ಅಂಗೈಯಲ್ಲಿ ಪ್ರಪಂಚ (ಭಾಗ- ೧೫)

ಮಧ್ಯಮ ವರ್ಗದ ಮಹಿಳೆಯರು ಅಂಗಡಿಗೆ ಹೋದಾಗ ಬಟ್ಟೆಯೋ, ಬ್ಯಾಗೋ, ಚಪ್ಪಲಿಯೋ ಹೀಗೆ ಏನಾದರೊಂದನ್ನು ಆಯ್ಕೆ ಮಾಡಿ ನಂತರ ಈಗ ಬೇಡ ಮುಂದಿನ ಬಾರಿ ನೋಡೋಣ ಎಂದು ಬಿಟ್ಟು ಬರುವುದು ಸರ್ವೇಸಾಮಾನ್ಯ. ಅಂಕಣಕಾರ್ತಿ ಮಂಗಳ ಎಂ ನಾಡಿಗ್ ಅವರ ‘ಅಂಗೈಯಲ್ಲಿ ಪ್ರಪಂಚ’ ಅಂಕಣದಲ್ಲಿ ‘ಮಧ್ಯಮ ವರ್ಗದ ಬದುಕು’ ತಪ್ಪದೆ ಮುಂದೆ ಓದಿ…

ಆರಕ್ಕೇರದ ಮೂರಕ್ಕಿಳಿಯದ ಬದುಕೇ ಮಧ್ಯಮ ವರ್ಗದವರದ್ದು. ಬಡತನ, ಸಿರಿತನಗಳ ಮಧ್ಯದಲ್ಲಿಯೇ ತ್ರಿಶಂಕುವಿನಂತೆ. ಹೀಗೇಕೆ ಹೇಳುತ್ತೇನೆಂದರೆ, ಬಡತನದ ರೇಖೆಯಲ್ಲಿರುವವರಿಗೆ ಸರ್ಕಾರದ ಎಲ್ಲಾ ಸೌಲಭ್ಯಗಳು ಸಿಗುತ್ತವೆ. ಅಲ್ಲದೇ ಒಂದೊಮ್ಮೆ ಏನಾದರೂ ಬೇಕಾದರೂ (ಅಗತ್ಯವಿದ್ದರೆ) ಅವರ ಪರಿಸ್ಥಿತಿ ನೋಡಿ ಸಹಾಯ ಮಾಡಲು ಅನೇಕರು ಮುಂದೆ ಬರುತ್ತಾರೆ. ಅವರೂ ಸಹ ಅನಿವಾರ್ಯವಾಗಿ ಸಹಾಯ ಪಡೆದುಕೊಳ್ಳುತ್ತಾರೆ ಮತ್ತು ಅದರಿಂದ ಸಂತಸ, ಸಂಭ್ರಮ ಹೊಂದುವವರೂ ಇದ್ದಾರೆ. ಇನ್ನು ಸಿರಿವಂತರಿಗೆ ಏನು ಬೇಕಾದರೂ ಪಡೆದುಕೊಳ್ಳುವ ಸಾಮರ್ಥ್ಯವಿರುತ್ತದೆ. ಹಾಗಾಗಿ ಅವರ ಆಸೆ, ಆಕಾಂಕ್ಷೆಗಳಿಗೆ ಬೇಲಿ ಹಾಕಿಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಈಗ ಮತ್ತೆ ಮಧ್ಯಮ ವರ್ಗಕ್ಕೆ ಬಂದರೆ ದಿನ ನಿತ್ಯದ ಬದುಕಿಗೆ ಸಾಕಾಗುವಷ್ಟು ಎಲ್ಲರ ಕಣ್ಣಿಗೂ ಕಾಣುವಂತೆ ಇರುವುದರಿಂದ ಅವರ ಬಗ್ಗೆ ಯಾರೂ ಕಷ್ಟದಲ್ಲಿದ್ದಾರೆ ಎಂದು ಭಾವಿಸುವುದಿಲ್ಲ. ಹಾಗಾಗಿ ಯಾವ ಕಡೆಯಿಂದ ನೋಡಿದರೂ ಇವರಿಗೆ ಆರ್ಥಿಕ ಸಹಾಯ ಜೊತೆಗೆ ಸರ್ಕಾರದ ವತಿಯಿಂದ ಸಿಗುವ ಕೆಲವು ಸೌಲಭ್ಯಗಳಿಂದ ಇವರು ವಂಚಿತರೆಂದೇ ಹೇಳಬಹುದು. ದಿನನಿತ್ಯ ದುಡಿದರೆ ಮಾತ್ರ ಅಂದಿನ ಬದುಕು.

ಏನಾದರೂ ಕಾಯಿಲೆ-ಕಸಾಲೆ ಬಂದಾಗ ಹೆಚ್ಚಿನ ಹಣದ ಅವಶ್ಯಕತೆ ಬಿದ್ದರೆ, ಮದುವೆ, ಮುಂಜಿ ಮುಂತಾದ ಸಮಾರಂಭಗಳನ್ನು ಮಾಡಬೇಕಾದರೆ, ಅಷ್ಟೇ ಏಕೆ? ಮಕ್ಕಳ ಫೀಸ್ ಕಟ್ಟುವಾಗ, ಮನೆ ಬಾಡಿಗೆ ಹೆಚ್ಚಳವಾದಾಗ, ಪೆಟ್ರೋಲ್ ಬೆಲೆ ಏರಿದಾಗ, ದಿನಸಿ, ಹಾಲು, ವಿದ್ಯುತ್ ಬಿಲ್ಲು, ನೀರಿನ ಶುಲ್ಕ ಮುಂತಾದ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾದಾಗ (ಇವರ ದುಡಿಮೆಯಂತೂ ಹೆಚ್ಚಾಗದ ಕಾರಣ) ಅವುಗಳನ್ನು ನಿಭಾಯಿಸುವಲ್ಲಿ ಇವರು ಹೈರಾಣಾಗುವುದಂತೂ ಸತ್ಯ. ಆಸೆ-ಆಕಾಂಕ್ಷೆಗಳನ್ನೆಲ್ಲ ಬದಿಗಿಡುವುದೇ ಇವರ ಜೀವನ. ನಿಮ್ಮಲ್ಲೇ ಬೇಕಿದ್ದರೆ ಗಮನಿಸಿ, ಮಧ್ಯಮ ವರ್ಗದ ಮಹಿಳೆಯರು ಅಂಗಡಿಗೆ ಹೋದಾಗ ಬಟ್ಟೆಯೋ, ಬ್ಯಾಗೋ, ಚಪ್ಪಲಿಯೋ ಹೀಗೆ ಏನಾದರೊಂದನ್ನು ಆಯ್ಕೆ ಮಾಡಿ ನಂತರ ಈಗ ಬೇಡ ಮುಂದಿನ ಬಾರಿ ನೋಡೋಣ ಎಂದು ಬಿಟ್ಟು ಬರುವುದು ಸರ್ವೇಸಾಮಾನ್ಯ. ಮನೆಯೊಡತಿಯಂತೂ ತನಗೆ ಬೇಕಿದ್ದೆಲ್ಲವನ್ನೂ ಪ್ರತೀ ಬಾರಿಯೂ ಹತ್ತಿಕ್ಕಿಕೊಂಡು (ಕಂಟ್ರೋಲ್ ಮಾಡಿಕೊಂಡು) ಅದೇ ದುಡ್ಡಿದ್ರೆ ಮಗು ಪುಸ್ತಕಕ್ಕೆ ಆಗುತ್ತೆ, ಹತ್ತಿರದ ಸಂಬಂಧಿಕರ ಮನೆಯ ಸಮಾರಂಭಕ್ಕೆ ಹೋದಾಗ ಉಡುಗೊರೆ ಕೊಡಲು ಆಗುತ್ತೆ, ಹೀಗೆ ಪ್ರತೀ ಬಾರಿಯೂ ತನಗೆ ಕಡಿಮೆ ಮಾಡಿಕೊಂಡೇ ತನ್ನವರು ಎನ್ನುವವರಿಗೆ ತನ್ನ ಕೈಲಾದಷ್ಟನ್ನು ಮನಃಸ್ಫೂರ್ವಕವಾಗಿ ಮಾಡುತ್ತಾಳೆ.

