ಅಮ್ಮ, ನಿನಗೊಂದು ಒಲಮೆಯ ನುಡಿ…



ಪ್ರೀತಿಯ ನುಡಿಗೆ ಅಮ್ಮಂದಿರ ದಿನವೇ ಬೇಕಿಲ್ಲ. ಅಮ್ಮ ಎಂದರೆ ಅಡುಗೆ ಮಾಡುವ ಕೈಗಳಷ್ಟೇ ಅಲ್ಲಾ, ಆತ್ಮವಿಶ್ವಾಸ, ನಂಬಿಕೆ,ಧೈರ್ಯ. ಅಮ್ಮನಿಗಾಗಿ ಈ ಲೇಖನ.

ಅಮ್ಮ ಎಂದರೆ ಕಾಶಮ್ಮ ಹೂಲಿ. ಅಪ್ಪ ಎಂದರೆ ಶೇಖರ್ ಹೂಲಿ ಎನ್ನುವುದೇ ಮಾತ್ರ ನನಗೆ ಗೊತ್ತೇ ವಿನಃಹ ಅಮ್ಮಂದಿರ ದಿನ ಅಥವಾ ಅಪ್ಪಂದಿರ ದಿನ ಎಂದು ಆ ದಿನ ದಾಟಿದ ಮೇಲೆ ಗೊತ್ತಾಗುತ್ತದೆ. ಅದೇ ದಿನ ವಿಶೇಷ ಎನ್ನಿಸುವುದಿಲ್ಲ, ಬದಲಾಗಿ ನಿತ್ಯವೂ ಅಪ್ಪ ಅಮ್ಮಂದಿರ ದಿನವೇ ನನಗೆ. ಆದರೆ ಓದಿಸಿದ ಆಕೆಗೆ ನಾಲ್ಕು ಅಕ್ಷರ ಆಕೆಗಾಗಿ ಬರೆಯದಿದ್ದರೆ ನಾನು ಕಲಿತದ್ದು ವ್ಯರ್ಥವಾಗುತ್ತೆ. ಹಾಗಾಗಿ ನನ್ನ ಜೀವನದಲ್ಲಿ ಆಕೆಯ ಪಾತ್ರದ ಬಗ್ಗೆ ಬರೆಯಬೇಕು ಎನ್ನಿಸಿತು ಇದು ನನ್ನ ಅಮ್ಮನಿಗಾಗಿ.

ನನ್ನ ಅಮ್ಮ ಓದಿದ್ದು ಕೇವಲ ಏಳನೇಯ ತರಗತಿ ಮಾತ್ರವಾದರೂ ಡಾಕ್ಟರೇಟ್ ಪದವೀಧರರು ಆಕೆಯ ಕೆಳಗೆ. ಏಕೆಂದರೆ ಆಕೆ ಕಷ್ಟಕ್ಕೆ ಜಗ್ಗಿದವಳಲ್ಲ, ಸುಖಕ್ಕೆ ಹಿಗ್ಗಿದವಳಲ್ಲ. ನಾನು, ಅಕ್ಕ,ಅಣ್ಣ ಓದು ಮುಗಿಸುವರೆಗೂ ಕರಿಮಣಿ ಮಾಂಗಲ್ಯ ಸರ, ಕೈಯಲ್ಲಿ ಗಾಜಿನ ಬಳೆ, ಮನೆಯಲ್ಲಿ ಫ್ರಿಜ್, ಮನೆಯ ಮುಂದೆ ಕಾರ್ ಯಾವುದು ಕಂಡಿರಲಿಲ್ಲ. ಆಗ ಅವೆಲ್ಲ ಬೇಕೆಂದು ಹಠ ಮಾಡಿದವಳು ಅಲ್ಲಾ. ನಮ್ಮೆಲ್ಲರ ಓದು ಮುಗಿದ ಮೇಲೆ ಮನೆ, ಕಾರ್ ಎಲ್ಲವು ಇದ್ದಾಗ ತನಗಾಗಿ ಕೇಳಿದ್ದು ಬಂಗಾರದ ಒಂದೆಳೆ ಮಾಂಗಲ್ಯ ಚೈನ್.

