ಅಂಗೈಯಲ್ಲಿ ಪ್ರಪಂಚ (ಭಾಗ- ೮)

ನಿಮ್ ಜೀವದ್ ಜೊತೆ, ಬೇರೆಯವ್ರ್ ಜೀವ್ನದ್ ಜೊತೆ ಚೆಲ್ಲಾಟ ಆಡ್ಬೇಡಿ. ಅದ್ಕೆಲ್ಲಾ ನನ್ನುನ್ನ ಸಾಕ್ಷಿಯಾಗೂ ಮಾಡ್ಬೇಡಿ. ಹುಷಾರು, ನಿಮ್ಮ ಪ್ರಯಾಣ ಸುಖಕರವಾಗಿರಲಿ. ‘ನಾನ್ರೀ ನಿಮ್ ದಾರಿ’ ವಿಷಯದ ಕುರಿತು ಲೇಖಕಿ ಮಂಗಳ ಎಂ ನಾಡಿಗ್ ಅವರ ‘ಅಂಗೈಯಲ್ಲಿ ಪ್ರಪಂಚ’ ಅಂಕಣದಲ್ಲಿ ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ನಾನಿಲ್ದೆ ನಿಮ್ದ್ಯಾರುದ್ದು ಏನೂ ನಡ್ಯಲ್ಲರೀ. ಯಾಕಂದ್ರೆ, ನೀವೆಲ್ಲಾ ನಡ್ಯೋದೇ ನನ್ ಮೇಲಲ್ವಾ. ತುಳ್ದು ಬದ್ಕೋದು ನಿಮ್ಗಭ್ಯಾಸ ಬಿಡಿ, ಅದೇನೂ ಹೊಸಾ ವಿಷ್ಯ ಅಲ್ಲ. ಆದ್ರೂ ನಿಮ್ ಬಗ್ಗೆ ನಂಗ್ ಖಂಡಿತಾ ಬೇಜಾರಿಲ್ಲರೀ. ಯಾಕಂದ್ರೆ ನನ್ನುನ್ ಸೃಷ್ಟಿಸ್ದೋರು ನೀವೇ ತಾನೇ. ಈ ಭೂಮಿ ಮೇಲೆ ನಂಗೂ ಒಂದು ಅಸ್ತಿತ್ವ ಕಂಡ್ಕೊಳ್ಳೋ ಹಾಗೆ ಮಾಡ್ದೋರೂ ನೀವೇ. ಹಾಗಂತ ನಿಮ್ ತಪ್ಪುಗಳನ್ನೆಲ್ಲಾ ನಾನು ಸಹಿಸ್ಕೊಳ್ತೀನಿ ಅಂದ್ಕೋಬೇಡಿ. ಕೆಲವ್ಸಲ ನಿಮ್ ಮೇಲೆ ತುಂಬಾ ಸಿಟ್ಟೂ ಬರುತ್ತೆ. ಯಾವಾಗ್ ಗೊತ್ತಾ? ಈ ರಸ್ತೆ ಸರಿ ಇಲ್ಲ ಅಂತೀರಲ ಆಗ. ಅಲ್ಲಾ , ಅಷ್ಟಕ್ಕೂ ನಂಗೇನ್ರಿ ಆಗಿದೆ ? ಎಲ್ಲಾ ನೀವೇ ತಾನೇ ಹಾಳ್ ಮಾಡದು. ಹೊಂಡ-ಗುಂಡಿ ಏನಿದ್ರೂ ನೀವ್ ಎಷ್ಟ್ ಚೆನಾಗ್ ಕೆಲ್ಸ ಮಾಡಿದೀರ ಅನ್ನೋದುನ್ನ ನಿಮ್ಗೇ ಕನ್ನಡಿ ತರ ತೋರ್ಸುತ್ತೆ ಅಷ್ಟೇ. ಅದ್ಕೆ ನನ್ಹೆಸರು ಯಾಕೆ ಸೇರ್ಸಿ ಸರಿ ಇಲ್ಲ, ಸರಿ ಇಲ್ಲ ಅಂತೀರ. ಹೋಗ್ಲಿ ಬಿಡಿ, ಇನ್ನೊಬ್ರುನ್ನ ದೂಷಿಸೋದು ನಿಮ್ಗೇನೂ ಹೊಸ್ತಲ್ವಲ. ಆದ್ರೂ ನಂಗೊಂದ್ ಭಾಳ ಹೆಮ್ಮೆ ಇದೆ ಕಣ್ರೀ. ಪ್ರಸಿದ್ಧ ವ್ಯಕ್ತಿಗಳ ಹೆಸ್ರನ್ನೆಲ್ಲಾ ಅದ್ಧೂರಿಯಾಗಿ ನಂಗೆ ನಾಮ್ಕರ್ಣ ಮಾಡ್ತೀರಲ, ಆಗ ನಂಗೂ ಹೂವಿನ್ ಜೊತೆ ಸ್ವರ್ಗಕ್ಹೋದ್ ಅನುಭವ. ಆಗ ನಿಮ್ ತಪ್ಗಳ್ನೆಲ್ಲಾ ಕ್ಷಮುಸ್ಬಿಡ್ತೀನಿ.

ಇಷ್ಟೆಲ್ಲಾ ಪೀಠಿಕೆ ಹಾಕಿದ್ಮೇಲೆ ನಾನ್ಯಾರೂಂತ ಗೊತ್ತಾಗಿರ್ಬೇಕಲ್ವಾ. ಅದೇರೀ ಕಾಲ್ದಾರಿ, ಹೆದ್ದಾರಿ, ಒಳದಾರಿ, ಕವಲುದಾರಿ ಅಯ್ಯೋ ಅಲ್ಲರೀ, ಪೇಟೆದಾರಿ, ಅಯ್ಯೋ ಏನಾದ್ರೂ ಒಂದ್ ಕರ್ಕೊಳಿ ನಂಗೇನು, ಆದ್ರೆ ನನ್ ಮೇಲ್ಮಾತ್ರ ನಿಮ್ ನಾಯಿ ಹಿಡ್ಕೊಂಡ್ಬಂದು ಗಲೀಜ್ ಮಾಡುಸ್ಬೇಡಿ ಆಯ್ತಾ. ಪಾಪ ಅವ್ಗಳಿಗೇನ್ ಗೊತ್ತಾಗುತ್ತೆ. ಇನ್ನು ನನ್ಮೇಲ್ ಒಂದಿಷ್ಟ್ ಕಸ ಹಾಕಿ ಗಬ್ಬೆಬ್ಬುಸ್ತೀರಲ್ಲ, ನಾಚ್ಕೆ ಆಗಲ್ವ ನಿಮ್ಗೆ ಅಂತ ಕೇಳ್ಬೇಕು ಅನ್ಸುತ್ತೆ. ಆದ್ರೆ ನಂಗ್ ಮಾತಾಡಕಾಗಲ್ಲ ಅಂತ ಗೊತ್ತಿರದುಕ್ಕೆ ತಾನೇ ನೀವೂ ಅಷ್ಟು ಧೈರ್ಯವಾಗಿ ಕಸ ತಂದ್ ಹಾಕದು. ಪಾಪ, ಕಾರ್ಪೊರೇಷನ್ ಅವ್ರು ಎಷ್ಟು ಅಂತ ಕ್ಲೀನ್ ಮಾಡ್ತಾರೆ. ಬೆಳಿಗ್ಗೆ ಬಂದು ಮೈಕಲ್ಲಿ ಹೇಳ್ತಾನೇ ಇರ್ತಾರೆ. ಹಸಿಕಸ, ಒಣಕಸ ಬೇರೆ ಬೇರೆ ಮಾಡಿ ಹಾಕಿ, ಸ್ವಚ್ಛವಾಗಿ ಇಟ್ಕೊಳ್ಳಿ, ಎಲ್ಲೆಂದ್ರಲ್ಲಿ ಕಸ ಬಿಸ್ಹಾಕ್ಬೇಡಿ ಅಂತ. ರಸ್ತೆ ರಸ್ತೆನೆಲ್ಲಾ ಗುಡ್ಸಿ ಎಲ್ಲರ್ ಮನೆ ಕಸಾನು ತಗೊಂಡ್ಹೋಗ್ತಾರೆ ಪುಣ್ಯಾತ್ಮರು. ಅವ್ರಿಲ್ಲ ಅಂದಿದ್ರೆ, ಆ ವಾಸ್ನೇಲಿ ನಂಗೆಷ್ಟ್ ಕಷ್ಟ ಆಗ್ತಿತ್ತು ಗೊತ್ತಾ. ನನ್ನುನ್ ಸ್ವಚ್ಛವಾಗಿಡೋ ಅವ್ರಿಗೆ ನನ್ಕಡೆಂದ ಒಂದ್ ಸೆಲ್ಯೂಟು.

ಚಿಕ್ ಚಿಕ್ ಹುಡುಗ್ರಿಗೆಲ್ಲಾ ಗಾಡಿ ಕೊಡ್ತಾರಪ್ಪ. ಅವ್ರಿಗಂತೂ ತಿಳ್ವಳ್ಕೆ ಇರಲ್ಲ. ಆಸೆ, ಕ್ರೇಜ್ ಎಲ್ಲಾ. ಅದುನ್ನ ನಾನೂ ಒಪ್ಕೊಳ್ತೀನಿ. ಆದ್ರೆ ಮನೇಲಿರೋ ದೊಡ್ಡೋರಿಗೇನ್ರೀ ಆಗಿದೆ? ಅವ್ರ್ ವಯಸ್ಸಿನ್ ಹುಚ್ಚಾಟಕ್ಕೆ ಬದುಕಿ ಬಾಳ್ಬೇಕಾಗಿದ್ ಮಕ್ಳೆಲ್ಲಾ ವ್ಹೀಲಿಂಗು, ಅದೂ-ಇದೂಂತ ಮಾಡಕ್ಹೋಗಿ ನನ್ ಕಣ್ಮುಂದೇನೆ ಸಾಯ್ತಾರಲ್ಲ, ನಂಗ್ ಎಷ್ಟ್ ಸಂಕ್ಟ ಆಗುತ್ತೆ ಗೊತ್ತಾ. ಇನ್ನು ಅಕಸ್ಮಾತ್ತಾಗಿ ಆಗೋ ಅಪಘಾತಗಳಂತೂ, ನಂಗ್ ಯಾಕಾದ್ರೂ ನಾನ್ ರಸ್ತೆ ಆಗಿದೀನಪ್ಪ ಅಂತ ನನ್ಮೇಲೇ ಬೇಜಾರ್ ಆಗುತ್ತೆ. ಗಲಾಟೆ, ಬಂದ್, ಸ್ಟ್ರೈಕ್, ಅತ್ಯಾಚಾರ ಎಲ್ಲವ್ಕೂ ಕೆಲವೊಮ್ಮೆ ನಾನ್ ಸಾಕ್ಷಿ ಆಗ್ತೀನಿ. ಆದ್ರೆ ಏನ್ಮಾಡದು, ಸತ್ಯ ಹೇಳಿ ನ್ಯಾಯ ಕೊಡ್ಸೋಕೆ ನನ್ಕೈಲ್ ಆಗಲ್ವೇ… ಎಷ್ಟೊಂದ್ ಅಸಹಾಯಕತೆ ಅಲ್ವಾ ನಂದು, ಇನ್ನಾದ್ರೂ ಇಂಥಾ ಕೆಲ್ಸ ಮಾಡಕ್ ಮುಂಚೆ ನನ್ ಬಗ್ಗೆನೂ ಸ್ವಲ್ಪ ಯೋಚ್ನೆ ಮಾಡಿ ಆಯ್ತಾ.

“ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗಲು ಹಾಗೂ ವಸ್ತುಗಳನ್ನ ಸಾಗಿಸಲು ಇರುವ ಒಂದು ವ್ಯವಸ್ಥೆಯೇ ನಾನು. ಹಳ್ಳಿಯಿಂದ ಹಳ್ಳಿಗೆ, ಬೇರೆ ಬೇರೆ ಊರುಗಳಿಗೆ, ಪಟ್ಟಣಗಳಿಗೆ, ಗ್ರಾಮ, ಜಿಲ್ಲೆ, ರಾಜ್ಯಗಳಿಗೆ ಹೀಗೆ ಎಲ್ಲೆಡೆಗೂ ಸಂಪರ್ಕ ಕಲ್ಪಿಸಲು ನಾನೇ ಮುಖ್ಯ ಕಾರಣ. ಕರ್ನಾಟಕದಲ್ಲಿ ನನ್ನುನ್ನ ರಾಷ್ಟ್ರೀಯ ಹೆದ್ದಾರಿಗಳು, ರಾಜ್ಯ ಹೆದ್ದಾರಿಗಳು, ಜಿಲ್ಲಾ ರಸ್ತೆಗಳು, ಗ್ರಾಮ ರಸ್ತೆಗಳು ಹೀಗೆ ನಾಲ್ಕು ರೀತಿಯಲ್ಲಿ ಹೆಸರಿಸ್ತಾರೆ. ಕಿಲೋಮೀಟರ್, ಮೈಲಿಗಳಲ್ಲಿ ನನ್ನ ಅಳತೆ. ಸಿಮೆಂಟ್, ಕಾಂಕ್ರೀಟ್ಗಳೇ ನನ್ನ ಜೀವಾಳ. ಅದರಿಂದಲೇ ನನ್ನ ನಿರ್ಮಾಣ. ಜೊತೆಗೆ ಹಳ್ಳಿಗಳಲ್ಲಿ ಕಾಲುದಾರಿ ಎಂದೇ ಕರೆಯಲ್ಪಡುವ ಒಮ್ಮೆಗೆ ಒಬ್ಬರು ಅಥವಾ ಇಬ್ಬರು ನಡೆಯಲು ಆಗುವಂತಹ ಮಣ್ಣಿನ ದಾರಿಗಳು ಪಟ್ಟಣಗಳಿಗೆ, ಮುಖ್ಯ ರಸ್ತೆಗೆ ಬಂದು ಸೇರುವಂತೆ ಇರುತ್ತದೆ. ಇದು ಜನರು ನಡೆದೂ, ನಡೆದೂ ಸವೆದು ಆಗಿರುವಂತಹ ನನ್ನ ಸೃಷ್ಟಿ ಎಂದರೆ ತಪ್ಪಲ್ಲ. ಮೊದಮೊದಲು ನಾನು ಗುರುತಿಸಿಕೊಂಡಿದ್ದೇ ಹೀಗೆ. ನಂತರ ನನ್ನ ಬೆಳವಣಿಗೆ, ಹೊಸ ವೇಷ, ಭೂಷಣ ಎಲ್ಲಾ”.

ಇನ್ನು ನಾನೂಂದ್ರೆ ಏನ್ ಸುಮ್ನೇನ, ನಿಮ್ ದೇಹದಲ್ಲಿ ಹೇಗೆ ರಕ್ತ ನಾಳಗಳಿರುತ್ತೋ ದೇಶಕ್ಕೆ ನಾನೂ ಹಾಗೇ. ದೇಹಕ್ಕೆ ಬೇಕಾದ ಪೋಷಕಾಂಶ, ಖನಿಜ, ಹಾರ್ಮೋನ್ ಗಳು, ಒಂದೇ, ಎರಡೇ! ದೇಹದ ಕೊನೆಯ ಹಂತದಲ್ಲೂ ರಕ್ತನಾಳಗಳು ಇವುನ್ನೆಲ್ಲಾ ಸಾಗಿಸೋ ಹಾಗೇ ನಾನೂ ಸಹ ದೇಶದ ಅಭಿವೃದ್ಧಿಗೆ, ನಿಮ್ಮೆಲ್ಲರ ಬದುಕಿಗೆ ಬೇಕಾದ ಎಲ್ಲವನ್ನೂ ನನ್ಮೇಲೆ ಹೊತ್ಕೊಂಡು ಸಾಗಿಸ್ತಾನೇ ಇರ್ತೀನಿ.

ನನ್ನ ಬದೀಲಿರೋ ಮರಗಳೆಲ್ಲಾ ಎಲೆಗಳುದ್ರುಸಿ ಬೋಳಾಗಿ ನಿಂತಿದ್ರೆ, ನಾನಂತೂ ಹೊದ್ಕೆ ಹೊದ್ಕೊಂಡು ಬೆಚ್ಚುಗೆ ಮಲ್ಗಿರ್ತೀನಿ. ಅವುಗಳುಟ್ಟು ಕಂಗೊಳಿಸಿದ ಹಸಿರು ಸೀರೆ, ಬಣ್ಣ ಮಾಸಿದ್ಮೇಲೆ ನಂಗ್ ಹೊದ್ಕೆ ಆಗುತ್ತೆ. ಹಾಗಿರುವಾಗ್ಲೇ ಏನೋ ಶಬ್ಧ ಆದಂಗಾಯ್ತಲ್ಲ ಅಂತ ಮುಸುಕ್ ತೆಗ್ದ್ ನೋಡಿದ್ರೆ ಮರಗಳಲ್ಲಿ ಮತ್ತೆ ಹೊಸ ಚಿಗ್ರು, ತಿಳಿ ಹಸಿರು ಬಣ್ಣ , ಸೂರ್ಯನ ಹೊಂಬಿಸಿಲು, ಅದರ ಆಕರ್ಷಣೆಗೆ ಒಳಗಾಗಿ ಹಾರಿ ಬಂದು ಚಿಲಿಪಿಲಿಗುಟ್ತಾ ಇರೋ ಹಕ್ಕಿಗಳು, ಪೊಟರೆಯಿಂದ ಇಣುಕಿ ನೋಡ್ತಾ ಇರೋ ಅಳಿಲುಗಳು. ಅಬ್ಬಾ! ಎಂಥಾ ಸುಂದರ ದೃಶ್ಯ ಅದು. ನೋಡಕೆ ನಿಜ್ವಾಗ್ಲೂ ಅದೃಷ್ಟ ಮಾಡಿರ್ಬೇಕು.

ಅದಲ್ದೆ ಹೂಗಳೆಲ್ಲಾ ನನ್ಮೇಲ್ ಬಿದ್ದಾಗ ಎಷ್ಟ್ ಹಿತ ಅನ್ಸುತ್ತೆ ಗೊತ್ತಾ. ನಾನೇ ಮಧುವಣಗಿತ್ತಿಯಾಗಿ ಮೆರವಣ್ಗೆ ಹೊರ್ಟಂಗೆ. ಆಗ ಒಂದಷ್ಟ್ ದಿನ ನಾನೇ ರಾಜ್ಕುಮಾರಿ. ಆಗ ನಂಗೂ ಡಿಮ್ಯಾಂಡ್ ಜಾಸ್ತೀನೆ ಅನ್ನಿ. ಅದೆಷ್ಟ್ ಜನ ನನ್ ಫೋಟೋ ತೆಗೀತಾರೆ, ಕಥೆ-ಕವನ ಬರೀತಾರೆ. ಯಾವಾಗ್ಲೂ ಇದ್ದಲ್ಲೇ ಇರೋ ನನ್ಗೆ ಈಗ ಮೊಬೈಲ್ನಿಂದಾಗಿ ಎಲ್ಲಾ ಕಡೆ ಓಡಾಟ, ಮೆಚ್ಚುಗೆ, ಬಹುಮಾನ. ಆಹಾ ! ಎಂಥಾ ಖುಷಿ ಅಲ್ವಾ .

ನಂಗಂತು ಸಾವಿಲ್ಲ ಕಣ್ರೀ, ಯಾಕಂದ್ರೆ ನೀವ್ ಇರೋವರ್ಗೂ ನಾನ್ ಚಿರಂಜೀ..ವೀ..ನೇ. ಆಗಾಗ ಜೀವ ಹೋಗ್ತಿದ್ರೂ ಕುಟ್ಟಿ, ತಟ್ಟಿ, ತೇಪೆ ಹಾಕಿ ಆದ್ರೂ ನನ್ನುನ್ನ ಉಳುಸ್ಕಂತೀರಲ್ಲ . ಯಾಕೆ ಅಂತ ನಿಮ್ಗೂ ಗೊತ್ತು, ನಂಗೂ ಗೊತ್ತು. ಕೊನೇದಾಗಿ ಒಂದ್ಮಾತು, ಅತೀ ವೇಗವಾಗಿ, ಮದ್ಯ ಸೇವನೆ ಮಾಡಿ, ನಿಯಮ ಉಲ್ಲಂಘಿಸಿ ವಾಹನ ಚಾಲನೆ ಮಾಡ್ಬೇಡಿ ಆಯ್ತಾ. ಇದುನ್ನೆಲ್ಲ ಯಾಕ್ ಹೇಳ್ತೀದೀನಿ ಗೊತ್ತಾ. ನಿಮ್ಗೋಸ್ಕರ ಅಂತೂ ಖಂಡಿತಾ ಅಲ್ಲರೀ. ಯಾಕಂದ್ರೆ, ಗೊತ್ತಿದ್ದೂ ಗೊತ್ತಿದ್ದೂ ನೀವ್ ಮಾಡೋ ತಪ್ಪಿಗೆ ಶಿಕ್ಷೆ ಅನುಭವಿಸ್ತಾರಲ್ಲ ನಿಮ್ಮ ಮನೆಯವ್ರು, ಅವ್ರ್ ಗೋಳಾಟ ನಂಗ್ ನೋಡಕಾಗಲ್ಲ ಕಣ್ರೀ.

ಹಿಂದಿನ ಸಂಚಿಕೆಗಳು :


  •  ಮಂಗಳ ಎಂ ನಾಡಿಗ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW