ಲಾಕ್ ಡೌನ್ ನಲ್ಲಿ ಲೇಖಕರಾದ ಮಾಕೋನಹಳ್ಳಿ ವಿನಯ್ ಮಾಧವ್ ಅವರು ಡಾ! ಸೂರ್ಯಕುಮಾರ್ ಬರೆದ `ವೈದ್ಯ ಕಂಡ ವಿಸ್ಮಯ’ ಮತ್ತು `ಭಾರದ್ವಾಜ ಕೆ ಆನಂದ ತೀರ್ಥ ಅವರು ಬರೆದ ‘ಕ್ರಮಣ’ ಎರಡು ಪುಸ್ತಕಗಳನ್ನು ಓದಿ, ಅದರ ಪರಿಚಯವನ್ನು ಮಾಡಿದ್ದಾರೆ. ನೀವು ಆ ಪುಸ್ತಕಗಳನ್ನು ಕೊಂಡು ಓದಿ…
ಮೊದಲನೇ ಹಂತದ ಲಾಕ್ಡೌನ್ ಗೆ ಹೋಲಿಸಿದರೆ, ಎರಡನೇ ಲಾಕ್ಡೌನ್ ಸ್ವಲ್ಪ ಹಿಂಸೆ ಅಂತಲೇ ಹೇಳಬಹುದು. ಅದಕ್ಕೆ ಸರಿಯಾಗಿ, ಕರೋನಾ ಎಂಬ ಅನಪೇಕ್ಷಿತ ಅತಿಥಿ, ನಮ್ಮ ಮನೆಯೊಳಗೆ ನುಗ್ಗಿ, ಸ್ವಲ್ಪ ದಿನ ಆತಿಥ್ಯ ಸ್ವೀಕರಿಸಿ ಹೋಯಿತು.
ಹೋದ ಲಾಕ್ಡೌನ್ ಗೆ ಹೋಲಿಸಿದರೆ ಓದಿದ್ದು, ಬರೆದದ್ದು ಮತ್ತು ಕ್ಯಾಮೆರಾ ಹಿಡಿದಿದ್ದು ಬಹಳ ಕಡಿಮೆ ಅಂತಲೇ ಹೇಳಬಹುದು. ಸಂತೋಷದ ವಿಷಯ ಎಂದರೆ, ೨೫ ವರ್ಷಗಳ ಹಿಂದೆ ಬಿಟ್ಟು ಹೋಗಿದ್ದ ತಮಿಳು, ಮಲಯಾಳಂ ಚಿತ್ರಗಳನ್ನು ನೋಡುವ ಅಭ್ಯಾಸ ಮತ್ತೆ ಶುರುವಾಗಿದ್ದು.
ಅದರ ಮಧ್ಯೆಯೂ ಎರಡು ಪುಸ್ತಕಗಳನ್ನು ಓದಿದೆ.. ಮೊದಲನೆಯ ಪುಸ್ತಕ ಚಿಣ್ಣಪ್ಪ ಕೊಟ್ಟು ಕಳುಹಿಸಿ, ನೀನು ಓದಲೇ ಬೇಕು ಎಂದ `ಕ್ರಮಣ’ ಎರಡನೆಯದು, ಡಾ! ಸೂರ್ಯಕುಮಾರ್ ಬರೆದ `ವೈದ್ಯ ಕಂಡ ವಿಸ್ಮಯ’. ಕಾಕತಾಳೀಯ ಎಂದರೆ, ಎರಡು ಪುಸ್ತಕಗಳನ್ನು ಬರೆದವರೂ ಕೊಡಗಿನವರೆ.

ಭಾರದ್ವಾಜ ಕೆ ಆನಂದ ತೀರ್ಥ ಅವರು ಬರೆದ ಕ್ರಮಣ, ಹೆಚ್ಚು ಜನ ಓದಿದ್ದಾರೆ ಅಂತ ನನಗೆ ಅನ್ನಿಸಲಿಲ್ಲ. ೨೦೧೩ ರಲ್ಲಿ ಮೊದಲನೇ ಮುದ್ರಣ ಕಂಡ ಈ ಪುಸ್ತಕ, ಎಲ್ಲೂ ಲಭ್ಯವಿಲ್ಲದಿದ್ದರೂ, ಮರು ಮುದ್ರಣ ಕಾಣಲಿಲ್ಲ. ಅದಕ್ಕೆ ಕಾರಣವಂತೂ ನನಗೆ ಗೊತ್ತಿಲ್ಲ. ಆದರೆ, ಇವರೇ ಬರೆದ ಕೊಡಗಿನ ರಾಜಕಾರಣಿ ಎಂ ಸಿ ನಾಣಯ್ಯನವರ ಆತ್ಮಕಥೆ `ನೆನಪು ಮಾಸುವ ಮುನ್ನ’ ಹೆಚ್ಚಿನ ಸದ್ದು ಮಾಡಿದ್ದು ನನಗೆ ಆಶ್ಚರ್ಯ ಎನಿಸಿತು.
ಪೂಜೆ, ಹೋಮ, ಹವನ, ವಾಮಾಚಾರ, ಮಾಟಗಳ ಹಿನ್ನೆಲೆಯಲ್ಲಿ ಬೆಳೆದ, ಅಂತರ್ಜಾತಿ ವಿವಾಹವಾಗಿ ಬಹಿಷ್ಕಾರಕ್ಕೆ ಒಳಗಾದ ಬ್ರಾಹ್ಮಣ ಮನೆತನದ ಹುಡುಗನ ಜೀವನ ಪಯಣ. ಆ ಪಯಣ ಯೌವನಕ್ಕೆ ಬಂದು ನಿಲ್ಲುವ ಹೊತ್ತಿಗೆ, ಅನುಭವಗಳ ದೊಡ್ಡ ಹೊರೆಯನ್ನೇ ತಲೆಯ ಮೇಲೆ ಹೊತ್ತು ನಿಂತಿರುತ್ತಾನೆ. ಕೊನೆಯಲ್ಲಿ, ಆತ ತನ್ನ ಜೀವನದ ಮುಂದಿನ ದಾರಿಯ ಬಗ್ಗೆ ತೆಗೆದುಕೊಳ್ಳುವ ನಿರ್ಧಾರ ಅದ್ಭುತ ಎಂದು ಅನಿಸಿತು.
ಸಾಧಾರಣವಾಗಿ ನಾನು ಕಥೆಯ ಅಂಶಗಳನ್ನು ವಿವರಿಸಲು ಹೋಗದಿದ್ದರೂ, ಈ ಪುಸ್ತಕ ನನ್ನ ಮನಸ್ಸಿನ ಮೇಲೆ ಒಂದು ಅವ್ಯಕ್ತ ಪರಿಣಾಮ ಬೀರಿತು. ಹುಟ್ಟು ಕುಂಟನಾದ ಕೃಷ್ಣಶಾಸ್ತ್ರಿಗೆ ಮನೆಯಲ್ಲಿ ಮದುವೆ ಮಾಡುವ ಅಥವಾ ಬೆಂಗಳೂರಿನಲ್ಲಿ ಕೆಲಸ ಕೊಡಿಸುವ ಯೋಚನೆ ಮಾಡದ ಸ್ವಂತ ಅಣ್ಣ, ಅವನು ಅಂತರ್ಜಾತಿ ವಿವಾಹವಾದಾಗ ಬಹಿಷ್ಕಾರ ಹಾಕುವಲ್ಲಿ ಮುಂಚೂಣಿಯಲ್ಲಿರುತ್ತಾನೆ. ಅದೇ ಕೃಷ್ಣಶಾಸ್ತ್ರಿ, ಪತ್ನಿಯನ್ನು ಕಳೆದುಕೊಂಡು, ಮುಂದೆ ಜ್ಯೋತಿಷ್ಯ ಮತ್ತು ಪೂಜೆಗಳಲ್ಲಿ ದೊಡ್ಡ ಹೆಸರು ಮಾಡುತ್ತಾನೆ. ಮಗನನ್ನು ಮಾತ್ರ ಈ ವಿಷಯದಿಂದ ದೂರವೇ ಇಟ್ಟಿರುತ್ತಾನೆ.
