‘ಅನುರಾಗ ಯಾನ’ ಕವನ – ರಶ್ಮಿ ಪ್ರಸಾದ್

ಕವಿಯತ್ರಿ ರಶ್ಮಿಪ್ರಸಾದ್(ರಾಶಿ) ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…

ಸಿರಿತನದ ಅರಮನೆಯೋ..??
ಬಡತನದ ಜೋಪಡಿಯೋ..??
ಒಂದೇ ಸೂರಿನಡಿಯ ಹಕ್ಕಿಗಳಂತಿರಲು
ಹನಿ ಗಂಜಿಯೂ ಮೃಸ್ಟಾನ್ನದಂತೆ
ಹಂಚಿ ತಿನ್ನುವುದೇ ಸುಯೋಗದಂತೆ.!!

ಸಂತಸದ ಸಿಹಿ ಕ್ಷಣಗಳೋ..??
ನೋವಿನ ಕಹಿ ಘಟನೆಗಳೊ..??
ಒಂದೇ ಬಾನಿನ ಚುಕ್ಕಿಗಳಂತಿರಲು
ಅಳು ನಗುವಿನಲು ಸಮಪಾಲಿರುವಂತೆ
ಕೂಡಿ ಬಾಳುವುದೇ ಸುಕೃತದಂತೆ.!!

 

ಕಲ್ಲು ಮುಳ್ಳಿನ ದುರ್ಗಮ ದಾರಿಯೋ..??
ಹೂ ಹಾಸಿನ ಸುಗಮ ಹಾದಿಯೋ..??
ಸಹಬಾಳ್ವೆಯೇ ಆಸರೆಯಾಗಿರಲು
ಕಷ್ಟ ಸುಖದಲೂ ಸಮಭಾಗದಂತೆ
ಪರಸ್ಪರ ಹೆಗಲಾಗುವ ಸೌಭಾಗ್ಯದಂತೆ.!!

ಹಬ್ಬದೂಟದ ಹಾಲೋಗರವೋ..??
ತಂಗಳಿನ ಬರಿ ಅನ್ನವೋ.??
ಒಂದೇ ಎಲೆಯಲಿ ಉಂಡಿರಲು
ಪ್ರತಿಕ್ಷಣವು ಸಂಭ್ರಮದಂತೆ
ಒಟ್ಟೊಟ್ಟಿಗೆ ಒಡನಾಟ ಸಗ್ಗ ಸುಖದಂತೆ.!!

ಒಲಿದ ಜೀವ ನಿತ್ಯ ಜೊತೆಗಿರಲು
ಒಲವ ಭಾವ ಸದಾ ಕಾಪಿಡುತಿರಲು
ಬಾಳ ಪಯಣ ಸುಖಯಾನದಂತೆ.!
ಬಾಂದಳದ ಹಾದಿ ಸವಿಗಾನದಂತೆ.!
ಬಂಧ ಬಾಂಧವ್ಯವು ಅಮೃತಪಾನದಂತೆ.!!


  • ರಶ್ಮಿಪ್ರಸಾದ್ (ರಾಶಿ)

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading