ಮಾತನಾಡುವಾಗ ಹತ್ತು ಸಲ ಯೋಚಿಸಬೇಕು. ಇನ್ನೊಬ್ಬರ ವೈಯಕ್ತಿಕ ವಿಷಯದಲ್ಲಿ ಅವರು ಹೀಗೇ ಎಂದು ಏನೇನೋ ಅಂದುಕೊಳ್ಳುವ ಮುನ್ನ ಮನಸ್ಸಿನ ಹಪಾಹಪಿಗೆ ಸ್ವಲ್ಪ ಕಡಿವಾಣವಿರಲಿ, ಅಂಕಣಕಾರ್ತಿ ಮಂಗಳ ಎಂ ನಾಡಿಗ್ ಅವರ ‘ಅಂಗೈಯಲ್ಲಿ ಪ್ರಪಂಚ’ ಅಂಕಣದಲ್ಲಿ ‘ಏನೇನೋ ಅಂದುಕೊಳ್ಳುವ ಮುನ್ನ’ ತಪ್ಪದೆ ಮುಂದೆ ಓದಿ.
ಅದೊಂದು ತ್ಯಾಗರಾಜರ ಆರಾಧನೆಯ ಸಂಗೀತ ಕಾರ್ಯಕ್ರಮ. ನೀಲಳ ಬಂಧುವೊಬ್ಬರು ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ಅನೇಕರಿಗೆ ಆಹ್ವಾನವಿತ್ತು. ಅಂತೆಯೇ ನೀಲಳಿಗೂ ಒಂದು ತಿಂಗಳು ಮುಂಚೆಯೇ ಆಹ್ವಾನವಿತ್ತಾಗ ಅವಳು ಬರಲು ಪ್ರಯತ್ನಿಸುವೆ ಎಂದಿದ್ದಳು. ಏಕೆಂದರೆ, ಆ ದಿನ ಹೇಗಿರುತ್ತದೋ, ಬೇರೆ ಯಾವ ಅವಸರದ ಕೆಲಸ-ಕಾರ್ಯಗಳು, ಮನೆಯ ಉಳಿದ ಸದಸ್ಯರ ಯೋಜನೆಗಳು, ವಯಸ್ಸಾದ ಅತ್ತೆ-ಮಾವನ ಜವಾಬ್ದಾರಿ, ಅವರ ಸ್ಥಿರವಲ್ಲದ ಆರೋಗ್ಯ ಹೀಗೆ ಮನ್ನಣೆ ನೀಡಬೇಕಾದ ಹಲವು ಅಂಶಗಳಿರುವಾಗ ಒಂದು ತಿಂಗಳು ಮುಂಚೆಯೇ ಖಂಡಿತಾ ಬರುತ್ತೇವೆ ಎನ್ನಲು ಸಾಧ್ಯವಾಗುವುದಿಲ್ಲ ಎಂಬುದನ್ನು ಅವಳು ಅರಿತಿದ್ದಳು. ಒಂದೆರಡು ಬಾರಿ ಅವರು ನೆನಪಿಸಿ ಕನ್ಫರ್ಮ್ ಮಾಡಲು ತಿಳಿಸಿದ್ದರು. ಏಕೆಂದರೆ, ಅವರಿಗೂ ಜಾಗದ ವ್ಯವಸ್ಥೆ, ಲಘು ಉಪಹಾರದ ವ್ಯವಸ್ಥೆ ಮಾಡಲು ಎಷ್ಟು ಜನರು ಬರುತ್ತಾರೆ ಎಂಬ ಲೆಕ್ಕ ಬೇಕಿತ್ತು. ಇದು ಖಂಡಿತಾ ತಪ್ಪಲ್ಲ. ಒಂದು ಕಾರ್ಯಕ್ರಮದ ಆಯೋಜನೆ ಮಾಡಬೇಕಾದರೆ ಅದರ ಹಿಂದಿನ ಶ್ರಮ ಬಹಳ ಇರುತ್ತದೆ. ಇದನ್ನರಿತ ನೀಲಾ, ಕಾರ್ಯಕ್ರಮದ ದಿನ ಹತ್ತಿರವಾಗುತ್ತಿದ್ದಂತೆ ತನ್ನ ವೈಯಕ್ತಿಕ ಕಾರಣದಿಂದ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎನ್ನುವುದನ್ನು ಮನಗಂಡು ತಾನು ಬರುತ್ತಿಲ್ಲ ಎಂದು ತಿಳಿಸಿದ್ದಳು. ಕಾರ್ಯಕ್ರಮ ಮುಗಿದ ಸ್ವಲ್ಪ ದಿನಗಳ ನಂತರ ಸಿಕ್ಕ ಅವಳ ಬಂಧುವೊಬ್ಬರು, ನಿನ್ಗೆ ಅದ್ರಲ್ಲೆಲ್ಲಾ ಇಂಟ್ರೆಸ್ಟ್ ಇಲ್ಲ ಅನ್ಸುತ್ತಲ, ಇವಾಗಿನವರಿಗೆ ನಮ್ಮೋರು /ತಮ್ಮೋರು ಯಾರೂ ಬೇಡ ಎಂದೆಲ್ಲಾ ಬಾಯಿಗೆ ಬಂದಂತೆ ಅಂದು ತಮ್ಮ ಬಾಯಿಚಪಲ ತೀರಿಸಿಕೊಂಡರು. ಯಾವ ಒಂದು ಮಾತನ್ನೂ ಇವಳಿಗೆ ಆಡಲು ಅವಕಾಶ ಕೊಡದೇ.
ಅಸಲಿಗೆ, ನೀಲಳಿಗೆ ಮೆನೋಪಾಸ್ ಸಮಯ. ಅವಳಿಗೂ ಕಾರ್ಯಕ್ರಮಕ್ಕೆ ಹೋಗಬೇಕೆಂಬ ಆಸೆ ತುಂಬಾ ಇತ್ತು. ವಿಪರೀತ ರಕ್ತಸ್ರಾವದಿಂದಾಗಿ ನಿಂತುಕೊಂಡು ಅಡುಗೆ ಮಾಡಲೂ ಕಷ್ಟಪಡುತ್ತಿದ್ದವಳು ಕಾರ್ಯಕ್ರಮಕ್ಕೆ ಹೇಗೆ ಹೋಗಲು ಸಾಧ್ಯ. ಕೆಲವೊಂದು ವಿಷಯಗಳನ್ನು ಎಲ್ಲರ ಮುಂದೆ ಬಾಯಿಬಿಟ್ಟು ಹೇಳಲೂ ಸಾಧ್ಯವಾಗುವುದಿಲ್ಲ. ಹಾಗಾಗಿ ವೈಯಕ್ತಿಕ ಕಾರಣದಿಂದ ಬರಕಾಗ್ಲಿಲ್ಲ ಎಂದಾಗ ಜಾಸ್ತಿ ಕೆದಕದಿರುವುದು ಒಳ್ಳೆಯದು.

ಫೋಟೋ ಕೃಪೆ : ಅಂತರ್ಜಾಲ
ಈಗಂತೂ ಹೆಚ್ಚಿನವರಿಗೆ ನೆಲದ ಮೇಲೆ ಕುಳಿತು ಊಟ ಮಾಡಲು ಸಾಧ್ಯವಾಗದಿರುವುದು ಸರ್ವೇಸಾಮಾನ್ಯ. ಅದಕ್ಕೂ ಕೆಲವೊಮ್ಮೆ ಅವರದೇ ಆದ ಕಾರಣಗಳು ಇರುತ್ತವೆ. ಜೀವನ ಶೈಲಿ, ನೆಲದ ಮೇಲೆ ಕುಳಿತು ಊಟ ಮಾಡುವ ಅಭ್ಯಾಸ ತಪ್ಪಿ ಹೋಗಿರುವುದು. ಕೆಳಗೆ ಕುಳಿತ ಸ್ವಲ್ಪ ಹೊತ್ತಿಗೆ ಕಾಲು ಜೋಮು ಹಿಡಿಯಲು ಪ್ರಾರಂಭವಾಗುವುದು. ಇನ್ನು ಹಲವರಿಗೆ ಮಂಡಿ ನೋವು. ಇದಕ್ಕೆ ಈಗ ನಲ್ವತ್ತು/ಐವತ್ತರ ಆಸುಪಾಸಿನವರೂ ಹೊರತಲ್ಲ. ಹೀಗೆ ಹತ್ತು ಹಲವು ಕಾರಣಗಳು.