ಒಳ್ಳೆಯ ಕ್ರೀಡಾ ಪಟುವಾದ ಭಾರ್ಗವನ ಬಗ್ಗೆ ಕಾಲೇಜಿನ ಪ್ರಾಂಶುಪಾಲರು, `ಇವನು ಓಡಬೇಕೋ? ಓದಬೇಕೋ? ನೀವೇ ಹೇಳಿ,’ ಎಂದಾಗ, `ನನಗಂತೂ ಜೀವನವಿಡೀ ಕುಂಟುತ್ತಲೇ ನಡೆದಾಡಿದೆ. ಕುಂಟನ ಮಗ ಓಡಿ ಹೆಸರು ಮಾಡಿದರೆ, ಅದಕ್ಕಿಂತ ಸಂತೋಷ ಇನ್ನೇನಿದೆ?’ ಎನ್ನುವ ಕೃಷ್ಣಶಾಸ್ತ್ರಿ, ತನ್ನ ವೈಫಲ್ಯಗಳನ್ನು ತನ್ನ ಮಗನ ಮೂಲಕ ಬದುಕಲು ಪ್ರಯತ್ನಿಸುತ್ತಿದ್ದಾನೆ ಎಂದು ಅನ್ನಿಸುತ್ತದೆ. ಆದರೆ, ಮನೆಯಲ್ಲಿ ಕೆಲಸಕ್ಕಿರುವ, ತನ್ನ ತಾಯಿಯ ವಯಸ್ಸಿನವಳಾಗಿರುವ ಹೆಂಗಸಿನ ಜೊತೆ ಮಗ ಸಂಬಂಧ ಹೊಂದಿದ್ದಾನೆ ಎಂದು ಗೊತ್ತಾದಾಗ, ಯಾರ ಗಮನಕ್ಕೂ ಬರದಂತೆ ಸಮಸ್ಯೆಯನ್ನು ನಿವಾರಿಸು ಬಗೆ ಮತ್ತು ಕಾಪಾಡುವ ಗೌಪ್ಯತೆ ಅದ್ಭುತವಾಗಿ ಮೂಡಿ ಬಂದಿದೆ. ಮೂರ್ನಾಲ್ಕು ದಶಕಗಳ ಹಿಂದೆ, ಮಲೆನಾಡಿನಲ್ಲಿ ಮನೆ ಯಜಮಾನ ಮತ್ತು ಕೆಲಸದವರ ಮಧ್ಯೆ ಇದ್ದ ಅವಿನಾಭಾವ ಸಂಬಂಧವನ್ನು ಪುಸ್ತಕ ಸುಂದರವಾಗಿ ನಿರೂಪಿಸಿದೆ.
ಎಲ್ಲಾ ವಿಷಯಗಳೂ ಅನಾವರಣಗೊಳ್ಳುವುದು ಕೃಷ್ಣಶಾಸ್ತ್ರಿ ಸತ್ತಮೇಲೆ. ಮಗ ಭಾರ್ಗವನ ಕೈಗೆ ಅಪ್ಪನ ಪತ್ರ ಸಿಕ್ಕಾಗ. ವೈಯಕ್ತಿಕ ವಿಷಯಗಳಷ್ಟೇ ಅಲ್ಲದೆ, ಕೃಷ್ಣಶಾಸ್ತ್ರಿ, ಶಾಸ್ತ್ರ, ಪೂಜೆ, ಮಾಟಗಳನ್ನು ಸಹ ತಾನೇ ನಂಬುತ್ತಿರಲಿಲ್ಲ ಎನ್ನುವ ಸತ್ಯ ಹೊರ ಹಾಕಿರುತ್ತಾನೆ. ಜಿಜ್ಞಾಸೆಗೊಳಗಾಗುವವನು ಭಾರ್ಗವ. ಏಕೆಂದರೆ, ಅದು ಬರೀ ಕೃಷ್ಣಶಾಸ್ತ್ರಿಯ ವೈಯಕ್ತಿಕ ಅಭಿಪ್ರಾಯ. ಸಾರ್ವತ್ರಿಕವಾಗಿ ಅವನನ್ನು ಮತ್ತು ಅವನ ಜ್ಯೋತಿಷ್ಯವನ್ನು ನಂಬಿ ಬದುಕುತ್ತಿದ್ದ ದೊಡ್ಡ ಬಳಗವೇ ಇರುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ, ಮನೆಯವರು ನಂಬಿದ ಅಂಜಿ, ತಾನು ಮಾತು ಮುರಿದಿದ್ದರಿಂದಲೇ ಕೃಷ್ಣಶಾಸ್ತ್ರಿಗಳ ಮೃತ್ಯುವಾದದ್ದು ಎಂದು ಬಲವಾಗಿ ನಂಬುವ ಕಾಕತಾಳೀಯ ಸಂದರ್ಭ. ಕೊನೆಯಲ್ಲಿ, ಹಿಮಾಲಯದ ತುದಿಯಲ್ಲಿ ಜೀವನ-ಮರಣದ ಸತ್ಯ ದರ್ಶನವಾದ ಭಾರ್ಗವ, ತನ್ನ ಭವಿಷ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾನೆ.
