ಹೆಂಡತಿಗೆ ಈಗ ಬೇಕಿಲ್ಲ ಗಂಡ, ಮಾತಿಗೊಮ್ಮೆ ಇರಿಯುತ್ತಾನೆ, ರಿಪಿ ರಿಪಿ ಗೊಣಗುತ್ತಾನೆ ಸಿಡಿಯುತ್ತಾನೆ …’ಅಪ್ಪನಿಗೆ ಈಗ ವಯಸ್ಸಾಯಿತು’ ಭಾವುಕ ಕವನ ತಪ್ಪದೆ ಓದಿ ಕವಿ ಡಾ. ಲಕ್ಷ್ಮಣ ಕೌಂಟೆ ಅವರ ಲೇಖನಿಯಲ್ಲಿ…
ಯಾರಿಗೂ ಬೇಡವಾದವರು ಎಲ್ಲಿದ್ದರೇನು
ಮನೆಯಾದರೇನು ಮಸಣವಾದರೇನು
ಗಿರಿಯಾದರೇನು ವನವಾದರೇನು
ಊರೇನು ಕಾಡೇನು..
ಎಲ್ಲ ಒಂದೇ..!!
ಹೆಂಡತಿಗೆ ಈಗ ಬೇಕಿಲ್ಲ ಗಂಡ
‘ಮಾತಿಗೊಮ್ಮೆ ಇರಿಯುತ್ತಾನೆ
ರಿಪಿ ರಿಪಿ ಗೊಣಗುತ್ತಾನೆ ಸಿಡಿಯುತ್ತಾನೆ
ನೆಮ್ಮದಿಯಿಂದ ಘಳಿಗೆಯೂ ಇರಗೊಡಲಾರ
ಚಿಕ್ಕ ಮಕ್ಕಳಂತೆ ಆಡುತ್ತಾನೆ
ವಯಸ್ಸಾಯಿತು ಅನ್ನುವುದ ಮರೆತೂ
ಹುಡುಗರ ಹಾಗೆ ಪೀಡಿಸುತ್ತಾನೆ’
ಮಕ್ಕಳೋ…
ಬೆಳೆದು ದೊಡ್ಡವರಾಗಿದ್ದಾರೆ
ಎನ್ನುವುದನ್ನು ಅಪ್ಪ ಮರೆತೇ ಬಿಟ್ಟಿದ್ದಾನೆ
ಇನ್ನು ಚಿಕ್ಕ ಮಕ್ಕಳೆಂದೇ ಭಾವಿಸಿ
ಎಲ್ಲದಕ್ಕೂ ಗೊಣಗುತ್ತಾನೆ ಗದರುತ್ತಾನೆ
ಉಪದೇಶ ಹೇಳಿಯೇ ಹೇಳುತ್ತಾನೆ
ಅರೆಗಳಿಗೆಯೂ ಬಿಡುವು ಕೊಡದೆ..!!
ಆದರ್ಶದ ಉವಾಚಗಳೆಲ್ಲ
ಈಗ ಔಟ್ ಡೇಟೆಡ್..!!
ಯಾರಿಗೆ ಹಿಡಿಸುತ್ತವೆ ಈ ವೇಗ-ವಿಜ್ಞಾನದ ಕಾಲದಲ್ಲಿ !!
ಅನಾಯಾಸವಾಗಿ ದುಡ್ಡು ಮಾಡುವ
ತಂತ್ರಗಳಿದ್ದರೆ ಹೇಳಬೇಕು..
ಇಲ್ಲದಿದ್ದರೆ ಸುಮ್ಮನಿದ್ದುಬಿಡಬೇಕು!!
ಯಾರು ಹೇಳುವರು ಅವನಿಗೆ?
ವಯಸ್ಸಾಯಿತು ಮಸಣ ಸನಿಹವಾಯಿತು
ಅರಳು ಮರಳು ಪೀಡಿಸುತ್ತಿದೆಯೇನೋ!!
**
ಬೇಕರಿಯಲ್ಲಿ ಮೊಮ್ಮಕ್ಕಳಿಗೆಂದು
ತಿನಿಸು ಪೊಟ್ಟಣ ಕಟ್ಟಿಸಿಕೊಂಡು
ಅಪ್ಪ ಹೋಗುತ್ತಾನೆ ಮಗಳ ಮನೆಗೆ..
ಮೊಮ್ಮಕ್ಕಳು ಓಡೋಡಿ ಬರುತ್ತವೆ
ಅಜ್ಜನ ಕೈಯಲ್ಲಿರುವ ಪೊಟ್ಟಣಕ್ಕಾಗಿ
ಪರಸ್ಪರ ಕಲಹವಾಡುತ್ತವೆ
ಅಜ್ಜ ಅವರಿಗೆ ತಿಸಿಸು
ಸಮ ಸಮ ಮಾಡಿ ಕೊಡುತ್ತಾನೆ..!!
ಮಗಳು ಚಹಾ ಮಾಡಿಕೊಡುತ್ತಾಳೆ
ಮರು ಘಳಿಗೆಯಲ್ಲಿ ಒತ್ತಾಯಿಸುತ್ತಾಳೆ ಊಟಕ್ಕೂ..!!
ಅಪ್ಪ ಹಸಿವಿದ್ದರೂ ‘ಹಸಿವಿಲ್ಲ’ ಎನ್ನುತ್ತಾನೆ!!
ಮತ್ತೆರಡು ಘಳಿಗೆ ವ್ಯಯಿಸುತ್ತವೆ
ಹಸಿವು ಪೀಡಿಸುತ್ತದೆ..
ಮಗಳು ಬಟ್ಟೆ ಮಡಿ ಮಾಡುತ್ತಿದ್ದಾಳೆ
‘ಒಂದು ರೊಟ್ಟಿ ಕೊಡ್ತಿಯಾ? ಮಗಳೇ’
ಎಂದು ಕೇಳುವುದಕ್ಕೂ
ಅಪ್ಪನಿಗೆ ಅಭಿಮಾನ ಅಡ್ಡ ಬರುತ್ತದೆ!!
ಅಳಿಯನ ಮನೆಯಲ್ಲವೇ ಅದು!
ಮಗಳು ಬಟ್ಟೆ ಒಣ ಹಾಕಿ
ಊಟದ ತಟ್ಟೆ ತಂದು ಮುಂದಿಡುತ್ತಾಳೆ!!
ಅಪ್ಪ ಮುಖ ತಗ್ಗಿಸಿ ಉಂಡು..
‘ಬರುತ್ತೇನೆ’ ಎಂದು ಹೇಳಿ ಹೊರಡುತ್ತಾನೆ
ಕಾಲೆಳೆದುಕೊಂಡು ಉತ್ಸಾಹ ಉಡುಗಿದವರಂತೆಯೇ
ಬೇಸರದಿಂದಲೇ ಮನೆ ಕಡೆಗೆ..
ಆಕಳಿಕೆ ಬರುತ್ತವೆ
ಬಂದವನೇ ತನ್ನ ಕೋಣೆ ಸೇರಿ
ಬಾಗಿಲು ಭದ್ರ ಮಾಡಿಕೊಂಡು ಮಲಗುತ್ತಾನೆ
ಬಾರದ ನಿದಿರೆಯ ದಾರಿ ಕಾಯುತ್ತ..!!
ಚಿಂತೆಯ ನೊಣಗಳು ಒಮ್ಮೆಗೆ ಗೂಡು ಬಿಟ್ಟು ಎದ್ದು
ಅವನ ತಲೆಯ ತುಂಬ ಗುಂಯ್ ಗುಡುತ್ತವೆ!!
- ಡಾ. ಲಕ್ಷ್ಮಣ ಕೌಂಟೆ – ಕವಿ, ಲೇಖಕರು, ಉಪನ್ಯಾಸಕರು, ಕಲಬುರಗಿ.