ಪ್ರಪಂಚದ ಜ್ಞಾನ ಪಡೆಯಲು ಜೀವನದ ಪಾಠಗಳೇ ಸಾಕು ಎನ್ನುವುದು ಆಕೆಯ ನಿಲುವು. ನಾನು, ಅಕ್ಕ, ಅಣ್ಣ ಎಲ್ಲರು double graduate. ತಮಾಷೆಯೆಂದರೆ ನಮಗೆ ಕಷ್ಟ ಬಂದಾಗ ಎದುರಿಗೆ ಹೋಗಿ ನಿಲ್ಲುವುದು ಅದೇ ಏಳನೇಯ ತರಗತಿಯ ನನ್ನ ಅಮ್ಮನ ಮುಂದೆ. ನಮಗೆ ಸಮಸ್ಯೆ, ಕಷ್ಟವೆನ್ನಿಸಿದ್ದು ಆಕೆಗೆ ಅದೇನು ಅಲ್ಲಾ, ಕ್ಷಣಾರ್ಧದಲ್ಲಿ ಬಗೆ ಹರಿಸುತ್ತಾಳೆ. ಧೈರ್ಯ, ಸ್ವಾಭಿಮಾನವನ್ನು ಯಾವ ಶಾಲೆ ಕಲಿಸುವುದಿಲ್ಲ. ನಾವೇ ರೂಢಿಸಿಕೊಳ್ಳಬೇಕು ಎನ್ನುವು ಗಟ್ಟಿ ನುಡಿ ಆಕೆಯದು.




ನಾನು ಮೊದಲು ಒಂದು ಹುಡುಗನನ್ನು ಇಷ್ಟ ಪಟ್ಟಾಗ ನಾನು ಹೇಳಿದ್ದು ಅಮ್ಮನಿಗೆ. ಅಷ್ಟೇ ಅಲ್ಲಾ ಮನೆಯಲ್ಲಿ ಅಪ್ಪ, ಅಣ್ಣ, ಅಕ್ಕ, ಭಾವ ಎಲ್ಲರನ್ನು ಒಪ್ಪಿಸುವ ಜವಾಬ್ದಾರಿ ನಿನ್ನದೇ ಎಂದು ಹೇಳಿ ನಾನು ನಿಚ್ಚಿಂತೆಯಿಂದ ಅಂದು ಮಲಗಿಬಿಟ್ಟೆ. ಏಕೆಂದರೆ ಅಮ್ಮನ ಮೇಲಿನ ನಂಬಿಕೆ ಹಾಗಿದೆ, ಆಕೆಯ ಮುಂದೆ ಯಾವುದೇ ಫೈಲ್ ಇಟ್ಟರು fail ಆಗುವ chance ಇಲ್ಲ. ಅಂದು ಕೂಡಾ ನಾನು ಬೇಡಿಕೆಯಿಟ್ಟ file ರುಜುವಾತು ಆಯಿತು. ಅದೇ ಹುಡುಗನ ಜೊತೆ ಮದುವೆಯು ಆಯಿತು. ಆ ಹುಡುಗನ ಜೊತೆಗೆ ಸಪ್ತಪದಿ ತುಳಿದು ೧೨ವರ್ಷವಾಯಿತು. ಇದು ವೈವಾಹಿಕ ಜೀವನದಲ್ಲಿ ನನ್ನ ಅಮ್ಮನ ಪಾತ್ರ.

ಅಮ್ಮ ಜೊತೆಗಿದ್ದರೆ ನನಗೆ ಹಾಗು ಅಕ್ಕನಿಗೆ ಸ್ನೇಹಿತರ ಅವಶ್ಯಕತೆ ಇಲ್ಲ. ಸ್ನೇಹಿತರೆಲ್ಲ ಸೇರಿಕೊಂಡಾಗ ಅಮ್ಮ ಜೊತೆಗಿರದಿದ್ದರೆ ಅವರು ಕೇಳುವ ಪ್ರಶ್ನೆ ‘ಅಮ್ಮ ಬಂದಿಲ್ವಾ?’ . ನನ್ನ ಅಮ್ಮ ಎಲ್ಲಾ ಪೀಳಿಗೆಗೂ ಜೊತೆಗಾರ್ತಿ.

ಅಮ್ಮ ಇದ್ದರಂತೂ ಶಾಪಿಂಗ್ ಮಜಾನೇ ಬೇರೆ. ಅಪ್ಪನ ಕಾರ್ಡ್ ನಲ್ಲಿ ಮಸ್ತ ಮಜಾ ಮಾಡಿಸುತ್ತಾಳೆ. shopping bill ಗೆ ಕೆಂಪಾದ ಅಪ್ಪನನ್ನು ಎದುರಿಸುವುದು ಕೂಡಾ ಅಮ್ಮನೇ. ಅಮ್ಮ ಎಷ್ಟೇ ಘಟ್ಟಿಗಿತ್ತಿ ಇದ್ದರೂ ‘ಹೂಲಿ’ಯ ಮುಂದೆ ‘ಇಲಿ’ಯಾಗೆ ಇರುತ್ತಾಳೆ. ಈ ಸ್ವಭಾವ ಎರಡು ಅಳಿಯಂದಿರಿಗೆ ಕಣ್ಣು ಕುಕ್ಕುತ್ತದೆ. ಆಗ ಅವರಿಬ್ಬರೂ ಹೇಳುವ ಮಾತು ‘ನಿಮ್ಮಮ್ಮನ ಗುಣ ನಿಮಗೆ ಬಂದಿಲ್ಲ’ ಅಂತ.

ಇನ್ನು ನಾನು ಕಾರ್ ಕಲಿಯುವಾಗ ನನ್ನ ಪಕ್ಕಕ್ಕೆ ಯಾವ ಡ್ರೈವರ್ ಕೂಡಲಿಲ್ಲ. ಆಗ ಧೈರ್ಯ ಮಾಡಿ ಕೂತದ್ದು ಇದೇ ನನ್ನ ಅಮ್ಮ. ಈಗ ಅಮ್ಮನಿಗಷ್ಟೇ ಅಲ್ಲಾ, ಅಪ್ಪನ ಎಲ್ಲಾ ಕಾರ್ಯಕ್ರಮಕ್ಕೆ ನಾನೇ ಸಂಬಳವಿಲ್ಲದ ಕಾರ್ ಡ್ರೈವರ್ ಆಗಿದ್ದೇನೆ.

ಸದಾ instant ಅಡುಗೆಯಂತೆ ಕೇಳಿದಾಕ್ಷಣ ಪಟ್ ಅಂತ ಮಾಡುವುದಷ್ಟೇ ಅಲ್ಲಾ, ಹೊಟ್ಟೆ ಒಡೆಯುವಂತೆ ಅಡುಗೆ ಬಡಿಸುವ ನಮ್ಮ ಅಮ್ಮ ನಾದಬ್ರಹ್ಮ ಹಂಸಲೇಖ ಅವರು ಮನೆಗೆ ಬಂದಾಗ ಬಜ್ಜಿ ಮಾಡಿ ಅವರಿಗೆ ಹಿಂಸೆ ಕೊಟ್ಟು ಅವರ ಬಾಯಲ್ಲಿ ‘ಬಜ್ಜಿ ಅಮ್ಮ’ ಆಗಿ ಹೋದರು.

ಅಮ್ಮ ಹೆಚ್ಚಾಗಿ ಓದದಿದ್ದರೂ ನಮ್ಮೆನ್ನೆಲ್ಲ ಸ್ನಾತಕೋತ್ತರ ಪದವಿ ಮಾಡಿಸುವಲ್ಲಿ ಆಕೆಯ ಶ್ರಮ, ಪ್ರೋತ್ಸಾಹ ಎಂದು ಮರೆಯಲು ಸಾಧ್ಯವಿಲ್ಲ.


  • ಶಾಲಿನಿ ಹೂಲಿ ಪ್ರದೀಪ್

 

2 thoughts on “ಅಮ್ಮ, ನಿನಗೊಂದು ಒಲಮೆಯ ನುಡಿ…

  1. ಅಮ್ಮನ ಬಗ್ಗೆ ಬರೆದ ಲೇಖನ ಚೆನ್ನಾಗಿ ಮೂಡಿ ಬಂದಿದೆ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading