ದೇಹಕ್ಕೆ, ಮನಸ್ಸಿಗೆ ಎರಡಕ್ಕೂ ಆದ ನೋವಿಗೆ ಮೊದಲು ಸ್ಪಂದಿಸುವುದೇ ಕಣ್ಣೀರು. ಅದೆಲ್ಲಿ ಅಡಗಿ ಕುಳಿತಿರುತ್ತದೋ, ಥಟ್ಟನೆ ಹನಿ ಉದುರಿಸಿಯೇ ಬಿಡುತ್ತದೆ. ಎಲ್ಲೆಂದರಲ್ಲಿ, ಯಾರ ಮುಂದಾದರೂ ಸರಿ. ತಡೆಯಬೇಕೆನ್ನುವುದು ಕೆಲವೊಮ್ಮೆ ವ್ಯರ್ಥ ಪ್ರಯತ್ನ. ಕನಿಷ್ಠ ಎರಡು ಹನಿಯನ್ನಾದರೂ ಉದುರಿಸಿ ತನ್ನ ಕರ್ತವ್ಯವನ್ನು ಮಾಡಿರುತ್ತದೆ. ಅಂಕಣಕಾರ್ತಿ ಮಂಗಳ ಎಂ ನಾಡಿಗ್ ಅವರ ‘ಅಂಗೈಯಲ್ಲಿ ಪ್ರಪಂಚ’ ಅಂಕಣದಲ್ಲಿ ‘ಕಣ್ಣೀರು’ ತಪ್ಪದೆ ಮುಂದೆ ಓದಿ…
ಹೌದು, ಕೆಲವರು ತುಂಬಾ ಮೃದು, ಸೂಕ್ಷ್ಮ, ಸ್ವಾಭಿಮಾನಿಗಳು. ಬೇಗ ಕಣ್ಣೀರು ಬಂದು ಬಿಡುತ್ತದೆ. ಎಷ್ಟೇ ತಡೆದುಕೊಳ್ಳಬೇಕೆಂದರೂ ಸಾಧ್ಯವಾಗುವುದಿಲ್ಲ. ಇನ್ನು ಹಲವರು ಬಹಳ ಕಷ್ಟ ಪಟ್ಟು ಬೇರೆಯವರ ಮುಂದೆ ಅಳಬಾರದೆಂದು ತಡೆಹಿಡಿದು ಬಾತ್ರೂಮ್ ಗೋ, ಬೆಡ್ರೂಂಗೋ, ಬೇರೆಡೆಗೋ ಹೋಗಿ ಬಿಕ್ಕಿಬಿಕ್ಕಿ ಅತ್ತು ಹಗುರಾಗಿ ಮುಖ ತೊಳೆದು ಹಿಂದಿರುಗುತ್ತಾರೆ.
ದುಃಖದ ಸನ್ನಿವೇಶಗಳನ್ನು ನೋಡಿದಾಗ, ಕೇಳಿದಾಗ, ಯಾರಾದರೂ ಮರಣ ಹೊಂದಿದಾಗ, ದೈಹಿಕವಾಗಿ ಪೆಟ್ಟಾದಾಗ, ಯಾರಾದರೂ ಹಂಗಿಸಿದಾಗ, ನಿಂದಿಸಿದಾಗ, ಅವಮಾನ ಆದಾಗ, ಏನನ್ನಾದರೂ ಮಾಡಲು ಹೋಗಿ ಸಾಧ್ಯವಾಗದೇ ಇದ್ದಾಗ, ಹೆದರಿದಾಗ, ಸೋತಾಗ, ಬಿದ್ದಾಗ, ಯಾರಾದರೂ ಬೈದಾಗ, ಹೊಡೆದಾಗ ಮತ್ತು ಯಾರಾದರೂ ಅಳುವುದನ್ನು ನೋಡಿದಾಗ ಸಹ ಕಣ್ಣೀರು ಬರುತ್ತದೆ. ಹೆಣ್ಣು ಮಕ್ಕಳನ್ನು ಧಾರೆ ಎರೆಯುವಾಗ, ಗಂಡನ ಮನೆಗೆ ಕಳಿಸುವಾಗ ಕಣ್ಣೀರು ಬರುವುದು ಸಹಜ. ಕಣ್ಣಿಗೆ ಪೆಟ್ಟಾದಾಗ, ಕಣ್ಣು ನೋವಾದಾಗ ಕಣ್ಣಿನಲ್ಲಿ ಸದಾ ನೀರು ಸುರಿಯುತ್ತಲೇ ಇರುತ್ತದೆ. ಚಿಕ್ಕಮಕ್ಕಳಿಗೆ ಮನೆಯವರೆಲ್ಲರೂ ತಮ್ಮನ್ನು ನಿರ್ಲಕ್ಷಿಸುತ್ತಿದ್ದಾರೆ ಎನಿಸಿದಾಗ ಎಲ್ಲರ ಗಮನ ಸೆಳೆಯಲು ಅತ್ತು ಕಣ್ಣೀರು ಸುರಿಸುತ್ತಾರೆ. ಅಲ್ಲದೇ ಮಕ್ಕಳು ಆಟವಾಡುತ್ತಾ ಬಿದ್ದಾಗ ಹೆಚ್ಚು ಪೆಟ್ಟಾಗಿಲ್ಲದಿದ್ದರೆ ಅದರತ್ತ ಗಮನ ಹರಿಸದೇ ತಮ್ಮ ಪಾಡಿಗೆ ತಾವು ಆಟವಾಡುತ್ತಿರುತ್ತಾರೆ. ಆದರೆ ತಾವು ಬಿದ್ದದ್ದನ್ನು ಯಾರಾದರೂ ನೋಡಿದ್ದಾರೆಂದು ತಿಳಿದ ತಕ್ಷಣ ಜೋರಾಗಿ ಅಳಲು ಪ್ರಾರಂಭಿಸುತ್ತಾರೆ.

ಹೆಣ್ಣಿಗೂ ಕಣ್ಣೀರಿಗೂ ಅವಿನಾಭಾವ ಸಂಬಂಧವಂತೆ. ಆದರೆ ಕಣ್ಣೀರು ಹಾಕಲೂ ಸ್ವಾತಂತ್ರ್ಯವಿಲ್ಲದ ಅನೇಕ ಮಹಿಳೆಯರಿದ್ದಾರೆ. ಗಂಡನ ದಬ್ಬಾಳಿಕೆಗೆ ನಲುಗಿ ಕಣ್ಣೀರು ತಡೆಹಿಡಿಯಲಾಗದೇ ಅತ್ತರೆ ಅದಕ್ಕೂ ಬಯ್ಯುವವರಿದ್ದಾರೆ. ತಾವು ಮಾಡಿದ್ದೇ ಸರಿ, ಅಳುವಂಥದ್ದು ಏನೂ ಆಗಿಲ್ಲ ಎಂದು. ತವರಿನವರ ಕಷ್ಟಕ್ಕೋ, ಹತ್ತಿರದವರ ಆರೋಗ್ಯ ಸಮಸ್ಯೆಯ ಬಗ್ಗೆ ತಿಳಿದೋ ಕಣ್ಣೀರು ಸುರಿಸಿದರೆ ವ್ಯಂಗ್ಯಭರಿತ ಮಾತುಗಳಿಂದ ಚುಚ್ಚುವವರೂ ಇದ್ದಾರೆ. ಸುಂಕದವರ ಮುಂದೆ ಸುಖ-ದುಃಖ ಹೇಳಿಕೊಂಡಂತೆ ಅಂತಾರಲ್ಲ ಹಾಗೆ. ಆದರೆ ಅವರ ಜೊತೆಯೇ ಬದುಕುತ್ತಿರುವುದರಿಂದ ಹೇಳಲೇಬೇಕಾದ ಅನಿವಾರ್ಯತೆ. ನನ್ನವರು, ತನ್ನವರೆಂಬ ಭಾವಗಳ ಬಂಧದಲ್ಲಿ ಕೆಲವೊಮ್ಮೆ ಕಣ್ಣೀರಿಗೇ ಹೆಚ್ಚಿನ ಆದ್ಯತೆ. ಭಾವಗಳ ತೀವ್ರತೆ ತಡೆಯಲಾಗದೇ ಪಟಪಟನೆ ಉದುರಿಸಿ, ಬಿಟ್ಟ ನಿಟ್ಟುಸಿರೇ ಸಮಾಧಾನದ ಮುನ್ನುಡಿ. ಕಣ್ಣೀರು ಭಾವನಾತ್ಮಕವಾಗಿ ಬರುವಂಥದ್ದು. ಆ ಸಮಯದಲ್ಲಿ ಜೊತೆಗಿರುವವರ ಒಂದೆರಡು ಸಾಂತ್ವನದ ಮಾತು, ಕೊಡುವ ಭರವಸೆ ಎಲ್ಲವೂ ವ್ಯಕ್ತಿಯ ಕುಗ್ಗಿದ ಆತ್ಮವಿಶ್ವಾಸವನ್ನು ಮತ್ತೆ ಹೆಚ್ಚಿಸುತ್ತದೆ. ಆದರೆ ನಿನ್ನ ಕಣ್ಣೀರಿಗೆ ನಾನೇನೂ ಕರಗುವುದಿಲ್ಲ ಎಂಬ ಕೆಲವರ ಹೇಳಿಕೆಗಳು ಅವರ ದಾರ್ಷ್ಟ್ಯ ತನವನ್ನು ತೋರಿಸುತ್ತದೆ. ಗೋರ್ಕಲ್ಲ ಮೇಲೆ ಮಳೆ ಸುರಿದಂತೆ ಅಂತಾರಲ್ಲ ಹಾಗೆ. ಕಷ್ಟ ಹೇಳಿಕೊಂಡರೂ ಕರಗದೇ ಸ್ಪಂದಿಸದವರ ಜೊತೆ ಬದುಕುವುದು ಬಹಳ ಕಷ್ಟ.
ಬಹುಶಃ ಇದನ್ನು ಎಲ್ಲರೂ ಗಮನಿಸಿರಬಹುದು. ಹುಟ್ಟಿದ ಮಕ್ಕಳು ಅತ್ತಾಗ ಶಬ್ಧ ಮಾತ್ರ ಕೇಳಿಸುತ್ತದೆ. ಕಣ್ಣೀರು ಬರುವುದಿಲ್ಲ. ಏಕೆಂದರೆ, ಕಣ್ಣುಗಳನ್ನು ಸಂರಕ್ಷಿಸಲು ಬೇಕಾದಷ್ಟು ತೇವಾಂಶ ಶಿಶುಗಳಲ್ಲಿರುತ್ತದೆ. ಕೆಲವು ವಾರಗಳು ಕಳೆದ ನಂತರ ಅವುಗಳ ಕಣ್ಣೀರ ಗ್ರಂಥಿ ಸಂಪೂರ್ಣವಾಗಿ ವಿಕಸಿಸಿದಾಗ ಕಣ್ಣೀರು ಬರಲು ಆರಂಭವಾಗುತ್ತದೆ.

ಕಣ್ಣೀರಿನಲ್ಲಿ ಮೂರು ಬಗೆ :
- ಕನಿಷ್ಠ ಮಿತಿಯ ಕಣ್ಣೀರು: ಇದು ಕಣ್ಣೀರಿನ ಗ್ರಂಥಿಯಿಂದ ಸತತವಾಗಿ ಉತ್ಪತ್ತಿಯಾಗುವ ತಿಳಿ ದ್ರವವಾಗಿದ್ದು ಕಣ್ಣಿನ ಸಂರಕ್ಷಣೆಯ ಜೊತೆಗೆ ಕಣ್ಣನ್ನು ತೇವದಿಂದ ಇರಿಸುತ್ತದೆ. ನಮ್ಮ ದೃಷ್ಟಿಯನ್ನು ವೃದ್ಧಿಸುತ್ತದೆ. ಕಣ್ಣು ಮಿಟುಕಿಸಿದಾಗಲೆಲ್ಲ ಈ ದ್ರವವು ಕಣ್ಣುಗಳನ್ನು ಆವರಿಸುತ್ತದೆ.
- ಪ್ರತಿಕ್ರಿಯಾತ್ಮಕ ಕಣ್ಣೀರು: ಯಾವುದಾದರೂ ವಸ್ತು ಅಥವಾ ಧೂಳು ಕಣ್ಣಿಗೆ ಬಿದ್ದಾಗ ಬರುವಂಥದ್ದು. ಒಮ್ಮೊಮ್ಮೆ ಆಕಳಿಸುವಾಗ, ನಗುವಾಗಲೂ ಸಹ ಪ್ರತಿಕ್ರಿಯಾತ್ಮಕ ಕಣ್ಣೀರು ಬರುತ್ತದೆ.
- ಭಾವನಾತ್ಮಕ ಕಣ್ಣೀರು: ನಾವು ಭಾವನಾತ್ಮಕವಾಗಿ ಕುಗ್ಗಿ ಹೋದಾಗ ಬರುವಂತಹ ಕಣ್ಣೀರು. ಪ್ರತಿಕ್ರಿಯಾತ್ಮಕ ಕಣ್ಣೀರಿಗಿಂತ ಇದರಲ್ಲಿ ಪ್ರೋಟೀನ್ ಅಂಶ ಸುಮಾರು 24 ಪ್ರತಿಶತ ಹೆಚ್ಚಿರುತ್ತದೆ.
ಕಣ್ಣೀರು ಉಪ್ಪುಪ್ಪು: ಪ್ರತಿಯೊಬ್ಬರಿಗೂ ಚಿಕ್ಕವಯಸ್ಸಿನಲ್ಲಿ ಕೆನ್ನೆ ಮೇಲಿಳಿದ ಕಣ್ಣೀರು ಒರೆಸುವ ಮುನ್ನವೋ, ಒರೆಸದೆಯೋ ತುಟಿಯಂಚಲಿ ನುಸುಳಿ ನಾಲಿಗೆಗೆ ತಾಗಿ ತನ್ನ ರುಚಿಯನ್ನು ತೋರಿಸಿಯೇ ಇರುತ್ತದೆ. ಕೆಲವೊಮ್ಮೆ ಒರೆಸಿದಷ್ಟೂ ಮತ್ತೆ ಮತ್ತೆ ಇಳಿದು ಬಿಕ್ಕಳಿಸಿದಾಗಲೇ ಸುಮ್ಮನಾಗುವ ಕಣ್ಣೀರು ಸದ್ಯಕ್ಕಂತೂ ಮನಸ್ಸಿಗೆ ಸಮಾಧಾನ ಮಾಡಿರುತ್ತದೆ.
ಮೊಸಳೆ ಕಣ್ಣೀರು ಎಂಬ ಪದ ನಮ್ಮಲ್ಲಿ ಹಿಂದಿನಿಂದಲೂ ಚಾಲ್ತಿಯಲ್ಲಿದೆ. ಕಷ್ಟ ಅಂತಾನೋ, ಬೇರೆಯವರ ದೃಷ್ಟಿಯಲ್ಲಿ ಒಳ್ಳೆಯವರಾಗಿ ಅನುಕಂಪ ಗಿಟ್ಟಿಸಲು ನಾಟಕ ಮಾಡಿ ಸುರಿಸುವ ಕಣ್ಣೀರಿಗೆ ಈ ಹೆಸರು. ಆದರೆ ನಿಜವಾದ ಕಣ್ಣೀರಿಗೂ ಈ ಹಣೆಪಟ್ಟಿ ಕಟ್ಟುವವರು ಇದ್ದಾರೆ. ಒಬ್ಬರ ಭಾವನೆಗಳ ಜೊತೆ ಆಟ ಆಡುವಾಗ ಮುಂದಿನ ಪರಿಣಾಮಗಳ ಬಗ್ಗೆ ಸ್ವಲ್ಪ ಎಚ್ಚರವಿದ್ದರೆ ಒಳ್ಳೆಯದು. ಸಂಬಂಧಪಡದವರೂ ಸಹ ತಮ್ಮ ಮನಸ್ಸಿನ ಹುಚ್ಚಾಟಕ್ಕೆ ಇನ್ನೊಬ್ಬರ ಭಾವನೆಗಳ ಜೊತೆ ಆಟವಾಡಿ ಕಣ್ಣೀರು ಹಾಕಿಸುತ್ತಾರೆ. ಅದರಲ್ಲೂ ತಮ್ಮದೇ ಸರಿ ಎಂದು ಇದ್ದದ್ದು, ಇಲ್ಲದ್ದು ಎಲ್ಲಾ ಸೇರಿಸಿ ಹೇಳಿ ಎಲ್ಲರ ಮುಂದೆ ತಾವೇ ದೊಡ್ಡವರಾಗಿ ಮೆರೆದು ಸುಖಿಸುವವರೂ ಇದ್ದಾರೆ.
ಕೆಲವೊಮ್ಮೆ ಕಣ್ಣೀರು ಕೂಡ ಬತ್ತಿ ಹೋಗುತ್ತದಂತೆ. ಜೀವನವಿಡೀ ಬರೀ ನೋವನ್ನು ಅನುಭವಿಸಿ ಅದಕ್ಕೇ ಒಗ್ಗಿ ಹೋಗಿದ್ದವರಿಗೆ ಒಳಗೆ ದುಃಖ ಎಷ್ಟಿದ್ದರೂ ಕಣ್ಣೀರು ಬರದೇ ಏನಾದರೂ ದೊಡ್ಡ ಆಘಾತವಾದ ಸಮಯದಲ್ಲಿ ಏನು ಮಾಡಬೇಕೆಂದು ತಿಳಿಯದೇ ವಿಪರೀತ ಮಾತನಾಡುತ್ತಾರೆ ಅಥವಾ ಎಲ್ಲೋ ದೃಷ್ಟಿನೆಟ್ಟು ಪೂರ್ತಿ ಮೌನವಾಗಿ ಬಿಡುತ್ತಾರೆ. ಒಮ್ಮೆ ಅತ್ತು ಬಿಡು ಮನಸ್ಸು ಹಗುರಾಗಲಿ ಎಂದು ಬೇರೆಯವರು ಹೇಳಿದರೂ ಇವರಿಗೆ ಕಣ್ಣೀರು ಬರುವುದಿಲ್ಲ.
ಕೊನೆಯದಾಗಿ ಯಾರಾದರೂ ನೋಯಿಸಿದರೆಂದು, ಇಲ್ಲಸಲ್ಲದ ಆರೋಪ ಮಾಡಿದರೆಂದು ಕಣ್ಣೀರು ಹಾಕಬೇಡಿ. ಯಾವ ಕ್ಷೇತ್ರದಲ್ಲಾದರೂ ಸರಿ, ವೃತ್ತಿಯಲ್ಲಾಗಲಿ, ಆಟದಲ್ಲಾಗಲಿ, ಬದುಕಿನಲ್ಲಾಗಲಿ ಒಬ್ಬರು ಮುಂದೆ ಹೋಗುತ್ತಿದ್ದಾರೆಂದರೆ ಹೊಟ್ಟೆಕಿಚ್ಚು, ಅಸೂಯೆ, ತಮಗೆ ಸಿಗದಿದ್ದುದು ಅವರಿಗೆ ಸಿಕ್ಕಿತಲ್ಲ ಎಂಬ ಸಂಕುಚಿತ ಮನೋಭಾವನೆಯಿಂದ ಅವರ ಹಿಂದಿನ ಶ್ರಮ, ಅವರು ಹಂತಹಂತವಾಗಿ ಮುನ್ನಡೆ ಸಾಧಿಸುತ್ತಿರುವುದು ಇದು ಯಾವುದನ್ನೂ ನೋಡದೆ, ಅವರ ಬಗ್ಗೆ ಇಲ್ಲಸಲ್ಲದ ಮಾತುಗಳನ್ನಾಡುತ್ತಾರೆ. ಹಿಂದಿಂದ ಆಡಿದ ಆ ಮಾತುಗಳು ಹೇಗೋ ಕಿವಿಗೆ ಬಿದ್ದಾಗ ದುಃಖವಾಗಿ ಕಣ್ಣೀರು ಬರುವುದು ಸಹಜ. ಆದರೆ ಒಂದು ಮಾತು, ಅವರ ಯೋಗ್ಯತೆ ಅಷ್ಟೇ ಎಂದು ಅದನ್ನು ಅಲ್ಲಿಗೇ ಬಿಡಿ. ಅಂತಹವರಿಗೋಸ್ಕರ ನಿಮ್ಮ ಭಾವನಾತ್ಮಕ ಕಣ್ಣೀರನ್ನು ವೇಸ್ಟ್ ಮಾಡಿಕೊಳ್ಳಬೇಡಿ. ಕಣ್ಣೀರು ಸುರಿಸಿದರೂ ಅದು ಯೋಗ್ಯ ವ್ಯಕ್ತಿಗೆ ಸಲ್ಲಲಿ.
- ಕೃಪೆ : ಸುತ್ತ ಮುತ್ತ ಲೇಖನಗಳ ಸಂಕಲನ
- ಹಿಂದಿನ ಸಂಚಿಕೆಗಳು :
- ಅಂಗೈಯಲ್ಲಿ ಪ್ರಪಂಚ (ಭಾಗ-೧)
- ಅಂಗೈಯಲ್ಲಿ ಪ್ರಪಂಚ (ಭಾಗ-೨)
- ಅಂಗೈಯಲ್ಲಿ ಪ್ರಪಂಚ ‘ಗಂಡು ಮಕ್ಕಳ ಮೇಲೆ ಉಂಟಾಗುವ ಲೈಂಗಿಕ ದೌರ್ಜನ್ಯ’ (ಭಾಗ-೩)
- ಅಂಗೈಯಲ್ಲಿ ಪ್ರಪಂಚ ‘ನಾನು… ನಿಮ್ಮ ದಿಂಬು’ (ಭಾಗ-೪)
- ಅಂಗೈಯಲ್ಲಿ ಪ್ರಪಂಚ ‘ಆಡಿಕೊಳ್ಳುವುದು’ (ಭಾಗ- ೫)
- ಅಂಗೈಯಲ್ಲಿ ಪ್ರಪಂಚ ‘ಕ್ರಿಯೆ ಇದ್ದ ಮೇಲೆ ಪ್ರತಿಕ್ರಿಯೆ’ (ಭಾಗ- ೬)
- ಅಂಗೈಯಲ್ಲಿ ಪ್ರಪಂಚ ‘ಹೈಸ್ಕೂಲ್, ಕಾಲೇಜು ಮಕ್ಕಳಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯಗಳ ವ್ಯಸನ’ (ಭಾಗ- ೭)
- ಅಂಗೈಯಲ್ಲಿ ಪ್ರಪಂಚ ‘ನಾನ್ರೀ ನಿಮ್ ದಾರಿ’ (ಭಾಗ- ೮)
- ಅಂಗೈಯಲ್ಲಿ ಪ್ರಪಂಚ ‘ಸಾಮಾಜಿಕ ಜವಾಬ್ದಾರಿ’ (ಭಾಗ- ೯)
- ಅಂಗೈಯಲ್ಲಿ ಪ್ರಪಂಚ ‘ಹರೆಯ ಉಕ್ಕಿ’ (ಭಾಗ- ೧೦)
- ಅಂಗೈಯಲ್ಲಿ ಪ್ರಪಂಚ ‘ಏನೇನೋ ಅಂದುಕೊಳ್ಳುವ ಮುನ್ನ’ (ಭಾಗ- ೧೧)
- ಅಂಗೈಯಲ್ಲಿ ಪ್ರಪಂಚ ‘ಮಗುವಿನ ಕಾಳಜಿ ಜೊತೆಗೆ ಜಾಗೃತಿ’ (ಭಾಗ- ೧೨)
- ಅಂಗೈಯಲ್ಲಿ ಪ್ರಪಂಚ ‘ವಯಸ್ಸಾದಂತೆ ಜೀವನ ಒಂದು ಬೋನಸ್ ’(ಭಾಗ- ೧೩)
- ಅಂಗೈಯಲ್ಲಿ ಪ್ರಪಂಚ ‘ವೃದ್ಧಾಶ್ರಮ ’ (ಭಾಗ- ೧೪)
- ಅಂಗೈಯಲ್ಲಿ ಪ್ರಪಂಚ ‘ಮಧ್ಯಮ ವರ್ಗದ ಬದುಕು’ (ಭಾಗ- ೧೫)
- ಮಂಗಳ ಎಂ ನಾಡಿಗ್