ಒಂದು ಕಾರ್ಯಕ್ರಮದಲ್ಲಿ ಕೆಳಗಡೆಯೇ ಬಾಳೆ ಎಲೆ ಹಾಕಿ ಬಡಿಸಿದ್ದರು. ಆ ವ್ಯಕ್ತಿ ಯಾವುದನ್ನೂ ಸರಿಯಾಗಿ ಹಾಕಿಸಿಕೊಳ್ಳದೇ ಎಲ್ಲವನ್ನೂ ಬೇಡ ಬೇಡ ಎನ್ನುತ್ತಿದ್ದರು. ಕೆಳಗೆ ಕುಳಿತು ಸ್ವಲ್ಪ ಹೊತ್ತಿಗೆ ಕೂರಲಾಗದೇ ಕಷ್ಟಪಡುತ್ತಿದ್ದರು. ನಂತರ ಅನ್ನ ಸಾರು ತಿಂದು ಎದ್ದು ಹೋದರು. ಅದನ್ನು ನೋಡಿದ ಎದುರುಗಡೆ ಕೂತ ವ್ಯಕ್ತಿ , ಸರಿಯಾಗಿ ಮೈನ್ಟೈನ್ ಮಾಡ್ಳಿಲ್ಲ , ಹಾಗಾಗೇ ಕೆಳ್ಗಡೆ ಕೂತ್ಗಳಕಾಗಲ್ಲ ಎಂಬ ಒಂದು ಸ್ಟೇಟ್ಮೆಂಟನ್ನು ಎಲ್ಲರ ಎದುರಲ್ಲೇ ನೀಡಿದರು. ನಿಜಕ್ಕೂ ಆ ವ್ಯಕ್ತಿಗೆ ಅನಾರೋಗ್ಯದ ಕಾರಣ ಆಪರೇಷನ್ ಆಗಿ ಕೆಳಗಡೆ ಕೂರುವುದು, ಭಾರ ಎತ್ತುವುದು, ದೈಹಿಕ ಶ್ರಮದ ಕೆಲಸ ಈತರ ಕೆಲವೊಂದನ್ನು ಮಾಡಲು ಸಾಧ್ಯವಾಗುತ್ತಿರಲಿಲ್ಲ. ಜೊತೆಗೆ ಕರಿದ ಪದಾರ್ಥಗಳು, ಹೊರಗಡೆಯ ಊಟ-ತಿಂಡಿಯೂ ದೇಹಕ್ಕೆ ಒಗ್ಗುತ್ತಿರಲಿಲ್ಲ . ಹಾಗಾಗೇ ಎಲ್ಲವನ್ನೂ ಬೇಡಬೇಡವೆಂದು ಅನ್ನ ಸಾರು ತಿಂದು ಎದ್ದು ಹೋಗಿದ್ದರು. ಹೀಗೆ ನಮಗೆ ಗೊತ್ತಿಲ್ಲದ ಎಷ್ಟೋ ವಿಚಾರಗಳು ಇರುವಾಗ ಒಬ್ಬ ವ್ಯಕ್ತಿಯನ್ನು ನೋಡಿ ಹೀಗೇ ಎಂದು ಜಡ್ಜ್ ಮಾಡುವುದು ಎಷ್ಟರ ಮಟ್ಟಿಗೆ ಸರಿ..?
