ಒಬ್ಬರನ್ನು ಆಡಿಕೊಳ್ಳುವುದರಿಂದ ಆ ವ್ಯಕ್ತಿ ಡಿಪ್ರೆಶನ್ ಗೆ (ಕೀಳರಿಮೆ) ಹೋಗಿ ಜೀವ ಕಳೆದುಕೊಳ್ಳಬಹುದು. ಬೊಟ್ಟು ಮಾಡಿ ತೋರಿಸಿ ಆಡಿಕೊಳ್ಳುವುದರ ಬದಲು ಇರುವ ಒಳ್ಳೆಯದನ್ನು ಗುರುತಿಸಿ ಮೆಚ್ಚಿಕೊಳ್ಳೋಣ.‘ಆಡಿಕೊಳ್ಳುವುದು’ ಈ ವಿಷಯದ ಕುರಿತು ಲೇಖಕಿ ಮಂಗಳ ಎಂ ನಾಡಿಗ್ ಅವರ ‘ಅಂಗೈಯಲ್ಲಿ ಪ್ರಪಂಚ’ ಅಂಕಣದಲ್ಲಿ ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಒಬ್ಬರ ಬಗ್ಗೆ ಅಂದರೆ ಅವರ ನಡೆ, ನುಡಿ, ದೇಹ, ಭಾಷೆ, ರೂಪ, ಬಣ್ಣ, ಗಾತ್ರ ಇವುಗಳ ಬಗ್ಗೆ ಕೇವಲವಾಗಿ ಮಾತನಾಡುವುದನ್ನು ಆಡಿಕೊಳ್ಳುವುದು ಎನ್ನಬಹುದು. ಇದು ಮನೆಯಿಂದ ಪ್ರಾರಂಭವಾಗಿ ಶಾಲೆ- ಕಾಲೇಜು, ಸಮಾಜ, ಸ್ನೇಹಿತರು, ಬಂಧು – ಬಾಂಧವರು, ಮಾಧ್ಯಮಗಳು ಹೀಗೆ ಎಲ್ಲಾ ಕಡೆಯೂ ತನ್ನ ಕರಿನೆರಳನ್ನು ಚಾಚಿದೆ ಎನ್ನಬಹುದು. ಅದು ತಮಾಷೆಯ ಹೆಸರಿನಲ್ಲೇ ಆಗಲಿ, ಕೊಂಕು, ವ್ಯಂಗ್ಯವಾಗಲಿ, ಬೇಕಂತಲೇ ಮಾಡುವುದಾಗಲಿ ಹೇಗೆ ಮಾಡಿದರೂ ಇದು ಸರಿಯಂತೂ ಅಲ್ಲ. ಅವರಿಗೆ ಹಾಸ್ಯವಾದರೆ ಅನ್ನಿಸಿಕೊಂಡವರಿಗೆ ನೋವು, ಸಂಕಟ, ದುಃಖ, ಅವಮಾನ ಎಲ್ಲ. ಕೆಲವೊಂದು ಅನಿವಾರ್ಯತೆಗೆ ಕಟ್ಟುಬಿದ್ದು ಹೇಳಿಕೊಳ್ಳಲಾಗದೆ ತಾವೂ ಅವರೊಡನೆ ನಕ್ಕು ಒಬ್ಬರೇ ಇದ್ದಾಗ ಬಿಕ್ಕಿ ಬಿಕ್ಕಿ ಅಳುವವರೂ ಇದ್ದಾರೆ.
ಒಂದು ಮಗು ಹುಟ್ಟಿದಾಗಲೇ ಅದರ ಕುರಿತು ಈ ರೀತಿಯ ಮಾತುಗಳು ಶುರುವಾಗುತ್ತವೆ. ಮಗು ಏನೋ ಚೆನ್ನಾಗಿದೆ, ಆದ್ರೆ ಅದ್ರ್ ಅಮ್ಮಂತರಾನೆ ಸ್ವಲ್ಪ ಕಪ್ಪು. ಗಂಡ್ಮಗು ಅಲ, ಹಾಗಾಗಿ ತೊಂದ್ರೆ ಇಲ್ಲ, ಹೆಣ್ಣಾಗಿದ್ರೆ ಮುಂದ್ ಮದ್ವೆ ಹೊತ್ತಿಗ್ ಕಷ್ಟ ಆಗ್ತಿತ್ತು. ಇದು ಅನೇಕ ಕಡೆ ಕೇಳಿ ಬಂದಿರುವ ಮಾತು. ಇಲ್ಲಿ ಮನೆಯಲ್ಲಿರುವ ತಾಯಿಯನ್ನು ಮಾತ್ರವಲ್ಲದೆ ತಂದೆ, ಸೋದರ ಮಾವ, ಚಿಕ್ಕಪ್ಪ, ಚಿಕ್ಕಮ್ಮ ಹೀಗೆ ಯಾರಿಗೆ ಬೇಕಾದರೂ ಹೋಲಿಸಿ ಅವರನ್ನೂ ಸೇರಿಸಿ ಹೇಳುವುದು ರೂಢಿ. ಇವ್ನ್ ಸ್ವಲ್ಪ ಪೆದ್ದು , ಮಕ್ಳು ಸೋದ್ರು ಮಾವನ್ ಹೋಲ್ತಾರಂತೆ. ಅವ್ಳ್ ಕೂದ್ಲು ನೋಡು ಎಷ್ಟ್ ತೆಳ್ಳುಗಿದೆ, ಒಳ್ಳೇ ಇಲಿ ಬಾಲದ್ ತರ , ಆ ಮೂಗೋ ವಿಪ್ರೀತ ಉದ್ದ, ಮುಂಬ್ಹಲ್ಲು, ಅಯ್ಯೋ, ಎಷ್ಟ್ ಬೆಳ್ಳುಗಿದಾರೆ ಬಿಳೀ ಜಿರ್ಲೆ ತರ, ಒಳ್ಳೇ ಮೈದಾ ಹಿಟ್ ಮೆತ್ತಿಟ್ಟಂಗೆ. ಇನ್ನು ಎತ್ತರ ಇರುವವರನ್ನು ಅಡಿಕೆ ಮರ, ದೋಟಿ,ಹಾಗೆ ಹೀಗೆ ಎಂದು, ಕುಳ್ಳಗಿರುವವರನ್ನು ಎಷ್ಟ್ ಕುಳ್ಳುಕಿದಾರೆ, ಕಾಣ್ಸೋದೇ ಇಲ್ಲ ಹೀಗೆಲ್ಲ ಆಡಿಕೊಳ್ಳುವವರ ಪಟ್ಟಿ ದೊಡ್ಡದಿದೆ. ಆದರೆ ಇದನ್ನೆಲ್ಲ ಸೃಷ್ಟಿಯ ಸಹಜತೆ ಎಂದು ಅರಿತರೆ ಒಳ್ಳೆಯದು.
ಮಕ್ಕಳು ಹೆಚ್ಚಾಗಿ ತಂದೆ ತಾಯಿಯನ್ನು ಹೋಲುತ್ತಾರೆ . ಬೇಳೀತಾ, ಬೇಳೀತಾ ಅವರ ಬೆಳವಣಿಗೆಯಲ್ಲಿ ಎತ್ತರ ಕುಳ್ಳು, ದಪ್ಪ, ಸಣ್ಣ ಹೀಗೆ ಬದಲಾವಣೆಯಾಗಬಹುದು. ಎತ್ತರ , ಕುಳ್ಳು ಇದು ಹೆರಿಡಿಟಿಯೂ( ವಂಶ ಪಾರಂಪರ್ಯವಾಗಿ ಬಂದಿರುವುದು) ಹೌದು. ದಪ್ಪ, ಸಣ್ಣ ಹೆರಿಡಿಟಿಯ ಜೊತೆಗೆ ಅವರ ದಿನಚರಿ, ಸೇವಿಸುವ ಆಹಾರ, ಆರೋಗ್ಯ ಸಮಸ್ಯೆ , ಒತ್ತಡದ ಬದುಕು ಇವೆಲ್ಲವನ್ನೂ ಅವಲಂಬಿಸಿರಬಹುದು. ಎತ್ತರ ಆಗಬೇಕೆಂಬ ಆಸೆ ಅವರಿಗೂ ಇರುತ್ತದೆ. ಅದಕ್ಕಾಗಿ ಜಿಗಿತ, ವ್ಯಾಯಾಮಗಳ ಜೊತೆಗೆ ಪೌಷ್ಟಿಕ ಆಹಾರ, ಕೆಲವೊಂದು ಅನಗತ್ಯ ಮಾತ್ರೆಗಳು, ಹೀಗೆ ಶತಪ್ರಯತ್ನ ಮಾಡುವವರೂ ಇದ್ದಾರೆ. ಅಯ್ಯೋ, ಯಾಕಾದ್ರೂ ಇಷ್ಟೆತ್ರ ಇದೀನೋ ಎಂದುಕೊಳ್ಳುವವರೂ ಇದ್ದಾರೆ. ಅಷ್ಟಕ್ಕೂ ಹೀಲ್ಡ್ ಸ್ಲಿಪ್ಪರ್ ಹಾಕ್ಕೊಳಕಾಗಲ್ಲ ಅನ್ನೋದೆ ಎತ್ತರ ಇರೋ ಹೆಣ್ಮಕ್ಕಳ ಸಮಸ್ಯೆ. ಈಗ್ಲೇ ಇಷ್ಟ್ ಎತ್ರ ಇದೀನಿ. ಇನ್ನು ಹೀಲ್ಡ್ ಸ್ಲಿಪ್ಪರ್ ಹಾಕ್ಕೊಂಡ್ರೆ ಅಷ್ಟೆ ಎಂದು ಅದರ ಮೇಲಿನ ವ್ಯಾಮೋಹವನ್ನೇ ಬಿಡುತ್ತಾರೆ.
ದಪ್ಪದವರನ್ನು ಆನೆ ತರ, ಯಾವ ಅಕ್ಕಿ ತಿಂತಾರೋ, ಎಷ್ಟ್ ಕೆಜಿ ತಿಂತಾರೋ, ಅದೇನ್ ಅಷ್ಟ್ ದಪ್ಪ ಇದಾರೆ, ಸೋಂಬೇರಿ ಇರ್ಬೇಕು ಹೀಗೆ ಮಾತನಾಡಿ ತಮ್ಮ ಬಾಯಿ ಚಪಲ ತೀರಿಸಿಕೊಳ್ಳುವವರು ಅನೇಕರು. ಸಣ್ಣಗಾಗಲು ಅವರು ಪಟ್ಟಿರುವ, ಪಡುತ್ತಿರುವ ಕಷ್ಟ, ತಿಂಗಳು , ವರ್ಷಗಟ್ಟಲೆಯ ಡಯಟ್ಟು, ಉಪವಾಸ, ವ್ಯಾಯಾಮ, ಓಟ, ಜಿಮ್ಮು, ಇಷ್ಟದ ತಿನಿಸು, ಅನ್ನವನ್ನೆಲ್ಲ ಬದಿಗಿಟ್ಟು ಬೆವರು ಹರಿಸಿದ್ದು, ಚಿಕಿತ್ಸೆಗಳ ಮೊರೆ ಹೋಗಿ ಅನಾರೋಗ್ಯ ಅನುಭವಿಸಿದ್ದು ಇದೆಲ್ಲದರ ಅರಿವಿಲ್ಲದೆ ನೋಡಿದ ತಕ್ಷಣ ತಮ್ಮದೊಂದು ಅಭಿಪ್ರಾಯ ಹೇಳಿ ಬಿಡುತ್ತಾರೆ. ಅದರ ಪರಿಣಾಮ ಬೇರೆಯವರಿಗೆ ಯಾವ ರೀತಿ ಆಗುತ್ತದೆ ಎಂಬ ಕಿಂಚಿತ್ತೂ ಅರಿವಿಲ್ಲದೆ.

ಫೋಟೋ ಕೃಪೆ : ಅಂತರ್ಜಾಲ
ಇನ್ನು ಭಾಷಾ ವಿಷಯಕ್ಕೆ ಬಂದರೆ ಬೇರೆ ಬೇರೆ ಪ್ರದೇಶಕ್ಕೆ ಅದರದೇ ಆದ ಭಾಷಾ ಸೊಗಡು ಇದೆ. ಅಲ್ಲಿಯ ಭಾಷೆಯಿಂದಲೇ ಆ ಪ್ರಾಂತ್ಯವನ್ನು ಗುರುತಿಸಬಹುದು. ಆಯಾ ಪ್ರದೇಶದಲ್ಲಿ ಒಬ್ಬರಿಗೊಬ್ಬರು ಕೊಡುವ ಗೌರವ , ಮರ್ಯಾದೆ , ಸತ್ಕರಿಸುವ ರೀತಿ ಎಲ್ಲವೂ ಅವರ ನಡೆ ನುಡಿಯಲ್ಲಿ ಅಡಕಗೊಂಡಿರುವುದರಿಂದ ಅದು ಅಲ್ಲಿನ ಸಂಸ್ಕೃತಿಯ ಪ್ರತೀಕ ಎಂದರೆ ತಪ್ಪಲ್ಲ. ಆದರೆ ಕೆಲವು ಸಂಕುಚಿತ ಮನೋಭಾವದವರು ಅದನ್ನೂ ಆಡಿಕೊಳ್ಳುತ್ತಾರೆ. ಕನ್ನಡದ ಎಷ್ಟೋ ಒಳ್ಳೆಯ ಪದಗಳನ್ನು ಬೇರೆಯವರು ಮಾತನಾಡುವುದನ್ನು ಕೇಳಿ, ಅದದನ್ನೇ ಹೇಳಿ ಆಡಿಕೊಂಡು ನಗುವವರೂ ಇದ್ದಾರೆ. ಇನ್ನು ಕೆಲವರು ಆಂಗ್ಲ ಭಾಷೆ ಬರದವರ ಹತ್ತಿರ ಬೇಕಂತಲೇ ಅವರಿಂದ ಆಂಗ್ಲ ಭಾಷೆಯಲ್ಲಿ ಮಾತನಾಡಿಸಿ ಸುತ್ತ ನೆರೆದು ಗಹಗಹಿಸಿಯೋ, ಹೊಟ್ಟೆ ಹುಣ್ಣಾಗುವಂತೆಯೋ ನಕ್ಕು ಖುಷಿ ಪಡುತ್ತಾರೆ. ಆದರೆ ಆ ಸಮಯದಲ್ಲಿ ಆ ವ್ಯಕ್ತಿ ಅವರೊಂದಿಗೆ ತಾನೂ ನಕ್ಕರೂ ಸಹ ಒಳಗೊಳಗೆ ಪಡುವ ದುಃಖ ಎದೆಯೊಡೆಯುವಷ್ಟು. ಒಂದಷ್ಟು ಹಣ, ಹೆಸರು, ಅವಕಾಶಗಳ ಅನಿವಾರ್ಯತೆ, ಮನೆಯ ಪರಿಸ್ಥಿತಿ ಎಲ್ಲವೂ ಈ ಅನ್ನಿಸಿಕೊಳ್ಳುವಂತೆ ಮಾಡುತ್ತದೆ.
ಎಲ್ಲಾ ದೇವರ ಸೃಷ್ಟಿ. ಅವರವರ ತಂದೆ- ತಾಯಿಯಂತೆ ಮಕ್ಕಳು. ಹಾಗೇ ಅವರ ಮುಂದಿನ ಪೀಳಿಗೆ. ಮೊದಲು ವ್ಯಕ್ತಿ ನೋಡಲು ಹೇಗಿದ್ದರೇನು? ಭಗವಂತನ ಸೃಷ್ಟಿಯಲ್ಲಿ ಎಲ್ಲರೂ ಒಂದೇ. ಗುಣ, ನಡತೆ, ನಡೆ-ನುಡಿ ಚೆನ್ನಾಗಿದ್ದರೆ ಸಾಕು. ದಪ್ಪ , ಸಣ್ಣ, ಹೇಗಿದ್ದರೂ ಅದು ಅವರ ಬದುಕು. ಅದಕ್ಕೇನು ಬೇಕೋ ಅದನ್ನು ಮಾಡಿಕೊಂಡು ಅವರು ಇರುವುದರಲ್ಲೇ ಸುಖ ಸಂತೋಷದಿಂದ ಬದುಕುತ್ತಿರುತ್ತಾರೆ. ಅದನ್ನು ಹೇಳಿ, ಹೇಳಿ ಅವರ ನೆಮ್ಮದಿ ಹಾಳು ಮಾಡುವ ಕೆಲಸ ಬೇಡ. ಇನ್ನು ಕೆಲವರು ಬೇರೆಯವರು ಆಡಿಕೊಳ್ಳುವುದನ್ನೇ ಸವಾಲಾಗಿ ತೆಗೆದುಕೊಂಡು ಕಷ್ಟಪಟ್ಟು ತಮ್ಮ ದೇಹವನ್ನು ಬೇಕಾದಂತೆ ಹದ ಮಾಡಿಕೊಳ್ಳುತ್ತಾರೆ. ಬೇರೆಯವರ ಮಾತಿಗೆ ತಲೆಕೆಡಿಸಿಕೊಳ್ಳದೆ ಬಿಂದಾಸ್ ಆಗಿ ತಮಗೆ ಬೇಕಾದಂತೆ ಬದುಕುವುದನ್ನು ಈಗಿನ ಯುವಜನರಲ್ಲಿ ಹೆಚ್ಚಾಗಿ ಕಾಣಬಹುದು. ಸಮಾಜದಲ್ಲಿ ಇದೊಂದು ಧನಾತ್ಮಕ ಬೆಳವಣಿಗೆ ಎಂದೇ ಹೇಳಬಹುದು. ಏಕೆಂದರೆ, ಮಾತು ಮನೆ ಕೆಡಿಸಿತು ಅನ್ನೋ ಹಾಗೆ ಬೇರೆಯವರು ಆಡಿಕೊಳ್ಳುವುದರಿಂದ ಕುಗ್ಗಿ, ನೊಂದು -ಬೆಂದು ತಮ್ಮ ಜೀವನ ಹಾಳು ಮಾಡಿಕೊಂಡವರು, ಡಿಪ್ರೆಶನ್ ಗೆ (ಕೀಳರಿಮೆ)ಹೋಗಿ ಜೀವ ಕಳೆದುಕೊಂಡವರು ಅನೇಕರು. ಚಿಕಿತ್ಸೆ, ಸರ್ಜರಿಗಳ ಮೊರೆ ಹೋಗಿ ಇಲ್ಲದ ಕಾಯಿಲೆ ತಂದುಕೊಂಡವರು ಮತ್ತೊಂದಷ್ಟು ಮಂದಿ. ಯಾರಲ್ಲಿಯಾದರೂ ಅಷ್ಟೇ, ಇರದುದನ್ನು ಬೊಟ್ಟು ಮಾಡಿ ತೋರಿಸಿ ಆಡಿಕೊಳ್ಳುವುದರ ಬದಲು ಇರುವ ಒಳ್ಳೆಯದನ್ನು ಗುರುತಿಸಿ ಮೆಚ್ಚಿಕೊಳ್ಳೋಣ, ಪ್ರೋತ್ಸಾಹಿಸೋಣ, ಅವರ ಖುಷಿಯಲ್ಲಿ ನಾವೂ ಭಾಗಿಯಾಗೋಣ.
(ಸುತ್ತ ಮುತ್ತ ಲೇಖನಗಳ ಸಂಕಲನದಿಂದ)
ಹಿಂದಿನ ಸಂಚಿಕೆಗಳು :
- ಅಂಗೈಯಲ್ಲಿ ಪ್ರಪಂಚ (ಭಾಗ-೧)
- ಅಂಗೈಯಲ್ಲಿ ಪ್ರಪಂಚ (ಭಾಗ-೨)
- ಅಂಗೈಯಲ್ಲಿ ಪ್ರಪಂಚ ‘ಗಂಡು ಮಕ್ಕಳ ಮೇಲೆ ಉಂಟಾಗುವ ಲೈಂಗಿಕ ದೌರ್ಜನ್ಯ’ (ಭಾಗ-೩)
- ಅಂಗೈಯಲ್ಲಿ ಪ್ರಪಂಚ ‘ನಾನು… ನಿಮ್ಮ ದಿಂಬು’ (ಭಾಗ-೪)
- ಮಂಗಳ ಎಂ ನಾಡಿಗ್
