ಎ ಕೆ ಕುಕ್ಕಿಲ ಅವರ ‘ಅವಳು’ ಪುಸ್ತಕ ಲಲಿತ ಪ್ರಬಂಧವಾಗಿದ್ದು, ಈ ಪುಸ್ತಕದ ಕುರಿತು ಮುಷ್ತಾಕ್ ಹೆನ್ನಾಬೈಲ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಓದಿ…
ಪುಸ್ತಕ : ಅವಳು
ಲೇಖಕರು : ಎ ಕೆ ಕುಕ್ಕಿಲ
ಪ್ರಕಾರ : ಲಲಿತ ಪ್ರಬಂಧಗಳು
ಪ್ರಕಾಶನ: ಅಪರಂಜಿ ಪ್ರಕಾಶನ
ಪುಸ್ತಕ ಕೊಳ್ಳಲು : 9844767859
ಶಮೀಮಕ್ಕ ಬಹಳ ಪುಣ್ಯವಂತೆ. ಬಾಯಿಯಲ್ಲಿ ಮಾತ್ರವಲ್ಲ ಬರಹದಲ್ಲೂ ಅವರ ಪತಿಯ ಪತ್ನಿಯ ಮೇಲಿನ ಪ್ರೀತಿ ನೋಡಿ” ಎಂದು ನಿನ್ನೆ ಹೆಂಡತಿ ಶಾಹಿನಾ ಕೈಯಲ್ಲಿದ್ದ ಪುಸ್ತಕವನ್ನು ನನ್ನ ತಲೆಗೆ ತಟ್ಟಿ ತೋರಿಸಿದಳು. ನೋಡಿದರೆ ಅವಳ ಕೈಯಲ್ಲಿ ಮಿತ್ರ ಎ.ಕೆ ಕುಕ್ಕಿಲರ ಹೊಸ ಪುಸ್ತಕ “ಅವಳು” ಇದೆ. ಆಗ ಎರಡು ದಿನಗಳ ಹಿಂದೆ ಪುಸ್ತಕ ಮನೆಗೆ ಬಂದರೂ ಬಿಡುವಿಲ್ಲದ ಕಾರಣ ನಾನು ಓದಿರಲಿಲ್ಲ. ಇಂದು ಬಿಡುವು ಮಾಡಿಕೊಂಡು ಓದಲು ಪುಸ್ತಕ ಹುಡುಕಿದರೆ ಪುಸ್ತಕ ನನ್ನ ತಮ್ಮನ ಮನೆ ಸೇರಿದೆ ಎಂದು ತಿಳಿಯಿತು. ತಮ್ಮನಿಗೆ ಫೋನ್ ಮಾಡಿದರೆ ” ಎರಡೇ ಎರಡು ದಿನ ಕಾಯು, ಅವಳು ಓದುತ್ತಿದ್ದಾಳೆ, ನಾನೂ ಓದಿ ಕೊಡ್ತೇನೆ” ಅಂತಾಯಿತು.
ಇನ್ನು ಪುಸ್ತಕ ಕೈಗೆ ಸಿಗುವುದು ಬಹುಶಃ ವಾರ ಕಳೆದ ಮೇಲೆಯೇ. ಇವತ್ತು ಸಾಯಂಕಾಲ ಅಕ್ಕಪಕ್ಕದ ಹೆಂಗಸರ ಮಾತುಗಳಲ್ಲಿ ಕುಕ್ಕಿಲ, ಸೀಮಾ, ಶಮೀಮ್, ಅವಳು ಎಂಬ ಪದಗಳು ಭಾರೀ ಜೋರಾಗಿ ಕೇಳಿ ಬರುತಿತ್ತು. ಸಂಬಂಧಿಯೊಬ್ಬರು” ಕುಕ್ಕಿಲರು ನಿಮ್ಮ ಫ್ರೆಂಡಾ? “ಎಂದು ಕೇಳಿದರು. “ಹೌದು, ಏನು ಸಾಲ ಕೇಳಬೇಕಿತ್ತಾ?” ಎಂದೆ. ಎಲ್ಲರೂ ಗೊಳ್ಳೆಂದು ನಕ್ಕರು. ಕುಕ್ಕಿಲರ ಪುಸ್ತಕ ಮನೆಗೆ ತಲುಪಿದೆ ಎಂಬುದನ್ನು ಬಿಟ್ಟರೆ ಉಳಿದಂತೆ ವಿಷಯ ಏನು ಅಂತ ನನಗೂ ಗೊತ್ತಿಲ್ಲ. ಅಂತೂ ಪುಸ್ತಕದ ಮೂಲಕ ಕುಕ್ಕಿಲರು ನಮ್ಮ ಮನೆಯ ಮಾತು ಮಾತ್ರವಲ್ಲ ಊರಿಡೀ ಮಾತಾಗಿದ್ದಾರೆ. ಮನೆಯೊಳಗೇ ಬರೆಹಗಾರನಿದ್ದರೂ ಮನೆಯವರೆಲ್ಲ ನನ್ನನ್ನು ಬಿಟ್ಟು ಕುಕ್ಕಿಲರನ್ನು ಓದುತ್ತಿದ್ದಾರಲ್ಲ ಎಂಬ ಸಣ್ಣ ಚಡಪಡಿಕೆ ಒಂದು ಕಡೆ.
ಮನೆಯಿಂದ ಹೋರಹೋದ ಪುಸ್ತಕ ಹೆಂಗಸರ ಕೈಯಿಂದ ಕನಿಷ್ಠ 15 ದಿನದ ಒಳಗಾದರೂ ವಶಪಡಿಸಿಕೊಳ್ಳಲಾಗುತ್ತದಾ ಎಂಬ ಆತಂಕ ಮತ್ತೊಂದು ಕಡೆ. ಅಂತೂ ಕುಕ್ಕಿಲರ”ಅವಳು” ಮತ್ತು ನನ್ನ ಮನೆಯವಳು ಸೇರಿ ನನ್ನ ನೆಮ್ಮದಿ ಹಾಳುಮಾಡಿದ್ದಾರೆ. ಒಂದೊಮ್ಮೆ ಪುಸ್ತಕ ಮನೆ ಸೇರದಿದ್ದರೆ ಕುಕ್ಕಿಲರಿಗೆ ಮತ್ತೆ ಫೋನು ಮಾಡುವುದು ಬೇಡ ಎಂದು ಪ್ರಕಾಶಕರ ಫೋನ್ ನಂಬರ್ ತರಿಸಿಕೊಂಡಿದ್ದೇನೆ.
- ಮುಷ್ತಾಕ್ ಹೆನ್ನಾಬೈಲ್ – ಚಿಂತಕ, ಬರಹಗಾರ, ಲೇಖಕರು