ಕಾರ್ಯಕ್ರಮಗಳಲ್ಲಿ, ಪೂಜೆ-ಪುನಸ್ಕಾರಗಳಲ್ಲಿ ಭಾಗವಹಿಸದೇ ಇರುವುದು, ಸೀರೆ ಉಡದೇ ಇರುವುದು, ಕೆಳಗಡೆ ಕುಳಿತುಕೊಳ್ಳದೇ ಇರುವುದು, ಹೊರಗಡೆಯ ಸಮಾರಂಭಗಳ ಊಟ ತಿಂಡಿ ಮಾಡದೇ ಇರುವುದು, ಸಿಹಿತಿನಿಸು, ಕಾಫಿ /ಟೀ ಮುಂತಾದವುಗಳನ್ನು ಅವಾಯ್ಡ್ ಮಾಡುವುದು, ಬರ್ತಡೇ ಪಾರ್ಟಿಗಳಲ್ಲಿ ಕೇಕ್ ತಿನ್ನಿಸಿಕೊಳ್ಳದೇ ಇರುವುದು, ಹೊರಗಡೆಯ ಪರಿಚಯದವರನ್ನು ಮನೆಗೆ ಕರೆಯದೇ ಇರುವುದು, ಹಣದ ವಿಷಯದಲ್ಲಿ ಹೀಗೆ ಇನ್ನೂ ಮುಂತಾದ ವಿಷಯಗಳಲ್ಲಿ ಅವರಿಗೆ ಅವರವರದೇ ಆದ ವಿಚಾರಧಾರೆ, ನಂಬಿಕೆಗಳು, ಸ್ವಾಭಿಮಾನ, ತಾವು ಹೀಗೇ ಬದುಕಬೇಕೆಂದುಕೊಂಡಿರುವ ಅವರ ಸ್ಪಷ್ಟ ನಿಲುವು, ಆರ್ಥಿಕ ಪರಿಸ್ಥಿತಿ, ಬೇರೆಬೇರೆ ಕಮಿಟ್ಮೆಂಟ್ಗಳು, ಮನೆಯ ವಾತಾವರಣ, ಮನೆಯ ಪರಿಸ್ಥಿತಿ, ಮನೆಯ ಇತರ ಸದಸ್ಯರ ಮನಸ್ಥಿತಿ, ಆರೋಗ್ಯ ಸಮಸ್ಯೆ ಎಲ್ಲವೂ ಕಾರಣವಾಗಿರುತ್ತದೆ. ಜೊತೆಗೆ ಎಲ್ಲರೆದುರು ಹೇಳಿಕೊಳ್ಳಲಾಗದ ಎಷ್ಟೋ ವಿಷಯಗಳು ಅಡಗಿರುತ್ತವೆ. ಇನ್ನು ಕೆಲವೊಮ್ಮೆ ಆತ್ಮೀಯರೆಂದು ಹೇಳಿಕೊಂಡಾಗ ಅವರೇ ಇವರನ್ನು ಅವಶ್ಯಕತೆ ಇಲ್ಲದಿದ್ದರೂ ಇತರರ ಮುಂದೆ ಸಣ್ಣವರನ್ನಾಗಿ ಮಾಡುವ ಸಾಧ್ಯತೆಗಳನ್ನೂ ತೆಗೆದು ಹಾಕುವಂತಿಲ್ಲ. ತಾವು ದೊಡ್ಡವರೆನಿಸಿಕೊಳ್ಳಲು ಅವರ ಕೈಲಾಗಲ್ಲ ನಮ್ಮ ಕೈಲಿ ಆಗುತ್ತದೆ ಎಂಬ ಅವರ ಮನೋಧೋರಣೆಯೂ ಇದಕ್ಕೆ ಹೊರತಲ್ಲ. ಸಂತೋಷ , ಅವರವರ ಬದುಕು ಅವರದು. ಹಾಗಂತ ಬೇರೆಯವರಿಂದ ಆಗಲ್ಲ ಎನ್ನುವುದನ್ನು ಯಾರೂ ಕೇಳದೇ ಇದ್ದರೂ ಇತರರ ಮುಂದೆ ತಾವಾಗೇ ಹೇಳಿ ಇನ್ನೊಬ್ಬರ ತೇಜೋವಧೆ ಮಾಡುವುದು ಸರಿಯಲ್ಲ.
ಎಲ್ಲಾದರೂ ಅಷ್ಟೇ, ಮಾತನಾಡುವಾಗ ಹತ್ತು ಸಲ ಯೋಚಿಸಬೇಕು. ತಮ್ಮ ಮನಸ್ಸಿಗೆ ಬಂದಂತೆ ಇನ್ನೊಬ್ಬರ ಬಗ್ಗೆ ಹೇಳಿ ಬಾಯಿ ಚಪಲ ತೀರಿಸಿಕೊಳ್ಳುವುದು ಸಭ್ಯತೆಯಲ್ಲ. ಅದು ನಿಮ್ಮನ್ನು ನೀವು ಏನೆಂದು ತೋರಿಸಿಕೊಳ್ಳುವ ಪರಿ ಅಷ್ಟೇ. ಇನ್ನಾದರೂ ಇನ್ನೊಬ್ಬರ ವೈಯಕ್ತಿಕ ವಿಷಯದಲ್ಲಿ ಅವರು ಹೀಗೇ ಎಂದು ಏನೇನೋ ಅಂದುಕೊಳ್ಳುವ ಮುನ್ನ ( ಜಡ್ಜ್ ಮಾಡುವ ಮುನ್ನ)ಮನಸ್ಸಿನ ಹಪಾಹಪಿಗೆ ಸ್ವಲ್ಪ ಕಡಿವಾಣವಿರಲಿ ಎಂಬ ಆಶಯದೊಂದಿಗೆ.
- ಕೃಪೆ : ಸುತ್ತ ಮುತ್ತ ಲೇಖನಗಳ ಸಂಕಲನ
ಹಿಂದಿನ ಸಂಚಿಕೆಗಳು :
- ಅಂಗೈಯಲ್ಲಿ ಪ್ರಪಂಚ (ಭಾಗ-೧)
- ಅಂಗೈಯಲ್ಲಿ ಪ್ರಪಂಚ (ಭಾಗ-೨)
- ಅಂಗೈಯಲ್ಲಿ ಪ್ರಪಂಚ ‘ಗಂಡು ಮಕ್ಕಳ ಮೇಲೆ ಉಂಟಾಗುವ ಲೈಂಗಿಕ ದೌರ್ಜನ್ಯ’ (ಭಾಗ-೩)
- ಅಂಗೈಯಲ್ಲಿ ಪ್ರಪಂಚ ‘ನಾನು… ನಿಮ್ಮ ದಿಂಬು’ (ಭಾಗ-೪)
- ಅಂಗೈಯಲ್ಲಿ ಪ್ರಪಂಚ ‘ಆಡಿಕೊಳ್ಳುವುದು’ (ಭಾಗ- ೫)
- ಅಂಗೈಯಲ್ಲಿ ಪ್ರಪಂಚ ‘ಕ್ರಿಯೆ ಇದ್ದ ಮೇಲೆ ಪ್ರತಿಕ್ರಿಯೆ’ (ಭಾಗ- ೬)
- ಅಂಗೈಯಲ್ಲಿ ಪ್ರಪಂಚ ‘ಹೈಸ್ಕೂಲ್, ಕಾಲೇಜು ಮಕ್ಕಳಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯಗಳ ವ್ಯಸನ’ (ಭಾಗ- ೭)
- ಅಂಗೈಯಲ್ಲಿ ಪ್ರಪಂಚ ‘ನಾನ್ರೀ ನಿಮ್ ದಾರಿ’ (ಭಾಗ- ೮)
- ಅಂಗೈಯಲ್ಲಿ ಪ್ರಪಂಚ ‘ಸಾಮಾಜಿಕ ಜವಾಬ್ದಾರಿ’ (ಭಾಗ- ೯)
- ಅಂಗೈಯಲ್ಲಿ ಪ್ರಪಂಚ ‘ಹರೆಯ ಉಕ್ಕಿ’ (ಭಾಗ- ೧೦)
- ಮಂಗಳ ಎಂ ನಾಡಿಗ್