ಫೋಟೋ ಕೃಪೆ : ಗೂಗಲ್

ಗಂಡನೂ ಅಷ್ಟೇ, ದಿನನಿತ್ಯದ ಅಗತ್ಯವಾದ ಒಂದು ಗಾಡಿಯನ್ನು ತೆಗೆದುಕೊಳ್ಳಲೂ ಸಹ ಹತ್ತಾರು ಬಾರಿ ಯೋಚಿಸಿ ವರ್ಷಗಟ್ಟಲೆಯಿಂದ ಬಸ್ಸಿನಲ್ಲೇ ಪಯಣಿಸುತ್ತಾನೆ. ಅದು ಎರಡೆರಡು ಬಸ್ಸು ಬದಲಾಯಿಸಿ ಹೋಗಬೇಕಿದ್ದರೂ ಸಹ. ಗಾಡಿ ತೆಗೆದುಕೊಳ್ಳಲು ಸಾಲ ಮಾಡಬೇಕಾದ ಪರಿಸ್ಥಿತಿ, ಜೊತೆಗೆ ಬಡ್ಡಿ, ನಂತರ ಅದಕ್ಕೆ ದಿನದಿಂದ ದಿನಕ್ಕೆ ಏರು ಮುಖದಲ್ಲೇ ಸಾಗುವ ಪೆಟ್ರೋಲ್ ನ ಪೂರೈಕೆ ಇವೆಲ್ಲವನ್ನು ಯೋಚಿಸಿ ಮಾಡಿದ ಯೋಜನೆಯನ್ನು ಕೈಬಿಡುವುದೇ ಹೆಚ್ಚು. ಮಕ್ಕಳಿಗಾಗಿ ಆಸ್ತಿ-ಅಂತಸ್ತು ಮಾಡಲಾಗದಿದ್ದರೂ ಮಕ್ಕಳನ್ನು ಆಸ್ತಿಯನ್ನಾಗಿ ಮಾಡುವ ಜನರಲ್ಲಿ ಇವರದು ಮುಂಚೂಣಿಯ ಸ್ಥಾನ. ತಮಗೆ ಸಿಗಲಾರದ್ದು ಮಕ್ಕಳಿಗಾದರೂ ಸಿಗಲಿ ಎಂದು ಅದಕ್ಕಾಗಿ ತಮ್ಮ ಜೀವನವನ್ನೇ ಧಾರೆಯೆರೆಯುತ್ತಾರೆ.

ಇನ್ನು ಚಿಕ್ಕಪುಟ್ಟದಕ್ಕೂ ಸಂಭ್ರಮಿಸುವವರು ಈ ಮಧ್ಯಮವರ್ಗದವರು. ಮನೆಯವರೆಲ್ಲ ಒಂದು ಭಾನುವಾರ ಹೊರಗಡೆ ಹೋಗಿ ರಸ್ತೆ ಬದಿಯಲ್ಲಿ ಪಾನಿಪುರಿ, ಮಸಾಲೆ ಪುರಿ ತಿಂದು ಬಂದರೂ ಅದೇ ಅವರಿಗೆ ಎಲ್ಲರೂ ಒಟ್ಟಿಗೆ ಸಮಯ ಕಳೆದ ಸವಿನೆನಪಿನ ಘಳಿಗೆ. ಅದರಲ್ಲೇ ಖುಷಿ, ತೃಪ್ತಿ ಎಲ್ಲಾ. ಕಷ್ಟಪಟ್ಟು ಸಾಲ ಮಾಡಿ ಒಂದು ವಾಹನ ತೆಗೆದುಕೊಂಡರೂ (ಅದು ಸೆಕೆಂಡ್ ಹ್ಯಾಂಡ್ ಆಗಿದ್ದರೂ) ವರ್ಷಗಟ್ಟಲೆಯಿಂದ ಇದ್ದ ಕನಸು ಕೈಗೂಡಿ ಮನೆಯವರೆಲ್ಲರೂ ಸೇರಿ ಸಂಭ್ರಮಿಸುತ್ತಾರೆ.

ಗಂಜಿ ಕುಡಿದರೂ ನಮ್ಮನೆಯೊಳಗೇ ಇರಲಿ ಎಂಬಂತೆ ಇವರಲ್ಲಿ ಹೆಚ್ಚಿನವರು ತಮ್ಮ ಕಷ್ಟವನ್ನು ಯಾರ ಮುಂದೆಯೂ ಹೇಳಿಕೊಳ್ಳಲು, ಸಹಾಯ ಪಡೆಯಲು ಇಷ್ಟಪಡುವುದಿಲ್ಲ. ಸ್ವಾಭಿಮಾನದ ಬದುಕಿಗಾಗಿ ಹಗಲಿರುಳು ದುಡಿತ, ಯೋಚನೆ, ತೆಗೆದುಕೊಳ್ಳಬೇಕಾದ ಅಗತ್ಯಗಳ ಮುಂದೂಡಿಕೆ ಅವರ ಬದುಕೇ ಹೀಗೆ. ಆದರೆ ಈ ರೀತಿಯ ಬದುಕು ಕಂಡ ಮಕ್ಕಳಲ್ಲಿ ಛಲ ಮೂಡುವುದಂತೂ ಸತ್ಯ. ತಮ್ಮನ್ನು ಕೀಳಾಗಿ ಕಂಡವರು, ಹೀಯಾಳಿಸಿದವರು ಇಂಥವರ ಮುಂದೆ ತಲೆ ಎತ್ತಿ ನಿಲ್ಲಬೇಕೆಂಬ ಗುರಿ, ತಂದೆ-ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ಆಸೆ ಎಲ್ಲವೂ ಅವರಲ್ಲಿ ಮನೆಮಾಡಿರುತ್ತದೆ. ಇಂತಹ ಮಧ್ಯಮ ವರ್ಗದ ಬದುಕು ಕಂಡ ಅನೇಕ ಮಕ್ಕಳು ಚೆನ್ನಾಗಿ ಓದಿ, ಒಳ್ಳೆಯ ಹುದ್ದೆ ಪಡೆದು ದೇಶ-ವಿದೇಶದಲ್ಲೂ ಇಂದು ತಮಗೊಂದು ಕೆಲಸ, ಅದರಲ್ಲೊಂದು ಸ್ಥಾನಮಾನ ಜೊತೆಗೆ ಹೆಸರು, ಹಣ ಎಲ್ಲವನ್ನೂ ಪಡೆದು ಸಾಧಿಸಿ ತೋರಿಸಿದ್ದಾರೆ.