ಕಥೆಯು ಕೊಡಗಿನ ಶುಂಠಿಕೊಪ್ಪದ ಸುತ್ತ-ಮುತ್ತ ಹೆಣೆಯಲಾಗಿದ್ದರೂ, ಈ ಬಗೆಯ ಜ್ಯೋತಿಷ್ಯ, ಪೂಜೆ, ಹೋಮ ಮತ್ತು ಮಾಟಗಳಿಗೆ ಬಹಳ ಹೆಸರುವಾಸಿಯಾಗಿರುವುದು, ಕುಶಾಲನಗರದ ಸಮೀಪದ ಕಣಿವೆ ಎಂಬ ಚಿಕ್ಕ ಊರು. ಈ ಊರು, ದೃಷ್ಟಿ ತೆಗೆಯುವುದಕ್ಕೂ ಹೆಸರುವಾಸಿ. ಹಾಗಂತ, ಲೇಖಕರು ಸಹ ಇದೇ ಊರಿನವರು.

ಈ ವಿಷಯವನ್ನು ಏಕೆ ಪ್ರಸ್ತಾವಿಸಿದೆ ಎಂದರೆ, ಇಂತಹ ಕಥೆಯನ್ನು ಕಪೋಲಕಲ್ಪಿತವಾಗಿ ಬರೆದಯಲು ನನ್ನಿಂದಂತೂ ಸಾಧ್ಯವಿಲ್ಲ. ಸಣ್ಣ, ಸಣ್ಣ ವಿಷಯಗಳಿಗೂ ಈ ಪುಸ್ತಕದಲ್ಲಿ ಕೊಟ್ಟಿರುವ ಪ್ರಾಮುಖ್ಯತೆ, ವಿಶಿಷ್ಟವಾಗಿದೆ. ಒಂದೋ, ಸ್ವ-ಅನುಭವವಾಗಿರಬೇಕು. ಇಲ್ಲವೇ, ಇಂತಹ ಪರಿಸರದಲ್ಲಿ ಬೆಳೆದು, ನಾಲ್ಕೈದು ಪಾತ್ರಗಳನ್ನು ಒಟ್ಟಿಗೆ ಸೇರಿಸಿ ಬರೆದಿರಬೇಕು ಅನ್ನಿಸಿತು. ಎರಡರಲ್ಲಿ ಯಾವುದೇ ಇರಲಿ, ಈ ಪುಸ್ತಕದಲ್ಲಿ ದಾಖಲಾಗಿರುವ ಅನುಭವಗಳು ವಿಶಿಷ್ಟವಾಗಿವೆ.
ಇದರ ಮಧ್ಯೆ ನನ್ನ ಫೇಸ್ಬುಕ್ ಮಿತ್ರರಾದ ಮಡಿಕೇರಿಯ ಡಾ! ಸೂರ್ಯಕುಮಾರ್ ಬರೆದ `ವೈದ್ಯ ಕಂಡ ವಿಸ್ಮಯ’ ಪುಸ್ತಕ ಬಿಡುಗಡೆಯಾಯ್ತು. ಪುಸ್ತಕ ತರಿಸಿಕೊಳ್ಳುವ ವ್ಯವಸ್ಥೆ ಮಾಡುವ ಹೊತ್ತಿಗೆ, ಕರೋನಾ ಅತಿಥಿಯಾಗಿ ನನ್ನ ಮನೆ ಪ್ರವೇಶಿಸಿತು. ಹದಿನೈದು-ಇಪ್ಪತ್ತು ದಿನ ಅತಿಥಿ ಸತ್ಕಾರದಲ್ಲಿ ತೊಡಗಿದ್ದ ನನಗೆ, ಪುಸ್ತಕದ ವಿಷಯ ಮರೆತೇ ಹೋಗಿತ್ತು. ಮೂರು ದಿನಗಳ ಹಿಂದೆ ಕೊರಿಯರ್ ನವನು ಫೋನ್ ಮಾಡಿದಾಗಲೇ ನೆನಪಾಗಿದ್ದು.
