‘ಅರಿವಿನ ಬಾಳು’ ಸಣ್ಣಕತೆ – ವೀಣಾ ಹೇಮಂತ್ ಗೌಡ

ಕೊಡುವವರು ಅವರು… ತೆಗೆದುಕೊಳ್ಳುವವರು ಮತ್ತೊಬ್ಬರು. ಅವರಿಬ್ಬರ ಮಧ್ಯೆ ತಾನು ಯಾರು? ತುಸು ಸಿಟ್ಟಿನವನಾದ ರಾಮಪ್ಪನಿಗೆ ಅನಸಿದ್ದು ಯಾಕೆ?…ಕತೆಗಾರ್ತಿ ವೀಣಾ ಹೇಮಂತ್ ಗೌಡ ಪಾಟೀಲ್ ಅವರ ‘ಅರಿವಿನ ಬಾಳು’ ಸಣ್ಣಕತೆಯನ್ನು ತಪ್ಪದೆ ಮುಂದೆ ಓದಿ…

ಗೌಡರ ಮನೆ ಕೆಲಸದ ರಾಮಪ್ಪ ತನ್ನ ಕೋಣೆಯಲ್ಲಿ ಕುಳಿತಿದ್ದ. ಮನಸ್ಸಿನಲ್ಲಿ ಎಂದೂ ಇಲ್ಲದ ಚಡಪಡಿಕೆ. ಅದ್ಯಾಕೆ ಅವ್ವಾರು ಮುಂಜಾನೆಯಿಂದ ನನ್ನೊಂದಿಗೆ ಮಾತನಾಡಿಲ್ಲ ಎಂಬುದು ಆತನ ಚಿಂತೆಗೆ ಕಾರಣವಾಗಿತ್ತು. ಕಳೆದ ಐದಾರು ದಶಕಗಳಿಂದ ಗೌಡರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ರಾಮಪ್ಪ ತಳಮಳ ತಾಳದೆ ಅಲ್ಲಿಯೇ ಮೂಲೆಯಲ್ಲಿದ್ದ ಹರಿವೆಯಲ್ಲಿನ ನೀರನ್ನು ಕುಡಿದು ಮನಸ್ಸಿಗೆ ಸಮಾಧಾನ ಮಾಡಿಕೊಳ್ಳಲೆತ್ನಿಸಿದ. ಮತ್ತೆ ತನ್ನ ಕೋಣೆಯಲ್ಲಿ ತನಗಾಗಿ ಕೊಟ್ಟ ಮಂಚದ ಮೇಲೆ ಹೋಗಿ ಕುಳಿತ ಆತನ ಮನ ಗತಕಾಲದ ನೆನಪುಗಳನ್ನು ಮೆಲುಕು ಹಾಕಿತ್ತು.

ಏಳೆಂಟು ವರ್ಷದ ರಾಮ್ಯಾ ತನ್ನ ಅವ್ವನ ಸೆರಗನ್ನು ಹಿಡಿದು ಮೊತ್ತ ಮೊದಲ ಬಾರಿ ಗೌಡರ ಮನೆಯ ಕೆಲಸಕ್ಕೆ ಆರು ದಶಕಗಳ ಹಿಂದೆ ಬಂದಿದ್ದ. ಅದಿನ್ನೂ ದೊಡ್ಡ ಗೌಡರ ಕಾಲ.ತಲೆಯ ಮೇಲೆ ಸೆರಗನ್ನು ಮತ್ತಷ್ಟು ಸರಿಯಾಗಿ ಹೊದೆದು ಬೆನ್ನು ಬಾಗಿಸಿ ನಿಂತ ಆತನ ತಾಯಿ ಹನುಮವ್ವ ಗೌಡರನ್ನು ಕುರಿತು ಯಪ್ಪಾ ಈತಗ ಜೀತಕ್ಕ ಇಟ್ಕೋಳ್ರಿ ಅಂತ ಕೇಳಿದಳು. ತೆಳುಕಾಯದ ಎಣ್ಣೆಗೆಂಪು ಬಣ್ಣದ ವಯಸ್ಸಿಗಿಂತಲೂ ಹೆಚ್ಚು ಎತ್ತರದ ಪುಟ್ಟ ಬಾಲಕನನ್ನು ನೋಡಿದ ಗೌಡರು ಪತ್ನಿಯನ್ನು ಕೂಗಿ ಕರೆದರು.

ನೋಡು ಇಲ್ಲಿ…. ಹನುಮವ್ವ ಆಕೆಯ ಮಗ ರಾಮನನ್ನ ಜೀತಕ್ಕೆ ಇಡ್ತಾಳಂತ. ಯಾಕೆ ಎಷ್ಟು ಕೆಲಸ ಮಾಡ್ತಾನಂತ ಪರೀಕ್ಷೆ ಮಾಡೋಣ ಒಂದು ತಾಟಿನ್ಯಾಗ ಉಂಡಿ ತಗೊಂಡು ಬಾ ಎಂದು ಹೇಳಿದರು. ಕೂಡಲೇ ಒಳಗೆ ಹೋದ ಗೌಡರ ಪತ್ನಿ ತಾಟಿನ ತುಂಬಾ ಉಂಡಿ ತಂದು ಗೌಡರ ಮುಂದೆ ಇಟ್ಟರು. ತಟ್ಟೆಗೆ ಕೈ ಹಾಕಿದ ಗೌಡರು ಒಂದೊಂದಾಗಿ ಉಂಡಿಗಳನ್ನು ಕೊಟ್ಟಂತೆ ರಾಮ್ಯಾ ಆ ಉಂಡಿಗಳನ್ನು ತಿನ್ನಬೇಕಿತ್ತು. ಐದಾರು ಉಂಡಿಗಳನ್ನು ತಿನ್ನುವುದರಲ್ಲಿಯೇ ಪುಟ್ಟ ಬಾಲಕನಿಗೆ ಸಾಕಾಯಿತು. ತನ್ನ ಕೈಯಲ್ಲಿದ್ದ ಎರಡು ಉಂಡೆಗಳನ್ನು ಗೌಡರ ಕಣ್ಣಿಗೆ ಕಾಣದಂತೆ ಜೇಬಿಗೆ ಇಳಿಬಿಟ್ಟನು. ಇದನ್ನು ನೋಡಿ ಮೀಸೆಯ ಮರೆಯಲ್ಲಿ ನಸುನಕ್ಕ ಗೌಡರು ಹನುಮವ್ವ ನಿನ್ನ ಮಗ ಇನ್ನೂ ಸಣ್ಣವ ಅದಾನ….. ಎಂಟು ಉಂಡಿ ತಿನ್ನುವಷ್ಟು ದೊಡ್ಡವ ಆಗಲಿ ಎಂದು ಹೇಳಿ ತಮ್ಮ ಅಂಗವಸ್ತ್ರವನ್ನು ಜಾಡಿಸಿ ಹೆಗಲ ಮೇಲೆ ಹಾಕಿಕೊಂಡು ಹೊರಟು ಹೋದರು.

ಮನೆಗೆ ಬರುವ ದಾರಿಯಲ್ಲಿ ಮಗನಿಗೆ ಇನ್ನೊಂದೆರಡು ಉಂಡಿ ತಿಂದಿದ್ದರೆ ನಿನಗೆ ಏನು ದಾಡಿ ಆಕ್ಕಿತ್ತು… ನೋಡು ಗೌಡ್ರು ನಿನ್ನ ಜೀತಕ್ಕ ಇಟ್ಟುಕೊಂಡಿಲ್ಲ ಎಂದು ಬಯ್ಯುತ್ತಲೇ ಬಂದಿದ್ದಳು ಹನುಮವ್ವ.

ಮರು ವರ್ಷ ಮಾತ್ರ ಗೌಡರ ಮನೆಯ ಜೀತಕ್ಕೆ ಹೋಗಲೇಬೇಕು ಎಂದು ನಿರ್ಧರಿಸಿದ ರಾಮ್ಯಾ. ಹಾಗೆ ಗೌಡರ ಮನೆಗೆ ಜೀತಕ್ಕೆ ಬಂದು ತನ್ನ ಎಂಟನೇ ವಯಸ್ಸಿನಲ್ಲಿ ಬಂದು ಸೇರಿದ ರಾಮ್ಯಾ ರಾಮಣ್ಣನಾಗಿ ರಾಮಪ್ಪನಾಗಿ ಇದೀಗ ರಾಮಪ್ಪಜ್ಜ ಎಂದು ಗೌಡರ ಮೊಮ್ಮಕ್ಕಳಿಂದ ಕರೆಸಿಕೊಳ್ಳುವಷ್ಟು ಮುದುಕನಾಗಿದ್ದ. ಸ್ವಭಾವತಃ ತುಸು ಸಿಟ್ಟಿನವನಾದ ರಾಮಪ್ಪಜ್ಜ
ಎರಡು ಮದುವೆ ಮಾಡಿಕೊಂಡರೂ ಒಂದೂ ಊರ್ಜಿತವಾಗದೆ ಹೋದದ್ದು ಆತನ ಸಿಟ್ಟಿನಿಂದಲೇ. ಎಲ್ಲಾ ಬಣ್ಣವನ್ನು ಮಸಿ ನುಂಗಿತು ಎಂಬಂತೆ ಆತನ ನ್ಯಾಯ ನಿಷ್ಠುರತೆ, ಪ್ರಾಮಾಣಿಕತೆ ಕೆಲಸದಲ್ಲಿನ ಅಚ್ಚುಕಟ್ಟುತನ ಮನೆಮಾತಾಗಿದ್ದರೂ ಆತನ ಸಿಟ್ಟು ಮಾತ್ರ ಕಡಿಮೆಯಾಗಿರಲಿಲ್ಲ. ಗೌಡರ ಮನೆಯ ಮುಂದಿನ ಪುಟ್ಟ ಕೋಣೆಯನ್ನು ಆತನಿಗಾಗಿಯೇ ಬಚ್ಚಲು ಕೋಣೆ ಮತ್ತು ಪಾಯಖಾನೆಗಳನ್ನು ಹೊಂದಿರುವಂತೆ ಕಟ್ಟಿಕೊಟ್ಟಿದ್ದು ಅಲ್ಲಿಯೇ ವಾಸ ಮಾಡುತ್ತಿದ್ದ ಆತನ ಊಟೋಪಚಾರಗಳೆಲ್ಲಾ ಅವರ ಮನೆಯಲ್ಲಿಯೇ ಆಗುತ್ತಿತ್ತು. ದೊಡ್ಡ ಗೌಡರು ಮತ್ತವರ ಪತ್ನಿ ಕಾಲನ ಕರೆಗೆ ಓಗೊಟ್ಟಿದ್ದು ಇದೀಗ ಅವರ ಮಗ ಸೊಸೆ ಮನೆಯ ಯಜಮಾನಾಗಿದ್ದರು. ಗೌಡರ ಮಗ ಲೋಕೇಶ್ ಗೌಡ ಮತ್ತು ಅವರ ಪತ್ನಿ ಸವಿತಾ ಕೂಡ ಅಷ್ಟೇ ಪ್ರೀತಿ ವಿಶ್ವಾಸವನ್ನು ರಾಮಪ್ಪನ ಮೇಲೆ ಹೊಂದಿದ್ದರು.

ನಿಯತ್ತಿಗೆ ಮತ್ತೊಂದು ಹೆಸರು ರಾಮಪ್ಪ ಎಂದಾಗಿದ್ದರೂ ಎಲ್ಲರ ಗೌರವ, ವಿಶ್ವಾಸಕ್ಕೆ ಪಾತ್ರನಾಗಿದ್ದ .ರಾಮಪ್ಪನ ಮೇಲೆ ಆ ಮನೆಯ ಮೊಮ್ಮಕ್ಕಳಿಗೆ ಎಲ್ಲಿಲ್ಲದ ಪ್ರೀತಿ. ಬಾಯಿ ತುಂಬಾ ರಾಮಪ್ಪಜ್ಜ ಎಂದೇ ಕರೆಯುತ್ತಿದ್ದ ಮಕ್ಕಳು ಸದಾ ಆತನ ಜೊತೆಗೆ ಇರುತ್ತಿದ್ದರು. ಸವಿತಮ್ಮನವರಂತೂ ವಯಸ್ಸಿನಲ್ಲಿ ಚಿಕ್ಕವರಾಗಿದ್ದರೂ ರಾಮಪ್ಪನನ್ನು ಮನೆಯ ಮಗನಂತೆ ಆದರಿಸುತ್ತಿದ್ದರು. ಈ ಹಿಂದಿನಂತೆ ಯಾವುದೇ ಕೆಲಸ ಕಾರ್ಯಗಳು ಆತನಿಂದ ನೀಗದೆ ಹೋದರೂ ಮನೆಯ ಹೊರಗೆ ಕುಳಿತುಕೊಂಡು ಮನೆಗೆ ಬರುವ ಹೋಗುವವರಿಗೆ ಉತ್ತರಿಸುವುದು ವಾಹನಗಳನ್ನು ಒರೆಸುವುದು, ಪೂಜೆಗೆ ಹೂವನ್ನು ಹರಿದು ಕೊಡುವುದು, ಮನೆಯ ಸಾಕು ಪ್ರಾಣಿ ಬಂತಿಯ ಕಾಳಜಿ ಮಾಡುವುದು ಆತನ ಕೆಲಸವಾಗಿತ್ತು. ಹೊತ್ತು ಹೊತ್ತಿಗೆ ಆತನ ಊಟ ತಿಂಡಿಗಳ ಜವಾಬ್ದಾರಿಯನ್ನು ಹೊತ್ತಿದ್ದ ಸವಿತಮ್ಮನವರು ಆತನನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದರು. ಮನೆಯವರೆಲ್ಲರೂ ಸೇವಿಸುವ ಆಹಾರವನ್ನೇ ಆತನಿಗೂ ಕೊಡುತ್ತಿದ್ದರು ಎಂದಾದರೂ ಒಂದು ದಿನ ಆತ ಊಟವನ್ನು ಸರಿಯಾಗಿ ಮಾಡದೆ ಹೋದರೆ ಆತನನ್ನು ಗದರಿಸುವಷ್ಟು ಪ್ರೀತಿ ವಿಶ್ವಾಸ. ವಯೋ ಸಹಜವಾಗಿ ಆತನಿಗೆ ಬರುವ ಸಣ್ಣ ಪುಟ್ಟ ತೊಂದರೆಗಳಿಗೆ ವೈದ್ಯರ ಬಳಿ ಕರೆದೊಯ್ದು ಔಷಧಿ ಚಿಕಿತ್ಸೆ ಕೊಡಿಸುತ್ತಿದ್ದರು ಕೂಡ.

ಇಷ್ಟೆಲ್ಲ ಪ್ರೀತಿ,ವಿಶ್ವಾಸದಿಂದ ನೋಡಿಕೊಳ್ಳುತ್ತಿದ್ದ ಸವಿತಮ್ಮ ಮುಂಜಾನೆಯಿಂದ ನನಗೆ ಸಮಯಕ್ಕೆ ಸರಿಯಾಗಿ ಚಹಾ ತಿಂಡಿ ಊಟ ಕೊಟ್ಟಿದ್ದರೂ ಕೂಡ ಏನೊಂದು ಮಾತನಾಡದೆ ಇದ್ದಿದ್ದು ಆತನಿಗೆ ಕಸಿವಿಸಿಯನ್ನು ತಂದಿತ್ತು. ಕೊನೆಗೆ ತನ್ನಲ್ಲಿ ಉಂಟಾಗುತ್ತಿದ್ದ ತಳಮಳವನ್ನು ತಾಳಲಾರದೆ ಎದ್ದು ಬಂದವನೇ ಮನೆಯ ಮುಂದಿನ ಕಟ್ಟೆಯನ್ನು ಕಸಗುಡಿಸಿ ಕೈ ಕಾಲು ಮುಖ ತೊಳೆದು ಬರುವ ಹೊತ್ತಿಗೆ ಆತನನ್ನು ಅಮ್ಮನವರ ಕೂಗು ಎಚ್ಚರಿಸಿತು.

ಲಗುಬಗೆಯಿಂದ ಹಿತ್ತಲ ಬಾಗಿಲಿನತ್ತ ಹೋದ ರಾಮಣ್ಣನಿಗೆ ಚಹಾ ಹಿಡಿದು ನಿಂತಿದ್ದರು ಸವಿತಮ್ಮ. ಅವರು ಚಹಾ ಕೊಡುವ ಮುನ್ನವೇ “ಎವ್ವಾ… ಮುಂಜಾನೆಯಿಂದ ನೋಡಾಕತ್ತೀನಿ ನೀವು ಯಾಕೋ ನಂಜೊತೆ ಮಾತಾಡವಲ್ರಿ” ಎಂದು ಗೋಗರೆಯುವ ಧ್ವನಿಯಲ್ಲಿ ರಾಮಣ್ಣ ಅಲವತ್ತುಕೊಂಡಾಗ ಅಯ್ಯೋ ಪಾಪ ಎಂದೆನಿಸಿದ ಸವಿತಮ್ಮ ಕೊನೆಗೂ ಬಾಯಿ ಬಿಟ್ಟರು.
“ರಾಮಣ್ಣ… ನಿನಗೆ ಎಂದಾದರೂ ಊಟ, ತಿಂಡಿ ಕೊಡುವುದರಲ್ಲಿ ಕೊರತೆಯಾಗಿದೆ’… ಎಂದು ಕೇಳಿದರು.”ಯವ್ವ.. ನೀವು ಇರೋವಾಗ ನನಗೆ ಯಾತರ ಕೊರತೆ? ಮಹಾತಾಯಿಯಂಗ ಉಣ್ಣಾಕ್, ತಿನ್ನಾಕ ಕೊಡ್ತೀರಿ. ಹೊತ್ತು ಹೊತ್ತಿಗೆ ಚಹಾ ಮಾಡಿಕೊಡ್ತೀರಿ. ಕೊರತಿ ಆಗೈತಿ ಅಂತ ಹೇಳಿದ್ರ ನನ್ನ ಬಾಯಾಗ ಹುಳ ಬೀಳ್ತಾವು’ ಎಂದು ಹೇಳಲು ಹಾಗಾದ್ರೆ ನಿನ್ನೆ ಯಾಕೆ ಆ ಹುಡುಗನಿಗೆ ಹಾಗೆ ಮಾತನಾಡಿದೆ ಎಂದು ಆತನನ್ನು ಕುಟುಕಿದರು ಸವಿತಮ್ಮ.

ಕೂಡಲೇ ರಾಮಣ್ಣನ ಧ್ಯಾನ ಹಿಂದಿನ ದಿನದೆಡೆ ಹೋಯಿತು. ಮನೆಗೆ ಬಂದಿದ್ದ ಎರಡು ವರ್ಷದ ಪುಟ್ಟ ಮಗುವನ್ನು ಆಡಿಸುತ್ತಿದ್ದ ಲೋಕೇಶಪ್ಪನವರ ಮಗಳು ಮಗುವಿಗೆ ತಿನ್ನಲು ಚಾಕಲೇಟು ಕೊಟ್ಟು ತಾನು ಒಂದನ್ನು ಬಾಯಿಗೆ ಹಾಕಿಕೊಂಡು ಅಲ್ಲದೆ ರಾಮಣ್ಣನಿಗೂ ಒಂದು ತುಂಡು ನೀಡಿದಳು. ನಂತರ ಮಗುವಿನೊಂದಿಗೆ ಆಟವಾಡುತ್ತಾ ಮಗುವಿನ ಸೈಕಲ್ ಮೇಲೆ ಕುಳಿತು ಇದು ನನ್ನ ಸೈಕಲ್ ಎಂದು ಆಕೆ ಹೇಳಿದಾಗ ಮೂರು ವರ್ಷದ ಪುಟ್ಟ ಮಗು ನನ್ನ ಸೈಕಲ್ ಎಂದು ಹೇಳುತ್ತಾ ಆಕೆಯನ್ನು ಸೈಕಲ್ ನಿಂದ ಇಳಿಯಲು ಒತ್ತಾಯಿಸಲಾರಂಭಿಸಿತು. ಅದು ಯಾಕೋ ತನ್ನ ಗೌಡರ ಮಗಳನ್ನು ಸೈಕಲ್ ನಿಂದ ಇಳಿಸಲು ಒತ್ತಾಯಿಸಿದ್ದು ಸರಿ ಬರದೆ “ಕೊಡು ಅಮ್ಮ ಇನ್ನೊಂದಷ್ಟು ಚಾಕ್ಲೇಟು…ನಮ್ಮ ಮನೀದ ತಿಂದು ನಮಗೆ ಮಾತಾಡ್ತಾರೆ” ಎಂದು ರಾಮಣ್ಣ ತುಸು ಕೋಪದಿಂದ ಹೇಳಿದಾಗ ಅಲ್ಲಿಯೇ ಇದ್ದ ಮಗುವಿನ ತಾಯಿ ಸವಿತಮ್ಮನ ಮುಖವನ್ನು ನೋಡಿದರು. ತಕ್ಷಣಕ್ಕೆ ರಾಮಣ್ಣನಿಗೆ ಏನೂ ಹೇಳಲಾಗದ ಸವಿತಮ್ಮ ಮಗುವಿನ ತಾಯಿಯನ್ನು ಕಣ್ಣಲ್ಲೇ ಸಮಾಧಾನಿಸಿದರು. ಸ್ವಲ್ಪ ಹೊತ್ತಿನ ನಂತರ ಆ ತಾಯಿ ಮಗು ತಮ್ಮ ಮನೆಗೆ ಹೊರಟು ಹೋದರು…. ನೆನಪಿಸಿಕೊಂಡ ರಾಮಣ್ಣ ತುಸು ಹೆಚ್ಛೇ ಕಸಿವಿಸಿಗೊಂಡನು.

ನಿಜ…. ರಾಮಣ್ಣನ ಈ ವರ್ತನೆಯಿಂದ ಸವಿತಮ್ಮನ ಮನದಲ್ಲಿ ಕಸಿವಿಸಿ ಶುರುವಾಗಿತ್ತು.ಕಳೆದ ಹಲವಾರು ವರ್ಷಗಳಿಂದ ರಾಮಣ್ಣನ ಸ್ವಭಾವವನ್ನು ನೋಡಿದ್ದ ಸವಿತಮ್ಮ ಈ ಬಾರಿ ಆತನಿಗೆ ಪಾಠ ಕಲಿಸಲೇಬೇಕೆಂದು ತೀರ್ಮಾನಿಸಿ ಮುಂಜಾನೆಯಿಂದ ಆತನೊಂದಿಗೆ ಮಾತಾಡಿರಲಿಲ್ಲ.

ರಾಮಣ್ಣ ಚಹಾ ಕುಡಿದು ಮುಗಿಸುವುದನ್ನೇ ಕಾಯುತ್ತಿದ್ದ ಸವಿತಮ್ಮ “ನಾನೇನು ಮಾತನಾಡುತ್ತಿದ್ದೇನೆ ಎಂದು ಆ ಮಗುವಿಗೂ ಗೊತ್ತಿಲ್ಲ…. ನನ್ನ ಮಗಳು ಆ ಮಗುವನ್ನು ಕಾಡಿಸಿದಾಗ ಸಹಜವಾಗಿಯೇ ಅದು ಹಾಗೆ ಪ್ರತಿಕ್ರಿಯಿಸಿತು. ರಾಮಣ್ಣ ‘ಆ ಪುಟ್ಟ ಮಗುವಿಗೆ ಹಾಗೆ ಮಾತನಾಡಿದ್ದು ನಿನಗೆ ಸರಿ ಕಂಡಿತೇ?” ಎಂದು ಕೇಳಿದರು.

“ಹೌದವ್ವ..ತಿಳೀದೆ ನಾನು ತಪ್ಪು ಮಾಡಿದೆ ಇನ್ನೊಮ್ಮೆ ಇಂಥ ತಪ್ಪು ನನ್ನಿಂದ ಆಗೋದಿಲ್ಲ” ಎಂದು ತಲೆತಗ್ಗಿಸಿದ ರಾಮಣ್ಣ.

ಇದೀಗ ಸವಿತಮ್ಮ ತುಸು ಗಟ್ಟಿಯಾಗಿ ‘ಹಲವಾರು ವರ್ಷ ಈ ಮನೆಯಲ್ಲಿ ಕಳೆದಿರುವ ನಿನಗೆ ಈ ಮನೆಯ ರೀತಿ ನೀತಿಗಳು ಗೊತ್ತಿಲ್ಲ ಎಂದಲ್ಲ…. ನಿನಗೆ ಏನಾದರೂ ತಿನ್ನುಣ್ಣಲು ಕೊರತೆಯಾದರೆ ನನ್ನನ್ನು ಕೇಳು. ಆದರೆ ಮನೆಗೆ ಬಂದ ಅತಿಥಿಗಳಿಗೆ,ಅವು ಮಕ್ಕಳೇ ಇರಲಿ ದೊಡ್ಡವರೇ ಇರಲಿ ಹಂಗಿಸಬೇಡ…. ಇದೇ ಕೊನೆ ಇನ್ನೆಂದೂ ಇಂತಹ ತಪ್ಪನ್ನು ನಾನು ಸಹಿಸುವುದಿಲ್ಲ’… ಎಂದು ಹೇಳಿ ಮನೆಯ ಮುಂಭಾಗದ ಹಜಾರಕ್ಕೆ ಹೊರಟು ಹೋದರು ಸವಿತಮ್ಮ.

ಎಂದೂ ತನ್ನೊಂದಿಗೆ ಅಷ್ಟೊಂದು ನಿಷ್ಟುರವಾಗಿ ಮಾತನಾಡದ ಸವಿತಮ್ಮ ಅಷ್ಟೊಂದು ಕಠೋರವಾಗಿ ನುಡಿದಾಗ ಆತನ ತಲೆಗೆ ಮೊಟಕಿದಂತಾಯಿತು. ಹೌದಲ್ಲವೇ ಕೊಡುವವರು ಅವರು… ತೆಗೆದುಕೊಳ್ಳುವವರು ಮತ್ತೊಬ್ಬರು. ಅವರಿಬ್ಬರ ಮಧ್ಯೆ ತಾನು ಯಾರು? ಮನೆಯ ಆಳಾದ ತನ್ನನ್ನು ಅತ್ಯಂತ ಪ್ರೀತಿ ಮತ್ತು ಗೌರವದಿಂದ ಕಾಣುವ ಗೌಡರು ಮತ್ತು ಅವರ ಪತ್ನಿಯ ಗೌರವಕ್ಕೆ ತಾನು ಚ್ಯುತಿ ಬರದಂತೆ ನಡೆದುಕೊಳ್ಳಬೇಕಾದ್ದು ತನ್ನ ಕರ್ತವ್ಯ ಎಂಬುದು ಆತನ ತಲೆಗೆ ಹೊಳೆದು ಕೂಡಲೇ ತಲೆಬಾಗಿಲಿನಿಂದ ಮನೆಯ ಒಳ ಹೊಕ್ಕು” ಅವ್ವ…. ಇನ್ನೊಮ್ಮೆ ಹೀಗೆ ಮಾತನಾಡುವುದಿಲ್ಲ. ತಪ್ಪಾಯ್ತು…. ಹೊಟ್ಯಾಗ ಹಾಕ್ಕೋ ತಾಯಿ” ಎಂದು ಕೈಮುಗಿದು ಕೇಳಿಕೊಂಡನು.

” ರಾಮಣ್ಣ ಕೈಮುಗಿದು ನನ್ನನ್ನ ಸಣ್ಣಾಕಿ ಮಾಡಬೇಡ… ನಿನ್ನ ತಪ್ಪಿನ ಅರಿವು ನಿನಗೆ ಆಗಲಿ ಎಂದೇ ಹೀಗೆ ಮಾಡಿದ್ದು ಮಕ್ಕಳು ದೇವರ ಸಮಾನ. ಆ ಮಗುವಿನ ತಾಯಿ ಅದೆಷ್ಟು ನೊಂದುಕೊಂಡಳು ನಿನಗೆ ಗೊತ್ತಿಲ್ಲ…. ಇನ್ನೆಂದೂ ಬೇರೊಬ್ಬರ ಆತ್ಮ ಗೌರವವನ್ನು ಕೆಣಕಬೇಡ. ಈ ಮನೆಗೆ ಬರುವ ನೂರಾರು ಜನರು ನಿನ್ನ ನಿಯತ್ತನ್ನು, ಕರ್ತವ್ಯ ಪ್ರಜ್ಞೆಯನ್ನು ಮೆಚ್ಚಿ ನಿನಗೆ ಗೌರವ ನೀಡುತ್ತಾರೆ ಅದನ್ನು ಎಂದೂ ಕಳೆದುಕೊಳ್ಳಬೇಡ ಎಂದು ಹೇಳಲು ಆಯ್ತು ಎಂದು ತಲೆಯಾಡಿಸಿದ ರಾಮಣ್ಣನಿಗೆ ಎದೆಯ ಮೇಲಿನ ಭಾರ ಇಳಿದಂತಾಗಿ ಸಮಾಧಾನದಿಂದ ಬಂದು ಮನೆಯ ಕಟ್ಟೆಯ ಮೇಲೆ ತನ್ನ ನಿಗದಿತ ಜಾಗದಲ್ಲಿ ಕುಳಿತುಕೊಂಡ.


  • ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ ಗದಗ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW