ ತಂದಾಗ ಮನೆಯವರಿಗೆ, ಮಗನಿಗೆ ನಗುವೋ ನಗು. ಮಧ್ಯಾಹ್ನದ ನಂತರದ ಅರ್ಧ ದಿನ ಇದರಲ್ಲಿಯೇ ಉರುಳಿತು. ಹೀಗೆ ಭಾನುವಾರ ಕಳೆದೇ ಹೋಗಿತ್ತು.
ಸೋಮವಾರ ಬೆಳಗ್ಗೆ ವಿನೀತ್ ಕಛೇರಿಗೆ ಹೊರಟ. ಹಿಂದಿನ ದಿನ ತಂದಿದ್ದ ದಿನಸಿಯನ್ನು ಜೋಡಿಸಿ, ನಮ್ಮಿಬ್ಬರಿಗೆ ಮಧ್ಯಾಹ್ನದ ಊಟ ಮಾಡಿಕೊಳ್ಳುವುದರಲ್ಲಿ ಸಂಜೆ ಆಗಿತ್ತು. ಮಧ್ಯಾಹ್ನದ ಬಳಿಕ ಚಿಕ್ಕ ಮಗ ಸಂಜೀತ್ ಬಾಸ್ಟನ್ನಿನಿಂದ ನಾಶ್ವೆಲ್ ಕಡೆ ಹೊರಟಿದ್ದ. ಅವನ ಆಗಮನಕ್ಕಾಗಿ ಕಾತರಿಕೆ ಹೆಚ್ಚಾಯಿತು. ವಿನೀತ್ ಮನೆಗೆ ಬಂದವನು ಉಪಹಾರ ಸೇವಿಸಿ, ಎರಡನೇ ಮಹಡಿಗೆ ಕರೆದೊಯ್ದು ಜಿಮ್ ಮತ್ತು ಆಡಬಹುದಾದ ಸಲಕರಣೆಗಳನ್ನು, ಈಜುಗೊಳವನ್ನು ತೋರಿಸಿದ. ಚಪಾತಿ, ದಪ್ಪ ಮೆಣಸಿನಕಾಯಿ ಪಲ್ಯ ಮಾಡಿಟ್ಟೆ. ಒಂಬತ್ತೂವರೆಗೆ ಸಂಜೀತನನ್ನು ಕರೆತರಲು ವಿಮಾನ ನಿಲ್ದಾಣದ ಕಡೆ ಹೊರಟೆವು.
ಮೂರು ತಿಂಗಳ ಹಿಂದಷ್ಟೇ ಭಾರತದಿಂದ ಅಲ್ಲಿಗೆ ಹೋಗಿದ್ದರೂ ಆ ಐದು ದಿನಗಳು ಅವನನ್ನು ಬಹಳ ಮಿಸ್ ಮಾಡಿಕೊಂಡಿದ್ದೆವು. ನಾವು ಪಿಕ್‌ಅಪ್ ಪಾಯಿಂಟ್ ಕಡೆ ಹೋಗುವ ಹೊತ್ತಿಗೆ ಅವನಾಗಲೇ ಬಂದು ನಿಂತಿದ್ದ. ನಮ್ಮನ್ನು ಕಾರಿನಿಂದ ಇಳಿಯಲು ಬಿಡದೆ ವಿನೀತ್ ಸಂಜೀತನ ಬ್ಯಾಗೇಜ್ ಕಾರಿಗೆ ಹಾಕಿದ. ಸಂಜೀತ್ ಕೂಡ ನಾಶ್ವೆಲ್‌ಗೆ ಮೊದಲ ಬಾರಿ ಬಂದಿದ್ದ. ಎರಡೂಕಾಲು ವರ್ಷದ ಬಳಿಕ ನಾಲ್ವರೂ ಒಂದೆಡೆ ಸೇರಿದ್ದು ಸಂಭ್ರಮ ತಂದಿತ್ತು.
ಕಾರಿನಲ್ಲಿ ಕುಳಿತವ ಆಪ್ತವಾಗಿ ಎಲ್ಲರನ್ನೂ ತಬ್ಬಿದ.. ಅದೊಂದು ಸ್ಪರ್ಶ ಕುಟುಂಬದ ಸ್ವಂತಿಕೆಯನ್ನು ಮರಳಿ ತಂದಿತ್ತು.
” ಅಮ್ಮಾ.. ಹೇಗನಿಸ್ತು ಅಮೆರಿಕಾ” ಎಂದ.
“ಐದು ದಿನಗಳಲ್ಲಿ ಒಂದು ದೇಶವನ್ನು ಹೀಗೆ ಅಂತ ಹೇಳೋಕ್ಕಾಗುತ್ತಾ?” ಎಂದೆ.
“ಲೆಕ್ಚರರ್ ಮಾತೇ ಮಾತು, ಅಲ್ವೆನೋ” ಎಂದು ಅವನ ಅಣ್ಣನಿಗೆ ಹೇಳಿದ.
ಆ ದಿನದ ಪ್ರಯಾಣ, ವಿಚಾರಗಳನ್ನು ವಿವರಿಸುತ್ತ ಹೋದ. ಅಷ್ಟರಲ್ಲಿ ಮನೆಯೂ ಸಿಕ್ಕಿತ್ತು. ಮನೆಯ ಒಳಗಡೆ ಹೋಗುವ ಮುನ್ನ ನಾಲ್ವರದೂ ಒಂದು ಫೋಟೋ ತೆಗೆದುಕೊಂಡಿದ್ದಾಯಿತು. ಮಕ್ಕಳಿಬ್ಬರನ್ನೂ ಬಹಳ ದಿನಗಳ ನಂತರ ನೋಡಿದ ಹೆತ್ತವರಿಗೆ ಆನಂದದ ಕ್ಷಣಗಳವು..ಅವರಿಬ್ಬರನ್ನು ಕಣ್ತುಂಬಿಕೊಂಡು ಸಮಾಧಾನವಾಗಿತ್ತು.
ಮುಂದುವರೆಯುವುದು…
ಹಿಂದಿನ ಸಂಚಿಕೆಗಳು :
- ಕಮಲಾಕ್ಷಿ ಸಿ ಆರ್