ಈ ಪುಸ್ತಕದ ಒಂದು ಕಥೆ – ಗಂಗಾರಾಂ ಕಟ್ಟಡ ಕುಸಿದ ಬಗ್ಗೆ ಬರೆದದ್ದನ್ನು ನಾನು ಫೇಸ್ಬುಕ್ಕಿನಲ್ಲಿ ಓದಿದ್ದೆ. ಅಷ್ಟೇನೂ ಪರಿಣಾಮಕಾರಿ ಅಂತ ಅನ್ನಿಸಿರಲಿಲ್ಲ. ವಿಧಿವಿಜ್ಞಾನ ವೈದ್ಯರು ಎನ್ನುವುದರ ಬಗ್ಗೆ ಕುತೂಹಲವಿತ್ತು. ಏಕೆಂದರೆ, ನನ್ನ ಕ್ರೈಂ ರಿಪೋರ್ಟಿಂಗ್ ದಿನಗಳಲ್ಲಿ, ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಬಹಳಷ್ಟು ಮಣ್ಣು ಹೊತ್ತಿದ್ದೆ. ಎರಡು ಅಧಿಕಾರಿಗಳ ಕೈಯಲ್ಲಿ ಸಿಕ್ಕಿದ್ದ ಪ್ರಯೋಗಾಲಯದಿಂದ ಹೆಚ್ಚೇನೂ ಸಹಾಯವಾಗಿರಿಲಿಲ್ಲ. ಆದರೆ, ಖ್ಯಾತ ವಕೀಲ ಸಿ ಎಚ್ ಹನುಮಂತರಾಯರು ತಮ್ಮ ಕೇಸುಗಳಲ್ಲಿ ವಿಧಿವಿಜ್ಞಾನಿಗಳ ಸಹಾಯವನ್ನು ಪಡೆದು, ಅವುಗಳನ್ನು ಬಹಳ ರಸವತ್ತಾಗಿ ನ್ಯಾಯಾಲಯಗಳಲ್ಲಿ ಮಂಡಿಸುತ್ತಿದ್ದರು. ಹಾಗಾಗಿ, ಈ ವಿಷಯದಲ್ಲಿ ನನಗೂ ಆಸಕ್ತಿ ಮೂಡಿತ್ತು.
ಗಂಗಾರಾಂ ಕಟ್ಟಡದ ಕಥೆ ಓದಿದ್ದವನಿಗೆ, ಈ ಪುಸ್ತಕ ಓದುವುದು ನಿಧಾನವಾಗಬಹುದು ಅಂತ ಅನ್ನಿಸಿತು. ಸಾಯಂಕಾಲ ಕಾಫಿ ಕುಡಿದು ಓದಲು ಕುಳಿತವನು, ರಾತ್ರಿ ಮಲಗುವ ಮುಂಚೆ ಓದಿ ಮುಗಿಸಿದ್ದೆ. ಏಕೆಂದರೆ, ಮೊದಲನೇ ಕಥೆಯಾದ `ಮೊದಲ ತಪ್ಪು’ ಕಥೆಯೇ ನನಗೆ ಇಷ್ಟವಾಗಿ ಹೋಗಿತ್ತು. ಪುಸ್ತಕ ಓದಿ ಮುಗಿಸುವಾಗ, ಕೊನೆಯ ಕಥೆಯ ಕೊನೆಯ ಪ್ಯಾರಾಗ್ರಾಫ್, ನನಗೆ ಬಹಳ ಇಷ್ಟವಾಯಿತು.
ಕೊಲೆಯಾದ ರೌಡಿಯೊಬ್ಬನ ತಮ್ಮ ಬಂದು ವೈದ್ಯರ ಹತ್ತಿರ ಕೇಳಿಕೊಳ್ಳುತ್ತಾನೆ, `ಸಾರ್, ನಮ್ಮ ಅಣ್ಣ ಅಂತೂ ಹೋಗ್ಬಿಟ್ಟ. ನೀವು ನಿಮ್ಮ ಕರ್ತವ್ಯ ಮಾಡಲೇ ಬೇಕು. ನಮ್ಮೆಲ್ಲರದ್ದು ಒಂದು ಕೋರಿಕೆ… ದಯವಿಟ್ಟು ನಮ್ಮಣ್ಣನಿಗೆ ನೋವು ಆಗದಂತೆ ಕತ್ತರಿಸಬೇಕು!!!’.
ಈ ಪುಸ್ತಕದಲ್ಲಿ ವಿಧಿವಿಜ್ಞಾನ ಎಂದರೆ ಬರೀ ಹೆಣ ಕತ್ತರಿಸುವುದಲ್ಲ. ಪ್ರತಿಯೊಂದು ಶವದ ಹಿಂದೆ ದಾರುಣವಾದ ಕಥೆಗಳಿರುತ್ತವೆ. ಹಾಗೆಯೇ, ನಾಲ್ಕು ದಶಕಗಳ ಹಿಂದೆ ಮಡಿಕೇರಿ, ಕೊಪ್ಪ ಮುಂತಾದ ಸ್ಥಳಗಳಿಗೆ ಸರ್ಕಾರಿ ಅಧಿಕಾರಿಗಳು ಬರಲು ಅಳುತ್ತಿದ್ದ ಕಾಲ. ವಾಹನ ಸೌಕರ್ಯಗಳು ದುರ್ಲಭವಾದ ಕಾಲದಲ್ಲಿ, ಯಾವುದಾದರೂ ಅನುಮಾನಸ್ಪದ ಸಾವಿನ ಜಾಗಕ್ಕೆ ವೈದ್ಯರು ತಲುಪಲು ಪಡುತ್ತಿದ್ದ ಪಾಡು, ಅಲ್ಲಿ ನಡೆಯುತ್ತಿದ್ದ ನವಿರಾದ ಹಾಸ್ಯಗಳು, ಸಾವಿನ ಕಾರಣಗಳನ್ನು ಬದಲಾಯಿಸಲು ಹೆಣಗುತ್ತಿದ್ದ ಜನಗಳು – ಒಟ್ಟಾರೆ, ಈ ಅನುಭವಗಳೆಲ್ಲ ಸೇರಿ ಒಂದು ಹೊಸ ಜೀವನವನ್ನು ಬದುಕಿದಂತೆ ಅನ್ನಿಸುತ್ತದೆ. ಇದಲ್ಲದೆ, ನಮ್ಮೆಲ್ಲರ ಪ್ರೀತಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪಜ್ಜನ ಶಿಸ್ತಿನ ಪರಿಚಯವನ್ನೂ ಮಾಡುತ್ತಾರೆ.
ವೈದ್ಯರಾದರೂ, ಪುಸ್ತಕದ ನಿರೂಪಣೆ ಚೆನ್ನಾಗಿದೆ. ಆದರೆ, ಎಲ್ಲೋ ಒಂದು ಕಡೆ, ಕೆಲವರ ಹೆಸರು ಮತ್ತು ಪರಿಚಯವನ್ನು ನುಂಗಬಾರದಿತ್ತು ಎಂದು ನನಗೆ ಅನ್ನಿಸಿತು. 80 ದಶಕದ ಬೆಂಗಳೂರಿನ ಸರಾಯಿ ದುರಂತದ ಕಥೆಯಲ್ಲಿ, ಸಗಾಯಿಪುರ ಸಾರಾಯಿ ರಾಣಿ ಮಾರಿ ಮುತ್ತುವಿನ ಹೆಸರೇ ಇಲ್ಲ. ಮುನ್ನೂರಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡು, ಜೈಲಿಗೆ ಹೋಗಿ, ಮತ್ತೆ ಹೊರಗೆ ಬಂದ ಮಾರಿ ಮುತ್ತು, ಡಾನ್ ಆಗಿಯೇ ಬದುಕಿದಳು. ನನ್ನ ಕ್ರೈಂ ರಿಪೋರ್ಟಿಂಗ್ ದಿನಗಳಲ್ಲಿ, ಸಣ್ಣ ಜಗಳ ತಾರಕಕ್ಕೇರಿದಾಗ ಬಾಗಲೂರು ಲೇಔಟನ್ನು ರಣರಂಗ ಮಾಡಿ, ಪುಡಿಗಟ್ಟಿದ್ದಳು. ಅದನ್ನು ವರದಿ ಮಾಡಲು ಹೋದ ನನ್ನನ್ನು ಮನೆಯ ಮೆಟ್ಟಿಲ ಮೇಲೆಯೇ ಕುಳಿತು ಮಾತನಾಡಿಸಿ, ನಾನು ಹೊರಡಲು ತಿರುಗಿದಾಗ, `ಬಾರೋ ಮಗಾ… ಕಾಪಿ ಕುಡಿದು ಹೋಗು,’ ಎಂದು ಹೇಳಿ, ಒಂದೇ ಕೈಯಲ್ಲಿ ನನ್ನನ್ನು ಎಳೆದು ಅವಳ ಪಕ್ಕ ಮೆಟ್ಟಿಲ ಮೇಲೆ ಕೂರಿಸಿಕೊಂಡಿದ್ದಳು. ಯಾವ ರಿಪೋರ್ಟರ್ ಗೂ ಎಗ್ಗಿಲ್ಲದೇ ಮಾತನಾಡುತ್ತಿದ್ದ ಮಾರಿ ಮುತ್ತು, ಮುಂದೆ ಜೆಡಿಎಸ್ ಕಾರ್ಪೋರೇಟರ್ ಸಹ ಆಗಿದ್ದಳು. ಅವಳು ಯಾವತ್ತೂ ನನಗೆ ಮರ್ಯಾದೆ ಕೊಟ್ಟು ಮಾತಾಡಿದಿಲ್ಲ. ಸಣ್ಣ ಹುಡುಗರನ್ನು ನೋಡುವ ಹಾಗೆ ನೋಡುತ್ತಿದ್ದಳು. ನನ್ನ ಗೆಳೆಯರ ಹತ್ತಿರ ನಾನೇ ತಮಾಷೆ ಮಾಡ್ತಿದ್ದೆ: `ನನ್ನ ಗರ್ಲ್ ಫ್ರೆಂಡ್, ಮಾರಿ ಮುತ್ತು,’ ಅಂತ.
ಡಾ! ಸೂರ್ಯಕುಮಾರ್ ಅವರ ಈ ಅನುಭವದ ಹಾದಿಯಲ್ಲಿ ನಮಗೂ ಬಹಳಷ್ಟು ಪಾಠಗಳನ್ನು ಕಲಿಸಿದ್ದಾರೆ… ಹಾಗೆಯೇ, ವಿಧಿವಿಜ್ಞಾನ ಜೀವನದ ಕ್ಲಿಷ್ಟಕರ ವಿಷಯಗಳನ್ನು ಸರಳವಾಗಿ ವಿವರಿಸಿದ್ದಾರೆ. ಒಂದು ಶವದ ಸುತ್ತ ನಡೆಯುವ ಸಂಕೀರ್ಣ ಚಟುವಟಿಕೆಗಳಾದ, ಪೋಲಿಸ್, ನ್ಯಾಯಾಲಯ, ನ್ಯಾಯಾಧಿಶರು, ಬಂಧುಗಳು, ಆ ಶವದ ಫಲಾನುಭವಿಗಳು ಮತ್ತು ಕಾಲಹರಣಕ್ಕೆ ಸುತ್ತ ಬರುವವರ ವಿವರಗಳನ್ನೂ ವಿಭಿನ್ನವಾಗಿ ದಾಖಲಿಸಿದ್ದಾರೆ.
- ಮಾಕೋನಹಳ್ಳಿ ವಿನಯ್ ಮಾಧವ್ (ಪತ್ರಕರ್ತರು,ಲೇಖಕರು)