ಫೋಟೋ ಕೃಪೆ : ಗೂಗಲ್

ಮನುಷ್ಯನ ಸಹಜ ಗುಣವೆಂಬಂತೆ ಮಧ್ಯಮ ವರ್ಗದ ಕೆಲವರಲ್ಲಿ ಸಿರಿವಂತರನ್ನು ನೋಡಿ ಅಸೂಯೆ, ಹೊಟ್ಟೆಕಿಚ್ಚು, ತಮಗಿಲ್ಲವಲ್ಲ ಎಂಬ ಕೊರಗು, ಹೀಗೆ ಅವರಿಗೆ ಸದಾ ಹೋಲಿಸಿಕೊಂಡು ಬೇಸರಪಡುವವರೂ ಇದ್ದಾರೆ. ಇನ್ನು ಕೆಲವರು ಅವರಿಗೆ ಇದೆ ಅನುಭವಿಸಲಿ, ನಮಗಿದ್ದದ್ದರಲ್ಲಿ ನಾವು ತೃಪ್ತಿಯಾಗಿರೋಣ ಎಂದು ಸುಮ್ಮನಿರುತ್ತಾರೆ. ಆದರೆ ಯಾವಾಗ ಇವರ ಸ್ವಾಭಿಮಾನವನ್ನು ಕೆಣಕುವಂತಹ ಮಾತುಗಳು ಬರುತ್ತವೆಯೋ ಆಗ ಮಾತ್ರ ಒಂದೋ ತಿರುಗಿ ಬೀಳುತ್ತಾರೆ ಇಲ್ಲವಾದರೆ ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ಆನೆಗೆ ಆನೆ ಭಾರ, ಇರುವೆಗೆ ಇರುವೆ ಭಾರ ಎನ್ನುವಂತೆ ಬಡವರದು ಒಂದು ರೀತಿಯ ಬವಣೆಯಾದರೆ ಸಿರಿವಂತರದು ಇನ್ನೊಂದು ರೀತಿ. ಅವರ ದುಡಿಮೆಗೆ ತಕ್ಕಂತಹ ಕಮಿಟ್ಮೆಂಟ್ಗಳು, ಅದಕ್ಕಾಗಿ ಹೆಚ್ಚಿನ ಪರಿಶ್ರಮ, ಒತ್ತಡ ( ಟೆನ್ಶನ್) ಅದರಿಂದ ದೈಹಿಕವಾಗಿ ಉಂಟಾಗುವ ಸಮಸ್ಯೆಗಳು(ತಲೆನೋವು, ಬಿಪಿ, ಇತ್ಯಾದಿ) ಹೀಗೆ ನೂರಾರು ಇರುತ್ತವೆ. ಹಾಗಾಗಿ ಯಾರಿಗೂ ಹೋಲಿಸಿಕೊಳ್ಳದೇ ತಮ್ಮ ಬದುಕನ್ನು ತಮ್ಮ ಕೈಲಾದ ಮಟ್ಟಿಗೆ ಕಟ್ಟಿಕೊಳ್ಳುವೆಡೆ ಗಮನಹರಿಸುವುದು ಒಳ್ಳೆಯದು.

  • ಕೃಪೆ : ಸುತ್ತ ಮುತ್ತ ಲೇಖನಗಳ ಸಂಕಲನ

  •  ಮಂಗಳ ಎಂ ನಾಡಿಗ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW